ಕಥೆ - ಬಿಂಡಿಗನವಿಲೆ ಭಗವಾನ್
ಆದರೆ ಇದನ್ನು ಅವರ ಮಗ ಸುನೀಲ್ ಮತ್ತು ಸೊಸೆ ನಳಿನಿ ವಿರೋಧಿಸಿ ಶವ ಹಿಂಪಡೆಯಲು ಯತ್ನಿಸಿದಾಗ, ಆಸ್ಪತ್ರೆಯ ಸಂಸ್ಥಾಪಕರಾದ ಡಾ. ವಾಮನ್ ರಾವ್ ದಂಪತಿಗಳು ಅದನ್ನು ತೀವ್ರವಾಗಿ ಖಂಡಿಸಿದರು. ಆಗ ಸುನೀಲ್ ಯಾವ ವಾದ ಮಂಡಿಸಿದ? ಮುಂದೆ ನಡೆದದ್ದೇನು.....?
``ನೀವು ಹೀಗೆ ಮಾತು ಬದಲಿಸಿದರೆ ಹೇಗೆ? ನಿಮ್ಮ ತಂದೆಯವರಿಗೆ, ನಿಮಗೆ, ನಿಮ್ಮ ಮಕ್ಕಳಿಗೆ ನಾನು ಅವತ್ತೇ ಹೇಳಿದ್ದೆ..... ಚೆನ್ನಾಗಿ ಯೋಚಿಸಿ, ಬೇಕಾದ್ರೆ ವಾರ ಟೈಮು ತಗೋಳಿ ಅಂತ.... ಈ ತರ ಅದ್ರೆ ನಮಗೆ ಬಹಳ ತೊಂದರೆ ಆಗುತ್ತೆ.''
ಸುನೀಲ್ ಮತ್ತು ಅವನ ಪತ್ನಿ ನಳಿನಿ ಮೊದಲೇ ದುಃಖಿತರಾಗಿದ್ದರು. ಕಣ್ಣು ಕಾರಂಜಿಯಾಗಿತ್ತು. ಜೈ ಜೈ ಆಸ್ಪತ್ರೆಯ ನಿರ್ದೇಶಕ ಹಾಗೂ ಮುಖ್ಯ ಸರ್ಜನ್ ಡಾ. ವಾಮನ್‌ರ ಖಡಕ್ ಮಾತು ಇನ್ನು ಅರಗಿಸಿಕೊಳ್ಳುವುದು ಅವರಿಗೆ ಬಹು ಕಷ್ಟವಾಗಿತ್ತು. ವಾಮನ್ ಪಕ್ಕದಲ್ಲಿ ಕುಳಿತಿದ್ದ ಅವರ ವೈದ್ಯ ಪತ್ನಿ ಡಾ. ಸುಧಾ ವಾಮನ್ ದುರುಗುಟ್ಟಿ ನೋಡುತ್ತ, ``ನೋಡಿ, ನಾವು ಹದಿನೆಂಟು ವರ್ಷದಿಂದ ಈ ನರ್ಸಿಂಗ್ ಹೋಮ್ ನಡೆಸುತ್ತಿದ್ದೇವೆ, ಒಮ್ಮೆಯೂ ಹೀಗೆ ಮಾತು ತಪ್ಪಿದವರನ್ನು ನಾವು ಕಂಡಿಲ್ಲ. ಅದೂ ಇಂಥ ಅತಿ ಮಹತ್ವದ ವಿಷಯದಲ್ಲಿ. ನಿಮ್ಮಿಂದ ನಮಗೆ, ನಮ್ಮ ಆಸ್ಪತ್ರೆಗೆ ಕೆಟ್ಟ ಹೆಸರು ಬರುವುದು ಬೇಡ. ನೀವು ನಿಮ್ಮ ಮುಚ್ಚಳಿಕೆಯನ್ನು ಪಾಲಿಸಿ. ಇತರರಿಗೂ ಮಾದರಿಯಾಗಿ ಬೀ ಡೀಸೆಂಟ್, ಸ್ಟಿಕ್ ಟು ಯುವರ್ ವರ್ಡ್ಸ್ ಪ್ಲೀಸ್,'' ಎಂದರು. ಅವರಿಂದಾದರೂ ಕನಿಕರ ಉಸಿರಾಡೀತೆಂದು ಭಾವಿಸಿದ್ದ ನಳಿನಿ ತನ್ನ ಕಣ್ಣುಗಳಿಂದ ಚಿಮ್ಮುತ್ತಿದ್ದ ನೀರನ್ನು ಸೆರಗಿನಿಂದ ಒತ್ತಿಕೊಂಡಳು. ನಿಜವೇ, ಸಂಕಟ ಅದರಲ್ಲೂ ಸಾವು ಹೊತ್ತು ತರುವಂಥದ್ದು ಅದೆಷ್ಟು ಗಾಢ ಅನುಭವಿಸಿದವರಿಗೇನೇ ಗೊತ್ತು. ತಮ್ಮ ತಂದೆಯ ಮೃತದೇಹವನ್ನು ತಾವು ವೈದ್ಯರಾಗಿದ್ದ ಮೆಡಿಕಲ್ ಕಾಲೇಜಿಗೇ ದಾನ ಮಾಡಿ ಅದನ್ನು ಕೊಯ್ದು ವಿವಿಧ ಭಾಗಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರಂತೆ ಒಬ್ಬ ವೈದ್ಯ! ಅಬ್ಬಾ! ಅವರ ಮಾನಸಿಕ ಸಮತೋಲನ ಧೈರ್ಯ, ವೃತ್ತಿ ನಿಷ್ಠೆ, ಸಂಕಲ್ಪಕ್ಕೆ ಸಾಟಿ ಯಾವುದು? ಸತ್ತ ನಂತರ ಶವ ಹೂಳುವುದು, ಸುಡುವುದು ಆಮೇಲೆ ಗೊತ್ತೇ ಇದೆ. ಮಣ್ಣಲ್ಲಿ ಮಣ್ಣಾದರು, ಪಂಚಭೂತಗಳಲ್ಲಿ ಲೀನವಾದರು, ತುಂಬಲಾರದ ನಷ್ಟ. ಅವರಿನ್ನು ಕೀರ್ತಿಶೇಷರು ಮುಂತಾದ ಸಿದ್ಧ ಮಾದರಿಯ ನುಡಿ ನಮನಗಳು, ಔಪಚಾರಿಕ ಶ್ರದ್ಧಾಂಜಲಿ ಸಭೆಗಳು. ಇದ್ದಾಗ ಮಾರಕ. ಸತ್ತ ಮೇಲೆ ಸ್ಮಾರಕ ಎನ್ನುತ್ತಾರೆ. ಯಾರೇ ವ್ಯಕ್ತಿ ಬದುಕಿದ್ದಾಗ ಏನೇನು? ಎಷ್ಷೆಷ್ಟು ಒಳ್ಳೆಯದು ಅಥವಾ ಕೆಟ್ಟದ್ದು ಎಸಗಿರುತ್ತಾರೋ ಪಕ್ಕಕ್ಕಿಡೋಣ. ಸಾವಿನ ನಂತರ ಅವರ ಇಡೀ ಶರೀರ ಅಥವಾ ಅವರ ಕಣ್ಣುಗಳು ಮಾತ್ರವೇ ಇರಲಿ, ಬದುಕು ಕಟ್ಟಿಕೊಳ್ಳುವವರಿಗೆ ದಾರಿ ಅಲ್ಲವೇ? ವೈದ್ಯ ವಿಜ್ಞಾನದ ಪ್ರಗತಿಯನ್ನು ಎಷ್ಟು ಕೊಂಡಾಡಿದರೂ ಸಾಲದು. ನೀನ್ಯಾರಿಗಾದೆಯೋ ಎಲೆ ಮಾನವ, ಮರದ ಕಾಂಡ ಹಲವು ವರ್ಷ ತೊಲೆಯಾಗುಳಿಯಿತು ನೀನು ಸತ್ತ ನಂತರ ತಾನೂ ಇರಲಿಲ್ಲ ಉಪಕಾರಿಯಾಗಿ ಎಂಬ ಪದ್ಯದ ಸಾಲುಗಳಿಗೆ ಸವಾಲಿನಂತಿವೆ, ಆಧುನಿಕ ಸಂಶೋಧನೆಗಳು. ಇದೋ ಇತ್ತ ಗಮನಿಸಿ, ಅಳಿದ ಮೇಲೆ ಮನುಷ್ಯ ಕೂಡ ಉಪಯುಕ್ತಿ ಎಂದು ಸಾರುತ್ತವೆ, ಸಾಬೀತುಪಡಿಸುತ್ತವೆ.