`ಜೋಶ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಉದಯಿಸಿದ ನಟಿ ನಿತ್ಯಾ ಮೆನನ್. ಆದರೆ ಮಿಂಚಿದ್ದು ಮಲೆಯಾಳಂ, ತಮಿಳು ಚಿತ್ರಗಳಲ್ಲಿ. ಮಣಿರತ್ನಂ ಅವರ `ಕಣ್ಮಣಿ’ ಚಿತ್ರದಲ್ಲಿ ನಟಿಸಿ ಇನ್ನಷ್ಟು ಜನಪ್ರಿಯಳಾದ ನಿತ್ಯಾಳ ಅಭಿನಯವನ್ನು ಕನ್ನಡದ `ಮೈನಾ’ ಚಿತ್ರದಲ್ಲೂ ಹೊಗಳಲಾಗಿತ್ತು. ನಾಯಕಿ ಅಷ್ಟೇ ಅಲ್ಲ ಉತ್ತಮ ಗಾಯಕಿಯೂ ಆಗಿರುವ ನಿತ್ಯಾ ಮೆನನ್ ಈಗ ಸುದೀಪ್ ಅವರಿಗೆ ಜೋಡಿಯಾಗಿ `ಕೋಟಿಗೊಬ್ಬ-2′ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದೊಂದು ದೊಡ್ಡ ಪ್ರಾಜೆಕ್ಟ್. ನಿತ್ಯಾ ಕೇರಳದ ಹುಡುಗಿಯಾದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲಳು. ಹಾಗಾಗಿ `ಕೋಟಿಗೊಬ್ಬ-2′ ಚಿತ್ರಕ್ಕಾಗಿ ತನ್ನ ಪಾತ್ರಕ್ಕೆ ತಾನೇ ಧ್ವನಿ ಕೊಡುವುದಾಗಿ ಹೇಳಿದ್ದಾಳೆ. ಸುದೀಪ್-ನಿತ್ಯಾ ಜೋಡಿ ತೆರೆ ಮೇಲೆ ಜಾದೂ ಮಾಡುವುದಂತೂ ಖಂಡಿತ.
ಸೆಂಚುರಿ ನಟ
ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ ರಮೇಶ್ ಅರವಿಂದ್ ಸಿನಿಮಾರಂಗಕ್ಕೆ ಬಂದು ಮೂವತ್ತು ವರ್ಷಗಳು ತುಂಬಿವೆ. ಇವರ ನೂರನೇ ಚಿತ್ರ `ಪುಷ್ಪಕ ವಿಮಾನ’ ಆಗಲಿದೆ. ಈಗಾಗಲೇ ಈ ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. `ಸುಂದರ ಸ್ವಪ್ನಗಳು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಮೇಶ್ ನಟನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡರು. ನೂರು ಚಿತ್ರಗಳಾದವು ಎನ್ನುವುದೇ ನನಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತರಿಂದ ಗೊತ್ತಾಯಿತು. ನಿಜಕ್ಕೂ ಆಶ್ಚರ್ಯವಾಯ್ತು. ಹಾಗೆಯೇ ಖುಷಿಯೂ ಆಯ್ತು. `ಪುಷ್ಪಕ ವಿಮಾನ’ ನನ್ನ ನೂರನೆಯ ಚಿತ್ರವಾಗಲಿದೆ. ಜವಾಬ್ದಾರಿ ಹೆಚ್ಚಾಗಿದೆ. ಎಂಥದ್ದೇ ಪಾತ್ರವಿರಲಿ ನಿರ್ವಹಿಸಿ ಸೈ ಎನಿಸಿಕೊಂಡಿರುವ ರಮೇಶ್ ಕಿರುತೆರೆಯಲ್ಲೂ ಸಹ ಸ್ಟಾರ್ ಎನಿಸಿಕೊಂಡಿದ್ದಾರೆ. ಅವರ ಈ ನೂರರ ಸಂಭ್ರಮಕ್ಕೆ ನಮ್ಮ ಕಡೆಯಿಂದ ಒಂದು ಕಂಗ್ರಾಟ್ಸ್!
