ಕನ್ನಡ ಸಿನಿಮಾರಂಗದಲ್ಲಿ ಲವ್ ಸ್ಟೋರಿಗೊಂದು ಹೊಸ ಗ್ರಾಮರ್ ಬರೆದದ್ದು ಸಿಂಪಲ್ ಸುನಿ ಅಂತಾನೆ ಹೇಳಬಹುದು. `ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಚಿತ್ರ ಹೊಸತನದಿಂದ ತುಂಬಿಕೊಂಡು, ಡೈಲಾಗ್ಸ್ ಜೊತೆ ಹೀಗೂ ಆಟ ಆಡಬಹುದು ಎಂಬುದನ್ನು ಸುನಿ ಪ್ರೂವ್ ಮಾಡಿದ್ದರು. ಈ ಸಿನಿಮಾ ಸಕ್ಸಸ್ ಆದಾಗ ಇಡೀ ಸಿನಿಮಾರಂಗ ಸುನಿಯನ್ನು ಪ್ರಶಂಸಿಸಿತ್ತು.
ವಾಟ್ ನೆಕ್ಸ್ಟ್ ಎಂಬುದು ಎಲ್ಲರನ್ನೂ ಕಾಡುತ್ತಲೇ ಇತ್ತು. `ಬಹುಪರಾಕ್’ ಸಿನಿಮಾ ಮಾಡಿದರು. ಅದಾದ ನಂತರ ಈಗ `ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ತೆರೆಗರ್ಪಿಸಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಸುನಿಗೆ ಮತ್ತದೇ ಯಶಸ್ಸು ತಂದುಕೊಡಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ.
`ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಚಿತ್ರದ ಕುರಿತು ಸುನಿ, ಮೇಘನಾ ಇಲ್ಲಿ ಮಾತನಾಡಿದ್ದಾರೆ.
ಎರಡೇ ಪ್ರಮುಖ ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗಿರುವ ಸುನಿ ಕಚಗುಳಿ ಇಡುವ ಸಂಭಾಷಣೆ, ಚೇಷ್ಟೆ ಮಾತುಗಳು, ಎಲ್ಲ ಯುವ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸಫಲವಾಗುತ್ತಾ?
`ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ‘ ಬಗ್ಗೆ ಸುನಿ ಹೇಳುವುದಾದರೂ ಏನು?
“ನನ್ನ ಮೊದಲ ಚಿತ್ರ `ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಯ ಕೆಲವು ಅಂಶಗಳನ್ನು ಈ ಸಿನಿಮಾದಲ್ಲಿ ಬಳಸಿಕೊಂಡಿದ್ದೇನೆ. ಆದರಿದು ಸೀಕ್ವೆನ್ಸ್ ಅಲ್ಲ. ಸೊಗಸಾದ ಕಲ್ಪನೆ, ನನಗೆ ಬೀಚ್ ತುಂಬಾ ಇಷ್ಟ. ಬ್ಯಾಕ್ ಡ್ರಾಪಾಗಿ ಅದನ್ನು ಬಳಸಿಕೊಂಡಿದ್ದೇನೆ. ಪ್ರಕೃತಿ ಸೌಂದರ್ಯವನ್ನು ಹೈಲೈಟ್ ಮಾಡಿದ್ದೇನೆ. ಬೆಂಗಳೂರಿನಿಂದ ಕಾರವಾರದ ಕಡೆಗೆ ಸಾಗುವ ಈ ಲವ್ಲಿ ಜರ್ನಿಯಲ್ಲಿ ಏನೆಲ್ಲ ಸಿಗಬಹುದೆಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಸೃಷ್ಟಿಸುತ್ತಾ ಹೋಗುತ್ತದೆ.”
