ನೀಳ್ಗಥೆ – ಎಸ್‌.ಪಿ. ವಿನಿತಾ

ಜೀವಿಕಾ, ಈ ಹೆಸರನ್ನು ಅವಳಿಗೆ ಯಾರು ಇಟ್ಟರೆಂದು ಅವಳಿಗೂ ನೆನಪಿಲ್ಲ. ಅವಳ ತಂದೆ ತಾಯಿ ಇಟ್ಟಿದ್ದಾ ಅಥವಾ ಅವಳು ಬೆಳೆದ ಆಶ್ರಮದವರು ಇಟ್ಟಿದ್ದಾ…?  ಅವಳಿಗೂ ಉತ್ತರ ಹೊಳೆಯಲಿಲ್ಲ. ಜೀವಿಕಾ ಆಶ್ರಮಕ್ಕೆ ಬಂದು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ, ಈಗ ತನ್ನ ಡಿಗ್ರಿಯನ್ನು ಪೂರ್ಣಗೊಳಿಸಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಅವಳು ನಾಲ್ಕೈದು ವರ್ಷದವಳಿದ್ದಾಗ ಈ ಅನಾಥಾಶ್ರಮಕ್ಕೆ ಬಂದಳೆಂದು, ಆ ಆಶ್ರಮದವರು ಹೇಳಿದ ನೆನಪು ಅವಳಿಗೆ. ಆ ದಿನ ಸೋಮವಾರ ಬೆಳಗಿನ ಸಮಯ ಜೀವಿಕಾ ಎಂದಿನಂತೆ ಕೆಲಸಕ್ಕೆ ಹೊರಟಿದ್ದಳು. ಒಂದು ಮುದ್ದಾದ ಹುಡುಗಿ ಅವರ ಆಶ್ರಮದ ಮೆಟ್ಟಿಲುಗಳ ಮೇಲೆ ಕೂತಿತ್ತು. ಆ ಮಗು ನಿದ್ದೆ ಮಂಪರಿನಲ್ಲಿದ್ದಂತೆ ಕಂಡಿತವಳಿಗೆ. ಸುಮಾರು 4 ವರ್ಷದ ಹುಡುಗಿ. ಅವಳಿಗೆ ತನ್ನ ಹೆಸರೂ ನೆನಪಿದ್ದಂತೆ ಇರಲಿಲ್ಲ. ಜೀವಿಕಾ ಆಶ್ರಮದ ಮೇಲ್ವಿಚಾರಕಿ ಸುಶೀಲಾರ ಬಳಿ ಆ ಪುಟ್ಟ ಹುಡುಗಿಯನ್ನು ಕರೆತಂದಳು. ಇಬ್ಬರೂ ಆ ಹುಡುಗಿಯ ಹೆಸರು, ವಿಳಾಸವನ್ನು ತಿಳಿಯಲು ಎಷ್ಟು ಪ್ರಯತ್ನಪಟ್ಟರೂ ಅವಳಿಗೆ ಏನೂ ಹೇಳದೆ ಸುಮ್ಮನಿದ್ದಳು. ಕೊನೆಗೆ ಸುಶೀಲಾರ ಆದೇಶದಂತೆ ಜೀವಿಕಾ ಅವಳನ್ನು ಆಶ್ರಮದಲ್ಲಿ ಸಹಾಯಕಳಾಗಿ ಕೆಲಸ ಮಾಡುವ ಜ್ಯೋತಿ ಬಳಿ ಕರೆದೊಯ್ದಳು. ಅಲ್ಲಿ ಆ ಮಗುವಿಗೆ ಮಿಕ್ಕ ಅನಾಥ ಮಕ್ಕಳಂತೆ ಊಟ, ವಸತಿ ವ್ಯವಸ್ಥೆ ಮಾಡಿದರು. ಜ್ಯೋತಿ ಮತ್ತು ಜೀವಿಕಾ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು. ಜ್ಯೋತಿ ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಅವಳು ಓದನ್ನು ಮುಂದುವರಿಸದೆ ಆಶ್ರಮದಲ್ಲೇ ಸಣ್ಣವಳಿದ್ದಾಗಲಿಂದಲೂ ಸಹಾಯಕಳಾಗಿ ಕೆಲಸ ಮಾಡಲು ಆರಂಭಿಸಿದ್ದಳು. ಇದರಿಂದ ಸುಶೀಲಮ್ಮನಿಗೆ ಕೆಲಸದ ಹೊರೆ ಎಷ್ಟೋ ಕಮ್ಮಿಯಾಗಿತ್ತು. ಜೀವಿಕಾ ಮತ್ತು  ಜ್ಯೋತಿಯೊಂದಿಗಿದ್ದ ಎಲ್ಲಾ ಮಕ್ಕಳನ್ನು ಯಾರಾದರೊಬ್ಬರು ದತ್ತು ಪಡೆದು ಅವರೆಲ್ಲರೂ ಹೊರಟುಹೋಗಿದ್ದರು. ಆದರೆ ಪ್ರತಿ ಬಾರಿಯೂ ಬೇರೆ ಮಕ್ಕಳನ್ನು ದತ್ತು ಪಡೆಯಲು ಬಂದಾಗ ಇವರಿಬ್ಬರನ್ನು ಮಾತ್ರ ಯಾಕೆ ಯಾರೂ ದತ್ತು ಪಡೆಯಲಿಲ್ಲ? ಎಂಬ ಪ್ರಶ್ನೆ ಅವರಿಬ್ಬರನ್ನೂ ಕಾಡುತ್ತಿತ್ತು. ಆದರೆ ಕಾಲಕ್ರಮೇಣ ಆ ನೋವಿನ ನೆನಪು ಮಾಸಿ ಹೋಗಿತ್ತು. ಆ ಪುಟ್ಟ ಹುಡುಗಿ ಜೀವಿಕಾಳನ್ನು ತುಂಬಾನೆ ಹಚ್ಚಿಕೊಂಡಿತ್ತು. ಜೀವಿಕಾಳಿಗೂ ಅವಳೆಂದರೆ ಎಲ್ಲಿಲ್ಲದ ಕಾಳಜಿ. ಆ ಪುಟ್ಟ ಹುಡುಗಿಗೆ ಗೌರಿ ಎಂದು ಹೆಸರಿಟ್ಟವಳೂ ಇವಳೇ. ಗೌರಿ ಆಶ್ರಮಕ್ಕೆ ಬಂದು ಸುಮಾರು ನಾಲ್ಕು ತಿಂಗಳು ಕಳೆಯಿತು. ಅದೊಂದು ದಿನ ಸಂಜೆ ಕೆಲಸದಿಂದ ವಾಪಸ್ಸಾದಾಗ ಗೌರಿ ಆಶ್ರಮದಲ್ಲಿ ಎಲ್ಲೂ ಕಾಣಿಸಲಿಲ್ಲ. ಜ್ಯೋತಿಯನ್ನು ಕೇಳಿದಾಗ ಮಧ್ಯಾಹ್ನ ಯಾರೋ ಪುಣ್ಯಾತ್ಮರು ಬಂದು ಅವಳನ್ನು ದತ್ತು ಪಡೆದರೆಂದು ಹೇಳಿದಳು. ಜೀವಿಕಾಳಿಗೆ ಅರೆ ಕ್ಷಣ ಸಂಕಟವಾದಂತೆನಿಸಿತು. ತಾನು ಖುಷಿ ಪಡಬೇಕಾದ ವಿಷಯಕ್ಕೆ ಈ ಸಂಕಟವೇಕೆ ಎಂದು ಅವಳ ಅರಿವಿಗೂ ಬರಲಿಲ್ಲ. ಬಹುಶಃ ಗೌರಿಯ ಮೇಲಿನ ಅತಿಯಾದ ಕಾಳಜಿಯಿಂದ ತನಗೆ ಹೀಗನ್ನಿಸುತ್ತಿರಬಹುದು ಎಂದು ಅವಳು ಭಾವಿಸಿದಳು. ಕೊನೆಯದಾಗಿ ಅವಳ ಮುಖವನ್ನು ನೋಡಲಾಗಲಿಲ್ಲವೆಂದು ಹಪಹಪಿಸಿದಳು.

