ನಮ್ಮ ಬೀದಿಯಲ್ಲೇ ವಾಸವಾಗಿರುವ ಕವಿತಾ ಕಳೆದ ಒಂದು ವಾರದಿಂದ ಗಡಿಬಿಡಿಯಲ್ಲಿರುವಂತೆ ಕಾಣುತ್ತಿತ್ತು. ದಿನ ಅಂಗಡಿಯ ಕಡೆ ಹೋಗುತ್ತಿದ್ದಳು. ದಿನನಿತ್ಯ ಸಾಯಂಕಾಲದ ವಾಕಿಂಗ್‌ಗೆ ಸಹ ಪಾರ್ಕ್‌ನತ್ತ ಬರುತ್ತಿರಲಿಲ್ಲ. ಕಡೆಗೆ ನಾನು ಪಾರ್ಕ್‌ನಲ್ಲಿ ಆಡುತ್ತಿದ್ದ ಅವಳ ಮಗಳು ಕಾವ್ಯಾಳನ್ನು ಕರೆದು ಕೇಳಿದೆ, “ನಿಮ್ಮ ಮಮ್ಮಿ ವಾಕಿಂಗ್‌ಗೆ ಬರುತ್ತಿಲ್ಲವಲ್ಲ. ಯಾಕೆ?”
“ಆಂಟಿ, ನಮ್ಮ ಡ್ಯಾಡಿಯ ಊರಿನಿಂದ ಅಜ್ಜಿ, ತಾತ ನಮ್ಮ ಮನೆಗೆ ಬರುತ್ತಿದ್ದಾರೆ. ಅದಕ್ಕೇ ಮಮ್ಮಿಗೆ ವಾಕಿಂಗ್‌ಗೆ ಬರೋದಕ್ಕೆ ಆಗುತ್ತಿಲ್ಲ,” ಎಂದು ಕಾವ್ಯಾ ಹೇಳಿದಳು.
ತಂದೆಯ ಊರು ಪರಕೀಯವೆಂಬಂತೆ ಕಾವ್ಯಾಳಿಗೆ ಅನ್ನಿಸಿದುದನ್ನು ಕೇಳಿ ಮನಸ್ಸಿಗೆ ಖೇದವಾಯಿತು. ಮರುದಿನ ಸಾಯಂಕಾಲ ಕವಿತಾಳ ಪತಿ ರವೀಶ್ ತಮ್ಮ ತಾಯಿ ತಂದೆಯೊಡನೆ ಬಂದುದನ್ನು ನೋಡಿದೆ. ಬಹುಶಃ ಅವರನ್ನು ರೈಲ್ವೇ ಸ್ಟೇಷನ್‌ನಿಂದ ಕರೆತಂದಿರಬಹುದು ಎಂದುಕೊಂಡೆ. ಅದಾದ ಮೇಲೆ ಒಂದು ವಾರವಾದರೂ ಕವಿತಾಳ ಮುಖ ಕಾಣಿಸಲಿಲ್ಲ. ಕೆಲಸಕ್ಕೂ ರಜೆ ಹಾಕಿದ್ದಳು.
ಒಂದು ಸಾಯಂಕಾಲ ಅವಳನ್ನೂ, ಅವಳ ಅತ್ತೆ ಮಾವಂದಿರನ್ನೂ ಭೇಟಿ ಮಾಡೋಣವೆಂದು ನಾನೇ ಅವಳ ಮನೆಗೆ ಹೋದೆ. ಅತ್ತೆ ಮಾವ ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರು. ಕವಿತಾ ಅಡುಗೆಮನೆಯ ಒಳಗೂ ಹೊರಗೂ ಓಡಾಡುತ್ತಿದ್ದಳು.
