ಮದುವೆ ಅನುಬಂಧವಾಗಿರಲಿ
ಧಾರ್ಮಿಕ ವ್ಯವಸ್ಥೆಯಲ್ಲೆ ವೈವಾಹಿಕ ವಿವಾದ ಹೊಸದೇನಲ್ಲ. ಆದರೆ ಈಗ ವೈವಾಹಿಕ ವಿವಾದಗಳಿಂದಾಗಿ ಆತ್ಮಹತ್ಯೆಗಳು ಅಥವಾ ವಿಮಾನ ಅಪಹರಣದಂತಹ ಘಟನೆಗಳವರೆಗೆ ವಿಶ್ವವಿಡೀ ಪ್ರಮುಖ ಸುದ್ದಿಗಳಾಗುತ್ತವೆ. ವಿವಾಹದ ನಂತರ ಸ್ತ್ರೀ ಪುರುಷರಿಗೆ ಅವರು ಕಲ್ಪಿಸಿಕೊಂಡಿದ್ದ ಸುರಕ್ಷತೆ ಹಾಗೂ ಜೊತೆ ಸಿಗುವುದಿಲ್ಲ. ಈಗ ನಾಟಕೀಯ ರೀತಿಯಲ್ಲಿ 5ನೇ ಮಹಡಿಯಿಂದ ದುಮುಕುವುದು ಅಥವಾ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳುವುದು ಹೆಚ್ಚಾಗಿ ಮದುವೆ ಪ್ರಭಾವಶಾಲಿ ಅಂತ ಅನಿಸುತ್ತದೆ. ಮಹಿಳೆಯರು ಇವೆಲ್ಲವನ್ನೂ ಮಾಡುತ್ತಾರೆ. ಗಂಡಸೂ ಸಹ ಕಡಿಮೆಯೇನಲ್ಲ. ತಮ್ಮ ನೋವನ್ನು ತಪ್ಪು ರೀತಿಯಲ್ಲಿ ಪ್ರಕಟಿಸುತ್ತಾರೆ.
ವೈವಾಹಿಕ ಸಂಸ್ಥೆ ಈಗ ಅಸಲಿಗೆ ಒಂದು ಹೊಸ ತಿರುವಿನಲ್ಲಿದೆ. ಹಿಂದೆ ಸ್ತ್ರೀ-ಪುರುಷರಿಗೆ ಲೈಂಗಿಕ ತೃಪ್ತಿ ಮತ್ತು ಮಕ್ಕಳ ಪಾಲನೆಗೆ ಮದುವೆಯಾಗುವ ಅನಿವಾರ್ಯತೆ ಇತ್ತು. ಈಗ ಪತಿಪತ್ನಿಯರು ಇಚ್ಛಿಸಿದಾಗಲೇ ಮಕ್ಕಳಾಗುತ್ತಾರೆ. ಒಂದು ವೇಳೆ ಮಕ್ಕಳಾಗದಿದ್ದರೆ ಮದುವೆ ಏಕಾಗಬೇಕು ಎಂಬ ಪ್ರಶ್ನೆ ಏಳುತ್ತದೆ. ಒಂದುವೇಳೆ ಮದುವೆ ಆಗಿ, ಸಂಗಾತಿ ಒಳ್ಳೆಯ ರಕ್ಷಕ ಅಥವಾ ಮಿತ್ರನಾಗದಿದ್ದಲ್ಲಿ ಈ ಸಂಬಂಧವನ್ನು ಮುರಿದುಕೊಳ್ಳಬೇಕೆಂದು ಯೋಚಿಸತೊಡಗುತ್ತಾರೆ. ಸಂಬಂಧವನ್ನು ಮುರಿದುಕೊಂಡರೆ ಹಗಲು ರಾತ್ರಿ ನೆಮ್ಮದಿ ಇರುವುದಿಲ್ಲ. ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಅಥವಾ ಬಹಳಷ್ಟು ಹಣ ಖರ್ಚಾಗುತ್ತದೆ.
