ಕಥೆಬಿಂಡಿಗನವಿಲೆ ಭಗವಾನ್‌ 

 ಆದರೆ ಇದನ್ನು ಅವರ ಮಗ ಸುನೀಲ್ ಮತ್ತು ಸೊಸೆ ನಳಿನಿ ವಿರೋಧಿಸಿ ಶವ ಹಿಂಪಡೆಯಲು ಯತ್ನಿಸಿದಾಗ, ಆಸ್ಪತ್ರೆಯ ಸಂಸ್ಥಾಪಕರಾದ ಡಾ. ವಾಮನ್ರಾವ್ ದಂಪತಿಗಳು ಅದನ್ನು ತೀವ್ರವಾಗಿ ಖಂಡಿಸಿದರು. ಆಗ ಸುನೀಲ್ ಯಾವ ವಾದ ಮಂಡಿಸಿದ? ಮುಂದೆ ನಡೆದದ್ದೇನು…..?

“ನೀವು ಹೀಗೆ ಮಾತು ಬದಲಿಸಿದರೆ ಹೇಗೆ? ನಿಮ್ಮ ತಂದೆಯವರಿಗೆ, ನಿಮಗೆ, ನಿಮ್ಮ ಮಕ್ಕಳಿಗೆ ನಾನು ಅವತ್ತೇ ಹೇಳಿದ್ದೆ….. ಚೆನ್ನಾಗಿ ಯೋಚಿಸಿ, ಬೇಕಾದ್ರೆ ವಾರ ಟೈಮು ತಗೋಳಿ ಅಂತ…. ಈ ತರ ಅದ್ರೆ ನಮಗೆ ಬಹಳ ತೊಂದರೆ ಆಗುತ್ತೆ.”

