“ಆಂಟಿ, ಕಿಟ್ಟೀನ ಕರೀರಿ,” ಕಿಟ್ಟಿಯ ಗೆಳೆಯ ಉಮೇಶ ಬಾಗಿಲಲ್ಲಿ ನಿಂತುಕೊಂಡು ಹೇಳಿದ.
“ಒಳಗೆ ಬಾರೋ ಪುಟ್ಟ, ಕಿಟ್ಟಿ ಇಲ್ಲ, ಹೊರಗಡೆ ಆಡ್ತಿರಬೇಕು ಅಥವಾ ಪಾರ್ಕಿಗೆ ಹೋಗಿರಬೇಕು. ನೀನು ಒಳಗೆ ಬಾ.” ಸುನೀತಾ ಹೇಳಿದಳು.
ಸುನೀತಾಗೆ ಉಮೇಶ ಬಹಳ ಇಷ್ಟವಾಗಿದ್ದ. ದುಂಡುದುಂಡಗೆ, ಬೆಳ್ಳಗಿದ್ದ ಉಮೇಶ ಗುಡ್ಡ ಗಾಡಿನ ಹುಡುಗ. ಬೆಟ್ಟದ ಮಕ್ಕಳು ಬಹಳ ಮುದ್ದಾಗಿ, ಚೆನ್ನಾಗಿ ಇರ್ತಾರೆ.
“ ಇಲ್ಲ ಆಂಟಿ, ನಿಮ್ಮ ಮನೆಗೆ ಹೋಗಬಾರದು ಅಂತ ನನ್ನಮ್ಮ ಹೇಳಿದ್ದಾರೆ. ನೀವು ತುಂಬಾ ಜಗಳ ಆಡ್ತೀರಂತೆ, ಕಿರುಚಾಡ್ತೀರಂತೆ,” ಉಮೇಶ ಮುಗ್ಧತೆಯಿಂದ ಹೇಳಿ ಓಡಿಹೋದವು. ಅದರೆ ಸುನೀತಾಗೆ ಆ ಪುಟ್ಟ ಹುಡುಗ ತನ್ನ ಶರೀರದಲ್ಲಿ ಅಗಣಿತ ಮುಳ್ಳುಗಳನ್ನು ಚುಚ್ಚಿದನೇನೋ ಎಂದು ಅನಿಸಿತು. ಅವಳ ಮನಸ್ಸು ರಕ್ತಸಿಕ್ತವಾದಂತಾಯಿತು. ಎಷ್ಟೊಂದು ಪ್ರಶ್ನೆಗಳು, ಎಷ್ಟು ಒಳನೋಟಗಳು ಅವಳ ಒಳಗೆ ಏಳುತ್ತಾ ಬೀಳುತ್ತಾ ಇದ್ದೀ. ಶರೀರದಲ್ಲಿ ಶಕ್ತಿಯೇ ಇಲ್ಲವೇನೋ ಎಂಬಂತೆ ಅವಳು ಸೋಫಾ ಮೇಲೆ ಹಾಗೇ ಕುಳಿತುಬಿಟ್ಟಳು. ಒಂಟಿಯಾಗಿ ಕುಳಿತ ಅವಳ ಮನಸ್ಸಿನೊಳಗೆ ಕೋಲಾಹಲ ಉಂಟಾಯಿತು ಮತ್ತು ಆಕೆ ಸ್ವತಃ ಕಳೆದಹೋದ ವಿಷಯಗಳ ವಿಶ್ಲೇಷಣೆ ಮಾಡತೊಡಗಿದಳು.