ಭೇದಭಾವ ಬೇಡ
ನಾನು ಆ ಹಿರಿಯರನ್ನು ಮಾತನಾಡಿಸಿದೆ. “ನಾವು ಬಂದದ್ದರಿಂದ ಕವಿತಾಳಿಗೆ ಕೆಲಸ ಹೆಚ್ಚಾಗಿದೆ. ಬೆಳಗಿನಿಂದ ರಾತ್ರಿಯವರೆಗೂ ಕೆಲಸ ಮಾಡುತ್ತಲೇ ಇರುತ್ತಾಳೆ,” ಅವಳ ಮಾವ ಹೇಳಿದರು.
“ಹೌದು. ನನಗೆ ಯಾವ ಕೆಲಸ ಮಾಡೋದಕ್ಕೂ ಬಿಡೋದಿಲ್ಲ. ಒಳ್ಳೆ ನೆಂಟರ ಹಾಗೆ ಇರಿಸಿದ್ದಾಳೆ,” ಎಂದರು ಅವಳ ಅತ್ತೆ.
ತಾವು ಬಂದಿರುವುದರಿಂದ ಸೊಸೆಯ ಆಫೀಸ್ ಕೆಲಸಕ್ಕೂ ತೊಂದರೆಯಾಗಿರುವುದು ಆ ಹಿರಿಯರಿಗೆ ಬೇಸರವಾಗಿತ್ತು. ಆದ್ದರಿಂದ ಅವರು ಬೇಗನೆ ಊರಿಗೆ ಹಿಂದಿರುಗುವ ಯೋಚನೆಯಲ್ಲಿದ್ದರು. ನಾನು ಹೊರಟಾಗ ಕವಿತಾ ನನ್ನನ್ನು ಕಳುಹಿಸಲು ಹೊರಗೆ ಬಂದಳು. ಗೇಟಿನ ಬಳಿ ಸ್ವಲ್ಪ ಹೊತ್ತು ಮಾತನಾಡುತ್ತಾ ನಿಂತೆ. ಆಗ ನಾನು, “ನಿಮ್ಮ ಅತ್ತೆ ಮಾವಂದಿರನ್ನು ನೆಂಟರ ಹಾಗೆ ಟ್ರೀಟ್ ಮಾಡುತ್ತಾ ಇದ್ದೀಯಲ್ಲ….. ಅವರೇನೂ ಕೈಲಾಗದವರಲ್ಲ,” ಎಂದು ಕೇಳಿದೆ.
“ಇಲ್ಲಪ್ಪ ಅವರ ಕೈಲಿ ಏನೂ ಮಾಡಿಸೋದಿಲ್ಲ. ನನ್ನ ಪತಿ ಕೂಡ ಅವರು ಆರಾಮವಾಗಿ ಇರಲಿ ಅಂತಲೇ ಇಷ್ಟಪಡುತ್ತಾರೆ. ನನ್ನ ತಂಗಿ ಮನೆಗೆ ಅವಳ ಅತ್ತೆ ಮಾವ ಬಂದಾಗ, ಏನೋ ಒಂದು ಕೆಲಸ ಹೇಳಿದಳು ಅಂತ ಅದೇ ಒಂದು ದೊಡ್ಡ ಗಲಾಟೆ ಆಗಿಬಿಟ್ಟಿತ್ತು. ಅದಕ್ಕೆ ನಾನೇ ಒದ್ದಾಡುತ್ತಾ ಇದ್ದೇನೆ,” ಎನ್ನುತ್ತಾ ಕವಿತಾ ಹಣೆಯ ಮೇಲಿನ ಬೆವರನ್ನು ಒರೆಸಿಕೊಂಡಳು.
