ಹೆರಿಗೆಯಾಗಿ ಕೇವಲ ಒಂದೂವರೆ ತಿಂಗಳು ಮಾತ್ರ ಆಗಿತ್ತು. ಜಮುನಾ ಆಫೀಸಿಗೆ ಹೋಗತೊಡಗಿದಳು. ಮುಂದಿನ 6 ತಿಂಗಳ ಕಾಲ ಅವಳ ಅನುಪಸ್ಥಿತಿಯಲ್ಲಿ ಮಗುವಿನ ಜವಾಬ್ದಾರಿಯನ್ನು ಅವಳ ಅತ್ತೆ ಅಥವಾ ಅಮ್ಮ ನೋಡಿಕೊಳ್ಳತೊಡಗಿದರು. ಆದರೆ ಮಗುವಿಗೆ ವರ್ಷ ತುಂಬುತ್ತಲೇ ಅವರಿಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಹಿಂದೇಟು ಹಾಕತೊಡಗಿದರು.
ಈಗ ಮಗುವನ್ನು ಕ್ರೀಚ್‌ಗೆ ಸೇರಿಸುವುದರ ಹೊರತು ಬೇರೆ ದಾರಿಯೇ ಇರಲಿಲ್ಲ. ಅವಳಿಗೆ ನೌಕರಿ ಬಿಡುವ ಇಚ್ಛೆ ಇರಲಿಲ್ಲ. ಮಗುವನ್ನು ಕ್ರೀಚ್‌ನಲ್ಲಿ ಬಿಟ್ಟ ಅವಳು ಸಂತೋಷವಾಗಿರಲಿಲ್ಲ. ಆಫೀಸಿನ ಕೆಲಸದ ಸಮಯದಲ್ಲಿ ಹಲವು ಬಾರಿ ಅವಳಿಗೆ ಮಗುವಿನ ನೆನಪು ಕಾಡುತ್ತಿತ್ತು. ಮನೆಯಲ್ಲಿದ್ದಾಗ ಅವಳಿಗೆ ಆಫೀಸ್‌ನಲ್ಲಿ ತನ್ನ ಪರ್ಫಾರ್ಮೆನ್ಸ್ ಕಡಿಮೆ ಆಗುತ್ತಿರುವ ಬಗ್ಗೆ ಆತಂಕ ಕಾಡುತ್ತಿರುತ್ತದೆ.
ಎರಡೂ ಜವಾಬ್ದಾರಿಗಳ ನಡುವೆ ಜಮುನಾ ಜರ್ಝರಿತಳಾಗತೊಡಗಿದಳು. ಸಿಡಿಮಿಡಿತನ ಹಾಗೂ ಗಾಬರಿಯಿಂದಾಗಿ ಅವಳು ಕೆಲಸದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಿದ್ದಳು. ಮನೆಯವರ ಟೀಕೆಟಿಪ್ಪಣಿ, ಬಾಸ್‌ನ ಗದರಿಕೆ ಕ್ರಮೇಣ ಜಮುನಾಳನ್ನು `ಡಬಲ್ ಬರ್ಡನ್ ಸಿಂಡ್ರೋಮ್’ನಂತಹ ಮಾನಸಿಕ ರೋಗದತ್ತ ನೂಕತೊಡಗಿತು. ಕೊನೆಗೊಮ್ಮೆ ಎಂತಹ ಪರಿಸ್ಥಿತಿ ಬಂತೆಂದರೆ ಅವಳಿಗೆ ತನ್ನ ಮಗು ಹಾಗೂ ಬಾಸ್ ಅಪರಾಧಿಗಳೆಂಬಂತೆ ಭಾವಿಸಿ ಕೆಲಸಕ್ಕೆ ರಾಜೀನಾಮೆ ನೀಡಿದಳು.
ಸಮೀಕ್ಷೆ ಏನು ಹೇಳುತ್ತದೆ?