ಸುನೀಲ್ ‌ಮತ್ತು ಅವನ ಪತ್ನಿ ನಳಿನಿ ಮೊದಲೇ ದುಃಖಿತರಾಗಿದ್ದರು. ಕಣ್ಣು ಕಾರಂಜಿಯಾಗಿತ್ತು. ಜೈ ಜೈ ಆಸ್ಪತ್ರೆಯ ನಿರ್ದೇಶಕ ಹಾಗೂ ಮುಖ್ಯ ಸರ್ಜನ್‌ ಡಾ. ವಾಮನ್‌ರ ಖಡಕ್‌ ಮಾತು ಇನ್ನು ಅರಗಿಸಿಕೊಳ್ಳುವುದು ಅವರಿಗೆ ಬಹು ಕಷ್ಟವಾಗಿತ್ತು. ವಾಮನ್ ಪಕ್ಕದಲ್ಲಿ ಕುಳಿತಿದ್ದ ಅವರ ವೈದ್ಯ ಪತ್ನಿ ಡಾ. ಸುಧಾ ವಾಮನ್‌ ದುರುಗುಟ್ಟಿ ನೋಡುತ್ತ, “ನೋಡಿ, ನಾವು ಹದಿನೆಂಟು ವರ್ಷದಿಂದ ಈ ನರ್ಸಿಂಗ್‌ ಹೋಮ್ ನಡೆಸುತ್ತಿದ್ದೇವೆ, ಒಮ್ಮೆಯೂ ಹೀಗೆ ಮಾತು ತಪ್ಪಿದವರನ್ನು ನಾವು ಕಂಡಿಲ್ಲ. ಅದೂ ಇಂಥ ಅತಿ ಮಹತ್ವದ ವಿಷಯದಲ್ಲಿ. ನಿಮ್ಮಿಂದ ನಮಗೆ, ನಮ್ಮ ಆಸ್ಪತ್ರೆಗೆ ಕೆಟ್ಟ ಹೆಸರು ಬರುವುದು ಬೇಡ. ನೀವು ನಿಮ್ಮ ಮುಚ್ಚಳಿಕೆಯನ್ನು ಪಾಲಿಸಿ. ಇತರರಿಗೂ ಮಾದರಿಯಾಗಿ ಬೀ ಡೀಸೆಂಟ್‌, ಸ್ಟಿಕ್‌ ಟು ಯುವರ್‌ ವರ್ಡ್ಸ್ ಪ್ಲೀಸ್‌,” ಎಂದರು. ಅವರಿಂದಾದರೂ ಕನಿಕರ ಉಸಿರಾಡೀತೆಂದು ಭಾವಿಸಿದ್ದ ನಳಿನಿ ತನ್ನ ಕಣ್ಣುಗಳಿಂದ ಚಿಮ್ಮುತ್ತಿದ್ದ ನೀರನ್ನು ಸೆರಗಿನಿಂದ ಒತ್ತಿಕೊಂಡಳು. ನಿಜವೇ, ಸಂಕಟ ಅದರಲ್ಲೂ ಸಾವು ಹೊತ್ತು ತರುವಂಥದ್ದು ಅದೆಷ್ಟು ಗಾಢ ಅನುಭವಿಸಿದವರಿಗೇನೇ ಗೊತ್ತು. ತಮ್ಮ ತಂದೆಯ ಮೃತದೇಹವನ್ನು ತಾವು ವೈದ್ಯರಾಗಿದ್ದ ಮೆಡಿಕಲ್ ಕಾಲೇಜಿಗೇ ದಾನ ಮಾಡಿ ಅದನ್ನು ಕೊಯ್ದು ವಿವಿಧ ಭಾಗಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರಂತೆ ಒಬ್ಬ ವೈದ್ಯ! ಅಬ್ಬಾ! ಅವರ ಮಾನಸಿಕ ಸಮತೋಲನ ಧೈರ್ಯ, ವೃತ್ತಿ ನಿಷ್ಠೆ, ಸಂಕಲ್ಪಕ್ಕೆ ಸಾಟಿ ಯಾವುದು? ಸತ್ತ ನಂತರ ಶವ ಹೂಳುವುದು, ಸುಡುವುದು ಆಮೇಲೆ ಗೊತ್ತೇ ಇದೆ. ಮಣ್ಣಲ್ಲಿ ಮಣ್ಣಾದರು, ಪಂಚಭೂತಗಳಲ್ಲಿ ಲೀನವಾದರು, ತುಂಬಲಾರದ ನಷ್ಟ. ಅವರಿನ್ನು ಕೀರ್ತಿಶೇಷರು ಮುಂತಾದ ಸಿದ್ಧ ಮಾದರಿಯ ನುಡಿ ನಮನಗಳು, ಔಪಚಾರಿಕ ಶ್ರದ್ಧಾಂಜಲಿ ಸಭೆಗಳು. ಇದ್ದಾಗ ಮಾರಕ. ಸತ್ತ ಮೇಲೆ ಸ್ಮಾರಕ ಎನ್ನುತ್ತಾರೆ. ಯಾರೇ ವ್ಯಕ್ತಿ ಬದುಕಿದ್ದಾಗ ಏನೇನು? ಎಷ್ಷೆಷ್ಟು ಒಳ್ಳೆಯದು ಅಥವಾ ಕೆಟ್ಟದ್ದು ಎಸಗಿರುತ್ತಾರೋ ಪಕ್ಕಕ್ಕಿಡೋಣ. ಸಾವಿನ ನಂತರ ಅವರ ಇಡೀ ಶರೀರ ಅಥವಾ ಅವರ ಕಣ್ಣುಗಳು ಮಾತ್ರವೇ ಇರಲಿ, ಬದುಕು ಕಟ್ಟಿಕೊಳ್ಳುವವರಿಗೆ ದಾರಿ ಅಲ್ಲವೇ? ವೈದ್ಯ ವಿಜ್ಞಾನದ ಪ್ರಗತಿಯನ್ನು ಎಷ್ಟು ಕೊಂಡಾಡಿದರೂ ಸಾಲದು. ನೀನ್ಯಾರಿಗಾದೆಯೋ ಎಲೆ ಮಾನವ, ಮರದ ಕಾಂಡ ಹಲವು ವರ್ಷ ತೊಲೆಯಾಗುಳಿಯಿತು ನೀನು ಸತ್ತ ನಂತರ ತಾನೂ ಇರಲಿಲ್ಲ ಉಪಕಾರಿಯಾಗಿ ಎಂಬ ಪದ್ಯದ ಸಾಲುಗಳಿಗೆ ಸವಾಲಿನಂತಿವೆ, ಆಧುನಿಕ ಸಂಶೋಧನೆಗಳು. ಇದೋ ಇತ್ತ ಗಮನಿಸಿ, ಅಳಿದ ಮೇಲೆ ಮನುಷ್ಯ ಕೂಡ ಉಪಯುಕ್ತಿ ಎಂದು ಸಾರುತ್ತವೆ, ಸಾಬೀತುಪಡಿಸುತ್ತವೆ.

ಸುನೀಲ್ ‌ತಂದೆ ಹಯವದನ ರಾವ್ ಹೃದಯಾಘಾತಕ್ಕೊಳಗಾಗಿ ಅದೇ ನರ್ಸಿಂಗ್‌ ಹೋಂಗೆ ದಾಖಲಾಗಿದ್ದರು. ಒಂದು ವಾರ ಐ.ಸಿ.ಯು.ನಲ್ಲಿದ್ದರು. ವಯಸ್ಸು 74. ಇದು ನಾಲ್ಕನೇ ಬಾರಿ ಹೃದಯಾಘಾತವಾಗಿರುವುದರಿಂದ ನಮ್ಮ ಕೈಲಿ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೇವೆ. ಮೇಲೆ ದೇವರು ಅಂತ ಒಬ್ಬ ದೊಡ್ಡ ಡಾಕ್ಟರ್‌ ಇದಾನೆ, ನೋಡೋಣ ಎಂದಿದ್ದರು ವಾಮನ್‌. ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ವಾಮನ್‌ ಪಿ.ಯು.ಸಿ ಓದುತ್ತಿದ್ದಾಗ ರಾವ್ ‌ಅವರಿಗೆ ಗುರುಗಳಾಗಿದ್ದರು.