ತಾನು ನಿಜವಾಗಲೂ ಜಗಳಗಂಟಿಯೇ? ಅವನು ಸರಿಯಾಗೇ ಹೇಳಿದ್ದ. ಅವಳು ಕಿರುಚುವುದು ಮನೆಯ ಹೊಸಿಲು ದಾಟಿ ಹೊರಗೂ ಕೇಳಿಸುತ್ತಿರಬೇಕು. ಕೇಳಿದವರು ಹೀಗೆ ಹೇಳುತ್ತಾರೆ. ಬಹುಶಃ ಇದೇ ಕಾರಣದಿಂದ ಅಕ್ಕಪಕ್ಕದ ಜನ ಅವಳ ಮನೆಗೂ ಬರುವುದಿಲ್ಲ. ಅವಳನ್ನು ತಮ್ಮ ಮನೆಗೂ ಕರೆಯುವುದಿಲ್ಲ. ನೆರೆಹೊರೆಯವರೇನು ಬಂಧುಗಳು ಕೂಡ ಅಷ್ಟೇ ಅವಳಿಂದ ದೂರ ಇರಲು ನೋಡುತ್ತಾರೆ. ಅವಳ ಹತ್ತಿರ ಮಾತಾಡಲು ಹೆದರುತ್ತಾರೆ. ಅವಳು ಕಟ್ಟಿದ್ದ ಸಾಮ್ರಾಜ್ಯದಲ್ಲಿ ಅವಳು ಒಬ್ಬಳೇ ಇರಬೇಕಾಗುತ್ತದೇನೋ.
ಎಲ್ಲಾ ತಪ್ಪು ತನ್ನೊಬ್ಬಳದೇ…. ಬಾಲ್ಯದಿಂದಲೂ ಇಂತಹದೇ ವಾತಾವರಣ ನೋಡಿದ್ದಾಳೆ. ಅಪ್ಪ ಅಮ್ಮ ಯಾವಾಗಲೂ ಜಗಳವಾಡುತ್ತಿದ್ದುದನ್ನು ಕಂಡಿದ್ದಾಳೆ. ಯಾವ ವಾತಾವರಣದಲ್ಲಿ ಮಕ್ಕಳು ಬೆಳೆದಿರುತ್ತಾರೋ ಅದರ ಪ್ರಭಾವ ಅವರ ವ್ಯಕ್ತಿತ್ವದ ಮೇಲೂ ಬೀಳುತ್ತದೆ. ಜೀವನ ನಡೆಸುವ ರೀತಿಯನ್ನು ಅದಕ್ಕೆ ಅನುರೂಪವಾಗಿ ಮಾಡಿಕೊಳ್ಳುತ್ತಾರೆ.
ಅವರ ದೃಷ್ಟಿ, ವ್ಯವಹಾರ ಎಲ್ಲ ಪರಿಸರದ ಅನುಸಾರ ರೂಪುಗೊಳ್ಳುತ್ತದೆ ಮತ್ತು ಬಾಲ್ಯದ ಅಡಿಪಾಯ ಎಷ್ಟು ಭದ್ರವಾಗಿರುತ್ತದೆಂದರೆ ದೊಡ್ಡವರಾಗುವವರೆಗೆ ಅದು ಬೇರೂರಿಬಿಟ್ಟಿರುತ್ತದೆ. ಆದರೆ ಇದರಲ್ಲಿ ಸುನೀತಾಳ ತಪ್ಪೇನು? ಸಕಾಲದಲ್ಲೇ ತನ್ನನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡದ್ದೇ ಅವಳ ತಪ್ಪು. ತಾಯಿ ಮಾತುಮಾತಿಗೆ ತಂದೆಯ ಜೊತೆ ಜಗಳವಾಡುತ್ತಿದ್ದಳು. ಮನೆಯ ಹತ್ತು ಹಲವು ಕೊರತೆಗಳು ಅವಳನ್ನು ಕಾಡುತ್ತಿದ್ದವು. ನಾಲ್ಕು ಮಕ್ಕಳು ಬೇರೆ. ತಂದೆ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಆರಾಮ ಬಯಸುವ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅವನ ಅಭ್ಯಾಸದಿಂದ ಬೇಸತ್ತ ತಾಯಿ ರೇಗಾಡುತ್ತಿದ್ದಳು. ಅವಳ ಮನದಲ್ಲಿ ಕಹಿ ತುಂಬಿಕೊಂಡಿತ್ತು. ಇದರಿಂದ ತಂದೆಯ ಮೇಲೆ ಯಾವುದೇ ಪರಿಣಾಮವಾಗುತ್ತಿರಲಿಲ್ಲ. ವಿಷಯ ದೊಡ್ಡದಾದಾಗ ಮನೆಯಿಂದ ಹೊರಗೆ ಹೋಗುತ್ತಿದ್ದರು. ಹತಾಶಳಾದ ತಾಯಿ ಕಣ್ಣೀರನ್ನು ಒರೆಸಿಕೊಂಡು ಹೇಗೋ ಹಣ ಹೊಂದಿಸುವ ಉಪಾಯ ಹುಡುಕತೊಡಗುತ್ತಿದ್ದಳು. ತಂದೆಗೆ ಊಟದಲ್ಲಿ ಇಷ್ಟವಾದ ಪದಾರ್ಥ ಇಲ್ಲದಿದ್ದರೆ ತಾಯಿಯ ಮೇಲೆ ಕೈಮಾಡುತ್ತಿದ್ದರು, ಬೈಯುತ್ತಿದ್ದರು. ನಾಲ್ಕು ಮಕ್ಕಳು ಮೂಲೆಯಲ್ಲಿ ಮುದುರಿಕೊಳ್ಳುತ್ತಿದ್ದರು.
