ಗೃಹಿಣಿಯರಿಗೆ ಪ್ರತಿ ದಿನ ದೇವರ ಮುಂದೆ ಹೊರಗಿನ ಅಂಗಳದಲ್ಲಿ ರಂಗೋಲಿ ಪುಡಿಯಿಂದ ರಂಗೋಲಿ ಹಾಕಿಯೇ ಮುಂದಿನ ಕೆಲಸದ ಆರಂಭ.
ಇನ್ನು ಹಬ್ಬ ಹರಿದಿನಗಳಲ್ಲಿ ರಂಗೋಲಿಗೆ ಪ್ರಾಮುಖ್ಯತೆ ಹೆಚ್ಚು. ಆ ದಿನ ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚು. ಹಬ್ಬ ಹರಿದಿನಗಳು ಬಂತೆಂದರೆ ಅಲಂಕಾರಕ್ಕೆ ಪ್ರಾಮುಖ್ಯತೆ ಕೊಡಬೇಕು. ದೇವರ ಮನೆ ಅಲಂಕಾರ, ಬಾಗಿಲಿಗೆ ತೋರಣಗಳ ಅಲಂಕಾರ. ನೆಲದ ಮೇಲೆ ರಂಗೋಲಿಯ ಅಲಂಕಾರ…. ಹೀಗೆ ಬಿಡುವಿಲ್ಲದ ಕೆಲಸ.
ಇಂದಿನ ಕಂಪ್ಯೂಟರ್ ಯುಗದಲ್ಲಿ ಸಮಯದ ಅಭಾವ ಇರುವುದರಿಂದ ಹಬ್ಬದ ದಿನ ಕೂಡ ರಂಗೋಲಿ ಬಿಡುವುದಕ್ಕೆ ಸಮಯವೇ ಇರುವುದಿಲ್ಲ.
ಈಗಿನ ಕಾಲದಲ್ಲಿ ಹೊಸತನ ಬಯಸುವಂತಹ ಸರಳ ಸುಂದರ ಹಾಗೂ ಕೆಲವೇ ನಿಮಿಷದ ಸಮಯದಲ್ಲಿ ಹಾಕುವಂತಹ ವಿಧವಿಧವಾದ ರಂಗೋಲಿಗಳು ಬಂದಿವೆ. ಅವುಗಳನ್ನು ಸುಲಭವಾಗಿ ರಚಿಸಲು ಸಾಧ್ಯವಾಗುವಂಥ ರಂಗೋಲಿ ಎಂದರೆ ಕುಂದನ್ ರಂಗೋಲಿ. ಇದು ಪ್ಲಾಸ್ಟಿಕ್ ಹಾಳೆಯ ಮೇಲೆ ರಚಿಸುವ ಫ್ಯಾನ್ಸಿ ರಂಗೋಲಿ. ಈ ಕುಂದನ್ನಲ್ಲಿ ರಂಗೋಲಿಗಳು, ಬಾರ್ಡರ್ಗಳು ಮತ್ತು ತೋರಣಗಳನ್ನು ಸಿದ್ಧಪಡಿಸಬಹುದು. ವಿಧವಿಧವಾದ ಹೂ, ತಾವರೆ, ನವಿಲು, ಚಿಟ್ಟೆ, ಎಲೆ, ಆನೆ ಹೀಗೆ ಎಲ್ಲಾ ತರಹದ ರಂಗೋಲಿ ಹಾಕಿ ಇದರಲ್ಲಿ ಹೊಸ ಹೊಸ ವಿನ್ಯಾಸ ತುಂಬಬಹುದು.
