ಬೆಳಗ್ಗೆಯಿಂದಲೇ ಆಗಸದಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಬೆಣ್ಣೆ ಮುದ್ದೆಯಂತಹ ಬಿಳಿಯ ಮೋಡಗಳು ಚಲಿಸುವ ಪರಿ, ಅವುಗಳ ನಡುವೆ ಚಂದಿರನ ರಂಗಿನಾಟ ಮತ್ತೆ ಮತ್ತೆ ನೋಡಿ ಕಣ್ಣು ತುಂಬಿಸಿಕೊಂಡ ಮಾಧವಿ ಹಾಗೂ ಅಜಯ್‌ ಹಲವಾರು ಬಾರಿ ಆನಂದಿಸಿದ್ದರು. ಆದರೆ ಇಂದು ಯಾಕೋ ಮಾಧವಿಯ ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು. ಎಲ್ಲ ಅಸ್ಪಷ್ಟ, ಗೊಂದಲದ ಗೂಡಾಗಿತ್ತು. ಜೊತೆಗೆ ನಡುನಡುವೆ ಮನದ ಮೂಲೆಯಲ್ಲಿ ಅನುಮಾನದ ಸುಳಿ ಹರಿದಾಡಲಾರಂಭಿಸಿತ್ತು. ಅದಕ್ಕೂ ಒಂದು ಕಾರಣವಿದೆ. ಕೆಲವು ದಿನಗಳಿಂದೀಚೆಗೆ ಮಾಧವಿಗೆ ತನ್ನ ಪತಿ ಅಜಯ್‌ ನಡವಳಿಕೆಯಲ್ಲಿ  ಕೆಲವು ಬದಲಾವಣೆಗಳು ತೋರಿ ಬಂದಿದ್ದವು. ಈ ನಡುವೆ ಅಜಯ್‌ ಮಾತು ಮಾತಿಗೂ ಸಿಡುಕುತ್ತಿದ್ದ, ಮಾಧವಿಯ ಯಾವುದೇ ಮಾತುಗಳಿಗೂ ಮನ್ನಣೆ ನೀಡುತ್ತಿರಲಿಲ್ಲ ಹಾಗೂ ಚಿಕ್ಕ ಪುಟ್ಟ ವಿಚಾರಗಳಿಗೆಲ್ಲಾ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ. ಕೇವಲ ಎರಡು ದಿನಗಳ ಹಿಂದೆ ನಡೆದಿದ್ದ ಪುಟ್ಟ ಘಟನೆಯಿಂದ ಅಜಯ್‌ ಮೊದಲಿನಂತಿಲ್ಲ ಎನ್ನುವುದನ್ನು ಸಾಬೀತುಪಡಿಸಿತ್ತು.

ನೀಟಾಗಿ ಅಲಂಕಾರ ಮಾಡಿಕೊಂಡು ಬಂದ ಮಾಧವಿ ಮಾಮೂಲಾಗಿ ಕೇಳುವ ಹಾಗೇ ಅಜಯ್‌ನನ್ನು ಪ್ರೀತಿಯಿಂದ, “ಈ ಹೇರ್‌ಸ್ಟೈಲ್‌ನಲ್ಲಿ ನಾನು ಹೇಗೆ ಕಾಣಿಸ್ತಾ ಇದ್ದೀನಿ…. ಈ ಹೊಸ ಸೀರೆ ನಂಗೆ ಚೆನ್ನಾಗಿ ಒಪ್ಪುತ್ತಾ….? ಹೇಳು ಅಜಯ್‌…” ಅಂದಾಗ ಸಿಡುಕುತ್ತಲೇ ಅಜಯ್‌, “ನನ್ನನ್ನು ಏನು ಕೇಳ್ತೀಯಾ…? ನಿನಗೆ ಇಷ್ಟ ಆಗಿರೋದ್ರಿಂದ ತಾನೇ ನೀನು ತಗೊಂಡಿರೋದು…?” ಎಂದ.

ಅನಿರೀಕ್ಷಿತವಾದ ಉತ್ತರದಿಂದ ಕೊಂಚ ಗಲಿಬಿಲಿಗೊಂಡ ಮಾಧವಿ ಒಂದು ಕ್ಷಣ ಮಾತು ಹೊರಡದಂತಾದಳು. ಇವನು ಅದೇ ಅಜಯ್‌ನಾ…? ಅನ್ನುವಷ್ಟು ಬದಲಾಗಿದ್ದ. ಮದುವೆಯ ಹೊಸತರಲ್ಲಿ ಮಾಧವಿಯ ಪ್ರತಿ ಮಾತು, ನಗು ಎಲ್ಲದರ ಬಗ್ಗೆ ಸುಂದರವಾಗಿ ಕವನ ರಚಿಸುತ್ತಿದ್ದ. ಅವಳ ಸೌಂದರ್ಯವನ್ನು ರಸವತ್ತಾಗಿ ಕಾವ್ಯಮಯವಾಗಿ ಹಾಡಿ ಹೊಗಳುತ್ತಿದ್ದ. ಅವಳ ಸುಂದರ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಅವಳ ಕಂಗಳನ್ನು ಒಂದೇ ಸಮನೆ ಎವೆಯಿಕ್ಕದೆ ಹಾಗೇ ನೋಡುತ್ತ ರೋಮಾಂಚಿತನಾಗಿ ತನ್ನ ಎದೆಯ ಮೇಲೆ ಎಳೆದುಕೊಳ್ಳುವಲ್ಲಿ ಸದಾ ಮುಂದಿರುತ್ತಿದ್ದ. ಪ್ರತಿ ಬಾರಿ ಹೊಸ ಸೀರೆ ಉಟ್ಟಾಗೆಲ್ಲಾ ಎಂತಹ ಕೆಲಸದ ಒತ್ತಡವಿದ್ದರೂ ಬದಿಗೆ ಸರಿಸಿ, “ಮಾಧವಿ… ಈ ಗಿಳಿ ಬಣ್ಣದ ಸೀರೆಯಲ್ಲಿ ಥೇಟ್‌ ಅಪ್ಸರೆ ಹಾಗೆ ಕಾಣಿಸ್ತಾ ಇದೀಯ…” ಎನ್ನುತ್ತಾ ಅವಳನ್ನಪ್ಪಿ ಹಣೆಗೊಂದು ಹೂಮುತ್ತಿಡುತ್ತಿದ್ದ. ಆದರೆ ಆಗಿನ ಅಜಯ್‌ ಈಗೆಲ್ಲಿ ಕಳೆದುಹೋದ…? ಆ ಮೋಹಕ ಪ್ರೀತಿ, ಮಾಧುರ್ಯ ಎಲ್ಲಿ ಹೋಯಿತು….? ಮಾಧವಿ ಮತ್ತಷ್ಟು ಚಿಂತಾಕ್ರಾಂತಳಾದಳು. ಅಜಯ್‌ ಮೊದಲಿನಂತಿಲ್ಲ ಅನ್ನುವುದು ಇಂದು ಖಾತ್ರಿಯಾಗಿಬಿಟ್ಟಿತು.

ಬೆಳಗ್ಗೆ ತಿಂಡಿ ತಿನ್ನುತ್ತಿದ್ದಂತೆ ಫೋನ್‌ ರಿಂಗಾಯಿತು. ತಿಂಡಿಯನ್ನು ಅರ್ಧದಲ್ಲೇ ಬಿಟ್ಟು ತಕ್ಷಣವೇ ಕಾರಿನ ಕೀ ತೆಗೆದುಕೊಂಡು ಹೊರಟ. ಮಾಧವಿ, “ಅಜಯ್‌ ಫೋನ್‌ ಯಾರದ್ದು….? ದಿಢೀರ್‌ ಅಂತ ಎಲ್ಲಿಗೆ ಹೊರಟಿದ್ದೀಯಾ….? ನನಗೆ ತಿಳಿಸಿ ಹೋಗಬಾರದಾ…?” ಎನ್ನುತ್ತಿದ್ದಂತೆ ಅಜಯ್‌ ಸಿಟ್ಟಿನಿಂದ, “ಎಲ್ಲಾ ನಿನಗೆ ಹೇಳೇ ಹೋಗಬೇಕಾ….? ಹೇಳಿದ್ರೆ ಏನ್‌ಮಾಡ್ತೀಯಾ? ನೋಡು….! ಬಿಸ್‌ನೆಸ್‌ ಮ್ಯಾನ್‌ಗೆ ಪ್ರತಿದಿನ ಹತ್ತಾರು ಜನರ ಕರೆ ಬರುತ್ತೆ, ಆ್ಯನ್ಸರ್‌ ಮಾಡಬೇಕಾಗುತ್ತೆ. ಅಗತ್ಯ ಬಿದ್ದರೆ ಅರ್ಧ ರಾತ್ರೀಲೂ ಎದ್ದು ಹೋಗಬೇಕಾಗುತ್ತೆ. ನೀನು ಪ್ರತಿ ಬಾರಿ ಇದೇ ರೀತಿ ಪ್ರತಿಯೊಂದಕ್ಕೂ ಅನುಮಾನಿಸುತ್ತಲೇ ಇದ್ದರೆ…. ನನಗೆ ಫ್ರೀಯಾಗಿ ಕೆಲಸ ಮಾಡೋಕಾಗಲ್ಲ. ತಿಳೀತಾ…?” ಎನ್ನುತ್ತ ನಡೆದೇಬಿಟ್ಟ.

ಬಹುಶಃ ಬಿಸ್‌ನೆಸ್‌ ಕಾಲ್ ‌ಆಗಿರಬಹುದೆಂದುಕೊಂಡು ಮಾಧವಿ ಸುಮ್ಮನಾದರೂ ಮನಸ್ಸು ಮತ್ತೆ ಗಲಿಬಿಲಿಗೊಂಡಿತು. ಒಂದುವೇಳೆ ಬಿಸ್‌ನೆಸ್‌ ಕಾಲ್ ಆಗಿದ್ದರೆ, ಮೊದಲಿನ ಹಾಗೆ ನಂಜೊತೆ ಶೇರ್‌ ಮಾಡಿಕೊಳ್ಳಬಹುದಿತ್ತಲ್ಲ….? ಕಡೇ ಪಕ್ಷ ಏನು ಅಂತ ನನಗೆ ತಿಳಿಸಿ ಹೋಗಬಹುದಿತ್ತಲ್ಲ? ಮಾಧವಿಯ ಮನಸ್ಸಿನಲ್ಲಿ ಅನುಮಾನದ ಹುತ್ತ ಬೆಳೆಯುತ್ತಾ ಹೋಯಿತು. ಮತ್ತೆ ಮತ್ತೆ ಗೊಂದಲ, ಚಡಪಡಿಕೆ, ಚಿಕ್ಕ ಚಂಚಲತೆ ಇನ್ನಷ್ಟು ವೇಗ ಪಡೆದುಕೊಳ್ಳತೊಡಗಿತು. ಮನಸ್ಸು ಕೈಗೆ ಸಿಗದೆ ಗಾಳಿ ಪಟದಂತೆ ಹಾರಾಡತೊಡಗಿತು. ಒಂದುವೇಳೆ ಅಜಯ್‌ ಬದುಕಿನಲ್ಲಿ ಇನ್ನೊಬ್ಬಳ ಪ್ರವೇಶ ಆಗಿರಬಹುದೆ…..? ಬಹುಶಃ ಅದೇ ಹುಡುಗಿಯನ್ನು? ಭೇಟಿ ಮಾಡಲೆಂದೇ ಈಗ ತರಾತುರಿಯಲ್ಲಿ ಹೋಗಿರಬಹುದಾ…? ಎಲ್ಲ ಅಸ್ಪಷ್ಟ. ಮಾಧವಿ ನಿಧಾನವಾಗಿ ಕಂಪಿಸಿದಳು.