ಇಬ್ಬರು ಸೋದರರು ಮನೆಬಿಟ್ಟು ಹೊರಟುಹೋದರು. ಅಕ್ಕ ತಾನೇ ವರನನ್ನು ಹುಡುಕಿಕೊಂಡು ತನ್ನ ಸಂಸಾರ ಹೂಡಿದಳು. ಸುನೀತಾ ಎಲ್ಲರಿಗಿಂತ ಚಿಕ್ಕವಳು. ಅವಳ ಬಗ್ಗೆ ಯಾರೂ ಯೋಚಿಸಲೇ ಇಲ್ಲ. ಎದುರುಬೀಳುವ ಧೈರ್ಯ ಅವಳಿಗೆ ಬರಲಿಲ್ಲ. ಏಕೆಂದರೆ ತಂದೆಯ ಹೊಡೆತದಿಂದಾಗಿ ಅವಳು ಕಾಯಿಲೆ ಬೀಳುತ್ತಿದ್ದಳು.
ಸಾಯುವ ಮೊದಲು ಅವಳ ತಂದೆ ಒಂದು ಒಳ್ಳೆಯ ಕೆಲಸ ಮಾಡಿದರು. ಸುನೀತಾಳ ಮದುವೆಯನ್ನು ಸಿರಿವಂತ ವರನೊಂದಿಗೆ ಮಾಡಿದರು. ಅವಳಿಗೆ ಪರಿಶ್ರಮಿ, ತಿಳಿವಳಿಕೆಯುಳ್ಳ ಪತಿ ಸಿಕ್ಕಿದ. ಅವನು ಅವಳನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ಸುನೀತಾಳನ್ನು ಆ ಪ್ರೀತಿಯ ಧಾರೆ ಹರಿಯುತ್ತಲೇ ಇದ್ದಿದ್ದರೆ ಅವನು ಅದಕ್ಕೆ ಇನ್ನೂ ಸೇರಿಸುತ್ತಿದ್ದನೋ ಏನೋ? ಸುನೀತಾ ತನ್ನ ಬಗ್ಗೆ ವಿಮರ್ಶೆ ಮಾಡಿಕೊಳ್ಳತೊಡಗಿದಳು. `ನಾನು ಎಲ್ಲರ ಜೊತೆ ಜಗಳವಾಡ್ತೀನಿ. ಅಮ್ಮನ ಜೊತೆ, ಅಕ್ಕನ ಜೊತೆ, ಅಣ್ಣಂದಿರ ಜೊತೆ, ಗಂಡ ಮತ್ತು ಮಕ್ಕಳ ಜೊತೆ, ಇದರಿಂದ ನನಗೇನು ಸಿಗ್ತಾ ಇಲ್ಲ? ನಾನೆಷ್ಟು ಒಂಟಿಯಾಗಿದ್ದೀನಿ ಅನ್ನುವ ಅರಿವು ಕೂಡ ಇದುವರೆಗೂ ನನಗಾಗಿರಲಿಲ್ಲ. ಅಮ್ಮ ಕೊರತೆಗಳ ಮಧ್ಯೆಯೇ ಬದುಕುತ್ತಿದ್ದಳು. ಜಗಳವಾಡುವುದು ಅವಳಿಗೆ ಸಹಜವಾಗಿತ್ತು. ಸೋಮಾರಿ ಪತಿಯ ಜೊತೆ ಜೀವನ ಮಾಡುವುದು ಕಷ್ಟವಾಗಿತ್ತು. ಆದರೆ ನಾನು ಸಿರಿವಂತಿಕೆಯ ಸುಪ್ಪತ್ತಿಗೆಯ ಮೇಲಿದ್ದೇನೆ. ಗಂಡನಲ್ಲಿ ಯಾವ ಅವಗುಣ ಇಲ್ಲ. ಅಂದರೂ….