ಆದರೆ ಆಶ್ರಮದಲ್ಲಿ ಯಾರನ್ನೇ ದತ್ತು ಪಡೆದರೂ ದತ್ತು ಪಡೆದವರ ಹೆಸರು, ವಿಳಾಸ, ಇತರೆ ಎಲ್ಲಾ ವಿವರಗಳು ಆಶ್ರಮದ ಮೇಲ್ವಿಚಾರಕಿ ಸುಶೀಲಮ್ಮನ ಬಳಿ ಗೌಪ್ಯವಾಗಿರುತ್ತಿತ್ತು. ಅದನ್ನು ಬೇರೆ ಯಾರೂ ನೋಡಲು ಅನುಮತಿ ಇರಲಿಲ್ಲ. ಸಮಯ ಹೀಗೆ ಸಾಗಿತ್ತು.

ಒಮ್ಮೆ ಜೀವಿಕಾ ತನ್ನ ಕೆಲಸದ ನಿಮಿತ್ತ ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಹೋಗಿದ್ದಳು. ಅವಳು ಅಲ್ಲಿ ತನ್ನೆಲ್ಲಾ ಕೆಲಸವನ್ನೂ ಪೂರೈಸಿ ಆಶ್ರಮಕ್ಕೆ ವಾಪಸ್ಸಾಗಲು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದಾಗ  ಎರಡು ಪುಟ್ಟ ಮಕ್ಕಳು ಭಿಕ್ಷೆ ಬೇಡುತ್ತಾ ಅವಳ ಮುಂದೆಯೇ ಸುತ್ತಾಡುತ್ತಿದ್ದುದನ್ನು ನೋಡಿದಳು. ಆ ಮಕ್ಕಳ ಮುಖ ಬಾಡಿಹೋಗಿತ್ತು.  ಬಟ್ಟೆಗಳು ಮಾಸಿಹೋಗಿದ್ದವು. ಆ  ಬಾಡಿಹೋದ ಮುಖಗಳಲ್ಲಿ ಒಂದು ಮುಖ ಗೌರಿಯದೆಂದು ತಿಳಿಯಲು ಅವಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಆ ಒಂದು ಕ್ಷಣ ಅವಳಿಗೆ ದಿಗಿಲಾಯಿತು. ಅವಳ ತಲೆಯಲ್ಲಿ ನೂರಾರು ಯೋಚನೆಗಳು ಸುಳಿದುಹೋದವು.  ದತ್ತು ಪಡೆದವರ ಮನೆಯಲ್ಲಿ ಇರಬೇಕಾಗಿದ್ದ ಗೌರಿ ಇಲ್ಲೇನು ಮಾಡುತ್ತಿದ್ದಾಳೆ? ಒಂದುವೇಳೆ ಅವಳನ್ನು ದತ್ತು ಪಡೆದವರೇ ಇವಳನ್ನು ಹೊರಗಟ್ಟಿದರೇ? ಇಲ್ಲಾ ಅವರಿಂದಲೂ ಇವಳು ಅಪಹರಣವಾದಳೇ? ಮುಂತಾದ ಅನೇಕ ಪ್ರಶ್ನೆಗಳು ಅವಳ ತಲೆಯಲ್ಲಿ ಮಿಂಚಿ ಮಾಯವಾದವು. ಆದರೆ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಲಿಲ್ಲ. ಇಲ್ಲೇನೋ ಎಡವಟ್ಟಾಗಿದೆ ಎನಿಸಿತವಳಿಗೆ, ತಕ್ಷಣ ಚುರುಕಾದಳು. ಆ ಎರಡು ಮಕ್ಕಳು ಭಿಕ್ಷೆ ಬೇಡಿ ವಾಪಸ್ಸಾಗುವಾಗ ಅವರನ್ನು ಹಿಂಬಾಲಿಸಿದಳು. ಯಾವುದೋ ಕೊಳಚೆ ಪ್ರದೇಶದ ಗಲ್ಲಿಗಳಲ್ಲಿ ಹಾದುಹೋಗಿ, ಪಾಳು ಬಿದ್ದ ತಗಡಿನ ಹೊದಿಕೆಯಿದ್ದ ಮನೆಯೊಳಗೆ ಅವು ಹೋದವು. ಜೀವಿಕಾ ಯಾರಿಗೂ ಗೊತ್ತಾಗದಂತೆ ಆ ಮನೆಯ ಕಿಟಿಕಿಯ ಮೂಲಕ ಎಚ್ಚರಿಕೆಯಿಂದ ಒಳಗೆ ನಡೆಯುವುದನ್ನು ಗಮನಿಸಲಾರಂಭಿಸಿದಳು. ಅಲ್ಲಿ ಇನ್ನೂ ಹತ್ತಾರು ಮಕ್ಕಳು ತಾವು ಭಿಕ್ಷೆ ಬೇಡಿ ಬಂದ ದುಡ್ಡನ್ನು ಸಾಲಿನಲ್ಲಿ ನಿಂತು, ಅಲ್ಲೇ ಕುರ್ಚಿಯ ಮೇಲೆ ಕುಳಿತಿದ್ದ ದಾಂಡಿಗನಿಗೆ ಒಪ್ಪಿಸುತ್ತಿದ್ದರು. ಹಣ ತಂದುಕೊಟ್ಟ ಮಕ್ಕಳಿಗೆ ಮಾತ್ರ ಊಟದ ಪೊಟ್ಟಣಗಳನ್ನು ಕೊಡಲಾಗುತ್ತಿತ್ತು. ಭಿಕ್ಷೆಯಿಂದ ಹಣ ತರದ ಮಕ್ಕಳನ್ನು ಕೋಣೆಯ ಒಂದು ಮೂಲೆಗೆ ದಬ್ಬಿ ಅವರನ್ನು ಮನಬಂದಂತೆ ಥಳಿಸುತ್ತಿದ್ದರು. ಆ ಮಕ್ಕಳಿಗೆ ಊಟವನ್ನೂ ಕೊಡಲಿಲ್ಲ. ಬೇರೆ ಮಕ್ಕಳು ಅವರೊಂದಿಗೆ ಊಟ ಹಂಚಿಕೊಂಡರೆ ಅವರನ್ನೂ ಶಿಕ್ಷಿಸಲಾಗುವುದು ಎಂದು ಬೆದರಿಸುತ್ತಿದ್ದರು.

ಈ ಮನ ಕಲುಕುವಂತಹ ದೃಶ್ಯವನ್ನು ನೋಡಿ ಜೀವಿಕಾಳಿಗೆ ಕ್ಷಣಕಾಲ ದಿಕ್ಕೇ ತೋಚದಂತಾಯಿತು. ಅವಳ ಕಣ್ಣುಗಳು ಗೌರಿಯನ್ನು ಹುಡುಕಿದವು. ಗೌರಿಯ ಜೊತೆಗೆ ತಮ್ಮದೇ ಆಶ್ರಮದ ನಾಲ್ಕಾರು ಮಕ್ಕಳು ಕಂಡರು. ಕ್ಷಣ ಮಾತ್ರದಲ್ಲಿ ಇಲ್ಲೇನೋ ತಪ್ಪು ನಡೆಯುತ್ತಿದೆ ಎಂದವಳು ಗ್ರಹಿಸಿದಳು.  ಆದರೆ ತಮ್ಮ ಆಶ್ರಮದಿಂದ ದತ್ತು ಪಡೆಯಲಾದ ಮಕ್ಕಳೇ ಒಟ್ಟಿಗೆ ಅಪಹರಣವಾಗುವುದು ಅಸಾಧ್ಯದ ಮಾತಾಗಿತ್ತು. ಅವಳಿಗೆ ಏನೊಂದು ತೋಚಲಿಲ್ಲ. ತಲೆ ಸುತ್ತಿದಂತಾಯಿತು. ಅವಳು ಸಮಯವನ್ನು ವ್ಯರ್ಥ ಮಾಡುವ ಹಾಗಿರಲಿಲ್ಲ. ತಕ್ಷಣವೇ ಅವಳು ತನ್ನ ಸ್ನೇಹಿತ ಅಭಿಮನ್ಯುವಿಗೆ ಕರೆ ಮಾಡಿ, ಸಂಕ್ಷಿಪ್ತವಾಗಿ ಅಲ್ಲಿನ ವಿಷಯನ್ನು ಹೇಳಿ, ಆದಷ್ಟು ಬೇಗ ಬರುವಂತೆ ಹೇಳಿ, ತಾನು ಮರೆಯಲ್ಲಿ ನಿಂತು ಆ ಮನೆಯ ಮೇಲೆ ನಿಗಾ ಇಟ್ಟಳು.