ಈ ಯೋಚನೆಯಿಂದ ಹೊರಬರಬೇಕೆಂದು ಟಿ.ವಿ. ಆನ್‌ ಮಾಡಿದಳು. ಆದರೆ ಕಾಕತಾಳೀಯ ಎಂಬಂತೆ ಟಿ.ವಿಯಲ್ಲಿ ಬರುತ್ತಿದ್ದ ಧಾರಾವಾಹಿಯ ದೃಶ್ಯ ಕೂಡ ಮಾಧವಿಯ ಬದುಕಿಗೆ ತೀರಾ ಹತ್ತಿರವಾಗಿತ್ತು. ಪತಿಯನ್ನು ಅನುಮಾನಿಸುತ್ತಿದ್ದ ಪತ್ನಿ, ಜಗಳ ವಾಗ್ವಾದ, ಕಿರುಚಾಟ ಎಲ್ಲ ನಡೆದು ಕೊನೆಗೆ ಅನುಮಾನಿಸಿದ ಪತ್ನಿ ಪತಿಯ ತಪ್ಪನ್ನು ಸಾಬೀತುಪಡಿಸುವಲ್ಲಿ ವಿಫಲಳಾಗಿ ಕೈಚೆಲ್ಲಿ ಕೂರುವುದು ಮಾಧವಿಗೆ ಪಿಚ್ಚೆನಿಸಿತು.

`ಆದರೆ ಸೀರಿಯಲ್‌ನಲ್ಲಿ ತೋರಿಸಿರೋ ಹಾಗೇ ನಾನು ಕೈಚೆಲ್ಲಿ ಕೂರಲಾರೆ,’ ಎನ್ನುತ್ತಾ ಮಾಧವಿ ಹಲವಾರು ಉಪಾಯಗಳನ್ನು ಕಣ್ಮುಂದೆ ಸೃಷ್ಟಿಸಿಕೊಂಡರೂ ಯಾವುದೂ ಸರಿಬರಲಿಲ್ಲ. ಅಜಯ್‌ನನ್ನು ಹಿಂಬಾಲಿಸುವುದು, ಪರೀಕ್ಷಿಸುವುದು ತನ್ನಿಂದಾಗದ ಕೆಲಸ ಎಂದು ಮಾಧವಿಗೆ ತಿಳಿದಿತ್ತು. ದಿಢೀರ್‌ ಎಂದು ಕಾಲೇಜಿನ ಸಹಪಾಠಿ ಪೂಜಾಳ ನೆನಪಾಗುತ್ತಿದ್ದಂತೆ ಅಪಾಯಕಾರಿ ಯೋಜನೆಯೊಂದು ಹೊಳೆಯಿತು. ಕಳೆದ ವಾರವಷ್ಟೇ ಅಜಯ್‌ ಆಫೀಸ್‌ನಲ್ಲಿ  ಕೆಲಸ ಖಾಲಿ ಇರುವ ವಿಚಾರವನ್ನು ತಿಳಿದುಕೊಂಡಿದ್ದ ಮಾಧವಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಭಾಸವಾಯಿತು. ಆ ಖಾಲಿ ಇರುವ ಕೆಲಸಕ್ಕೆ ಚುರುಕಾಗಿರೋ, ಸುಂದರ ಯುವತಿಯ ಅಗತ್ಯವಿತ್ತು. ಆ ಕೆಲಸಕ್ಕೆ ತನ್ನ ಗೆಳತಿ ಪೂಜಾಳೇ ಸರಿಯಾದ ಅಭ್ಯರ್ಥಿ ಎಂದು ಅರಿವಾದೊಡನೇ ಮಾಧವಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಯಿತು. ಚೆಲ್ಲುಚೆಲ್ಲಾಗಿ, ಸುಂದರವಾಗಿರೋ ಗೆಳತಿ ಪೂಜಾಳನ್ನು ಆಫೀಸಿಗೆ ಸೇರಿಸಿಬಿಟ್ಟರೆ, ತನ್ನ ಉದ್ದೇಶ ನಿರಾತಂಕವಾಗಿ ನೆರವೇರಬಹುದು ಎಂದು ಮಾಧವಿ ನಿರ್ಧರಿಸಿದಳು. ತಕ್ಷಣವೇ ಕಾರ್ಯಪ್ರವೃತ್ತಳಾದ ಮಾಧವಿ ಮನೆಗೆ ಬೀಗ ಹಾಕಿ ಆಟೋ ಹಿಡಿದು ಪೂಜಾಳ ಮನೆಗೆ ಹೊರಟೇಬಿಟ್ಟಳು.

ಪೂಜಾ ಕಾಲೇಜು ದಿನಗಳಿಂದಲೇ ಚೆಲ್ಲುಚೆಲ್ಲಾದ ಹುಡುಗಿ. ತಾನು ನಡೆದದ್ದೇ ದಾರಿ ಎನ್ನುವ ದಿಟ್ಟೆ. ಅಪ್ರತಿಮ ಸೌಂದರ್ಯ, ಜೊತೆಗೆ ಬುದ್ಧಿವಂತಿಕೆ ಕೂಡ ಮಿಳಿತವಾಗಿದ್ದು ಪೂಜಾಳ ಹೆಗ್ಗಳಿಕೆ. ಮದುವೆ, ಮಕ್ಕಳು ಮುಂತಾದವುಗಳಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಪೂಜಾ ಇನ್ನೂ ಅವಿವಾಹಿತಳಾಗಿದ್ದಳು. `ಮದುವೆ’ ಎನ್ನುವ ಬಂಧನದಲ್ಲಿ ಸಿಲುಕಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಯಾರೋ ಒಬ್ಬ ಗಂಡಸಿನ ಆಳಾಗಿರುವುದಕ್ಕೆ ನನಗೆ ಇಷ್ಟವಿಲ್ಲ. ಮಕ್ಕಳು, ಮರಿ ಅಂತೆಲ್ಲಾ ಎಕ್ಸ್ ಟ್ರಾ ಜವಾಬ್ದಾರಿಯನ್ನು ಹೊರುವಳಂತೂ ನಾನಲ್ಲ. ಸಾಯೋವರೆಗೂ ಒಬ್ಬಂಟಿಯಾಗಿದ್ದು, ಜಾಲಿಯಾಗಿರಬೇಕು. ಲೈಫ್‌ ಈಸ್‌ ಶಾರ್ಟ್‌ ಬಟ್‌ ಮೇಕ್‌ ಇಟ್‌ ಸ್ವೀಟ್‌ ಎನ್ನುವ ಬಿಂದಾಸ್‌ ಹುಡುಗಿ! ಅಪ್ಪ ಅಮ್ಮನ ಜೊತೆಯಿರದೆ, ಸದ್ಯ ಅಕ್ಕಭಾವನ ಜೊತೆಯಲ್ಲಿರುವ ಪೂಜಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಾಧವಿ ಕಾಲಿಂಗ್‌ ಬೆಲ್ ಒತ್ತುತ್ತಿದ್ದಂತೆ ಬಾಗಿಲು ತೆರೆದ ಪೂಜಾ, “ಹಾಯ್‌ ಮಾಧವಿ…., ಅಲ್ಲಾ ಎಷ್ಟೊಂದು ದಿನಗಳ ಮೇಲೆ ನಿನ್ನ ದರ್ಶನ ಭಾಗ್ಯ ಆಗ್ತಿದೆ,” ಎನ್ನುತ್ತಾ ನವಿರಾಗಿ ತಬ್ಬಿಕೊಂಡು ಆತ್ಮೀಯವಾಗಿ ಮನೆಯೊಳಗೆ ಕರೆದೊಯ್ದಳು. ಇಬ್ಬರೂ ಚಹಾ ಕುಡಿದು, ಸ್ನ್ಯಾಕ್ಸ್ ಮೆಲ್ಲುತ್ತಾ ಅದೂ ಇದೂ ಎಂದು ಹರಟೆ ಹರಟಿದರು. ಮಾತಿನ ನಡುವೆ ಇದ್ದಕ್ಕಿದ್ದಂತೆ ಮಾಧವಿ, “ಪೂಜಾ….. ನಾನು ಒಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೀನಿ. ನನಗೆ ಒಂದು ಸಹಾಯ ಮಾಡ್ತೀಯಾ? ನಾನೀಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೀನಿ…. ನನ್ನದೊಂದು ಕೋರಿಕೆ ನೆರವೇರಿಸಿಕೊಡ್ತೀಯಾ….? ಈ ಗೊಂದಲದಿಂದ ಹೊರಬರಲು ನನಗೆ ನಿನ್ನ ಸಹಾಯ ಬೇಕಾಗಿದೆ…. ಪ್ಲೀಸ್‌……” ಎಂದಳು.

“ಅಯ್ಯೋ ಹುಚ್ಚಿ….! ನಿನ್ನ ಕೆಲಸ ಅಂದ ಮೇಲೆ ನಾನು ಮಾಡದೇ ಇರ್ತೀನಾ ಹೇಳೇ…. ನಾನು ನಿನ್ನ ಜೀವದ ಗೆಳತಿ ಕಣೇ…..”

ಮಾಧವಿ ಗದ್ಗದಿತ ಕಂಠದಿಂದ ತೊದಲುತ್ತಾ, “ಪೂಜಾ, ಈ ನಡುವೆ ಅಜಯ್‌ನನ್ನ ಜೊತೆ ಸರಿಯಾಗಿ ಮಾತಾಡ್ತಾ ಇಲ್ಲ. ಅವನ ನಡವಳಿಕೆ ಒಂಥರಾ ವಿಚಿತ್ರವಾಗಿದೆ. ಯಾವಾಗಲೂ ಸಿಡಿಸಿಡಿ ಅಂತ ಇರ್ತಾನೆ…. ನನ್ನ ಮಾತು ಅಂದ್ರೆ ಅವನಿಗೆ ತಿರಸ್ಕಾರ. ನನ್ನೊಂದಿಗೆ ಸರಿಯಾಗಿ ನಡ್ಕೋತಾ ಇಲ್ಲ. ಮದುವೆಯಾಗಿ ಇನ್ನೂ ಒಂದು ವರ್ಷಾ ಕೂಡಾ ಆಗಿಲ್ಲ. ಆಗಲೇ ನನ್ನ ಅವನ ನಡುವೆ ಮಿಸ್‌ ಅಂಡರ್‌ಸ್ಟಾಂಡ್‌ ಬಂದ್ಬಿಟ್ಟಿದೆ. ಈಗಲೇ ಹೀಗಾದರೆ ಮುಂದೆ ನನ್ನ ಬದುಕು ಹೇಗೆ ಅಂತಾನೇ ಅರ್ಥವಾಗ್ತಾ ಇಲ್ಲ…. ನನಗನ್ನಿಸುತ್ತೆ ಅವನ ಜೀವನದಲ್ಲಿ ಬೇರೆ ಯಾರೋ ಹುಡುಗಿ ಬಂದಿರಬೇಕು ಅಂತ….”

ಪೂಜಾ ಅವಳ ಮಾತನ್ನು ಅರ್ಧಕ್ಕೆ ತಡೆದು ಬೆರಗುಗಣ್ಣಿನಿಂದ, “ಇದೇನು ಹೇಳ್ತಾ ಇದೀಯ ಮಾಧವಿ…. ನಿಮ್ಮದು ಲವ್ ಮ್ಯಾರೇಜ್‌. ನೀನೇ ಇಷ್ಟಪಟ್ಟು ಮದುವೆ ಮಾಡ್ಕೊಂಡಿರೋದು. ಆದರೂ ಯಾಕೆ ಹೀಗೆಲ್ಲಾ ಆಯಿತು… ಅಂದಹಾಗೆ ನನ್ನಿಂದ ನಿನಗೆ ಏನು ಸಹಾಯ ಬೇಕಾಗಿದೆ ಹೇಳು….?  ಇದು ನಿಮ್ಮಿಬ್ಬರ ಪರ್ಸನಲ್ ವಿಚಾರ. ನಾನು ತಲೆ ಹಾಕಬಾರದು. ಆದರೂ ಕೂಡ ನಿನಗೋಸ್ಕರ ನಾನು ಏನು ಮಾಡೋಕೂ ಸಿದ್ಧ. ಈಗ ಹೇಳು…” ಎಂದಳು.

