ಡಿಜಿಟಲ್ ಹಣ ಸಂದಾಯದ ವ್ಯವಹಾರ ಒಂದು ವರ್ಚುವಲ್ ‌ಶಾಪಿಂಗ್‌ ಮಾಲ್‌ನಂತೆ ಎನ್ನಬಹುದು. ಇದರಲ್ಲಿ ನಿಮಗೆ ಬ್ಯಾಂಕ್‌, ಅಂಗಡಿಗಳು, ಈಟರೀಸ್‌, ಟ್ಯಾಕ್ಸಿ, ಮನರಂಜನೆ ಮುಂತಾದ ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಇಲ್ಲಿ ಯಾವುದೇ ಮಾತುಕಥೆ ನಡೆಯುವುದಿಲ್ಲ. ಆದರೂ ನಿಮ್ಮ ಎಲ್ಲ ಅವಶ್ಯಕತೆಗಳನ್ನೂ ಗಮನಿಸಲಾಗುತ್ತದೆ.

ಡಿಜಿಟಲ್ ಆಗುವ ಬಗೆ

ಎಲ್ಲಕ್ಕಿಂತ ಮೊದಲು ನಿಮ್ಮ ಬಳಿ ಒಂದು ಸ್ಮಾರ್ಟ್‌ ಫೋನ್‌ ಅಥವಾ ಇಂಟರ್‌ನೆಟ್‌ ಕನೆಕ್ಷನ್‌ ಜೊತೆಗೆ ಒಂದು ಕಂಪ್ಯೂಟರ್‌ಇರಬೇಕು.

ನಿಮ್ಮದೊಂದು ಇಮೇಲ್ ಅಡ್ರೆಸ್‌ ಇರಬೇಕು. ಅದರಲ್ಲಿ ನಿಮ್ಮ ಎಲ್ಲ ವ್ಯವಹಾರಗಳೂ ದಾಖಲಿಸಲ್ಪಡುತ್ತವೆ.

ನೀವು ವ್ಯವಹರಿಸಲು ಬಯಸುವ ಬ್ಯಾಂಕ್‌ ಅಥವಾ ಶಾಪಿಂಗ್‌ಗೆ ಸಂಬಂಧಿಸಿದ ವೆಬ್‌ಸೈಟ್‌ಗೆ ಹೋಗಿ ಅಥವಾ ಅವರ ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.

ಹೆಚ್ಚಿನ ವೆಬ್‌ಸೈಟ್‌ಗಳು ಯೂಸರ್‌ ನೇಮ್ ಮತ್ತು ಪಾಸ್‌ವರ್ಡ್‌ನ್ನು ನಿಮ್ಮ ಇಮೇಲ್ ಅಡ್ರೆಸ್‌ಗೆ ಕಳುಹಿಸುತ್ತವೆ.

ಉದಾಹರಣೆಗೆ ಇಂಟರ್‌ನೆಟ್‌ ಬ್ಯಾಂಕಿಂಗ್‌ಗಾಗಿ ನೀವು ಕೋರಿಕೆ ಸಲ್ಲಿಸಿದರೆ ಬ್ಯಾಂಕ್‌ನಿಂದ ನಿಮಗೆ ಒಂದು ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ದೊರೆಯುತ್ತದೆ. ಈ ರೀತಿ ನೀವು ಬ್ಯಾಂಕಿಂಗ್‌ಗೆ ಅದನ್ನು ಬಳಸಿಕೊಳ್ಳಬಹುದು.