`ಅವಳು ತನ್ನೊಂದಿಗೆ ತಾನೇ ಹೋರಾಡಲು ಆತುರಳಾಗಿದ್ದಳು. ಒಂದು ದಿನ ಅವಳು ಪತಿಗೆ ಜಾಮೂನು ತರಲು ಹೇಳಿದ್ದಳು. ಪತಿ ರಸಗುಲ್ಲಾ ತಂದಿದ್ದ. ಸುನೀತಾ ಅದೇ ವಿಷಯದ ಬಗ್ಗೆ ಕಿರುಚತೊಡಗಿದಳು. ನಾನು ಅಂದರೆ ನಿಮಗೆ ಲೆಕ್ಕವೇ ಇಲ್ಲ ಎಂದು ಕಿರುಚಿದಳು. ಗಂಡ ಎಷ್ಟೋ ತಿಳಿ ಹೇಳಿದ. ಜಾಮೂನು ಇರಲಿಲ್ಲ. ನಾನು ನಾಳೆ ಎಲ್ಲಿಂದಾದರೂ ತಂದುಕೊಡುತ್ತೇನೆ ಎಂದ. ಸುನೀತಾ ಕೇಳಬೇಕಲ್ಲ. ಅವಳು ರಸಗುಲ್ಲಾವನ್ನು ಮುಟ್ಟಲೂ ಇಲ್ಲ. ಇನ್ನು ಕಿಟ್ಟಿಯನ್ನು ಮಾತುಮಾತಿಗೂ ಬೈಯುತ್ತಿದ್ದಳು. ಚಿಕ್ಕ ಹುಡುಗ ಸಾಮಾನೆಲ್ಲಾ ಹರಡುತ್ತಾನೆ. ಆದರೆ ಸುನೀತಾ ಅವನನ್ನು ಶಿಸ್ತಿನಲ್ಲಿ ಕಟ್ಟಿಹಾಕುವ ತಪ್ಪು ಮಾಡುತ್ತಿದ್ದಾಳೆ. ಅವನು ಒಂದು ದಿನ, “ ಅಮ್ಮ, ನೀವು ಟೀವೀಲಿ ತೋರಿಸುವ ಹಿಟ್ಲರ್ ತರಹ ಇದೀರ. ಅಮ್ಮ ಅಂತ ಅನ್ನಿಸೋದೇ ಇಲ್ಲ. ಎಲ್ಲ ಅಮ್ಮಂದಿರು ತಮ್ಮ ಮಕ್ಕಳನ್ನು ಎಷ್ಟು ಮುದ್ದು ಮಾಡ್ತಾರೆ. ನೀವು ನೋಡಿದರೆ ಯಾವಾಗಲೂ ದೂರ ತಳ್ತೀರಾ. ಅಪ್ಪ ಎಷ್ಟು ಒಳ್ಳೆಯವರು. ಹತ್ತಿರ ಮಲಗಿಸ್ಕೋತಾರೆ. ರಾಧಾಳ ಅಮ್ಮನ ಹತ್ತಿರ ಹೋದರೆ ಎಷ್ಟು ಒಳ್ಳೆ ಸುವಾಸನೆ ಬರುತ್ತೆ ಗೊತ್ತಾ?” ಎಂದ.