ಮೊದಲ ಸಿನಿಮಾದಲ್ಲಿ ರಕ್ಷಿತ್ಶೆಟ್ಟಿ ಶ್ವೇತಾ ಜೋಡಿಯಿತ್ತು. ಈ ಚಿತ್ರದಲ್ಲಿ ಪ್ರವೀಣ್ ಮತ್ತು ಮೇಘನಾ ಗಾಂವ್ಕರ್ ಇದ್ದಾರೆ. ಸುನಿ ಹೇಳುವಂತೆ, ಸಿಂಪಲ್ಲಾಗೊಂದ್ ಲವ್ ಸ್ಟೋರಿಗೆ ಮೊದಲೇ ಬರೆದ ಕಥೆ ಇದಂತೆ. ನಾಯಕನ ಕ್ಯಾರೆಕ್ಟರ್ ತೋರಿಸಲು ಟ್ಯೂಬ್ ಪಾತ್ರ ಸೃಷ್ಟಿಯಾಗಿದೆ. ನಾಯಕ ನಾಯಕಿ ಹಾಗೂ ಟ್ಯೂಬ್ ಜೊತೆಯಲ್ಲಿ ಕಾರು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಪಾತ್ರಕ್ಕೆ ತಕ್ಕಂತೆ ಮಾತುಗಳು. ಸಾಮಾನ್ಯ ಜನರು ಮಾತನಾಡುವ ಭಾಷೆಯಲ್ಲೇ ಡೈಲಾಗ್ಸ್ ಹರಿದುಬಂದಿದೆ.
ಚಿತ್ರದ ನಾಯಕಿ ಮೇಘನಾ ಗಾಂವ್ಕರ್ಗಂತೂ ತನ್ನ ಪಾತ್ರದ ಬಗ್ಗೆ ಎಲ್ಲಿಲ್ಲದ ಲವ್, “ನನ್ನನ್ನು ಗಂಭೀರವಾದ ಪಾತ್ರಗಳು, ಇಲ್ಲವೇ ಅಳುಮೂಂಜಿ ತರಹದ ಪಾತ್ರಗಳಲ್ಲಿ ಜನ ನೋಡಿದ್ದರು. ನನಗೆ ಮೊದಲಿನಿಂದಲೂ ನಾನು ನಿಜವಾದ ಬದುಕಿನಲ್ಲಿ ಹೇಗಿದ್ದೀನೋ ಅದೇ ತರಹ ಸಿನಿಮಾದಲ್ಲೂ ನಟಿಸಬೇಕು ಅಂತ ಆಸೆ ಇತ್ತು.
“ಸುನಿಯರು ಈ ಮೊದಲೇ ನನಗೆ ತಮ್ಮ ಮೊದಲ ಚಿತ್ರಕ್ಕೆ ಆಫರ್ ನೀಡಿದ್ದರು. ಆಗ ನಾನು ಬೇರೆ ಚಿತ್ರದಲ್ಲಿ ನಟಿಸುತ್ತಿದ್ದೆ. ಕಾಲ ಕೂಡಿ ಬರಲಿಲ್ಲ. ಎರಡನೇ ಚಿತ್ರಕ್ಕೂ ಕರೆದರು, ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದೆ. ಮೂರನೇ ಬಾರಿ ಲಕ್ಕಿ ಎನ್ನುವಂತೆ `ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಚಿತ್ರ ಮಾಡುವಾಗ ಫೋನ್ ಮಾಡಿ ಹೀಗೊಂದು ಪಾತ್ರವಿದೆ ಅಂದಾಗ ನಾನು ಒಂದೇ ಎಸೆತಕ್ಕೆ ಒಪ್ಪಿಕೊಂಡೆ.
