ಹಿಮಾಲಯದ ಭವ್ಯತೆಗೆ ಸರಿಸಾಟಿಯಾದದ್ದು ವಿಶ್ವದಲ್ಲಿ ಬೇರೊಂದಿಲ್ಲ. ಚಾರಣಿಗರಿಗೆ, ಸಾಹಸ ಪ್ರಿಯರಿಗೆ ಹಿಮಾಲಯದ ಸೆಳೆತ ಸೂಜಿಗಲ್ಲಿನಂತಿದ್ದು, ಸೌಂದರ್ಯಾರಾಧಕರಿಗೆ ಸವಿದಷ್ಟೂ ಬರಿದಾಗದ ಅಕ್ಷಯ ಪಾತ್ರೆ ಇದು. ಜೀವನದ ಜಂಜಾಟದಿಂದ ಬೇಸತ್ತ ಮನಕ್ಕೆ ಮುದ ನೀಡುವ ತಾಣ ಹಿಮಾಲಯ.

ಹಿಮಾಲಯದ ತಪ್ಪಲಿನಲ್ಲಿ ಪ್ರೇಕ್ಷಣೀಯ ಸ್ಥಳಗಳು ಅಸಂಖ್ಯ. ಹಿಮಾಚ್ಛಾದಿತ ಪ್ರದೇಶಗಳು, ಜಲಧಾರೆಗಳು, ನದಿ ತೊರೆಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಅಂತಹ ಸ್ಥಳಗಳಲ್ಲಿ `ಮಲಾನಾ’ ಸಹ ಒಂದು, ಮನಾಲಿ ಮತ್ತು ಮಲಾನಾ ಒಂದೇ ರಾಜ್ಯದಲ್ಲಿ ಬರುವ ಊರುಗಳು. ಆದರೆ ಮನಾಲಿಯಷ್ಟು ಪ್ರಸಿದ್ಧವಾದುದಲ್ಲ ಮಲಾನಾ.

ಹಿಮಾಚಲ ಪ್ರದೇಶದ ದೌಲಾಧಾರ ಪರ್ವತ ಶ್ರೇಣಿಯಲ್ಲಿ ಅತ್ಯಂತ ಕಡಿದಾದ ಪರ್ವತ ಒಂದರ ಮಡಿಲಲ್ಲಿ ಸಮುದ್ರ ಮಟ್ಟದಿಂದ ಸುಮಾರು 9,000 ಅಡಿಗಳ ಎತ್ತರದಲ್ಲಿರುವ ಒಂದು ಪುಟ್ಟ ಹಳ್ಳಿ ಮಲಾನಾ. ಈ ಹಳ್ಳಿಗೆ ಯಾವುದೇ ರಸ್ತೆ, ಮಾರ್ಗಗಳು ಇಲ್ಲ. ಯಾವುದೇ ವಾಹನ ಸಂಚಾರವಿಲ್ಲ. ಕಾಲ್ನಡಿಗೆಯಲ್ಲಿ ಚಂದ್ರಖಾನಿ ಪಾಸ್‌ ಎಂಬ ಹಿಮಾಚ್ಛಾದಿತ ಪ್ರದೇಶದ ಮೂಲಕ ಸುಮಾರು 12 ಕಿ.ಮೀ. ನಡೆದೇ ಈ ಹಳ್ಳಿಯನ್ನು ತಲುಪಬೇಕು.

ಈ ಹಳ್ಳಿಯನ್ನು ವೀಕ್ಷಿಸಲು ಪ್ರವಾಸಿಗರು ಯಾವಾಗ ಬೇಕಾದರೂ ಹೋಗಲು ಸಾಧ್ಯವಿಲ್ಲ. ಮಾರ್ಚ್‌ನಿಂದ ಡಿಸೆಂಬರ್‌ತಿಂಗಳವರೆಗೆ ಮಾತ್ರ ಪ್ರವಾಸಿಗರಿಗೆ ತೆರೆದಿರುತ್ತದೆ. ಉಳಿದ ಎರಡು ತಿಂಗಳು ಅತಿಯಾದ ಹಿಮವಾದ್ದರಿಂದ ವೀಕ್ಷಿಸಲು ಅಸಾಧ್ಯ. ಮಲಾನಾ ಹಳ್ಳಿಯ ಜನಸಂಖ್ಯೆ 1500-2000 ಅಷ್ಟೆ. ಮರದಿಂದ ನಿರ್ಮಿಸಿದ ಮನೆಗಳು, ದೇವಾಲಯಗಳು, ದೇವಾಲಯದ ಸುಂದರ ಕೆತ್ತನೆಗಳು ಜನರನ್ನು ಆಕರ್ಷಿಸುತ್ತವೆ. ಈ ಹಳ್ಳಿಯ ಜನ ಗ್ರೀಕ್‌ಪೂರ್ವಜರೆಂದು ಹೇಳಿಕೊಳ್ಳುತ್ತಾರೆ. ಭಾರತ ಬ್ರಿಟಿಷರಿಂದ ಸ್ವಾತಂತ್ರ ಹೊಂದಿ ತನ್ನದೇ ಆದ ಸಂವಿಧಾನವನ್ನು ಹೊಂದಿದ್ದರೂ ಸಹ ಈ ಪುಟ್ಟ ಹಳ್ಳಿ ತನ್ನ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ತನ್ನದೇ ಆದ ವಿಚಿತ್ರ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಹಾಗೂ ಭಾಷೆ ಮತ್ತು ಬದುಕಿನ ರೀತಿ ನೀತಿ ನಿಯಮಗಳಿಂದ ವಿಶ್ವ ಭೂಪಟದಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿದೆ.

ಮಲಾನಾ ಹಿಮಾಲಯದ ಉಳಿದ ಹಳ್ಳಿಗಳಿಗಿಂತ ತೀರಾ ಭಿನ್ನವಾದದ್ದು. ಈ ಹಳ್ಳಿಯ ಜನ ವಿಚಿತ್ರ ಮುಖ ಲಕ್ಷಣವನ್ನು ಹೊಂದಿರುವರು. ಕೋಲುಮುಖ, ಉದ್ದನೆಯ ಚೂಪಾದ ಮೂಗು, ಕೆಂಪು, ಹಳದಿ ಮತ್ತು ಬಿಳಿ ಮಿಶ್ರಿತ ಕಂದು ವರ್ಣದ ತ್ವಚೆ, ಕರಿದಾದ ಕಣ್ಣು ಇವರ ಪ್ರಧಾನ ಲಕ್ಷಣ. ಇಂತಹ ಲಕ್ಷಣಗಳು ಅತಿ ಸಮೀಪದ ಹಳ್ಳಿಗಳಲ್ಲಿ ಕಂಡುಬರುವುದಿಲ್ಲ. ಇವರು ಧರಿಸುವ ವಸ್ತ್ರಗಳಲ್ಲೂ ಸಹ ಭಿನ್ನತೆ ಇದೆ.

ಇವರು ತಾವೇ ಕೈಯಿಂದ ನೇಯ್ದ ಒರಟಾದ ಮೇಲಂಗಿ, ತೇಪೆಗಳಂತೆ ಕಾಣುವ ಜೇಬುಗಳಿಂದ ಕೂಡಿರುವ ಪ್ಯಾಂಟನ್ನು ಪುರುಷರು ಧರಿಸಿದರೆ, ಸ್ತ್ರೀಯರು ಮೇಲಂಗಿ ಮತ್ತು ಲಂಗವನ್ನು ಧರಿಸುವರು. ಮಹಿಳೆಯರಂತೂ ಅಲಂಕಾರ ಪ್ರಿಯರು. ಮೂಗಿನ ಎರಡು ಕಡೆಗೂ ಮೂಗುಬಟ್ಟು, ಕಿವಿಗೆ ಬೃಹತ್‌ ಗಾತ್ರದ ನೇತಾಡುವ ಬಳೆಗಳು, ಮೊಣಕೈ ತುಂಬಾ ಬಳೆಗಳು, ಕತ್ತಿಗೆ ನೇತಾಡುವ ಸರಗಳು ಇವರಿಗೆ ತುಂಬಾ ಪ್ರಿಯ. ಪುರುಷರು ತಲೆಗೆ ಟೋಪಿಯನ್ನು ಮಹಿಳೆಯರು ತಲೆಗೆ ಬಟ್ಟೆಯನ್ನು ಕಡ್ಡಾಯವಾಗಿ ಕಟ್ಟುವವರು.

