2 ಸಾವಿರ ವರ್ಷಗಳಷ್ಟು ಪುರಾತನವಾದ ಮಹಾರಾಷ್ಟ್ರದ ಪೈಠಣೀ ಸೀರೆಯನ್ನು `ಸೀರೆಗಳ ರಾಣಿ’ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಮದುಮಗಳ ಬಳಿಯೂ ಈ ಸೀರೆ ಇರುವುದನ್ನು ನೋಡುತ್ತೇವೆ. ಪ್ರತಿಯೊಬ್ಬ ಮಹಿಳೆಗೂ ಇದು ಮೆಚ್ಚಿನ ಸೀರೆ. ಕಾಲ ಬದಲಾವಣೆಯ ಜೊತೆಗೆ ಇದರ ಬಣ್ಣ, ವಿನ್ಯಾಸಗಳೂ ಬದಲಾಗಿವೆ. ಆದರೂ ಸಹ ಈ ಸೀರೆಯು ತನ್ನ ಹಿಂದಿನ ಗೌರವ, ಮರ್ಯಾದೆಗಳನ್ನು ಉಳಿಸಿಕೊಂಡಿದೆ.
ನಮ್ಮಲ್ಲಿ ಮೈಸೂರು ಸಿಲ್ಕ್ಸ್, ಕೊಳ್ಳೇಗಾಲ, ಇಳಕಲ್ ಸೀರೆಗಳ ತರಹ ಪೈಠಣೀ ಸೀರೆಯ ಒಂದು ವೆರೈಟಿಯು ಔರಂಗಾಬಾದ್‌ನ ಪೈಠಣ್ ಪಟ್ಟಣದಲ್ಲಿ ತಯಾರಾಗುತ್ತದೆ. ಇದು ಕೈಮಗ್ಗದಿಂದ ನೇಯಲ್ಪಟ್ಟ `ಫೈನ್ ಸಿಲ್ಕ್’ ಆಗಿದ್ದು, ಭಾರತದ ಒಂದು ಉತ್ತಮ ಬಗೆಯ ಸೀರೆ ಎಂದು ಪರಿಗಣಿಸಲ್ಪಟ್ಟಿದೆ. ಇದರ ಅಂಚು ಮತ್ತು ಸೆರಗು ವಿಶೇಷ ಡಿಸೈನ್‌ಗೆ ಪ್ರಸಿದ್ಧವಾಗಿದೆ. ಇದರ ಸೆರಗಿನಲ್ಲಿ ಗಿಣಿ, ಮೈನಾ, ಹಂಸ, ನವಿಲು ಮುಂತಾದ ಡಿಸೈನ್‌ಗಳು ಬಗೆಬಗೆಯ ಆಕಾರದಲ್ಲಿ ಶೋಭಿಸುತ್ತವೆ.
ಇತರೆ ಸೀರೆಗಳಿಗಿಂತ ಪ್ರತ್ಯೇಕ
ಹಿಂದೆ ಈ ಸೀರೆಗಳಿಗೆ ಅಪ್ಪಟ ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಬಳಸಲಾಗುತ್ತಿತ್ತು. 1 ಕಿಲೋ ಗ್ರಾಮ್ ಚಿನ್ನಕ್ಕೆ 1 ತೊಲ ತಾಮ್ರವನ್ನು ಸೇರಿಸಿ ಸೀರೆಯನ್ನು ನೇಯಲಾಗುತ್ತಿತ್ತು. `ನಾಲೀ’ ಮತ್ತು `ಪಾಂಖೀ’ ಸೆರಗುಗಳು ಆ ಕಾಲದಲ್ಲಿ ಹೆಚ್ಚು ಪ್ರಚಲಿತವಾಗಿದ್ದವು. ಅಂತಹ ಸೀರೆಗಳು ಸಾಕಷ್ಟು ತೂಕವಾಗಿರುತ್ತಿದ್ದಲ್ಲದೆ ಬೆಲೆಯೂ ಹೆಚ್ಚಾಗಿರುತ್ತಿತ್ತು. ಅವುಗಳನ್ನು ನೇಯಲು 6 ತಿಂಗಳಿನಿಂದ 1 ವರ್ಷದ ಸಮಯ ಬೇಕಾಗುತ್ತಿತ್ತು. ಪೇಶ್ವೆಗಳು ಇಂತಹ ಸೀರೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ಕಾಲದೊಂದಿಗೆ ಮಹಿಳೆಯರ ಅಭಿರುಚಿಯೂ ಬದಲಾಗುತ್ತಿದೆ. ಇಂದು ಹತ್ತಿಯಿಂದ ಸಿಲ್ಕ್ ವರೆಗೆ ನೇಯ್ದಿರುವ ಈ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. 200-250 ಗ್ರಾಂ ಜರಿ ಮತ್ತು 700 ಗ್ರಾಂ ಸಿಲ್ಕ್ ನಿಂದ ತಯಾರಾಗುವ ಈ ಸೀರೆಗಳು 800-700 ಗ್ರಾಂ ತೂಕ ಹೊಂದಿದ್ದು, ಹೆಚ್ಚು ಹೆವಿ ಅನ್ನಿಸುವುದಿಲ್ಲ. ಸೀರೆಯ ಅಂಚು ಮತ್ತು ಸೆರಗಿನಲ್ಲಿರುವ ವಿನ್ಯಾಸಗಳು ಚೆನ್ನಾಗಿ ಗೋಚರಿಸುವಂತೆ ಸೀರೆಯನ್ನು ನೇಯಲಾಗುತ್ತದೆ. ಇವು ಇತರೆ ಸೀರೆಗಳಿಗಿಂತ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತವೆ.