“ಆ ಒಂದು ಕಾನ್ಛಿಡೆನ್ಸ್ ನಿಂದ ಕಣೆ ನಾನು ಇಲ್ಲಿಗೆ ಬಂದಿರೋದು. ದಯವಿಟ್ಟು ಆಗಲ್ಲ ಅಂತ ಮಾತ್ರ ಹೇಳಬೇಡ. ಕಾಲೇಜು ದಿನಗಳಿಂದಲೂ ನನ್ನ ನೋವು ಹೇಳಿಕೊಳ್ಳೋಕೆ ನಿನ್ನ ಬಿಟ್ರೆ ಯಾರಿದ್ದಾರೆ ನನಗೆ ಹೇಳು….?”

“ಸರಿ ಮಹಾರಾಯ್ತಿ ಈಗ ನಾನೇನು ಮಾಡಬೇಕು ಅಂತ ಹೇಳು…” ಎನ್ನುತ್ತಾ ಮೆಲುವಾಗಿ ನಕ್ಕಳು.

“ಹಾಂ…. ಅಜಯ್‌ ಆಫೀಸ್‌ನಲ್ಲಿ ಒಂದು ಪರ್ಸನಲ್ ಸೆಕ್ರೆಟರಿ ಹುದ್ದೆ ಖಾಲಿ ಇದೆ. ಆ ಹುದ್ದೆಗೆ ನೀನು ಅರ್ಜಿ ಹಾಕಬೇಕು. ನಿನಗೆ ಈ ಕೆಲಸದ ಅನಿವಾರ್ಯತೆ ಇದೆ ಅಂತ ನಾನು ಅಜಯ್‌ಗೆ ಹೇಳ್ತೀನಿ. ಸೆಲೆಕ್ಷನ್‌ ಮಾಡೋದೆಲ್ಲಾ ಅಜಯ್‌ ಕೈಯಲ್ಲಿದೆ.

“ಅಲ್ಲಿ ಕೆಲಸ ಮಾಡುವುದರ ಜೊತೆಗೆ ನಾನು ಒಂದು ಕೆಲಸ ವಹಿಸುತ್ತಿದ್ದೀನಿ. ಅದು ಏನಂದ್ರೆ… ನೀನು ಅಜಯ್‌ ಜೊತೆಯಲ್ಲೇ ಇದ್ದು, ಅಜಯ್‌ಗೆ ಯಾರಾದ್ರೂ ಗರ್ಲ್ ಫ್ರೆಂಡ್‌ ಇದ್ದಾಳಾ ಅಂತ ಪರೀಕ್ಷೆ ಮಾಡಬೇಕು. ಅವನ ಪ್ರತಿಯೊಂದು ಚಲನವಲನಗಳನ್ನೂ ಗಮನಿಸುತ್ತಿರು. ಅಷ್ಟೇ ಅಲ್ಲದೆ, ನಾನು ಪರ್ಸನಲ್ ಆಗಿ ಅಜಯ್‌ನನ್ನು ನಿನ್ನತ್ತ ಸೆಳೆಯುವುದಕ್ಕೆ ಪ್ರಯತ್ನಿಸು. ಪ್ರೀತ್ಸೋ ತರಹ ನಾಟಕವಾಡುತ್ತಾ ಅವನಿಗೆ ತೀರ ಹತ್ತಿರವಾಗು. ಹೇಗಾದರೂ ಮಾಡಿ ನಿನ್ನ ಪ್ರೇಮದ ಬಲೆಯೊಳಗೆ ಬೀಳಿಸಿಕೋ. ಅವನೇನಾದರೂ ನಿನ್ನ ಪ್ರೀತಿಗೆ ಸೋತು ನಿನಗೋಸ್ಕರ ಏನು ಬೇಕಾದರೂ ಮಾಡಲು ತಯಾರಿದ್ದಾನೆ ಅಂತ ಗೊತ್ತಾದ ತಕ್ಷಣ ನಿನ್ನ  ಪ್ರೇಮದ ನಾಟಕವನ್ನು ನಿಲ್ಲಿಸಿಬಿಡು. ನಂತರ ಉಳಿದ ವಿಚಾರವನ್ನು ನಾನು ನೋಡ್ಕೋತೀನಿ.

“ಹೂಂ….. ಅಂದಹಾಗೇ ಅಜಯ್‌ ಜೊತೆ ಸ್ವಲ್ಪ ಹೆಚ್ಚಿಗೆ ಸಲಿಗೆಯಿಂದ ಇರು. ಸರಸಸಲ್ಲಾಪಭರಿತ ಮಾತನಾಡಿ ರಮಿಸು. ಸಾಧ್ಯವಾದರೆ ಏಕಾಂತ ಬಯಸುವ ಪರಿಸರವನ್ನು ನಿರ್ಮಾಣ ಮಾಡು. ಹಾಗೇ ಆಗಾಗ್ಗೆ ಚಿಕ್ಕಪುಟ್ಟ ಗಿಫ್ಟ್ ಗಳನ್ನು ಕೊಟ್ಟು ಅವನಿಂದ ದುಬಾರಿ ಉಡುಗೊರೆ ತಗೋ. ಗಿಫ್ಟ್ ತಗೊಳೋದನ್ನು ನಿನ್ನ ಮೊಬೈಲ್‌‌ನಲ್ಲಿ ರೆಕಾರ್ಡ್‌ ಮಾಡಿಟ್ಟುಕೋ. ಹಾಗೆ ಅಜಯ್‌ ಮನಸ್ಸಿನಲ್ಲಿ ನನ್ನ ಬಗ್ಗೆ ಎಂತಹ ಭಾವನೆ ಇದೆ ಅಂತ ತಿಳ್ಕೋ. ಅವನ ಹೃದಯದಲ್ಲಿ ನನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಅನ್ನೋದನ್ನು ಖಾತ್ರಿಪಡಿಸಿಕೋ. ಇವುಗಳೆಲ್ಲದರಿಂದ ಅವನಿಗೆ ನನ್ನ ಮೇಲೆ ಎಷ್ಟು ಆಳವಾದ ಪ್ರೀತಿ ಇದೆ ಅನ್ನೋದನ್ನು ನಾನು ತಿಳ್ಕೋಬೇಕಾಗಿದೆ.

“ಪ್ಲೀಸ್‌….. ಅಂದಹಾಗೆ ತುಂಬಾ ಹುಷಾರಾಗಿ ಹ್ಯಾಂಡಲ್ ಮಾಡು. ಓ.ಕೆ.ನಾ…..?”

ಕೆಲ ಹೊತ್ತು ಹಾಗೇ ಕುಳಿತ ಇಬ್ಬರ ನಡುವೆ ಮೌನದ ನೀರವತೆ ಆವರಿಸಿತು. ಕೈಹಿಡಿದ ಪತಿಯೊಂದಿಗೆ ಪ್ರೇಮದ ನಾಟಕವಾಡುವ ಆಫರ್‌ ನೀಡಿದ ಮಾಧವಿಗೆ ಮನದ ಮೂಲೆಯಲ್ಲಿ ಏನೋ ಒಂಥರಾ ಕಸಿವಿಸಿಯಾಯಿತು. ಎಲ್ಲವನ್ನೂ ಕೇಳಿಸಿಕೊಂಡ ಪೂಜಾ ತುಸು ಗಂಭೀರವಾಗಿಯೇ, “ಒಂದು ವೇಳೆ ನೀನು ಒಡ್ಡಿದ ಪರೀಕ್ಷೆಲಿ ಅಜಯ್‌ ಸೋತು ಬೇರೆ ಯಾರಾದ್ರೂ ಅವನ ಬದುಕಿಗೆ ಎಂಟ್ರಿ ಕೊಟ್ಟರೆ ಏನ್ಮಾಡ್ತೀಯಾ….?”

“ಹಾಗೇನಾದರೂ ಆದರೆ ಅವನ ತಪ್ಪನ್ನು ಮನ್ನಿಸಿ, ಸುಧಾರಿಸಿ, ಸಹಿಸಿಕೊಂಡು ಬಾಳುವುದಕ್ಕಿಂತ ಅವನನ್ನು ಬಿಟ್ಟುಬಿಡ್ತೀನಿ,” ಅನ್ನುತ್ತಲೇ ಮಾಧವಿಯ ಗಂಟಲು ಒಣಗಿದಂತಾಯಿತು.

ಅಷ್ಟರಲ್ಲಿ ಒಳಗಿನಿಂದ ಕೇಳಿ ಬಂದ ಸದ್ದಿನಿಂದ ಒಂದು ಕ್ಷಣ ಬೆಚ್ಚಿಬಿದ್ದ ಮಾಧವಿ, “ಏನದು ಸದ್ದು…. ಬೇರೆ ಯಾರಾದ್ರೂ ಒಳಗಡೆ ಇದ್ದಾರಾ…? ಅವರೇನಾದ್ರೂ ನಮ್ಮಿಬ್ಬರ ಮಾತನ್ನು ಕೇಳಿಸಿಕೊಂಡಿದ್ದರೆ… ಕೇಳಿಸಿಕೊಂಡಿಲ್ಲ ತಾನೆ…?” ಎಂದಳು ಗಾಬರಿಯಿಂದ.

ಪೂಜಾ ಗಾಬರಿಯಿಂದ, “ಹಾಗೇನೂ ಇಲ್ಲ… ಒಳಗೆ ಬೆಕ್ಕುಗಳು ಓಡಾಡುತ್ತಿರಬೇಕು….” ಎಂದಳು.

ಮಾಧವಿ ತನ್ನೆಲ್ಲಾ ಐಡಿಯಾ, ವಿಚಾರವನ್ನೆಲ್ಲಾ ವಿವರವಾಗಿ ಪೂಜಾಳಿಗೆ ಮನದಟ್ಟು ಮಾಡಿ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆ ಹಾಕಿದಳು.

ಆಫೀಸ್‌ ಟೂರ್‌ನಿಂದ ಹಿಂತಿರುಗಿ ಬಂದ ಅಜಯ್‌ಗೆ ಆಶ್ಚರ್ಯದ ಜೊತೆಗೆ ಕುತೂಹಲ ಕಾದಿತ್ತು. ಮನೆಗೆ ಬಂದಾಗಿನಿಂದಲೂ ತನ್ನ ಪಾಡಿಗೆ ತಾನು ಹಾಯಾಗಿರುವ ಮಾಧವಿಯನ್ನು ನೋಡಿ ಚಕಿತಗೊಂಡ. ಈ ಹಿಂದೆ ಮನೆಗೆ ಬಂದ ತಕ್ಷಣವೇ ಅನುಮಾನದ ದೃಷ್ಟಿಯಲ್ಲಿ ತನ್ನನ್ನು ನೋಡುತ್ತಾ, ನೂರಾರು ಪ್ರಶ್ನೆಗಳನ್ನು ಕೇಳಿ ಹೈರಾಣಾಗಿಸುತ್ತಿದ್ದ ಮಾಧವಿ ಇಂದ್ಯಾಕೋ ಯಾವುದನ್ನು ಪ್ರಶ್ನೆ ಮಾಡದೆ ನಿರಾಳವಾಗಿರುವುದು ಅಜಯ್‌ಗೆ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿತ್ತು. ಅಜಯ್‌ ತನ್ನ ಬಗ್ಗೆ ಏನಂದುಕೊಂಡಾನು ಅನ್ನುವ ಪರಿವೇ ಇಲ್ಲದೆ ನಿರಾತಂಕಭಾವದಿಂದ ಇದ್ದಳು ಮಾಧವಿ.

