ಯಾವುದೇ ಭಾಷೆಯ ಚಲನಚಿತ್ರಗಳನ್ನು ನೋಡಿದಾಗ ಅಲ್ಲಿ ನಾಯಕ ನಾಯಕಿ ಸುಂದರ ಪ್ರವಾಸಿ ತಾಣಗಳಲ್ಲಿ ಸುತ್ತಾಡುವ, ಹಾಡುವ ದೃಶ್ಯಗಳು ಇದ್ದೇ ಇರುತ್ತವೆ. ಈ ಪ್ರವಾಸಿ ತಾಣಗಳೇ ಹಾಗೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಖುಷಿ ಕೊಡುವಂಥವು.
ಕೆಲವರು ಕೆಲಸದ ಪ್ರಯುಕ್ತ, ಇನ್ನು ಕೆಲವರು ರಿಲ್ಯಾಕ್ಸ್ ಮಾಡಲು, ಮತ್ತೆ ಕೆಲವರು ರೋಮಾಂಚನದ ಅನುಭವ ಪಡೆದುಕೊಳ್ಳಲು ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಪ್ರವಾಸದ ಉದ್ದೇಶ ಏನೇ ಇರಲಿ, ಅದು ನಮ್ಮ ದೈನಂದಿನ ಜಂಜಾಟ ಮತ್ತು ಧಾವಂತದ ಒತ್ತಡಭರಿತ ಜೀವನದಿಂದ ಮುಕ್ತಿ ದೊರಕಿಸಿಕೊಟ್ಟು ಮೈ ಮನಸ್ಸಿಗೆ ತಾಜಾತನ ನೀಡುತ್ತದಲ್ಲದೆ, ನಮ್ಮವರನ್ನು ಇನ್ನಷ್ಟು ಹತ್ತಿರ ತರುತ್ತದೆ.
ಪ್ರವಾಸ : ಒಂದು ನೈಸರ್ಗಿಕ ಚಿಕಿತ್ಸೆ
ಇಂದಿನ ಆಧುನಿಕ ಜೀವನದಲ್ಲಿ ಮನುಷ್ಯ ಕೆಲಸದ ಒತ್ತಡದಲ್ಲಿ ಅದೆಷ್ಟು ಕುಗ್ಗಿ ಹೋಗಿದ್ದಾನೆ ಎಂದರೆ, ಆತನಿಗೆ ಮುಕ್ತವಾಗಿ ಉಸಿರಾಡುವುದು ಕೂಡ ಕಷ್ಟವಾಗುತ್ತಿದೆ. ಇಂತಹದರಲ್ಲಿ ಪ್ರವಾಸ ಜೀವನದ ಒತ್ತಡ, ಚಿಂತೆಗಳನ್ನು ನಿವಾರಿಸುತ್ತದೆ. ನಿಮ್ಮ ಕಣ್ಣುಗಳು ನೈಸರ್ಗಿಕ ಆನಂದದ ಮಜ ಪಡೆಯುತ್ತವೆ. ತ್ವಚೆಗೆ ಬಿಸಿಲಿನ ಸ್ಪರ್ಶವಾಗುತ್ತದೆ. ಮುಕ್ತ ವಾತಾವರಣದಲ್ಲಿ ಉಸಿರು ತೆಗೆದುಕೊಳ್ಳುವುದರಿಂದ ಶ್ವಾಸಕೋಶಗಳಿಗೆ ತಾಜಾ ಗಾಳಿ ದೊರೆಯುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ವೈದ್ಯ ವಿಜ್ಞಾನಿಗಳ ಪ್ರಕಾರ, 6 ತಿಂಗಳಿಗೆ ಒಮ್ಮೆ ದೀರ್ಘ ಪ್ರವಾಸಕ್ಕೆ ಹೋಗಬೇಕೆಂದು ಸಲಹೆ ನೀಡುತ್ತಾರೆ. ಸಂಶೋಧನೆಗಳ ಪ್ರಕಾರ, ಪ್ರವಾಸ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ನ್ನು ಕಡಿಮೆಗೊಳಿಸುತ್ತದೆ. ಹೃದಯಕ್ಕೆ ಅಪಾಯಕಾರಿಯಾಗಿರುವ ಸ್ಟ್ರೆಸ್ಹಾರ್ಮೋನು ಎಪಿನೆಫ್ರಿನ್ನ ಮಟ್ಟವನ್ನು ಕಡಿಮೆಗೊಳಿಸುತ್ತದೆ.