ಹೆಚ್ಚುತ್ತಿರುವ ಬೇಡಿಕೆ
ಈ ಸೀರೆಗಳ ಬಗ್ಗೆ ಡಿಸೈನರ್ ಶೃತಿ ಹೀಗೆ ಹೇಳುತ್ತಾರೆ, “ಬದಲಾಗುತ್ತಿರುವ ಕಾಲದೊಂದಿಗೆ ಈ ಸೀರೆಗಳ ರೂಪ ಬದಲಾಗಿದೆ. ಇವುಗಳನ್ನು ನೇಯುವುದು ಕಷ್ಟದ ಕೆಲಸ. ಬೇರೆ ಬೇರೆ ಬಣ್ಣಗಳ ದಾರಗಳನ್ನು ಸೇರಿಸಿ ನೇಯುವುದರಿಂದ ಡೈಮೆನ್ಶನ್ ಲುಕ್‌ದೊರೆಯುತ್ತದೆ. ಇಂದಿನ ಮಹಿಳೆಯರು ಹೆಚ್ಚು ತೂಕದ ಸೀರೆಗಳನ್ನು ಉಡಲು ಇಷ್ಟಪಡುವುದಿಲ್ಲ, ಮತ್ತು ಬೆಲೆ ಹೆಚ್ಚಿದ್ದರೆ ಕೊಳ್ಳುವುದಿಲ್ಲ. ಆದ್ದರಿಂದ ನಾನು ಜರಿಯ ಬದಲು `ಟೆಸ್ಟೆಡ್ ಗೋಲ್ಡ್’ ಬಳಸಿ ಪೈಠಣೀ ಡಿಸೈನ್ ರೂಪಿಸಿದೆ. ಇಂತಹ ಸೀರೆಗಳು ಅಗ್ಗವಾಗಿರುವುದಲ್ಲದೆ ಗ್ಲಾಮರಸ್ ಮತ್ತು ಎಲಿಗೆಂಟ್ ಸಹ ಆಗಿರುತ್ತವೆ. ಇಂತಹ ಡಿಸೈನ್‌ನ ಸೀರೆಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ.