ಆನ್ಲೈನ್ಶಾಪಿಂಗ್

ಅಗ್ಗ ಮತ್ತು ಸುಲಭ ಆನ್‌ಲೈನ್‌ ಶಾಪಿಂಗ್‌ಗಾಗಿ ನೀವು ಅಮೇಜಾನ್‌, ಫ್ಲಿಪ್‌ ಕಾರ್ಟ್‌, ಸ್ನಾಪ್‌ ಡೀಲ್ ಮುಂತಾದ ಯಾವುದೇ ಪ್ರಮುಖ ವೆಬ್‌ಸೈಟ್‌ಗೆ ಹೋಗಿ ನಿಮಗೆ ಬೇಕಾದ ವಸ್ತುಗಳ ವಿವರಗಳನ್ನು ಪಡೆದುಕೊಳ್ಳಬಹುದು. ಬೆಲೆಗಳನ್ನು ಹೋಲಿಸಿ ನೋಡಿ ನಿಮಗೆ ಇಷ್ಟವಾದ ವಸ್ತುವನ್ನು ಆರಿಸಿಕೊಳ್ಳಬಹುದು. ಅದನ್ನು ಕೊಳ್ಳಲು ನೀವು ಆರ್ಡರ್‌ ಮಾಡಬೇಕು ಮತ್ತು ಎಲೆಕ್ಟ್ರಾನಿಕ್‌ಮಾಧ್ಯಮದಿಂದ ನಿಮ್ಮ ಬ್ಯಾಂಕ್‌ ಅಥವಾ ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ ಅಥವಾ ಪೇಟಿ ಎಂ, ಫ್ರೀ ಚಾರ್ಜ್‌ನಂತಹ ವ್ಯವಹಾರ ಮಾಡುವಾಗ, ನಿಮ್ಮ ಬ್ಯಾಂಕ್‌ ಕಡೆಯಿಂದ ನಿಮ್ಮ ಮೊಬೈಲ್ ಫೋನ್‌ಗೆ ಒನ್‌ ಟೈಮ್ ಪಾಸ್‌ವರ್ಡ್‌ (ಒ.ಟಿ.ಪಿ) ಕಳುಹಿಸಲಾಗುತ್ತದೆ. ನಿಮ್ಮ ಖಾತೆಯಿಂದ ಕೊಳ್ಳುವಿಕೆಗೆ ಹಣ ಸಂದಾಯವಾಗುತ್ತಿದೆ ಎಂಬುದನ್ನು ಅದು ಸೂಚಿಸುತ್ತದೆ. ನೀವು ಒಂದು ವಸ್ತುವನ್ನು ಕೊಳ್ಳಲು ಆರ್ಡರ್‌ ಮಾಡಿದ ನಂತರ ಅದು ನಿಮಗೆ ತಲುಪುವ ಬಗೆಯನ್ನು ಆ ಕಂಪನಿಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಗಮನಿಸಿಕೊಳ್ಳಬಹುದು.

ಶೀಘ್ರ ಮತ್ತು ಅನುಕೂಲಕರ

ನೀವು ಯಾರಿಗಾದರೂ ಹಣ ಕಳುಹಿಸಬೇಕೆಂದಿದ್ದರೆ, ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಬಹಳ ಸುಲಭವಾಗಿ ಕಳುಹಿಸಿಕೊಡಬಹುದು. ಇದಕ್ಕಾಗಿ ನೀವು ಫಂಡ್‌ ಟ್ರಾನ್ಸ್ ಫರ್‌ ಸೆಕ್ಷನ್‌ಗೆ ಹೋಗಿ ಹಣ ಪಡೆಯಲಿರುವವರ ಹೆಸರು ಅಕೌಂಟ್ ಮೂಲಕ ನಂಬರ್‌, ಬ್ಯಾಂಕ್‌ನ ಹೆಸರು ಮತ್ತು ಶಾಖೆ ಹಾಗೂ ಐಎಫ್‌ಎಸ್‌ಸಿ ಕೋಡ್‌ನ ವಿವರಗಳನ್ನು ನಮೂದಿಸಬೇಕಾಗುತ್ತದೆ. ಸುರಕ್ಷತೆಗಾಗಿ ಓಟಿಪಿಯನ್ನು ಖಾತ್ರಿಪಡಿಸಿಕೊಂಡು ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.