ಈಗ ಮಾಧವಿಯ ಕೈಯಲ್ಲಿ ಅಜಯ್‌ ಅನ್ನೋ ಬೀಗಕ್ಕೆ ಪೂಜಾ ಎನ್ನುವ ಕೀ ಹಾಕಿ ಬಂದೊಬಸ್ತ್ ಮಾಡಿರೋ ಹೆಮ್ಮೆ ಇತ್ತು. ಅಷ್ಟಕ್ಕೂ ಈ ನಾಟಕವೆಲ್ಲಾ ಕೇವಲ ಕೆಲವೇ ದಿನಗಳವರೆಗೆ ಮಾತ್ರ ತಾನೇ….? ಎಂದುಕೊಂಡು ನಿರಾಳವಾಗಿದ್ದಳು ಮಾಧವಿ.

ಅಜಯ್‌ ಟೇಬಲ್ ಮುಂದೆ ಸಂದರ್ಶಕಿಯಾಗಿ ಪೂಜಾ ಕುಳಿತಿದ್ದಳು. ಸ್ನಿಗ್ಧ ಸೌಂದಯದ ಪೂಜಾಳನ್ನು ನೋಡಿದ ಅಜಯ್‌ಪುಳಕಿತನಾಗಿದ್ದ. ಹೊಸ ಹುರುಪಿನಿಂದ ಕಂಗೊಳಿಸುತ್ತಿದ್ದ. ಅಷ್ಟಕ್ಕೂ ಮಾಧವಿಯ ಗೆಳತಿ ಅಂತ ತಿಳಿದ ಮೇಲಂತೂ ಬಹಳ ಸಂತೋಷಗೊಂಡಿದ್ದ.

“ಸಾರ್‌… ನನಗೆ ಈ ಕೆಲಸದ ಅವಶ್ಯಕತೆ ಬಹಳ ಇದೆ…” ಕೋಗಿಲೆಯಂತೆ ಉಲಿದ ಪೂಜಾಳ ದನಿಗೆ ಅಜಯ್‌ ಕ್ಷಣಕಾಲ ಮಾತನಾಡದಂತಾದ. ತಕ್ಷಣವೇ ಸಾರಿಸಿಕೊಳ್ಳುತ್ತಾ ನಗುತ್ತಲೇ “ಹಾಂ…. ನಿಮ್ಮ ಬಗ್ಗೆ ಮಾಧವಿ ಎಲ್ಲಾ ಹೇಳಿದ್ದಾಳೆ. ಈ ಕೆಲಸನಾ ನಿಮಗೆ ನೀಡಬೇಕು ಅಂತ ಶಿಫಾರಸ್ಸು ಬೇರೆ ಮಾಡಿದ್ದಾಳೆ. ನಿಮ್ಮ ಆಸೆಯನ್ನು ನಿರಾಸೆ ಮಾಡೋಕಾಗುತ್ಯೇ…. ನಿಮ್ಮಂತಹ ಸುಂದರ ಇಂಟೆಲಿಜೆಂಟ್‌ ಕ್ಯಾಂಡಿಡೇಟೇ ನಮಗೆ ಬೇಕಾಗಿರುವುದು. ಆಲ್ ದಿ ಬೆಸ್ಟ್!” ಎಂದು ಶುಭ ಹಾರೈಸಿದ.

ಪೂಜಾ ತನ್ನ ಯೌವನಭರಿತ ಬಳುಕುವ ಮೈಮಾಟದಿಂದಾಗಿ ಆಗಲೇ ಅಜಯ್‌ನನ್ನು ತನ್ನೆಡೆಗೆ ಸೆಳೆದುಕೊಂಡಿದ್ದಳು. ತನ್ನ ಹಾಲಿನಂತಹ ಬಿಳುಪು ಮೈ ಬಣ್ಣದ ಜೊತೆಗೆ ತುಂಬಿತುಳುಕುವ ದೇಹಸಿರಿಯಲ್ಲಿ ಮಿಂದೆದ್ದಂತಿದ್ದ ಪೂಜಾ ಅದಕ್ಕೊಪ್ಪುವ ಬಿಳಿ ಬಣ್ಣದ ಶಿಫಾನ್‌ ಸೀರೆಯಲ್ಲಿ ಮತ್ತಷ್ಟು ಮನಮೋಹಕವಾಗಿ ಕಾಣುತ್ತಿದ್ದಳು. ಅಜಯ್‌ ಕ್ಯಾಬಿನ್‌ಗೆ ವೈಯಾರವಾಗಿ ಕಾಲಿಟ್ಟ ಅವಳನ್ನೇ ಎಲೆಯಿಕ್ಕದೆ ಒಂದೇ ಸಮನೆ ನೋಡುತ್ತಾ ಅವಳ ಸೌಂದರ್ಯವನ್ನು ಅಜಯ್‌ ಕಣ್ತುಂಬಿಕೊಂಡಿದ್ದ.

ಮೊದಲ ಬಾರಿಗೆ ಪೂಜಾ ಕೈ ಕುಲುಕಿದಾಗಲಂತೂ ಅವಳ ಕೈ ಬಿಸಿಯ ಮೃದು ಸ್ಪರ್ಶ ಅಜಯ್‌ನ ಹೃದಯ ಸಮುದ್ರವನ್ನು ಕಲಕಿಬಿಟ್ಟಿತ್ತು. `ಸುಂದರ ಸ್ತ್ರೀಯರು’  ಗಂಡಸರ ದೌರ್ಬಲ್ಯ ಎನ್ನುವ ಸತ್ಯವನ್ನು ಪೂಜಾ ಚೆನ್ನಾಗಿ ಅರಿತಿದ್ದಳು. ಅಪ್ರತಿಮ ಸೌಂದರ್ಯದ ಜೊತೆ ಕಣ್ಸೆಳೆಯುವ ಕುಡಿನೋಟ, ವಯ್ಯಾರದಲ್ಲಿ ಅಯಸ್ಕಾಂತದ ಶಕ್ತಿ ಅಡಗಿತ್ತು. ಆ ಕಾರಣದಿಂದಾಗಿಯೇ ಪೂಜಾ ಈ ಹುದ್ದೆಗೆ ಆಯ್ಕೆಯಾದಳು. ಅಪಾಯಿಂಟ್‌ಮೆಂಟ್‌ ಲೆಟರ್‌ ಕೈಗೆ ಸಿಕ್ಕಿದ್ದೆ ತಡ ತಕ್ಷಣವೇ ಖುಷಿಯ ಸಮಾಚಾರವನ್ನು ಮಾಧವಿಗೆ ತಿಳಿಸುತ್ತಾ, “ನಾಳೆಯಿಂದ ನನ್ನ ಕೆಲಸ ಶುರು ಡಿಯರ್‌. ಹಾಗೇ ನೀನು ಕೊಟ್ಟಿರುವ ಗೂಢಚಾರಿಣಿ ಕೆಲಸನೂ ಆರಂಭವಾಗುತ್ತೆ,” ಎಂದಳು.

ವಿಷಯ ತಿಳಿಯುತ್ತಿದ್ದಂತೆ ಸಂತಸಗೊಂಡ ಮಾಧವಿಯ ಮುಖದಲ್ಲಿ ಯುದ್ಧ ಗೆದ್ದಂಥ ಹೆಮ್ಮೆ ಮಿನುಗುತ್ತಿತ್ತು.`ಒಳ್ಳೆಯದೆ ಆಯಿತು. ಆದಷ್ಟೂ ಬೇಗ ನನ್ನ ಬದುಕಿನಲ್ಲಿ ಕವಿದಿದ್ದ ಕತ್ತಲು ಕರಗಿ ಹೊಸ ಬೆಳಕು ಆರಂಭವಾದರೆ ಸಾಕು,’ ಎಂದುಕೊಂಡಳು.

ರಾತ್ರಿ ಮಲಗುವ ಮುನ್ನ ಮಾಧವಿ, ಅಜಯ್‌ನನ್ನು ಮಾತಿಗೆಳೆಯಲು ಪ್ರಯತ್ನಿಸಿದಳು. ಆದರೆ ಅವನು, ತನಗೆ ತುಂಬಾ ಸುಸ್ತಾಗಿದೆ ಅನ್ನುವ ಕಾರಣ ನೀಡಿ ಹಾಗೆಯೇ ನಿದ್ದೆಗೆ ಜಾರಿದ.

ದಿನಗಳು ಕ್ಷಣಗಳ ಹಾಗೆ ಉರುಳಿಹೋಯಿತು. ಅಚಾನಕ್‌ ಆಗಿ ತರಾತುರಿಯಲ್ಲಿ ಮಾಧವಿಯನ್ನು ಭೇಟಿ ಮಾಡಿದಳು ಪೂಜಾ.

“ಮಾಧವಿ….. ನೀನು ಹೇಳಿದ ಹಾಗೆ ಎಲ್ಲಾ ಕಡೆಯಿಂದಲೂ ಅಜಯ್‌ನನ್ನು ಪರೀಕ್ಷೆ ಮಾಡಿದೆ. ಆದರೆ ನನಗೆ ಯಾವುದೇ ರೀತಿಯ ಕ್ಲೂ ಸಿಕ್ಕಿಲ್ಲ. ನೀನು ಅಂದ್ಕೊಂಡಿರೋ ಹಾಗೆ ಅಜಯ್‌ ಸ್ತ್ರೀಲೋಲನಲ್ಲ. ಯಾರೋ ನಿನಗೆ ಅವರ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈಗ ಅಜಯ್‌ ಕೈಯಲಿರೋ ದೊಡ್ಡ ಪ್ರಾಜೆಕ್ಟ್ ನಿಂದಾಗಿ ನಿನ್ನ ಜೊತೆ ಕಳೋಕೆ ಟೈಮ್ ಸಿಕ್ತಾ ಇಲ್ಲ. ಸ್ವಲ್ಪ ರೆಸ್‌್ಟಿಸ್‌ ಆಗಿದ್ದಾರೆ ಅಷ್ಟೆ. ಹಾಗಾಗಿ ಮೊದಲಿನ ಹಾಗೆ ನಿನ್ನ ಜೊತೆ ಫ್ರೀಯಾಗಿ ಇರೋಕೆ ಆಗ್ತಾ ಇಲ್ಲ,” ಎಂದಳು.

ಇದನ್ನು ಹೇಳುತ್ತಿದ್ದಂತೆ ಮಾಧವಿಯ ಮನಸ್ಸು ನಿರಾಳವಾಯಿತು. ಯಾವುದೋ ಒತ್ತಡದಿಂದ ರಿಲೀಫ್‌ ಸಿಕ್ಕಂತಾಗಿ, “ಸರಿ ಕಣೇ…. ಎಲ್ಲೋ ಒಂದು ಕಡೆ ಸಮಾಧಾನ. ಒಳ್ಳೆಯ ಸಮಾಚಾರ ತಂದಿದ್ದಕ್ಕೆ ಥ್ಯಾಂಕ್ಸ್ ಡಿಯರ್‌…..” ಎಂದಳು ಮಾಧವಿ.

ಮಾಧವಿ ಸಂತೋಷವಾಗಿರುವುದನ್ನು ಮನಗಂಡ ಪೂಜಾ ನವಿರಾಗಿ ಕಾಲೆಳೆಯಲು “ಮಾಧವಿ, ನಿನ್ನ ಯಜಮಾನ ಎಷ್ಟು ಹ್ಯಾಂಡ್‌ಸಮ್ ಆಗಿದ್ದಾರಲ್ಲ. ಇವರನ್ನು ನೋಡಿದ ಯಾವುದೇ ಹುಡುಗಿಯಾದ್ರೂ ಅವರ ರೂಪಕ್ಕೆ ಮರುಳಾಗದೆ ಇರಲ್ಲ ಏನಂತೀಯಾ…” ಎಂದಳು.

