ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪ್ರಸಿದ್ಧ ನಂದಿಯನ್ನೇ ಹೋಲುವ ಬಸಣ್ಣ (ನಂದಿ)ನ ಮೂರ್ತಿಯೊಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದ ಸನಿಹದಲ್ಲಿರುವ ಸುಪ್ರಸಿದ್ಧ ಕಾಲಕಾಳೇಶ್ವರ ದೇವಾಲಯದ ಅನತಿ ದೂರದಲ್ಲಿದೆ. ಸಂಪೂರ್ವಾಗಿ ಕಾಡು ಕಲ್ಲಿನಲ್ಲಿಯೇ ಕೆತ್ತಿದ, ಅದರ ಕೆತ್ತನೆ ನಾಜೂಕಲ್ಲದಿದ್ದರೂ ನೋಡುಗರ ಗಮನವನ್ನು ಸೆಳೆಯುತ್ತದೆ. ಈ ಬೃಹದಾಕಾರದ ಏಕಶಿಲೆಯ ನಂದಿ ಪ್ರಚಾರವಿಲ್ಲದೆ ಎಲೆಯ ಮರೆಯ ಕಾಯಿಯಂತೆ, ಕಾಲಕಾಳೇಶ್ವರದಿಂದ ಗುಡೂರಿಗೆ ಹೋಗುವ ಕಣಿವೆಯ ಮಾರ್ಗದಲ್ಲಿ ರಸ್ತೆಗೆ ಹೊಂದಿ ನಿಂತಿದೆ. ಇದು 25 ಅಡಿ ಉದ್ದ, 12 ಅಡಿ ಅಗಲ ಮತ್ತು 23 ಅಡಿ ಎತ್ತರವನ್ನು ಹೊಂದಿದೆ. ಈ ಭಾಗದಲ್ಲಿ ಇದನ್ನು `ಆನೆಗುಂದಿ ಬಸಣ್ಣ’  ಎಂದು ಕರೆಯುತ್ತಾರೆ. ಈ ನಂದಿಯನ್ನು ಯಾರು ಯಾವಾಗ ಕೆತ್ತಿದರು? ಎನ್ನುವ ಬಗ್ಗೆ ದಾಖಲೆಗಳು ಸಿಗುವುದಿಲ್ಲ.

ಜನಪದರು ಹೇಳುವ ಐತಿಹ್ಯಗಳ ನೆರಳಲ್ಲಿ ಒಂದಷ್ಟು ಇತಿಹಾಸ ಹುದುಗಿರುತ್ತದೆ. ಸನಿಹದ ಕಾಲಕಾಳೇಶ್ವರ ದೇವಾಲಯದ ಬಹಳಷ್ಟು ಕಟ್ಟಡಗಳು ವಿಜಯನಗರದ ಶೈಲಿಯಲ್ಲಿವೆ. ಈ ಹೆಸರಿನ ಸುಳಿವಿನಿಂದ ಇದು 16ನೇ ಶತಮಾನಕ್ಕೆ ಸೇರಿದೆ. ಈ ಹಿನ್ನೆಲೆಯಲ್ಲಿ ನಂದಿಯನ್ನು ವಿಜಯನಗರದ ಅರಸರ ಕೊನೆಯ ಸಂತತಿಯವರಾದ ಆನೆಗುಂದಿ ಅರವೀಡು ಅರಸರ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ.1572-1680) ಕೆತ್ತಿದ್ದಾರೆಂದು ಸ್ಪಷ್ಟವಾಗುತ್ತದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆರಂಭದಲ್ಲಿ ಮತ್ತು ಅದರ ಕೊನೆಯ ಕಾಲದಲ್ಲಿ ಕೂಡಾ ಆನೆಗುಂದಿಯು ಪ್ರಮುಖ ಸ್ಥಾನವಾಗಿ ಹಾಗೂ ರಾಜಧಾನಿಯಾಗಿ ಉಳಿದ ಸ್ಥಳ. ಅದು ಎಂದಿಗೂ ಶತ್ರುಗಳ ವಶವಾಗಲಿಲ್ಲ. ಅಳಿಯ ರಾಮರಾಯನ ಅವಸಾನದ ನಂತರ ವಿಜಯನಗರದ ಪತನವಾಯಿತು.

ಆ ನಂತರ ಅರವೀಡು ಸಂತತಿಯ ಅರಸರ ಶಾಖೆಯೊಂದು ಸ್ವಲ್ಪ ದಿನಗಳ ಕಾಲ ಆನೆಗುಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿತು. ಇದೇ ಅರಸರು ಮುಂದೆ ಪೆನುಕೊಂಡಕ್ಕೆ ತೆರಳಿದರು. ಇವರು ಆನೆಗುಂದಿಯಲ್ಲಿರುವಾಗ ಅರವೀಡು ಸಂತತಿಯ ಮೊದಲ ಅರಸ ಶ್ರೀರಂಗರಾಯರು (ಕ್ರಿ.ಶ.157-285) ಆಳ್ವಿಕೆ ಮಾಡಿದರು. ಈ ಅರಸನಿಗೆ ಬೇಟೆಯ ಖಯಾಲಿ ಇತ್ತೆಂದು, ಈ ಪ್ರದೇಶದಲ್ಲಿ ಆನೆಗುಂದಿಗೆ ಅರಸರು ಬೇಟೆಗೆ ಬರುತ್ತಿದ್ದರೆಂದು ಬಹಳಷ್ಟು ಕಥೆ ಮತ್ತು ಐತಿಹ್ಯಗಳು ಇಲ್ಲಿನ ಪರಿಸರದಲ್ಲಿವೆ.

ಇಲ್ಲಿಂದ ಸ್ವಲ್ಪ ದೂರದಲ್ಲಿರುವ ನಾಗೇಂದ್ರಗಡದ ಸನಿಹದ ಹೊಗರಿ ಕೆರೆಯ ಪ್ರದೇಶದ, ಶಾಸನಗಳಲ್ಲಿ ಪೊಂಗರಿ ಎನ್ನಿಸಿಕೊಂಡ ಪರಿಸರದಲ್ಲಿ ಈ ಅರಸನು ಬೇಟೆಗೆ ಬಂದು ಪೊಂಗರಿಯ ಒಡತಿ ಹೊಂಬಾಳೆ ಎಂಬುವಳನ್ನು ಮೋಹಿಸಿದನೆಂದು ನಾಗೇಂದ್ರಗಡದ ಪರಿಸರ ಜನರು ಕಣ್ಣಿಗೆ ಕಟ್ಟುವಂತೆ ಕಥೆಯನ್ನು ಹೇಳುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಅರಸ ಶ್ರೀರಂಗರಾಯನು ಈ ಭಾಗದಲ್ಲಿ ಬಹಳಷ್ಟು ಸಖ್ಯವನ್ನು ಹೊಂದಿರಬೇಕು.

ವಿಜಯನಗರ ಪತನದ ನಂತರ ಜಿಗುಪ್ಸೆ ಹೊಂದಿದ ಈ ಅರಸನು ದೇವತಾ ಸೇವೆ, ಮಂದಿರಗಳ ಜೀರ್ಣೋದ್ಧಾರ, ಮೂರ್ತಿಗಳನ್ನು ಕೆತ್ತಿಸುವ ಕೈಂಕರ್ಯ ಕೈಗೊಂಡಿರಬೇಕು. ಇದರಿಂದ ಈ ಭಾಗದಲ್ಲಿ ಸಂಚರಿಸಿದ ಈ ಅರಸ ಕ್ರಿ.ಶ.157-285ರ ಸಮಯದಲ್ಲಿಯೇ ನಂದಿ ಮೂರ್ತಿಯನ್ನು ಕೆತ್ತಿಸಿದ್ದಲ್ಲದೇ, ಪಕ್ಕದಲ್ಲಿರುವ ಕಾಲಕಾಳೇಶ್ವರ ದೇವಾಲಯದ ಜೀರ್ಣೋದ್ಧಾರಗೈದನು. ಅದಕ್ಕೆ ಸಾಕ್ಷಿಯಾಗಿ ಇಲ್ಲಿನ ಕಟ್ಟಡಗಳು ವಿಜಯನಗರದ ಶೈಲಿಯಲ್ಲಿವೆ. ಇದೇ ದೇವಾಲಯದ ಪಕ್ಕದಲ್ಲಿ ಕುದುರೆಗುಂಡು ಎನ್ನುವ ಸ್ಥಳದಲ್ಲಿ ಕೂಡಾ ಇನ್ನೊಂದು ನಂದಿ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿಸಿ ಅಪೂರ್ಣಗೊಳಿಸಿದ್ದಾರೆ. ಇದೂ ಕೂಡಾ ಗಮನಾರ್ಹ ಅಂಶವಾಗಿದೆ.

ಹೋಗುವ ಮಾರ್ಗ ಈ ನಂದಿಯನ್ನು ನೋಡಲು ಬಯಸುವವರು ಗದಗದ ಮೂಲಕ ಕಾಲಕಾಳೇಶ್ವರಕ್ಕೆ, ಇಲ್ಲವೇ ಹುನಗುಂದ ಮೂಲಕ ಗೂಡೂರದಿಂದ ಗಜೇಂದ್ರಗಡಕ್ಕೆ ಹೋಗುವ ದಾರಿಯಲ್ಲಿ  ಇದು ಸಿಗುತ್ತದೆ. ಇಲ್ಲಿ ಟಾರ್‌ ರಸ್ತೆ ಇದೆ. ಕಾಲಕಾಳೇಶ್ವರ ದೇವಸ್ಥಾನದಿಂದ ಕೂಗಳತೆ ದೂರದಲ್ಲಿದೆ. ಯಾವ ಭಾಗದಿಂದಾದರೂ ಇಲ್ಲಿಗೆ ತಲುಪಲು ತೊಂದರೆ ಇಲ್ಲ. ಸಾಕಷ್ಟು ಬಸ್‌ಗಳ ವ್ಯವಸ್ಥೆ ಇದೆ.

ಡಾ. ಮಲ್ಲಿಕಾರ್ಜುನ ಕುಂಬಾರ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