ಅತ್ತೆ ಮಾವ ಮನೆಗೆ ಬಂದಿರುವುದು ಇವಳಿಗೆ ಒಂದು ಹೊರೆಯಾಗಿದೆಯಲ್ಲ ಎಂದು ಮನಸ್ಸಿಗೆ ಬೇಸರವಾಯಿತು. ಅವರಾದರೋ ಇದೂ ತಮ್ಮ ಮನೆ ಎಂದು ಭಾವಿಸಿ, ಮಗ ಸೊಸೆಯ ಜೊತೆಗಿರಲು ಬಂದಿದ್ದಾರೆ. ಆದರೆ ಇವರು ಅವರ ಜೊತೆ ಆತಿಥೇಯರಂತೆ ವರ್ತಿಸುತ್ತಿದ್ದಾರೆ.
ಮತ್ತೊಂದು ಚಿತ್ರಣ
ನನ್ನ ಚಿಕ್ಕಮ್ಮನಿಗೆ ಮಂಡಿನೋವು ಕಾಡುತ್ತಿತ್ತು. ಬರುಬರುತ್ತಾ ದಿನನಿತ್ಯದ ಕೆಲಸ ಮಾಡುವುದೂ ಕಷ್ಟವಾಗತೊಡಗಿತು. ಆಗ ಅವರು ಚಿಕ್ಕಪ್ಪನ ಜೊತೆ ತಮ್ಮ ಮಗನ ಮನೆಯಲ್ಲಿರಲು ಹೋದರು. ಆದರೆ ತಿಂಗಳು ತುಂಬುವ ಮೊದಲೇ ಹಿಂದಿರುಗಬೇಕಾಯಿತು. ಮಗನ ಮನೆ ಮೂರನೆಯ ಮಹಡಿಯಲ್ಲಿದ್ದುದರಿಂದ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಅವರಿಗೆ ಬಲು ಕಷ್ಟಕರವಾಯಿತು. ಜೊತೆಗೆ ಅವರಿಂದ ನಿರೀಕ್ಷಿಸಲ್ಪಟ್ಟ ಮನೆಯ ಕೆಲಸ ಕಾರ್ಯಗಳನ್ನು ಮಾಡಲು ಅವರು ಅಸಮರ್ಥರಾಗಿದ್ದರು. ಮುಂದುವರಿದ ದೇಶಗಳಲ್ಲಿ ಮಕ್ಕಳಿಂದ ದೂರವಿದ್ದರೂ ಸಹ ವೃದ್ಧರು ಒಳ್ಳೆಯ ಬದುಕನ್ನು ನಡೆಸುವಂತೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ವಿರುದ್ಧವಾಗಿ ತಂದೆ ತಾಯಂದಿರೇ ಸಾಕಷ್ಟು ದಿನಗಳವರೆಗೆ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಮಕ್ಕಳು ಚೆನ್ನಾಗಿ ಸೆಟಲ್ ಆಗಲಿ ಎಂದು ಆಶಿಸುತ್ತಾರೆ. ಮಕ್ಕಳು ತಾವು ಸೆಟಲ್ ಆದ ನಂತರ ತಮ್ಮದೇ ಮನೆ ಸಂಸಾರವನ್ನು ನೆಲೆಗೊಳಿಸುತ್ತಾರೆ. ಆಗ ತಾಯಿ ತಂದೆಯರನ್ನು ಹೊರಗಿನವರಂತೆ ಕಾಣುತ್ತಾರೆ. ಮಗ ಸೊಸೆ ಅಥವಾ ಮಗಳು ಅಳಿಯ ಇರುವ ತಾಯಿ ತಂದೆಯರ ಬರುವಿಕೆಯನ್ನು ಸಹಜವಾಗಿ ಸ್ವೀಕರಿಸಲಾರರೇ? ಅವರ ಜೀವನಶೈಲಿ ಬೇರೆಯಾಗಿರಬಹುದು. ಆದರೆ ಅವರನ್ನು ಗೌರವದಿಂದ ಜೊತೆಯಲ್ಲಿ ಇರಿಸಿಕೊಳ್ಳಲು ಆಗುವುದಿಲ್ಲವೇ?
