ಖುಲ್ಲಂಖುಲ್ಲಾ ಡಿಂಗ್ ಡಾಂಗ್!
ಬಾಲಿವುಡ್‌ನ ಎಲ್ಲಾ ಜೋಡಿಗಳೂ ತಮ್ಮ ಸಂಬಂಧವನ್ನು ಮೀಡಿಯಾದಿಂದ ಗುಟ್ಟಾಗಿರಿಸಲು ಬಯಸಿದರೆ ಈ ಜೋಡಿ ಮಾತ್ರ ಖುಲ್ಲಂಖುಲ್ಲಾ ತಮ್ಮ ಪ್ರೇಮ ಪ್ರದರ್ಶಿಸುತ್ತಾ ಊರಿಗೆಲ್ಲ ಡಂಗೂರ ಸಾರುತ್ತಿದ್ದಾರೆ, ಅದುವೆ ಮುಗ್ಧಾ ಗೋಡ್ಸೆ ಹಾಗೂ ರಾಹುಲ್ ದೇವ್ ಜೋಡಿಯದು. ಇತ್ತೀಚೆಗಷ್ಟೇ ಬೀಚ್ ಬಳಿ ನಲಿದಾಡುತ್ತಿದ್ದ ಈ ಜೋಡಿಯ ಫೋಟೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿ, ಎಲ್ಲೆಲ್ಲೂ ಚರ್ಚೆ ನಡೆಯಿತು. ಮದುವೆ ದಿನಾಂಕದ ಬಗ್ಗೆ ಮಾತ್ರ ಇಬ್ಬರೂ ಗಪ್ ಚುಪ್!
`ತನು ವೆಡ್ಸ್ ಮನು' ಸೀರೀಸ್‌ನಿಂದ ಕಂಗನಾ ಔಟ್
ಅತಿಯಾದ ಮಾತು ಬಿಟ್ಟಿ ಪಬ್ಲಿಸಿಟಿಯನ್ನೇನೋ ನೀಡುತ್ತದೆ, ಆದರೆ ಅದರ ಪರಿಣಾಮ ಮಾತ್ರ ಪರ್ಸನಲ್ ಲೈಫ್ ಜೊತೆಯಲ್ಲೇ ಕೆರಿಯರ್ ಮೇಲೂ ಆಗುತ್ತದೆ. ಕಳೆದ ವರ್ಷ ಕಂಗನಾ ತನ್ನ ಇಂಥದೇ ಹುಚ್ಚು ಮಾತುಗಳಿಂದ ಮೀಡಿಯಾದಲ್ಲಿ ಮಿಂಚಿದ್ದಳು. ಅದರ ಪರಿಣಾಮವಾಗಿ ಜನ ಈಕೆಯನ್ನು ಪಾರ್ಟಿ, ಈವೆಂಟ್ ಶೋಗಳಿಗೆ ಕರೆಯುವುದನ್ನೇ ಬಿಟ್ಟರು ಇತ್ತೀಚಿನ ಸುದ್ದಿ ಎಂದರೆ ಆನಂದ್ ರಾಯ್‌ರ `ತನು ವೆಡ್ಸ್ ಮನು' 1, 2 ಎರಡರಲ್ಲೂ ಈಕೆಗೆ ಉತ್ತಮ ಅವಕಾಶಗಳಿತ್ತು. ಆದರೆ ಈಗ ಅದರ 3ನೇ ಭಾಗದಲ್ಲಿ ನಿರ್ಮಾಪಕ ನಿರ್ದೇಶಕರಿಗೆ ಈಕೆ ಬೇಕಾಗಿಲ್ಲವಂತೆ! ಇದರ 2ನೇ ಭಾಗದ ಶೂಟಿಂಗ್‌ನಿಂದಲೇ ನಿರ್ದೇಶಕ ಆನಂದ್ ಹಾಗೂ ಕಂಗನಾ ಮಧ್ಯೆ ಜಗಳ ಶುರುವಾಗಿತ್ತು. ಈಕೆಯ ನಾನಾ ಬಗೆಯ ನಖ್ರಾ ಸಹಿಸಿ ಸಾಕಾದ ಅವರು, ಈಕೆಗೆ ಅಂದೇ `ಖೊಕ್' ಕೊಡಲು ನಿರ್ಧರಿಸಿದ್ದರಂತೆ.
ಕುಳ್ಳನಾಗಿ ಮತ್ತೆ ಎತ್ತೆರಕ್ಕೇರಲಿರುವ ಶಾರೂಖ್
ತನ್ನ ಕೆರಿಯರ್‌ನ ಇಳಿಮುಖದಲ್ಲಿರುವ ಶಾರೂಖ್, ಆನಂದ್ ರಾಯ್‌ರ `ಝೀರೋ' ಚಿತ್ರವನ್ನೇ ನಂಬಿಕೊಂಡಿದ್ದಾನೆ. ಈ ಚಿತ್ರ ಗೆದ್ದರೆ ಮಾತ್ರ ಈತನ ಉಳಿವು ಎಂದಾಗಿದೆ. ಖಾನ್‌ತ್ರಯರಲ್ಲಿ ಆಮೀರ್, ಸಲ್ಮಾನ್‌ರ ಚಿತ್ರಗಳ ಗಳಿಕೆಯ ಆಸುಪಾಸಿಗೂ ನುಸುಳಲಾರದ ಗತಿ ಈತನ ಚಿತ್ರಗಳಿಗೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಚಿತ್ರ ರಿಲೀಫ್ ನೀಡಬಹುದೇ.....? ಟೈಟಲ್ ಅನ್ವರ್ಥಕ ಆಗಬಾರದಷ್ಟೆ.