ಸುನೀಲ್‌ಗೆ ಏನನ್ನಿಸಿತೋ ಏನೋ ತಂದೆಯವರ ಆರೋಗ್ಯ, ಚಿಕಿತ್ಸೆಗೆ ಸಂಬಂಧಿಸಿದ ಹಿಂದಿನ ಎಲ್ಲ ಕಡತಗಳನ್ನೂ ಸುನೀಲ್ ಡಾಕ್ಟರ್‌ ಗೆ ನೀಡಿದ್ದ. ಆ ಕಡತದಲ್ಲಿ ಒಂದು ಹಾಳೆ ಮಾತ್ರ ಬಹು ಮುಖ್ಯವಾಗಿತ್ತು. ಅದುವೇ `ದೇಹ ದಾನ’ ಸಮ್ಮತಿ ಪತ್ರದ ಜೆರಾಕ್ಸ್ ಪ್ರತಿ. `ನಾನು ನನ್ನ ನಿಧನಾನಂತರ ನನ್ನ ದೇಹವನ್ನು ಜೈ ಜೈ ಆಸ್ಪತ್ರೆಗೆ ಸ್ವ ಇಚ್ಛೆಯಿಂದ ಸಮರ್ಪಿಸುತ್ತಿದ್ದೇನೆ. ಇದಕ್ಕೆ ನನ್ನ ಹಾಗೂ ನನ್ನ ಕುಟುಂಬಸ್ಥರ ಒಪ್ಪಿಗೆ ಇರುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳು ನನ್ನ ದೇಹವನ್ನು ತಮ್ಮ ಜ್ಞಾನಾರ್ಜನೆಗೆ ಯಾವುದೇ ಬಗೆಯಲ್ಲಾದರೂ ಬಳಸಿಕೊಳ್ಳಬಹುದು…..’ ಎಂಬಿತ್ಯಾದಿ ಷರತ್ತುಳ್ಳ ಸಮ್ಮತಿ ಪತ್ರಕ್ಕೆ ಎರಡು ವರ್ಷಗಳ ಹಿಂದೆಯೇ ಹಯವದನ ರಾವ್ ‌ಸಹಿ ಹಾಕಿದ್ದರು. ರಾವ್ ವೃತ್ತಿಯಲ್ಲಿ ಗಣಿತದ ಪ್ರೊಫೆಸರ್‌. ಜೊತೆಗೆ ಸಮಾಜಮುಖಿ ನಿಲುವುಗಳನ್ನು ಹೊಂದಿದ್ದರು. ನಿಲುವಿನಂತೆ ನಡೆದರು. ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ತಮ್ಮ ಸಂಬಳದ ಕಾಲು ಭಾಗವನ್ನು ಪುಸ್ತಕ, ಫೀಸು ಕೊಡಿಸಲು ಮೀಸಲಿಟ್ಟ ಉದಾರಿ. ನಾನೇನು ಗಾಂಧಿಯೂ ಅಲ್ಲ, ಬುದ್ಧನೂ ಅಲ್ಲ. ಇಷ್ಟು ನನ್ನಿಂದ ಅಗತ್ಯವಿದ್ದವರಿಗೆ ನೀಡಲು ಸಾಧ್ಯ. ಅದಕ್ಕಾಗಿ ಈ ಕಾರ್ಯ ಎಂದು ನಮ್ರವಾಗಿ ನುಡಿಯುತ್ತಿದ್ದ ಜೀವ.

ಸುನೀಲ್ ‌ಒಬ್ಬನೇ ಮಗ. ಅವರ ಅರ್ಧಾಂಗಿ ಮಂಗಳಮ್ಮ ಕ್ಯಾನ್ಸರ್‌ನಿಂದ ತೀರಿಹೋಗಿ ಹತ್ತು ವರ್ಷಗಳಾಗಿವೆ. ಮಗ, ಸೊಸೆ ಶುರು ಮಾಡಿದ ನರ್ಸಿಂಗ್‌ ಹೋಮ್ ಸಾವಿರಾರು ಜನಕ್ಕೆ ಉಪಯುಕ್ತವಾಗುತ್ತಿರುವುದನ್ನು ಇಷ್ಟು ದಿನ ನೋಡಿದ್ದೆ ನನ್ನ ಭಾಗ್ಯ. ನಾನಿನ್ನು ಧನ್ಯ. ಹೊರಡಲಪ್ಪಣೆಯೇ ಎಂದು ಹೇಳುತ್ತಲೇ ಅವರು ಕೊನೆಯುಸಿರೆಳೆದಿದ್ದರು. ಈಗ ಅವರ ಪತಿಯ ಸರದಿ. ಇನ್ನು ವೆಂಟಿಲೇಟರ್‌ ಇದ್ದರೇನು? ಇಲ್ಲದಿದ್ದರೇನು ಎನ್ನುವಂತಹ ಸ್ಥಿತಿ ದಾಖಲಾದ ಏಳನೆಯ ದಿನವಾದ ಅಂದು ಮಧ್ಯಾಹ್ನ ದಾಟುತ್ತಲೇ ಒದಗಿತ್ತು. ನರ್ಸ್‌ ವೈದ್ಯರ ಆದೇಶ ನಿರೀಕ್ಷಿಸುತ್ತಿದ್ದರು.