ರಾಧಾಳ ಅಮ್ಮನ ಬಳಿ ಬರುವ ಸುವಾಸನೆ ಮಮತೆಯದು ಎಂದು ಸುನೀತಾಗೆ ಮೊದಲೇ ಯಾಕೆ ಹೊಳೆಯಲಿಲ್ಲ? ಇವತ್ತು ಯೋಚಿಸುತ್ತಾ ಕುಳಿತಾಗ ಗೊತ್ತಾಗುತ್ತಿದೆ. ರಾಧಾ ಯಾವಾಗಲೂ ನಗುನಗುತ್ತಾ ಇರುತ್ತಾಳೆ. ತುಟಿಗಳ ಮೇಲಿನ ಮುಗುಳ್ನಗೆ ಯಾವಾಗಲೂ ಇರುತ್ತದೆ. ಸುನೀತಾ ಕನ್ನಡಿಯ ಮುಂದೆ ಹೋಗಿ ನಿಂತಳು. ಮುಖದ ಮೇಲಿನ ಕಾಂತಿ ಮಾಯವಾಗಿದೆ. ಕೋಮಲತೆಯ ಸ್ಥಳದಲ್ಲಿ ಕಠೋರತೆ ಕಾಣಿಸುತ್ತಿದೆ. ಅವಳ ಮಗಳು ಅದಿತಿ ಈಗ ದೊಡ್ಡವಳಾಗುತ್ತಿದ್ದಾಳೆ. 12 ವರ್ಷದ ಮಗಳು ತಿಳಿವಳಿಕೆಯುಳ್ಳವಳಾಗಿದ್ದಾಳೆ.
“ಅಮ್ಮಾ, ನಿಮ್ಮ ಸಮಸ್ಯೆಯೇನು?” ಒಂದು ದಿನ ಮಗಳು ತಾಯಿಯನ್ನು ಕೇಳಿದಳು. ಅವಳ ಮಾತಿಗೆ ಸುನೀತಾ ರೇಗತೊಡಗಿದಾಗ ಅದಿತಿ ಅವಳನ್ನು ತಡೆದು, “ ಅಮ್ಮ, ಕಿರುಚಬೇಡಿ. ನಿಮಗೇನು ತೊಂದರೆ ಅಂತ ಕೇಳ್ತಿದ್ದೀನಿ. ಅಪ್ಪ ಅಷ್ಟೊಂದು ಹಣ ಕೊಡ್ತಾರೆ, ಮನೇಲಿ ಎಲ್ಲಾ ವಸ್ತುಗಳೂ ಇವೆ. ಮತ್ಯಾಕೆ ಜಗಳವಾಡ್ತೀರಿ? ನಿಮಗೆ ನಮ್ಮನ್ನು ಕಂಡರೆ ದ್ವೇಷವೇ? ಸ್ನೇಹಿತೆಯರನ್ನು ಕೂಡಾ ನಾನು ಮನೆಗೆ ಕರೆಯುವ ಹಾಗಿಲ್ಲ. ನೀವು ಯಾವಾಗ ಯಾರ ಜೊತೆ ಜಗಳ ಆಡ್ತೀರೋ ಗೊತ್ತಾಗಲ್ಲ. ನಮ್ಮನ್ನು ನೆಮ್ಮದಿಯಿಂದ ಬದುಕಲು ನೀವು ಯಾಕೆ ಬಿಡುವುದಿಲ್ಲ?” ಎಂದಳು.
“ಚೋಟುದ್ದ ಹುಡುಗಿ ನೀನು…. ನನ್ನನ್ನು ಪ್ರಶ್ನೆ ಕೇಳ್ತಿದೀಯ? ನಿಮ್ಮಪ್ಪ ಎಂದೂ ನನ್ನ ಜೊತೆ ಹೀಗೆ ಮಾತಾಡಿಲ್ಲ.”