“ಅಯ್ಯೋ…. ಅಜಯ್‌ನನ್ನು ಹಿಂಬಾಲಿಸಲು ಹೋಗಿ ಅವನನ್ನೇ ಲವ್ ಮಾಡಿಬಿಟ್ಟೀಯಾ ಹುಷಾರ್‌….!” ಮಾಧವಿಯ ಮಾತು ಕೇಳಿ ಪೂಜಾ ಕಿಲಕಿಲನೇ ನಕ್ಕಳು.

ಕಾಲಚಕ್ರ ವೇಗವಾಗಿ ಉರುಳುತ್ತಾ ತಿಂಗಳುಗಳು ಕಳೆದಿದ್ದೇ ಗೊತ್ತಾಗಲಿಲ್ಲ. ಮಾಧವಿ ಮೊದಲಿನಂತೆಯೇ ಅತಿ ಹೆಚ್ಚು ಖುಷಿಯಾಗಿದ್ದಳು. ಅಜಯ್‌ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಾಗಿತ್ತು. ಅಜಯ್‌ ಕೂಡಾ ಹಿಂದಿಗಿಂತ ಹೆಚ್ಚು ಖುಷಿಯಾಗಿ ಲವಲವಿಕೆಯಿಂದ ಓಡಾಡಿಕೊಂಡಿದ್ದ. ಆರಾಮಾಗಿ ಕೆಲಸ ಮಾಡುತ್ತಿದ್ದ. ಇಂತಹ ಒಂದು ಸುಂದರ ವಾತಾವರಣವನ್ನು ಕಲ್ಪಿಸಿಕೊಟ್ಟ ಪೂಜಾಳಿಗೆ ಮನದಲ್ಲಿಯೇ ಥ್ಯಾಂಕ್ಸ್ ಹೇಳಿದಳು. ಕಳೆದುಹೋದ ಅಜಯ್‌ ಮತ್ತೆ ವಾಪಸ್ಸು ದಕ್ಕಿದ ಖುಷಿಯಲ್ಲಿ ಮಾಧವಿ ತೇಲಾಡುತ್ತಿದ್ದಳು. ಆದರೆ…! ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಕಾರಣ ಏನೆಂದರೆ ಇತ್ತೀಚೆಗೆ ಪೂಜಾಳ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು. ಆಗಾಗ್ಗೆ ಬಂದು ಭೇಟಿ ಮಾಡುತ್ತಿದ್ದ ಪೂಜಾ ಬಹುತೇಕ ಬರುವುದನ್ನು ನಿಲ್ಲಿಸಿಬಿಟ್ಟಿದ್ದಳು. ಅಷ್ಟೇ ಅಲ್ಲದೆ ಕೊನೆ ಪಕ್ಷ ಫೋನ್‌ ಮಾಡುವುದನ್ನೂ ಮರೆತೇಬಿಟ್ಟಿದ್ದಳು. ಮಾಧವಿ ಫೋನ್‌ ಮಾಡಿದಾಗೆಲ್ಲಾ `ನಾಟ್‌ ರೀಚೆಬಲ್’ ಎಂದು ಬರತೊಡಗಿತು. ಪೂಜಾ ಬಗ್ಗೆ ಅಜಯ್‌ ಬಳಿ ವಿಚಾರಿಸಿದಾಗಲೂ ಸಮರ್ಪಕ ಉತ್ತರ ದೊರೆಯಲಿಲ್ಲ. ತನ್ನ ಪಾಲಿನ ಜೀವದ ಗೆಳತಿ ಹೀಗ್ಯಾಕೆ ಮಾಡಿದಳು ಅಂತ ಮನಸ್ಸಿನಲ್ಲಿ ಮಾಧವಿ ಪ್ರಶ್ನಿಸಿಕೊಂಡಳು. ಮತ್ತೆ ಮತ್ತೆ ಅಜಯ್‌ನನ್ನು ಒತ್ತಾಯಿಸಿ ಕೇಳಿದಾಗ, “ಪೂಜಾ ಬಗ್ಗೆ ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದೀಯಾ? ಅವಳ ಪಾಡಿಗೆ ಅವಳನ್ನು ಬಿಟ್ಟುಬಿಡು. ಅವಳು ತನ್ನ ಕೆಲಸವನ್ನಂತೂ ಚೆನ್ನಾಗಿ ಮಾಡ್ಕೊಂಡು ಹೋಗ್ತಾ ಇದ್ದಾಳೆ. ಮತ್ತಿನ್ನೇನು…? ಅಷ್ಟಕ್ಕೂ ನಿನಗೆ ಪೂಜಾ ಜೊತೆ ಏನು ಕೆಲಸವಿದೆ?

“ಅಂದಹಾಗೆ ನೀನು ಶಿಫಾರಸ್ಸು ಮಾಡಿರೋ ನಿನ್ನ ಗೆಳತಿ ನಿಜಕ್ಕೂ ಸಿಂಪ್ಲಿ ಸೂಪರ್‌. ಅವಳ ನಗು, ಮಾತು, ರೂಪ, ಲಾವಣ್ಯ, ಚುರುಕು ಎಲ್ಲ ಫೆಂಟಾಸ್ಟಿಕ್‌. ಹುಡುಗಿ ಅಂದ್ರೆ ಪೂಜಾ ತರಹ ಇರಬೇಕು. ತುಂಬಾ ಬಿಂದಾಸ್‌ ಆಗಿರೋ ಪೂಜಾ ನಮ್ಮ ಸಂಸ್ಥೆಗೆ ಸಿಕ್ಕಿರೋ ನಿಧಿ. ಅವಳ ಒಂದು ಕುಡಿನೋಟ ಸಾಕು ಇಡೀ ದಿನ ಉಲ್ಲಸಿತರಾಗಿ ಇರೋಕೆ. ಅಮೇಝಿಂಗ್‌ ಲೇಡಿ….” ಎಂದ. ಅಜಯ್‌ ಪೂಜಾಳನ್ನು ವರ್ಣಿಸಿದ ರೀತಿಗೆ ಬೆರಗಾದ ಮಾಧವಿ, ಎಲ್ಲೋ ಏನೋ ಎಡವಟ್ಟಾಗಿದೆ ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೂ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಪೂಜಾಳ ಬಗ್ಗೆ ಯೋಚಿಸತೊಡಗಿದಳು. `ಒಂದುವೇಳೆ ಪೂಜಾ ಮೊಬೈಲ್ ‌ನಂಬರ್‌ ಬದಲಾಯಿಸಿಕೊಂಡಿರಬೇಕು.  ನನಗೆ ನಂಬರ್‌ ಕೊಡಲು ಮರೆತು ಹೋಗಿರಬೇಕು. ಪಾಪ…. ಕೆಲಸದ ಒತ್ತಡದಿಂದ ಮನೆ ಕಡೆ ಬರೋದಿಕ್ಕೆ ಸಾಧ್ಯವಾಗಲಿಲ್ಲವೇನೋ….? ಯಾರಿಗೆ ಗೊತ್ತು? ಅಷ್ಟಕ್ಕೂ ತಾನೇ ಏಕೆ ಒಂದು ಸಾರಿ ಅವರ ಆಫೀಸಿಗೆ ಹೋಗಿ ಮೀಟ್‌ ಮಾಡಿ ಬರಬಾರದು? ಹೌದಲ್ವಾ….., ಒಳ್ಳೆಯ ಐಡಿಯಾ. ನನ್ನ ಆಗಮನ ಇಬ್ಬರಿಗೂ ಸರ್ಪ್ರೈಸ್‌ ಆಗಬಹುದು,’ ಎಂದುಕೊಂಡು ತಕ್ಷಣವೇ ಮನೆಗೆ ಬೀಗ ಹಾಕಿ ಆಫೀಸ್‌ನತ್ತ ಹೊರಟಳು.

ನೀಟಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಬಂದ ಮಾಧವಿಯನ್ನು ನೋಡಿದ ಸಿಬ್ಬಂದಿಯೆಲ್ಲಾ ಗುಸುಗುಸು ಮಾತನಾಡಿಕೊಳ್ಳಲು ಆರಂಭಿಸಿದರು. ಅದೇ ಸಮಯಕ್ಕೆ ಸರಿಯಾಗಿ ಲಗುಬಗೆಯಿಂದ ಓಡಿ ಬಂದ ಆಫೀಸ್‌ ಬಾಯ್‌, “ನಮಸ್ಕಾರ ಮೇಡಂ, ಸಾಹೇಬ್ರು ಸ್ವಲ್ಪ ಬಿಝಿಯಾಗಿದ್ದಾರೆ. ತುಂಬಾ ಅರ್ಜೆಂಟ್‌ ಮೀಟಿಂಗ್‌ನಲ್ಲಿದ್ದಾರೆ. ಸ್ವಲ್ಪ ಹೊತ್ತು ಈ ರೂಮಿನಲ್ಲಿ ವೇಟ್‌ ಮಾಡಿ,” ಎನ್ನುತ್ತಾ ಮಾಧವಿನಾ ವೇಟಿಂಗ್‌ ರೂಮಿನತ್ತ ಕರೆದೊಯ್ದ.

ಬಹಳ ಹೊತ್ತು ಕಾಯುತ್ತಾ ಕುಳಿತ್ತಿದ್ದ ಮಾಧವಿಗೆ ಆಫೀಸ್‌ನ ವಾತಾವರಣವೇ ವಿಚಿತ್ರವಾಗಿದೆ ಅನ್ನಿಸಿತು. ಎಲ್ಲ ಅಸ್ತವ್ಯಸ್ತ ಹಾಗೂ ನಿಗೂಢವಾಗಿತ್ತು. ಕುತೂಹಲ ತಡೆಯಲಾರದೆ ಮೀಟಿಂಗ್‌ ರೂಮಿನತ್ತ ಸಾಗಿ ಇಲ್ಲೇ ಮೀಟಿಂಗ್‌ ನಡೀತಿರಬಹುದು ಅಂತ ಭಾವಿಸಿ ಬಾಗಿಲು ತೆರೆದು ಒಳಹೋದಳು. ಆದರೆ ರೂಮಿನಲ್ಲಿ ಯಾರೂ ಕಾಣಿಸಲಿಲ್ಲ. ನಿಶ್ಶಬ್ದವಾಗಿತ್ತು. ಇನ್ನಷ್ಟು ಕುತೂಹಲ ಅನುಮಾನದಿಂದ ಅಜಯ್‌ನ ಪ್ರೈವೇಟ್‌ ಕ್ಯಾಬಿನ್‌ನತ್ತ ಸರಿದು ಬಾಗಿಲು ತೆರೆದಳು. ಒಳಗಡೆ ಹೆಜ್ಜೆ ಇಡುತ್ತಿದ್ದಂತೆ ಮಾಧವಿ ಶಾಕ್‌ನಿಂದ ತತ್ತರಿಸಿದಳು.

ಕಣ್ಣು ಮುಂದಿನ ದೃಶ್ಯವನ್ನು ನೋಡಿ ಕೈ ಕಾಲುಗಳು ತಣ್ಣಗಾದವು. ಇಡೀ ದೇಹ ಕಂಪಿಸತೊಡಗಿತು. ಮಾಧವಿ ತನ್ನ ಕನಸಿನಲ್ಲೂ ಕಲ್ಪಿಸಿಕೊಳ್ಳಲಾಗದಂತಹ ಅಸಹ್ಯವಾದ ದೃಶ್ಯ. ಮುಂದಿನ ಸೋಫಾದಲ್ಲಿ ಪೂಜಾ ಬಹುತೇಕ ವಿವಸ್ತ್ರಳಾಗಿದ್ದಳು. ಅಜಯ್‌ಮೈಮೇಲೆ ಕೂಡ ಬಟ್ಟೆ ಇರಲಿಲ್ಲ. ಅಜಯ್‌ನ ತೊಡೆ ಮೇಲೆ ಮಲಗಿದ್ದ ಪೂಜಾ ಅವನ ತುಟಿಯೊಳಗೆ ತನ್ನ ತುಟಿಯನ್ನು ಸೇರಿಸಿದ್ದಳು. ಪ್ರೇಮ ಸಲ್ಲಾಪದಲ್ಲಿ ಎಷ್ಟೊಂದು ಆಳವಾಗಿ ಮುಳುಗಿದ್ದರೆಂದರೆ, ಎದುರಿಗೆ ನಿಂತಿದ್ದ ಮಾಧವಿಯನ್ನು ಗಮನಿಸಲಾರದಷ್ಟು ಉನ್ಮಾದದಲ್ಲಿ ತೇಲಿಹೋಗಿದ್ದರು. ಮಾಧವಿಯ ಕಣ್ಣುಗಳು ನೀರು ತುಂಬಿಕೊಂಡು ಕತ್ತಲು ಆರಿಸಿದಂತಾಗಿ ಜೋರಾಗಿ ಕಿರುಚಿದಳು, “ಇಲ್ಲೇನು ನಡೀತಾ ಇದೆ…. ಅಜಯ್‌ ಇಲ್ಲೇನು ಮಾಡ್ತಿದ್ದೀಯಾ? ಪೂಜಾ ನೀನು ಇಲ್ಲಿ…… ನನ್ನ ಕಣ್ಣೆ ನನಗೆ ನಂಬೋಕಾಗ್ತಿಲ್ಲ… ಇದನ್ನೆಲ್ಲಾ ಮಾಡುವಂತೆ ನಾನು ನಿನಗೆ ಹೇಳಿರಲಿಲ್ಲ…..” ಎನ್ನತ್ತಿದ್ದಂತೆ ಉಸಿರು ಕಟ್ಟಿದಂತಾಗಿ ಏದುಸಿರುಬಿಡುತ್ತಿದ್ದಳು.

ಗಲಿಬಿಲಿಯಿಂದ ಮಾಧವಿಯನ್ನು ನೋಡಿದ ಇಬ್ಬರೂ ಶಾಕ್‌ ಆದರು. ಮಾಧವಿಯ ಕಾಳಿ ಅವತಾರನ್ನು ಕಂಡು ಬೆಚ್ಚಿಬಿದ್ದ ಪೂಜಾ ಲಗುಬಗೆಯಲ್ಲಿ ಬಟ್ಟೆ ಸರಿಪಡಿಸಿಕೊಂಡಳು. ಅಜಯ್‌ ಕೂಡಾ ಬಲೆಗೆ ಬಿದ್ದ ಮಿಕದಂತೆ ಪೆಚ್ಚುಮೋರೆ ಹಾಕಿಕೊಂಡು ಬೇಗ ಬೇಗ ಬಟ್ಟೆ ಧರಿಸಿಕೊಂಡು ಹಾಗೆಯೇ ನಿಂತುಬಿಟ್ಟ. ಜೋರಾಗಿ ಅಬ್ಬರಿಸುತ್ತಾ ನೇರವಾಗಿ ಪೂಜಾಳ ಕೆನ್ನೆಗೆ ರಪ್‌ ಎಂದು ಬಾರಿಸಿದಳು. ಪೂಜಾ ಏನನ್ನೋ ಹೇಳಲು ಬಯಸುತ್ತಿದ್ದಳು ಮಾಧವಿಯ ರಣಚಂಡಿಯ ರೌದ್ರತೆಗೆ ಬೆಚ್ಚಿ, ಪರಿಸ್ಥಿತಿಯ ಬಿಕ್ಕಟ್ಟನ್ನು ನೋಡಿ ಭಯಭೀತಳಾಗಿ ತಕ್ಷಣವೇ ತನ್ನ ಪರ್ಸ್‌ನ್ನು ಎತ್ತಿಕೊಂಡು ಕ್ಯಾಬಿನ್‌ನಿಂದ ಹೊರಬಂದು ಆಫೀಸ್‌ನ ಮುಂಬಾಗಿಲ ಬಳಿ ಬಂದು ನಿಂತಳು. ಅಷ್ಟರಲ್ಲಿ ಬಿರುಗಾಳಿಯಂತೆ ವೇಗವಾಗಿ ಬಂದ ಮಾಧವಿ, ಅಜಯ್‌ ಶರ್ಟ್‌ನ ಕೊರಳಪಟ್ಟಿ ಹಿಡಿದೆಳೆಯುತ್ತಾ, “ಮೋಸಗಾರ… ದಗಾಕೋರ… ನನಗೆ ದ್ರೋಹ ಮಾಡಿಬಿಟ್ಟೆಯಲ್ಲಾ…? ಆತ್ಮವಂಚಕ…. ಹೊರಗಡೆ ನಡೀತಿದ್ದ ನಿನ್ನ ರಂಗಿನಾಟದ ಬಗ್ಗೆ ಮುಂಚೆ ನನಗೆ ಅನುಮಾನವಿತ್ತು. ಆದ್ದರಿಂದಲೇ ನಿನ್ನ ಆಟಗಳನ್ನು ಪತ್ತೆ ಮಾಡುವುದಕ್ಕಾಗಿ ಈ ನಡತೆಗೆಟ್ಟವಳನ್ನು ನೇಮಿಸಿದ್ದೆ. ಆದರೆ ಬೇಲಿಯೇ ಎದ್ದು ಹೊಲ ಮೇಯುತ್ತೆ ಅಂತ ಯಾರಿಗೆ ಗೊತ್ತಿತ್ತು….?” ಕಣ್ಣುಗಳಿಂದ ಹೊರಸೂಸುತ್ತಿದ್ದ ಕೋಪದ ಜ್ವಾಲೆ ಇಬ್ಬರನ್ನೂ ಸುಟ್ಟುಹಾಕುಂತಿತ್ತು. ಹಾಗೆಯೇ ಜೋರಾಗಿ ಕಿರುಚುತ್ತಾ ತನ್ನೆರಡು ಕೈಗಳಿಂದ ಅಜಯ್‌ನ ಕೆನ್ನೆಗೆ ಒಂದೇ ಸಮನೆ ಹೊಡೆಯಲು ಆರಂಭಿಸಿದಳು.

ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್‌ ಹರಿದುಹೋಗೋ ತನಕ ಹೊಡೆಯುತ್ತಾ, ಸುಸ್ತಾಗಿ ಅಲ್ಲೇ ಕುಸಿದಳು. ದಿಢೀರನೆದ್ದು ಮತ್ತೆ ಮತ್ತೆ ಜೋರಾಗಿ ಕಿರುಚುತ್ತಾ ಅತ್ತಿಂದಿತ್ತ ಓಡಾಡುತ್ತಾ, “ಐ ಹೇಟ್‌ ಯೂ!” ಎಂದು ಕಿರುಚಿದಳು ತಲೆಸುತ್ತಿ ಅಲ್ಲೇ ಬಿದ್ದಳು.

ಕಣ್ಣು ಬಿಟ್ಟಾಗ ಮಾಧವಿ ತನ್ನ ಮನೆಯ ಬೆಡ್‌ರೂಮಿನಲ್ಲಿದ್ದಳು. ಅಜಯ್‌ ಅವಮಾನದಿಂದ ಕುದಿಯುತ್ತಾ ಆ ಕಡೆ ಈ ಕಡೆ ತಿರುಗಾಡುತ್ತಿದ್ದ. ಮಾಧವಿಗೆ ಮತ್ತೆ ಮತ್ತೆ ನೆನಪಾಗುತ್ತಿದ್ದ ಆಫೀಸ್‌ ಕ್ಯಾಬಿನ್‌ ದೃಶ್ಯಗಳು ಕಣ್ಮುಂದೆ ಬಂದಾಗಲಂತೂ ಬೆಂಕಿಯಾಗುತ್ತಿದ್ದಳು. ದಿಢೀರನೇ ಎದ್ದು ನಿಂತು ಕೂಗಾಡಲು ಆರಂಭಿಸಿದಳು, “ಅಜಯ್‌….. ನೀನು ನನಗೆ ಎಂತಹ ದೊಡ್ಡ ಮೋಸ ಮಾಡಿದೆ. ನನ್ನ ಪ್ರೀತಿಯಲ್ಲಿ ನಿನಗೆ ಏನು ಕಡಿಮೆಯಾಗಿತ್ತು ಹೇಳು ಅಜಯ್‌…. ನನಗೆ ಉತ್ತರ ಕೊಡು.”

ಏನೂ ನಡೆದೇ ಇಲ್ಲ ಅನ್ನುವ ಹಾಗೇ ಅಜಯ್‌ ಕಲ್ಲಾಗಿ ಕೂತಿದ್ದ. ಅಜಯ್‌ ತನ್ನ ತಪ್ಪನ್ನು ಅರಿತುಕೊಂಡು ತನ್ನನ್ನು ಕ್ಷಮಿಸೆಂದು ಕೇಳಿಕೊಳ್ಳಬಹುದು ಅಥವಾ ಕಾಲು ಹಿಡಿದುಕೊಂಡು ತಪ್ಪು ಒಪ್ಪಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ಮಾಧವಿ ಅಂದುಕೊಂಡಿದ್ದಳು. ಆದರೆ ಅದ್ಯಾವುದನ್ನೂ ಮಾಡದೆ ನಾಚಿಕೆ ಇಲ್ಲದವನಂತೆ ಮುಸಿಮುಸಿ ನಗುತ್ತಾ ನಿಂತಿದ್ದ ಅಜಯ್‌ನನ್ನು ನೋಡಿ ಇನ್ನಷ್ಟು ವ್ಯಗ್ರಳಾದಳು.

ಇಷ್ಟು ಹೊತ್ತು ಮೌನಿಯಾಗಿದ್ದ ಅಜಯ್‌, ಮಾಧವಿ ಬಳಿ ಬಂದು, “ಇಷ್ಟು ಹೊತ್ತು ಹೇಳಿದೆಲ್ಲಾ ಮುಗೀತಾ… ಇನ್ನು ಏನಾದ್ರೂ ಹೇಳುವುದ್ದಿದ್ದರೆ ಹೇಳಿಬಿಡು. ಐ ಡೋಂಟ್‌ ಕೇರ್‌…. ನಿನ್ನ ಯಾವುದೇ ಪ್ರಶ್ನೆಗಳಿಗೂ ನನ್ನ ಬಳಿ ಉತ್ತರವಿಲ್ಲ… ಉತ್ತರ ಕೊಡೋ ಕಾಲ ಮುಗಿದುಹೋಗಿದೆ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಹಾಲು ಕಾಯುವ ಕೆಲಸಕ್ಕೆ ಬೆಕ್ಕನ್ನು ನೇಮಿಸಿದರೆ ಅದು ಹಾಲು ಕುಡಿಯದೇ ಬಿಟ್ಟೀತೇ…? ಇಂತಹ ನಿರ್ಧಾರ ತೆಗೆದುಕೊಳ್ಳುವ ಮುಂಚೆ ನೂರು ಬಾರಿ ಯೋಚಿಸಬೇಕಿತ್ತು. ಅದು ನಿನ್ನ ತಪ್ಪು… ನೋಡು ನೀನು ಕ್ಯಾಬಿನ್‌ನಲ್ಲಿ ಏನು ನೋಡಿದ್ಯೋ ಅದೆಲ್ಲಾ ನಿಜ. ನಾನು ಪೂಜಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಸದ್ಯದಲ್ಲೇ ಅವಳು ನನ್ನ ಮಗುವಿಗೆ ತಾಯಿ ಆಗುತ್ತಾಳೆ.