ನೀವು ಯಾರಾದರೊಬ್ಬರಿಗೆ ನಿಯಮಿತವಾಗಿ ಹಣ ಕಳಿಸುವಂತಿದ್ದರೆ, ನೀವು ಕೇವಲ ರಿಜಿಸ್ಟರ್ಡ್‌ (ಪೇಯೀಸ್‌) ಕಾಲಂನಲ್ಲಿ ಅವರ ಹೆಸರನ್ನು ನಮೂದಿಸಿ ಹಣ ವರ್ಗಾವಣೆ ಮಾಡಬಹುದು. ಇಂತಹ ಹಣ ವರ್ಗಾವಣೆಯ ಅನುಕೂಲವೆಂದರೆ ಅದಕ್ಕಾಗಿ ಪ್ರತಿಸಲ ಬ್ಯಾಂಕ್‌ಗೆ ಹೋಗಬೇಕಾಗುವುದಿಲ್ಲ ಮತ್ತು ಚೆಕ್‌ಬುಕ್‌ನ ಅವಶ್ಯಕತೆಯೂ ಇರುವುದಿಲ್ಲ. ಏಕೆಂದರೆ ಈಗ ಎಲ್ಲವು ಡಿಜಿಟಲ್. ಇದರ ಮತ್ತೊಂದು ಹೆಚ್ಚಿನ ಅನುಕೂಲವೆಂದರೆ ಈ ಸೌಲಭ್ಯ 24 X 7 ಕಾಲ ದೊರೆಯುತ್ತದೆ.

ನೀವು ನಿಯಮಿತ ಕಾಲದಂದು ಯಾರಿಗಾದರೂ ಒಂದು ಮೊತ್ತವನ್ನು ವರ್ಗಾಯಿಸಬೇಕಾಗಿದ್ದರೆ, ನಿಮ್ಮ ಹಣಕಾಸು ಸಂಸ್ಥೆಗೆ ಈ ಬಗ್ಗೆ ಒಂದು ಆದೇಶ ನೀಡಬಹುದು. ಹೀಗೆ ಮಾಡುವುದರಿಂದ ಒಂದು ನಿಯಮಿತ ತಾರೀಖಿನಂದು ಹಣ ವರ್ಗಾಯಿಸಲ್ಪಡುತ್ತದೆ.

ಡಿಜಿಟಲ್ ವ್ಯಾಲೆಟ್ಸ್ ಬಳಸಿರಿ

ಡೀ ಮಾನಿಟೈಸೇಶನ್‌ನ ನಂತರ ನಗದು ಹಣದ ಕೊರತೆಯಾಗಿದೆ ನಿಜ. ಆದರೆ ಡಿಜಿಟಲ್ ವ್ಯವಹಾರ ನಡೆಸಲು ಅನೇಕ ಬಗೆಯ ಸೌಲಭ್ಯಗಳಿವೆ. ಇದರಲ್ಲಿ ನೀವು ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ನ್ನು ಸ್ವೈಪ್‌ ಮಾಡಬಹುದು. ಇಲ್ಲವೇ ಇಂಟರ್‌ನೆಟ್‌ ಬ್ಯಾಂಕಿಂಗ್‌ಮೂಲಕ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಹೀಗೆ ಮಾಡಲು ಸಾಧ್ಯವಾಗದಿದ್ದರೆ, ಪೇಟಿಎಂ ಅಥವಾ ಫ್ರೀಚಾರ್ಜ್‌ ಮುಂತಾದವುಗಳ ಮೂಲಕ ವ್ಯವಹರಿಸಬಹುದು. ಇದು ಮೊಬೈಲ್ ಫೋನ್‌ ಮೂಲಕ ಕಾರ್ಯಗೈಯುವ ಸುಲಭ ಉಪಾಯವಾಗಿದೆ. ಇದಕ್ಕಾಗಿ ನೀವು ಮೊದಲು ಪೇಟಿಎಂನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಬ್ಯಾಂಕ್‌ ಖಾತೆಯಿಂದ ಹಣವನ್ನು ಪೇಟಿಎಂಗೆ ಹಸ್ತಾಂತರಿಸಬಹುದು. ಆಮೇಲೆ ನೀವು ಹಣ ಕಳುಹಿಸ ಬಯಸುವ ವ್ಯಕ್ತಿಯ ನಂಬರ್‌ನ್ನು ನಮೂದಿಸಬೇಕು.