ಮಕ್ಕಳ ಚಿತ್ರಕ್ಕೆ ಗೌರವ
ನಾಗರಾಜ ಕೋಟೆ ನಿರ್ದೇಶನದ `ಬಾನಾಡಿ’ ಚಿತ್ರ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳ ಗೌರವಕ್ಕೆ ಪಾತ್ರವಾಗುತ್ತಿದೆ. ಹೈದರಾಬಾದಿನಲ್ಲಿ ನಡೆದ 19ನೇ ಮಕ್ಕಳ ಚಿತ್ರೋತ್ಸವದಲ್ಲಿ ಭಾಗವಹಿಸಿತ್ತು. ಮಂಗಳೂರಿನಲ್ಲಿ ನಡೆದ ಮಕ್ಕಳ ಚಲನ ಚಿತ್ರೋತ್ಸವಕ್ಕೂ ಆಯ್ಕೆಯಾಗಿತ್ತು. ಈಗ ಲಕ್ನೋದಲ್ಲಿ ನಡೆಯಲಿರುವ ಮಕ್ಕಳ ಚಲನ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದೆ, ನಿಜಕ್ಕೂ ಹೆಮ್ಮೆಯ ಸಂಗತಿ. ಮಕ್ಕಳಿಗೆ ಈ ನನ್ನ ಚಿತ್ರವನ್ನು ತಲುಪಿಸಬೇಕೆಂಬುದು ನನ್ನ ಗುರಿಯಾಗಿತ್ತು. ಅದೀಗ ಸಫಲವಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಾಗರಾಜ್ ಕೋಟೆ. ಧೃತಿ, ದತ್ತಣ್ಣ, ನಟರಾದ ರಾಜೇಶ್, ರಮೇಶ್ ಪಂಡಿತ್ ಮುಂತಾದ ಕಲಾವಿದರ ಬಳಗ ಈ ಚಿತ್ರಕ್ಕಿದೆ. ಕಾರ್ತಿಕ್ ಶರ್ಮ ಸಂಗೀತ ಸಂಯೋಜಿಸಿದ್ದಾರೆ.
ದಂಡುಪಾಳ್ಯಕ್ಕೆ ಎಂಟ್ರಿ
`ದಂಡುಪಾಳ್ಯ’ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿತು. ಇದೀಗ `ದಂಡುಪಾಳ್ಯ-2′ ತಯಾರಾಗುತ್ತಿದೆ. ಪೂಜಾ ಗಾಂಧಿ ಫೋಟೋಗಳನ್ನು ನೋಡಿದವರು ಹುಬ್ಬೇರಿಸಿದ್ದಾರೆ. ಶ್ರೀನಿವಾಸ್ ರಾಜು ಈ ಚಿತ್ರದ ಎರಡನೇ ಭಾಗವನ್ನು ನಿರ್ದೇಶಿಸುತ್ತಿದ್ದಾರೆ. ಹೊಸ ಸುದ್ದಿ ಏನಪ್ಪ ಅಂದ್ರೆ ಶೃತಿ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಶೃತಿ ಪತ್ರಕರ್ತೆ ಪಾತ್ರದಲ್ಲಿ `ದಂಡುಪಾಳ್ಯ-2′ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಶೃತಿ, ಪೂಜಾ ಸರಸವಿರಸ, ಜಗಳ ಪ್ರೀತಿ ಎಲ್ಲವನ್ನೂ ಕಂಡಂಥ ಪ್ರೇಕ್ಷಕರಿಗೆ ಇವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ವಿಶೇಷವೆಂದರೆ ತೆರೆ ಮೇಲೆ ಕೂಡಾ ಇವರಿಬ್ಬರದೂ ತದ್ವಿರುದ್ಧ ಪಾತ್ರಗಳು.