ಇಷ್ಟೊಂದು ವಿಚ್ಛೇದನಗಳು ಆಗುತ್ತಿರುವಾಗ ಮದುವೆ ಒಂದು ಟೆಂಪರರಿ ಸಲ್ಯೂಶನ್ ಆದರೆ ಮಾಡುವುದಾದರೂ ಏನು ಎಂದು ಯೋಚಿಸಬೇಕಾಗುತ್ತದೆ. 3000-4000 ವರ್ಷಗಳ ಈ ಹಳೆಯ ಪದ್ಧತಿಯನ್ನು ನಾವು ಹೊರಲಾಗುತ್ತದೆಯೇ?
ಸರಿಸುಮಾರು ಪ್ರತಿ ದೇಶದಲ್ಲಿಯೂ ವೈವಾಹಿಕ ಕಾನೂನುಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವೆಡೆ ಸಲಿಂಗಿಗಳಿಗೆ ಮದುವೆಯಾಗುವ ಹಕ್ಕು ಕೊಡುವ ಸವಾಲಿದೆ. ಕೆಲವೆಡೆ ಒಂದಕ್ಕಿಂತ ಹೆಚ್ಚು ಮದುವೆಯಾಗುವ ವಿವಶತೆ ಅಥವ ಅದರಿಂದ ಮುಕ್ತಿಯ ಬಗ್ಗೆ ವಿವಾದವಿದೆ. ಕೆಲವೆಡೆ ವಿಚ್ಛೇದನದ ನಂತರದ ತೊಂದರೆಗಳು ಮತ್ತು ಮುಂದೆ ಮಕ್ಕಳ ರಕ್ಷಣೆಯ ವಿಷಯಗಳ ಚರ್ಚೆ.
ಮದುವೆಯ ಮೇಲೆ ಧರ್ಮದ ಪ್ರಭಾವದಿಂದಲೇ ಹೆಚ್ಚು ತೊಂದರೆಗಳು ಉಂಟಾಗುತ್ತಿವೆ. ಅಸಲಿಗೆ ಮದುವೆ ಒಂದು ಅನುಬಂಧವಾಗಬೇಕು. ಅದನ್ನು ಕರಾರು ಮತ್ತು ಕಾನೂನಿನ ಮೂಲಕ ಮುರಿಯಬಹುದು. ಕಾರ್ಮಿಕರು 6-7 ರ್ಷಗಳ ಕಾಲ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾರೆ, ಸಂಪಾದಿಸುತ್ತಾರೆ, ಗೆಳೆಯರಾಗುತ್ತಾರೆ. ಮುಂದೆ ಟಾಟಾ, ಬೈ ಬೈ ಹೇಳಿ ಇನ್ನೊಂದು ಕಂಪನಿಗೆ ಸೇರುತ್ತಾರೆ. ಮದುವೆಯಲ್ಲಿ ಹೀಗೇಕೆ ಆಗಬಾರದು?
ಮದುವೆಯ ಮಹತ್ವವನ್ನು ಮತ್ತು ವೈವಾಹಿಕ ಸಂಸ್ಥೆಯ ಉಪಯೋಗವನ್ನು ಕೀಳಾಗಿ ಕಾಣಲು ಹೀಗೆ ಹೇಳುತ್ತಿಲ್ಲ. ಇದನ್ನು ಏಕೆ ಹೇಳಲಾಗುತ್ತಿದೆಯೆಂದರೆ ಮದುವೆಯಿಂದ ಆತ್ಮಹತ್ಯೆಗಳು, ಹತ್ಯೆಗಳು ನಡೆಯಬೇಕೆ? ಕೋರ್ಟುಗಳಿಗೆ ಸುತ್ತುತ್ತಿರಬೇಕೆ? ಹೆಂಡತಿಯರು ಗಂಡನ ಕೈಯಲ್ಲಿ ಏಟು ತಿನ್ನುತ್ತಿರಬೇಕೆ? ಆಸ್ತಿ ಹಂಚಿಕೊಳ್ಳುವ ಹಕ್ಕು ಮದುವೆಯಿಂದಲೇ ಸಿಗಬೇಕೆ? ಇಂದು ಮದುವೆಯನ್ನು ದೇವರ ಕೊಡಗೆಯೆಂದು ಒಪ್ಪಿ ಸಾಯುವವರೆಗೆ ಇಡೀ ಜೀವನ ಒಟ್ಟಿಗೆ ಇರುತ್ತೇವೆಂದು ಯೋಚಿಸಲಾಗುತ್ತದೆ. ಹಾಗೆ ಆಗದಿದ್ದರೆ ದೇವರು ನಮ್ಮನ್ನು ಶಿಕ್ಷಿಸುತ್ತಿದ್ದಾನೆ ಎಂದುಕೊಳ್ಳುತ್ತಾರೆ.