ಪ್ರವಾಸದ ಸಂದರ್ಭದಲ್ಲಿ ನಿಮಗೆ ಸಾಕಷ್ಟು ದೈಹಿಕ ವ್ಯಾಯಾಮ ಆಗುತ್ತದೆ. ನೀವು ಸಮುದ್ರ ತೀರಕ್ಕೆ/ ಗಿರಿಧಾಮಕ್ಕೆ ಇಲ್ಲವೆ ಐತಿಹಾಸಿಕ ಸ್ಥಳಕ್ಕೆ ಹೋಗುತ್ತಿರಬಹುದು. ಇದರಿಂದ ನಿಮ್ಮ ದೇಹ ಆ್ಯಕ್ಟಿವ್ ಆಗಿರುತ್ತದೆ. ನಿಮಗೆ ಒಮ್ಮೆ ಮೆಟ್ಟಿಲು ಹತ್ತಬೇಕಾಗಿ ಬರಬಹುದು, ಇನ್ನೊಮ್ಮೆ ಲಗೇಜ್ ಹೊತ್ತುಕೊಂಡು ಹೋಗುವ ಸಂದರ್ಭ ಬರುತ್ತದೆ. ಈ ಎಲ್ಲ ಆಗುಹೋಗುಗಳು ಕ್ಯಾಲರಿ ಬರ್ನ್ಮಾಡಲು ಸಹಾಯಕವಾಗಿವೆ. ಇದರಿಂದ ಸ್ಟೆಮಿನಾ ಅಂತೂ ಹೆಚ್ಚುತ್ತದೆ. ಜೊತೆಗೆ ನಿದ್ರೆ ಚೆನ್ನಾಗಿ ಮಾಡಬಹುದು. ಒಂದು ಅಧ್ಯಯನದ ಪ್ರಕಾರ, ಯಾವ ಮಹಿಳೆಯರು 2 ವರ್ಷದಲ್ಲಿ ಒಂದೇ ಒಂದು ಸಲ ಸುತ್ತಾಡಲು ಹೋಗದೇ ಇದ್ದರೆ, ಅಂಥವರು ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ವರ್ಷದಲ್ಲಿ 2 ಸಲ ಪ್ರವಾಸಕ್ಕೆ ತೆರಳುವ ಮಹಿಳೆಯರು ಮಾನಸಿಕವಾಗಿ ಹೆಚ್ಚು ಗಟ್ಟಿಯಾಗಿರುತ್ತಾರೆ.
ಸಂಬಂಧಗಳಿಗೆ ಹೊಸ ಜೀವ
ಮದುವೆಯ ಬಳಿಕ ನವದಂಪತಿಗಳು ಹನಿಮೂನ್ಗೆ ತೆರಳುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆ ಪ್ರವಾಸ ಅವರನ್ನು ಹತ್ತಿರಕ್ಕೆ ತರುತ್ತದೆ. ಜೊತೆಗೆ ಜೀವನದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮನಸಾರೆ ಸಿದ್ಧಪಡಿಸುತ್ತದೆ. ಮದುವೆಯ ಬಳಿಕ ಸಾಮಾನ್ಯವಾಗಿ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಪ್ರೀತಿಗಾಗಿ ಸಾಕಷ್ಟು ಸಮಯ ಕೊಡಲು ಆಗುವುದಿಲ್ಲ. ರೊಮಾನ್ಸ್ ಜೀವನದಿಂದ ಹೊರಟುಹೋಗಿಬಿಡುತ್ತದೆ. ಸೆಕ್ಸ್ ಕೂಡ ಒಂದು ರೊಟಿನ್ ಎಂಬಂತೆ ಆಗಿಬಿಡುತ್ತದೆ. ಇಂತಹದರಲ್ಲಿ ನಾವು ಸಂಬಂಧದ ಮಜ ಪಡೆಯಲು ಆಗುವುದಿಲ್ಲ. ಅಂತಹದರಲ್ಲಿ ನಾವು ಜೀವಿಸುತ್ತಿಲ್ಲ. ಜೀವನವೇ ನಮ್ಮನ್ನು ಎಳೆದುಕೊಂಡು