ಜಮುನಾಳಂತಹ ಸಾವಿರಾರು ಮಹಿಳೆಯರು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಕೈತುಂಬ ಸಂಬಳ ತೆಗೆದುಕೊಳ್ಳುತ್ತಿದ್ದರೂ ಹೆರಿಗೆಯ ಬಳಿಕ ಮಗು ಹಾಗೂ ಆಫೀಸಿನ ಜವಾಬ್ದಾರಿ ನಿರ್ವಹಿಸುತ್ತ `ಡಬಲ್ ಬರ್ಡನ್ ಸಿಂಡ್ರೋಮ್’ಗೆ ತುತ್ತಾಗುತ್ತಿದ್ದಾರೆ. ಇಲ್ಲಿ ಕೆರಿಯರ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮನೆ ಹಾಗೂ ಮಗುವಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ.
ಕೆಲ್ಲಿ ಗ್ಲೋಬಲ್ ವರ್ಕ್‌ಪೇರ್ಸ್ ಇನ್‌ಸ್ಟೇಜ್ ಸರ್ವೆ ಪ್ರಕಾರ, ಮದುವೆಯ ಬಳಿಕ ಶೇ.40ರಷ್ಟು ಮಹಿಳೆಯರು ನೌಕರಿಗೆ ವಿದಾಯ ಹೇಳುತ್ತಾರೆ. ಶೇ.60ರಷ್ಟು ಮಹಿಳೆಯರು ತಾಯಿಯಾದ ಬಳಿಕ ಮಕ್ಕಳ ಪಾಲನೆ, ಪೋಷಣೆಗೆ ಹೆಚ್ಚು ಮಹತ್ವ ಕೊಡುತ್ತಾರೆ ಮತ್ತು ಉದ್ಯೋಗ ತೊರೆಯುತ್ತಾರೆ. ಇದರ ಹೊರತಾಗಿ ಶೇ.20ರಷ್ಟು ಮಹಿಳೆಯರು ಮನೆ ಹಾಗೂ ನೌಕರಿ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಅವರು ಒಮ್ಮಿಂದೊಮ್ಮಲೇ ಜವಾಬ್ದಾರಿಗಳ ಒತ್ತಡಕ್ಕೆ ಸಿಲುಕಿ ಡಬಲ್ ಬರ್ಡನ್ ಸಿಂಡ್ರೋಮ್ ಗೆ ತುತ್ತಾಗುತ್ತಾರೆ.
ಈ ಕುರಿತಂತೆ ಏಷ್ಯನ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಮನೋತಜ್ಞೆ ಡಾ. ಮೀನಾಕ್ಷಿ ಹೀಗೆ ಹೇಳುತ್ತಾರೆ, “ಭಾರತೀಯ ಸಮಾಜದಲ್ಲಷ್ಟೇ ಹೀಗೆ. ಇಲ್ಲಿ ಮಹಿಳಾ ಸಬಲೀಕರಣದ ಕುರಿತಂತೆ ದೊಡ್ಡ ದೊಡ್ಡ ಮಾತುಗಳನ್ನು ಆಡಲಾಗುತ್ತದೆ. ಒಂದು ವೇಳೆ ಮಹಿಳೆ ಸಬಲಳಾಗುವ ಬಗ್ಗೆ ಪ್ರಯತ್ನ ಮಾಡಿದರೆ ಸಮಾಜದ ಬಂಧನಗಳು ಅವಳನ್ನು ತಮ್ಮ ಮುಷ್ಟಿಯಲ್ಲಿ ಸಿಲುಕಿಸುತ್ತವೆ.”
ಇನ್ನೋರ್ವ ಮನೋತಜ್ಞೆ ಡಾ. ಚಂದನಾ ಹೇಳುತ್ತಾರೆ, “ಈ ಸಿಂಡ್ರೋಮ್ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಉಂಟಾಗುತ್ತದೆ. ಆದರೆ ಭಾರತದಲ್ಲಿ ಮಹಿಳೆಯರೇ ಇದರ ಕಪಿಮುಷ್ಟಿಗೆ ಸಿಲುಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಸಂಸ್ಕೃತಿಯಾಗಿದೆ. ಮಹಿಳೆ ಉದ್ಯೋಗಸ್ಥ ಜೀವನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದ್ದರೂ, ಮನೆಯ ಪ್ರಮುಖ ಜವಾಬ್ದಾರಿಗಳನ್ನು ಅವಳೇ ನಿಭಾಯಿಸಬೇಕಾಗುತ್ತದೆ.