ಮದುವೆ ದೇವರ ಅಥವಾ ಪ್ರಕೃತಿಯ ಕೊಡುಗೆ ಅಲ್ಲ. ಮನುಷ್ಯ ತಾನೇ ಮಾಡಿಕೊಂಡ ಒಂದು ಏರ್ಪಾಡು. ಅದರಿಂದ ಸ್ತ್ರೀ-ಪುರುಷರ ಸಂಬಂಧ ಕೆಲವು ನಿಮಿಷಗಳಲ್ಲ, ಅನೇಕ ವರ್ಷಗಳು ಇರುವಂಥದ್ದು. ಮದುವೆ ಸ್ಥಿರತೆ ಕೊಡುತ್ತದೆ. ಇಬ್ಬರಿಗೂ ರಕ್ಷಣೆ ಕೊಡುತ್ತದೆ. ಸಹಾನುಭೂತಿ ನೀಡುತ್ತದೆ. ಇಬ್ಬರೂ ಒಟ್ಟಿಗೇ ಬದುಕು ವಚನ ಕೊಟ್ಟಿದ್ದು ಕಾಯಿಲೆ ಕಷ್ಟಗಳ ಸಂದರ್ಭದಲ್ಲಿ ಕೆಲಸಕ್ಕೆ ಬರುತ್ತದೆ. ಒಬ್ಬರಿಗೆ ತಗುಲಿದ ಪೆಟ್ಟು ಇನ್ನೊಬ್ಬರಿಗೆ ನೋಂಟು ಮಾಡುತ್ತದೆ.
ಸುಪ್ರೀಂ ಕೋರ್ಟ್ ಈಗ ಮುಸ್ಲಿಂ ಪತಿ 4 ವಿವಾಹವಾಗುವ ಕಾನೂನಿನ ಬಗ್ಗೆ ವಿಚಾರ ಮಾಡುತ್ತಿದೆ. ಮದುವೆ ಒಬ್ಬರ ಜೊತೆಯಾಗಲಿ, 4 ಜನರ ಜೊತೆಯಾಗಲಿ ಧರ್ಮ ಮತ್ತು ಕಾನೂನಿಗೆ ಏನು ವ್ಯತ್ಯಾಸವಾಗುತ್ತದೆ? ಒಂದು ವೇಳೆ ಸ್ತ್ರೀ-ಪುರುಷರ ಸಂಬಂಧ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತಿದ್ದರೆ ಯಾರಿಗೇನು ತೊಂದರೆ? ಧರ್ಮವೇಕೆ ತಪ್ಪೆಣಿಸಬೇಕು? ಯಾವುದು ತಪ್ಪು ಯಾವುದು ಸರಿ ಎಂದು ಸುಪ್ರೀಂ ಕೋರ್ಟ್ ಏಕೆ ವಿಚಾರ ಮಾಡಬೇಕು?
ವೈವಾಹಿಕ ಸಂಸ್ಥೆಯಲ್ಲಿ ಕಾನೂನು, ನಿಯಮಗಳು ಫ್ಲೆಕ್ಸಿಬಲ್ ಆಗಿರಬೇಕು ಹಾಗೂ ಅನುಬಂಧದ ಆಧಾರದಲ್ಲಿರಬೇಕು. ಅವರನ್ನು ಧರ್ಮ, ದೇಶ, ಜಾತಿ, ಊರು, ಪಂಚಾಯಿತಿಗಳೊಂದಿಗೆ ಹೊಂದಿಸಬಾರದು. ಇದು ಸುಖದ ವಿಷಯ. ಸುಖ ಪಡೆಯಬೇಕೆಂದಿದ್ದರೆ ಸ್ತ್ರೀ-ಪುರುಷರು ಸ್ವತಃ ನಿರ್ಧಾರ ಕೈಗೊಳ್ಳಬೇಕು. ಅವರ ಬಗ್ಗೆ ಬೇರೆಯವರು ನಿರ್ಧಾರ ತೆಗೆದುಕೊಂಡರೆ ವಾದ ವಿವಾದಗಳಾಗುತ್ತವೆ. ಇಷ್ಟವಿಲ್ಲದ ಬೇಡಿಕೆಗಳು ಬರುತ್ತವೆ, ಹಿಂಸೆಯಾಗುತ್ತದೆ. ಹತ್ಯೆಗಳಾಗುತ್ತವೆ, ಆತ್ಮಹತ್ಯೆಗಳಾಗುತ್ತವೆ.
