ಮೋಹಿತಾ ಇಂದ್ರಾಯಣ್‌ ಬಾಲ್ಯದಲ್ಲಿ ಗೊಂಬೆಗಳೊಂದಿಗೆ ಆಟ ಆಡುತ್ತಿದ್ದರು, ಅವುಗಳಿಗೆ ಪುಟ್ಟ ಪುಟ್ಟ ಫ್ರಾಕ್‌ಗಳನ್ನು ತಯಾರಿಸಿ ಖುಷಿಪಡುತ್ತಿದ್ದರು. ಆ ಫ್ರಾಕ್‌ಗಳನ್ನು ಒಮ್ಮೆ ಬಟ್ಟೆಯಿಂದ ತಯಾರಿಸುತ್ತಿದ್ದರೆ, ಮತ್ತೊಮ್ಮೆ ಕಾಗದದಿಂದ ರೂಪಿಸಿ ಟೇಪ್‌ನಿಂದ ಅಂಟಿಸುತ್ತಿದ್ದರು. ಗೊಂಬೆಯ ಅಂದಚೆಂದ ನೋಡಿ ಗೆಳತಿಯರು ಕೂಡ ಆಕೆಯಿಂದಲೇ ತಮ್ಮ ಗೊಂಬೆಗಳಿಗೂ ಡ್ರೆಸ್ ಸಿದ್ಧಪಡಿಸುತ್ತಿದ್ದರು.

ಅಂದಹಾಗೆ ಮೋಹಿತಾ ಬಾಲ್ಯದಿಂದಲೇ ತಾಯಿಯ ಹಾಗೆ ಬಹಳ ಕ್ರಿಯೇಟಿವ್‌ಆಗಿದ್ದರು. ಇದೇ ಕಾರಣದಿಂದ ದೊಡ್ಡವರಾದ ಬಳಿಕ ಅದೇ ಅವರ ವೃತ್ತಿಯಾಯಿತು. ಈಗ ಅವರು `6-12 ಲೀಗ್’ ಕ್ಲೋಥಿಂಗ್‌ಬ್ರ್ಯಾಂಡ್‌ನ ಸಂಸ್ಥಾಪಕಿ ಹಾಗೂ ಸಿಇಒ ಆಗಿದ್ದಾರೆ.

`6-12 ಲೀಗ್’ ಭಾರತದ ಮೊದಲ ಬ್ರ್ಯಾಂಡ್‌ಆಗಿದ್ದು, ಅದು 6 ರಿಂದ 12 ವಯಸ್ಸಿನ ಮಕ್ಕಳನ್ನೇ ಕೇಂದ್ರೀಕರಿಸಲ್ಪಟ್ಟಿದೆ. ಇವರ ಉತ್ಪನ್ನಗಳು ಭಾರತದ 130 ನಗರಗಳ 365ಕ್ಕೂ ಹೆಚ್ಚು ಪಿಒಎಸ್‌ನಲ್ಲಿ ಲಭ್ಯವಿವೆ. ಅವರೊಂದಿಗೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.

ನಿಮ್ಮ ಬಾಲ್ಯದ `ಡ್ರೀಮ್ ಜಾಬ್‌’ ಯಾವುದಾಗಿತ್ತು?

ನನಗೆ ಯಾವುದೇ ಡ್ರೀಮ್ ಜಾಬ್‌ ಇರಲಿಲ್ಲ. ಆರಂಭದಿಂದಲೇ ನನಗೆ ಕ್ರಿಯೇಟಿವಿಟಿಯ ಬಗ್ಗೆ ಒಲವು ಇತ್ತು. ಯಾವುದೇ ಕ್ರಿಟಿಕಲ್ ಜಾಬ್‌ ಮಾಡಲು ನನಗೆ ಆಸಕ್ತಿ ಇರಲಿಲ್ಲ. ನನ್ನ ಸೃಜನಶೀಲತೆ ಎದ್ದು ಕಾಣುವಂತಹ ಕೆಲಸ ಮಾಡುವುದು ನನಗೆ ಇಷ್ಟವಿತ್ತು.

ನನ್ನ ತಂದೆ ಇಂಡಿಯನ್‌ಟೆಲಿಕಾಮ್ ಸರ್ವೀಸ್‌ನಲ್ಲಿ ಇದ್ದಾರೆ. ತಾಯಿ ಗೃಹಿಣಿ. ನಾನು ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವಿ ಮತ್ತು ನಿಫ್ಟ್ ನಿಂದ ಅಪೆರ್‌ ಮಾರ್ಕೆಟಿಂಗ್‌ ಹಾಗೂ ಮರ್ಚೆಂಟೈಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇದೇ ಕ್ಷೇತ್ರದಲ್ಲಿ ಉದ್ಯಮ ಸ್ಥಾಪನೆ ಮಾಡಿದೆ.