ಅಭಿಮನ್ಯು ಬೆಂಗಳೂರಿನಲ್ಲಿ ಸಬ್‌ ಇನ್ಸ್ ಪೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಆತ ಜೀವಿಕಾಳ ಕಾಲೇಜು ಸಹಪಾಠಿ. ಅವನು ಸ್ವಲ್ಪ ತಡಮಾಡದೆ ತನ್ನ ಇಬ್ಬರು ಪೇದೆಗಳೊಂದಿಗೆ ಜೀವಿಕಾ ಹೇಳಿದ ಸ್ಥಳಕ್ಕೆ ಬಂದ. ಜೀವಿಕಾ ಹೇಳಿದ ಮನೆಯ ಬಳಿ ಹೋಗಿ ಒಳಗೆ ನಡೆಯುತ್ತಿದ್ದುದನ್ನು  ಗಮನಿಸಿದರು. ಒಳಗೆ ಸುಮಾರು ಐದು ಜನ ದಾಂಡಿಗರಿದ್ದರು ಅವರಲ್ಲಿ ಇಬ್ಬರು ಪಿಸ್ತೂಲ್‌, ಇನ್ನುಳಿದರು ಮಾರಕಾಸ್ತ್ರಗಳೊಂದಿಗೆ ನಿಂತಿರುವುದನ್ನು ನೋಡಿದ ಅಭಿಮನ್ಯು, ಇದು ಸಾಮಾನ್ಯವಾದ ಗುಂಪಲ್ಲ ಸಾಕಷ್ಟು ಅಪಾಯಕಾರಿ ಗುಂಪು, ಬಹಳ ಎಚ್ಚರಿಕೆಯಿಂದ ಇವರುಗಳ ಮೇಲೆ ದಾಳಿ ಮಾಡಿ, ಇವರನ್ನು ಸದೆಬಡಿಯಬೇಕು ಎಂದವನೇ ಇಬ್ಬರು ಪೇದೆಗಳಿಗೆ ತನ್ನನ್ನು ಹೇಗೆ ಹಿಂಬಾಲಿಸಿ ಅವರುಗಳ ಮೇಲೆ ದಾಳಿ ಮಾಡಬೇಕೆಂದು ಸ್ಥಳದಲ್ಲೇ ಯೋಜನೆಯನ್ನು ರೂಪಿಸಿದ ಅಭಿಮನ್ಯು. ಅಭಿಮನ್ಯು ಅತ್ಯಂತ ಸಾಹಸಿ, ಪ್ರಾಮಾಣಿಕ ಎಂದು ಹೆಸರು ಪಡೆದು ಎಂತಹ ಅಪಾಯಕಾರಿ ಸನ್ನಿವೇಶವಿದ್ದರೂ ಮುನ್ನುಗ್ಗುವಂಥ ಅಧಿಕಾರಿಯಾಗಿದ್ದರೂ ಈ ಮಾಫಿಯಾ ಗುಂಪನ್ನು ಸದೆಬಡಿಯುವುದಷ್ಟೇ ಅಲ್ಲ, ಮಕ್ಕಳ ಜೀವ ಉಳಿಸುವುದೂ ಅಷ್ಟೇ ಮುಖ್ಯವಾಗಿತ್ತು. ಹಾಗಾಗಿ ಅಭಿಮನ್ಯು ಮತ್ತಿಬ್ಬರು ಪೇದೆಗಳನ್ನು ಸ್ಥಳಕ್ಕೆ ಬರಹೇಳಿದ. ಅಭಿಮನ್ಯು ಯೋಜನೆಯಂತೆ ಇಬ್ಬರು ಪೇದೆಗಳೊಂದಿಗೆ ಆ ಮನೆಗೆ ನುಗ್ಗಿ ಪಿಸ್ತೂಲ್ ಹಿಡಿದ ಇಬ್ಬರ ಕೈಗಳಿಗೂ ಗುಂಡು ಹಾರಿಸಿದ. ಒಂದು ಕ್ಷಣ ಏನಾಗುತ್ತಿದೆ ಎಂದು ಅವರು ಯೋಚಿಸುವಷ್ಟರಲ್ಲಿ ಇಬ್ಬರು ಪೇದೆಗಳು ಮಾರಕಾಸ್ತ್ರ ಹಿಡಿದ ಮೂವರ ಮೇಲೂ ಗುಂಡಿನ ದಾಳಿ ಮಾಡುತ್ತಾರೆ. ಒಳಗಿದ್ದ ಮಕ್ಕಳು ಭಯದಿಂದ ಒಂದನ್ನೊಂದು ಅಪ್ಪಿಕೊಂಡು ಪಿಳಿಪಿಳಿ ನೋಡುತ್ತವೆ. ಇವೆಲ್ಲವನ್ನೂ ನೋಡಿದ ಜೀವಿಕಾಳಿಗೆ ಸಿನಿಮಾ, ಟಿ.ವಿ.ಗಳಲ್ಲಿ ನೋಡುವ ದೃಶ್ಯಗಳನ್ನು ಕಣ್ಣು ಮುಂದೆಯೇ ಕಂಡು ಭಯದಿಂದ ಕಂಪಿಸಿದಳು.

