ಸೋಯಾ ಓಟ್ಸ್ ಕ್ಯಾಬೇಜ್ ರೋಲ್ಸ್
ಸಾಮಗ್ರಿ : 2 ಕಪ್ ಸೋಯಾ ತರಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಹೆಚ್ಚಿದ ಹಸಿಮೆಣಸು, ಒಂದಿಷ್ಟು ತುಳಸಿ ಎಲೆ, ಸ್ವೀಟ್ ರೆಡ್ ಪೆಪ್ಪರ್, ರೆಡ್ ಚಿಲೀ ಫ್ಲೇಕ್ಸ್, ಓಮ, ನಿಂಬೆರಸ, ಟೊಮೇಟೊ ಕೆಚಪ್, ಟೊಬೆಸ್ಕೋ ಸಾಸ್, ಸೀಸನಿಂಗ್‌ಗಾಗಿ 1-2 ಮ್ಯಾಗಿ ಕ್ಯೂಬ್ಸ್, ಅರ್ಧ ಕಪ್ ಓಟ್ಸ್, 1 ಸಣ್ಣ ಎಲೆಕೋಸು, ಅರ್ಧ ಕಪ್ ತುರಿದ ಚ್ಯಾಡರ್ ಚೀಸ್ (2 ಭಾಗ ಮಾಡಿ).
ವಿಧಾನ : ಒಂದು ಸ್ಟೀಲ್ ಪಾತ್ರೆಗೆ ಸೋಯಾ, ಹಸಿಮೆಣಸು, ಸ್ವೀಟ್ ರೆಡ್ ಪೆಪ್ಪರ್, ಮ್ಯಾಗಿ ಕ್ಯೂಬ್ಸ್, ಓಟ್ಸ್, ತುಳಸಿ, ರೆಡ್ ಚಿಲೀ ಫ್ಲೇಕ್ಸ್, ಓಮ, ಉಪ್ಪು, ಖಾರ ಹಾಕಿ ತುಸು ನೀರು ಬೆರೆಸಿ ಕುದಿಸಬೇಕು. ಚೆನ್ನಾಗಿ ಕುದಿ ಬಂದ ಮೇಲೆ ಮುಚ್ಚಳ ಇರಿಸಿ 5 ನಿಮಿಷ ಬೇಯಿಸಿ. ನಂತರ ಕೆಳಗಿಳಿಸಿ 5-6 ನಿಮಿಷ ಹಾಗೇ ಬಿಡಿ. ಈ ಮಧ್ಯೆ ಎಲೆಕೋಸಿನ 7-8 ಮೇಲುಪದರ ಹೊರತೆಗೆದು, ಉಳಿದದ್ದನ್ನು ಹೆಚ್ಚಿ ಬೇಯಿಸಿ. ಆರಿದ ನಂತರ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ. ಈಗ ಅಗಲ ಎಲೆಗಳ ಮಧ್ಯದ ದಪ್ಪಗಿನ ಎಳೆಯನ್ನು ಬಿಟ್ಟುಕೊಳ್ಳದಂತೆ ಎಚ್ಚರಿಕೆಯಿಂದ ಕತ್ತರಿಸಿ. ತರಕಾರಿ ಮಿಶ್ರಣಕ್ಕೆ ಒಂದು ಭಾಗ ಚೀಸ್, ನಿಂಬೆರಸ ಬೆರೆಸಿ. ಈ ಮಿಶ್ರಣವನ್ನು ಸಮನವಾಗಿ ಎಲ್ಲಾ ಎಲೆಗಳ ಮೇಲೆ ಹರಡಿ, ರೋಲ್ ಮಾಡಿ. ಇದನ್ನು ಟೊಮೇಟೊ ಕೆಚಪ್ ಮತ್ತು ಟೊಬೆಸ್ಕೊ ಸಾಸ್‌ನಲ್ಲಿ ಅದ್ದಿಡಿ. ಬೇಕಿಂ ಗ್‌ಡಿಶ್‌ನಲ್ಲಿ ಬಟರ್ ಪೇಪರ್ ಹರಡಿ, ಅದರ ಮೇಲೆ ಈ ರೋಲ್ಸ್ ಹರಡಿ. 400 ಡಿಗ್ರಿ ಶಾಖದಲ್ಲಿ ಈ ರೋಲ್ಸ್ ನ್ನು 15 ನಿಮಿಷ ಬೇಕ್ ಮಾಡಿ. ಬಿಸಿ ಬಿಸಿಯಾದ ಇದರ ಮೇಲೆ ಉಳಿದ ಚೀಸ್ ಉದುರಿಸಿ, ಸವಿಯಲು ಕೊಡಿ.