“ಅಂದಹಾಗೆ ಉದ್ಯೋಗ ಹಾಗೂ ಉನ್ನತ ತಂತ್ರಜ್ಞಾನದಿಂದಾಗಿ ಜವಾಬ್ದಾರಿಗಳ ಹೊರೆ ಸಾಕಷ್ಟು ಮಟ್ಟಿಗೆ ಕಡಿಮೆಯಾಗಿದೆ. ಆದರೆ ಮಗು ಹುಟ್ಟಿದ ಬಳಿಕ ಜವಾಬ್ದಾರಿಗಳ ಸ್ವರೂಪವೇ ಬದಲಾಗಿಬಿಡುತ್ತದೆ. ಆಧುನಿಕ ತಂತ್ರಜ್ಞಾನ ಹಾಗೂ ಮನೆ ಕೆಲಸಗಾರರ ಜೊತೆಗೆ ಸ್ವತಃ ತಂದೆತಾಯಿಗಳೇ ಮಗುವಿನ ಲಾಲನೆಪೋಷಣೆಗೆ ಸಮಯ ಮೀಸಲಿಡಬೇಕಾಗುತ್ತದೆ.
“ಇಂತಹ ಸ್ಥಿತಿಯಲ್ಲೂ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕಲಾಗುತ್ತದೆ. ತಂದೆ ತನ್ನನ್ನು ತಾನು ಆರ್ಥಿಕ ನೆರವು ನೀಡುವವನು ಎಂದು ಸಬೂಬು ಹೇಳಿ ಮಗುವಿನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾನೆ.
“ಆದರೆ ಇದರಿಂದಾಗುವ ಲಾಭವೇನು? ಈ ಬಗ್ಗೆ ಸ್ವಲ್ಪ ಅವಲೋಕನ ಮಾಡಿದಾಗ ಮನೆಯ ಯಾರಾದರೊಬ್ಬರು ಸದಸ್ಯರು ನೌಕರಿ ತೊರೆದಾಗ ಕುಟುಂಬದ ಆರ್ಥಿಕ ಸ್ಥಿತಿ ಬಲಿಷ್ಠಗೊಳ್ಳುವ ಬದಲು ದುರ್ಬಲಗೊಳ್ಳುತ್ತದೆ. ಅದೇ ರೀತಿ ಜವಾಬ್ದಾರಿಗಳ ಸಮಾನ ಹಂಚಿಕೆ ಆರ್ಥಿಕ ಅಗತ್ಯಗಳ ಮೇಲೆ ಅಡೆತಡೆಯನ್ನುಂಟು ಮಾಡುವುದಿಲ್ಲ. ಮಹಿಳೆಯರು ಸಿಂಡ್ರೊಮ್ ಗೆ ತುತ್ತಾಗುವುದನ್ನು ತಪ್ಪಿಸಬಹುದು. ಆದರೆ ಇಲ್ಲಿ ಏಳುವ ಎರಡನೇ ಪ್ರಶ್ನೆ ಎಂದರೆ, ಈ ಜವಾಬ್ದಾರಿಗಳನ್ನು ಸರಿಯಾಗಿ ಹಂಚಿಕೆ ಮಾಡುವುದಾದರೂ ಹೇಗೆ?”
