ಮಾನುಷಿ ಛಿಲ್ಲರ್ಮಿಸ್ವರ್ಲ್ಡ್

ನವೆಬಂರ್‌ 18, 2017ರಂದು ಚೀನಾದ ಸನಾಯಾ ನಗರದಲ್ಲಿ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ `ಮಿಸ್‌ ವರ್ಲ್ಡ್ 2017′ ಕಿರೀಟ ಧರಿಸುವ ಅದ್ಭುತ ಅವಕಾಶ ದೊರೆತಾಗ ಹರಿಯಾಣಾದ ಮಾನುಷಿ ಛಿಲ್ಲರ್‌ ಖುಷಿಗೆ ಮೇರೆಯೇ ಇರಲಿಲ್ಲ. ತನಗೆ ಅಂತಹದೊಂದು ಭಾರಿ ಪುರಸ್ಕಾರದ ಗರಿ ಸಿಗುತ್ತದೆ ಎಂದು ಮಾನುಷಿ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಪ್ರಿಯಾಂಕಾ ಚೋಪ್ರಾ ಬಳಿಕ ಈ ಪುರಸ್ಕಾರಕ್ಕೆ ಪಾತ್ರಳಾದ ಎರಡನೇ ಭಾರತೀಯ ಯುವತಿ ಈಕೆ. ಈ ಸ್ಪರ್ಧೆಯಲ್ಲಿ 118 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಮಾನುಷಿಯ ಉತ್ಕೃಷ್ಟ ಪರ್ಫಾರ್ಮೆನ್ಸ್ ಗಮನಿಸಿ ಆಕೆಗೆ `ಬ್ಯೂಟಿ ವಿತ್‌ ಪರ್ಪಸ್‌’ ಪುರಸ್ಕಾರ ಕೂಡ ದೊರೆಯಿತು. ಭಾರತಕ್ಕೆ ಈ ಪ್ರಶಸ್ತಿಯ ಮೆರುಗು ತಂದುಕೊಟ್ಟ ಆರನೇ ಸುಂದರಿ ಈಕೆ.

ಹರಿಯಾಣಾದ ರೋಹ್ಟಕ್‌ನಲ್ಲಿ ಜನಿಸಿ, ದೆಹಲಿಯಲ್ಲಿ ಬೆಳೆದು ದೊಡ್ಡವಳಾದ ಮಾನುಷಿ, ವೈದ್ಯಕೀಯ ವಿದ್ಯಾರ್ಥಿನಿ. ಈ ಕುರಿತಂತೆ ಮಾನುಷಿ ಹೇಳುವುದು ಹೀಗೆ, “ನಾನು ಡಾಕ್ಟರ್‌ ಕುಟುಂಬದಿಂದ ಬಂದವಳು. ನನ್ನ ತಂದೆ, ತಾಯಿ ದೆಹಲಿಯಲ್ಲಿ ವಾಸಿಸುತ್ತಾರೆ. ನಾನು ಹರಿಯಾಣಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವೆ. ಬಾಲ್ಯದಿಂದಲೇ  ನನಗೆ `ಮಿಸ್‌ ಇಂಡಿಯಾ’ ಆಗಬೇಕು, ಡಾಕ್ಟರ್‌ ಆಗಬೇಕು ಎಂಬ ಆಕಾಂಕ್ಷೆ ಇತ್ತು. ಅಪ್ಪ ಅಮ್ಮನ ಪ್ರೊಫೆಷನ್‌ನ್ನು ನಾನು ಬಾಲ್ಯದಿಂದಲೇ ನೋಡುತ್ತ ಬಂದಿದ್ದೇನೆ. ಆದರೆ ಇದೆಲ್ಲ ವಾಸ್ತವದಲ್ಲಿ ಸಾಧ್ಯವಾಗುತ್ತದೊ ಇಲ್ಲವೋ ಎಂದು ಗೊತ್ತಿರಲಿಲ್ಲ.

“ಟೀವಿ.ಯಲ್ಲಿ ನಾನು `ಮಿಸ್‌ ಇಂಡಿಯಾ’ದ ಶೋ ನೋಡುತ್ತಿದ್ದಾಗ, ನಾನು ಗ್ಲಾಮರ್‌ ಜೊತೆಗೆ ಅವರ ಅಂತರಾಳದ ಸೌಂದರ್ಯವನ್ನೂ ನೋಡಲು ಇಚ್ಛಿಸುತ್ತಿದ್ದೆ. `ಮಿಸ್‌ ಇಂಡಿಯಾ’ ಕಿರೀಟ ನನಗೆ ದೊರೆತಾಗ ನನಗೆ ನಂಬಲು ಆಗಿರಲಿಲ್ಲ. ಅದರಿಂದ ನನ್ನ ಹುಮ್ಮಸ್ಸು ಹೆಚ್ಚಿತು. ಆಗ ನನಗೆ ನಾನೂ ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಅನಿಸಲಾರಂಭಿಸಿತು.

“ನನಗೆ ಸದಾ ಹೊಸದನ್ನು ಮಾಡುವುದು ಸವಾಲುಗಳನ್ನು ಎದುರಿಸುವುದು ಇಷ್ಟವಾಗುತ್ತದೆ. ಹಾಗಾಗಿ ನಾನು ಓದುವುದರ ಜೊತೆಗೆ ಕೂಚ್ಚಿಪುಡಿ ನೃತ್ಯ ಕಲಿತೆ.”

ದಾರಿ ಸುಗಮವಲ್ಲ….

ಇಲ್ಲಿಯವರೆಗೆ  ತಲುಪಲು ಮಾನುಷಿಗೆ ಸಾಕಷ್ಟು ಸಂಘರ್ಷ ಮಾಡಬೇಕಾಗಿ ಬಂತು. ಈ ಸ್ಪರ್ಧೆಯ ಸಿದ್ಧತೆಗಾಗಿ ಸಾಕಷ್ಟು ಸಮಯ ಕೊಡಬೇಕಾಗಿ ಬರುತ್ತಿತ್ತು. ಈ ಕುರಿತು ಮಾನುಷಿ ಹೀಗೆ ಹೇಳುತ್ತಾರೆ, “ಮೆಡಿಕಲ್‌ನ ಜೊತೆ ಜೊತೆಗೆ ಇದರ ಸಿದ್ಧತೆ ಕಷ್ಟಕರವಾಗಿತ್ತು. ಆದರೆ ನಾನು ಸಮಯನ್ನು ಸರಿಯಾಗಿ ಹೊಂದಿಸಿಕೊಂಡೆ. ಹೀಗಾಗಿ ಎಲ್ಲ ಸಾಧ್ಯವಾಯಿತು. ವಾಸ್ತವದಲ್ಲಿ `ಮಿಸ್‌ ಇಂಡಿಯಾ’ ಒಂದು `ಪರ್ಸನಾಲಿಟಿ ಕಾಂಟೆಸ್ಟ್’ ಆಗಿದೆ. ಅದರಲ್ಲಿ ಸೌಂದರ್ಯಕ್ಕಿಂತ ಹೆಚ್ಚಾಗಿ ಇತರೆ ಸಂಗತಿಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಸಾಮಾನ್ಯ ಜ್ಞಾನವನ್ನು ಮತ್ತಷ್ಟು ಅಪ್‌ಡೇಟ್‌ ಮಾಡಿಕೊಳ್ಳುವುದು ಹಾಗೂ ಫಿಟ್‌ನೆಸ್‌ನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.