ಇದನ್ನು ಮೊದಲೇ ಬಿಡುವಿನ ವೇಳೆಯಲ್ಲಿ ತಯಾರಿ ಮಾಡಿಕೊಂಡು ಹಬ್ಬ ಹರಿದಿನಗಳಲ್ಲಿ ಅಲಂಕಾರಕ್ಕೆ ದೇವರಮನೆ, ಗೋಡೆ ಟೈಲ್ಸ್ ಗೆ ಅಂಟಿಸಬಹುದು. ನೆಲದ ಮೇಲೆ ಅಂಲಕಾರವಾಗಿ ಬಾರ್ಡರ್ ಮತ್ತು ರಂಗೋಲಿಗಳನ್ನು ಜೋಡಿಸಬಹುದು. ಹಾಗೇ ತೋರಣಗಳನ್ನು ಬಾಗಿಲಿಗೆ ಹಾಕಿದರೆ ಅದರ ಅಂದ ಹೆಚ್ಚುತ್ತದೆ.
ಪ್ಲೋಟಿಂಗ್ (ಮನೆಯಲ್ಲಿ ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಟ್ಟು ಅದಕ್ಕೆ ಗುಲಾಬಿ ದಳ ಹಾಕಿಡುವ ವಿಧಾನ)ನಲ್ಲಿ ಇಂತಹ ಪ್ಲಾಸ್ಟಿಕ್ ಹಾಳೆಯ ರಂಗೋಲಿ ಮತ್ತು ದೀಪಗಳನ್ನು ಇಟ್ಟು ಮನೆಯ ಸೌಂದರ್ಯ ಹೆಚ್ಚಿಸಬಹುದು. ಹಬ್ಬಗಳು ಮುಗಿದ ಮೇಲೆ ಇವುಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಎತ್ತಿಟ್ಟು ಮುಂದಿನ ಶುಭ ಸಮಾರಂಭಗಳಲ್ಲಿ ಬಳಸಬಹುದು.
ಹೀಗೆ ಹಬ್ಬ ಹರಿದಿನಗಳಲ್ಲಿ ಅಲಂಕಾರ ಮಾಡಿದಾಗ ನೋಡುಗರ ಕಣ್ಮನ ಸೆಳೆಯುವುದಲ್ಲದೆ, ಮನಸ್ಸಿನಲ್ಲಿ ಭಕ್ತಿಭಾವ ಇಷ್ಟು ಹೆಚ್ಚುತ್ತದೆ. ಅಲ್ಲದೆ, ನಮ್ಮಲ್ಲಿ ಹುದುಗಿರುವ ಕಲೆ ಜಾಗೃತವಾಗುವುದಲ್ಲದೆ, ಸಾತ್ವಿಕ ಭಾವನೆ ಹೊರಹೊಮ್ಮುತ್ತದೆ.
ಕುಂದನ್ ರಂಗೋಲಿ
ಬೇಕಾಗುವ ಸಾಮಗ್ರಿಗಳು : ಓಎಚ್ಪಿ (ಓವರ್ ಹೆಡ್ ಪ್ರೊಜೆಕ್ಟರ್) ಹಾಳೆ, ಬಣ್ಣ ಬಣ್ಣದ ಕುಂದನ್ (ಹರಳುಗಳು), ನೆಕ್ಕಿ, ಚಮಕಿ, ಮುತ್ತು, ಮಣಿ, ಚಿನ್ನದ ದಾರ, ಸರ, ಕನ್ನಡಿ ಹಾಗೂ ಫ್ಯಾಭ್ರಿಕ್ ಗ್ಲೋ ಮತ್ತು ಚಿತ್ರದ ಡಿಸೈನ್.