“ನಿನಗೆ ಆ ಯೋಗ್ಯತೆ ಇದೆಯಾ? ನೀನು ಯಾವತ್ತೂ ತಾಯಿ ಆಗೋಕಾಗಲ್ಲ. ನಿನ್ನನ್ನು ಮದುವೆಯಾದ ಹೊಸತರಲ್ಲಿ ಡಾಕ್ಟರ್‌ಬಳಿ ನಾವಿಬ್ಬರು ಹೋಗಿ ಚೆಕ್‌ಅಪ್‌ ಮಾಡಿಸಿಕೊಂಡಿದ್ದಾಗ ನಿನಗೆ ತಾಯಿಯಾಗುವ ಭಾಗ್ಯವಿಲ್ಲ ಅಂತ ಅವತ್ತೇ ತಿಳಿದಿತ್ತು. ನೀನು ನನಗೆ ತಂದೆಯಾಗುವ ಖುಷಿಯನ್ನು ಯಾವತ್ತೂ ನೀಡೋಕಾಗಲ್ಲ. ಆ ಸುಖ ಈಗ ಪೂಜಾ ಕೊಡ್ತಿದ್ದಾಳೆ. ನೀನೊಬ್ಬಳು ಫಲ ನೀಡದ ಬಂಜೆ ಮರ ಇದ್ದ ಹಾಗೆ…..”

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಾಧವಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಾಗಿತ್ತು. ಮದುವೆ ಎನ್ನುವ ಈ ಖೋ ಖೋ ಆಟದಲ್ಲಿ ಗೆಲುವು ನನ್ನ ಕೈ ಜಾರಿ ಹೋಗಿದೆ. ಸೋತಿರೋ ಪಂದ್ಯದಲ್ಲಿ ಮತ್ತೆ ಗೆಲ್ಲೋದು ಅಸಾಧ್ಯವೆಂದು ತಿಳಿದ ಮಾಧವಿ, ಇವರಿಬ್ಬರ ರಂಗಿನಾಟಕ್ಕೆ ಒಂದು ಕೊನೆ ಕಾಣಿಸಲೇಬೇಕೆಂಬ ಹಠದೊಂದಿಗೆ ನೇರವಾಗಿ ಪೂಜಾಗೆ ಫೋನಾಯಿಸಿದಳು, “ಏ… ಲಜ್ಜೆಗೆಟ್ಟ ಹೆಮ್ಮಾರಿ…. ನನ್ನ ಮುಗ್ಧ ಗಂಡನನ್ನು ಏಮಾರಿಸಿ, ನಿನ್ನ ಬುಟ್ಟಿಗೆ ಹಾಕಿಕೊಳ್ತೀಯ ಅಂತ ಅಂದುಕೊಂಡಿರಲಿಲ್ಲ. ನಿನ್ನ ಮೇಲೆ ಎಷ್ಟೊಂದು ನಂಬಿಕೆ ಇಟ್ಟಿದ್ದೆ. ನನ್ನ ನಂಬಿಕೆಯನ್ನು ನಾಶ ಮಾಡಿದ ನಂಬಿಕೆದ್ರೋಹಿ ನೀನು…. `ಸ್ನೇಹ’ ಎನ್ನುವ ಪವಿತ್ರ ಪದಕ್ಕೆ ಕಳಂಕ ತಂದಿರೋ ವಿಶ್ವಾಸಘಾತಕಿ…..” ಮಾಧವಿಯ ಮಾತು ಕೇಳಿ ಜೋರಾಗಿ ನಗುತ್ತಿದ್ದ ಪೂಜಾ, “ಮಾಧವಿ… ನಿನ್ನ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ನಿನ್ನಂಥ ಮುಠ್ಠಾಳ ಹೆಣ್ಣು ಈ ಪ್ರಪಂಚದಲ್ಲೇ ಇಲ್ಲ ಕಣೇ…. ಅಲ್ವೇ ನೀನೆಂಥ ಪೆದ್ದಿ….. ಬೆಂಕಿ ಜೊತೆ ಸ್ನೇಹ ಬೆಳೆಸುವಂತೆ ಪೆಟ್ರೋಲಿಗೆ ಹೇಳಿದ್ರೆ ಬೆಂಕಿ ಹೊತ್ತಿ ಉರಿಯದೆ ಇರುತ್ಯೇ….? ಅಷ್ಟಕ್ಕೂ ಅಜಯ್‌ತುಂಬಾ ಒಳ್ಳೆಯ ಮನುಷ್ಯ. ಅವನ ಮನಸ್ಸನ್ನರಿತು ಅವನನ್ನು ಆದರಿಸುವಲ್ಲಿ ನೀನು ಸೋತಿದ್ದೆ. ಬೇಕು ಬೇಡಗಳನ್ನು ತಿಳಿದು ಪ್ರಾಮಾಣಿಕವಾದ ಕಾಳಜಿ, ಪ್ರೀತಿ, ಒಲವು ತೋರಿಸಿದ್ದಿದ್ದರೆ ಅವನ್ಯಾಕೆ ನನ್ನ ಬಳಿ ಬರುತ್ತಿದ್ದ? ಸದಾ ಮಾತುಮಾತಿಗೂ ಜಗಳವಾಡುವ, ಪ್ರತಿಯೊಂದನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುವ ನಿನ್ನ ವಿಚಿತ್ರ ಮನೋಭಾವವೇ ಅವನು ನಿನ್ನಿಂದ ದೂರ ಸರಿಯುವ ಪ್ರಯತ್ನ ಮಾಡಿದಿ.

“ಅವನು ಬಯಸಿದಂತಹ ಪ್ರೀತಿ, ವಾತ್ಸಲ್ಯ, ಒಲವು, ಹೊಂದಾಣಿಕೆ ಎಲ್ಲ ನನ್ನಲ್ಲಿತ್ತು ಆದ್ದರಿಂದಲೇ ನನ್ನನ್ನು ಬಯಸಿ ಬಂದ. ಅದರಲ್ಲೇನು ತಪ್ಪಿದೆ….? ನಾನು ಕೂಡ ನಿನ್ನ ಅಜಯ್‌ನಂತಹ ಒಳ್ಳೆಯ ಗಂಡನನ್ನು ಹುಡುಕುತ್ತಿದ್ದೆ. ಅದು ನನಗೆ ಸಿಕ್ಕಿದೆ. ಹೆಸರಿಗಷ್ಟೇ ಹೆಂಡತಿಯಾದರೆ ಸಾಲದು. ಜವಾಬ್ದಾರಿಯುತ ಸತಿಯಾಗಿರಬೇಕು ತಿಳೀತಾ…? ಆ ಯೋಗ್ಯತೆ ನಿನಗೆಲ್ಲಿದೆ….? ಅಷ್ಟಕ್ಕೂ ನೀನೇ ನಿನ್ನ ಸುತ್ತ ಸೃಷ್ಟಿಸಿಕೊಂಡಿರೋ ಬೆಂಕಿಯ ಬಲೆ ಈಗ ನಿನ್ನನ್ನೇ ಸುಡುತ್ತಾ ಇದೆ. ಅದು ನಿನಗೆ ನೀನೇ ನಿರ್ಮಿಸಿಕೊಂಡಿರೋ ಅಗ್ನಿಶಿಖೆ. ಅಜಯ್‌ನನ್ನು ನನ್ನಿಂದ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ… ಅಜಯ್‌ ಎಂದಿಗೂ ನನ್ನವನೆ ಮೈಂಡ್‌ ಇಟ್‌….” ಎನ್ನುತ್ತಾ ಫೋನ್‌ ಕಟ್‌ ಮಾಡಿದಳು ಪೂಜಾ.

ಮಾಧವಿಗೆ ಮುಂದೇನು ಮಾಡಬೇಕೆಂದು ತೋಚದೆ ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದು ಆಕ್ರೋಶದಿಂದ ಬುಸುಗುಡುತ್ತಾ ಬೇಗ ಬೇಗನೇ ಬಟ್ಟೆಗಳನ್ನು ಜೋಡಿಸಿಕೊಂಡು ಸೂಟ್‌ಕೇಸ್‌ನೊಂದಿಗೆ ಹೊರಬಂದು, “ಮಿಸ್ಟರ್‌ ಅಜಯ್‌, ಇಷ್ಟೆಲ್ಲಾ ಆದಮೇಲೆ ಒಂದು ಕ್ಷಣ ಈ ಮನೆಯಲ್ಲಿರುವುದಿಲ್ಲ. ನಾನು ಹೊರಟು ಹೋಗ್ತಾ ಇದ್ದೀನಿ. ನಿನಗೂ ಹಾಗೂ ನಿನ್ನ ಅರಗಿಣಿ ಪೂಜಾಗೂ ಒಂದು ದೊಡ್ಡ ನಮಸ್ಕಾರ.” ಎನ್ನುತ್ತಾ ಹನಿಗೂಡಿದ ಕಣ್ಣನ್ನು ಒರಸಿಕೊಳ್ಳುತ್ತಾ ಭಾರವಾದ ಹೆಜ್ಜೆಯೊಂದಿಗೆ ಹೊರಟಳು.

ಅಜಯ್‌ಗೆ, “ನನ್ನ ಪ್ರೀತಿ ಹಾಗೂ ಪ್ರಾಮಾಣಿಕತೆಯನ್ನು ಬೇರೆ ಮಾರ್ಗದಲ್ಲಿಯೇ ತೋರಿಸ್ತೀನಿ,” ಎಂದು ನಿಂತಲ್ಲೇ ಪ್ರತಿಜ್ಞೆ ಮಾಡಿದಳು.

ಮಾಧವಿಯ ಮಾತುಗಳು ಅಜಯ್‌ಗೆ ಕೇಳಿಸಿದರೂ ಕೇಳಿಸದವನಂತೆ ಕಲ್ಲಾಗಿ ನಿಂತಿದ್ದವನ ಮುಖದಲ್ಲಿ ತೃಪ್ತಿಯ ಮಂದಹಾಸ ಮಿನುಗುತ್ತಿತ್ತು.

ಕಾಲಚಕ್ರ ಉರುಳಿದಂತೆ ದಿನಗಳು, ವಾರಗಳಾಗಿ, ವಾರಗಳು ತಿಂಗಳುಗಳಾಗಿ ಬದಲಾಗುತ್ತಾ ಸಾಗಿತ್ತು. ಹಳೆ ನೆನಪು ಹೊಸ ಬದುಕಿನ ಹೊಯ್ದಾಟದಲ್ಲಿ ದಿನ ಕಳೆಯುತ್ತಿದ್ದಂತೆ ಅಜಯ್‌ ಮಾಧವಿ ವಿಚ್ಛೇದನ ನಡೆದುಹೋಯಿತು. ಅದಾಗಲೇ ಅಜಯ್‌ ತನ್ನೆಲ್ಲಾ ಆಸ್ತಿಯನ್ನು ಪೂಜಾಳ ಹೆಸರಿಗೆ ಬದಲಾಯಿಸಿದ್ದ. ಇನ್ನೇನು ಬದುಕು ಒಂದು ಹಂತದಲ್ಲಿ ಮಗ್ಗಲು ಬದಲಾಯಿಸಿತು ಎನ್ನುವ ನಿರಾಳತೆಯೊಂದಿಗೆ ಸಾಗಿದ್ದಾಗಲೇ ಮತ್ತೊಂದು ತಿರುವು.