ವಿಷಾದವೆಂದರೆ, ಸಮಾಜ ಈ ಪರಂಪರೆಗಳೊಂದಿಗೆ ಹೇಗೆ ಬಂಧಿಸಲ್ಪಟ್ಟಿದೆ ಎಂದರೆ ಈ ಪುರಾತನ ಹೊದಿಕೆಯನ್ನು ಎಸೆಯಲಾಗುತ್ತಿಲ್ಲ, ಹೊಲೆಯಾಗುತ್ತಿಲ್ಲ.
ವಿಚ್ಛೇದನದ ಬಳಿಕ ಮಕ್ಕಳು ಯಾರ ಬಳಿ ಸುರಕ್ಷಿತ?
ವಿಚ್ಛೇದನದ ಹೆಚ್ಚುತ್ತಿರುವ ಪ್ರಕರಣಗಳ ಜೊತೆ ಜೊತೆ ಮಕ್ಕಳನ್ನು ಯಾರ ಬಳಿ ಬಿಡಬೇಕೆಂಬ ವಿಷಯ ಕೂಡ ಗಂಭೀರವಾಗುತ್ತ ಹೊರಟಿದೆ. ಮಕ್ಕಳು ತಾಯಿಯ ಬಳಿಯೇ ಹೆಚ್ಚು ಸುರಕ್ಷಿತವಾಗಿರುತ್ತವೆ ಎಂದೆಲ್ಲ ಹೇಳಲಾಗುತ್ತದೆ. ಆದರೆ ನ್ಯಾಯಾಲಯಗಳು ಇದನ್ನೊಂದೇ ಅಂತಿಮ ಪ್ರಮಾಣ ಎಂದು ಒಪ್ಪುವುದಿಲ್ಲ. ಇದು ಸರಿಯಾಗೇ ಇದೆ.
ಭಾರತೀಯ ಸನ್ನಿವೇಶದಲ್ಲಿ ಅಜ್ಜಿ ತಾತನ ಉಪಸ್ಥಿತಿ ಕೂಡ ಹೆಚ್ಚು ಮಹತ್ವದ್ದಾಗುತ್ತದೆ. ಒಂದು ವೇಳೆ ಮಗುವಿನ ಕಸ್ಟಡಿ ತಾಯಿಗೆ ಲಭ್ಯವಾಗದೇ ತಂದೆಗೆ ದೊರೆತರೆ ಮಕ್ಕಳಿಗೆ ಬೋನಸ್ ರೂಪದಲ್ಲಿ ಅಜ್ಜಿ, ತಾತನ ಪ್ರೀತಿ ದೊರೆಯುತ್ತದೆ.
ಇದು ಕೇವಲ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನ ಸತ್ಯವಾಗಿದೆ. ತಂದೆ ತಾಯಿ ಕೊಡಲಾರದ ಪ್ರೀತಿ ಮತ್ತು ಶಿಕ್ಷಣವನ್ನು ಅಜ್ಜಿ ಮತ್ತು ತಾತ ಕೊಡಬಲ್ಲರು.