ಅಭಿಮನ್ಯು ಮತ್ತಿಬ್ಬರು ಪೇದೆಗಳು ಎಲ್ಲರನ್ನೂ ಬಂಧಿಸಿ, ಅವರ ಅಸ್ತ್ರಗಳನ್ನು ವಶಪಡಿಸಿಕೊಳ್ಳುವಷ್ಟರಲ್ಲಿ ಹೊರಗಿನಿಂದ ಮತ್ತೊಬ್ಬ ದಾಂಡಿಗ ಒಳನುಗ್ಗಿ ಹಿಂದಿನಿಂದ ಗುಂಡು ಹಾರಿಸಬೇಕೆನ್ನುವಷ್ಟರಲ್ಲಿ ಜೀವಿಕಾ ಭಯದಿಂದ ಕೂಗಿಕೊಂಡು ಆ ಮನೆಯೊಳಗೆ ನುಗ್ಗಿ ಆ ಮಕ್ಕಳಿಗೆ ಅಡ್ಡವಾಗಿ ನಿಂತಳು, ಅಷ್ಟರಲ್ಲಿ ಮತ್ತಿಬ್ಬರು ಪೇದೆಗಳು ಬಂದು ಆ ದಾಂಡಿಗನನ್ನು ಹೊಡೆದುರುಳಿಸಿದರು. ಅಷ್ಟರೊಳಗೆ ಒಳನುಗ್ಗಿದ ಜೀವಿಕಾ ಮಕ್ಕಳಿಗೆ ಅಡ್ಡವಾಗಿ ನಿಂತಳು. ಮಕ್ಕಳೆಲ್ಲಾ ಭಯದಿಂದ ಹೆದರಿ ಕಣ್ಮುಚ್ಚಿ ಕುಳಿತಿದ್ದವು. ಜೀವಿಕಾ ಅವರ ತಲೆ ನೇವರಿಸಿ ನಿಧಾನವಾಗಿ ಮಾತನಾಡಿಸಿ ಅವರನ್ನೆಲ್ಲಾ ಹೊರಗೆ ಕರೆತಂದಳು. ಇಂಥ ಭಯಾನಕ ಸನ್ನಿವೇಶದಲ್ಲೂ ಭಯಪಡದೆ ಒಳನುಗ್ಗಿದ ಜೀವಿಕಾಳನ್ನು ಕಂಡು ಅವಳ ಧೈರ್ಯಕ್ಕೆ ಹಾಗೂ ಈ ಗುಂಪಿನ ಬಗ್ಗೆ ಮಾಹಿತಿ ಕೊಟ್ಟು ಮಕ್ಕಳನ್ನು ಬಂಧನದಿಂದ ಪಾರು ಮಾಡಲು ಸಹಾಯ ಮಾಡಿದ್ದಕ್ಕಾಗಿ ಅಭಿಮನ್ಯು ಮೆಚ್ಚುಗೆ ವ್ಯಕ್ತಪಡಿಸಿದ. ಆ ದಾಂಡಿಗರನ್ನೆಲ್ಲಾ ಬಂಧಿಸಿ ಠಾಣೆಗೆ ಎಳೆದೊಯ್ದು ವಿಚಾರಣೆ ನಡೆಸಿದಾಗ, ಈ ಎಲ್ಲಾ ಒಳಸಂಚಿನೊಳಗೆ ಆಶ್ರಮದ ಮೇಲ್ವಿಚಾರಕಿ ಸುಶೀಲಮ್ಮ ಇವರೊಂದಿಗೆ ಕೈ ಜೋಡಿಸಿರುವ ವಿಷಯ ಹೊರಬಂತು! ಅಭಿಮನ್ಯು ಮತ್ತು ಜೀವಿಕಾ ಯೋಚಿಸಿದಂತೆ ಇದರಲ್ಲಿ ಆಶ್ರಮದ ಒಳಗಿನವರ ಕೈವಾಡವಿತ್ತು. ಆದರೇ ಸುಶೀಲಮ್ಮನೇ ಮುಖ್ಯ ಪಾತ್ರಧಾರಿ ಎಂಬ ಯೋಚನೆ ಕಿಂಚಿತ್ತೂ ಜೀವಿಕಾಳಿಗೆ ಇರಲಿಲ್ಲ. ಈ ಪ್ರಕರಣದಲ್ಲಿ ಜೀವಿಕಾ ಸಹಾಯ ಮಾಡಿದ್ದರಿಂದ ಅವಳ ಪ್ರಾಣಕ್ಕೆ ಅಪಾಯವಾಗಬಹುದೆಂದು ನೆನೆಸಿದ ಅಭಿಮನ್ಯು ಅವಳ ಹೆಸರನ್ನು ಬಹಿರಂಗಪಡಿಸದೆ ಗೌಪ್ಯವಾಗಿಟ್ಟ. ಸುಶೀಲಮ್ಮನನ್ನು ವಿಚಾರಣೆಗೆ ಒಳಪಡಿಸುವುದರ ಜೊತೆಗೆ ಆ ಮಕ್ಕಳನ್ನು ಅವರ ಕುಟುಂಬದವರೊಂದಿಗೆ ಸೇರಿಸುವುದು ಅಷ್ಟೇ ಮುಖ್ಯವಾಗಿತ್ತು. ಅಲ್ಲದೆ ಅಷ್ಟು ದೊಡ್ಡ ಆಶ್ರಮದ ಮೇಲ್ವಿಚಾರಕಿಯನ್ನು ಸರಿಯಾದ ಸಾಕ್ಷ್ಯಾಧಾರವಿಲ್ಲದೆ ಬಂಧಿಸುವುದು ಸುಲಭದ ಮಾತಾಗಿರಲಿಲ್ಲ. ಮೇಲಾಗಿ ಆಶ್ರಮದ ಸಮಿತಿಯ ಕೆಲವು ಮುಖ್ಯಸ್ಥರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು. ಅವರುಗಳ ಬೆಂಬಲವಿಲ್ಲದೆ ಸುಶೀಲಮ್ಮ ಇಂತಹ ದೊಡ್ಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಅಸಾಧ್ಯದ ಮಾತು. ಮಾಫಿಯ ಗುಂಪಿನ ರೌಡಿಗಳು ಬಹಳ ಚಾಣಾಕ್ಷರಾಗಿದ್ದರಿಂದ ಪ್ರತಿ ಬಾರಿಯೂ ಸುಶೀಲಮ್ಮನನ್ನು ಭೇಟಿ ಮಾಡಲು ಬರುವಾಗ ಅವರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋಗಳಲ್ಲಿ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದರಿಂದ. ಅವರ ಹೇಳಿಕೆ ಮತ್ತು ವಿಡಿಯೋ ರೆಕಾರ್ಡ್‌ಆಧಾರದನ್ವಯ ಸುಶೀಲಮ್ಮನನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸುವುದು ಕಷ್ಟವಾಗಲಿಲ್ಲ. ಒಂದುವೇಳೆ ತಾವು ಪೊಲೀಸರಿಗೆ ಸಿಕ್ಕಿಬಿದ್ದರೆ, ಇದಕ್ಕೆ ಪಾತ್ರಧಾರಿಯಾದ ಸುಶೀಲಮ್ಮ ಆಶ್ರಮದ ಸಮಿತಿಯ ಮುಖ್ಯಸ್ಥರ ಲಾಭಿಯಿಂದ ಸುಲಭದಲ್ಲಿ ತಪ್ಪಿಸಿಕೊಳ್ಳಬಹುದೆಂಬ ಮುಂದಾಲೋಚನೆಯಿಂದ ಮಾಫಿಯಾದವರು ವಿಡಿಯೋ ರೆಕಾರ್ಡ್‌ಗಳನ್ನು ಮಾಡಿಕೊಳ್ಳುತ್ತಿದ್ದರೆಂದು ವಿಚಾರಣೆಯಿಂದ ತಿಳಿಯಿತು. ಒಂದುವೇಳೆ ಸುಶೀಲಮ್ಮ ತಿರುಗಿ ಬಿದ್ದರೆ ಈ ವಿಡಿಯೋ ರೆಕಾರ್ಡ್‌ ಮೂಲಕ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡುವುದು ಮಾಫಿಯಾದವರ ಯೋಜನೆಯಾಗಿತ್ತು.

