ಸಮಾಜ ಸೇವೆ ಕೆಲವರಿಗೆ ರಕ್ತಗತವಾಗಿ ಬಂದಬಿಟ್ಟಿರುತ್ತೆ. ತಮ್ಮ ಹಿರೀಕರ ಮಾರ್ಗದರ್ಶನದಿಂದ ಅಥವಾ ಅವರು ನಡೆದ ದಾರಿಯಲ್ಲಿ ಸಾಗುತ್ತಾ ತಾವು ಅದೇ ದಾರಿಯಲ್ಲಿ ಮುಂದುವರಿಯುತ್ತಾರೆ. ಯಾರೂ ಕಾಣದ ಯಶಸ್ಸು, ಹೆಸರು ಬಂದಾಗ ಅತೀ ಸಂತಸಪಡುತ್ತಾರೆ. ಜನ ಗುರುತಿಸಿ ಗೌರವಿಸುವಷ್ಟರ ಮಟ್ಟಿಗೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಅಂಥವರ ಸಾಲಿಗೆ ಸೇರಿದವರೇ ವಿಮಲಾ ಸುಬ್ರಹ್ಮಣ್ಯಂ!
ನೇತ್ರ ಚಿಕಿತ್ಸಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ದಂತ ಶಿಬಿರ, ರಕ್ತದಾನ ಶಿಬಿರ ಹೀಗೇ ಮುಂದುವರಿಯುತ್ತದೆ ಇವರ ಸೇವಾ ಚಟುವಟಿಕೆಗಳು. ಬಡ ಮಕ್ಕಳಿಗೆ ಬಸ್ ಪಾಸ್, ಯೂನಿಫಾರಂ, ಶೂ, ಸಾಕ್ಸ್ ಕೊಡಿಸೋದು ತದನಂತರ ಪುಸ್ತಕ, ಪೆನ್ಸಿಲ್ ಜೊತೆಗೆ ಶಾಲಾ ಶುಲ್ಕವನ್ನೂ ಸಹ ಕಟ್ಟುತ್ತಾ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾರೆ.
ಮಹಿಳಾಮಣಿಗಳ ವಿಚಾರಕ್ಕೆ ಬಂದರೆ ವಿಧವೆಯರಿಗೆ ಹೊಲಿಗೆ ಯಂತ್ರ ಕೊಡಿಸುವ ಮುಖೇನ ಅವರ ಬಾಳಿನ ರಥ ಸಾಗಿಸಲು ನೆರವಾಗುತ್ತಾರೆ. ಅಂಗವಿಕಲ ಮಹಿಳೆಯರಿಗೆ ಅವಶ್ಯವೆನಿಸಿದ್ದನ್ನು ಕೊಡಿಸಿ ಅವರ ಸಂಕಷ್ಟಕ್ಕೆ ನೆರವಾಗುತ್ತಾರೆ. ಹಸಿದವರಿಗೆ ಊಟ, ನೊಂದವರಿಗೆ ಸಾಂತ್ವನ, ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುತ್ತ ಸಾಗುವ ಇವರು ಎಲ್ಲರಿಗೂ `ದೇವತಾ ಆಂಟಿ’ ಆಗಿದ್ದಾರೆ.
04.01.1957ರಲ್ಲಿ ಮದನಪಲ್ಲಿಯ ಗಾರ್ಲ ಅಶ್ವರ್ತಂ ಶೆಟ್ಟಿ ಹಾಗೂ ಲಕ್ಷ್ಮಿದೇಮ್ಮನವರ ಮೂರನೇ ಪುತ್ರಿಯಾಗಿ ಜನಿಸಿದರು. ಬಾಲ್ಯದಿಂದಲೂ ಆಟಪಾಠಗಳಲ್ಲಿ ಮುಂದು. ಲಾಂಗ್ ಜಂಪ್, ಹೈ ಜಂಪ್, ರನ್ನಿಂಗ್ ರೇಸ್‌ಗಳಲ್ಲಿ ಅತಿ ಹೆಚ್ಚು ಬಹುಮಾನವನ್ನು ಪಡೆದಿರುವರು. ಜೊತೆಗೆ ತುಂಬು ಕುಟುಂಬವಾದ್ದರಿಂದ ಹಾಡು ಹಸೆ, ಕೈಕೆಲಸ ನೋಡನೋಡುತ್ತಲೇ ತಮ್ಮ ಜೊತೆ ಜೊತೆಯಾಗಿ ಬೆಳೆದು ಬಂದ ಕಲೆಗಳಾದವು. ಬೆಳೆದ ಹುಡುಗಿ ಸಕಲ ಕಲಾ ಸಂಪನ್ನೆಯಾಗಿದ್ದಳು. ವರನ ನೋಡಿ ಧಾರೆ ಎರೆದರು. ಅಲ್ಲಿಯೂ ತುಂಬು ಕುಟುಂಬ. ರಾಜಗೋಪಾಲ ಶೆಟ್ಟಿ ಹಾಗೂ ಆದಿಲಕ್ಷ್ಮಮ್ಮ ದಂಪತಿಗಳ ಪುತ್ರ ಸುಬ್ರಹ್ಮಣ್ಯಂರವರ ಕೈ ಹಿಡಿದರು. ತಂದೆ ತಾಯಿಯಿಂದ ಬಂದ ಸೇವಾ ಮನೋಭಾವಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆತು ಇವರ ಈ ಕಾರ್ಯಗಳಿಗೆ ಹೆಚ್ಚಿನ ನೀರೆರೆದವರು ಪತಿ ಸುಬ್ರಹ್ಮಣ್ಯಂ.
