ದೀಪಿಕಾ ಪಡುಕೋಣೆ ನಟಿ
ಕನ್ನಡದ `ಐಶ್ವರ್ಯಾ’ ಚಿತ್ರದಿಂದ ಕೆರಿಯರ್ ಆರಂಭಿಸಿದ ನಟಿ ದೀಪಿಕಾ ಪಡುಕೋಣೆ, `ಓಂ ಶಾಂತಿ ಓಂ’ ಚಿತ್ರದಿಂದ ಬಾಲಿವುಡ್ನಲ್ಲಿ ಎಂಟ್ರಿ ಪಡೆದಳು. ಈಕೆ ಅತ್ಯಾಕರ್ಷಕ ಮಾತ್ರವಲ್ಲ ಜನಪ್ರಿಯ ನಟಿಯೂ ಹೌದು. ಈಕೆ ತನ್ನ ಕಠಿಣ ಪರಿಶ್ರಮದ ಕಾರಣ, ಇಂದು ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ನಲ್ಲೂ ವಿಶಿಷ್ಟ ನೆಲೆ ಕಾಣುವಂತಾಗಿದೆ. ಆಕೆ ಸದಾ ತನ್ನ ಕೆಲಸದ ಬಗ್ಗೆ ಫೋಕಸ್ಡ್ ಆಗಿರುತ್ತಾಳೆ. ಆಕೆ ತಾನು ಏನಂದುಕೊಂಡಿದ್ದಳೋ ಅದನ್ನು ನಿರೂಪಿಸಿ ತೋರಿಸಿದ್ದಾಳೆ. ದೀಪಿಕಾಳ ಆತ್ಮವಿಶ್ವಾಸ ಬಹಳ ಸ್ಟ್ರಾಂಗ್. ತನ್ನ ಕುಟುಂಬದ ಬಗ್ಗೆ ಅಪಾರ ಕಾಳಜಿ ವಹಿಸುವ ದೀಪಿಕಾ, ರಾಷ್ಟ್ರೀಯ ಖ್ಯಾತಿವೆತ್ತ ಬ್ಯಾಡ್ಮಿಂಟನ್ ಪ್ಲೇಯರ್, ಬೆಂಗಳೂರಿನಲ್ಲಿ ನೆಲೆಸಿರುವ ಪ್ರಕಾಶ್ ಪಡುಕೋಣೆ ಉಜಾಲಾರ ಪುತ್ರಿ. ಇವಳ ತಂಗಿ ಅನೀಷಾ ಗಾಲ್ಫ್ ಪ್ಲೇಯರ್. ಸ್ಪೋರ್ಟ್ಸ್ ಕುಟುಂಬಕ್ಕೆ ಸೇರಿದ ಈಕೆ ಹಿಂದೆ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಆಡಿದ್ದುಂಟು. ನಟನೆ ಇವಳ ಅಚ್ಚುಮೆಚ್ಚಿನ ಸಂಗತಿ. ಹೀಗಾಗಿ ಕ್ರೀಡೆ ತೊರೆದು ಬೆಳ್ಳಿ ಪರದೆಗೆ ಮಾರುಹೋದಳು.