ಸ್ಟಿರ್ ಫ್ರೈಡ್ ಟೋಫು ವಿತ್ ವಿಂಟರ್ ವೆಜಿಟೆಬಲ್ ಸ್ಪಿನಾಚ್
ಸಾಮಗ್ರಿ : 400 ಗ್ರಾಂ ಟೋಫು, 1 ಕಟ್ಟು ಪಾಲಕ್ ಸೊಪ್ಪು, 150 ಗ್ರಾಂ ಹೆಚ್ಚಿದ ಬೀನ್ಸ್, 50 ಗ್ರಾಂ ಹೆಚ್ಚಿದ ಕ್ಯಾರೆಟ್, 50 ಗ್ರಾಂ ಹಸಿ ಕೆಂಪು ಮೆಣಸಿನಕಾಯಿ, 2-3 ಚಿಟಕಿ ಆ್ಯಸ್ಪರಾಗಸ್, ಅರ್ಧ ಸೌಟು ಎಳ್ಳೆಣ್ಣೆ, 50 ಗ್ರಾಂ ಸ್ಪ್ರಿಂಗ್ ಆನಿಯನ್, ಒಂದಿಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, 25 ಗ್ರಾಂ ಬಿಸಿ ನೀರಲ್ಲಿ ಕದಡಿದ ಕಾರ್ನ್ ಸ್ಟಾರ್ಚ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಡಾರ್ಕ್ ಸೋಯಾ ಸಾಸ್.
ವಿಧಾನ : ಟೋಫುವನ್ನು ಕ್ಯೂಬ್ಸ್ ಆಗಿ ಕತ್ತರಿಸಿ. ಇದನ್ನು ಬಟರ್ ಪೇಪರ್ ಮೇಲಿರಿಸಿ, 15 ನಿಮಿಷ ಓವನ್‌ನಲ್ಲಿ ಬೇಕ್ ಮಾಡಿ. ಒಂದು ಬಾಣಲೆಯಲ್ಲಿ ಎಳ್ಳೆಣ್ಣೆ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ-ಶುಂಠಿ ಬೆರೆಸಿ ಕೆದಕಬೇಕು. ಆಮೇಲೆ ಒಂದೊಂದಾಗಿ ಹೆಚ್ಚಿದ ತರಕಾರಿ ಹಾಕಿ, 2-3 ನಿಮಿಷ ಬೇಯಿಸಿ. ನಂತರ ಸೋಯಾಸಾಸ್, ತುಸು ನೀರು ಬೆರೆಸಿ. ಇದು ಕುದಿಯತೊಡಗಿದಂತೆ ಕಾರ್ನ್ ಸ್ಟಾರ್ಚ್ ಬೆರೆಸಿಡಿ. ಆಮೇಲೆ ಇದಕ್ಕೆ ಟೋಫು ಹಾಕಿ. ಇದು 1 ನಿಮಿಷ ಬೇಯಲಿ. ನಂತರ ಅಗತ್ಯಕ್ಕೆ ತಕ್ಕಂತೆ ಒಗ್ಗರಣೆ ಕೊಡಿ, ಉಪ್ಪು, ಖಾರ ಸೇರಿಸಿ. ಟೋಫು ಒಡೆಯದಂತೆ ನಿಧಾನವಾಗಿ ಕೆದಕಿ ಕೆಳಗಿಸಿ. ಕೆಳಗಿಳಿಸಿದ ತಕ್ಷಣ ಇದನ್ನು ಬಿಸಿಯಾಗಿ ಸವಿಯಲು ಕೊಡಿ.