ಇದಲ್ಲದೆ ನೀವು ರೈಲ್ವೆ, ಫ್ಲೈಟ್‌ ಮತ್ತು ಹೋಟೆಲ್ ‌ಬುಕಿಂಗ್‌ಗಳನ್ನು ಸಹ ಡಿಜಿಟಲ್ ವಿಧಾನದಿಂದ ಮಾಡಬಹುದು. ಮೇಕ್‌ ಮೈ ಟ್ರಿಪ್‌, ಈಸ್‌ ಮೈ ಟ್ರಿಪ್‌ ಮುಂತಾದ ವೆಬ್‌ಸೈಟ್‌ಗಳಲ್ಲಿ ಏರ್‌ಲೈನ್ಸ್  ದರಗಳನ್ನು ಹೋಲಿಸಿ ನೋಡಿ. ಉತ್ತಮ ದರದಲ್ಲಿ ಬುಕಿಂಗ್‌ಮಾಡಿಕೊಳ್ಳಬಹುದು. ಓಲಾ, ಕ್ಲಿಯರ್‌ ಟ್ರಿಪ್‌, ಈಸ್‌ ಮೈ ಟ್ರಿಪ್‌ ಮುಂತಾದ ಹೋಟೆಲ್ ಬುಕಿಂಗ್‌ ವೆಬ್‌ಸೈಟ್‌ಗಳ ಪ್ರಯೋಜನ ಪಡೆದುಕೊಳ್ಳಬಹುದು. ಬುಕ್‌ ಮೈ  ಶೋ ಸೈಟ್‌ನಿಂದ ಸಿನಿಮಾ ಟಿಕೆಟ್‌ನ್ನೂ ಬುಕ್‌ ಮಾಡಬಹುದು.

ದಿನಸಿ ವಸ್ತುಗಳ ಕೊಳ್ಳುವಿಕೆಯೂ ಈಗ ಡಿಜಿಟಲ್ ಆಗಿದೆ. ಬಿಗ್‌ ಬ್ಯಾಸ್ಕೆಟ್‌, ಗ್ರೋಫರ್ಸ್ ಇತ್ಯಾದಿಗಳ ಮೂಲಕ ನಿಮ್ಮ ದಿನನಿತ್ಯ ಬಳಕೆಯ ದಿನಸಿ ಮತ್ತು ಇತರೆ ವಸ್ತುಗಳನ್ನು ಕೊಳ್ಳಬಹುದು. ಆ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಲು ನಿಮಗೆ ಅನುಕೂಲವಾದ ಸಮಯವನ್ನು ಆರಿಸಿಕೊಳ್ಳಬಹುದು. ಇದರಲ್ಲಿ ಎಕ್ಸ್ ಪ್ರೆಸ್‌ ಡೆಲಿವೆರಿಯ (60 ರಿಂದ 90 ನಿಮಿಷಗಳಲ್ಲಿ ಡೆಲಿವರಿ) ಸೌಲಭ್ಯ ಇರುತ್ತದೆ. ತಾಜಾ ತರಕಾರಿಯಿಂದ ಪ್ರೋಝನ್‌ ಫುಡ್‌ವರೆಗೆ, ಪೌಲ್ಟ್ರಿಯಿಂದ ಮೀನು, ಮಾಂಸದವರೆಗೆ ಈಗ ಎಲ್ಲ ಆನ್‌ಲೈನ್‌ನಲ್ಲಿ ದೊರೆಯುತ್ತದೆ. ಕ್ಯಾಶ್‌ ಆನ್‌ ಡೆಲಿವರಿ ವಿಧಾನವಲ್ಲದೆ ನೀವು ನೆಟ್‌ ಬ್ಯಾಂಕಿಂಗ್‌, ವ್ಯಾಲೆಟ್ಸ್ ಅಥವಾ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳ ಮೂಲಕ ಹಣ ಪಾವತಿ ಮಾಡಬಹುದು. ವ್ಯಾಲೆಟ್ಸ್ ಬಳಕೆಯಿಂದ ನಿಮಗೆ ಉತ್ತಮ ರಿಯಾಯಿತಿಯೂ ದೊರೆಯುತ್ತದೆ.