ಸತತ 25 ವರ್ಷಗಳಿಂದ ತ್ಯಾಗರಾಜ ನಗರದ ವಾಸವಿ ಸೇವಾ ಸಮಿತಿಯಲ್ಲಿ ಸದಸ್ಯರಾಗಿ, ಸಕ್ರಿಯವಾಗಿ ಭಾಗಿಯಾಗಿರುತ್ತಾರೆ. ಮೇಲು ಕಲಿಕೆ, ಗಾಯನ, ಸಮಾಜ, ಕಳಾಂದ್ರ ಸಂಸ್ಥೆಗಳಲ್ಲಿ ಆಜೀವ ಸದಸ್ಯರಾಗಿ ಸಂಸ್ಥೆಗಳ ಎಲ್ಲ ಕಾರ್ಯ ಕಲಾಪಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ. 2001ರಲ್ಲಿ ಪ್ರಾರಂಭವಾದ ತ್ಯಾಗರಾಜನಗರ ವಾಸವಿ ಮಹಿಳಾ ಮಂಡಳಿಯ ಪ್ರಮುಖ ಸ್ಥಾಪಕ ನಿರ್ದೇಶಕಿಯಾಗಿದ್ದು, ಮಂಡಳಿಯ ನಿರಂತರ ಚಟುವಟಿಕೆಗಳ ರೂವಾರಿ, ಆರೋಗ್ಯ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
ಧಾರ್ಮಿಕ ಚಟುವಟಿಕಗಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತಾ ತಮಿಳುನಾಡಿನ ವೆಲ್ಲೂರಿನಲ್ಲೂ ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಹೆಮ್ಮೆ ಇವರಿಗಿದೆ. ಅಲ್ಲದೇ ಇಲ್ಲಿನ ದೇವಾಲಯಗಳು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿಯೂ ಸತ್ಸಂಗ ನಡೆಸಿಕೊಂಡು ಬರುತ್ತಿದ್ದಾರೆ.
ಕ್ರಿಯಾಶೀಲತೆ ನಿಸ್ಪೃಹತೆಯೇ ಮೈವೆತ್ತಂತಿರುವ ಇವರು, ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾದ ಆಜೀವ ಸದಸ್ಯೆಯಾಗಿ, ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷೆಯಾಗಿ, ಸಂಸ್ಥೆಯ ಸಹ ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆಯುತ್ತಿರುವರು. ಕರ್ನಾಟಕವಲ್ಲದೇ ಆಂಧ್ರ, ಕೇರಳ ಮಹಾರಾಷ್ಟ್ರಗಳಲ್ಲಿ ನಡೆಯುವ ಆರ್ಯವೈಶ್ಯ ಮಹಿಳಾ ಮಹಾಸಭಾದ ಕಾರ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತ ಉತ್ತಮ ಮಾರ್ಗದರ್ಶಕರಾಗಿರೋದು ಹೆಚ್ಚಿನ ಸಂಗತಿಯೇ ಹೌದು.
ತಮ್ಮ ಸೇವಾ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪಶ್ಚಿಮ ಲಯನ್ಸ್ ಸಂಸ್ಥೆಗೆ ಈಗ್ಗೆ ಸುಮಾರು 15 ವರ್ಷದ ಕೆಳಗೆ ಸೇರಿ ಅಲ್ಲಿ ತಮ್ಮ ಸೇವಾ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತ ಬಂದಿರುವರು. ಸಂಸ್ಥೆಯ ಅಧ್ಯಕ್ಷರಾಗಿ ನೂರಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವರು. ಈ ಅವಧಿಯಲ್ಲಿ ಕೊಳಗೇರಿ ಮಕ್ಕಳಿಗೆ ಪುಸ್ತಕ ಶಾಲಾ ಶುಲ್ಕ ನೀಡಿದ್ದು ವಿಶೇಷವಾಗಿತ್ತು.