ಎಗ್ ಪಾರಿಜ್ ಭುರ್ಜಿ
ಸಾಮಗ್ರಿ : 6 ಮೊಟ್ಟೆ, 1 ಕಪ್ ಬ್ರೋಕನ್ ವೀಟ್ ಅನ್ನ, 3-4 ಹೆಚ್ಚಿದ ಹಸಿಮೆಣಸು, ಅರ್ಧ ಕಪ್ ಗಟ್ಟಿ ಹಾಲು, 2 ಈರುಳ್ಳಿ, 4 ಚಮಚ ತುಪ್ಪ, 1 ತುಂಡು ಶುಂಠಿ, ತುಸು ಹೆಚ್ಚಿದ ಕೊ.ಸೊಪ್ಪು, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಹೆಚ್ಚಿದ 2-3 ಟೊಮೇಟೊ, 2 ಚಿಟಕಿ ಅರಿಶಿನ, ತುಸು ಉಪ್ಪು ಖಾರ.
ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ. ಇದಕ್ಕೆ ಹಾಲು, ಉಪ್ಪು, ಮೆಣಸು ಹಾಕಿ ಗೊಟಾಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಶುಂಠಿ, ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ. ಅರಿಶಿನ ಹಾಕಿ ಕೆದಕಬೇಕು. ಕೊನೆಯಲ್ಲಿ ಮೊಟ್ಟೆ ಮಿಶ್ರಣ ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸಿ. ಭುರ್ಜಿ ರೆಡಿ ಆದಂತೆ, ಬ್ರೋಕನ್ ವೀಟ್ ಅನ್ನ ಬೆರೆಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದನ್ನು ಬಿಸಿಯಾಗಿ ಸವಿಯಲು ಕೊಡಿ.
ಓಟ್ಸ್ ಫ್ಲ್ಯಾಕ್ಸ್ ಇಡ್ಲಿ
ಸಾಮಗ್ರಿ : 1 ಕಪ್ ರೆಡಿ ಟು ಈಟ್ ಓಟ್ಸ್, 25 ಗ್ರಾಂ ಫ್ಲ್ಯಾಕ್ಸ್ ಸೀಡ್ಸ್ (ಅಗಸೆ ಬೀಜ), 1 ಕಪ್ ಕುಸುಬಲಕ್ಕಿ, ಅರ್ಧ ಕಪ್ ಉದ್ದಿನ ಬೇಳೆ, 2 ಸಣ್ಣ ಚಮಚ ಮೆಂತ್ಯ, 4 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಶುಂಠಿ.
ವಿಧಾನ : 4-5 ತಾಸು ಕುಸುಬಲಕ್ಕಿ, ಉದ್ದಿನ ಬೇಳೆ (ಜೊತೆಗೆ ಮೆಂತ್ಯ) ನೆನೆಹಾಕಿಡಿ. ಇದನ್ನು ಬೇರೆ ಬೇರೆಯಾಗಿ ರುಬ್ಬಿಕೊಂಡು ಬೆರೆಸಿಡಿ. ಓಟ್ಸ್ ಮತ್ತು ಅರ್ಧ ಭಾಗ ಅಗಸೆ ಬೀಜವನ್ನು 10 ನಿಮಿಷ ನೆನೆಹಾಕಿ ಉಪ್ಪಿನೊಂದಿಗೆ ರುಬ್ಬಿಕೊಂಡು ಎಲ್ಲವನ್ನು ಬೆರೆಸಿಡಿ. ಹೀಗೆ ಇಡೀ ರಾತ್ರಿ ಹುದುಗು ಬಂದ ನಂತರ ಮಾರನೇ ದಿನ ಇದಕ್ಕೆ ಹೆಚ್ಚಿದ ಶುಂಠಿ ಬೆರೆಸಿ, ಜಿಡ್ಡು ಸವರಿದ ಇಡ್ಲಿ ಸ್ಟ್ಯಾಂಡಿಗೆ ಹಿಟ್ಟು ಹಾಕಿಡಿ. ಇದರ ಮೇಲೆ ಉಳಿದ ಅಗಸೆ ಬೀಜ ಉದುರಿಸಿ, ಆವಿಯಲ್ಲಿ ಹದನಾಗಿ ಇಡ್ಲಿ ಬೇಯಿಸಿ. ಇದನ್ನು ಅಗಸೆ ಬೆರೆತ ಕಾಯಿ ಚಟ್ನಿ ಜೊತೆ ಬಿಸಿಯಾಗಿ ಸವಿಯಲು ಕೊಡಿ.