“ಪಾಪಾ ಅಪ್ಪ. ನೀವು ನಮ್ಮ ಮೇಲೆ ಕೋಪ ಮಾಡಿಕೊಳ್ಳದಿರಲಿ ಅಂತ ಸುಮ್ಮನಿರ್ತಾರೆ. ಆದರೆ ನನಗೆ ಸುಮ್ಮನಿರಕ್ಕಾಗಲ್ಲ, ಜನ ನಮ್ಮನ್ನ ನೋಡಿ ತಮಾಷೆ ಮಾಡ್ತಾರೆ. ಹೊರಗೆ ಹೋದಾಗ ಇವಳ ತಾಯಿ ಇವತ್ತೂ ಮಹಾಭಾರತ ನಡೆಸಿದ್ದಾರೆ ಅಂತ ನಗ್ತಾರೆ. ಎಲ್ಲರ ಕಿವಿಗಳೂ ನಮ್ಮ ಮನೆ ಕಡೇನೇ ಇರುತ್ತೆ. ಅಪ್ಪ ಇದರಿಂದ ಎಷ್ಟು ನಾಚಿಕೆಗೀಡಾಬೇಕಾಗುತ್ತೆ ಅಂತ ನೀವು ಎಂದೂ ಯೋಚಿಸೇ ಇಲ್ಲ.”
ಸುನೀತಾಗೆ ತಾನೇ ಎಲ್ಲವನ್ನೂ ಅನುಭವಿಸಿದ್ದರೂ ಮಗಳ ನೋವನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವಳು ಈಗ ಸರಿಹೋಗದಿದ್ದರೆ ಅದಿತಿಯ ರೂಪದಲ್ಲಿ ಇನ್ನೊಬ್ಬ ಸುನೀತಾ ತಯಾರಾಗುತ್ತಾಳೆ. ಗಂಡನೂ ಮನೆಯಲ್ಲಿ ಇರಲು ಇಷ್ಟಪಡುವುದಿಲ್ಲ. ರಜಾ ಇದ್ದ ದಿನ ಮನೆಯಿಂದ ಮಾಯವಾಗಿರ್ತಾರೆ. ಅವಳು ಜಗಳವಾಡಿದರೂ ಏನೂ ಪ್ರಯೋಜನವಿಲ್ಲ. ಹೀಗೆ ಎಲ್ಲರ ಹತ್ತಿರ ನಡೆದುಕೊಂಡರೆ ಅವಳು ಒಂಟಿಯಾಗಿಬಿಡ್ತಾಳೆ. ಕೊನೆಗೆ ಕೇವಲ ಶೂನ್ಯತೆ ಆವರಿಸುತ್ತದೆ. ತನ್ನ ಜೀವನದಲ್ಲಿ ಅವಳೇನು ಮಾಡುತ್ತಾಳೆ? ಎಲ್ಲರೂ ಬಿಟ್ಟುಹೋದರೆ ಯಾರ ಹತ್ತಿರ ಮಾತನಾಡುತ್ತಾಳೆ?
ಸುನೀತಾಳ ಹಣೆಯಲ್ಲಿ ಬೆವರ ಹನಿಗಳು ಸಾಲುಗಟ್ಟಿದ್ದವು. ಅಲೆದಾಡುತ್ತಾ ಯಾರನ್ನು ಹುಡುಕುತ್ತಾ ಅವಳು ಇಷ್ಟು ದೂರ ಬಂದಿದ್ದಾಳೆ? ಅವಳಿಗೆ ನೆಮ್ಮದಿ ಸಿಕ್ಕಿತು. ಆದರೆ ಅವಳೇ ಅದನ್ನು ಮರಳಿನಂತೆ ಜಾರಿ ಹೋಗಲು ಬಿಟ್ಟಿದ್ದಳು.
“ಸುನೀತಾ” ಪತಿಯ ದ್ವನಿ ಕೇಳಿ ಬೆಚ್ಚಿದಳು.
“ಇದೇನು? ಕತ್ತಲೆಯಾಗಿದೆ ಇನ್ನೂ ದೀಪ ಹಚ್ಚಿಲ್ವಾ?” ಸಂಯಮದಿಂದ ಮೆಲ್ಲನೆ ಕೇಳಿದ. ಬೇರೆ ದಿನವಾಗಿದ್ದರೆ ಏನು ಅಂತಹ ಅಪರಾಧ ಆಯಿತು? ನೀವೇ ಹಚ್ಚಿ ಅನ್ನುತ್ತಿದ್ದಳು.