ಅತ್ತೆಯ ಜೊತೆ ಹೊಂದಾಣಿಕೆ
ಮನೋತಜ್ಞೆ ಮೀನಾಕ್ಷಿ ಹೇಳುತ್ತಾರೆ, “ಮಹಿಳೆಯರು ಕೂಡ ಆರ್ಥಿಕ ನೆರವು ನೀಡಬಲ್ಲವರಾಗಿರುತ್ತಾರೆ. ಇಂದಿನ ದಿನಗಳಲ್ಲಿ ಪುರುಷರು ಮಾಡುವ ಯಾವುದೇ ಕೆಲಸವನ್ನು ಮಹಿಳೆ ಕೂಡ ಮಾಡಬಲ್ಲಳು. ಆದರೆ ಮನೆಯ ಕೆಲಸ ಕಾರ್ಯಗಳಲ್ಲಿ ಪುರುಷರ ಸಹಾಯ ತೆಗೆದುಕೊಳ್ಳುವುದು ಇನ್ನೂ ಸವಾಲಿನ ಕೆಲಸ. ಅದರಲ್ಲೂ ವಿಶೇಷವಾಗಿ ಸಂಬಂಧಗಳ ನಂಟು ಜಾಸ್ತಿ ಇರುವ ಮನೆಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
“ಸಂಬಂಧಿಕರ ಈ ಪಟ್ಟಿಯಲ್ಲಿ ಎಲ್ಲಕ್ಕೂ ಮೊದಲ ಹೆಸರು ಹುಡುಗನ ತಾಯಿ ಸೇರ್ಪಡೆಗೊಳ್ಳುತ್ತಾಳೆ. ಮನೆಯ ಕೆಲಸ ಕಾರ್ಯಗಳಲ್ಲಿ ಮಗ ಹಾಗೂ ಸೊಸೆಯ ಜವಾಬ್ದಾರಿಗಳನ್ನು ತಾಯಿ ನಿರ್ಧರಿಸುತ್ತಾಳೆ. ಅದರಲ್ಲಿ ಮಗುವಿನ ಲಾಲನೆ ಪಾಲನೆಯ ವಿಷಯದಲ್ಲಿ ಮಗನಿಗೆ ವಿಶೇಷ ಜವಾಬ್ದಾರಿಗಳಿರುವುದಿಲ್ಲ.
“ಸೊಸೆ ಉದ್ಯೋಗಸ್ಥೆಯಾಗಿದ್ದರೂ ಕೂಡ ಮಗುವಿನ ಜವಾಬ್ದಾರಿ ಆಕೆಯದೇ ಆಗಿರುತ್ತದೆ. ಸೊಸೆಯ ಅನುಪಸ್ಥಿತಿಯಲ್ಲಿ ಅತ್ತೆ ಮಗುವಿನ ಜವಾಬ್ದಾರಿ ನಿಭಾಯಿಸಿದರೂ ಕೂಡ, ಈ ಒಂದು ಅವಕಾಶವನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾಳೆ.”
ಮೀನಾಕ್ಷಿಯವರ ಪ್ರಕಾರ, ಈ ಸ್ಥಿತಿಯಲ್ಲಿ ಮಹಿಳೆಯರು ಅಷ್ಟಿಷ್ಟು ತಿಳಿವಳಿಕೆ ಪ್ರದರ್ಶಿಸಬೇಕು. ಎಲ್ಲರೂ ತಮ್ಮ ತಮ್ಮದೇ ಆದ ನಿರ್ದಿಷ್ಟ ಸ್ವಭಾವ ಹೊಂದಿರುತ್ತಾರೆ. ಆದರೆ ಅತ್ತೆಯ ಜೊತೆ ಸೊಸೆಯ ಹೊಂದಾಣಿಕೆ ಇಂತಹ ಸಂದರ್ಭದಲ್ಲಿ ನಿಜಕ್ಕೂ ಉಪಯೋಗಕ್ಕೆ ಬರುತ್ತದೆ. ಸಂಪ್ರದಾಯವಾದಿ ಅತ್ತೆಯರು ತಮ್ಮ ಪುತ್ರರಿಗೆ ಯಾವುದೇ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ. ಆದರೆ ಸೊಸೆಯ ಸೂಕ್ತ ಹೊಂದಾಣಿಕೆಯಿಂದ ಗಂಡ ತಾನೇ ಸ್ವತಃ ಕೆಲವು ಕೆಲಸ ಮಾಡಲು ಸಿದ್ಧನಾಗುತ್ತಾನೆ.