ಮಲ್ಟಿಗ್ರೇನ್ ತಾಲಿಪಿಟ್ಟು
ಸಾಮಗ್ರಿ : 2 ಕಪ್ ಗೋದಿಹಿಟ್ಟು, ಅರ್ಧರ್ಧ ಕಪ್ ಅಕ್ಕಿಹಿಟ್ಟು, ರಾಗಿಹಿಟ್ಟು, ಜೋಳದಹಿಟ್ಟು, ರವೆ, 1 ದೊಡ್ಡ ಸೌತೇಕಾಯಿ, 4 ಚಮಚ ಅಗಸೆ ಬೀಜ, 2 ಚಿಟಕಿ ಅರಿಶಿನ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ಹೆಚ್ಚಿದ ಶುಂಠಿ, ಕೊ.ಸೊಪ್ಪು, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಹಸಿ ಮೆಣಸು, ಮೊಸರು, ಕೊ.ಸೊಪ್ಪು, ಇಂಗು, 2 ಚಿಟಕಿ ಅಡುಗೆ ಸೋಡ, ತುಸು ತೆಂಗಿನ ತುರಿ.
ವಿಧಾನ : ಮೊದಲು ರವೆ ಜೊತೆ ಎಲ್ಲಾ ಬಗೆಯ ಹಿಟ್ಟಿಗೆ ತುರಿದ ಸೌತೇಕಾಯಿ, ತೆಂಗಿನಕಾಯಿ, ಹೆಚ್ಚಿದ ಹಸಿಮೆಣಸು, ಉಳಿದೆಲ್ಲ ಸಾಮಗ್ರಿ (ಒಗ್ಗರಣೆ ಬಿಟ್ಟು) ಸೇರಿಸಿ ಎಂದಿನಂತೆ ಅಕ್ಕಿರೊಟ್ಟಿಗೆ ಕಲಸುವ ಹಾಗೆ ಕಲಸಿಡಿ. ಇದನ್ನು ಎಣ್ಣೆ ಸವರಿದ ತವಾ ಮೇಲೆ ತಟ್ಟಿಕೊಂಡು, ಎಣ್ಣೆ ಬಿಡುತ್ತಾ ಹದನಾಗಿ ಎರಡೂ ಬದಿ ಬೇಯಿಸಿ. ಪಕ್ಕದ ಒಲೆಯಲ್ಲಿ ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ ಇತ್ಯಾದಿಗಳ ಒಗ್ಗರಣೆ ಕೊಡಿ. ಕೆಳಗಿಳಿಸುವ ಮುನ್ನ ಇದರ ಮೇಲೆ ಒಗ್ಗರಣೆ ಹರಡಿ, ಹೆಚ್ಚಿದ ಕೊ.ಸೊಪ್ಪು ಉದುರಿಸಿ. ಬಿಸಿ ಇರುವಾಗಲೇ ಅಗಸೆ ಬೀಜ ಬೆರೆತ ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ.