ಸಾಮಾನ್ಯವಾಗಿ 2-3 ವರ್ಷಗಳಿಗೊಮ್ಮೆ ಆಗುವ ವರ್ಗಾವಣೆಯಿಂದಾಗಿ ಸೀಮಾ ಸುಮಾರು ಊರು, ನಗರಗಳನ್ನು ಸುತ್ತಾಡಿಬಿಟ್ಟಿದ್ದಾಳೆ. ಪ್ರತಿ ಸಲ ಡ್ರೆಸ್ಸಿಂಗ್ ಸೆನ್ಸ್ ವಿಷಯವಾಗಿ ತಲೆ ಕೆಡಿಸಿಕೊಳ್ಳುತ್ತಾಳೆ. ಊರಿನ ಲಹರಿಗೆ ಹೊಂದುವಂತೆ ಏನನ್ನು ಧರಿಸುವುದು ಏನನ್ನು ಬಿಡುವುದು? ನಿಮಗೂ ಇಂಥದೇ ಅನುಭವ ಆಗಿದೆಯೇ? ನೀವು ಬೆಂಗಳೂರು, ಮಂಗಳೂರು, ಮೈಸೂರು, ಮುಂಬೈ, ಚೆನ್ನೈನಂಥ ಮಹಾನಗರಗಳಿಗೆ ಸೇರಿದವರಾದರೆ ಯಾವುದೇ ಸಂಕೋಚವಿಲ್ಲದೆ ಮನಸ್ಸಿಗೆ ಹಿಡಿಸಿದ ಉಡುಗೆ ಧರಿಸಬಹುದು. ಆದರೆ ಸಣ್ಣಪುಟ್ಟ ಊರು ನಗರಗಳಿಗೆ ಸೇರಿದವರಾದರೆ ಅಲ್ಲಿನ ವಾತಾವರಣ, ರೀತಿ ರಿವಾಜು, ಜನರ ಮನೋಭಾವ ಎಲ್ಲವನ್ನೂ ಗಮನಿಸಬೇಕಾಗುತ್ತದೆ. ಕೇವಲ ಸೀರೆ, ಚೂಡೀದಾರ್ ಅಷ್ಟೇನಾ ಅಥವಾ ಜೀನ್ಸ್, ಗೌನ್ ನಡೆಯುತ್ತದಾ?
ಎಷ್ಟೋ ಕಡೆ ಇಂದಿಗೂ ಕೇವಲ ಸೀರೆ ಉಡುವ ಮತ್ತು ಚೂಡೀದಾರ್ ಹಾಕುವ ಕ್ರಮ ಮಾತ್ರ ಇದೆ. ಅಂಥ ಕಡೆ ಬೆರಳೆಣಿಕೆಯಷ್ಟು ಕಾಲೇಜು ಕಿಶೋರಿಯರು ಮಾತ್ರವೇ ಜೀನ್ಸ್, ಟಾಪ್ ಧರಿಸುತ್ತಾರೆ. 80, 90ರ ದಶಕಕ್ಕೆ ಹೋಲಿಸಿದಾಗ ಈಗ ಎಷ್ಟೋ ಸುಧಾರಣೆಗಳಾಗಿವೆ ಎನ್ನಬಹುದು. ಈಗೆಲ್ಲ ಅಂಥ ಕಡೆ ಸಹ ವ್ಯತ್ಯಾಸ ಕಂಡುಬರುತ್ತಿದೆ. ಲೆಗ್ಗಿಂಗ್ಸ್ ಮೇಲೆ ಕುರ್ತಿ, ಹುಡುಗಿಯರು ಜೀನ್ಸ್ ಟಾಪ್, ಟೈಟ್ ಫಿಟ್ಟಿಂಗ್ಸ್ ಇತ್ಯಾದಿ ಬಳಸುವುದು ಮಾಮೂಲಿ ಆಗಿದೆ. ಒಟ್ಟಾರೆ ಹೇಳಲೇಬೇಕೆಂದರೆ ತೀರ 90ರ ದಶಕದ ಮಡಿವಂತಿಕೆ ಈಗಿಲ್ಲ, ಫ್ಯಾಷನ್ ಎಲ್ಲಾ ನಿಟ್ಟಿನಲ್ಲಿಯೂ ಮಿಂಚುತ್ತಿದೆ ಎನ್ನಬಹುದು.
ಏನನ್ನು ಧರಿಸುವುದು?
ದೇಶ ಇದ್ದಂತೆ ವೇಷ ಎಂಬ ನಾಣ್ಣುಡಿ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಇಡೀ ಊರಿನ ಹೆಂಗಸರೆಲ್ಲ ಸೀರೆ ಉಟ್ಟೇ ಓಡಾಡುತ್ತಾರೆ ಎಂದರೆ ಹೊಸದಾಗಿ ಆ ಊರಿಗೆ ಬಂದ ನೀವು ಸಹ ಅದೇ ರೀತಿ ಇರಬೇಕು ಅಂತೇನಿಲ್ಲ. ಮುಖ್ಯವಾಗಿ ಸೀರೆ ಬದಲಿಗೆ ನೀವು ಇಲ್ಲಿ ಸಲ್ವಾರ್ ಕಮೀಜ್, ಚೂಡೀದಾರ್, ಲೆಗ್ಗಿಂಗ್ಸ್, ಪ್ಯಾರೆಲಲ್ಸ್ ಇತ್ಯಾದಿ ಧರಿಸಲು ಹಿಂಜರಿಯದಿರಿ. ಇದನ್ನು ನೋಡಿದ ಮಂದಿ ಮಾರುಹೋಗಿ ಒಬ್ಬರನ್ನೊಬ್ಬರು ಅನುಕರಿಸುತ್ತಾರೆ. ಇದನ್ನು ನೋಡಿದ ದೂರದ ಏರಿಯಾದ ಹೆಂಗಸರೂ ಸಹ ಮನದಲ್ಲೇ ಮಂಡಿಗೆ ಮೆಲ್ಲುತ್ತಾ ತಾವೆಂದು ಇದನ್ನು ಧರಿಸುವುದು ಎಂದುಕೊಳ್ಳುತ್ತಾರೆ. ಕ್ರಮೇಣ ಆ ಫ್ಯಾಷನ್ ಎಲ್ಲೆಡೆ ಹರಡಿಕೊಳ್ಳುತ್ತದೆ.
ಇಂಥ ಸಣ್ಣ ಊರು ನಗರಗಳಿಗೆ ಸೇರಿದವರಾದ ನೀವು ಯಾವುದಾದರೂ ಮದುವೆಗೆ ಹೊರಟಿದ್ದರೆ, ರೇಷ್ಮೆ ಸೀರೆಗಿಂತ ಅಚ್ಚುಕಟ್ಟಾದುದು ಮತ್ತೊಂದಿಲ್ಲ. ಹೀಗಿರುವಾಗ ನೀವು ಸಹ ಎಲ್ಲರಂತೆ ಸಾಂಪ್ರದಾಯಿಕವಾಗಿ ಸಿದ್ಧಗೊಂಡು ಎಲ್ಲರಿಗೂ ಫ್ಯಾಷನ್ನ ಟಕ್ಕರ್ ಕೊಡಬಹುದು. ಪ್ರತಿದಿನ ಸೀರೆ, ಚೂಡೀದಾರ್ ಧರಿಸುವ ಈ ಮಹಿಳೆಯರು ನಿಮ್ಮ ಈ ಅಪ್ ಟು ಡೇಟ್ ರೇಷ್ಮೆ ಸೀರೆ ಕಂಡು ಬೆರಗಾಗುವರು. ಹೀಗೆಯೇ ಇತರ ಸಣ್ಣಪುಟ್ಟ ಫಂಕ್ಷನ್ಗಳಿಗೆ ಪ್ಯಾರೆಲಲ್ಸ್, ಲೆಗ್ಗಿಂಗ್ಸ್, ಸಲ್ವಾರ್ ಸೂಟ್ ಧರಿಸಿ, ಜೊತೆಗೆ ದುಪಟ್ಟಾ ಇಳಿಬಿಟ್ಟು ಪಾಲ್ಗೊಳ್ಳಬಹುದು. ವಿಭಿನ್ನತೆಗಾಗಿ ದುಪಟ್ಟಾವನ್ನು ತಲೆ ಮೇಲೆ ನೀಟಾಗಿ ಕವರ್ ಮಾಡುವಂತೆ ಸುತ್ತಿ, ಪಿನ್ನುಗಳಿಂದ ಫಿಕ್ಸ್ ಮಾಡಿ. ಹೀಗೆ ಮಾಡುವುದರಿಂದ ತಲೆಯ ಮೇಲಿಂದ ಸೆರಗು ಸರಿಯುವುದೂ ಇಲ್ಲ, ನಿಮ್ಮ ಈ ಹೊಸ ಫ್ಯಾಷನ್ ಕುರಿತು ಯಾರೂ ಆಕ್ಷೇಪಿಸುವುದೂ ಇಲ್ಲ….!
ನಿಮಗೆ ಸಮಾರಂಭಗಳಿಗೆ ಸೀರೆ ಉಟ್ಟು ಸಾಕಾಗಿದೆ ಎನಿಸಿದರೆ, ಲಹಂಗಾ ಚೋಲಿ ಟ್ರೈ ಮಾಡಿ. ಗುಜರಾತಿ ವರ್ಕ್, ಮಿರರ್ ಮತ್ತು ಗೋಟಾಪಟ್ಟಿ, ರಾಜಸ್ಥಾನೀ ಬಂಧೋಜ್ ವಸ್ತ್ರಗಳಿಂದ ರೂಪುಗೊಂಡ ಕಶೀದಾಕಾರಿಯಿಂದ ಸುಸಜ್ಜಿತ ರಾಯಲ್ ಗೆಟಪ್ ಇರುವಂಥ ಡ್ರೆಸ್ ಎಲ್ಲರಿಗೂ ಒಪ್ಪುತ್ತವೆ. ಇದರಲ್ಲಿ ನಿಮ್ಮ ಪರ್ಸನಾಲಿಟಿಗೆ ಸೂಕ್ತವಾದುದನ್ನೇ ಆರಿಸಿ. ರೆಡಿಮೇಡ್ ಲಹಂಗಾ ಚೋಲಿ ಸಹ ಟ್ರೈ ಮಾಡಬಹುದು. ಯುವತಿಯರು ಜೀನ್ಸ್ ಯಾ ಪ್ಯಾಂಟ್ ಜೊತೆ ಮಂಡಿವರೆಗಿನ ಸೈಜ್ನ ಕುರ್ತಿ ಸ್ಟೋಲ್ ಧರಿಸಿ ತಮ್ಮ ಆಸೆ ಪೂರೈಸಿಕೊಳ್ಳಬಹುದು. ಈ ಉಡುಗೆ ದೂರದಿಂದ ಕುರ್ತಿ ಲೆಗ್ಗಿಂಗ್ಸ್ ತರಹವೇ ಕಾಣಿಸುತ್ತದೆ. ಹೀಗಾಗಿ ನೀವು ಮುಖ್ಯ ಗುಂಪಿನಿಂದ ಪ್ರತ್ಯೇಕ ನಿಂತಿದ್ದೀರಿ ಎಂದೂ ಅನಿಸುವುದಿಲ್ಲ. 20+ ನವರಾದರೆ ಲಾಂಗ್ ಸ್ಕರ್ಟ್, ಶಾರ್ಟ್ ಕುರ್ತಿ ಜೊತೆ ಸ್ಟೋಲ್ ಧರಿಸಿ ಹಬ್ಬಗಳಲ್ಲಿ ನೀವು ಮಿಂಚಬಹುದು.
ನೀವು ಮಿನಿ, ಮಿಡಿ ಅಥವಾ ಹಾಟ್ ಪ್ಯಾಂಟ್ ಧರಿಸ ಬಯಸಿದರೆ, ಅವಿಭಕ್ತ ಕುಟುಂಬದ ಕಾರಣ ಎಲ್ಲರೆದುರು ಧರಿಸಲು ಸಂಕೋಚವೆನಿಸುತ್ತದೆ. ಹೀಗಾಗಿ ಪತಿಯ ಜೊತೆ ದೂರದ ಊರಿಗೆ ಹೊರಟಾಗ ಇಂಥವನ್ನು ಅಲ್ಲಿ ಧರಿಸಬಹುದು. ಆದರೆ ಯಾವುದೋ ಲಹರಿಯಲ್ಲಿ ಇಂಥ ಫೋಟೋಗಳನ್ನು ತೆಗೆದು ಫೇಸ್ಬುಕ್, ವಾಟ್ಸ್ಆ್ಯಪ್ಗೆ ಹಾಕಬೇಡಿ. ಅನಗತ್ಯ ಚರ್ಚೆಗೆ ಗ್ರಾಸ ಆಗುವುದೂ ಬೇಡ.
ಏನನ್ನು ಧರಿಸಬಾರದು?
ಕೆಲವು ಹೆಂಗಸರಂತೂ ಬೇಕೆಂದೇ ತಮಗೆ ಸ್ವಲ್ಪವೂ ಹೊಂದದ ಉಡುಗೆಗಳನ್ನೇ ಹಠವಾಗಿ ಧರಿಸುತ್ತಾರೆ, ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ನೆಟೆಡ್ ಸೀರೆ ಉಟ್ಟು, ಇದರಿಂದ ಮೈ ತುಂಬಾ ಸೆರಗು ಹೊದೆಯಲು ಯತ್ನಿಸಿದರೆ, ಅದು ಏನನ್ನು ತೆರೆದಿಡಬೇಕು, ಏನನ್ನು ಮುಚ್ಚಬೇಕು? ಕೆಲವರು ಸ್ಕಿನ್ ಟೈಟ್ ಲೆಗ್ಗಿಂಗ್ ಜೊತೆ ಕುರ್ತಿ ಧರಿಸಿ ಹೊರಡುತ್ತಾರೆ. ಆಗ ಅವರು ಕುರ್ತಿ ಮಾತ್ರವೇ ಧರಿಸಿದ್ದಾರೆಂಬಂತೆ ಕೆಟ್ಟದಾಗಿ ಕಾಣುತ್ತದೆ. ಹೀಗಾಗಿ ಟೈಟ್ ಲೆಗ್ಗಿಂಗ್ ಧರಿಸುವಾಗ ಅದರ ಬಣ್ಣದ ಕಡೆಗೂ ಗಮನ ಕೊಡಿ. ಸೀರೆ ಎಂಬುದು ಯಾವ ಕಾಲಕ್ಕೂ ಸಲ್ಲುವ ಪರಿಪೂರ್ಣ ಭಾರತೀಯ ಉಡುಗೆ. ಇದನ್ನು ಉಡಲಿಕ್ಕೂ ಹಲವು ವಿಧಾನಗಳುಂಟು. ಸೀದಾ ಸೆರಗು, ಉಲ್ಟಾ ಸೆರಗು, ನಮ್ಮ ರಾಜ್ಯದ್ದೇ ಕಚ್ಚೆ ಹಾಕಿ ಉಡುವ ಕ್ರಮ, ಕೂರ್ಗಿ ಶೈಲಿ, ದ.ಭಾರತದ ವಿಭಿನ್ನ ಶೈಲಿಗಳು, ಬೆಂಗಾಲಿ, ಗುಜರಾತಿ ಶೈಲಿ…. ಹೀಗೆ ವಿಭಿನ್ನ ವಿಧಗಳುಂಟು. ಆದರೆ ಇವೆಲ್ಲದರ ಜೊತೆ ಮ್ಯಾಚಿಂಗ್ ಬ್ಲೌಸ್, ಪೆಟಿಕೋಟ್ ಇಲ್ಲದ್ದಿದರೆ, ಅದರ ಗೌರವ ಕುಂದುತ್ತದೆ. ಇದನ್ನು ಒಪ್ಪ ಓರಣವಾಗಿ ಉಡದಿದ್ದರೆ, ಲಂಗ ಹೊರಗೆ ಇಣುಕುವಂತೆ, ಹಿಂದೆ ಕಾಣುವಂತೆ, ಅಡ್ಡಾದಿಡ್ಡಿಯಾಗಿ ಹೇಗೋ ಉಟ್ಟಿದ್ದರೆ ಅದಕ್ಕಿರುವ ಕಳೆ ಹೋಗುತ್ತದೆ.
ಜೀನ್ಸ್ ಯಾ ಪ್ಯಾಂಟ್ ಧರಿಸುವಿರಾದರೆ, ಶಾರ್ಟ್ ಟಾಪ್ ಯಾ ಸ್ಕಿನ್ ಟೈಟ್ ಜೀನ್ಸ್ ಧರಿಸಲೇಬೇಡಿ. ಲಾಂಗ್ ಸ್ಕರ್ಟ್ ಜೊತೆ ಟೈಟ್ ಕಮೀಜ್ ಅಥವಾ ಟೀ ಶರ್ಟ್ ಧರಿಸಬೇಡಿ. ಸಣ್ಣನಗರಗಳಲ್ಲಿ ಹೀಗೆಲ್ಲ ಡ್ರೆಸ್ ಮಾಡಿಕೊಂಡು ಬಂದರೆ, ಜನ ಕೆಕ್ಕರಿಸಿಕೊಂಡು ನೋಡುತ್ತಾರೆ. ಹೀಗಾಗಿ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ತೀಕ್ಷ್ಣವಾಗಿರಲಿ.
ಉಡುಗೆ ಯಾವುದೇ ಇರಲಿ, ಅದನ್ನು ಒಪ್ಪವಾಗಿ ತೊಡದಿದ್ದರೆ ಅದು ನಿಮ್ಮ ರೂಪವನ್ನು ಬೆಳಗುವ ಬದಲು ತಗ್ಗಿಸುತ್ತದೆ. ಕೇವಲ ದುಬಾರಿ ಉಡುಗೆಗಳಷ್ಟೇ ಚಂದ ಎಂಬ ಮೂಢನಂಬಿಕೆ ಅನೇಕ ಹೆಂಗಸರಿಗುಂಟು. ಖಂಡಿತಾ ಅದು ನಿಜವಲ್ಲ. ದೈನಂದಿನ ಬಳಕೆಯ ಉಡುಗೆಗಳಲ್ಲೂ ಬಣ್ಣದ ಮಿಶ್ರಣ, ಡಿಸೈನ್ ಇತ್ಯಾದಿಗಳಿಗೂ ಮಹತ್ವ ಉಂಟು, ಇಲ್ಲಿ ಬೆಲೆಯೊಂದೇ ಪ್ರಧಾನವಲ್ಲ. ಹೀಗಾಗಿ ಏನನ್ನೇ ಧರಿಸಿ, ಒಗೆದು ಮಡಿ ಮಾಡಿ, ಇಸ್ತ್ರಿ ಹಾಕಿ ನೀಟಾಗಿ ಧರಿಸಿ. ಇದಕ್ಕೆ ತಕ್ಕಂತೆ ಪೂರಕ ಆ್ಯಕ್ಸೆಸರೀಸ್ ಇರಲಿ. ಇದರಿಂದ ನಿಮ್ಮ ವ್ಯಕ್ತಿತ್ವ ಹೆಚ್ಚು ಕಳೆಗಟ್ಟುತ್ತದೆ.
– ಪಿ. ದೀಪಾ