ಇಂತಹ ವಿಶೇಷ ಸೇವಾ ಕಾರ್ಯಗಳನ್ನು ಮಾಡುವ ಮುಖೇನ ಆ ವರ್ಷ ಅತ್ಯಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಸಂಸ್ಥೆಗೆ ಹೆಸರನ್ನು ಇಮ್ಮಡಿಗೊಳಿಸಿದರು. ತದನಂತರ ಲಯನೆಸ್ ಕೌನ್ಸಿಲರ್ ಹುದ್ದೆಗೇರಿ ಸತತ 9 ವರ್ಷ ಬೆಸ್ಟ್ ಕೌನ್ಸಿಲರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ಸೇವಾಮಣಿ ಎಂದರೆ ತಪ್ಪಾಗಲಾರದು.
ಇವರ ಸೇವಾ ಕಾರ್ಯಗಳನ್ನು ಕಂಡ ಹಲವಾರು ಸಂಸ್ಥೆಗಳು ಬಿರುದು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸುತ್ತಿದೆ. ಇವರ ಮನೆಗೆ ಅಡಿ ಇಡುತ್ತಿದ್ದಂತೆಯೇ ಸ್ವಾಗತಿಸೋದು ಈಕೆ ಪಡೆದ ಫಲಕಗಳು, ಗೌರವಿಸಿ ಸನ್ಮಾನಿಸಿದ ಹಾರಗಳು, ಫಲಪುಷ್ಪಗಳು.`ನನಗೂ ಸಾಕಾಗಿದೆ. ಈ ನಡುವೆ ನನಗೆ ಸೇವಾ ಕಾರ್ಯಗಳನ್ನು ಮಾಡಲು ಬಿಡದಷ್ಟು ಪ್ರಶಸ್ತಿಗಳ ಸುರಿಮಳೆಯಾಗುತ್ತಿದೆ. ಈಗೀಗ ಬರುತ್ತಿರುವ ಎಷ್ಟೋ ಸಂಘಸಂಸ್ಥೆಗಳಿಗೆ ಬೇರೆಯವರ ಹೆಸರನ್ನು ಸಜೆಸ್ಟ್ ಮಾಡ್ತೀನಿ…. ನಯವಾಗಿ ತಿರಸ್ಕರಿಸುತ್ತೇನೆ,’ ಎಂದು ಹೇಳಿ ನಕ್ಕರು. ಸೇವಾ ಕಾರ್ಯಗಳಲ್ಲೇ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಸಹಾಯಹಸ್ತ ನೀಡುತ್ತಿರುವ ಈ ಸ್ತ್ರೀರತ್ನಕ್ಕೆ ದೊರೆತ ಪ್ರಶಸ್ತಿ ಬಿರುದುಗಳೋ ಅಪಾರ.
ಸ್ತ್ರೀ ಶಕ್ತಿ, ಪ್ರತಿಭಾವಂತ ಮಹಿಳೆ, ಜನಪ್ರಿಯ ಸಮಾಜ ಸೇವಕಿ, ಮಾರ್ಗದರ್ಶಿ, ವಾಸವಿ ವಿಶೇಷ ಮಹಿಳೆ, ಸೇವಾಶ್ರೀ, ಬೆಸ್ಟ್ ಪ್ರೆಸಿಡೆಂಟ್, ಸೇವಾ ಮಯೂರಿ, ಡಾ. ಚಂದ್ರಮ್ಮ ಸಾಗರ್ ಸ್ತ್ರೀರತ್ನ ಪ್ರಶಸ್ತಿ, ಸೇವಾ ಕಮಲ, ವೈಶ್ಯ ಮಾಧುರಿ, ವಿಶೇಷ ಕೌನ್ಸಿಲರ್, ಆರ್ಯವೈಶ್ಯ ಸಾಧನಾಶ್ರೀ, ಪ್ರತಿಭಾ ಪುರಸ್ಕಾರ, ಜೀವನ ಜ್ಯೋತಿ, ಸಮಾಜ ರತ್ನ, ನೇತಾಜಿ ಸುಭಾಷ್ ಚಂದ್ರಬೋಸ್, ಶ್ರೀ ಕೃಷ್ಣದೇರಾಯ ಪ್ರಶಸ್ತಿ, ಅಭಿನಯ ಭಾರ್ಗವ ಪ್ರಶಸ್ತಿ, ಶ್ರೀ ಸತ್ಯಸಾಯಿ ಕಾಯಕಯೋಗಿ ಪ್ರಶಸ್ತಿ, ಕನ್ನಡ ಕೌಸ್ತುಭ, ಶಂಕರ್‌ನಾಗ್, ಸವ್ಯಸಾಚಿ, ವಿಶ್ವಬಂಧು ಬಸವ ಪ್ರಭು, ಡಾ. ವಿಷ್ಣುವರ್ಧನ್ ಸ್ವರ್ಣಕಮಲ, ಶಾಂತಿಪ್ರಿಯ ಗೌತಮಬುದ್ಧ ಸದ್ಭಾವನ, ಗೆಜ್ಜೆನಾದ ಸೇವಾ ರತ್ನ, ಕಲಾ ರತ್ನ, ಚಾಣುಕ್ಯ ರಾಷ್ಟ್ರೀಯ, ಸಂಗೊಳ್ಳಿ ರಾಯಣ್ಣ ಸದ್ಭಾವನ…….