ಯಶಸ್ಸಿನ ಪಯಣ
2013ನೇ ವರ್ಷ ದೀಪಿಕಾಳ ಪಾಲಿನ ಸುಗ್ಗಿ. ಈ ವರ್ಷ ಅವಳ `ರೇಸ್, ಏ ಜವಾನಿ ಹೈ ದೀವಾನಿ, ಚೆನ್ನೈ ಎಕ್ಸ್ ಪ್ರೆಸ್, ರಾಮಲೀಲಾ,’ ಇತ್ಯಾದಿ ರಿಲೀಸ್ ಆದ ಚಿತ್ರಗಳೆಲ್ಲ ಹಿಟ್ ಎನಿಸಿದವು. ಗಳಿಕೆಯಲ್ಲಿ ಈ ಎಲ್ಲಾ ಚಿತ್ರಗಳೂ 100 + ಕೋಟಿಯ ಕ್ಲಬ್ಗೆ ಸೇರಿದವು. 2014ರ ಅತಿ ದೊಡ್ಡ ಚಿತ್ರಿವೆನಿಸಿದ `ಹ್ಯಾಪಿ ನ್ಯೂ ಇಯರ್’ ಅಂತೂ 200+ ಕೋಟಿ ಕ್ಲಬ್ ಸೇರಿತು. ಇದಾದ ಮೇಲೆ ಬಂದ `ಬಾಜಿರಾವ್ ಮಸ್ತಾನಿ’ 300+ ಕೋಟಿ ಕ್ಲಬ್ ಹಾಗೂ ಇತ್ತೀಚಿನ `ಪದ್ಮಾವತ್’ ಅದೇ ನಿಟ್ಟಿನಲ್ಲಿ ಮುನ್ನುಗ್ಗಿತು ಎನ್ನಬಹುದು.
ದೀಪಿಕಾ ಹೇಳುತ್ತಾಳೆ, “ಯಾವುದೇ ಚಿತ್ರವಿರಲಿ ಅದನ್ನು ನನ್ನ ಚಾಯ್ಸ್ ಪ್ರಕಾರ ಆರಿಸುತ್ತೇನೆ. ಯಾವಾಗ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಎಷ್ಟು ಶ್ರಮ ವಹಿಸಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಪ್ರತಿ ಯಶಸ್ವೀ ಸಿನಿಮಾ ನನಗೊಂದು ಹೊಸ ಸವಾಲನ್ನು ಒಡ್ಡುತ್ತದೆ. ಆಗ ಪ್ರೇಕ್ಷಕರು ನನ್ನಿಂದ ಇನ್ನೂ ಹೆಚ್ಚು ಹೆಚ್ಚಾಗಿ ಬಯಸುತ್ತಾರೆ. ಅವರ ಆಸೆ ಪೂರೈಸುವುದು ನನ್ನ ಕರ್ತವ್ಯವಾಗುತ್ತದೆ. ಪ್ರತಿ ಚಿತ್ರದಿಂದ ನಾನು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿರುತ್ತೇನೆ ಎಂಬುದೇನೋ ನಿಜ, ಅದೇ ತರಹ ಪ್ರತಿ ಚಿತ್ರದಿಂದಲೂ ನಾನು ಏನಾದರೊಂದು ಹೊಸತನ್ನು ಕಲಿಯುತ್ತಿರುತ್ತೇನೆ.”
ತನ್ನ 10 ವರ್ಷಗಳ ಕೆರಿಯರ್ನಲ್ಲಿ ಈಕೆಗೆ `ಪದ್ಮಾವತ್’ ಅತಿ ಕಠಿಣ ಪರೀಕ್ಷೆಗಳನ್ನು ಒಡ್ಡಿದ ಚಿತ್ರ. ಚಿತ್ರದ ಶೂಟಿಂಗ್ನಿಂದ ರಿಲೀಸ್ ಆಗುವವರೆಗೂ ಈಕೆ ಅತಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಗುರಿಯಾಗಬೇಕಾಯಿತು. “ಚಿತ್ರದ ಕುರಿತಾಗಿ ಪೇಪರ್ನಲ್ಲಿ ಸಾಕಷ್ಟು ಹಸಿಬಿಸಿ ಚರ್ಚೆ ಇರುತ್ತಿತ್ತು, ಆಕ್ರೋಶ ವ್ಯಕ್ತಗೊಳ್ಳುತ್ತಿತ್ತು. ನಾನು ಮಾತ್ರವಲ್ಲದೆ ನಮ್ಮ ಇಡೀ ತಂಡ ಇದನ್ನು ಸಹಜವಾಗಿ ಸ್ವೀಕರಿಸಿತು. ಏಕೆಂದರೆ ಒಂದಲ್ಲ ಒಂದು ದಿನ ಈ ಚಿತ್ರ ರಿಲೀಸ್ ಆಗಿಯೇ ತೀರುತ್ತದೆಂದು ಎಲ್ಲರಿಗೂ ಗೊತ್ತಿತ್ತು. ಎಷ್ಟೋ ಸಲ ಕಲೆ ಹಾಗೂ ಕಲಾವಿದರ ಸ್ವಾತಂತ್ರ್ಯವನ್ನು ಈ ರೀತಿ ಹತ್ತಿಕ್ಕುವುದೇ ಎಂದು ಖೇದವಾಗುತ್ತಿತ್ತು. ಆದರೆ ಪ್ರಾಮಾಣಿಕವಾಗಿ ಮಾಡಿದ ಪ್ರಾರ್ಥನೆ ಎಂದೂ ಫಲಿಸದೇ ಹೋಗದು.”