ಭಾರತದಲ್ಲಿ ಎಲ್ಲೂ ಇಂತಹ ಒಂದು ಜನಾಂಗದ ಕುರುಹು ಕಾಣದಿರುವಾಗ ಇವರುಗಳು ಎಲ್ಲಿಂದ ಹೇಗೆ ಬಂದರೆಂಬುದು ಯಾರಿಗೂ ತಿಳಿಯದು. ಇವರ ಪೂರ್ವಿಕರು ಹೇಳುವಂತೆ ಹಿಮಾಲಯದ ಮಾರ್ಗವಾಗಿ ಭಾರತಕ್ಕೆ ದಂಡೆತ್ತಿ ಬಂದ ಗ್ರೀಕ್‌ ದೊರೆ ಅಲೆಗ್ಸಾಂಡರ್‌ ಸ್ವದೇಶಕ್ಕೆ ಹಿಂತಿರುಗುವಾಗ ಅವರ ಸೈನಿಕರಲ್ಲಿ ಕೆಲವರು ಮಲಾನಾದಲ್ಲೇ ಬೀಡು ಬಿಟ್ಟಿರಬಹುದೆಂದು ಭಾವಿಸಲಾಗಿದೆ.

ಈ ಜನರ ರೀತಿ ನೀತಿ ತೀರಾ ಭಿನ್ನವಾದದ್ದು. ಅಪ್ಪಿತಪ್ಪಿಯೂ ಹತ್ತಿರದ ಯಾವುದೇ ಹಳ್ಳಿಗಳಿಗೂ ಹೋಗುವುದಿಲ್ಲ. ಹಾಗೆಯೇ ಬೇರೆಯವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ, ಅವರೊಂದಿಗೆ ಸ್ನೇಹ ಸಂಬಂಧ ಬೆಳೆಸುವುದಿಲ್ಲ. ಯಾರೇ ಅಪರಿಚಿತರು ಹಳ್ಳಿಗೆ ಪ್ರವೇಶಿಸಬೇಕಾದರೆ ಮೊದಲು ಹಳ್ಳಿಯ ಪ್ರಧಾನನ ಅನುಮತಿಯನ್ನು ಪಡೆಯಬೇಕು. ಜೊತೆಗೆ ಅವರಿಗೆ ಸಂಬಂಧಿಸಿದ ವಸ್ತುಗಳನ್ನಾಗಲಿ, ಸ್ಥಳೀಯರನ್ನಾಗಿ ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ ಮುಲಾಜಿಲ್ಲದೆ 1000 ರೂ.ಗಳ ದಂಡ ತೆರಬೇಕು.

ಕಿರಿದಾದ ಓಣಿಯಂತಿರುವ ಕಾಲು ಹಾದಿಯ ಅಕ್ಕಪಕ್ಕದಲ್ಲಿರುವ ಮನೆ ಗೋಡೆಗಳನ್ನು ಮುಟ್ಟಿದರೂ ದಂಡ ತಪ್ಪಿದ್ದಲ್ಲ. ತಾವು, ತಮ್ಮ ಪ್ರದೇಶ ಮತ್ತು ವಸ್ತುಗಳು ಪವಿತ್ರವಾದುದೆಂಬ ಭಾವನೆಯೇ ಈ ಕಟ್ಟುಪಾಡಿಗೆ ಕಾರಣ. ಶುಚಿತ್ವದ ಪ್ರಶ್ನೆ ಬಂದಾಗ ಇವರಷ್ಟು ಕೊಳಕು ಜನ ಜಗತ್ತಿನಲ್ಲಿಯೇ ಇಲ್ಲವೇನೋ ಅನಿಸುತ್ತದೆ. ಇವರಿಗೆ ಜೀವನದಲ್ಲಿ ಒಮ್ಮೆಯೂ ಸ್ನಾನ ಮಾಡಿದ ನೆನಪಿಲ್ಲವಂತೆ.