ಕೆಂಪೇಗೌಡ ಪ್ರಶಸ್ತಿ, ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ರಾಜ್ಯ ಸದ್ಭಾವನ ಪ್ರಶಸ್ತಿ, ಕಸ್ತೂರಿ ನಿವಾಸ ಪ್ರಶಸ್ತಿ, ಶ್ರೀ ಎಪಿಜೆ ಅಬ್ದುಲ್ ಕಲಾಂ ಸದ್ಭಾವನಾ ಪ್ರಶಸ್ತಿ, ಕ್ವೀನ್ ಆಫ್ ಸರ್ವೀಸಸ್, ಪದ್ಮವಿಭೂಷಣ, ಪ್ರೊ. ಬಿ. ನಾರಾಯಣಮ್ಮ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ, ಕಲಾ ರತ್ನ…. ಹೀಗೆ ಸುಮಾರು 200ಕ್ಕೂ ಮಿಗಿಲಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿರುವರು. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್ಯ ವೈಶ್ಯ ಸೇವಾ ಕಾರ್ಯಗಳಿಗಾಗಿ ಡಾ. ಪದವಿ ಪಡೆದ ಪ್ರಥಮ ಮಹಿಳೆ ಇವರಂತೆ. ಇದುವರೆವಿಗೂ ಈ ಕ್ಷೇತ್ರದಲ್ಲಿ ಯಾವ ಮಹಿಳೆಯೂ ಡಾಕ್ಟರೇಟ್ ಪದವಿ ಪಡೆದಿಲ್ಲವೆನ್ನುತ್ತಾರೆ. ಇಂಡಿಯನ್ ವರ್ಚುಯಲ್ ಯೂನಿರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್‌ರವರಿಂದ ಇವರು ಸಲ್ಲಿಸಿದ ಸೇವಾ ಕಾರ್ಯಕ್ಕೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ಅಲ್ಲಿನ ಸ್ನೇಹಿತರು ಇವರುದ್ದದ ಹಾರವನ್ನು ತಾವೇ ಸ್ವತಃ ಕೈಯಾರ ಮಾಡಿ ಅರ್ಪಿಸಿದ್ದು ಇನ್ನೂ ಹೆಚ್ಚಿನ ಖುಷಿ ಕೊಟ್ಟಿತಂತೆ.
ಇಂತಹ ಸೇವಾರತ್ನ ಮಹಿಳೆಗೆ ಸ್ನೇಹಲೋಕ ಬಹಳವೇ ದೊಡ್ಡದು. ಗಂಡ ಹೆಂಡತಿಯ ಸುಖಸಂಸಾರ, ದಿನಸಿ ಅಂಗಡಿ ಇವರ ವ್ಯಾಪಾರ, ಅನಾಥಾಲಯ, ವೃದ್ಧಾಶ್ರಮ, ವಿಶೇಷ ಶಾಲಾ ಮಕ್ಕಳಿಗೆ, ದೇವಸ್ಥಾನಗಳಿಗೆ ಅತಿ ಕಡಿಮೆ ದರದಲ್ಲಿ ದಿನಸಿ ಸಾಮಾನುಗಳನ್ನು ನೀಡುತ್ತಾರೆ. ಎಷ್ಟೋ ಬಾರಿ ಉಚಿತವಾಗಿಯೂ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂಥಹವರು ನಮ್ಮ ನಾಡಿಗೆ ಸ್ತ್ರೀ ಕುಲಕ್ಕೆ ಕಲಶಪ್ರಾಯರು. ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಓದುಗರೆಲ್ಲರ ಪರವಾಗಿ `ಗೃಹಶೋಭಾ’ ಹಾರೈಸುತ್ತಾಳೆ.
– ಸವಿತಾ ನಾಗೇಶ್