ಹೊರಟಿದೆ ಎಂಬಂತೆ ಅನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಯಾವುದಾದರೊಂದು ಸುಂದರ ಸ್ಥಳಕ್ಕೆ ತೆರಳಿ ನಮ್ಮ ದಾಂಪತ್ಯದಲ್ಲಿ ಹೊಸ ಜೀವ ತುಂಬಬಹುದು. ಪರಸ್ಪರರ ಬಾಹುಗಳಲ್ಲಿ ಒಂದಷ್ಟು ಹೊತ್ತು ನೆಮ್ಮದಿಯ ಕ್ಷಣಗಳನ್ನು ಕಳೆದು ಸಂಬಂಧಕ್ಕೆ ಹೊಸ ಜೀವ ತುಂಬಬಹುದು. ಪ್ರವಾಸ ಅದಕ್ಕಾಗಿ ಒಳ್ಳೆಯ ವಾತಾವರಣದ ಜೊತೆಗೆ ಒಳ್ಳೆಯ ಅವಕಾಶವನ್ನೂ ದೊರಕಿಸಿ ಕೊಡುತ್ತದೆ. ಹೀಗೊಮ್ಮೆ ಯೋಚಿಸಿ. ಒಂದು ಸುಂದರ ಸಂಜೆ ನೀವಿಬ್ಬರೂ ಸಮುದ್ರ ದಂಡೆಯಲ್ಲಿ ಕುಳಿತಿರುವಿರಿ. ಸೂರ್ಯನ ಕಿರಣಗಳು ಸಮುದ್ರದ ಒಡಲಲ್ಲಿ ಸೇರಿಕೊಳ್ಳುತ್ತ ಹೊರಟಿದೆ. ಅಲೆಗಳು ಹಾಡು ಗುನಗುನಿಸುತ್ತಿವೆ. ತಂಗಾಳಿ ನಿಮ್ಮ ಮೈಮನಕ್ಕೆ ತಂಪು ಸ್ಪರ್ಶ ನೀಡುತ್ತಿರಬಹುದು. ಇಂತಹ ಮಧುರ ಕ್ಷಣಗಳನ್ನು ಅನುಭವಿಸಿದ ಬಳಿಕ ನಿಮ್ಮ ಮೈಮನದಲ್ಲಿ ಒಂದು ವಿಚಿತ್ರ ಬಗೆಯ ತಾಜಾತನ ಹಾಗೂ ಶಕ್ತಿಯ ಅನುಭೂತಿ ತುಂಬಿಕೊಳ್ಳುವಿರಿ. ನೀವು 10 ದಿನಗಳ ಮಟ್ಟಿಗೆ ಟೂರ್ಗೆ ಹೋದರೂ ಆ ನೆನಪುಗಳು ನಿಮಗೆ ತಿಂಗಳುಗಟ್ಟಲೇ ಕಾಡುತ್ತಲೇ ಇರುತ್ತವೆ.
ಯಂಗ್ ಸ್ಮಾರ್ಟ್ ಮತ್ತು ಸೆಕ್ಸಿ
ಅಮೆರಿಕದ ಬೇಲರ್ ಕಾಲೇಜ್ ಆಫ್ ಮೆಡಿಸಿನ್ನ ಒಂದು ತಂಡ ನಡೆಸಿದ ಸಂಶೋಧನೆಯ ಪ್ರಕಾರ, ರಜೆ ದಿನಗಳಲ್ಲಿ ಪ್ರವಾಸ ಹೊರಡುವುದು ವ್ಯಕ್ತಿಯೊಬ್ಬನನ್ನು ಚೈತನ್ಯಶೀಲ ಹಾಗೂ ಯಂಗ್ ಎಂದು ಭಾವಿಸಲು ನೆರವಾಗುತ್ತದೆ. ವಿಜ್ಞಾನಿ ಡೇವಿಡ್ ಪ್ರಕಾರ, ಹಿಂದೆ ಎಂದೂ ನೋಡದಂತಹ ಒಂದು ಸ್ಥಳವನ್ನು ನೋಡುವುದರಿಂದ ಮನುಷ್ಯನ ಮೆದುಳಿಗೆ ಒಂದು ವಿಚಿತ್ರ ಬಗೆಯ ಅನುಭೂತಿ ಉಂಟಾಗುತ್ತದೆ. ಇದು ಯಾವ ರೀತಿಯ ಖುಷಿಯನ್ನು ತುಂಬುತ್ತದೆ ಎಂದರೆ, ಮಗುವೊಂದು ಏನನ್ನೋ ಹೊಸದಾಗಿ ಸಾಧಿಸಿದ ಖುಷಿಯಲ್ಲಿರುವಂತೆ ಉತ್ಸಾಹಭರಿತವಾಗಿಸುತ್ತದೆ.