ಇನ್ನು ಕಾನೂನು ಕಟ್ಟಳೆಗಳಂತೂ ತೀರಾ ವಿಚಿತ್ರ. ಭಾರತ ಸಂವಿಧಾನದಲ್ಲಿರುವ ಕಾನೂನನ್ನು ಪಾಲಿಸುವುದಿಲ್ಲ. ತಮ್ಮದೇ ಆದ ಕಾನೂನನ್ನು ರೀತಿ ನೀತಿಗಳನ್ನು ರಚಿಸಿಕೊಂಡಿರುವರು. ಯಾವುದೇ ಗಲಾಟೆ, ಘರ್ಷಣೆಗಳು ನಡೆದರೂ ಹತ್ತಿರದ ಪೊಲೀಸ್‌ಠಾಣೆಗೆ ಹೋಗುವುದಿಲ್ಲ. ಊರಿನ ಹಿರಿಯ ವ್ಯಕ್ತಿಯ ಸಮ್ಮುಖದಲ್ಲಿ ದೇವಾಲಯದ ಮುಂದೆ ತೀರ್ಮಾನ ಮಾಡಿಕೊಳ್ಳುವರು. ಹಿರಿಯ ವ್ಯಕ್ತಿಯೇ ನ್ಯಾಯಾಧೀಶ. ಇನ್ನು ಅವರ ವಿವಾಹ ಪದ್ಧತಿಯಂತೂ ತೀರಾ ವಿಭಿನ್ನವಾದದ್ದು. ಇಲ್ಲಿ ಯಾರನ್ನೂ ವಿಧಿವತ್ತಾಗಿ ವಿವಾಹವಾಗುವುದಿಲ್ಲ. ಬದಲಾಗಿ ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಸ್ತ್ರೀ ಮತ್ತು ಪುರುಷರು ಇಷ್ಟಪಟ್ಟರೆ ಮುಗಿಯಿತು.  1 ರೂಪಾಯಿ ದೇವರಿಗೆ ಕಾಣಿಕೆ ಹಾಕಿ ಹಾರ ಬದಲಿಸಿಕೊಂಡರೆ ವಿವಾಹವಾದಂತೆ. ವಿವಾಹಿತ ಸ್ತ್ರೀ ವಿವಾಹಿತ ಪುರುಷನನ್ನು, ವಿವಾಹಿತ ಪುರುಷ ವಿವಾಹಿತ ಮಹಿಳೆಯನ್ನು, ಅವಿವಾಹಿತ ಮಹಿಳೆ ವಿವಾಹಿತ ಪುರುಷನನ್ನು ಮರು ವಿವಾಹವಾಗಬಹುದು, ಇಲ್ಲಿ ವಯಸ್ಸಿನ ನಿರ್ಬಂಧವಿಲ್ಲ.

ಮಲಾನಾದವರ ಆದಾಯದ ಮೂಲವೆಂದರೆ ಕೃಷಿ ಮತ್ತು ಹೈನುಗಾರಿಕೆ. ಸ್ತ್ರೀ ಮತ್ತು ಪುರುಷರಿಬ್ಬರೂ ಹೊಲಗಳಲ್ಲಿ ಮತ್ತು ಕಾಡುಗಳಲ್ಲಿ ಕೆಲಸ ಮಾಡುವರು. ಮಹಿಳೆಯರಂತೂ ಕಷ್ಟದ ಕೆಲಸವನ್ನು ಸುಲಭವಾಗಿ ನಿಭಾಯಿಸುವರು. ಅಲ್ಲದೆ, ಮರದ ದಿಮ್ಮಿಗಳನ್ನು ಬೆನ್ನ ಮೇಲೆ ಸುಲಭವಾಗಿ ಹೊತ್ತು ಸಾಗಿಸುವರು.

ಒಟ್ಟಿನಲ್ಲಿ ವಿಚಿತ್ರ ಸಂಸ್ಕೃತಿಯನ್ನು ಹೊಂದಿರುವ ಮಲಾನಾ ಜನರು ಎತ್ತರದ ಚಂದ್ರಖಾನಿ ಕಣಿವೆಯಲ್ಲಿ ನಿರ್ಸಗದ ಮಡಿಲಲ್ಲಿ ನೆಲೆ ನಿಂತಿದ್ದಾರೆ. ಸುಂದರ ಕಣಿವೆಯಲ್ಲಿರುವ ಮಲಾನಾ ಎಂತಹವರನ್ನೂ ಆಕರ್ಷಿಸುತ್ತದೆ.

– ತಿಪಟೂರು ಲೀಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