ಜೀವನದ ಅಮೂಲ್ಯ ಕ್ಷಣಗಳು
ದೀಪಿಕಾ ಒಬ್ಬ ಯಶಸ್ವೀ ನಟಿ ಮಾತ್ರವಲ್ಲ, ತನ್ನ ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಆಕೆ ಪ್ರಕಾರ, “ಚಿತ್ರ ಫ್ಲಾಪ್ ಆದರೆ ದುಃಖವಾಗುತ್ತದೆ. ನಾನು ಪ್ರೇಕ್ಷಕರ ಅಪೇಕ್ಷೆ ಪೂರೈಸಲಿಲ್ಲವೇನೋ ಎನಿಸುತ್ತದೆ. ಆಗ ಕುಟುಂಬದವರೆಲ್ಲ ನನ್ನ ಪರ ನಿಂತು ಸಮಾಧಾನ ಹೇಳುತ್ತಾರೆ. ಹೆಸರು, ಹಣ, ಕೀರ್ತಿ, ಪ್ರತಿಷ್ಠೆ….. ಇವೆಲ್ಲ ಬರುತ್ತೆ ಹೋಗುತ್ತೆ. ಅದೇ ಚಿತ್ರದ ಸಕ್ಸೆಸ್ ಮನಸ್ಸಿಗೆ ಬಹಳ ಖುಷಿ ಅನ್ಸುತ್ತೆ. ನನ್ನ ಕುಟುಂಬದವರು `ಪದ್ಮಾವತ್’ ಚಿತ್ರ ನೋಡಿದಾಗ, ನನಗೆ ಏನೂ ಹೇಳಲಾಗದಷ್ಟು ಅವರು ಭಾವಾವೇಶಕ್ಕೆ ಒಳಗಾದರು. ನನಗೆ ಬಿಡುವು ಸಿಕ್ಕಾಗೆಲ್ಲ ಮುಂಬೈನಿಂದ ಬೆಂಗಳೂರಿಗೆ ಹಾರಿ, ನಮ್ಮ ಮನೆಯವರೊಂದಿಗೆ ಕಾಲ ಕಳೆಯುತ್ತೇನೆ. ಅಪ್ಪಾಜಿ ಜೊತೆ ಬ್ಯಾಡ್ಮಿಂಟನ್ ಆಡುವುದೆಂದರೆ ನನಗೆ ಪಂಚಪ್ರಾಣ! ಅದು ನನ್ನ ಜೀವನದ ಅಮೂಲ್ಯ ಕ್ಷಣಗಳು.”
