ಇತ್ತೀಚಿನ ಮೆಟ್ರೋ ಸಂಸ್ಕೃತಿಯಿಂದಾಗಿ ಬಹಳ ಇಕ್ಕಟ್ಟಾದ ಅತೀ ಕಡಿಮೆ ಜಾಗದಲ್ಲಿ ವಾಸಿಸುವ ಅನಿವಾರ್ಯತೆ ಹಲವಾರು ಜನರಿಗಿದೆ. ಆದರೆ ಅಷ್ಟೇ ಚಿಕ್ಕದಾದ ಜಾಗದಲ್ಲಿ ತಮ್ಮದೇ ಒಂದು ಸುಂದರವಾದ ಕೈ ತೋಟ ಮಾಡುವ ಕನಸು ಕಾಣುತ್ತಾರೆ. ಹಿಂದೆ ಕೈತೋಟವೆಂದರೆ ಸಾಕಷ್ಟು ವಿಶಾಲವಾದ ಜಾಗದಲ್ಲಿ, ನಿರ್ದಿಷ್ಟ ಅಂತರದಲ್ಲಿ ಬಗೆಬಗೆಯ ಹೂ ಗಿಡಗಳನ್ನು ನೆಡುವುದು ಸಾಮಾನ್ಯವಾಗಿತ್ತು. ಆದರೆ ಕಾಲಕ್ರಮೇಣ ಮಿತಿಮೀರಿದ ಜನಸಂಖ್ಯಾ ಹೆಚ್ಚಳದಿಂದಾಗಿ ಭೂಮಿಯ ಅಭಾವ ಆರಂಭವಾಯಿತು. ದೊರಕಿರುವ ಅಷ್ಟೋ ಇಷ್ಟೋ ಜಾಗದಲ್ಲಿ ಕೈತೋಟವಾಗಿಸುವುದು ಕಷ್ಟ ಎನ್ನುವವರಿಗೆ ಈ ಹ್ಯಾಂಗಿಂಗ್ ಗಾರ್ಡ್‌ನ್ ವರದಾನವಾಗಿದೆ.
ಈ ಪರಿಕಲ್ಪನೆಯಲ್ಲಿ ಸಿಮೆಂಟು ಅಥವಾ ಗಾಜಿನಿಂದ ತಯಾರಿಸಲ್ಪಟ್ಟ ಕುಂಡಗಳನ್ನು ಖರೀದಿಸಿ ತಂದು ಅದರಲ್ಲಿ ವಿವಿಧ ಬಗೆಯ ಗಿಡ ನೆಡುವುದು ಈ ರೀತಿ ಕುಂಡದಲ್ಲಿ ನೇತು ಹಾಕಿ ಬೆಳೆಸುವ ಪ್ರಕ್ರಿಯೆಯನ್ನು `ಹ್ಯಾಂಗಿಂಗ್ ಗಾರ್ಡನ್' ಎಂದು ಕರೆಯುತ್ತಾರೆ.
ಹ್ಯಾಂಗಿಂಗ್ ಗಾರ್ಡನ್‌ಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಯನ್ನು `ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸ್'ನಲ್ಲಿ ಸೀನಿಯರ್ ಸೈಂಟಿಸ್ಟ್ ಆಗಿರುವ ಡಾ. ಪ್ರಜ್ವಲ್ ರಂಜನ್ ನೀಡಿದ್ದಾರೆ.
ಹ್ಯಾಂಗಿಂಗ್ ಗಾರ್ಡನ್ ಅನ್ನೋ ಪರಿಕಲ್ಪನೆ, ಮೂಲತಃ ಬ್ಯಾಬಿಲೋನಿಯಾದಿಂದ ಬಂದಿರುವುದು. ಬ್ರಿಟಿಷರ ಮೂಲಕ ಭಾರತಕ್ಕೆ ಬಂದ ಇದು ಇಂದು ಜನಪ್ರಿಯ ತೋಟಗಾರಿಕೆ ಎಂದೆನಿಸಿದೆ. ಸಾಮಾನ್ಯವಾಗಿ ಮೆಟ್ರೋದಂತಹ ನಗರ ಪ್ರದೇಶಗಳಲ್ಲಿ ಸ್ಥಳದ ಅಭಾವ ತೀವ್ರವಾಗಿರುವುದರಿಂದ ಈ ಪರಿಕಲ್ಪನೆಯು ಕೈ ತೋಟ ಮಾಡಬಯಸುವವರಿಗೆ ವರದಾನವಾಗಿದೆ. ಅತೀ ಕಡಿಮೆ ಸ್ಥಳಾವಕಾಶದಲ್ಲಿ ಗಾರ್ಡನ್ ಮಾಡುವುದರ ಮೂಲಕ ತಮ್ಮ ಕನಸು ಸಾಕಾರಗೊಳಿಸಿಕೊಂಡಿದ್ದಾರೆ. ಒಂದೇ ಕುಂಡದಲ್ಲಿ ಬಿಡಿಯಾಗಿ ಅಥವಾ ಒಂದಕ್ಕಿಂತ ಹೆಚ್ಚು ಗಿಡಗಳನ್ನು ಬೆಳೆಸಿ, ಆಕರ್ಷಕ ಬಣ್ಣ ಬಣ್ಣದ ದಾರಗಳಿಂದ ತೂಗು ಹಾಕಿ ಸಂಭ್ರಮಿಸುವುದೇ ಈಗ ಹ್ಯಾಂಗಿಂಗ್ ಗಾರ್ಡನ್‌ನ ಹೊಸ ಟ್ರೆಂಡ್.