ನಿಮ್ಮ ಬೆರಳ ತುದಿಯಲ್ಲಿ ಬ್ಯಾಂಕಿಂಗ್

ಬ್ಯಾಂಕ್‌ ಬಜಾರ್‌, ಲೋನ್ಸ್, ಪಾಲಿಸಿ ಬಜಾರ್‌ ಮುಂತಾದ ವೆಬ್‌ಸೈಟ್‌ಗಳ ಮೂಲಕ ನೀವು ಕಡಿಮೆ ದರದಲ್ಲಿ ಸಾಲ ಅಥವಾ ವಿಮಾ ಪಾಲಿಸಿಗಳನ್ನು ಪಡೆಯಬಹುದು. ವೈಯಕ್ತಿಕ ಸಾಲ ಪಡೆಯಲು ನೀವು ಬ್ಯಾಂಕ್‌ಗೆ ಹೋಗದೆಯೇ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹಣ ಹೂಡಿಕೆ ಮಾಡಬೇಕಾಗಿದ್ದಲ್ಲಿ, ಬೇರೆ ಬೇರೆ ಬ್ಯಾಂಕ್‌ಗಳ ಎಫ್‌ಡಿ ದರವನ್ನು ಆನ್‌ಲೈನ್‌ನಲ್ಲಿ ಹೋಲಿಸಿ ನೋಡಿ, ಉತ್ತಮವಾದುದನ್ನು ಆರಿಸಿಕೊಳ್ಳಬಹುದು.

ಇಂತಹದೊಂದು ವಿಧಾನದಿಂದ ನೀವು ಮಾಹೆಯಾನಾ ರೂ.500ರ ಆರ್‌.ಡಿ. (ರೆಕರಿಂಗ್‌ ಡೆಪಾಸಿಟ್‌) ಖಾತೆ ಪ್ರಾರಂಭಿಸಬಹುದು. ಡಿಜಿಟಲ್ ವಿಧಾನದಿಂದ ನೀವು ಆನ್‌ಲೈನ್‌ನಲ್ಲಿ ಮ್ಯೂಚುವಲ್ ಫಂಡ್‌ನ ವ್ಯವಹಾರವನ್ನೂ ಮಾಡಬಹುದು. ನಿಮಗೆ ಶೇರ್‌ ಮಾರ್ಕೆಟ್‌ನಲ್ಲಿ ಆಸಕ್ತಿ ಇದ್ದರೆ ಆನ್‌ಲೈನ್‌ನಲ್ಲಿ ಒಂದು ಡೀಮ್ಯಾಟ್‌ ಖಾತೆ ತೆರೆದು ಯಾವುದೇ ತೊಂದರೆ ಇಲ್ಲದೆ ಅದರ ವ್ಯವಹಾರ ನಡೆಸಬಹುದು. ಇದರಲ್ಲಿ ನೀವು ಕೊಳ್ಳಬೇಕೆಂದಿರುವ ಸ್ಟಾಕ್‌ನ ಬೆಲೆಯ ಮಾಹಿತಿಯೂ ನಿಮಗೆ ದೊರೆಯುತ್ತದೆ.

ರಾಗಿಣಿ ಮೂರ್ತಿ

ದುರುಪಯೋಗವನ್ನು ತಪ್ಪಿಸಿಕೊಳ್ಳುವ ಉಪಾಯ

ನೀವು ಆನ್‌ಲೈನ್‌ ವ್ಯವಹಾರ ಮಾಡುವಿರಾದರೆ, ಕೆಲವು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:

ನಿಮ್ಮ ಫೋನ್‌ನ್ನು ಕಳೆದುಕೊಂಡರೆ, ನಿಮ್ಮ ವ್ಯಾಲೆಟ್ಸ್ ಬ್ಯಾಲೆನ್ಸ್ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ.

ನೀವು ಅಸುರಕ್ಷಿತ ಸ್ಥಳದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಿದಾಗ, ವಂಚನೆಯ ಸಂಭವ ಹೆಚ್ಚಾಗಿರುತ್ತದೆ.

ನೀವು ನಿಮ್ಮ ಬ್ಯಾಂಕ್‌ ಅಕೌಂಟ್‌ನ ಐಡಿ ಮತ್ತು ಪಾಸ್‌ವರ್ಡ್‌ ಮಿಸ್‌ ಪ್ಲೇಸ್‌ ಮಾಡಿಕೊಂಡರೆ, ಅದು 100% ದುರುಪಯೋಗವಾಗುವ ಸಾಧ್ಯತೆಗಳಿವೆ, ಎಚ್ಚರ!