ಅವಳು ಎದ್ದು ಮೌನವಾಗಿ ದೀಪ ಹಚ್ಚಿದಳು. ಮುಖ ತೊಳೆದು ಕಾಫಿ ಮಾಡತೊಡಗಿದಳು. ಜೊತೆಗೆ ಅವಲಕ್ಕಿ ಒಗ್ಗರಣೆ ಹಾಕಿದಳು. ತನ್ನನ್ನು ಸಹಜವಾಗಿ ಬದಲಿಸಿ ಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಪ್ರಯತ್ನ ಪಟ್ಟರೆ ಕಲ್ಲನ್ನೂ ಕರಗಿಸಬಹುದು. ಸುನೀತಾ ಇನ್ನೂ ಕಲ್ಲಾಗಿಲ್ಲ. ಜ್ವಾಲಾಮುಖಿ ಒಳಗೆ ಸಂವೇದನಾಶೀಲ ಮನಸ್ಸು ಇನ್ನೂ ಉಳಿದಿದೆ. ಅವಳೇ ತನ್ನ ಹಟದಿಂದಾಗಿ ಅದನ್ನು ಹೊರಗೆ ಬರಲು ಬಿಡುತ್ತಿಲ್ಲ. ಅಷ್ಟು ಹೊತ್ತಿಗೆ ಅದಿತಿ ಮತ್ತು ಕಿಟ್ಟಿ ಕೂಡ ಬಂದಿದ್ದರು. ಇಬ್ಬರ ಮುಖದ ಮೇಲೆ ಎಂದಿನಂತೆ ಆತಂಕವಿತ್ತು. ಅಮ್ಮ ಯಾವಾಗ ಕಿರುಚಾಡ್ತಾಳೋ ಅಥವಾ ಅಪ್ಪನ ಜೊತೆ ಇಷ್ಟು ಹೊತ್ತಿಗೆ ಜಗಳವಾಡಿರ್ತಾಳೋ ಏನೋ. “ನೀವು ಅವಲಕ್ಕಿ ತಿನ್ನಲು ಬನ್ನಿ. ನಿಮ್ಮಿಬ್ಬರಿಗೂ ಹಾಲು ತರ್ತೀನಿ,” ಸುನೀತಾ ತನ್ನ ದನಿಯಲ್ಲಿ ತುಂಬಾ ಮಾಧುರ್ಯ ತುಂಬಲು ಯತ್ನಿಸುತ್ತಿದ್ದಳು. ಒಳಗಿದ್ದ ಮೊಳಕೆ ಒಡೆದು ಬರಲು ಆತುರವಾಗಿತ್ತು. ಆದರೆ ಮೇಲಿನ ಸಿಪ್ಪೆ ಇನ್ನೂ ಗಟ್ಟಿಯಾಗಿತ್ತು. ಆ ಸಂಜೆ ಯಾವುದೇ ಕಿರುಚಾಟ, ಗಲಾಟೆಯಿಲ್ಲದೆ ಕಳೆಯಿತು. ಪತಿ, ಮಕ್ಕಳಿಗೆ ಆಶ್ಚರ್ಯ, ಎಲ್ಲರಿಗಿಂತ ಹೆಚ್ಚು ಅಚ್ಚರಿಯಾಗಿದ್ದು ಸುನೀತಾಳಿಗೆ. ಅವಳು ಶಾಂತವಾಗಿರಬಲ್ಲಳು. ತನ್ನ ಸಾಮ್ರಾಜ್ಯಕ್ಕೆ ಅವಳೇ ಒಡತಿಯಾದಳು ಸ್ನೇಹ ಮತ್ತು ಪ್ರೀತಿ ತುಂಬಿದವಳಾಗಿರಬೇಕು. ಆಗ ಸೂಕ್ತ ಮರ್ಯಾದೆ ಸಿಗುತ್ತದೆ. ರಾತ್ರಿ ಮಲಗುವಾಗ ಅವಳ ಮುಖದ ಮೇಲೆ ಸಂತೋಷವಿತ್ತು. ಅವಳು ಪ್ರಯತ್ನಪಡುತ್ತಾಳೆ ಮತ್ತು ಯಶಸ್ವಿಯೂ ಆಗುತ್ತಾಳೆ. ಭೂತಕಾಲದ ನೆರಳುಗಳು ಅವಳ ವರ್ತಮಾನ ಮತ್ತು ಭವಿಷ್ಯಗಳನ್ನು ನುಂಗಬಾರದು.