ಸುಶೀಲಮ್ಮನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾನೇ ಈ ಕೃತ್ಯದ ಮುಖ್ಯ ರೂವಾರಿ, ತನಗೆ ಆಶ್ರಮದ ಸಮಿತಿಯ ಕೆಲವು ಮುಖ್ಯಸ್ಥರ ಬೆಂಬಲವಿದೆ ಎಂದು ಕೆಲವರ ಹೆಸರುಗಳನ್ನು ಹೇಳಿದರು. ತಾವು ಸಣ್ಣ ಮಕ್ಕಳು ಅಂದರೆ ಸುಮಾರು 3-7 ವರ್ಷದ ಮಕ್ಕಳನ್ನು ಅಪಹರಿಸುವುದು ಮಾತ್ರವೇ ನಮ್ಮ ಗುರಿಯಾಗಿತ್ತು, ಚಾಕೋಲೇಟ್‌, ಆಟದ ಸಾಮಾನುಗಳ ಆಮಿಷವೊಡ್ಡಿ ಅವರನ್ನು ಸುಲಭವಾಗಿ ಆಕರ್ಷಿಸಿ ಅಪಹರಿಸುತ್ತಿದ್ದೆವು. ಆದಷ್ಟು ಮಕ್ಕಳನ್ನು ಜನಸಂದಣಿ ಇರುವ ಪ್ರದೇಶವಾದ ಬಸ್‌ ನಿಲ್ದಾಣ, ಮಾರ್ಕೆಟ್‌, ಮದುವೆ ಮಂಟಪ, ಸಮಾರಂಭಗಳು ಇಂತಹ ಸ್ಥಳಗಳಿಂದ ಅಪಹರಿಸುತ್ತಿದ್ದೆವು. ಆದಷ್ಟು ಪರ ಊರುಗಳಿಂದ ಬಂದಿಳಿಯುವ ಮಕ್ಕಳ ಮೇಲೆ ನಿಗಾ ಇಡುತ್ತಿದ್ದೆವು. ಅಪಹರಿಸಿದ ಮಕ್ಕಳ ಜ್ಞಾಪಕ ಶಕ್ತಿ ಅಳಿಸಿಹಾಕಲು ಆ ಮಕ್ಕಳಿಗೆ ಒಂದು ರೀತಿಯ ಚುಚ್ಚುಮದ್ದನ್ನು ಒಂದು ವಾರದ ತನಕ ಕೊಡುತ್ತಿದ್ದೆವು, ಇದರಿಂದ ಮಕ್ಕಳಿಗೆ ಅವರ ನಿಜವಾದ ಹೆಸರು, ತಂದೆ ತಾಯಿ ಹೆಸರು, ವಿಳಾಸ ಏನೊಂದು ನೆನಪಿಗೆ ಬರುತ್ತಿರಲಿಲ್ಲ. ಆನಂತರ ಆ ಮಕ್ಕಳನ್ನು ಆಶ್ರಮದ ಹತ್ತಿರ ಬಿಡಲಾಗುತ್ತಿತ್ತು ಎಂದು ಸುಶೀಲಮ್ಮ ವಿಷದವಾಗಿ ತಿಳಿಸಿದರು.

ಹಾಗಾಗಿಯೇ ಗೌರಿ ಆಶ್ರಮದ ಬಳಿ ಜೀವಿಕಾಳಿಗೆ ಸಿಕ್ಕಿದಾಗ ಅವಳು ನಿದ್ದೆ ಮಂಪರಿನಲ್ಲಿದ್ದಂತೆ ಕಂಡಿದ್ದಳು ಜೊತೆಗೆ ತನ್ನ ಹೆಸರೂ ಕೂಡ ಅವಳ ನೆನೆಪಿಗೆ ಬಂದಿರಲಿಲ್ಲ. ಸುಶೀಲಮ್ಮ ಗೌರಿಗೆ ಹಳೆಯ ನೆನಪು ಇದೆಯೋ ಇಲ್ಲವೋ ಎಂದು ತಾವು ಖಚಿತಪಡಿಸಿಕೊಳ್ಳಲು ಜೀವಿಕಾಳೊಂದಿಗೆ ಗೌರಿಯ ಹೆಸರು, ವಿಳಾಸ ಕೇಳುವಂತೆ ನಾಟಕವಾಡಿದ್ದಳು.

ಅಪಹರಿಸಿದ ಮಕ್ಕಳನ್ನು ಐದಾರು ತಿಂಗಳು ಆಶ್ರಮದಲ್ಲಿ ಉಳಿಸಿಕೊಂಡು, ತಮ್ಮ ಸಹಚರರಿಗೆ ನಕಲಿ ತಂದೆ ತಾಯಿಗಳ ವೇಷ ಹಾಕಿ ಬರುತ್ತಿದ್ದರು, ಇಲ್ಲವೇ ಆಶ್ರಮದ ಮಕ್ಕಳನ್ನು ದತ್ತು ಪಡೆಯುವವರಂತೆ ಬಂದು ನಕಲಿ ದತ್ತು ಪತ್ರಗಳ ದಾಖಲೇ ಸೃಷ್ಟಿಸಿ ಮಕ್ಕಳನ್ನು ದತ್ತು ಪಡೆದವರಂತೆ, ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಕ್ಕೆ ಸಾಗಿಸುತ್ತಿದ್ದರು. ಇದರಿಂದ ಮಕ್ಕಳ ನಿಜವಾದ ಪೋಷಕರಿಗೆ ಮತ್ತು ಪೊಲೀಸರಿಗೆ ಕಾಣೆಯಾದ ಈ ಮಕ್ಕಳನ್ನು ಹುಡುಕುವುದು ಅಸಾಧ್ಯದ ಕಾರ್ಯವಾಗುತ್ತಿತ್ತು.

ತಮ್ಮ ಜಿಲ್ಲೆಯಲ್ಲಷ್ಟೇ ಅಲ್ಲದೆ ಬೇರೆ ಬೇರೆ ಕಡೆಗಳಿಂದಲೂ ಮಕ್ಕಳನ್ನು ಅಪಹರಿಸುವುದು ಇವರ ಯೋಜನೆಯಾಗಿತ್ತು. ಇದರಿಂದ ಅವರು ಎರಡು ರೀತಿಯಲ್ಲಿ ದುಡ್ಡನ್ನು ದೋಚುತ್ತಿದ್ದರು. ಒಂದು, ಆಶ್ರಮದಲ್ಲಿ ಮಕ್ಕಳು ಹೆಚ್ಚಾದಂತೆಲ್ಲಾ ಬಹಳಷ್ಟು ಪ್ರಚಲಿತವಾಗಿದ್ದ  ಈ ಆಶ್ರಮಕ್ಕೆ ದೇಣಿಗೆಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಿತ್ತು. ಮತ್ತೊಂದು, ವಿವಿಧ ಮಕ್ಕಳಿಂದ ಭಿಕ್ಷೆ ಬೇಡಿಸಿ ಹಣ ಸಂಪಾದಿಸುತ್ತಿದ್ದರು. ಈ ಅಮಾನುಷ ಕೃತ್ಯದಿಂದ ಸಂಪಾದಿಸುತ್ತಿದ್ದ ಹಣವನ್ನು ಮಾಫಿಯಾ ಗುಂಪಿನವರು, ಆಶ್ರಮದ ಕೆಲವು ಮುಖ್ಯಸ್ಥರು, ಸುಶೀಲಮ್ಮ ಇವರುಗಳ ಮಧ್ಯೆ ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಮಕ್ಕಳಿಗೆ ಮಂಪರು ಚುಚ್ಚುಮದ್ದು ಸರಬರಾಜು ಮಾಡುತ್ತಿದ್ದ ವೈದ್ಯನಿಗೂ ಒಂದು ಭಾಗ ಸಂದಾಯವಾಗುತ್ತಿತ್ತು. ಈ ಕುಕೃತ್ಯದ ಮುಖ್ಯ ನಿರೂಪಕಿ ಸುಶೀಲಮ್ಮನಾದರೂ ಇದನ್ನು ಕಾರ್ಯರೂಪಕ್ಕೆ ತರುತ್ತಿದ್ದವರು ಮಾಫಿಯಾದವರು. ಸುಶೀಲಮ್ಮ, ಮಾಫಿಯಾ ಗುಂಪಿನವರು, ಆಶ್ರಮದ ಮುಖ್ಯಸ್ಥರು, ವೈದ್ಯ ಸೇರಿದಂತೆ ಎಲ್ಲರನ್ನೂ ಬಂಧಿಸಲಾಯಿತು.

ಇಷ್ಟು ಗೌಪ್ಯವಾಗಿದ್ದ ಈ ದಂಧೆಯ ಕುಕೃತ್ಯದ ಸುಳಿವನ್ನು ಪೊಲೀಸರಿಗೆ ಕೊಟ್ಟವರು ಯಾರೆಂದು ಸುಶೀಲಮ್ಮ ಸಬ್‌ ಇನ್ಸ್ ಪೆಕ್ಟರ್‌ಅಭಿಮನ್ಯು ಬಳಿ ಕೇಳಿದಾಗ, ಸುಳಿವು ಕೊಟ್ಟ ವ್ಯಕ್ತಿಯ ಹಿತದೃಷ್ಟಿಯಿಂದ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ಅಭಿಮನ್ಯು ಹೇಳಿದ.