ಸದಾ ಕಚ್ಚಾಡುವ ದಂಪತಿಗಳ ಬಾಬತ್ತಿನಲ್ಲಿ ಇದು ಇನ್ನಷ್ಟು ಸತ್ಯವಾಗಿದೆ. ಏಕೆಂದರೆ ಯಾವ ಪತ್ನಿಯರು ಜಗಳವಾಡುತ್ತಿರುತ್ತಾರೊ, ಅವರ ತಾಯಿತಂದೆಯರು ಮಗಳಿಗಿಂತ ಹೆಚ್ಚು ಉಗ್ರ ಸ್ವಭಾವದವರಾಗಿರುತ್ತಾರೆ. ಅಂತಹ ವಾತಾವರಣದಲ್ಲಿ ಮಕ್ಕಳು ಬೆಳೆಯುವುದು ಅಷ್ಟೊಂದು ಸಮರ್ಪಕವಾದುದಲ್ಲ.
ಭಾರತದಲ್ಲಿ ಹಿಂದೂ ಪಾರಂಪರಿಕ ಕಾನೂನು ಕೂಡ ಇದೆ. ಅಜ್ಜಿ ತಾತನ ಆಸ್ತಿಯಲ್ಲಿ ಸೊಸೆಗಲ್ಲ, ಮಗ-ಮಗಳಿಗೆ ಹಕ್ಕು ಇರುತ್ತದೆ. ಅವರಿಂದಲೇ ಮೊಮ್ಮಕ್ಕಳಿಗೂ ಹಕ್ಕು ದೊರೆಯುತ್ತದೆ. ಯಾವ ಮಕ್ಕಳು ದುಃಖತಪ್ತರಾಗಿ ವಿಚ್ಛೇದನ ಪಡೆದ ತಾಯಿಯ ಬಳಿ ಉಳಿದುಬಿಡುತ್ತಾರೊ, ಅಜ್ಜಿ ತಾತ (ಅಪ್ಪನ ತಾಯಿ, ತಂದೆ) ಮೊಮ್ಮಕ್ಕಳಿಗೆ ಸಿಗಬೇಕಾದ ಆಸ್ತಿಯನ್ನು ಕೊಡದೇ ಇದ್ದರೂ ಆಶ್ಚರ್ಯವಿಲ್ಲ.
ಮಕ್ಕಳಿಗೆ ರಕ್ಷಣೆ ಕೊಡುವ ಸಂದರ್ಭದಲ್ಲಿ ನ್ಯಾಯಾಲಯಗಳು ಈ ಸಂಗತಿಯ ಬಗ್ಗೆ ಗಮನವಹಿಸಬೇಕು. ಏಕೆಂದರೆ ಸಾಮಾನ್ಯವಾಗಿ ವಿಚ್ಛೇದನದ ಸಂದರ್ಭದಲ್ಲಿ ಮಹಿಳೆಯರು `ಬಾಳುವುದಿಲ್ಲ, ಬಾಳಲು ಬಿಡುವುದಿಲ್ಲ’ ಎಂಬ ಹಠಕ್ಕೆ ಎಷ್ಟು ಅಂಟಿಕೊಂಡಿರುತ್ತಾರೆಂದರೆ, 15-20 ವರ್ಷಗಳ ಬಳಿಕ ಏನಾಗಬಹುದು ಎಂಬ ಯೋಚನೆಯನ್ನು ಕೂಡ ಅವರು ಮಾಡುವುದಿಲ್ಲ.
ಒಂದು ವೇಳೆ ಮಕ್ಕಳನ್ನು ತಂದೆಯ ಅಧೀನಕ್ಕೆ ಕೊಟ್ಟಾಗ, ತಂದೆಗೆ ಮರುವಿವಾಹ ಮಾಡಿಕೊಳ್ಳಬೇಕೆಂಬ ಒತ್ತಡವಿರದು. ತಾಯಿಗೆ ತನ್ನ ಕೆರಿಯರ್ನಲ್ಲಿ ತೊಡಗಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಒಂದು ವೇಳೆ ತಾಯಿಗೆ ತನ್ನ ಸಹೋದರ ಸಹೋದರಿಯರ ಜೊತೆ ಇರಬೇಕಾಗಿ ಬಂದರೆ, ಅವಳು ಹೆಚ್ಚುವರಿ ಹೊರೆ ಎನಿಸದೆ ಇರಲು ಸಾಧ್ಯವಾಗುತ್ತದೆ. ಮಕ್ಕಳು 3-4 ವರ್ಷ ಅಥವಾ 8-10 ವರ್ಷದವರಿದ್ದರೆ, ವಯಸ್ಕರಾದ ಬಳಿಕ ಅವರು ಏನಾಗಬಹುದೆಂದು ಮೊದಲೇ ತರ್ಕ ಮಾಡುವುದು ಮೂರ್ಖತನವೇ ಸರಿ. ಅವರು ಯಾರ ಬಳಿ ಇರುತ್ತಾರೊ ಅವರನ್ನೇ ತಪ್ಪಿತಸ್ಥರೆಂದು ಭಾವಿಸುತ್ತಾರೆ. ತಮ್ಮ ಸುಖಜೀನಕ್ಕೆ ಅವರೇ ಕಲ್ಲು ಹಾಕಿದರೆಂದು ಭಾವಿಸಬಹುದು.