ವರ ರೆಡಿ, ಆದರೆ ಮನೆಯವರು ಒಪ್ಪಬೇಕಲ್ಲ
ಡ್ಯಾಶಿಂಗ್ ಹೀರೋ ವರುಣ್ ಈಗಾಗಲೇ `ಹಂಪ್ಟಿ ಶರ್ಮ ಕೀ ದುಲ್ಹನಿಯಾ, ಬದ್ರೀನಾಥ್ ಕೀ ದುಲ್ಹನಿಯಾ' ದಂಥ ಚಿತ್ರಗಳಲ್ಲಿ ವರನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ. ಆದರೆ ನಿಜ ಜೀವನದಲ್ಲಂತೂ ವರನಾಗಿ ವಧು ಹುಡುಕುವುದರಲ್ಲಿ ಫ್ಲಾಪಾಗಿದ್ದಾನೆ. ಇವನ ವಧು ಯಾರಪ್ಪ.... ಅಂದಿರಾ? ಆಲಿಯಾ ಬೇಬಿ ಅಂತೂ ಖಂಡಿತಾ ಅಲ್ಲ ಬಿಡಿ. ಇತ್ತೀಚೆಗೆ ವರುಣ್ ಫ್ಯಾಷನ್ ಡಿಸೈನರ್ ನತಾಶಾಳ ಹಿಂದೆ ಭಾರಿ ಸುತ್ತುತ್ತಿದ್ದ. ಒಂದು ಸಂದರ್ಶನದಲ್ಲಿ ತನ್ನ ದುಃಖ ಹಂಚಿಕೊಳ್ಳುತ್ತಾ ಈತ, ``ನಾನೇನೋ ವರನಾಗಿ ಕುದುರೆ ಹತ್ತಲು ರೆಡಿ. ಆದರೆ ನಮ್ಮ ಮನೆಯವರಿಗೆ ಯಾವ ವಧು ಒಪ್ಪಿಗೆ ಆಗುತ್ತಿಲ್ಲವಲ್ಲ.....?'' ಎನ್ನುವುದೇ?
ಈಶಾಳಿಗೆ ಇದೆಂದರೆ ಅಲರ್ಜಿಯಂತೆ
ಕಳೆದ ವರ್ಷ ಈಶಾಳದೇ ಗಾಸಿಪ್ಪೋ ಗಾಸಿಪ್ಪು! ಮೊದಲು ತನ್ನ ಹಾಟ್ ಶೂಟ್‌ನಿಂದ ಸುದ್ದಿಯಲ್ಲಿ ಮಿಂಚಿದಳು. ಇತ್ತೀಚೆಗೆ ಈಕೆ ಇನ್‌ಸ್ಟಾಗ್ರಾಂನಲ್ಲಿ ತನ್ನ ಒಂದು ವಿಡಿಯೋ ಪೋಸ್ಟ್ ಮಾಡಿದ್ದಳು. ಅದರಲ್ಲಿ ಒಬ್ಬನನ್ನು ತೋರಿಸುತ್ತಾ ಈಕೆ, ``ಐ ಹೇಟ್ ದಿಸ್ ಮ್ಯಾನ್!'' ಎನ್ನುತ್ತಾಳೆ. ಆದರೆ ಇವಳಿಗೆ ಇಷ್ಟು ಕೋಪ ತರಿಸಿದ ಈ ಮನುಷ್ಯ ಯಾರು? ಅಸಲಿಗೆ ಈತ ಈಶಾಳ ಫಿಟ್‌ನೆಸ್ ಟ್ರೇನರ್ ವಿಕಾಸ್. ಇವಳ ಮೈಯಿಂದ ಬೆವರು ಹರಿಸುವುದೇ ಅವನ ಕೆಲಸ. ಹಲವು ದಿನಗಳಿಂದ ಇವಳ ಕೆರಿಯರ್ ತಣ್ಣಗಾಗಿದೆ. ಹಿಂದಿನ `ಬಾದ್‌ಶಾಹೋ' ಸಂಪೂರ್ಣ ತೋಪಾಗಿತ್ತು, `ರುಸ್ತುಂ' ಅಂತೂ ಇಂತೂ ಒಂದಿಷ್ಟು ಹೆಸರು ತಂದುಕೊಟ್ಟಿತು. ಕೆಲವು ದಿನಗಳ ಹಿಂದೆ ಈಕೆ ನ್ಯಾಪೋಟಿಸಂ ಬಗ್ಗೆ ಕಮೆಂಟ್ ಮಾಡುತ್ತಾ, ತನ್ನನ್ನು ಈಗಲೂ ಇಂಡಸ್ಟ್ರಿಯಲ್ಲಿ ಔಟ್ ಸೈಡರ್‌ನಂತೆ ಟ್ರೀಟ್ ಮಾಡುತ್ತಾರೆ, ಏಕೆಂದರೆ ತನ್ನ ಹೆಸರಿನ ಜೊತೆ ಯಾವುದೇ ಸ್ಟಾರ್ ಸರ್‌ನೇಮ್ ಇಲ್ಲವಲ್ಲ.... ಎಂದು ವ್ಯಂಗ್ಯವಾಡುತ್ತಾಳೆ.