ಯೋಚಿಸಿ ನೋಡಿ
ನಮ್ಮ ಸಮಾಜದಲ್ಲಿ ಹಿಂದೆ ಅವಿಭಕ್ತ ಕುಟುಂಬದ ಪದ್ಧತಿ ಇತ್ತು. ಅಂದರೆ ಮನೆತುಂಬ ಜನರಿದ್ದು ಒಬ್ಬರಿಗೊಬ್ಬರು ಹೊಂದಿಕೊಂಡು ನಡೆಯುವ ಅಭ್ಯಾಸವಿದ್ದಿತು. ಆದರೆ ಈಗ ಎಲ್ಲೆಡೆಯೂ ವಿಭಕ್ತ ಕುಟುಂಬಗಳು ಇದ್ದು, ತಾಯಿ ತಂದೆಯರು ಮಕ್ಕಳನ್ನು ನೋಡಲು 6 ತಿಂಗಳು ಅಥವಾ ವರ್ಷಕ್ಕೊಮ್ಮೆ ಬಂದು ಹೋಗುವುದುಂಟು. ಅವರ ಭೇಟಿಯ ಸುಖಮಯವಾಗಿರುವಂತೆ ಮಾಡಲು ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು :
ಆಗಾಗ ಭೇಟಿ ಮಾಡುವುದರಿಂದ ಸಾಮಾನ್ಯ ಸುಖದ ಅರಿವಾಗುತ್ತದೆ. ಪರಸ್ಪರರ ಅಗತ್ಯಗಳ, ಪದ್ಧತಿಗಳ ಹಾಗೂ ಜೀವನ ಶೈಲಿಯ ಪರಿಚಯವಾಗುತ್ತದೆ.
ಅವರು ಇರುವಲ್ಲಿಯೇ ಸಂತೋಷವಾಗಿದ್ದಾರೆ ಎನ್ನುವ ಮಾತು ಸರಿ. ಆದರೂ ತಾಯಿ ತಂದೆಯರನ್ನು ಆಗಾಗ ಕರೆಸಿಕೊಳ್ಳುವುದು ಮಕ್ಕಳ ಕರ್ತವ್ಯ. ಹೀಗೆ ಆಗಾಗ ಒಟ್ಟಿಗೆ ಸೇರುವುದರಿಂದ ಪ್ರೀತಿ ಉಳಿಯುತ್ತದೆ. ಅವರ ಬರುವಿಕೆಗಾಗಿ ವಿಶೇಷ ಸಿದ್ಧತೆಯೂ ಬೇಕಾಗುವುದಿಲ್ಲ.
ಅವರು ಬರುವುದು `ನಿಮ್ಮ ಮನೆಗೆ ಅಲ್ಲ,’ ಬದಲಾಗಿ `ತಮ್ಮ ಮನೆಗೆ’ ಎಂಬ ಈ ಆಲೋಚನೆಯನ್ನು ಅವರಿಗೆ ಉಂಟು ಮಾಡಿ. ಜೊತೆಗೆ ನಿಮ್ಮ ಮಕ್ಕಳಿಗೂ ಹಾಗೇ ತಿಳಿಹೇಳಿ. ನೀವೇ ನೋಡಿರುವಂತೆ, `ತಾತಾ ಬಂದರೆ ನನ್ನ ರೂಮಿನಲ್ಲೇ ಇರಬೇಕಾಗುತ್ತದೆ,’ ಎಂದು ಮೊಮ್ಮಗ ಹೇಳುವುದುಂಟು. ರಾತ್ರಿ ಬಹಳ ಹೊತ್ತಾದರೂ ಮೊಮ್ಮಗಳು ದೀಪ ಉರಿಸುತ್ತಲೇ ಇರುವುದನ್ನು ಅಜ್ಜಿ ವಿರೋಧಿಸಿದರೆ `ಈ ಅಜ್ಜಿ ಯಾವಾಗ ಹೋಗುತ್ತಾರೋ’ ಎಂದು ಅವಳು ಗೊಣಗುವುದುಂಟು. ನಿಮ್ಮ ಮಕ್ಕಳು ಹೀಗೆ ಹೇಳಿದರೆ, ನಿಮ್ಮ ತಾಯಿ ತಂದೆಯರ ಮನಸ್ಸಿಗೆ ಹೇಗಾಗುತ್ತದೆ ಎಂದು ಯೋಚಿಸಿ ನೋಡಿ. `ಅಜ್ಜಿ ತಾತ ಹೊರಗಿನವರು, ಮತ್ತು ಮನೆಯು ನಿಮ್ಮ ಕುಟುಂಬಕ್ಕಷ್ಟೇ ಸೇರಿದುದು,’ ಎಂಬ ಭಾವನೆ ನಿಮ್ಮ ಮಕ್ಕಳಲ್ಲಿ ಮೂಡುವಂತೆ ಮಾಡಿದುದು ನಿಮ್ಮದೇ ತಪ್ಪು ಎಂದು ಅರಿತುಕೊಳ್ಳಿ. ಮುಂದೊಂದು ದಿನ ನಿಮ್ಮ ಮಕ್ಕಳ ಜೀವನದಲ್ಲಿ ನೀವು ಪರಕೀಯರಂತೆ ಆಗುವಿರೆಂಬುದನ್ನು ಯೋಚಿಸಿ ನೋಡಿ.
ಲಕ್ಷ್ಯ ನೀಡಿ
ಮಕ್ಕಳು ಈ ರೀತಿ ಮಾತನಾಡಿದುದನ್ನು ಕೇಳಿದರೆ, ತಾಯಿ ತಂದೆಯರ ಎದುರಿಗೆ ಸರಿಯಾದ ವಿಷಯವನ್ನು ಅವರಿಗೆ ತಿಳಿಸಿ. ಮಕ್ಕಳು ಇರುವುದು ತಮ್ಮ ಅಜ್ಜಿ ತಾತನ ಮನೆಯಲ್ಲಿ ಎಂದು ಅವರಿಗೆ ಅರ್ಥ ಮಾಡಿಸಿ.
ತಾಯಿ ತಂದೆ ಬಂದಿದ್ದಾರೆಂದು ನಿಮ್ಮ ರೊಟೀನ್‌ನ್ನು ಬದಲಿಸಬೇಡಿ. ಇಲ್ಲವಾದರೆ ಅವರಿಗೆ ತಾವು ಹೊರೆಯಾಗಿದ್ದೇವೆಂದು ಭಾಸವಾಗುವುದು. ಊಟ, ತಿಂಡಿ ಎಲ್ಲ ನಿಮ್ಮ ನಿತ್ಯದ ಕ್ರಮದಂತೆಯೇ ಇರಲಿ. ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾತ್ರ ಬದಲಾವಣೆ ಮಾಡಿ, ಹೊಸ ಪೀಳಿಗೆಯ ಆಹಾರ ಪದ್ಧತಿಯಲ್ಲಿ ಬದಲಾವಣೆ ಉಂಟಾಗಿದೆ. ಅನ್ನ ಸಾಂಬಾರ್, ಚಪಾತಿ ಪಲ್ಯ ತಿನ್ನುವ ತಾಯಿ ತಂದೆಯರು ಇನ್ನೊಮ್ಮೆ ಬರ್ಗರ್ ಪಿಜ್ಜಾವನ್ನು ಆಸ್ವಾದಿಸಬಹುದು. ಅವರ ರುಚಿ ಮತ್ತು ಆರೋಗ್ಯಕ್ಕೆ ತಕ್ಕಂತೆ ಆಹಾರದ ವ್ಯವಸ್ಥೆ ಮಾಡಿ. ಇದು ನಿಮ್ಮ ಕರ್ತವ್ಯ ಹೌದು.