ಅಜಯ್‌ನ ಆಫೀಸ್‌ ವಿಳಾಸಕ್ಕೆ ಒಂದು ದಪ್ಪನೆಯ ಕವರ್‌ ಬಂದಿತು. ಸ್ವಲ್ಪ ಕಳವಳ ಹಾಗೂ ಕುತೂಹಲದೊಂದಿಗೆ ಒಡೆದು ನೋಡಿದ. ಅದು ಮಾಧವಿ ಕಳುಹಿಸಿದ ಕವರಾಗಿತ್ತು. ಅದೇ ಸಮಯಕ್ಕೆ  ಟಿಫಿನ್‌ ಬಾಕ್ಸ್ ನೊಂದಿಗೆ ಅಲ್ಲಿಗೆ ಬಂದ ಪೂಜಾ, ಅಜಯ್‌ ಕೈಯಲ್ಲಿದ್ದ ಪತ್ರನ್ನು ನೋಡಿ, “ಅಜಯ್‌ ಯಾರಿಂದ ಪತ್ರ ಬಂದಿದೆ,” ಎಂದು ಕೇಳುತ್ತಿದ್ದರೂ ಏನನ್ನೂ ಹೇಳದೆ ಪತ್ರವನ್ನು ಮೌನವಾಗಿ ಓದಿ ಮುಗಿಸಿ ಅಪರಾಧಿ ಭಾವದಿಂದ ಪೂಜಾಳ ಮುಖ ನೋಡುತ್ತಾ, ತಲೆ ಮೇಲೆ ಕೈಹೊತ್ತು ಅಲ್ಲೇ ಕುಳಿತ.

ಪೂಜಾಗೆ ಏನೊಂದೂ ಅರ್ಥವಾಗದೆ, “ಏನಾಯ್ತು ಅಜಯ್‌, ಏನಿದೆ ಆ ಪತ್ರದಲ್ಲಿ ನನಗೆ ಕೊಡು….” ಎಂದು ಪತ್ರವನ್ನು ಅಜಯ್‌ ಕೈಯಿಂದ ಸರಕ್ಕನೆ ಕಸಿದುಕೊಂಡು ಓದತೋಡಗಿದಳು. ಮುದ್ದಾದ ಅಕ್ಷರಗಳಿಂದ ಬರೆದಿದ್ದ ಪತ್ರ ಮಾಧವಿಯದಾಗಿತ್ತು.

“ಪ್ರೀತಿಯ ಅಜಯ್‌ ಹಾಗೂ ಪೂಜಾ ದಂಪತಿಗಳಿಗೆ ಹಾರ್ದಿಕ ಶುಭಾಶಯಗಳು.

“ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಯುವ ಜೋಡಿಗೆ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿ ಈ ಪತ್ರದೊಂದಿಗೆ ಚಿಕ್ಕ ಕೊಡುಗೆಯನ್ನು ಕಳುಹಿಸಿದ್ದೇನೆ. ದಯವಿಟ್ಟು ಸ್ವೀಕರಿಸಿ. ನೀವು ನನಗೆ ಮಾಡಿರುವ ದ್ರೋಹ ಮರೆತು ಬಹಳ ದಿನಗಳಾಯಿತು. ನನಗೆ ನಿಮ್ಮ ಬಗ್ಗೆ ಯಾವುದೇ ದ್ವೇಷ, ಅಸಹನೆ, ಕೋಪವಿಲ್ಲ. ನನಗೆ ನಾನು ಪ್ರಶ್ನೆ ಮಾಡಿಕೊಂಡ ಮೇಲೆ ನನ್ನದೇ ತಪ್ಪು ಇರಬೇಕು ಅನ್ನಿಸಿತು. ಎಲ್ಲೋ ಒಂದು ಕಡೆ ಪ್ರೀತಿಯ ಕೊರತೆ ಆಗಿರಬೇಕು ಅಂತ ಭಾವಿಸಿದ್ದೇನೆ.

“ಈ ಬದುಕಿನಲ್ಲಿ ನಾನು ಕಲಿತಿರೋ ಒಂದೇ ಒಂದು ಪಾಠ ಎಂದರೆ ಸಹನೆ. ಅದು ದೇವರು ನನಗಾಗಿ ನೀಡಿದ ದೊಡ್ಡ ಗಿಫ್ಟ್. ದೇವರ ಆಣತಿಯಂತೆ ಒಂದು ವೇಳೆ ನನ್ನ ಬದುಕಿನಿಂದ ಯಾರಾದ್ರೂ ಆಚೆ ಹೋಗ್ತಾರೆ ಅಂದ್ರೆ ಅವರನ್ನು ತಡೀಬೇಡ. ಹೋಗುವಾಗ ಅವರಿಗೆ ಯಾವುದೇ ತರಹದ ನೋವು ನಿರಾಶ ಮಾಡಬೇಡ ಎಂಬುದಾಗಿ ನಂಬಿಕೊಂಡು ನಿರಾಳಾಗಿದ್ದೀನಿ. “ಅಂದಹಾಗೇ ನಾನೀಗ ಒಂಟಿಯಲ್ಲ. ನನ್ನ ಮನಸ್ಸಿಗೆ ಹಿಡಿಸಿದ ಪ್ರಾಮಾಣಿಕ ವ್ಯಕ್ತಿ ಜೊತೆ ಮದುವೆ ಆಗಿದ್ದೇನೆ. ಎಲ್ಲ ನನ್ನ ನಿರೀಕ್ಷೆಗಿಂತ ಉತ್ತಮವಾಗಿದೆ. ಹಾಯಾಗಿದ್ದೀನಿ. ಹಾಗೇ ಅಜಯ್‌ ನಿನಗೊಂದು ಸರ್ಪ್ರೈಸ್ ವಿಷಯ ಏನು ಅಂದ್ರೆ…. ನಾನೀಗ 3 ತಿಂಗಳ ಗರ್ಭಿಣಿ. ಲೈಫ್‌ ಈಗ ಸೋ ಸ್ವೀಟ್‌. ಹಾಂ….. ಅಂದಹಾಗೆ ನಿನಗೊಂದು ಗಿಫ್ಟ್ ಕಳುಹಿಸಿದ್ದೀನಿ ಅಂತ ಹೇಳಿದೆನಲ್ಲ ಅದು ನಾನು ನೀನು ಹಿಂದೊಮ್ಮೆ ಮಕ್ಕಳಾಗುವ ಬಗ್ಗೆ ಚೆಕ್‌ಅಪ್‌ ಮಾಡಿಸಿಕೊಂಡಿರುವ ರಿಪೋರ್ಟ್‌. ಓದಿ ನೋಡು…. ಎಲ್ಲಾ ನಿನಗೆ ಗೊತ್ತಾಗುತ್ತೆ.

“ಮದುವೆಯಾದ ಹೊಸತರಲ್ಲಿ ನಿನ್ನ ಪ್ರೀತಿಯ ಸೋಪಾನದಲ್ಲಿ ಮುಳುಗಿ ಅತ್ಯಂತ ಭಾವುಕಳಾಗಿದ್ದೆ. ನೀನೇ ನನ್ನ ಪ್ರಪಂಚ ಅಂದುಕೊಂಡಿದ್ದೆ. ಡಾಕ್ಟರ್‌ ಕೊಟ್ಟಿರೋ ರಿಪೋರ್ಟ್‌ನಲ್ಲಿ ನೀನು ತಂದೆಯಾಗುವ ಭಾಗ್ಯ ಕಳಕೊಂಡಿದ್ದೆ. ನಿನಗೆ ಮಕ್ಕಳಾಗಲ್ಲ ಅನ್ನುವ ಕಟು ಸತ್ಯದ ರಿಪೋರ್ಟ್‌ನ್ನು ನಾನು ಮುಚ್ಚಿಟ್ಟು, ನಿನ್ನ ಮರ್ಯಾದೆ, ಸ್ವಾಭಿಮಾನವನ್ನು ಕಾಪಾಡಿದೆ. ಎಲ್ಲ ಗೊತ್ತಿದ್ದೂ ನನಗೆ ಮಕ್ಕಳಾಗಲ್ಲ ಅನ್ನುವ ಸುಳ್ಳು ರಿಪೋರ್ಟ್‌ ಸೃಷ್ಟಿಸಿ ನಿನ್ನ ಮಾನ ಕಾಪಾಡಿದ್ದೆ.

“ನಿನ್ನನ್ನು ನಂಬಿಸುವುದಕ್ಕಾಗಿ ನಾನೇ ರಾಂಗ್‌ ರಿಪೋರ್ಟ್‌ ರೆಡಿ ಮಾಡಿಸಿ ನಿನಗೆ ತೋರಿಸಿದ್ದೆ. ಆ ರಿಪೋರ್ಟ್‌ನಲ್ಲಿ ದಾಖಲಿಸಿರೋ ಮಾಹಿತಿಗಳೆಲ್ಲಾ ಸತ್ಯವಾದುದಲ್ಲ. ಅಂದಹಾಗೇ ಈ ಪತ್ರದ ಜೊತೆಯಲ್ಲಿ ನಿನ್ನ ಅಸಲಿ ರಿಪೋರ್ಟ್‌ನ್ನು ಕಳುಹಿಸುತ್ತಿದ್ದೇನೆ. ಬಹುಶಃ ಅದು ನಿನಗೆ ಕೆಲಸಕ್ಕೆ ಬರಬಹುದು. ಆ ರಿಪೋರ್ಟ್‌ ಪ್ರಕಾರ, ನನಗೆ ಮಕ್ಕಳಾಗುವ ಎಲ್ಲಾ ಯೋಗ್ಯತೆ ಇದ್ದು, ನಾನು ಈಗಾಗಲೇ ಗರ್ಭಿಣಿಯಾಗಿರುವುದು ಪ್ರೂವ್ ‌ಆಗಿದೆ.

“ಆದರೆ ನಿನಗೆ ಭವಿಷ್ಯದಲ್ಲಿ ಎಂದೆಂದೂ ಮಕ್ಕಳಾಗುವುದಿಲ್ಲ ತಿಳ್ಕೋ…. ಜಗತ್ತಿಗೆ ದೇವರೊಬ್ಬನೇ. ಎಲ್ಲವನ್ನೂ ಅವನು ನೋಡ್ತಿರ್ತಾನೆ. ಹಾಂ…. ಇನ್ನೂ ಒಂದು ವಿಚಾರ ಪೂಜಾಳ ಪ್ರೀತಿಯಲ್ಲಿ ತೇಲಿಹೋಗಿರುವ ನಿನಗೆ ನಿನ್ನ ಕಳೆದುಹೋದ ಪೌರುಷದ ಮೇಲೆ ನಿನಗೆ ಅಷ್ಟು ನಂಬಿಕೆ ಇದ್ದರೆ, ಇನ್ನೊಮ್ಮೆ ಚೆಕ್‌ಅಪ್‌ ಮಾಡಿಸಿಕೊಂಡು ಬಾ. ಆಗ ನಿನಗೆ ಗೊತ್ತಾಗುತ್ತೆ…  ಗುಡ್‌ ಬೈ…..”

ಪತ್ರ ಓದಿ ಮುಗಿಸುತ್ತಿದ್ದಂತೆ ಪೂಜಾಳ ಕೈಯಲ್ಲಿದ್ದ ರಿಪೋರ್ಟ್‌ ಹಾಗೂ ಪತ್ರದ ಹಾಳೆಗಳು ತನಗರಿವಿಲ್ಲದಂತೆ ಸುತ್ತಲೂ ಹಾರಾಡತೊಡಗಿದವು. ಮಾಧವಿ ಕೊಟ್ಟ ಕೊಡುಗೆ ಎಷ್ಟು ಆಘಾತಕರವಾಗಿತ್ತು ಅಂದರೆ, ಪೂಜಾ ತನ್ನೆರಡು ಕೈಗಳಿಂದ ತನ್ನ ಹೊಟ್ಟೆಯನ್ನು ಗಟ್ಟಿಯಾಗಿ ಅದುಮಿಟ್ಟುಕೊಂಡು ಕತ್ತರಿಸಿದ ಮರ ಬೀಳುವ ಹಾಗೇ ಅಲ್ಲಿಯೇ ಧೊಪ್ಪೆಂದು ಉರುಳಿಬಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