ಕನ್ನಡ ನಾಡಿನಲ್ಲಿ ಹುಟ್ಟಿ ಕೆನಡಾ, ಅಮೆರಿಕಾ, ದುಬೈ ಸೇರಿದಂತೆ ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಯ ಕಂಪನ್ನು ಹರಡುತ್ತಿರುವವರು ಪಂಪಾ ಡ್ಯಾನ್ಸ್ ಅಕಾಡೆಮಿಯ ಸಹಯೋಗಿ, ಕೊರಿಯೋ ಗ್ರಾಫರ್ ನಿರ್ಮಲಾ ಮಾಧವ್ ಕಳೆದ 25 ರ್ಷಗಳಿಂದಲೂ ಅಮೆರಿಕಾದಲ್ಲಿ ತಮ್ಮ ಕುಟುಂಬದವರೊಡನೆ ನೆಲೆಸಿದ್ದಾರೆ.
ಇವರು ಪಂಪಾ ಡ್ಯಾನ್ಸ್ ಅಕಾಡೆಮಿ ಸಂಸ್ಥೆಯ ಮುಖೇನ ಇದುವರೆಗೂ ನೂರಾರು ಮಕ್ಕಳಿಗೆ ಭಾರತೀಯ ಸಂಗೀತ ಹಾಗೂ ನೃತ್ಯ ತರಬೇತಿಯನ್ನು ನೀಡುತ್ತಿರುವರು. ಅಲ್ಲದೆ, ತಾವು ಸಹ `ಅಕ್ಕ' ಸಮ್ಮೇಳನ ಸೇರಿದಂತೆ ಸಾಕಷ್ಟು ಸಂಖ್ಯೆಯ ಅಂತಾರಾಷ್ಟ್ರೀಯ ನೃತ್ಯ ಸಮ್ಮೇಳನಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.
ಇತ್ತೀಚೆಗೆ ನಡೆದ `ಬನ್ನಂಜೆ 80ರ ಸಂಭ್ರಮ' ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಿರ್ಮಲಾರನ್ನು ಗೃಹಶೋಭಾ ಮಾತಿಗೆ ಆಹ್ವಾನಿಸಿದಾಗ ತಮ್ಮ ಬಾಲ್ಯ, ವೃತ್ತಿ ಬದುಕು ಸೇರಿದಂತೆ ಜೀವನದ ಅನುಭವಗಳ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಆ ಸಂದರ್ಶನದ ಮುಖ್ಯಾಂಶಗಳು :
ಪಂಪಾ ಡ್ಯಾನ್ಸ್ ಅಕಾಡೆಮಿ ಬಗ್ಗೆ ಹೇಳಿ....
ಪಂಪಾ ಡ್ಯಾನ್ಸ್ ಅಕಾಡೆಮಿ 1992ರ ಕ್ಯಾಲಿಫೋರ್ನಿಯಾದ ಸ್ಯಾಲುಸೆ ಎನ್ನುನಲ್ಲಿ ಡಾ.ಪೂರ್ಣ ಪ್ರಸಾದ್ (ನಿರ್ಮಲಾರ ಪತಿಯ ಸಹೋದರ) ಅವರಿಂದ ಪ್ರಾರಂಭಿಸಲ್ಪಟ್ಟಿತು. ನಾನೂ ಕೂಡ ಅದರಲ್ಲಿ ತೊಡಗಿಸಿಕೊಂಡು ನೃತ್ಯ ತರಬೇತಿ ನೀಡಲು ಪ್ರಾರಂಭಿಸಿದೆ. ಇನ್ನು ಸಂಗೀತ, ಮೃದಂಗ ಮೊದಲಾದವನ್ನು ಕಲಿಸಲು ಬೇರೆ ಬೇರೆ ನುರಿತ ತರಬೇತುದಾರರಿದ್ದಾರೆ. ಸ್ವತಃ ಪೂರ್ಣ ಪ್ರಸಾದ್ ಮೃದಂಗವನ್ನು ಕಲಿಸುತ್ತಾರೆ. ನನ್ನ ಪತಿ ಬಿಂದು ಮಾಧವ್ ಆಡಿಯೋ, ವಿಡಿಯೋ ವಿಶುವಲ್ ಎಫೆಕ್ಟ್ಸ್ ನಲ್ಲಿ ಎಕ್ಸ್ ಪರ್ಟ್. ಹೀಗೆ ನಾವು ಪ್ರಾರಂಭಿಸಿದ ಈ ಸಂಸ್ಥೆ ಮುಂದಿನ ವರ್ಷ 25 ವರ್ಷಗಳನ್ನು ಪೂರೈಸುತ್ತಿದೆ. ನಾನು 1991ರಲ್ಲಿ ಕೆನಡಾದಲ್ಲಿ ನೃತ್ಯ ಕಾರ್ಯಕ್ರಮಗಳಿಗೆ ತೆರಳಿದ್ದೆ. ಅದೇ ನಂತರದ ವರ್ಷ ಪಂಪಾ ಡ್ಯಾನ್ಸ್ ಅಕಾಡೆಮಿ ಪ್ರಾರಂಭವಾಯಿತು. ಕೆನಡಾದಿಂದ ಅಮೆರಿಕಾಗೆ ಬಂದು ಈ ಇನ್‌ಸ್ಟಿಟ್ಯೂಟ್‌ನಲ್ಲಿ ಟೀಚರ್ ಕಂ ಪರ್ಫಾರ್ಮರ್ ಆಗಿದ್ದೇನೆ. ಈ ಎರಡೂ ಕೆಲಸ ಏಕಕಾಲದಲ್ಲಿ ನಡೆಸಿಕೊಂಡು ಹೋಗುವುದು ಸ್ವಲ್ಪ ಕಷ್ಟವಾದರೂ ನಾನದನ್ನು ನಿಭಾಯಿಸುತ್ತಿದ್ದೇನೆ. ಸ್ಕೂಲಿನಲ್ಲಿ ಸುಮಾರು 150 ಜನ ವಿದ್ಯಾರ್ಥಿಗಳಿದ್ದಾರೆ, ಜೊತೆಗೆ ಅಸಿಸ್ಟೆಂಟ್‌ಗಳೂ. ನಾವು ಥಿಯರಿ ಹಾಗೂ ಪ್ರ್ಯಾಕ್ಟಿಕಲ್ ಎರಡೂ ಬಗೆಯಲ್ಲಿ ನೃತ್ಯವನ್ನು ಹೇಳಿಕೊಡುತ್ತೇವೆ, ವಿದ್ಯಾರ್ಥಿಗಳಿಗೆ ಎಗ್ಸಾಮ್ಸ್ ಕಂಡಕ್ಟ್ ಮಾಡುತ್ತೇವೆ. ಹಿಂದೂ ಮೈಥಾಲಜಿ, ಇಂಡಿಯನ್ ಕಲ್ಚರ್, ಶಾಸ್ತ್ರೀಯ ಸಂಗೀತದ ಪ್ರಾಮುಖ್ಯತೆ ಕುರಿತಂತೆ ವಿದ್ಯಾರ್ಥಿಗಳಿಗೆ ಕಥೆಯ ರೂಪದಲ್ಲಿ ಮನದಟ್ಟು ಮಾಡಿಸಲಾಗುತ್ತದೆ. ಅಲ್ಲಿನ ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂಸ್ಕೃತಿ ಕುರಿತಂತೆ ಹೆಚ್ಚಿನ ತಿಳಿವಳಿಕೆ ಇರುವುದಿಲ್ಲ. ಹೀಗಾಗಿ ನಾವು ನಮ್ಮ ಪಠ್ಯದಲ್ಲಿ ಇದಕ್ಕೆ ಪ್ರಾಮುಖ್ಯತೆ ನೀಡಿದ್ದೇವೆ. ಈಗಾಗಲೇ ನಮ್ಮ 37 ವಿದ್ಯಾರ್ಥಿಗಳು ಸೋಲೋ ಅರಂಗೇಟ್ರಂ ಮಾಡಿದ್ದಾರೆ. ಮುಂದಿನ ವರ್ಷ ಕೂಡಾ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸುತ್ತೇವೆ, ವರ್ಷದಲ್ಲಿ ಎರಡು ದೊಡ್ಡ ಪ್ರಮಾಣದ ಕಾರ್ಯಕ್ರಮ (ಬಿಗ್ ಈವೆಂಟ್ಸ್) ನಡೆಸುತ್ತೇವೆ.
ವಿಜಯದಶಮಿಯ ಸಮಯದಲ್ಲಿ `ನೃತ್ಯ ವೈಭವ' ಎನ್ನುವ ವಾರ್ಷಿಕ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳ ಪೋಷಕರಿಗೂ ಆಹ್ವಾನ ನೀಡುತ್ತೇವೆ. ಇದರಿಂದ ಅವರಿಗೆ ತಮ್ಮ ಮಕ್ಕಳು ಎಷ್ಟರ ಮಟ್ಟಿಗೆ ಅಭ್ಯಾಸ ನಡೆಸಿದ್ದಾರೆ ಎನ್ನುವುದರ ಅರಿವು ಮೂಡುತ್ತದೆ. ಇದು ಕೇವಲ ಕ್ಲಾಸ್ ಪ್ರೆಸೆಂಟೇಶನ್ ಮಾತ್ರವೇ ಹೊರತು, ಪರ್ಫಾರ್ಮೆನ್ಸ್ ತೋರಿಸುವುದಿಲ್ಲ. ಇಲ್ಲವೇ ಸಾರ್ಜನಿಕರೆದುರು ಕಾರ್ಯಕ್ರಮ ಆಯೋಜಿತವಾಗುವುದಿಲ್ಲ. ಕೇವಲ ಪೋಷಕರಿಗೆ, ಮಿತ್ರರಿಗೆ ಮಾತ್ರವೇ ಪ್ರದರ್ಶನ ಏರ್ಪಟ್ಟಿರುತ್ತದೆ.