“ಸುನಿ ಮತ್ತು ಅವರ ತಂಡ ಸಖತ್ ಯೂತ್ ಫುಲ್ ಟೀಮ್. ಅಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿರುತ್ತೆ. ನಾವು ಏನೇ ಸಜೆಶನ್ ಕೊಟ್ಟರೂ ಅದು ಸೂಕ್ತ ಎನಿಸಿದರೆ ಖಂಡಿತಾ ಸ್ವೀಕರಿಸುತ್ತಾರೆ. ಅದೊಂದು ಲವ್ಲಿ ಜರ್ನಿಯಾಗಿತ್ತು. ವಂಡರ್ ಫುಲ್ ಎಕ್ಸ್ ಪೀರಿಯನ್ಸ್! ನನ್ನ ಪಾತ್ರ ಹೇಗಿದೆ ಅಂದ್ರೆ ನಾನು ನನ್ನ ರಿಯಲ್ ಲೈಫ್ನಲ್ಲಿ ಹಾಗೆಯೇ ಇದ್ದೀನಿ. ಹಾಗಾಗಿ ನಟಿಸುವಾಗ ಖುಷಿಯಾಗಿತ್ತು. ಅದರಲ್ಲಿ ನನ್ನ ಹೆಸರು ಕೂಡಾ ಖುಷಿ.”
ಪ್ರವೀಣ್ ತೇಜ್ ಮೇಘನಾ ಜೋಡಿ ತೆರೆ ಮೇಲೆ ಸಖತ್ ಫ್ರೆಶ್ ಆಗಿ ಮೂಡಿಬಂದಿದೆ. ಉಡಾಫೆಯೇ ಜೀವನ ಎಂದು ತಿಳಿದಿರುವ ಖುಷ್, ಅವನ ಬದುಕಿನ ಜರ್ನಿಯಲ್ಲಿ ಸಿಕ್ಕ ಖುಷಿ, ಈ ಖುಷ್ ಖುಷಿ ತಮ್ಮ ಜರ್ನಿಯಲ್ಲಿ ಹೇಗೆ ದಡ ಸೇರುತ್ತಾರೆ ಎಲ್ಲ ಸ್ವಾರಸ್ಯಕರ. ಪ್ರವೀಣ್, ಮೇಘನಾ ಜೊತೆಯಲ್ಲಿ ರವಿ ಭಟ್, ಪದ್ಮಜಾ ರಾವ್, ಸುರೇಶ್ ಮಂಗಳೂರು, ವಿಜೇತ, ಮಾಸ್ಟರ್ ಹೇಮಂತ್, ಪಾಂಡು, ಮುಂತಾದ ಕಲಾವಿದರ ಗುಂಪೇ ಇದೆ.
ಈ ಚಿತ್ರವನ್ನು ಆಶು ಬೆದ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಸಲುವಾಗಿ ಅವರೆಲ್ಲೂ ಕಾಂಪ್ರಮೈಸ್ ಆಗದೆ ಹೊಂದಿಸಿಕೊಟ್ಟಿದ್ದಾರೆ. ಕಥೆ, ರಚನೆ, ಸಂಭಾಷಣೆ, ಗೀತರಚನೆ, ನಿರ್ದೇಶನ ಸುನಿ ಅವರದಾಗಿದೆ. ಸಂಗೀತ ಭರತ್ ಬಿ.ಜೆ., ಸಾಯಿಕಿರಣ್ ಅವರದು. `ಎಲ್ಲೂ ಮಾರದ ಹೃದಯ….’ ಹಾಡು ಈಗಾಗಲೇ ಸಾಕಷ್ಟು ಹಿಟ್ ಆಗಿದೆ.
ಹೊಸದನ್ನು ಸ್ವೀಕರಿಸುತ್ತಾ ಬಂದಿರುವ ಪ್ರೇಕ್ಷಕರ ಬಗ್ಗೆ ನಿರ್ಮಾಪಕರಿಗೂ, ನಿರ್ದೇಶಕರಿಗೂ ನಂಬಿಕೆ ಇರೋದ್ರಿಂದ, `ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಚಿತ್ರವನ್ನು ಕನ್ನಡಿಗರು ಪ್ರೀತಿಯಿಂದಲೇ ಸ್ವೀಕರಿಸುತ್ತಾರೆ ಎನ್ನುತ್ತಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕನಾದ ಫಲ ಸಿಗಲಿ ಎಂದು ಹಾರೈಸೋಣ.
– ಸರಸ್ವತಿ