ಅವರು ಇಷ್ಟಪಟ್ಟು ಕೆಲಸ ಮಾಡಲು ಬಯಸಿದರೆ ಅಡ್ಡಿ ಮಾಡಬೇಡಿ. ಅವರ ಕೈಲಾಗುವಷ್ಟು ಅವರು ಮನೆಯ ಕೆಲಸ ಮಾಡಲಿ. ಇದರಿಂದ ಅವರು ಕಾಲ ಕಳೆಯಲು ಒಂದು ದಾರಿಯಾಗುತ್ತದೆ ಮತ್ತು ಜೊತೆಯಲ್ಲಿ ಕೆಲಸ ಮಾಡಿದ ಸಂತೋಷ ಸಿಗುತ್ತದೆ.
ತಿಳಿವಳಿಕೆಯಿಂದ ವರ್ತಿಸಿ
ಹಿರಿಯರೊಂದಿಗೆ ಅತಿಯಾದ ಮೌನ ಬೇಡ. ಹಾಗೇ ಹರಟೆಯೂ ಬೇಡ. ಅವರು ನಿಮ್ಮಲ್ಲಿಗೆ ಬಂದಿರುವಾಗ ಅವರೊಂದಿಗೆ ಸ್ವಲ್ಪ ಕಾಲ ಕಳೆಯಿರಿ, ಏಕೆಂದರೆ ಅವರು ಬಂದಿರುವುದೇ ಅದಕ್ಕಾಗಿ. ಜೊತೆಯಾಗಿ ವಾಕಿಂಗ್‌ಗೆ ಹೋಗಿ, ರಜೆ ಇರುವಾಗ ಹೊರಗೆ ಕರೆದೊಯ್ಯಿರಿ. ನಿಮ್ಮ ದಿನನಿತ್ಯದ ಕೆಲವು ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳಿ ಮತ್ತು ಅವರ ಮಾತನ್ನೂ ಕೇಳಿಸಿಕೊಳ್ಳಿ.
ಅವರ ಆರೋಗ್ಯವನ್ನು ಗಮನಿಸುತ್ತಿರಿ. ಅವರ ದಿನಚರಿಯಲ್ಲಿ ಬದಲಾವಣೆ ಕಂಡರೆ ಆರೋಗ್ಯದ ಸಮಸ್ಯೆ ಇದೆಯೇ ಎಂದು ವಿಚಾರಿಸಿ. ಅಗತ್ಯವಾದರೆ ಡಾಕ್ಟರ್‌ರ ಬಳಿಗೆ ಕರೆದೊಯ್ಯಿರಿ. ಹಿಂದೆ ನಿಮ್ಮ ಮುಖ ನೋಡಿಯೇ ನಿಮ್ಮ ತಾಯಿಯೂ ನಿಮ್ಮ ತೊಂದರೆಯನ್ನು ಗ್ರಹಿಸುತ್ತಿದ್ದರು ಎಂಬುದನ್ನು ನೆಪಿಸಿಕೊಳ್ಳಿ.
ತಾಯಿ ತಂದೆಯರನ್ನು ಬೇಗ ಬೇಗನೆ ಭೇಟಿ ಮಾಡುತ್ತಿದ್ದರೆ, ಅವರ ಕಾಯಿಲೆಯ ಬಗ್ಗೆ ನಿಮಗೆ ಮೊದಲೇ ಸುಳಿವು ಸಿಗುತ್ತದೆ. ಆಗ ಅದು ಹೆಚ್ಚಾಗುವ ಮೊದಲೇ ನೀವು ಚಿಕಿತ್ಸೆಯ ವ್ಯವಸ್ಥೆ ಮಾಡಬಹುದು.