ಸ್ವತಃ ಡಾ. ವಾಮನ್‌ ವಾರ್ಡ್‌ಗೆ ಬಂದರು. ಸರಿ, ಇದು ಬಾಡಿ ಡೊನೇಶನ್‌ ಕೇಸ್‌. ಅವರ ಮಗ, ಸೊಸೆ ಹೊರಗಿದ್ದಾರೆ. ಅವರಿಗೆ ವಿಷಯ ತಿಳಿಸಿ ಅವರನ್ನು ನನ್ನ ಚೇಂಬರ್‌ಗೆ ಬರಲು ಹೇಳಿ ಎಂದು ಹೇಳಿದರು.

ಮಹಾನಗರದ ಪ್ರತಿಷ್ಠಿತ ಬಡಾವಣೆಯಲ್ಲಿರುವ ಜೈ ಜೈ ನರ್ಸಿಂಗ್‌ ಹೋಮ್ ಪ್ರಾರಂಭಗೊಂಡ ಲಾಗಾಯ್ತಿನಿಂದ ಆಸುಪಾಸಿನಲ್ಲಿ ಬಹು ಬೇಗನೆ ಹೆಸರುವಾಸಿಯಾಯಿತು. ಡಾ. ವಾಮನ್‌ ದಂಪತಿಗಳು ಮೊದಲು ಸರ್ಕಾರಿ ಸೇವೆಯಲ್ಲಿದ್ದರು. ದಶಕದ ಅವಧಿಗೆ ಸೇವೆ ಸಲ್ಲಿಸಿ ತಮ್ಮದೇ ನರ್ಸಿಂಗ್‌ ಹೋಮ್ ಸ್ಥಾಪಿಸಿದರು. 40 X 60 ಸೈಟ್‌ನಲ್ಲಿ ಮೂರು ಮಹಡಿಗಳ ಸ್ವಂತ ಕಟ್ಟಡ. 35 ಬೆಡ್‌ಗಳಿದ್ದು ಮಲ್ಟಿ ಸ್ಪೆಷಾಲಿಟಿ ಮಟ್ಟಕ್ಕೇರಿದೆ ಎನ್ನಬಹುದು. ಸುಸಜ್ಜಿತಗೊಳಿಸಲು ಭಾರಿ ಸವಾಲು ಆಗಿದೆ ಎನ್ನುವುದು ಬೇರೆ ಮಾತು.

ಆದರೆ ಒಂದು ವರ್ಷದ ಹಿಂದೆ ಮೂರೇ ತಿಂಗಳ ಅವಧಿಯಲ್ಲಿ ಎರಡು ಬಾರಿ ಇಲ್ಲಿನ ವೈದ್ಯರ ಮತ್ತು ಸಿಬ್ಬಂದಿ ವರ್ಗದವರ ಆಕ್ರೋಶ ಎದುರಿಸಬೇಕಾಯಿತು. ನಮಗೆ ಸಂಬಳ ಹೆಚ್ಚಿಸಿ, ನಮ್ಮ ಪರಿಶ್ರಮದಿಂದಲೇ ತಾನೇ ನಿಮ್ಮ ಸಂಸ್ಥೆಗೆ ಕೀರ್ತಿ, ಆದಾಯ ಎನ್ನುವುದು ಅವರ ವಾದ. ಖಂಡಿತ ಆಗಲಿ, ಕೊಂಚ ಸಹನೆ ವಹಿಸಿ, ನನಗೆ ನಾನಾ ಬ್ಯಾಂಕುಗಳಿಂದ ಲಕ್ಷ ಲಕ್ಷವೇನು ಕೋಟಿಗಳೇ ಸಾಲವಾಗಿದೆ. ಸ್ವಲ್ಪ ಚೇತರಿಸಿಕೊಂಡು ನಿಮ್ಮ ಬೇಡಿಕೆಗಳತ್ತ ಗಮನವಹಿಸಲಾಗುತ್ತದೆ  ಎಂದು ಡಾ. ವಾಮನ್‌ ದಂಪತಿಗಳ ಭರವಸೆ ಅವರಿಗೆ ಪಥ್ಯವಾಗಲಿಲ್ಲ.