ಸ್ವಾವಲಂಬನೆ ಅತಿ ಮುಖ್ಯ
ದೀಪಿಕಾ ತನ್ನ ಯಶಸ್ಸಿನ ಶ್ರೇಯಸ್ಸನ್ನು ಫ್ಯಾಷನ್ ಸ್ಟೈಲಿಸ್ಟ್ ಇಮೇಜ್ ಕನ್ಸಲ್ಟೆಂಟ್ ಪ್ರಸಾದ್ ಬಿಡ್ಡಪ್ಪನವರಿಗೆ ನೀಡುತ್ತಾಳೆ. ಏಕೆಂದರೆ ಅವರೇ ಈಕೆಗೆ ನಟಿಸಿ ಸೈ ಎನಿಸಿಕೊಳ್ಳಬಹುದೆಂದು ಆತ್ಮವಿಶ್ವಾಸ ತುಂಬಿದ್ದು. ಅದಾದ ಮೇಲೆ ಫರಾಖಾನ್, ಈಕೆಗೆ ಬಿಗ್ ಐಡೆಂಟಿಟಿ ಸಿಗುವಂಥ ಪಾತ್ರ ನೀಡಿ ಪ್ರೋತ್ಸಾಹಿಸಿದರು. ಬಿಡುವಿದ್ದಾಗ, ದೀಪಿಕಾ ಸಂಗೀತ ಕೇಳಿ, ಸ್ಕ್ರಿಪ್ಟ್ ಓದುತ್ತಾಳೆ, ಹೊರಗಿನ ಆಟ ಆಡುವುದು ಖುಷಿ ಎನ್ನುತ್ತಾಳೆ. ತನ್ನ ಜೀವನದಲ್ಲಿ ಎದುರಾಗುವ ಕಾಂಟ್ರೋವರ್ಸಿಗಳನ್ನು ಸಹಜವಾಗಿ ಸ್ವೀಕರಿಸುತ್ತಾಳೆ.
ಇಂದಿನ ತರುಣಿಯರು ಆತ್ಮವಿಶ್ವಾಸದಿಂದ ಸ್ವಾವಲಂಬಿಗಳಾಗಿರುವುದನ್ನು ಕಂಡು ಇವಳಿಗೆ ಹೆಮ್ಮೆ ಎನಿಸುತ್ತದೆ. ಅಂಥ ಮಹಿಳೆಯರ ಬಗ್ಗೆ ಓದಿ, ಅವರನ್ನು ಭೇಟಿಯಾಗುವುದೆಂದರೆ ಹೆಚ್ಚಿನ ಖುಷಿಯಂತೆ. ಮಹಿಳೆ ಹಿಂದಿನಿಂದಲೂ ಪ್ರತಿ ಮನೆಯ ಪ್ರಮುಖ ಸದಸ್ಯೆ ಆಗಿದ್ದಾಳೆ. ಆದರೆ ಯಾರೂ ಅವಳ ಬಗ್ಗೆ ಗಮನ ಕೊಡುವುದಿಲ್ಲ. ಹೀಗಾದಾಗ ಹಲವು ಸಲ ಆಕೆ ಮಾನಸಿಕ ಒತ್ತಡ ಸಹಿಸಬೇಕಾಗುತ್ತದೆ.
“ಹೀಗಾಗಿಯೇ ನಾನು `ದಿ ವೈರಲ್ ಲಾಫ್’ ಸಂಸ್ಥೆ ಸ್ಥಾಪಿಸಿದೆ. ಇದರಲ್ಲಿ ಪ್ರತಿ ಮಹಿಳೆ ತನ್ನ ಸಮಸ್ಯೆ ತಿಳಿಸಿ ಪ್ರೊಫೆಶನಲ್ ಹೆಲ್ಪ್ ಪಡೆಯಬಹುದು. ಈಗ ಇದನ್ನು ನಾನು ಕಾರ್ಪೊರೇಟ್ ಸೆಕ್ಟರ್ಗೂ ಕೊಂಡೊಯ್ಯುತ್ತೇನೆ. ಇದನ್ನು ಮುಂದೆ ತರಲು ನನ್ನೆಲ್ಲ ಸಮಯ ಮೀಸಲಿಡುತ್ತೇನೆ. ಆ ಮೂಲಕ ನಾನು ಜನರ ಸಾಮಾಜಿಕ ದೃಷ್ಟಿಕೋನ ಬದಲಾಯಿಸಲು ಪ್ರಯತ್ನಿಸುತ್ತೇನೆ,” ಎನ್ನುತ್ತಾಳೆ.
– ಸೀಮಾ