ಪುರುಷರೇ ಈಗಲೂ ಆರ್ಥಿಕವಾಗಿ ಸಮರ್ಥರು ಎನ್ನುವ ಸಂಗತಿಯನ್ನು ಮರೆಯಬಾರದು. ವಿಚ್ಛೇದನದ ಜೊತೆಗೆ ಮಕ್ಕಳ ಸಂರಕ್ಷಣೆಯನ್ನೂ ಕೇಳಿ ತಾಯಿ ತನ್ನ ಮಕ್ಕಳ ಸುಖಕ್ಕೆ ಎಳ್ಳು ನೀರು ಬಿಡುತ್ತಾಳೆ.
ಗಂಡ ಕುಡುಕನಾಗಿದ್ದರೆ, ಇನ್ನೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ ಪ್ರಕರಣಗಳಲ್ಲಿ ವಿಚ್ಛೇದನ ಕೇಳುವ ಹೆಂಡತಿಗೆ ಅನುಕೂಲವಾಗಬಹುದು.
ಮಕ್ಕಳು ಹಠಮಾಡುತ್ತಾ ತಂದೆಗಿಂತ ಹೆಚ್ಚಾಗಿ ತಾಯಿಯ ಬಳಿಯೇ ಏನೆಲ್ಲ ಕೇಳುತ್ತವೆ. ತಾಯಿಯ ವಿವಶತೆ ಅವರನ್ನು ಸುಮ್ಮನಾಗಿಸುತ್ತವೆ. ಈ ನಿಟ್ಟಿನಲ್ಲಿ ಭಾವನಾತ್ಮಕವಾಗಿ ಯೋಚಿಸದೇ ಸ್ವಲ್ಪ ವ್ಯವಹಾರಿಕವಾಗಿ ಯೋಚಿಸಬೇಕು. ತಾಯಿಯ ಜೊತೆಗೆ ಮಕ್ಕಳ ನೈಸರ್ಗಿಕ ನಿಕಟತೆ ಎಷ್ಟಿರುತ್ತೊ, ಅದು ಇದ್ದೇ ಇರುತ್ತದೆ.
ಆತ್ಮಹತ್ಯೆ : ಇತರರ ಮೇಲೆ ಆರೋಪ ಹೊರಿಸುವುದು ತಪ್ಪು
ಹರೆಯದ ಹೆಂಡತಿಯ ಸಾವಿನ ದುಃಖ ಗಂಡನ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆ ಎಂಬುದು ಈ ಒಂದು ಉದಾಹರಣೆಯಿಂದ ಗೊತ್ತಾಗುತ್ತದೆ. ಆಕೆಯ ಆತ್ಮಹತ್ಯೆಯ ತಪ್ಪಿಗೆ ಅವನನ್ನು ಜೈಲಿಗೆ ತಳ್ಳಲಾಗಿತ್ತು.
ಸೈನ್ಯದಲ್ಲಿ 14 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ನಾಯಕ್, ವಿನೋದ್ ಕುಮಾರ್ ಜಮ್ಮುಕಾಶ್ಮೀರ ನಿವಾಸಿ. 7-8 ತಿಂಗಳು ಮುಂಚೆಯಷ್ಟೇ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿದ್ದ. ಪ್ರೀತಿ ಮಾಡಿದ್ದೇನೊ ಸರಿ. ಆದರೆ ಅವರ ವೈವಾಹಿಕ ಜೀವನ ಸರಿಹೋಗಲಿಲ್ಲ. ಕೌಟುಂಬಿಕ ಜಗಳದ ಕಾರಣದಿಂದ ಮೊದಲು ಹೆಂಡತಿ ವರದಕ್ಷಿಣೆ ಹಿಂಸೆಯ ಮೊಕದ್ದಮೆ ದಾಖಲಿಸಿದಳು. ಬಳಿಕ ಆತ್ಮಹತ್ಯೆ ಮಾಡಿಕೊಂಡಳು.
ಹೆಂಡತಿಯ ಆತ್ಮಹತ್ಯೆಯ ಕುರಿತು ಇವರು ಕಠಿಣ ಕಾನೂನಿನಿಂದ ಸೈನಿಕ ವಿನೋದ್ ಕುಮಾರ್ನನ್ನು ಬಂಧಿಸಿ ಜೈಲಿಗೆ ಕಳಿಸಲಾಯಿತು. ಸೇನಾಡಳಿತ ಆ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಕೋರಿದರೂ ನ್ಯಾಯಾಲಯ ಬಿಡುಗಡೆ ಮಾಡಲು ಒಪ್ಪಲಿಲ್ಲ. ಒತ್ತಡ ಮತ್ತು ನಿರಾಶೆಯಲ್ಲಿ ಮುಳುಗಿದ ಆ ಸೈನಿಕ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಅವನ ಜೇಬಿನಲ್ಲಿ ಒಂದು ಚೀಟಿ ದೊರಕಿತು. ಅದರಲ್ಲಿ ಅವನು `ನಾನು ನಿನ್ನ ಬಳಿಗೆ ಬರುತ್ತಿದ್ದೇನೆ,’ ಎಂದು ಬರೆದಿದ್ದ.
ವರದಕ್ಷಿಣೆ ಕಾನೂನನ್ನು ಸಮಾಜ ಸುಧಾರಣೆಯ ವಿಧಾನ ಎಂದು ಭಾವಿಸಿ ಮುಖಂಡರು ನಿಟ್ಟುಸಿರುಬಿಟ್ಟರು. ಆದರೆ ಗಂಡ-ಹೆಂಡತಿಯ ಸಂಬಂಧ ಹಣದ ಮೇಲೆ ನಿಂತಿರುವುದಿಲ್ಲ.
ಒಂದು ಸಂಗತಿ ನಿಜ. ಹುಡುಗಿಯ ತಾಯಿ ತಂದೆ ದೊಡ್ಡ ಪ್ರಮಾಣದಲ್ಲಿ ವರದಕ್ಷಿಣೆ ಕೊಡುತ್ತಿದ್ದಾರೆ. ಆದರೆ ಅದೇ ಕಾರಣಕ್ಕಾಗಿ ಮದುವೆ ಮಾಡಿಕೊಳ್ಳುತ್ತಾರೆ ಎನ್ನುವುದು ತಪ್ಪು. ವಿವಾಹವೆನ್ನುವುದು ದೈಹಿಕ ಅವಶ್ಯಕತೆ, ಸಂಗಾತಿ, ಮನೆ ನಿರ್ವಹಣೆ ಹಾಗೂ ಮಕ್ಕಳಿಗಾಗಿ ಮಾಡಿಕೊಳ್ಳಲಾಗುತ್ತದೆ. ಹಣ ಆಕೆಯ ಅವಶ್ಯಕ ಬೇಡಿಕೆಯಾಗಿದೆ. ಆದರೆ ಪ್ರತಿಯೊಬ್ಬ ಪತಿಗೂ ಅತೃಪ್ತ ಪತ್ನಿ ಸುಖ ಕೊಡುವುದಿಲ್ಲ ಎನ್ನುವ ಸತ್ಯ ತಿಳಿದಿರುತ್ತದೆ. ಅದು ಮನೆಯ ಶಾಂತಿಗೂ ಭಂಗ ತರುತ್ತವೆ. ಹೆಂಡತಿಯ ಮನೆಯವರನ್ನು ಅಸಮಾಧಾನಗೊಳಿಸಿ, ಹೆಂಡತಿಯಿಂದ ಬಲವಂತವಾಗಿ ದೈಹಿಕ ಸುಖ ಅನುಭವಿಸಬಹುದು. ಮನೆಗೆಲಸದವಳನ್ನು ಪಡೆಯಬಹುದು. ಆದರೆ ಹೃದಯ ಗೆಲ್ಲುವ ಪತ್ನಿಯನ್ನಲ್ಲ.