ನಟನೆ ಅಂದ್ರೆ ಇಷ್ಟ
`ಅಕಿರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಕೃಷಿ ತಾಪಂದ ಕಾರ್ಪೋರೇಟ್ ಫೀಲ್ಡ್ ನಲ್ಲಿ ಕೆಲಸ ಮಾಡಿದಂಥ ಸ್ಮಾರ್ಟ್ ಹುಡುಗಿ. `ನಟನೆಗಾಗಿ ಎಂಥ ತ್ಯಾಗವನ್ನು ಬೇಕಾದರೂ ಮಾಡಬಲ್ಲೆ,’ ಎಂದು ಅನೇಕರು ಹೇಳಿರುವುದನ್ನು ಕೇಳುತ್ತಿರುತ್ತೇವೆ. ಆದರೆ ಈ ಕೃಷಿ ತನಗಿದ್ದಂಥ ಅಭಿನಯದ ಮೇಲಿನ ಪ್ರೀತಿಯಿಂದ ಕೆಲಸವನ್ನೇ ತೊರೆದು ಬಂದಳಂತೆ. `ಅಕಿರ’ ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಮೊದಲು ನನ್ನನ್ನು ಅಪ್ರೋಚ್ ಮಾಡಿದ್ದು, ನಿರ್ದೇಶಕ ನವೀನ್ ಅವರಿಗೆ ಪರಿಚಯ ಮಾಡಿಸಿದಾಗ ಅವರು ಕೂಡಲೇ ಪಾತ್ರವೊಂದಕ್ಕೆ ಆಯ್ಕೆ ಮಾಡಿಬಿಟ್ಟರು, ಎಂದು ಹೇಳುವ ಕೃಷಿ `ಅಕಿರ’ ಬಿಡುಗಡೆಗೆ ಮೊದಲೇ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾಳೆ. ವಿಜಯ ರಾಘವೇಂದ್ರ, ಕಿಶೋರ್ ಆ ಚಿತ್ರಗಳ ನಾಯಕರು.
ಪ್ರೇಮ್ ಕಲಿಗಳು
ಇದೀಗ ಮಲ್ಟಿ ಸ್ಟಾರ್ ಸಿನಿಮಾಗಳ ಹೊಸ ಟ್ರೆಂಡ್ ಶುರುವಾಗಿದೆ. ಅಂಥ ಸಾಹಸಕ್ಕೆ ಕೈ ಹಾಕಿದ ಮೊದಲಿಗರು ಪ್ರೇಮ್. ತಮ್ಮ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್‌ರನ್ನು ಒಟ್ಟುಗೂಡಿಸಿದ್ದಾರೆ. ಚಿತ್ರಕ್ಕೆ `ಕಲಿ’ ಅಂತ ಹೆಸರಿಟ್ಟು ಅದ್ಧೂರಿಯಾಗಿ ಮುಹೂರ್ತ ಮಾಡಿದ್ದರು. ಇತ್ತೀಚೆಗೆ ಪ್ರೇಮ್ ಮಂತ್ರಾಲಯಕ್ಕೆ ತೆರಳಿ ರಾಯರ ಸನ್ನಿಧಿಯಲ್ಲಿ `ಕಲಿ’ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಮುಂದಿನ ವಾರದಿಂದ ಹಾಡುಗಳ ರೆಕಾರ್ಡಿಂಗ್ ಕಾರ್ಯ ಶುರುವಾಗಲಿದೆ. ಕನ್ನಡದ ಜನಪ್ರಿಯ ನಾಯಕರನ್ನು ಕಲಿಗಳಾಗಿ ತೆರೆ ಮೇಲೆ ತರುತ್ತಿರುವ ಪ್ರೇಮ್ ಅವರ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿದೆ.
