ಹೀರೋ ಆಗಬೇಕೆಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ? ನೋಡುವುದಕ್ಕೆ ಚಂದವಾಗಿದ್ದು, ನಾಲ್ಕು ಜನರೆದುರು ಮಿಂಚಿದರೆ ಸಾಕು ಏನೋ ನೀನು ಒಳ್ಳೆ ಹೀರೋ ತರಹ ಇದ್ದೀಯಾ ಅಂತ ಹೇಳಿಬಿಟ್ಟರೆ ಸಾಕು, ಅದೇ ಭ್ರಮೆಯಲ್ಲಿ ತೇಲಾಡಿ ಬಿಡುತ್ತಾರೆ.
ಆದರೆ ಇಂಥ ಹೊಗಳಿಕೆಗಳಿಗೆಲ್ಲ ಎಂದಿಗೂ ತಲೆ ಕೆಡಿಸಿಕೊಳ್ಳದೇ ಸಿನಿಮಾ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಆಕರ್ಷಕ ತರುಣ ಕಮರ್ ಖ್ಯಾತ ನಿರ್ಮಾಪಕ ಹಾಗೂ ಸಿನಿಮಾರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ನರ್ಗೀಸ್ ಬಾಬು ಅವರ ಪುತ್ರ.
ಸಿನಿಮಾ ಮೇಕಿಂಗ್ ಬಗ್ಗೆ ಅರೆದು ಕುಡಿದಿರುವ ಕಮರ್‌ಗೆ ಸಿನಿಮಾರಂಗ ಹೊಸದೇನಲ್ಲ. ಹೇಗೆ ಸಿನಿಮಾ ನಿರ್ಮಿಸಿದರೆ ಕ್ಲಿಕ್ ಆಗುತ್ತೆ? ಎಂಥ ಸಿನಿಮಾ ಮಾಡಿದರೆ ಓಡುತ್ತೆ? ಯಾರ ಮಾರ್ಕೆಟ್ ಹೇಗಿದೆ? ಎಂಬುದರ ಬಗ್ಗೆ ಚೆನ್ನಾಗಿ ಅರಿತಿದ್ದಾರೆ. ನಿರ್ದೇಶಕ ರವಿ, ರಾಜೇಂದ್ರಬಾಬು ಅವರ ಕಡೆಯ ಚಿತ್ರವಾದಂಥ `ಆರ್ಯನ್’ ಚಿತ್ರವನ್ನು ನಿಮಾರ್ಣ ಮಾಡಿದ್ದೇ ಇವರು. ಇನ್ನೇನು ಸಿನಿಮಾ ಪೂರ್ಣಗೊಳ್ಳಬೇಕೆನ್ನುವಾಗ ಬಾಬು ಅವರು ತೀರಿಕೊಂಡರು. ನಾಯಕಿ ರಮ್ಯಾ ಲೋಕಸಭಾ ಸದಸ್ಯೆಯಾಗಿದ್ದರಿಂದ ರಾಜಕೀಯದಲ್ಲಿ ಬಿಜಿಯಾದರು. ಆದರೂ ಸಹ ಇವರಿಗಾಗಿ ಡೇಟ್ಸ್ ಕೊಟ್ಟು ಚಿತ್ರೀಕರಣದಲ್ಲಿ ಭಾಗಹಿಸಿದ್ದರು. ಶಿವರಾಜ್ ಕುಮಾರ್ ರಮ್ಯಾ ಮೊದಲ ಬಾರಿಗೆ ತೆರೆ ಮೇಲೆ ಜೋಡಿಯಾಗಿ ನಟಿಸಿದ ಚಿತ್ರವಿದು.
ಕಮರ್‌ಗೆ ಮೊದಲಿನಿಂದಲೂ ಹೀರೊ ಲುಕ್ ಇತ್ತು. ಅವರ ಮನೆಯಲ್ಲೂ ಎಲ್ಲರೂ ಮಗ ಹೀರೋ ಆಗಲಿ ಎಂದು ಆಸೆಪಟ್ಟಿದ್ದು ಸತ್ಯ. ಹಾಗಂತ ಕಮರ್ ಒಂದೇ ದಿನದಲ್ಲಿ ದಿಢೀರ್ ನಿರ್ಧಾರ ತೆಗೆದುಕೊಳ್ಳದೇ ಅಭಿನಯದ ಪಾಠ ಕಲಿತರು. ನಾಯಕನಾಗಲು ಏನೇನು ಕಲಿಯಬೇಕೋ ಎಲ್ಲವನ್ನೂ ಕಲಿತರು. ಪೂರ್ಣ ವಿಶ್ವಾಸ ಬಂದಾಗ ನಾನೀಗ ನಟಿಸಬಲ್ಲೆ ಎಂದು ಅಪ್ಪನ ಮುಂದೆ ಹೇಳಿದರು.
ತೆಲುಗಿನ `ಇಷ್ಕ್’ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕೆಂದು ನಿರ್ಧರಿಸಿದಾಗ ಕನ್ನಡದಲ್ಲಿ ಅದು `ಕಿಕ್’ ಆಯಿತು. ಈ ಸಿನಿಮಾದ ಮೂಲಕ ಕಮರ್ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಫೋಟೋ ಶೂಟ್ ಮಾಡಿಸಿದರು. ಎಲ್ಲರನ್ನೂ ಆಕರ್ಷಿಸುವಂತಿತ್ತು. ಕಮರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡು ರಾಜ್ ಕಮಲ್ ಆದರು.