ವಿಧಾನ : ಓಎಚ್ಪಿ ಹಾಳೆಯ ಜೊತೆಗಿರುವ ಬಿಳಿಯ ತೆಳು ಪೇಪರ್ ಮೇಲೆ ಸುಂದರವಾದ ಚಿತ್ರ ಬಿಡಿಸಿ. ಅದರ ಮೇಲೆ ಓಎಚ್ಪಿ ಹಾಳೆ ಇಡಿ. ಈಗ ಸುಂದರವಾದ ಚಿತ್ರ ಕಾಣುತ್ತದೆ. ಗೆರೆಗಳಿಗೆ ಫ್ಯಾಬ್ರಿಕ್ ಗ್ಲೋ ಹಾಕಿ ಬಣ್ಣದ ಸರಗಳನ್ನು ಒಂದು ಅಥವಾ ಎರಡು ಎಳೆ ಅಂಟಿಸಿ. ಅದು ಒಣಗಿದ ನಂತರ ನಿಮ್ಮ ಕಲಾತ್ಮಕತೆಗೆ ತಕ್ಕಂತೆ ಕುಂದನ್, ಕನ್ನಡಿ ಮತ್ತು ದಾರ ಅಂಟಿಸಿ. ಚೆನ್ನಾಗಿ ಒಣಗಿದ ನಂತರ, ಚಿತ್ರದ ಸುತ್ತ ಅರ್ಧ ಇಂಚು ಓಎಚ್ಪಿ ಹಾಳೆಯನ್ನು ಬಿಟ್ಟು ಕತ್ತರಿಸಿಕೊಳ್ಳಿ. ಹಿಂದುಗಡೆ ಡಬಲ್ ಗಮ್ ಟೇಪ್ ಅಂಟಿಸಿ. ಇದರಲ್ಲಿ ಚಿಕ್ಕ ಚಿಕ್ಕ ಚಿತ್ರಗಳನ್ನು ಮಾಡಿದರೆ ಅಂಚುಗಳಿಗೆ ಜೋಡಿಸಬಹುದು.
ಕುಂದನ್ ತೋರಗಣಗಳು
ಸಾಮಗ್ರಿ : ಮೇಲಿನ ಸಾಮಾನಿನ ಜೊತೆ ಗೋಲ್ಡನ್ ಪಟ್ಟಿ ಲೇಸ್ (ಬಾಗಿಲಿನ ಅಳತೆಯಷ್ಟು), ಚಿಕ್ಕ ರಿಂಗ್ ತೆಗೆದುಕೊಳ್ಳಿ.
ವಿಧಾನ : ಓಎಚ್ಪಿಯನ್ನು ಮಾವಿನ ಎಲೆಯ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಗಮ್ ಹಾಕಿ ಚಿನ್ನದ ದಾರಗಳಿಂದ ಸುತ್ತಲೂ ಅಂಟಿಸಿ. ಮಧ್ಯೆ ನಿಮ್ಮ ಕುಶಲತೆಗೆ ತಕ್ಕಂತೆ ಕುಂದನ್ಗಳನ್ನು ಅಂಟಿಸಿ. ಇದೇ ರೀತಿ 10-15 ಎಲೆಗಳನ್ನು ಮಾಡಿಕೊಳ್ಳಿ. ಗೋಲ್ಡನ್ ಪಟ್ಟಿಗೆ ಫ್ಯಾಬ್ರಿಕ್ ಗ್ಲೋ ಹಾಕಿ ರೆಡಿ ಮಾಡಿಕೊಂಡು ಎಲೆಗಳನ್ನು ಅಂಟಿಸಿ. ಲೇಸ್ನ ಎರಡೂ ತುದಿಗಳಲ್ಲಿ ಮತ್ತು ಮಧ್ಯದಲ್ಲಿ ರಿಂಗ್ಗಳನ್ನು ಹೊಲಿಯಿರಿ. ಬಾಗಿಲಿಗೆ ಇದನ್ನು ಹಾಕಿದರೆ ಸುಂದರವಾಗಿ ಕಾಣುತ್ತದೆ.
ಫ್ಲೋಟಿಂಗ್ ಚಿಕ್ಕ ಚಿಕ್ಕದಾದ ಕುಂದನ್ ಡಿಸೈನ್ ರಂಗೋಲಿಗಳನ್ನು ಮಾಡಿಕೊಂಡು ಪ್ಲೋಟಿಂಗ್ಗೆ ನೀರು ಹಾಕಿ ಅದಕ್ಕೆ ಗುಲಾಬಿ ದಳ, ರಂಗೋಲಿ ಮಧ್ಯೆ ದೀಪ ಇಟ್ಟು ಹಚ್ಚಿ. ಬಲು ಸುಂದರವಾಗಿ ಕಾಣುತ್ತದೆ.
– ರಾಜೇಶ್ವರಿ ವಿಶ್ವನಾಥ್