ಕಡೆಗೆ ಒಂದಷ್ಟು ತತ್ಕಾಲ ಹೆಚ್ಚಳ ಮಾಡಲಾಗಿತ್ತು. ಇಷ್ಟಾದರೂ ಅಸಮಾಧಾನ. ಸಣ್ಣಪುಟ್ಟ ಅನಾನುಕೂಲಗಳಿಗೂ ಗುಂಪುಗೂಡುವುದು. ಇದರ ಬಿಸಿ ರೋಗಿಗಳನ್ನು ತಟ್ಟಿತ್ತು. ಸಕಾಲಕ್ಕೆ ಔಷಧೋಪಚಾರ ಸಿಗದೆ ಒಬ್ಬ ವೃದ್ಧ, ಒಬ್ಬಳು ಗರ್ಭಿಣಿ ಅಸುನೀಗಿದ ದಾರುಣ ಪ್ರಸಂಗ ನಡೆಯಿತು. ಡಾ. ವಾಮನ್‌, ಸುಧಾ ಕೊಂಚ ಹೈರಾಣಾದರೂ ಇಂಥವೆಲ್ಲ ತಮ್ಮನ್ನು ಮತ್ತಷ್ಟು ಗಟ್ಟಿಯಾಗಿಸುವ ದಾಟಿಯೇ ಹೋಗಬೇಕಾದ ಹೆಜ್ಜೆಗಳೆಂದು ಭಾವಿಸಿ ವಿಚಲಿತರಾಗದೆ ಮುನ್ನಡೆದರು. ಪ್ರತೀ ಶನಿವಾರ ಸಂಪನ್ಮೂಲ ವ್ಯಕ್ತಿಗಳಿಂದ ಪ್ರವಚನಗಳನ್ನು ಏರ್ಪಡಿಸಿ ವೈದ್ಯ ವೃತ್ತಿ ಎಷ್ಟು ಘನತೆಯುಳ್ಳದ್ದು, ರೋಗಿಯನ್ನು ನಿರೋಗಿಯನ್ನಾಗಿಸುವ ಕೈಂಕರ್ಯ ತರುವ ನೆಮ್ಮದಿ ಸಂಬಳ ಭತ್ಯೆಗೆ ಮೀರಿದ್ದು ಎಂಬಿತ್ಯಾದಿ ಮೌಲ್ಯಗಳನ್ನು ತಕ್ಕಮಟ್ಟಿಗೆ ವೈದ್ಯರುಗಳಲ್ಲಿ, ಸಿಬ್ಬಂದಿ ವರ್ಗದವರಲ್ಲಿ ಮನದಟ್ಟು ಮಾಡಿಸುವುದರಲ್ಲಿ ಯಶಸ್ವಿಯಾದರು.

ಇದು ಎಷ್ಟರಮಟ್ಟಿಗೆ ಫಲ ನೀಡಿತೆಂದರೆ ಮಹಾನಗರ ಮಾತ್ರವಲ್ಲದೆ, ಸುತ್ತಲ ಹೊರ ಊರುಗಳ ಬಹುತೇಕ ನಾಗರಿಕರು ತಾವು ಸತ್ತರೆ ತಮ್ಮ ಶರೀರ ಜೈ ಜೈ ನರ್ಸಿಂಗ್‌ ಹೋಮಿಗೆ ದಾನ ಮಾಡುವುದೇ ಸರಿಯೆಂದು ತೀರ್ಮಾನಿಸತೊಡಗಿದರು. ಆ ಸಂಬಂಧ ಸಹಿ ಮಾಡಲು ನಾನು ತಾನೆಂದು ಧಾವಿಸುವುದು ಮಾಮೂಲಾಯಿತು. ಆದರೂ ವೈದ್ಯರಲ್ಲಿ, ಸಿಬ್ಬಂದಿ ವರ್ಗದವರಲ್ಲಿ ಅತೃಪ್ತಿ ಹೊಗೆಯಾಡುತ್ತಲೇ ಇತ್ತು.