ಉದ್ಯಮಿಯಾಗುವ ಪ್ರೇರಣೆ ನಿಮಗೆ ಯಾರಿಂದ ದೊರಕಿತು?

ಪತಿ ಮನು ಇಂದ್ರಾಯಣ್‌ ಅವರೇ ನನಗೆ ಪ್ರೇರಣೆ. ಮದುವೆಯ ಬಳಿಕವೇ ನಾನು ಈ ಬಗ್ಗೆ ಗಂಭೀರವಾಗಿ ಯೋಚಿಸಿದೆ. ಏಕೆಂದರೆ ಬಿಸ್‌ನೆಸ್‌ ಮಾಡುವ ಬರ್ನಿಂಗ್‌ ಡಿಸೈರ್‌ ನನ್ನ ಪತಿಯಲ್ಲಿತ್ತು. ಮದುವೆಗೂ ಮುಂಚಿನಿಂದಲೂ ಅವರು ಉದ್ಯಮದಲ್ಲಿ ಮಗ್ನರಾಗಿದ್ದರು. ಅವರ ಪ್ರೇರಣೆಯಿಂದಲೇ ನಾವಿಬ್ಬರೂ ಸೇರಿ 2009ರಲ್ಲಿ ಪಾಲುದಾರಿಕೆಯಲ್ಲಿ `6-12 ಲೀಗ್‌’ ಶುರು ಮಾಡಿದೆ.

ನೀವು 6 ರಿಂದ 12 ವಯಸ್ಸಿನ ಮಕ್ಕಳ ಬ್ರ್ಯಾಂಡ್ನ್ನೇ ಶುರು ಮಾಡಲು ಏಕೆ ನಿರ್ಧರಿಸಿದಿರಿ?

ನನ್ನ ಮಕ್ಕಳು 3 ಹಾಗೂ 7 ವರ್ಷದವರಿದ್ದಾಗಿನ ಮಾತಿದು. ಆ ಸಂದರ್ಭದಲ್ಲಿ ನಾವೆಲ್ಲ ಅಮೆರಿಕಾಕ್ಕೆ ಹೋಗಿದ್ದೆ. ಅಲ್ಲಿ ಮಕ್ಕಳಿಗೆ ಬೇಕಾಗುವ ಬೇಸಿಕ್‌ ಡ್ರೆಸೆಸ್‌ ಹೆಚ್ಚಿನ ಪ್ರಮಾಣದಲ್ಲಿ ಲಭ್ಯ. ಆದರೆ ಭಾರತದಲ್ಲಿ ಹಾಗಲ್ಲ. ಫ್ಯಾಷನೆಬಲ್ ಬಟ್ಟೆಗಳೇ ಹೆಚ್ಚು ಮಾರಾಟವಾಗುತ್ತವೆ. ಬೇಸಿಕ್‌ ಡ್ರೆಸೆಸ್‌ ಒಳ್ಳೆಯ ಗುಣಮಟ್ಟದ ಜೊತೆಗೆ ಕ್ಲೀನ್‌ ಲುಕ್‌ ನೀಡುತ್ತವೆ.

ಅಷ್ಟೇ ಅಲ್ಲ, ಅಮೆರಿಕಾದಲ್ಲಿ ಮಕ್ಕಳ ಬಟ್ಟೆಗಳಲ್ಲಿ ಬೇರೆ ಬೇರೆ ಕ್ಲಿಯರ್‌ ಸೆಗ್‌ಮೆಂಟ್ಸ್ ಇರುತ್ತವೆ. 2 ವರ್ಷದೊಳಗಿನ ಮಕ್ಕಳದ್ದು ಬೇರೆ, 2 ರಿಂದ 6 ವರ್ಷದ ತನಕ ಹಾಗೂ 6 ರಿಂದ 12 ವರ್ಷದ ತನಕ ಬೇರೆ ಬೇರೆ ಇರುತ್ತವೆ. ನಾನು ಭಾರತಕ್ಕೆ ವಾಪಸ್‌ಆಗಿ ಪ್ರೀ ಟೀನ್ಸ್ (6 ರಿಂದ 12) ರೇಂಜ್‌ಆರಂಭಿಸಬೇಕೆಂದು ಯೋಚಿಸಿದೆ. ಇಂತಹ ಬಟ್ಟೆಗಳು ಹೆಚ್ಚು ಪ್ರಖರವಾಗಿರುವುದಿಲ್ಲ, ಆದರೆ ಫ್ಯಾಷನ್‌ಗೆ ತಕ್ಕಂತೆಯೇ ಇರುತ್ತವೆ.