“ಹತ್ತಿ ಮತ್ತು ಸಿಲ್ಕ್ ಎರಡು ರೀತಿಯ ಸೀರೆಗಳನ್ನು ಒಂದೇ ರೀತಿಯ ಡಿಸೈನ್‌ನಲ್ಲಿ ತಯಾರಿಸಲಾಗುತ್ತದೆ. ಜೊತೆಗೆ ಹಿಂದೆ 6-7 ಅಂಗುಲವಿರುತ್ತಿದ್ದ ಬಾರ್ಡರ್‌ನ್ನು ಈಗ 3 ಅಂಗುಲದಷ್ಟು ಕಡಿಮೆಗೊಳಿಸಲಾಗಿದೆ. ಸೀರೆಗಳು ಹಗುರವಾಗಿರಲೆಂದು ನವಿರಾದ `ಕಾಂಪೆಂಟರರಿ ಮೋಟಿಫ್ಸ್’ ಬಳಸಲಾಗುತ್ತಿದೆ. ಹೀಗಾಗಿ ಈ ಸೀರೆಯನ್ನು ಒಮ್ಮೆ ಕೊಂಡ ನಂತರ ಎಲ್ಲ ರೀತಿಯ ಸಮಾರಂಭಗಳಿಗೂ ಬೇರೆ ಬೇರೆ ರೀತಿಯಾಗಿ `ಮಿಕ್ಸ್ಡ್ ಅಂಡ್ ಮ್ಯಾಚ್’ ಮಾಡಿ ಉಡಬಹುದಾಗಿದೆ. ಮ್ಯಾಚಿಂಗ್ ಬ್ಲೌಸ್ ಅಥವಾ ಕಾಂಟ್ರಾಸ್ಟ್ ಬ್ಲೌಸ್ ಬಳಸಬಹುದಲ್ಲದೆ, ಸೀರೆಯನ್ನು ಬೇರೆ ಬೇರೆ ಸ್ಟೈಲ್‌ನಲ್ಲೂ ಉಟ್ಟುಕೊಳ್ಳಬಹುದು. ಈ ಸೀರೆಗಳು ಹೆಚ್ಚಾಗಿ ಡಾರ್ಕ್ ಕಲರ್‌ನಲ್ಲಿ ಬರುತ್ತವೆ. ಅದರಲ್ಲಿ ಕೆಲವು ನೀಲಿ, ಕೇಸರಿ, ಗುಲಾಬಿ, ಹಳದಿ, ನವಿಲು ಬಣ್ಣಗಳು ಹೆಚ್ಚು ಪಾಪ್ಯುಲರ್ ಆಗಿವೆ.”
ಫ್ಯೂಶನ್
ಅಧುನಿಕ ಫ್ಯಾಶನ್ ಎಷ್ಟೇ ಬರಲಿ. ನಮ್ಮ ದೇಶದಲ್ಲಿ ಮಹಿಳೆಯರು ಸೀರೆಯನ್ನೇ ಉಡಲು ಇಷ್ಟಪಡುತ್ತಾರೆ. ಸೀರೆಯು ಭಾರತೀಯ ಮಹಿಳೆಯ ವ್ಯಕ್ವಿತ್ವಕ್ಕೆ ವಿಶೇಷ ಶೋಭೆ ನೀಡುತ್ತದೆ. ಡಿಸೈನರ್ ಗೌರಾಂಗ್ ಹೀಗೆ ಹೇಳುತ್ತಾರೆ, “ನಾನು ಪೈಠಣಿಯ ಪ್ರಾಚೀನ ಕಲೆಯನ್ನು ಹೊಸ ರೂಪದಲ್ಲಿ ಪ್ರಸ್ತುತ ಪಡಿಸಲು ಪ್ರಯತ್ನಿಸುತ್ತೇನೆ. ಎಲ್ಲ ವಯಸ್ಸಿನ ಮಹಿಳೆಯರೂ ಮೆಚ್ಚುವಂತೆ ಕಂಟೆಂಪರರಿ ಡಿಸೈನ್ ರೂಪಿಸುತ್ತೇನೆ. ಡಿಸೈನ್‌ನಲ್ಲಿ ನವೀನತೆ ತರಲು ಟೆಕ್ಸ್ ಚರ್, ಕಲರ್ ಮತ್ತು ಕ್ರಾಸ್‌ಬಾರ್ಡರ್‌ನ ಪ್ರಭಾವ ಮಹತ್ವಪೂರ್ಣವಾಗಿರುತ್ತದೆ. ಪೈಠಣಿಯ ನೇಕಾರರು ಇಡೀ ಮಹಾರಾಷ್ಟ್ರದಲ್ಲಿದ್ದಾರೆ. ನನ್ನ ಬಳಿಯೇ ಸುಮಾರು 100 ನೇಕಾರರು ಕೆಲಸ ಮಾಡುತ್ತಾರೆ. ನಾನು ಹೇಳಿದ ಡಿಸೈನ್‌ನ್ನು ಅವರು ನೇಯುತ್ತಾರೆ.