ಜ್ಯೋತಿ ಮತ್ತು ಜೀವಿಕಾರನ್ನು ಸುಶೀಲಮ್ಮ ಆಶ್ರಮದಲ್ಲೇ ಉಳಿಸಿಕೊಳ್ಳಲು ಮುಖ್ಯ ಉದ್ದೇಶ ಏನೆಂದರೆ, ಜ್ಯೋತಿ ಸಣ್ಣವಳಿಂದಲೂ ಆಶ್ರಮದ ಕೆಲಸದಲ್ಲಿ ಸುಶೀಲಮ್ಮನಿಗೆ ನೆರವಾಗಿ ಆಕೆಯ ಕೆಲಸದ ಭಾರವನ್ನು ಕಡಿಮೆ ಮಾಡಿದ್ದಳು, ಜೊತೆಗೆ ಪುಕ್ಕಟೆಯಾಗಿ ಕೆಲಸ ಮಾಡಿಕೊಡುತ್ತಿದ್ದಳು. ಇನ್ನು ಜೀವಿತಾ ಚಿಕ್ಕವಳಿದ್ದಾಗಲೇ ಬಹಳ ಚುರುಕಾಗಿದ್ದಳು. ಇದನ್ನೆಲ್ಲಾ ಗಮನಿಸಿದ ಸುಶೀಲಮ್ಮ ಆಶ್ರಮದ ಕಾರ್ಯಾಲಯದ ಎಲ್ಲಾ ಕೆಲಸಗಳನ್ನೂ ಸಂಬಳವಿಲ್ಲದೆಯೇ ನಿರ್ವಹಿಸುತ್ತಾಳೆಂದು ಯೋಚನೆಯಿಂದ ಅವಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರು. ಮುಂದೆ ಇದೇ ಜೀವಿಕಾ ಆಶ್ರಮದ ವಿರುದ್ಧ ತಿರುಗಿ ಬೀಳುವಳೆಂದು ಸುಶೀಲಮ್ಮನಿಗೆ ಗೊತ್ತಿದ್ದರೆ ಬಹುಶಃ ಇವಳನ್ನೂ ಭಿಕ್ಷಾಟನೆಗೆ ಕಳುಹಿಸಿಬಿಡುತ್ತಿದ್ದಳೇನೋ…..ಈ ಮಕ್ಕಳನ್ನೆಲ್ಲಾ ಅವರ ಕುಟುಂಬದೊಂದಿಗೆ ಸೇರಿಸುವ ಜವಾಬ್ದಾರಿ ಪೊಲೀಸ್‌ ಇಲಾಖೆಯ ಮೇಲಿತ್ತು. ಆದರೆ ಗೌರಿಯನ್ನು ಅವರ ಪರಿವಾರದೊಂದಿಗೆ ತಾನೇ ಸೇರಿಸುವೆನೆಂದ ಜೀವಿಕಾ ಆ ಗುರುತರ ಜವಾಬ್ದಾರಿಯನ್ನು ವಹಿಸಿಕೊಂಡಳು. ಗೌರಿಯ ಮೇಲೆ ಅವಳಿಗೆ ಏನೋ ಒಂದು ರೀತಿ ಸಳೆತ.

ಅಭಿಮನ್ಯುವಿನ ಸಹಾಯದಿಂದ ಜೀವಿಕಾ ಆಶ್ರಮದ ಸುತ್ತಮುತ್ತಲಿರುವ ಎಲ್ಲಾ ಪೊಲೀಸ್‌ ಠಾಣೆಗಳಲ್ಲದೇ, ಆ ಜಿಲ್ಲೆಯಲ್ಲಿದ್ದ ಎಲ್ಲಾ ಸ್ಟೇಷನ್‌ಗಳಲ್ಲೂ ಗೌರಿ ಕಾಣೆಯಾಗಿರುವ ದೂರಿಗಾಗಿ ಜಾಲಾಡಿದಳು. ಕೊನೆಗೂ ಮಾಹಿತಿ ದೊರಕಿತು. ಸುಶೀಲಮ್ಮನ ವಿಚಾರಣೆ ವೇಳೆ ಗೌರಿಯ ಅಪಹರಣದ ವಿಚಾರವನ್ನು ಪ್ರತ್ಯೇಕವಾಗಿ ತನಿಖೆ ಮಾಡಿದಾಗ, ಆಶ್ರಮದ ಸ್ವಲ್ಪ ದೂರದಲ್ಲಿರುವ ಬಸ್‌ನಿಲ್ದಾಣದಿಂದ ಅಪಹರಿಸಲಾಗಿತ್ತೆಂದು ತಿಳಿಯಿತು. ಇದು ಗೌರಿಗೆ ಸಂಬಂಧಿಸಿದ ಮಾಹಿತಿ ಕಲೆಹಾಕಲು ಅನುಕೂಲವಾಯಿತು. ಅಭಿಮನ್ಯು ತನಗೆ ದೊರೆತ ಮಕ್ಕಳಲ್ಲಿ 5 ಮಕ್ಕಳನ್ನು ಅವರ ಪರಿವಾರದೊಂದಿಗೆ ಸೇರಿಸಲು ಬಹಳ ಶ್ರಮಪಟ್ಟು ಹೇಗೋ ಸೇರಿಸಿದ್ದ. ಗೌರಿಯ ಅಪ್ಪ ಅಮ್ಮ ಹಳ್ಳಿಯಿಂದ ನಗರಕ್ಕೆ ಯಾವುದೋ ಸಮಾರಂಭಕ್ಕೆಂದು ಬಂದಾಗ ನಗರದ ಬಸ್‌ ನಿಲ್ದಾಣದಿಂದ ಅವರ ಮಗಳು ಕಾಣೆಯಾಗಿದ್ದಳು. ಗೌರಿಯ ಅಪ್ಪ ಪ್ರತಿ ವಾರ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಗಳ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿತಾ ಎಂದು ಕೇಳಿ, ಕೇಳಿ ಪೊಲೀಸರಿಂದ ಬೈಸಿಕೊಳ್ಳುತ್ತಿದ್ದರೂ ತಿಂಗಳಿಗೊಮ್ಮೆ ಠಾಣೆಗೆ ಬಂದು ವಿಚಾರಿಸಿಕೊಂಡು ಹೋಗುತ್ತಾರೆಂದು ವಿಷಯ ಪೊಲೀಸರಿಂದ ಅಭಿಮನ್ಯು ಮತ್ತು ಜೀವಿಕಾರಿಗೆ ತಿಳಿಯಿತು.