ಇಲ್ಲಿ ಅಗತ್ಯವಿರುವುದು ಮಹಿಳೆಯರು ತಮ್ಮ ಅತ್ತೆಯರ ಮೇಲೆ ಅಷ್ಟಿಷ್ಟು ವಿಶ್ವಾಸ ಇಡುವುದನ್ನು ರೂಢಿಸಿಕೊಳ್ಳಬೇಕು. ತಮ್ಮ ಹೃದಯಕ್ಕೆ ಚುಚ್ಚುವಂತಹ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದಂತೆ ಸುಮ್ಮನಿದ್ದುಬಿಡಬೇಕು. ಸಂಬಂಧದಲ್ಲಿ ಅಷ್ಟಿಷ್ಟು ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಿ.
ಸಂಗಾತಿಯೊಂದಿಗೆ ಚರ್ಚಿಸಿ
ಅತ್ತೆಯ ಜೊತೆಗೆ ನಿಮ್ಮ ಪತಿಗೂ ನಿಮ್ಮ ಮಹತ್ವಾಕಾಂಕ್ಷೆಗಳ ಬಗ್ಗೆ ತಿಳಿಸಿ. ಅಂದಹಾಗೆ, ಭಾರತೀಯ ಸಮಾಜದ ಸಂಪ್ರದಾಯಾದಿ ಮಾನಸಿಕತೆ ರೂಢಿಸಿಕೊಂಡ ಅನೇಕ ಮಹಿಳೆಯರು ಮಗು ಹಾಗೂ ನೌಕರಿ ನಡುವೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಹೇಳಿದರೆ, ಮತ್ತೆ ಕೆಲವರು ಮಗುವಿಗಾಗಿ ನೌಕರಿ ಬಿಡಲು ಕೂಡ ಸಿದ್ಧರಿರುತ್ತಾರೆ.
ಈ ಕುರಿತಂತೆ ಡಾ. ಕಸ್ತೂರಿಯರು ಹೀಗೆ ಹೇಳುತ್ತಾರೆ, “ಇಂದಿನ ಮಹಿಳೆಯರು ಮದುವೆಗೆ ಮುಂಚೆ ತಮ್ಮ ವೃತ್ತಿ ಜೀವನಕ್ಕೆ ಬಹಳ ಮಹತ್ವ ಕೊಡುತ್ತಾರೆ. ಹಾಗಾಗಿ ಅವರು ಮದುವೆಯನ್ನು ತಡವಾಗಿ ಮಾಡಿಕೊಳ್ಳುತ್ತಾರೆ. ಇಂತಹದರಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಅವಧಿ ಕಡಿಮೆಯಾಗುತ್ತದೆ. ತಾವು ಯಾವಾಗ ತಾಯಿಯಾಗಬೇಕೆಂದು ಅವರು ಬೇಗ ನಿರ್ಧರಿಸಬೇಕಾಗುತ್ತದೆ. ಕೆರಿಯರ್‌ಗಾಗಿ ತಾಯಿಯಾಗದಿರುವ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಅದೇ ರೀತಿ ತಾಯಿಯಾಗಲು ನೌಕರಿ ಬಿಟ್ಟುಬಿಡುವುದು ಕೂಡ ಜಾಣತನದ ನಿರ್ಧಾರವಲ್ಲ. ಹೀಗಾಗಿ ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಮಹತ್ವಾಕಾಂಕ್ಷೆಗಳ ಬಗ್ಗೆ ಮೊದಲೇ ಪ್ರಸ್ತಾಪಿಸುವುದು ಒಳ್ಳೆಯದು. ಅದಕ್ಕೆ ಅನುಗುಣವಾಗಿಯೇ ಭವಿಷ್ಯದ ಯೋಜನೆ ರೂಪಿಸಿಕೊಳ್ಳಬೇಕು.”