ನೀವಾಗಿ ಖುದ್ದು ಹ್ಯಾಂಗಿಂಗ್ ಗಾರ್ಡನ್ ನಿರ್ಮಿಸಬಹುದು ಇಲ್ಲಿ ನಿಮಗೆ ಸಮಯದ ಅಭಾವವಿದ್ದಲ್ಲಿ, ಮಾರುಕಟ್ಟೆಯಲ್ಲಿ ದೊರಕುವ ರೆಡಿಮೇಡ್ ಕುಂಡಗಳನ್ನು ಖರೀದಿಸಿ ತಂದು ಗಾರ್ಡನ್ ನಿರ್ಮಿಸಬಹುದು. ಒಂದು ವೇಳೆ ನಿಮಗೆ ಸ್ವತಃ ಹ್ಯಾಂಗಿಂಗ್ ಗಾರ್ಡನ್ ನಿರ್ಮಿಸುವ ಬಯಕೆ, ಆಸಕ್ತಿ, ಆಲೋಚನೆಯಿದ್ದಲ್ಲಿ ಇಲ್ಲಿದೆ ನಿಮಗಾಗಿ ಒಂದಿಷ್ಟು ಪೂರಕ ಮಾಹಿತಿಗಳು.
ಆರಂಭಿಸುವ ಮುನ್ನ
ಎಲ್ಲಕ್ಕಿಂತ ಮೊದಲು ಹ್ಯಾಂಗಿಂಗ್ ಗಾರ್ಡನನ್ನು ಯಾವ ಜಾಗದಲ್ಲಿ ನಿರ್ಮಿಸಬೇಕು ಅನ್ನುವುದನ್ನು ನಿರ್ಧರಿಸಿ. ಅದು ಅಂಗಳ, ತೋಟ, ಬಾಲ್ಕನಿ ಅಥವಾ ಕಿಟಿಕಿಯ ಪಕ್ಕ. ನಿರ್ದಿಷ್ಟ ಜಾಗವನ್ನು ಗುರುತಿಸಿ, ದೊರಕಿರುವ ಸ್ಥಳಕ್ಕನುಗುಣವಾಗಿ ಕುಂಡಗಳನ್ನು ರಚಿಸಿ. ಕುಂಡಗಳಿಗೆ ಅನುಗುಣವಾಗಿ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಿ. ಯಾವ ಭಾಗದಲ್ಲಿ ಯಾವ ಗಿಡಗಳನ್ನು ತೂಗು ಹಾಕಿದರೆ ಉತ್ತಮ ಎನ್ನುವುದನ್ನು ನೀವೇ ನಿರ್ಧರಿಸಿ. ಉದಾಹರಣೆಗೆ ಅತಿಯಾಗಿ ಬಿಸಿಲು ಬೀಳುವ ಸ್ಥಳಗಳಲ್ಲಿ ಬೇಗನೇ ಬಾಡಿಹೋಗುವ ಅಥವಾ ಬಿಸಿಲಿನ ಅಗತ್ಯವಿಲ್ಲದಿರುವ ಗಿಡಗಳನ್ನು ಇಡಬಾರದು. ಹಾಗೇ ದೊಡ್ಡ ದೊಡ್ಡ ಗಾತ್ರದ ಕುಂಡಗಳಲ್ಲಿ ಅತಿ ಚಿಕ್ಕ ಚಿಕ್ಕ ಗಿಡಗಳನ್ನು ತೂಗು ಹಾಕಬಾರದು. ಸೂರ್ಯರಶ್ಮಿಯ ಕೊರತೆಯಿಂದ ಅದು ಸಾಯುವ ಸಾಧ್ಯತೆ ಹೆಚ್ಚು.