“ಡಿಸೈನ್ ಹೊಸತಾಗಿದ್ದರೆ. ಯಾರೇ ಆದರೂ ಆಕರ್ಷಿತರಾಗುತ್ತಾರೆ. ಆದ್ದರಿಂದ ನಾನು ಪೈಠಣಿಯಲ್ಲಿ ಬಂಗಾಳದ ಜಾಂದಾನಿ ವಿನ್ಯಾಸವನ್ನು ಸೇರಿಸಿ ಈ ಹೊಸ ಟೆಕ್ನಿಕ್ಸ್ ನ್ನು ಪರಿಚಯಿಸುತ್ತಿದ್ದೇನೆ. ಹೀಗೆ ನಾನು ಹೊಸ ಬಗೆಯ ವಿನ್ಯಾಸವನ್ನು ಎಕ್ಸ್ ಪ್ಲೋರ್‌ಮಾಡುತ್ತಿದ್ದೇನೆ. ನಾನು ಬಗೆಬಗೆಯ ಕಲರ್, ಟೆಕ್ಸ್ ಚರ್ ಮತ್ತು ಮೋಟಿಫ್‌ನಿಂದ ಹೊಸ ಲುಕ್ ನೀಡಲು ಯಾವಾಗಲೂ ಪ್ರಯತ್ನಿಸುತ್ತಿರುತ್ತೇನೆ. ವಿದೇಶದಲ್ಲಿರುವ ಭಾರತೀಯರು ಇದರ ವೈಶಿಷ್ಟ್ಯವನ್ನು ಮನಗಂಡಿದ್ದಾರೆ ಮತ್ತು ಇಲ್ಲಿಂದ ತರಿಸಿಕೊಂಡು ಉಡುತ್ತಾರೆ. ವಿದೇಶೀಯರಿಗೆ ಇದರ ಬಗ್ಗೆ ಅರಿವಿರುವುದಿಲ್ಲ ನಿಜ. ಆದರೆ ಈಗ `ಇಂಡಿಯನ್ ಟೆಕ್ಸ್ ಟೈಲ್’ ವಿಶ್ವವಿಡೀ ಪಸರಿಸಿದೆ.”
ಪೈಠಣೀ ಸೀರೆಗಳು ಮತ್ತಷ್ಟು ಜನಪ್ರಿಯವಾಗಲೆಂದು, ಆಗಾಗ ಫ್ಯಾಷನ್ ಶೋ ಮತ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿವರ್ಷ ಮುಂಬೈ ಮತ್ತು ಸುತ್ತಮತ್ತುಲ ಸ್ಥಳಗಳಲ್ಲಿ `ನ್ಯೂ ವೆಬ್ ಪೈಠಣಿ’ ಸೀರೆಗಳ ಫೆಸ್ಟಿವಲ್ಸ್ ನಡೆಸಲಾಗುತ್ತದೆ. ಈ ಫೆಸ್ಟಿವಲ್ಸ್ ಆಯೋಜಕರಾದ ಸುನಂದಾ ಭಿಡೆ ಹೀಗೆ ಹೇಳುತ್ತಾರೆ, “ಪ್ರತಿವರ್ಷ ಮಹಿಳಾ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸೀರೆಯ ತಯಾರಕರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.”
– ಜಿ. ಸುಮನಾ
ಗಮನದಲ್ಲಿಡಿ
ಯಾವುದೇ ರೇಷ್ಮೆ ಸೀರೆ ಇರಲಿ, ಹೊರಗಿನ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ತಕ್ಷಣ, ಅದನ್ನು 1-2 ತಾಸು ಗಾಳಿಗೊಡ್ಡಿ ನಂತರ ಬೀರುವಿನಲ್ಲಿಡಿ.
ಸೀರೆ ಮೇಲೆ ಏನಾದರೂ ಬಿದ್ದು ಕಲೆ ಆಗಿದ್ದರೆ, ತಕ್ಷಣ ಶುಚಿಗೊಳಿಸಿ ಒಣಗಿಸಲು ಮರೆಯದಿರಿ.
ಇವನ್ನು ತೇವಾಂಶವಿರುವ ವುಡನ್ ರಾಕ್‌ನಲ್ಲಿರಿಸಬೇಡಿ.
ಮಖಮಲ್ ವಸ್ತ್ರವಾಗಿದ್ದರೆ, ನೀಟಾಗಿ ಪೇಪರ್‌ನಲ್ಲಿ ಪ್ಯಾಕ್ ಮಾಡಿಡಿ.
ಜರಿಯನ್ನು ಹಸಿರು ಮಖಮಲ್ ವಸ್ತ್ರದಲ್ಲಿ ಸುತ್ತಿಡಿ. ಆಗ ಜರಿ ಬೇಗ ಹೊಳಪು ಕಳೆದುಕೊಳ್ಳುವುದಿಲ್ಲ.