ಪ್ರವಾಸ ನಿಮ್ಮನ್ನು ಸ್ಮಾರ್ಟ್ಗೊಳಿಸುತ್ತದೆ. ಪ್ರವಾಸದ ಸಂದರ್ಭದಲ್ಲಿ ಬೇರೆ ಬೇರೆ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಸಾಕಷ್ಟು ಓಡಾಟ ನಿಮ್ಮನ್ನು ಚುರುಕಿನಿಂದಿಡುತ್ತದೆ. ನೀವು ಯಾವುದಕ್ಕಾಗಿ ಹೆದರುತ್ತೀರೊ, ಅದನ್ನೇ ಮಾಡಲು ಪ್ರಯತ್ನಿಸಿ. ಈಜು, ರಾಫ್ಟಿಂಗ್, ಸ್ಕೇಟಿಂಗ್, ಹಾರ್ಸ್ ರೈಡಿಂಗ್, ಪರ್ವತಾರೋಹಣ, ವಿಮಾನ ಪ್ರಯಾಣ, ಸುರಂಗ ಮಾರ್ಗದಲ್ಲಿ ಸಾಗುವುದು ಹೀಗೆ ಯಾವುದನ್ನಾದರೂ ಪ್ರಯತ್ನಿಸಿ ನಿಮ್ಮ ಮನಸ್ಸಿನ ಭಯವನ್ನು ನಿವಾರಿಸಿ. ಪ್ರವಾಸದ ಸಂದರ್ಭದಲ್ಲಿ ನಿಮಗೆ ಬಹಳಷ್ಟು ಕಲಿಯಲು ಅವಕಾಶ ದೊರೆಯುತ್ತದೆ. ನೀವು ಹೊಸ ಹೊಸ ಜಾಗಕ್ಕೆ ಹೋದಾಗ ಹೊಸಬರನ್ನು ಭೇಟಿಯಾಗುತ್ತೀರಿ, ಅವರೊಂದಿಗೆ ಮಾತನಾಡುತ್ತೀರಿ, ಅವರ ಪರಂಪರೆ, ರೀತಿ ರಿವಾಜುಗಳನ್ನು ತಿಳಿದುಕೊಳ್ಳುತ್ತೀರಿ. ಇದರಿಂದ ನಿಮ್ಮ ಜ್ಞಾನದ ಹರಿವು ಹೆಚ್ಚುತ್ತದೆ. ಬಗೆಬಗೆಯ ಫ್ಯಾಷನ್ಗಳನ್ನು ಗಮನಿಸುತ್ತೀರಿ. ನಿಮಗೆ ಇಷ್ಟವಾದುದನ್ನು ಅನುಸರಿಸುತ್ತೀರಿ. ನಿಮ್ಮ ರುಚಿ ಬದಲಾಗುತ್ತದೆ. ಮುಕ್ತ ವಾತಾವರಣದಲ್ಲಿ ಸುತ್ತಾಡುತ್ತೀರಿ, ನಿಸರ್ಗದ ಸ್ಪರ್ಶ ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸುತ್ತದೆ. ಮನಸ್ಸಿನ ಖುಷಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ನಿಮ್ಮೊಂದಿಗೆ ಒಂದು ಸಂವಾದ
ನಿಸರ್ಗದ ಮಡಿಲಲ್ಲಿ, ರಮ್ಯ ಶಾಂತ ವಾತಾವರಣದ ನಡುವೆ ನಿಮಗೆ ನಿಮ್ಮ ಜೊತೆಗೆ ಮಾತುಕಥೆ ನಡೆಸುವ ಸುಮಧುರ ಅವಕಾಶ ದೊರೆಯುತ್ತದೆ. ಅಲ್ಲಿ ನಿಮಗೆ ಯಾವುದೇ ಡೆಡ್ ಲೈನ್ ಇಲ್ಲ. ಯಾವುದೇ ಮೀಟಿಂಗ್ ಇಲ್ಲ, ಮನೆಗೆಲಸ ಇಲ್ಲ, ಅಲ್ಲಿ ನೀವು ನಿಮ್ಮದೇ ಆದ ಹೃದಯದ ಧ್ವನಿಯನ್ನು ಆಲಿಸುತ್ತೀರಿ. ನೀವು ನಿಮ್ಮ ಬಗ್ಗೆ ಯೋಚಿಸಬಹುದು. ಈಗ ನಿಮ್ಮನ್ನು ನೀವು ಅವಲೋಕಿಸಬಹುದು. ಇಂದು ನೀವು ಯಾವ ಸ್ಥಾನದಲ್ಲಿದ್ದೀರೋ, ಅದಕ್ಕಿಂತ ಉತ್ತಮವಾದುದನ್ನು ಹೊಂದಲು, ಇವರು ಕೊರತೆಯನ್ನು ನೀಗಿಸಲು ಪ್ರಯತ್ನಪಡಬಹುದು.