ನಿಮ್ಮ ಪ್ರವಾಸ ಅಥವಾ ವಾಸ್ತವ್ಯದ ತಾರೀಖಿನ ಬಗ್ಗೆ ತಪ್ಪಾಗಿ ನಮೂದಿಸಿದರೆ, ಅದನ್ನು ಸರಿಪಡಿಸಲು ಅಥವಾ ರದ್ದು ಮಾಡಲು ಅನಾವಶ್ಯಕ ವ್ಯವಹಾರ ಮತ್ತು ಹಣ ಸಂದಾಯ ಮಾಡಬೇಕಾಗುತ್ತದೆ.

ನೀವು ಡೌನ್‌ಲೋಡ್‌ ಮಾಡಿಕೊಳ್ಳುವ ವೆಬ್‌ಸೈಟ್‌ಗಳು, ಎಸ್‌.ಎಂ.ಎಸ್‌ನೊಂದಿಗೆ ನಿಮ್ಮ ಫೋನ್‌ನ ರೀತಿನೀತಿಗಳನ್ನು ಟ್ರ್ಯಾಪ್‌ಮಾಡಿಕೊಳ್ಳಲು ಶಕ್ತವಾಗುತ್ತವೆ. ಆದ್ದರಿಂದ ಅಪರಿಚಿತ ವೆಬ್‌ಸೈಟ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಎಚ್ಚರಿಕೆಯಿಂದಿರಿ, ಅವು ಸುರಕ್ಷಿತವಾಗಿಲ್ಲದಿರಬಹುದು.

ಡಿಜಿಟಲ್ನಲ್ಲಿ ನಮ್ಮ ಭವಿಷ್ಯ

ಹಲವು ಸವಾಲುಗಳಿರುವಾಗ್ಯೂ ಡಿಜಿಟಲ್ ವ್ಯವಹಾರ ನಮ್ಮ ಬಾಳುವೆಯ ಒಂದು ಭಾಗವಾಗಿಬಿಟ್ಟಿದೆ. ಆದಷ್ಟು ಬೇಗ ಇದನ್ನು ನಮ್ಮದಾಗಿಸಿಕೊಂಡಾಗ, ನಮ್ಮ ಜೀವನದ ದಾರಿಯು ಸುಲಭ ಮತ್ತು ಉತ್ತಮವಾಗುತ್ತದೆ. ಬ್ಯಾಂಕ್‌ ಬ್ಯಾಲೆನ್ಸ್ ತಿಳಿಯುವುದರಿಂದ ಹಿಡಿದು ಎಫ್‌ಡಿ ಮಾಡಲು ಮತ್ತು ಬಿಲ್ ‌ಪಾವತಿ ಮಾಡುವವರೆಗೆ ಡಿಜಿಟಲ್ ವ್ಯವಹಾರ ವಿಧಾನ ನಮ್ಮ ಆರ್ಥಿಕ ಜೀವನವನ್ನು ಕಷ್ಟ ಮತ್ತು ತೊಂದರೆಗಳಿಂದ ಬಿಡುಗಡೆ ದೊರಕಿಸಿಕೊಡುತ್ತದೆ. ಕೆಲವೇ ಸೆಕೆಂಡ್‌ಗಳಲ್ಲಿ ನಿಮಗೆ ನಿಮ್ಮ ಖಾತೆಯ ಹಣದ ವಿವರ, ನೀವು ಪಾವತಿಸಿದ ಹಣದ ವಿವರ ಅಥವಾ ನಿಮ್ಮ ಹಣ ಬಳಕೆಯ ವಿವರಗಳು ತಿಳಿದುಬರುತ್ತವೆ. ನಿಮ್ಮ ಫೋನ್‌ ಅಥವಾ ಕಂಪ್ಯೂಟರ್‌ ಮೂಲಕ ನೀವು ಓಡಾಡುತ್ತಲೇ ನಿಮ್ಮ ಹಣಕಾಸಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಹುದು. ಹೀಗೆ ನೀವು ಕೆಲವು ಉಪಾಯಗಳ ಮೂಲಕ ಸ್ವತಃ ಆರ್ಥಿಕ ಸಲಹಾಗಾರರೂ ಆಗಬಹುದಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