ನಿಮ್ಮ ಆಸ್ಪತ್ರೆಯ ಸೇವೆ ಅನನ್ಯ. ಈಗ ಮುಷ್ಕರ, ಗದ್ದಲ ಇಲ್ಲ ತಾನೇ ಡಾಕ್ಟರ್‌ ಅಂತ ಯಾರಾದರೂ ಗಣ್ಯರು ಫೋನಾಯಿಸಿ ವಿಚಾರಿಸಿದರೆ ವಿಪರೀತ ಕರ್ತವ್ಯದ ಒತ್ತಡದ ನಡುವೆಯೂ ವಾಮನ್‌ ಪ್ರತಿಕ್ರಿಯಿಸುತ್ತಾರೆ. `ನೀವೇ ನೋಡ್ತಿದೀರಲ್ಲ ಸ್ವಾಮಿ, ವಾರಕ್ಕೊಬ್ಬರಾದರೂ ದೇಹ ದಾನಕ್ಕೆ ಬಾಂಡ್‌ ಬರೆದು ಕೊಡುತ್ತಾರೆ. ನೇತ್ರ ದಾನಿಗಳಂತು ಮುಗಿಬೀಳುತ್ತಾರೆ. ಮೃತ ಶರೀರಗಳನ್ನು ಕುರಿತು ಆಳವಾಗಿ ಅರಿಯುವ ಸಲುವಾಗಿಯೇ ನಮ್ಮಲ್ಲಿ ಎರಡು ದೊಡ್ಡ ಲ್ಯಾಬ್‌ಗಳಿವೆ. `ಅಂದರೆ ಒಂದು ರೋಗಕ್ಕೆ ತುತ್ತಾಗಿ ಸತ್ತ ಮನುಷ್ಯನ ಶರೀರವನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ ಮುಂದೆ ಬಾಳುವವರನ್ನು ಅಂಥ ರೋಗದಿಂದ ಮುಕ್ತಿಗೊಳಿಸಿ ಎನ್ನುವುದು ದೇಹ ದಾನಿಗಳ ಅಂಬೋಣ. ಹೌದೋ, ಅಲ್ಲವೋ ಹೇಳಿ. ಅಂದಹಾಗೆ ನಾವು ವೈದ್ಯರು ಇಲ್ಲಿ ಜೀವ ಉಳಿಸಲು ಎಲ್ಲ ರೀತಿಯ ಪ್ರಯತ್ನಪಡುತ್ತೇವೆ. ಖಾಯಿಲೆ ಗುಣವಾಗಲು ದಾಖಲಾಗುವವರು ಮಾತ್ರ ಬಾಂಡ್‌ಗೆ ರುಜು ಮಾಡುತ್ತಾರೆಂದು ತಿಳಿಯಬೇಡಿ.’

ಸುನೀಲ್‌ನ ಮನವೊಲಿಸಲು ಜೈ ಜೈ ಹೋಮ್ ನ ಬಹುತೇಕ ವೈದ್ಯರು ವಾಮನ್‌ ದಂಪತಿಗಳಿಗೆ ಸಾಥ್‌ ನೀಡಿದ್ದರು.“ನನ್ನೋಡಿ ಸುನೀಲ್ ‌ಸಾರ್‌, ನಿಮ್ಮ ತಂದೆ ಗುರುವರ್ಯರು. ಅದಕ್ಕೂ ಹೆಚ್ಚಾಗಿ ಆದರ್ಶ ವ್ಯಕ್ತಿಯಾಗಿ ಬಾಳಿದವರು. ನೀವು ಮಾತು ತಪ್ಪುವುದು ಬೇಡ. ಅವರ ದೇಹ ಒಪ್ಪಿಸಿ, ಆಗಲೇ ಅವರ ಆತ್ಮಕ್ಕೆ ಶಾಂತಿ ಅಂತ ನಾವು ಯಾರೂ ನಿಮ್ಮನ್ನು ಯಾಮಾರಿಸುವುದಿಲ್ಲ. ಏಕೆಂದರೆ ಆತ್ಮ ಈಗಾಗಲೇ ಗತಿಸಿ ಎರಡೂವರೆ ತಾಸುಗಳಾಗಿವೆ. ಹೆಚ್ಚು ಹೊತ್ತು ದೇಹ ಇದೇ ಸ್ಥಿತಿಯಲ್ಲಿ ಇಡಲಾಗದು. ಅಗತ್ಯ ರಾಸಾಯನಿಕಗಳನ್ನು ಬಳಸಿ ನಾವು ಅದರ ಸಂಸ್ಕರಣಕ್ಕೆ ಮುಂದಾಗಬೇಕಿದೆ,” ಎಂದರು.

ಹಿರಿಯ ಪೆಥಾಲಜಿ ತಜ್ಞ ಡಾ. ಸುಖದೇವ್‌, ಇದೆಂಥ ಧರ್ಮಸಂಕಟ. ಒಂದೆಡೆ ತಂದೆಯ ಆದರ್ಶ. ಇನ್ನೊಂದೆಡೆ ತಾನು ಈಗ ವ್ಯಕ್ತಪಡಿಸಲು ಸಾಧ್ಯವಿಲ್ಲ ಎನ್ನುವುದರ ಸಮರ್ಥನೆ.