ಇಂದಿನದು ಸಾಕ್ಷರತಾ ಯುಗ. ಬೆಲೆ ಏರಿಕೆಯ ದಿನಗಳಲ್ಲಿ ಇಬ್ಬರೂ ದುಡಿದರೆ ಮಾತ್ರ ಸಂಸಾರವೆಂಬ ರಥವನ್ನು ಎಳೆದುಕೊಂಡು ಹೋಗಲು ಸಾಧ್ಯ ಎಂಬುದನ್ನು ಗಂಡಹೆಂಡತಿ ಚೆನ್ನಾಗಿ ಬಲ್ಲರು. ಹೀಗಾಗಿ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದೇ ಸೂಕ್ತ ನಿರ್ಧಾರವಾಗಿದೆ. ಈ ಹೊಂದಾಣಿಕೆಗಾಗಿ ಬಹಳಷ್ಟು ಸಂಗತಿಗಳನ್ನು ಉಲ್ಲೇಖಿಸಬಹುದು. ಆ ಸಂಗತಿಗಳು ಮಹಿಳೆಯರನ್ನು ಇಬ್ಬಗೆಯ ಜವಾಬ್ದಾರಿಯ ಹೊರೆ ಮತ್ತು ನಿರುದ್ಯೋಗದಿಂದ ರಕ್ಷಿಸಿಕೊಳ್ಳಬಹುದು.
ಮನೋಚಿಕಿತ್ಸಕಿ ಡಾ. ಕಸ್ತೂರಿ ಅಂಥ ಕೆಲವು ಹೊಂದಾಣಿಕೆಗಳ ಬಗ್ಗೆ ಪ್ರಸ್ತಾಪಿಸುತ್ತಾರೆ.
ಇಂದಿನ ವರ್ಕ್ ಕಲ್ಚರ್ ಶಿಫ್ಟ್ ನಲ್ಲಿ ಕೆಲಸ ಮಾಡುವುದು ಒಂದು ಟ್ರೆಂಡ್ ಆಗಿದೆ. ಅಂದಹಾಗೆ ಅದು ತಪ್ಪು ಕೂಡ ಅಲ್ಲ.
ಉದ್ಯೋಗಸ್ಥ ದಂಪತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಶಿಫ್ಟ್ ನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಸರದಿಯ ಪ್ರಕಾರ ಜವಾಬ್ದಾರಿಗಳನ್ನು ನಿಭಾಯಿಸಬಹುದು.
ಒಂದು ವೇಳೆ ಕಂಪನಿಯು `ವರ್ಕ್‌ಫ್ರಮ್ ಹೋಮ್’ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರೆ, ಗಂಡಹೆಂಡತಿ ಇಬ್ಬರಲ್ಲಿ ಒಬ್ಬರು ಮನೆಯಿಂದಲೇ ಕೆಲಸ ಮಾಡಲು ಒಪ್ಪಿಕೊಳ್ಳಿ. ಇದೊಂದು ಅನುಕೂಲಕರ ವ್ಯವಸ್ಥೆ.
ಕೆಲವು ಕಂಪನಿಗಳಲ್ಲಿ ಫ್ರೀ ಲಾನ್ಸಿಂಗ್ ಆಗಿಯೂ ಕೆಲಸ ಮಾಡಬಹುದು. ಇದರಲ್ಲಿ ಒಳ್ಳೆಯ ಆದಾಯದ ನಿರೀಕ್ಷೆಯೂ ಇರುತ್ತದೆ. ಇಬ್ಬರಲ್ಲಿ ಒಬ್ಬರು ಫುಲ್ ಟೈಮ್ ಬಿಟ್ಟು ಫ್ರೀ ಲಾನ್ಸಿಂಗ್ ಮಾಡಬಹುದು.
ದಾಂಪತ್ಯ ಜೀವನದಲ್ಲಿ ಇಬ್ಬರೂ ತಿಳಿವಳಿಕೆಯಿಂದ ನಿರ್ಧಾರ ಕೈಗೊಂಡರೆ ಪರಸ್ಪರ ವೈಮನಸ್ಯ ಹಾಗೂ ಡಬಲ್ ಬರ್ಡನ್‌ಸಿಂಡ್ರೋಮ್ ನಿಂದ ರಕ್ಷಿಸಿಕೊಳ್ಳಬಹುದು.
– ಜಿ. ಅನುರಾಧಾ