ನಿಮ್ಮ ಮಕ್ಕಳು ಅಜ್ಜಿ ತಾತನ ಜೊತೆ ಬೆರೆಯಲು ಅವಕಾಶ ನೀಡಿ. ಅವರ ಬಗ್ಗೆ ಕಾಳಜಿ ವಹಿಸುವಂತೆ ಮಾಡಿ. ಗ್ರಾಂಡ್ ಪೇರೆಂಟ್ಸ್ ಜೊತೆ ಬೆಳೆದ ಮಕ್ಕಳು ಹೆಚ್ಚು ನಿಸ್ವಾರ್ಥಿಗಳು, ತಿಳಿವಳಿಕಸ್ಥರು ಮತ್ತು ಉತ್ತಮ ನಾಗರಿಕರೂ ಆಗುತ್ತಾರೆ. ಮುಂದೆ ನಿಮ್ಮ ವೃದ್ಧಾಪ್ಯದಲ್ಲಿ ಅವರು ನಿಮ್ಮೊಂದಿಗೆ ಸಹಜವಾಗಿ ನಡೆದುಕೊಳ್ಳುತ್ತಾರೆ.
ಮನೆಯ ಕೆಲವು ವಿಷಯಗಳನ್ನು ಬೆಳೆಯಲು ಬಿಡಬೇಡಿ. 2 ಪಾತ್ರೆಗಳಿರುವಾಗ ತಾಕಾಟಲಾಗುವುದು ಸ್ವಾಭಾವಿಕವೇ. ಚಿಕ್ಕಪುಟ್ಟ ಮಾತುಗಳನ್ನು ಅಲ್ಲಲ್ಲಿಗೇ ಬಿಡುವುದು ಬುದ್ಧಿವಂತಿಕೆ.
ಸುನಂದಾಳ ಪತಿಗೆ ಅವಳ ತಂದೆಯನ್ನು ಕಂಡರೆ ಅಷ್ಟು ಇಷ್ಟವಿರಲಿಲ್ಲ. ಆದರೂ ಅವರನ್ನು ಕರೆಸಿಕೊಳ್ಳುವುದನ್ನು ಬಿಡಲಿಲ್ಲ. ಇಷ್ಟವಿಲ್ಲದಿದ್ದರೂ ಆಗಾಗ ಭೇಟಿಯಾಗುತ್ತಿದ್ದುದರಿಂದ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳತೊಡಗಿದರು. ಸುನಂದಾಳಿಗೆ ಒಮ್ಮೆ ಕಂಪನಿಯ ಕೆಲಸದ ಮೇರೆಗೆ ವಿದೇಶಕ್ಕೆ ಹೋಗಬೇಕಾಯಿತು. ಅದೇ ಸಮಯದಲ್ಲಿ ಅವಳ ಪತಿಗೆ ಅಪಘಾತದಿಂದ ಕಾಲು ಮೂಳೆ ಮುರಿಯಿತು. ಆಗ ಅವರ ಅತ್ತೆ ಮಾವಂದಿರೇ ಬಂದು ಮನೆಯಲ್ಲಿದ್ದು ಮನೆಯನ್ನು ಸಂಭಾಳಿಸಿದರು.
ಸಾಮೀಪ್ಯ ಹೆಚ್ಚಲಿ
ಅತ್ತೆ ಸೊಸೆಯರಿಬ್ಬರೂ ಒಬ್ಬನೇ ವ್ಯಕ್ತಿಯನ್ನು ಪ್ರೀತಿಸುತ್ತಾರೆಂಬುದು ನಿರ್ವಿವಾದ. ಆದರೆ ವಿಪರ್ಯಾಸವೆಂದರೆ, ಇದರಿಂದಲೇ ಅವರ ಮಧ್ಯೆ ಕಲಹವಾಗಿ ಸಂಬಂಧದಲ್ಲಿ ಬಿರುಕುಬಿಡುತ್ತದೆ. ಬುದ್ಧಿವಂತಿಕೆಯಿಂದ ಮಗ ಈ ಚಕಮಕಿ ತಪ್ಪಿಸಲು ಸಾಧ್ಯ. ಹೊಂದಾಣಿಕೆ ಇಲ್ಲವೆಂದು ದೂರದೂರವೇ ಉಳಿದರೆ ಸಂಬಂಧ ಕೊನೆಯಾಗುತ್ತದೆ. ಆಗಾಗ ಭೇಟಿ ಮಾಡುತ್ತಾ ಜೊತೆಯಲ್ಲಿ ಬಾಳುವುದರಿಂದ ಕ್ರಮೇಣ ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಸಾಮೀಪ್ಯ ಹೆಚ್ಚುವುದರಿಂದ ಸಮಸ್ಯೆಗೆ ಸಮಾಧಾನ ಸಿಗುತ್ತದೆ.