ನಿಮ್ಮೊಳಗೆ ನೀವು ಇಣುಕಲು ಪ್ರವಾಸ ಒಂದು ಅವಕಾಶವನ್ನು ಕೊಡುತ್ತದೆ. ನೀವು ಪ್ರವಾಸದಿಂದ ವಾಪಸ್ಸಾದಾಗ ನಿಮ್ಮೊಳಗೆ ಯಾವುದೇ ಗೊಂದಲಗಳಿರಲಾರವು.
ಹೊಸ ದೃಷ್ಟಿಕೋನ
ಪ್ರವಾಸ ನಮಗೆ ಯೋಚನೆಯ ಹೊಸ ದೃಷ್ಟಿಕೋನ ಮತ್ತು ಜೀವಿಸುವ ಹೊಸ ಆಯಾಮ ದೊರಕಿಸಿಕೊಡುತ್ತದೆ. ನೀವು ದೈನಂದಿನ ಟ್ವಿಟರ್, ಫೇಸ್ಬುಕ್ನಿಂದ ದೂರ ಇದ್ದು ಪ್ರವಾಸಕ್ಕೆ ಹೊರಟರೆ ಸಂಬಂಧದಲ್ಲಿ ಒಂದು ಹೊಸ ಅರ್ಥ ಬರುತ್ತದೆ. ಅಷ್ಟೇ ಅಲ್ಲ, ನೀವು ಯಾವುದಾದರೂ ಸುಂದರ ನಗರ ಸುತ್ತಾಡುವ ಯೋಚನೆಯಿಂದ ಹೊರಟರೆ ನಿಮ್ಮ ಕಣ್ಮುಂದೆ ಏನೂ ಇಲ್ಲದೇ ಇರುವ ಕೆಲವರು ಬರುತ್ತಾರೆ. ಅವರ ಬಳಿ ಇರಲು ಮನೆ ಇಲ್ಲ, ಊಟ ಮಾಡಲು ಸಕಲ ಸೌಲಭ್ಯಗಳಿಲ್ಲ, ಒಳ್ಳೆಯ ಬಟ್ಟೆಗಳಿಲ್ಲ.
ಆಗ ನಿಮಗೆ ಅವರ ಜೀವನದ ವಾಸ್ತವತೆಯ ಬಗ್ಗೆ ಅರಿವಾಗುತ್ತದೆ. ಏನೆಲ್ಲ ಇದ್ದೂ ಕೂಡ ಒಮ್ಮೊಮ್ಮೆ ನೀವು ಸಣ್ಣ ಪುಟ್ಟ ವಿಷಯಗಳಿಗೆ ತಲೆಬಿಸಿ ಮಾಡಿಕೊಳ್ಳುತ್ತೀರಿ. ಇದರಿಂದ ಆರೋಗ್ಯದ ಮೇಲೆ ಎಷ್ಟೊಂದು ದುಷ್ಪರಿಣಾಮ ಆಗುತ್ತದೆಂದು ನಿಮಗೆ ಅರಿವಾಗುತ್ತದೆ.
ಅದೇ ರೀತಿ ಸದಾ ಮನೆ ಅಥವಾ ಆಫೀಸಿನಲ್ಲಿಯೇ ಇರುವುದರಿಂದ ನಿಮಗೆ ಯಾವುದೇ ಹೊಸ ಯೋಚನೆ ನೋಜನೆಗಳು ಹೊಳೆಯುವುದಿಲ್ಲ. ನೈಸರ್ಗಿಕ ಸೌಂದರ್ಯದ ಜಾಗಕ್ಕೆ ಹೋದಾಗ, ಅಲ್ಲಿ ಹೆಜ್ಜೆ ಹಾಕುತ್ತಿರುವಾಗ ನಿಮಗೆ ಹೊಸ ವಿಚಾರಗಳು ತಂತಾನೆ ಹೊರಹೊಮ್ಮುತ್ತವೆ. ನಿಮ್ಮ ಮೆದುಳು ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತದೆ. ಅಲ್ಲಿಂದ ವಾಪಸ್ ಬಂದ ನಂತರ ನಿಮ್ಮನ್ನು ನೀವು ಹೆಚ್ಚು ಕ್ರಿಯಾಶೀಲ ಹಾಗೂ ಶಕ್ತಿಶಾಲಿ ಎಂದು ಭಾವಿಸಿಕೊಳ್ಳುವಿರಿ.
– ಪಿ. ವನಿತಾ