ಅವರು ಗೌರಿಯ ಅಪ್ಪ ಅಮ್ಮನ ಹೆಸರು ವಿಳಾಸ, ಇತರೆ ಮಾಹಿತಿಗಳನ್ನು ಕಲೆಹಾಕಿ ಗೌರಿಯೊಂದಿಗೆ ಆ ಹಳ್ಳಿಗೆ ಹೋದರು. ವಿಳಾಸ ಹುಡುಕಿಕೊಂಡು ಗೌರಿಯ ಮನೆಗೆ ಹೋದರು. ಗೌರಿಯ ನಿಜವಾದ ಹೆಸರು ಕೋಮಲಾ. ಮಗಳನ್ನು ಕಂಡು ಅವಳ ತಂದೆ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲ. ಮಗಳನ್ನು ತಬ್ಬಿ ಮುದ್ದಾಡಿ ಕಣ್ಣೀರು ಸುರಿಸಿದರು. ಮಗಳು ಕಾಣೆಯಾದಾಗಿನಿಂದ ಅವಳನ್ನು ನೆನೆಯದ, ಅವಳಿಗಾಗಿ ಹಂಬಲಿಸದ ದಿನವೇ ಇರಲಿಲ್ಲ. ಇದಾವುದರ ಪರಿವೆಯೇ ಇಲ್ಲದ ಗೌರಿ ಅಮ್ಮನ ಬಿಸಿ ಅಪ್ಪುಗೆಯಲ್ಲಿ ಸುಮ್ಮನಿದ್ದಳು. ಅವರ ಮಗಳು ಹೇಗೆ ಅಪಹರಣವಾದಳು ಹೇಗೆ ಸಿಕ್ಕಿದಳು ಎಂದು ಅವರಿಗೆ ಜೀವಿಕಾ ಮತ್ತು ಅಭಿಮನ್ಯು ವಿವರಿಸಿದರು, ಅಪಹರಣದ ನಂತರ ಅವಳಿಗೆ ಚುಚ್ಚುಮದ್ದನ್ನು ಕೊಟ್ಟಿರುವ ಕಾರಣ ಅವಳ ನೆನಪುಗಳು ತಾತ್ಕಾಲಿಕವಾಗಿ ಅಳಿಸಿ ಹೋಗಿವೆ. ನೀವುಗಳು ಧೈರ್ಯ ಕಳೆದುಕೊಳ್ಳದೆ ಅವಳಿಗೆ ಹಳೆಯದನ್ನು ತಿಳಿಸಿ, ಹಳೆಯ ಫೋಟೋಗಳನ್ನು ತೋರಿಸಿ. ಇದರಿಂದ ಅವಳಿಗೆ ಹಳೆಯ ನೆನಪುಗಳು ಪುನಃ ಮರುಕಳಿಸುತ್ತವೆ ಎಂದು ತಿಳಿಸಿದರು. ಕೋಮಲಾ (ಗೌರಿ)ಳ ತಂದೆ ತಾಯಿ ಕೃತಜ್ಞತೆಯಿಂದ ಕೈ ಮುಗಿದಾಗ ಅಭಿಮನ್ಯು ಮತ್ತು ಜೀವಿಕಾರ ಕಣ್ಣಂಚಿನಲ್ಲೂ ನೀರೂರಿತು.

ಕೋಮಲಾಳ ನೆರೆ ಮನೆಯವರಾದ ಕನಕಮ್ಮ ಮತ್ತು ರಾಮಪ್ಪ ಆಗತಾನೇ ಹೊಲದಿಂದ ಮನೆಗೆ ಬಂದರು. ಅವರಿಗೆ ಕೋಮಲಾ ಮನೆಗೆ ಬಂದಿರುವ ವಿಷಯ ತಿಳಿದು ಅವಳ ತಂದೆತಾಯಿಯಷ್ಟೇ ಸಂತಸಪಟ್ಟರು. ಜೀವಿಕಾ ಮತ್ತು ಅಭಿಮನ್ಯುವಿಗೆ ಹಳ್ಳಿಯವರ ಸಾಮರಸ್ಯ ಜೀವನ ನೋಡಿ ಸಂತೋಷವಾಯಿತು.

ಆಗ ಕನಕಮ್ಮ ಮತ್ತು ರಾಮಪ್ಪ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿದರು. ಸುಮಾರು 20 ವರ್ಷಗಳ ಹಿಂದೆ ತಾವು ನಗರಕ್ಕೆ ಒಂದು ಸಮಾರಂಭಕ್ಕೆಂದು ಹೋದಾಗ ತಮ್ಮ ಮಗಳೂ ಕಾಣೆಯಾದಳು. ಎಷ್ಟು ಪ್ರಯತ್ನಪಟ್ಟರೂ ಮಗಳು ಸಿಗಲಿಲ್ಲ. ನಿಮ್ಮಂತಹ ಪುಣ್ಯಾತ್ಮರು ನಮ್ಮ ಮಗಳಿಗೂ ಸಿಕ್ಕಿದ್ದರೆ ಬಹುಶಃ ಅವಳೂ ನಮಗೆ ಸಿಕ್ಕುತ್ತಿದ್ದಳೇನೋ ಎಂದರು.

ಮಗಳು ಇದ್ದಿದ್ದರೆ ನಿನ್ನಷ್ಟೇ ದೊಡ್ಡವಳಾಗಿರುತ್ತಿದ್ದಳೆಂದು ಕನಕಮ್ಮ ಜೀವಿಕಾಳ ಗಲ್ಲ ಮುಟ್ಟಿ ಹೇಳಿದಾಗ ಇವಳಲ್ಲಿ ಯಾವುದೋ ಸಂಬಂಧದ ಸೆಳೆತ ಉಂಟಾದಂತೆನಿಸಿತು.

“ನಾನು ನಿಮ್ಮ ಮನೆ ನೋಡಬಹುದೇ,” ಎಂದು ಜೀವಿಕಾ ಕನಕಮ್ಮನನ್ನು ಕೇಳಿದಳು.

“ಬಾರವ್ವ ನಿಮ್ಮಂತಹ ಪುಣ್ಯಾತ್ಮರು ನಮ್ಮ ಮನೆಗೆ ಬಂದರೆ ನಮಗೂ ಖುಷಿಯಲ್ಲವೇ…?” ಎಂದು ಕನಕಮ್ಮ ಅವಳನ್ನು ಮನೆಗೆ ಕರೆದೊಯ್ದರು.

ಆ ಮನೆಯ ಗೋಡೆಗಳು, ಬಾಗಿಲು, ಕಂಬಗಳು, ಆ ಮನೆಯಲ್ಲಿರುವ ಯಾವುದೋ ಒಂದು ಸುಗಂಧ ಇವೆಲ್ಲ ಜೀವಿಕಾಳಲ್ಲಿ ವಿಚಿತ್ರವಾದ ಸಂಚಲನವನ್ನುಂಟು ಮಾಡಿತು. ಅವರ ಮಗಳ ಫೋಟೋವನ್ನು ಜೀವಿಕಾ ಮತ್ತು ಅಭಿಮನ್ಯುವಿಗೆ ತೋರಿಸಿದರು. ಆ ಭಾವಚಿತ್ರದಲ್ಲಿ ಅವರ ಮಗಳ ಹಣೆಯ ಮೇಲೆ ಸಣ್ಣದೊಂದು ಸುಟ್ಟ ಗಾಯದ ಕಲೆಯನ್ನು ಜೀವಿಕಾ ಗಮನಿಸಿದಳು. ಅವಳಿಗೂ ಸಣ್ಣವಳಿದ್ದಾಗ ತನ್ನ ಹಣೆಯ ಮೇಲೂ ಇದೇ ತರಹ ಸುಟ್ಟಗಾಯದ ಕಲೆ ಇದ್ದದ್ದು ನೆನಪಾಯಿತು. ಆದರೆ ಕ್ರಮೇಣ ಆ ಕಲೆ ಮಾಸಿಹೋಗಿತ್ತು. ತಕ್ಷಣ ಅವಳ ತಲೆಯಲ್ಲಿ ವಿದ್ಯುತ್‌ ಸಂಚಾರವಾಯಿತು. `ತಾನು ಇವರ ಮಗಳೇ ಇರಬಹುದೇ…..’ ಎಂದು ಒಳ ಮನಸ್ಸು ಹೇಳಿತು. ಆದರೆ ಅದನ್ನು ತೋರ್ಪಡಿಸಿಕೊಳ್ಳದೆ, “ಎರಡು ದಿನಗಳ ನಂತರ ನಾನು ನಿಮ್ಮನ್ನು ನಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತೇನೆ, ದಯವಿಟ್ಟು ನೀವು ಇಲ್ಲ ಎನ್ನಬಾರದು,” ಎಂದು ಅವರಲ್ಲಿ ವಿನಂತಿಸಿಕೊಂಡಳು.