ಮುದ್ದಾದ ಜೋಡಿ
ಪುನೀತ್ ರಾಜ್‌ಕುಮಾರ್ ಚಿತ್ರವೆಂದರೆ ಏನಾದರೊಂದು ವಿಶೇಷತೆ ಇರಲೇಬೇಕು. ಪ್ರೇಕ್ಷಕರು, ಅಭಿಮಾನಿಗಳು ಅವರಿಗಾಗಿ ಕಾಯುತ್ತಿರುತ್ತಾರೆ. ಒಂದು ವರ್ಷದ ನಂತರ ಪುನೀತ್ ಪ್ರೇಕ್ಷಕರೆದುರು ಬರುತ್ತಿದ್ದಾರೆ. `ರಣವಿಕ್ರಮ’ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ವರ್ಷ `ಚಕ್ರವ್ಯೂಹ’ ತೆರೆಗೆ ಬಂದಿದೆ. ಈ ಚಿತ್ರದ ಪ್ರೀಮಿಯರ್ ಶೋ ವಿದೇಶದಲ್ಲಿ ನಡೆಯಲಿದೆ ಎಂಬ ಸುದ್ದಿ ಇದೆ. ಪರದೇಶವಷ್ಟೇ ಅಲ್ಲ, ಪರರಾಜ್ಯಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆಯಂತೆ. ಈ ಚಿತ್ರದ ವಿಶೇಷತೆಗಳನ್ನು ಪಟ್ಟಿ ಮಾಡಿಯೇ ಹೇಳಬೇಕು. ಜ್ಯೂನಿಯರ್ ಎನ್.ಟಿ.ಆರ್. , ಕಾಜಲ್ ಅಗರ್‌ವಾಲ್ ಹಾಡಿರೋದು. ಕ್ಲೈಮ್ಯಾಕ್ಸ್ ಭಾಗಕ್ಕೆ ಕಿಚ್ಚ ಸುದೀಪ್ ಧ್ವನಿ ಕೊಟ್ಟಿದ್ದಾರೆ. ಪುನೀತ್ ಜೋಡಿಯಾಗಿ ಕನ್ನಡದ ಹುಡುಗಿ ರಚಿತಾ ರಾವ್ ನಟಿಸುತ್ತಿದ್ದಾಳೆ. ಈ ಜೋಡಿ ತೆರೆ ಮೇಲೆ ತುಂಬಾನೆ ಮುದ್ದಾಗಿ ಕಾಣಿಸುತ್ತೆ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಆಡಿಯೋ ಲೈಫ್
ಕಳೆದ ನಾಲ್ಕು ವರ್ಷಗಳಿಂದ ಚಿತ್ರರಂಗಕ್ಕೆ ಪ್ರತಿಭಾವಂತ ಸೌಂಡ್ ಸ್ಪೆಷಲಿಸ್ಟ್ ಗಳನ್ನು ತಯಾರು ಮಾಡಿ ಕಳಿಸುತ್ತಿರುವ ಆಡಿಯೋ ಲೈಫ್ ಸೌಂಡ್ ಎಂಜಿನಿಯರಿಂಗ್ ಕಾಲೇಜ್‌ಗೆ ಇದೀಗ ಖ್ಯಾತ ಸಂಗೀತ ನಿರ್ದೇಶಕರಾದ ರಘು ದೀಕ್ಷಿತ್ ಬ್ರ್ಯಾಂಡ್ ಅಂಬಾಸೆಡರ್ ಹಾಗೂ ಮೆಂಟರ್ ಆಗಿ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ವೇಲು ಅವರುಗಳು ನೇಮಕವಾಗಿದ್ದಾರೆ. ಡಿ.ಜೆ. ಯಶ್ ಮಾಲೀಕತ್ವದ `ಆಡಿಯೋ ಲೈಫ್’ ಬೆಂಗಳೂರಿನಲ್ಲಿ ಬೇರೂರಿ ದೇಶವಿದೇಶಗಳಲ್ಲಿ ಖ್ಯಾತಿ ಪಡೆದುಕೊಂಡಿದೆ. ಈ ಕಾಲೇಜಿನಲ್ಲಿ ಫಿಲ್ಮ್ ಸೌಂಡ್, ಮ್ಯೂಸಿಕ್ ಕಂಪೋಸ್, ರೆಕಾರ್ಡಿಂಗ್ ಮುಂತಾದ ಟೆಕ್ನಿಕ್ ರೂಪಗಳನ್ನು ಕಲಿಸಿಕೊಡಲಾಗುತ್ತದೆ. ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ನಲ್ಲಿ ಇವೆಲ್ಲವನ್ನೂ ಕಲಿತು ಪರಿಣಿತ ತಂತ್ರಜ್ಞರಾಗಿ ಕೆಲಸ ಮಾಡಬಹುದಾಗಿದೆ.