ವೈವಾಹಿಕ ಜೀವನದಲ್ಲಿ ಮನಸ್ತಾಪಗಳಿಗೆ ಬಹಳಷ್ಟು ಕಾರಣಗಳಿರುತ್ತವೆ. ಆದರೆ ವರದಕ್ಷಿಣೆ ಕಾನೂನು ಕೇವಲ ಒಂದೇ ವಿಷಯವನ್ನು ಪ್ರತಿಪಾದಿಸುತ್ತದೆ. ಅದೆಂದರೆ, ಹಣ. ಮದುವೆಗಳು ತಾಯಿತಂದೆಯರಿಂದ ನಿರ್ಧರಿಸಲ್ಪಡುತ್ತವೆ. ಒಮ್ಮೊಮ್ಮೆ ಇಜ್ಜೋಡು ವಿವಾಹ ಕೂಡ ನಡೆಯುತ್ತವೆ. ಇದಕ್ಕೆ ಇಬ್ಬರ ಒಪ್ಪಿಗೆ ಇದ್ದರೆ ನಡೆಯುತ್ತವೆ. ಕಳೆದ 25-30 ವರ್ಷಗಳಿಂದ ಒಪ್ಪಿಗೆ ಇಲ್ಲದ ಮದುವೆಗಳು ನಡೆಯುತ್ತಲೇ ಇಲ್ಲ. ಇಂತಹ ಸ್ಥಿತಿಯಲ್ಲಿ ವರದಕ್ಷಿಣೆ ಕಾನೂನನ್ನು ಅನ್ವಯಿಸುವುದು ಸರಿಯಲ್ಲ.
ಮದುವೆಗೂ ಮುನ್ನ ಗಂಡಹೆಂಡತಿ ಪರಸ್ಪರರನ್ನು ಬಲ್ಲವರಾಗಿದ್ದರು ಅಥವಾ ಅರಿಯುತ್ತಿದ್ದರು ಎಂಬುದನ್ನು ಕಾರಣವಾಗಿಟ್ಟುಕೊಂಡು ವರದಕ್ಷಿಣೆ ಹತ್ಯೆ ಅಥವಾ ವರದಕ್ಷಿಣೆ ಆತ್ಮಹತ್ಯೆಗೆ ಕಾರಣವಾಯಿತು ಅಥವಾ ಹೆಂಡತಿಯ ಮೇಲಿನ ದೌರ್ಜನ್ಯಕ್ಕೆ ಕಾರಣವಾಯಿತು ಎಂದು ಪ್ರಕರಣ ದಾಖಲಿಸುವಂತಾಗಬಾರದು.
ನಾಯಕ್ ವಿನೋದ್ ಕುಮಾರ್ರಂತಹ ಸಾವಿರಾರು ಪತಿಯಂದಿರು ಹಾಗೂ ಅವರ ತಾಯಿತಂದೆಯರು ದೇಶದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಅವು ವಾಸ್ತವದಲ್ಲಿ ವಿಚ್ಛೇದನದ ಪ್ರಕರಣಗಳು. ಅಲ್ಲಿ ಗಂಡಹೆಂಡತಿಯರ ನಡುವೆ ಹೊಂದಾಣಿಕೆ ಇರಲಿಲ್ಲ. ಒಬ್ಬರ ಆತ್ಮಹತ್ಯೆಗೆ ಇನ್ನೊಬ್ಬರನ್ನು ಹೊಣೆಯಾಗಿಸಬಾರದು.
ವೈವಾಹಿಕ ಸಂಬಂಧದಲ್ಲಿ ಸುಧಾರಣೆ ತರುವ ಆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅದಕ್ಕೆ ಜೈಲುಗಳು ಸೂಕ್ತ ಸ್ಥಳಗಳಲ್ಲ.