ಅವರು ಹಾಗೇ ಆಗಲಿ ಬರುತ್ತೇವೆಂದರು. ಅಭಿಮನ್ಯುವಿಗೂ ಏನೊಂದೂ ಅರ್ಥವಾಗಲಿಲ್ಲ. ವಾಪಸ್ಸಾಗುವಾಗ ಜೀವಿಕಾ ತನಗಾದ ಅನುಭವವನ್ನು ಅಭಿಮನ್ಯು ಬಳಿ ಹೇಳಿದಳು.  ಅಭಿಮನ್ಯುವಿಗೂ ಕುತೂಹಲವಾಯಿತು. ಆಶ್ರಮದಲ್ಲಿ ಸುಶೀಲಮ್ಮನ ಹೊರತುಪಡಿಸಿ ಅಲ್ಲಿನ ದಾಖಲಾತಿ ಕಡತಗಳನ್ನು ಯಾರು ಮುಟ್ಟುವಂತಿರಲಿಲ್ಲ. ಆದ್ದರಿಂದ ಆ ಕಡತಗಳನ್ನು ಒಂದು ಕೋಣೆಯಲ್ಲಿಟ್ಟು ಅದಕ್ಕೆ ಬೀಗ ಹಾಕಿಟ್ಟಿರುತ್ತಿದ್ದರು. ಆ ಕೋಣೆಗೆ ಯಾರಿಗೂ ಪ್ರವೇಶವಿರಲಿಲ್ಲ. ಸುಶೀಲಮ್ಮನನ್ನು ಬಂಧಿಸಿದ ನಂತರ ಆ ಕಡತಗಳನ್ನೆಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದರು.

ಅಭಿಮನ್ಯುವಿನ ಸಹಾಯದಿಂದ ಜೀವಿಕಾ ಇಪ್ಪತ್ತು ವರ್ಷದ ಹಿಂದಿನ ದಾಖಲೆಗಳನ್ನು ಹುಡುಕಿದಾಗ ಜೀವಿಕಾ ಎಂಬ ಹೆಸರಿನಲ್ಲಿ 20 ವರ್ಷಗಳ ಹಿಂದಿನ ದಾಖಲೆ ದೊರಕಿತು. ಅದರಲ್ಲಿ ಇವಳು ಐದು ವರ್ಷದವಳಿದ್ದಾಗೆ ಆಶ್ರಮಕ್ಕೆ ಬಂದಿದ್ದು ದಾಖಲಾಗಿದ್ದು, ಆ ಸಮಯದಲ್ಲಿ ತೆಗೆಸಿದ್ದ ಫೋಟೋವನ್ನು ದಾಖಲೆಯೊಂದಿಗೆ ಲಗತ್ತಿಸಲಾಗಿತ್ತು. ಕನಕಮ್ಮ ಮತ್ತು ರಾಮಪ್ಪನ ಮನೆಯಲ್ಲಿ ನೋಡಿದ ಅವರ ಮಗಳ ಚಿಕ್ಕಂದಿನ ಫೋಟೋ ಇವಳದೇ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಇದೆಲ್ಲಾ ಕನಸೋ ನನಸೋ ಎಂದು ಜೀವಿಕಾಳಿಗೆ ನಂಬಲಾಗಲಿಲ್ಲ.

ಗೌರಿ ಇವರ ಆಶ್ರಮಕ್ಕೆ ಬಂದದ್ದು, ಅವಳಿಗೋಸ್ಕರ ಜೀವಿಕಾಳಲ್ಲಿ ಉಂಟಾದ ವಿಶೇಷ ಪ್ರೀತಿ, ಕಾಳಜಿ. ಬೆಂಗಳೂರಿನಲ್ಲಿ ಅವಳನ್ನು ಮತ್ತೆ ಕಂಡದ್ದು, ಅವರೆಲ್ಲಾ ಪಾರಾಗಿದ್ದು ಗೌರಿಯನ್ನು ಅವಳ ಅಪ್ಪ ಅಮ್ಮನೊಂದಿಗೆ ಸೇರಿಸಲು ಹೋದಾಗ ಕನಕಮ್ಮ, ರಾಮಪ್ಪ ಸಿಕ್ಕಿದ್ದು, ಅವರ ಮಗಳ ಫೋಟೋ ತೋರಿಸಿದ್ದು ಇವೆಲ್ಲ ಒಂದಕ್ಕೊಂದು ಜೋಡಣೆಯಾಗಿ ತನ್ನ ಜೀವನದಲ್ಲಿ ಕಳಚಿಕೊಂಡಿದ್ದ ಕೊಂಡಿಯು ಸೇರುವಂತಾಯಿತಲ್ಲ ಎಂದು ಸಂಭ್ರಮಿಸಿದಳು ಜೀವಿಕಾ.

ಜೀವಿಕಾ ಹಳ್ಳಿಗೆ ಹೋಗಿ ಕನಕಮ್ಮ ಮತ್ತು ರಾಮಪ್ಪನನ್ನು ಕರೆತಂದು ತನಗೆ ಸಿಕ್ಕ ದಾಖಲೆ, ಫೋಟೋಗಳನ್ನು ತೋರಿಸಿದಳು.“ಹೌದು….. ಇದು ನಮ್ಮ ಮಗಳದೇ ಫೋಟೋ,” ಎಂದಾಗ ಅವರ ಕಣ್ಣುಗಳಲ್ಲಿ ನೀರಾಡಿತು. ಜೀವಿಕಾ ಇದು ತನ್ನದೇ ಫೋಟೋ ನಾನೇ ನಿಮ್ಮ ಮಗಳು ಎಂದಾಗ ಕನಕಮ್ಮ ಮತ್ತು ರಾಮಪ್ಪ ಭಾವೋದ್ವೇಗದಿಂದ ಅವಳನ್ನು ತಬ್ಬಿ ಕಣ್ಣೀರು ಹಾಕಿದರು. ಜೀವಿಕಾಳಿಗೂ ಇಪ್ಪತ್ತು ವರ್ಷಗಳಿಂದ ತನ್ನ ಮನದೊಳಗೆ ಹುದುಗಿಸಿಟ್ಟುಕೊಂಡ ದುಃಖವನ್ನು ತಡೆಯಲಾಗಲಿಲ್ಲ. ಬಿಕ್ಕಿ ಬಿಕ್ಕಿ ಅತ್ತಳು.

ರಾಮಪ್ಪ, ಕನಕಮ್ಮರಿಗೆ ಇಷ್ಟು ವರ್ಷಗಳ ನಂತರ ತಮ್ಮ ಮಗಳು ಸಿಗಬಹುದೆಂಬ ನಿರೀಕ್ಷೆ ಕೂಡ ಇರಲಿಲ್ಲ. ಆದರೆ ಇಪ್ಪತ್ತು ವರ್ಷಗಳು ಕಳೆದು ಹೋಗಿದ್ದ ಕಾರಣ ಜೀವಿಕಾಳಿಗೂ ಅಪ್ಪ, ಅಮ್ಮ, ಊರು, ಎಲ್ಲದರ ಸಂಪೂರ್ಣ ನೆನಪು ಮಾಸಿಹೋಗಿತ್ತು.  ಆದರೆ ಯಾವ ಮಾಸಿ ಹೋದ ನೆನಪೂ ಕೂಡ ಇವರಲ್ಲಿ ಉಂಟಾದ ಪ್ರೀತಿ, ಭಾವನಾತ್ಮಕ, ಸೆಳೆತ ಸಂಬಂಧಗಳಿಗೆ ಧಕ್ಕೆಯನ್ನು ಉಂಟು ಮಾಡಲಿಲ್ಲ. 20 ವರ್ಷಗಳ ಬಳಿಕ ಜೀವಿಕಾ ಮರಳಿ ತಾಯಿ ಮಡಿಲಿಗೆ ಸೇರಿದ ಸಂತಸ ಸಂಭ್ರಮದಿಂದಿದ್ದಳು. ನಂತರ ಹಿರಿಯರ ಬಳಿ ಅಭಿಮನ್ಯು ಜೀವಿಕಾಳನ್ನು ಮದುವೆಯಾಗುತ್ತೇನೆ ಎಂದಾಗ, ಎಲ್ಲರೂ ಸಂತೋಷದಲ್ಲಿ ಮಿಂದೆದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