ತಾಯಿ ತಂದೆ ನಿಮ್ಮ ಪಾಲನೆ ಪೋಷಣೆ ಮಾಡಿ ದೊಡ್ಡವರನ್ನಾಗಿಸಿದ್ದಾರೆ. ಅವರು ನಿಮ್ಮನ್ನು ಪೋಷಿಸಿದಂತೆ ತಮ್ಮನ್ನು ತಾವು ಪೋಷಿಸಿಕೊಳ್ಳಬಲ್ಲರು. ಅವರು ಈಗ ಆರೋಗ್ಯದಿಂದಿರುವಾಗ, ತಮ್ಮಷ್ಟಕ್ಕೇ ಬೇರೆ ಇರಲು ಸಮರ್ಥರಿರುವಾಗ, ಅವರನ್ನು ಭೇಟಿ ಮಾಡುವ ಅವಕಾಶಕ್ಕಾಗಿ ಪ್ರಯತ್ನ ಪಡುವುದು ನಿಮ್ಮ ಕರ್ತವ್ಯ. ಅವರನ್ನು ಆಗಾಗ ನಿಮ್ಮಲ್ಲಿಗೆ ಬರಮಾಡಿಕೊಂಡು ಪ್ರೀತಿ, ಗೌರವಗಳನ್ನು ತೋರಿಸಿ. ಇದರಿಂದ ನಾಳೆ ಅವರು ಅಶಕ್ತರಾದಾಗ, ನಿಮ್ಮ ಬಳಿಯೇ ಬಂದು ಇರಬೇಕಾದ ಸಂದರ್ಭದಲ್ಲಿ ಇವರಿಗೆ ಹಿಂಜರಿಕೆ ಉಂಟಾಗುವುದಿಲ್ಲ. ನಿಮ್ಮೆಲ್ಲರೊಂದಿಗೆ ಪ್ರೀತಿಯಿಂದ ಕಳೆದ ದಿನಗಳನ್ನು ಮೆಲುಕುಹಾಕುತ್ತಾ ಅವರು ಸಂತೋಷದಿಂದ ಕಾಲಕಳೆಯುತ್ತಾರೆ.
ಸಂಬಂಧಗಳು ಕೀಲು ಬೊಂಬೆಗಳಂತೆ…. ಅವುಗಳ ದಾರವಿರುವುದು ನಮ್ಮ ಆಲೋಚನೆ, ಬುದ್ಧಿವಂತಿಕೆ ಮತ್ತು ಹೊಂದಾಣಿಕೆಯಲ್ಲಿ. ಭಾರತೀಯ ಸಾಮಾಜಿಕ ರೀತಿನೀತಿಯೂ ಇದೇ ಬಗೆಯದು. ತಾಯಿತಂದೆ ಮತ್ತು ಮಕ್ಕಳು ಮೊಮ್ಮಕ್ಕಳು ಹತ್ತಿರವಿರಲಿ ಅಥವಾ ದೂರವಿರಲಿ, ಸದಾ ಪರಸ್ಪರರ ಬುದ್ಧಿ ಮತ್ತು ಹೃದಯದಲ್ಲಿ ನೆಲೆಸಿರುತ್ತಾರೆ.
– ಸುರೇಖಾ ಪ್ರಮೋದ್