ನೀವು ಮಹಿಳೆಯಾಗಿ ಜೀವನದಲ್ಲಿ ಮುಂದೆ ಸಾಗಲು ಏನಾದರೂ ಅಡ್ಡಿ ಆತಂಕಗಳು ಉಂಟಾದವು?

ಮಹಿಳೆಯಾಗಿರುವ ಕಾರಣದಿಂದ ನನಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಮಕ್ಕಳು ಮತ್ತು ಆಫೀಸಿನ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸಬೇಕಾಗುತ್ತದೆ. ಮೀಟಿಂಗ್‌ ಪ್ರಯತ್ನ ಬೇಗ ಆಫೀಸ್‌ಗೆ ಹೋಗಬೇಕಿರುತ್ತದೆ. ಅಂತಹದರಲ್ಲಿ ಮಗಳ ಬೇಡಿಕೆ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಆ ಸಂದರ್ಭದಲ್ಲಿ ಸ್ವಲ್ಪ ಕಷ್ಟ ಅನಿಸುತ್ತದೆ. ಎಂತಹ ಸಂದರ್ಭದಲ್ಲೂ ಮಕ್ಕಳ ಮುಖದಲ್ಲಿ ಬೇಸರ ಕಾಣಿಸಿಕೊಳ್ಳಬಾರದು ಎನ್ನುವುದು ನನ್ನ ಇಚ್ಛೆಯಾಗಿರುತ್ತದೆ. ಆಫೀಸಿನ ಟೆನ್ಶನ್‌ಗಳು ಇದ್ದದ್ದೇ, ಅವನ್ನು ಎದುರಿಸಲೇಬೇಕು.

ಯಶಸ್ವಿ ಬಿಸ್ನೆಸ್ವುಮನ್ಆಗಲು ಏನೇನು ಅತ್ಯಶ್ಯಕ?

ಉದ್ಯಮಿಯಾಗಲು ಮಹಿಳೊಬ್ಬಳಲ್ಲಿ ಮಲ್ಟಿ ಟಾಸ್ಕಿಂಗ್‌ ಎಬಿಲಿಟಿ ಹಾಗೂ ತನ್ನ ಮೇಲೆ ತನಗೆ ಸಂಪೂರ್ಣ ಆತ್ಮವಿಶ್ವಾಸ ಇರುವುದು ಅತ್ಯವಶ್ಯಕ. ಯಾವುದೇ ಉದ್ಯಮ ಅಥವಾ ಕೆಲಸ ಆರಂಭಿಸಲು ಸರಿಯಾದ ಸಮಯಕ್ಕೆ ನಿರೀಕ್ಷೆ ಮಾಡುವುದಕ್ಕಿಂತ, ಅದೇ ಸಮಯದಲ್ಲಿ ಮುಂದೆ ಸಾಗಲು ದಾರಿ ಆಯ್ದುಕೊಳ್ಳುವ ಅವಶ್ಯಕತೆ ಇರುತ್ತದೆ. ಏಕೆಂದರೆ `ಪರ್ಫೆಕ್ಟ್ ಟೈಮ್’ ಎನ್ನುವುದು ಯಾವಾಗಲೂ ಬರುವುದಿಲ್ಲ. ಸಮಸ್ಯೆಗಳು ಯಾವಾಗಲೂ ಬಂದೇ ಬರುತ್ತವೆ.

ನಿಮ್ಮ ಪ್ರಕಾರ ಮಹಿಳೆಯರನ್ನು ನೋಡುವ ದೃಷ್ಟಿಯಲ್ಲಿ ಏನೇನು ಬದಲಾವಣೆಗಳು ಆಗಿವೆ?

ಮಹಿಳೆಯರನ್ನು ನೋಡುವ ದೃಷ್ಟಿಕೋನ ಈಗ ಸಾಕಷ್ಟು ಬದಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಾಕಷ್ಟು ಬದಲಾವಣೆ ಆಗಬೇಕಿದೆ. ಒಂದು ನಿರಾಶೆಯ ಸಂಗತಿಯೆಂದರೆ ಮಹಿಳೆಗೆ ಮಹಿಳೆಯೇ ಬೆಂಬಲ ಕೊಡುತ್ತಿಲ್ಲ. ಒಬ್ಬ ಹುಡುಗಿಗೆ ಆರಂಭದಿಂದಲೇ ಸಕಾರಾತ್ಮಕ ವಾತಾವರಣ ದೊರೆತರೆ ಆಕೆಯ ವ್ಯಕ್ತಿತ್ವದಲ್ಲಿ ಸಾಕಷ್ಟು ಒಳ್ಳೆಯ ಪರಿಣಾಮ ಗೋಚರಿಸುತ್ತದೆ.