`ಕಿಕ್’ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು. ಸಮಾರಂಭಕ್ಕೆ ದರ್ಶನ್ ಅತಿಥಿಯಾಗಿ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. `ಕಿಕ್’ ಚಿತ್ರವನ್ನು ಕೊಟ್ರೇಶ್ ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಕೊಟ್ರೇಶ್ ಅವರಿಗೂ ಸಹ ಇದು ಮೊದಲ ಚಿತ್ರ.
ತೆಲುಗಿನ `ಇಷ್ಕ್’ ಸಿನಿಮಾದಲ್ಲಿ ವಿಭಿನ್ನ ಕಥೆ ಇದೆ. ಹೊಸ ನಾಯಕನನ್ನು ಲಾಂಚ್ ಮಾಡುವುದಕ್ಕೆ ಎಲ್ಲಾ ಅಂಶಗಳೂ ಈ ಸಿನಿಮಾದಲ್ಲಿದೆ. ಹೀಗಾಗಿ ಈ ಕಥೆಯನ್ನು ಆಯ್ಕೆ ಮಾಡಿಕೊಂಡೆ. ಕಥೆಗೆ ಬೇಕಾಗಿರುವ ಎಲ್ಲ ತರಬೇತಿಯನ್ನೂ ಪಡೆದು ಕ್ಯಾಮೆರಾ ಎದುರಿಸುತ್ತಿದ್ದೇನೆ. ನನ್ನಲ್ಲಿ ಆತ್ಮವಿಶ್ವಾಸವಿದೆ, ಎನ್ನುತ್ತಾರೆ ರಾಜ್ ಕಮಲ್.
ಈಗಾಗಲೇ ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದಲ್ಲಿ ಹಾಡುಗಳ ರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಆರ್. ಗಿರಿ ಛಾಯಾಗ್ರಹಣ `ಕಿಕ್’ ಚಿತ್ರಕ್ಕಿದೆ. ಸಿನಿಮಾಗಾಗಿ ನಾಯಕಿ ತಲಾಷೆ ನಡೆಸಿದ್ದು, ತೆಲುಗಿನಲ್ಲಿ ನಟಿಸಿದ್ದ ನಿತ್ಯಾಮೆನನ್ ಪಾತ್ರಕ್ಕೆ ಕನ್ನಡದಲ್ಲಿ ಅಷ್ಟೇ ಪ್ರತಿಭಾವಂತ ನಟಿಯ ಹುಡುಕಾಟದಲ್ಲಿದೆ ತಂಡ. ಈಗಾಗಲೇ ಆಡೀಶನಲ್ ಕೂಡಾ ನಡೆದಿದೆ. ಒಟ್ಟಿನಲ್ಲಿ `ಕಿಕ್’ ಎಲ್ಲ ರೀತಿಯಲ್ಲೂ ಏನಾದರೊಂದು ಹೊಸ ಕಿಕ್ ಕೊಡುವ ಪ್ರಯತ್ನದಲ್ಲಿದೆ ಎನ್ನುಬಹುದು. ರಾಜ್ ಕಮಲ್ ಸಿನಿಮಾ ಕುಟುಂಬದಿಂದ ಬಂದಿರೋದ್ರಿಂದ ಸಿನಿಮಾ ನಿರ್ಮಾಣದ ಬಗ್ಗೆ ಸಾಕಷ್ಟು ಆಸೆ ಇಟ್ಟುಕೊಂಡಿದ್ದಾರೆ. ಒಳ್ಳೆ ರಿಚ್ ಸಿನಿಮಾ ಮಾಡಬೇಕೆಂದುಕೊಂಡೇ ಎಲ್ಲ ತರಹದ ತಯಾರಿ ಮಾಡಿಕೊಂಡಿದ್ದಾರೆ. ಕಮಲ್ ಅವರ ತಂದೆ ನರ್ಗೀಸ್ ಬಾಬು ಇಪ್ಪತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದಾರೆ. `ಆರ್ಯನ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ `ನನ್ನ ಮಗನನ್ನು ನಾಯಕನನ್ನಾಗಿ ಪರಿಚಯಿಸುತ್ತೇನೆ,’ ಎಂದು ಮಾಧ್ಯಮಕ್ಕೆ ಹೇಳಿಕೊಂಡಿದ್ದರು. ಅವರ ಆಸೆಯಂತೆ, ಕಮಲ್ ಬಾಂಬೆ ಫಿಲಂ ಶಾಲೆಯಲ್ಲಿ ಅಭಿನಯ ಕಲಿತರು. ನಾಯಕಿ ಹೆಸರನ್ನು ಸೀಕ್ರೆಟ್ಟಾಗಿ ಇಟ್ಟಿರುವ ಕಮಲ್ `ಕಿಕ್’ ಚಿತ್ರದ ಚಿತ್ರೀಕರಣವನ್ನು ಈಗಾಗಲೇ ಶುರು ಮಾಡಿದ್ದಾರೆ. ಬೆಂಗಳೂರು, ಬಾಂಬೆ, ದೆಹಲಿ, ಹೈದರಾಬಾದ್, ಗೋವಾ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ. ಸ್ಯಾಂಡಲ್‌ವುಡ್‌ನಲ್ಲಿ ಉದಯಿಸಿರುವ ಈ ಹೊಸ ನಾಯಕನಿಗೆ ಆಲ್ ದಿ ಬೆಸ್ಟ್! ಪ್ರೇಕ್ಷಕರಿಗೆ `ಕಿಕ್’ ಕೊಡುವಂಥ ಸಿನಿಮಾ ಮಾಡಲಿ ಎಂದು ಹಾರೈಸೋಣ.
– ಜಾಗೀರ್ದಾರ್.