“ಇದರ ಹೊರತಾಗಿ ಮಾತುಕತೆಯ ರೀತಿ ನೀತಿ, ಎಲ್ಲರೊಂದಿಗೆ ಬೆರೆಯುವುದು ನಮ್ಮ ಮಾತುಗಳನ್ನು ಷೇರ್‌ ಮಾಡಿಕೊಳ್ಳುವುದು ಇವೆಲ್ಲವನ್ನೂ ಇಂಪ್ರೂವ್ ಮಾಡಿಕೊಳ್ಳಬೇಕಾಗುತ್ತದೆ. ಈ ಸ್ಪರ್ಧೆಯ ಸಿದ್ಧತೆಯ ಸಂದರ್ಭದಲ್ಲಿ ನಾನು ಅನೇಕ ಜನರನ್ನು ಭೇಟಿ ಮಾಡಿದೆ. ಅವರಿಂದ ನಾನು ಬಹಳಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು.”

ಸ್ಮರಣಾರ್ಹ ಕ್ಷಣ

ಮಾನುಷಿಗೆ ಮಿಸ್‌ ವರ್ಲ್ಡ್ ನ ಕಿರೀಟ ಮುಡಿಗೇರಿದಾಗ ಅವರಿಂದ ಎಲ್ಲ ಭಾವನೆಗಳೂ ಹೊರಹೊಮ್ಮಿದವು. ಏಕೆಂದರೆ ಅವರ ಕನಸು ನನಸಾದ ಸುಂದರ ಕ್ಷಣವದು. ಅವರು ಈ ಹಂತ ತಲುಪಲು ಅವರ ತಂದೆತಾಯಿ ಬಹಳಷ್ಟು ಪ್ರೋತ್ಸಾಹ ನೀಡಿದ್ದರು. ಅವಶ್ಯಕತೆ ಇದ್ದಾಗೆಲ್ಲ ಅವರು ಮಾನುಷಿಯ ಜೊತೆಗೇ ಇರುತ್ತಿದ್ದರು. ಸ್ಪರ್ಧೆಯ ಸಂದರ್ಭದಲ್ಲಿ ಮಾನುಷಿ ಒಂದಿಷ್ಟೂ ಒತ್ತಡ ಮಾಡಿಕೊಳ್ಳಲಿಲ್ಲ. ಏಕೆಂದರೆ ಕುಟುಂಬದವರು ಹಾಗೂ ಸಂಘಟಕರ ಬೆಂಬಲ ಅವರ ಮೇಲಿತ್ತು.

ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ ಮಾನುಷಿ ಹೀಗೆ ಹೇಳುತ್ತಾರೆ……

“ಇದು ನನ್ನ ಮಟ್ಟಿಗೆ ಒನ್‌ ಟೈಮ್ ಅಚೀವ್‌ಮೆಂಟ್‌. ಈ ಸ್ಪರ್ಧೆ ತುಂಬಾ ಕಠಿಣಕರ. ಪ್ರತಿಯೊಬ್ಬರೂ ಸುಂದರ ಮತ್ತು ಬುದ್ಧಿವಂತರಾಗಿರುತ್ತಾರೆ. ಇಂತಹದರಲ್ಲಿ ಮಿಸ್‌ ವರ್ಲ್ಡ್ ಕಿರೀಟ ಧರಿಸುವುದು ಎಲ್ಲದಕ್ಕೂ ವಿಶೇಷವಾಗಿತ್ತು.”

ಮಾನುಷಿ ವೈದ್ಯಕೀಯ ವಿದ್ಯಾಭ್ಯಾಸ ಪರಿಪೂರ್ಣಗೊಳಿಸುವುದರ ಜೊತೆ ಜೊತೆಗೆ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡಲು ಇಚ್ಚಿಸುತ್ತಾರೆ. ಹುಡುಗಿಯರು ವಿದ್ಯಾವಂತರಾದರೆ ಕುಟುಂಬ ಮತ್ತು ಸಮಾಜ ಎರಡೂ ಉನ್ನತಿ ಸಾಧಿಸತ್ತದೆ ಎಂದು ಅವರು ಹೇಳುತ್ತಾರೆ.

ಜಿ. ಸೀಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