ನಿಮ್ಮ ಜೀವನ ಸಂಗಾತಿ ನಿಮ್ಮ ಬಿಸ್ನೆಸ್ಪಾರ್ಟ್ನರ್ಕೂಡ ಆಗಿದ್ದಾರೆ. ನಿಮ್ಮಿಬ್ಬರ ನಡುವೆ ಯಾವುದೇ ಅಹಂನ ಪ್ರಶ್ನೆ ಬರಲಿಲ್ಲವೇ?

ಒಬ್ಬ ಸಾಮಾನ್ಯ ಮಹಿಳೆಯಾಗಿ ನಾನು ಹೇಳುವುದೇನಂದರೆ, ಆಫೀಸಿನಲ್ಲಿ ಬಾಸ್‌ ಅಥವಾ ಸಹೋದ್ಯೋಗಿ ನಿಮ್ಮ ಪತಿಯಾಗಿದ್ದರೆ ಅವರು ನಿಮ್ಮ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹೊಣೆಗಾರಿಕೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತಾರೆ. ಇಂತಹ ಸ್ಥಿತಿಯಲ್ಲಿ ಅಹಂ ಪ್ರವೇಶಿಸಬಾರದು, ಹಸ್ತಕ್ಷೇಪ ಉಂಟಾಗಬಾರದು. ನಿಮ್ಮಿಬ್ಬರ ನಡುವೆ ಆರೋಗ್ಯಕರ ಸಂಬಂಧ ಇದ್ದರೆ ಅದಕ್ಕಿಂತ ಉತ್ತಮವಾದುದು ಬೇರೊಂದಿಲ್ಲ.

ನೀವು ಮನೆ ಹಾಗೂ ಆಫೀಸನ್ನು ಏಕಕಾಲಕ್ಕೆ ಹೇಗೆ ನಿರ್ವಹಿಸುತ್ತೀರಾ?

ನಾನು ಸ್ವಯಂ ಉದ್ಯೋಗಿ ಎನ್ನುವುದು ನನ್ನ ಸಕಾರಾತ್ಮಕ ಅಂಶ. ಹೀಗಾಗಿ ಸಮಯ ಹೊಂದಾಣಿಕೆಯಲ್ಲಿ ಅಷ್ಟಿಷ್ಟು ಫ್ಲೆಕ್ಸಿಬಿಲಿಟಿ ನಡೆಯುತ್ತದೆ. ಮುಂಜಾನೆಯ ಸಮಯವನ್ನು ನಾನು ಮಕ್ಕಳಿಗಾಗಿ ಮೀಸಲಿಡುತ್ತೇನೆ. ಊಟ ತಿಂಡಿ ತಯಾರಿಸುವಾಗ ನನ್ನ ಜೊತೆ ಮಗಳು ಇರುತ್ತಾಳೆ. ಇಬ್ಬರು ಹೆಣ್ಣುಮಕ್ಕಳನ್ನೂ ಶಾಲೆಗೆ ಕಳುಹಿಸಲು ನಾನೇ ಸ್ವತಃ ಹೋಗುತ್ತೇನೆ. ಏಕೆಂದರೆ ಅವರ ಜೊತೆ ಮಾತನಾಡಲು ಸಾಧ್ಯವಾಗುತ್ತದೆ. ಸಂಪರ್ಕ ಸಾಧನಗಳಿಂದಾಗಿ ನನಗೆ ಮಕ್ಕಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ.

ಗೃಹಶೋಭಾದ ಮುಖಾಂತರ ನೀವು ಮಹಿಳೆಯರಿಗೆ ಯಾವ ಸಂದೇಶ ನೀಡಲು ಇಚ್ಛಿಸುವಿರಿ?

ನಿಮ್ಮ ಯೋಚನೆಯನ್ನು ಸ್ಪಷ್ಟವಾಗಿಟ್ಟುಕೊಳ್ಳಿ, ಸ್ವಾವಲಂಬಿಗಳಾಗಿ. ನೀವು ಹೆಚ್ಚು ಕೆಲಸ ಮಾಡುತ್ತಿದ್ದೀರಿ ಎನ್ನುವುದಕ್ಕಿಂತ ನೀವು ಬೇರೆಯವರನ್ನು ಹೆಚ್ಚು ಅವಲಂಬಿಸಿಲ್ಲ ಎನ್ನುವುದು ಮುಖ್ಯ. ಸ್ವಾವಲಂಬನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮೊಳಗೆ ಕೌಶಲವನ್ನು ಹೆಚ್ಚಿಸಿಕೊಳ್ಳಿ. ಏಕೆಂದರೆ ಅವಕಾಶ ಸಿಕ್ಕಾಗ ಅವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲ ಆಗುತ್ತದೆ.

ಪಂಕಜಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