ನಳಿನಿ ಪತಿಯ ಕೈಯನ್ನು ಇನ್ನೊಮ್ಮೆ ಯೋಚಿಸಿ ನೋಡೋಣ ಎನ್ನುವಂತೆ ಅದುಮಿದಳು. ಸುನೀಲ್ ‌ಅವಳ ಕಿವಿಯಲ್ಲಿ ಏನೋ ಪಿಸುಗುಟ್ಟಿದ. ಒಂದು ನಿರ್ಧಾರಕ್ಕೆ ಅವರು ಬಂದಿದ್ದರು. ಮುಂದೆ ಸುನೀಲನದೆ ದೀರ್ಘ ಮಾತಾಯಿತು.“ನೀವೆಲ್ಲ ಹೇಳಿದಂತೆ ಆದಷ್ಟು ಬೇಗನೆ ಇದು ಇತ್ಯರ್ಥವಾಗಬೇಕಿದೆ. ನಮ್ಮ ತಂದೆಯವರ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮನಸ್ಸು ಖಂಡಿತ ನಮಗಿಲ್ಲ ಸಾರ್‌. ಅವರು ತಮ್ಮ ದೇಹ ದಾನಕ್ಕೆ ಒಪ್ಪಿದ್ದಕ್ಕೆ ಹಾಗೂ ನಾವೆಲ್ಲ ಅನುಮೋದಿಸಿದ್ದಕ್ಕೆ ಸೂರ್ಯ, ಚಂದ್ರರೇ ಸಾಕ್ಷಿ. ಆದರೆ ಈ ನಿಟ್ಟಿನಲ್ಲಿ ಇವತ್ತಿನ ಸ್ಥಿತಿಗತಿಯನ್ನು ಅವಲೋಕಿಸುವುದು ಅನಿವಾರ್ಯ ಎನ್ನುವುದು ಅಷ್ಟೇ ವಾಸ್ತವ.

“ಸಾರ್‌, ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಇದರಲ್ಲಿ ಎರಡು ಮಾತಿಲ್ಲ. ಹಾಗೆ ಮಾಡುವ ಸೇವೆಯಲ್ಲಿ ಸ್ವಲ್ಪವಾದರೂ ಸಾಮಾಜಿಕ ಬದ್ಧತೆ ಇರಬೇಕಲ್ವ? ನಿಮ್ಮಲ್ಲಿನ ವೈದ್ಯರು ದೇವರಂತೆ ರೋಗಿಗಳನ್ನು ಉಪಚರಿಸುತ್ತಿದ್ದರು. ಈಚೀಚೆಗೆ ಯಾಕೆ ತಮ್ಮ ಸೇವೆಯನ್ನು ಸಂಬಳದೊಂದಿಗೆ ತೂಗುತ್ತಿದ್ದಾರೋ ಕಾಣೆ ಸಾರ್‌. ವೈದ್ಯನನ್ನು ಸಾಕ್ಷಾತ್‌ ನಾರಾಯಣ, ಹರಿ ಎನ್ನುತ್ತಾರೆ. ಬರುವ ಸಂಭಾವನೆಗೂ ಮೀರಿದ ಸೇವೆಯೇ ಸಾರ್ಥಕ್ಯ ಒಪ್ತೀರ ಸಾರ್‌. ತಿಳಿದವರ ಮುಂದೆ ಇಷ್ಟೆಲ್ಲ ಹೇಳ್ತಿದೀನಿ. ಬಹಳಾನೆ ಸಂಕೋಚವಾಗ್ತಿದೆ.

“ತಮ್ಮ ಆಸ್ಪತ್ರೆ ವರಾಂಡಾದಲ್ಲಿ ದಪ್ಪಕ್ಷರಗಳಲ್ಲಿ ಆ ಮಹಾನುಭಾವ ಹಿಪೋಕ್ರೆಟಿಸ್‌ನ ಒಕ್ಕಣೆ ಎದ್ದು ಕಾಣುತ್ತೆ. ಎರಡೂವರೆ ಸಾವಿರ ವರ್ಷಗಳ ಹಿಂದೇನೆ ಆತ ವೈದ್ಯ ವೃತ್ತಿ ಆರಂಭಿಸುವವರಿಗೆ ಹೀಗೆ ಮಾತು ಕೊಡಿ. ಅದರಂತೆ ನಡೆದುಕೊಳ್ಳಿ ಎಂದ. ಖಂಡಿತ ಈಗ ಅವನು ಬಯಸಿದ ವೈದ್ಯರಿದ್ದಾರೆ, ಇಲ್ಲವೆಂದಲ್ಲ. ಆದರೆ ಅವರ ಸಂಖ್ಯೆ ಮತ್ತೂ ಹೆಚ್ಚಾಗಲಿ ಅಂತ ನನ್ನ ನಿವೇದನೆ. ಸಾರ್‌, `ಹಿಪೋಕ್ರೆಟಸ್‌ ಓತ್‌’ನ ಒಂದೊಂದು ವಾಕ್ಯ ಘನವಾಗಿದೆ.

“ನಾನು ಶಕ್ತಿಮೀರಿ ರೋಗ ತಡೆಗಟ್ಟುವೆ. ಖಾಯಿಲೆ ಗುಣವಾಗುವುದೆಂದು ನನ್ನನ್ನು ನಂಬಿ ಬರುವ ರೋಗಿಗಳಿಗೆ ನನ್ನ ಚಿಕಿತ್ಸೆ ಫಲಿಸಿದರೆ ಅದಕ್ಕಿಂತ ಸಂತಸ ಏನಿದೆ ಎನ್ನಬೇಕಂತೆ ವೈದ್ಯ. ನಾವು ಒಂದು ತತ್ವಕ್ಕಾಗಿ ಮಾತು ಬದಲಿಸಬೇಕಾಗಿದೆ. ಈ ನಮ್ಮ ಉದಾಹರಣೆಯ ಮುಂದೆ ಪರೋಕ್ಷವಾಗಿ ನಿಮ್ಮ ಸಂಸ್ಥೆಯನ್ನು ಉನ್ನತಿಗೇರಿಸುತ್ತದೆ. ವೈದ್ಯರು ಇನ್ನೂ ವೃತ್ತಿ ಬದ್ಧರಾದಾರು.  ಸಾರ್‌, ನನ್ನಲ್ಲಿ ನೀವು ಅಧಿಕಪ್ರಸಂಗತನ ಕಂಡರೆ ಕ್ಷಮಿಸಿಬಿಡಿ.”

“ಡಾಕ್ಟರ್‌ ಸಾರ್‌, ರಕ್ತದಾನ, ಮೂತ್ರಪಿಂಡ ದಾನ, ಸತ್ತ ನಂತರ ನೇತ್ರದಾನ ವಿಷಯ ತಗೊಳ್ಳೋಣ. ನಿಮ್ಮ ಕಟ್ಟುಪಾಡುಗಳ ಬಗ್ಗೆ ಗೌರವವಿದೆ. ಆದರೆ ಎಂಥಹವರಿಗೆ ಹೇಗೆ ದಾನ, ಅವು ಅರ್ಹರಿಗೆ ಸಲ್ಲುತ್ತಿವೆಯೆ ತಿಳಿದುಕೊಳ್ಳುವ ಹಕ್ಕು ದಾನಿಗಳಿಗೆ, ಅವರ ಕುಟುಂಬಕ್ಕೆ ಇರಬೇಕು ತಾನೇ? ಹೆಚ್ಚು ಮಾತನಾಡಲಾಗುತ್ತಿಲ್ಲ. ಈ ಸಮಯದಲ್ಲಿ `ಜಾತಸ್ಯ ಮರಣಂ ಧ್ರುವಂ’ ನುಡಿಯೂ ಕಣ್ಣೀರನ್ನು ತಡೆಯಲು ಶಕ್ತವಲ್ಲ. ಮನೇಲಿ ನೆಂಟರಿಷ್ಟರೆಲ್ಲ ಕಾಯ್ತಿದಾರೆ. ನನ್ನ ಮಗಳು ಕವಿತಾ, ಮಗ ಅವಿನಾಶ್‌ ಫೋನ್ ಮಾಡುತ್ತಲೇ ಇದ್ದಾರೆ. ಎಲ್ಲ ವ್ಯವಸ್ಥೆ ಆಗಿದೆಯಂತೆ. ನಮ್ಮ ಮಾವನವರ ಪಾರ್ಥಿವ ಶರೀರವನ್ನು ಮನೆಗೆ, ಅಲ್ಲಿಂದ ದಫನ್ನಿಗೆ ಒಯ್ಯಬೇಕು. ಆರು ಗಂಟೆಯೊಳಗಾದ್ರೆ ಕರೆಂಟು, ಆಮೇಲಾದ್ರೆ ಸೌದೆಯಂತೆ,” ನಳಿನಿ ಸುನೀಲನ ಮಾತನ್ನು ಅಖೈರುಗೊಳಿಸಿದಳು.

ಸೂಪರಿಂಟೆಂಡೆಂಟ್‌ ಭರಮಣ್ಣ ಸುನೀಲ್ ‌ಮುಂದೆ ರಿಜಿಸ್ಟರ್‌ ತಂದು, “ಸಾರ್‌, ನಿಮ್ಮ ತಂದೆಯರ ಪಾರ್ಥಿವ ಶರೀರ ಪಡೆಯುತ್ತಿರುವುದಕ್ಕೆ ಇಲ್ಲಿ ರುಜು ಮಾಡಿ,” ಎಂದರು. ಅವರ ಹೊರತಾಗಿ ಮತ್ತ್ಯಾರೂ ಕದಲದೆ ಎಲ್ಲರೂ ಪ್ರತಿಮೆಗಳಾಗಿದ್ದರು. ಸೂರ್ಯ ಮುಳುಗುವವರೆಗೆ ಡಾ. ವಾಮನ್‌ರ ಚೇಂಬರಿನಲ್ಲಿ ಮೌನವೇ ಅಧಿಪತ್ಯ ವಹಿಸಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