ರೇಖಾ ಎರಡು ವರ್ಷಗಳ ನಂತರ ತಾಯ್ನಾಡಿಗೆ ತೆರಳುತ್ತಿದ್ದಳು. ಲಾಸ್‌ ಏಂಜಲೀಸ್‌ನಲ್ಲಿ ಮಹಿಳಾ ನಿಯತಕಾಲಿಕವೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಖಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ನಾಲ್ಕು ಗಂಟೆಗಳ ಕಾಲ ವಿಳಂಬವಾಗಲಿದೆ ಎಂದು ತಿಳಿಯಿತು.

ರೇಖಾ ಯಾವಾಗಲೂ ಬಿಡುವಿಲ್ಲದಂತಹ ಕೆಲಸದಲ್ಲಿ ನಿರತಳಾಗಿದ್ದಳು. ಹೆಚ್ಚಿನ ಸಮಯವನ್ನು ಬರವಣಿಗೆಯಲ್ಲಿ ಕಳೆಯುತ್ತಿದ್ದ ಅವಳಿಗೆ ನಾಲ್ಕು ಗಂಟೆಗಳ ಕಾಲವನ್ನು ಹೇಗೆ ಕಳೆಯುವುದೆಂದು ತೋಚದಾಯಿತು. ಏರ್‌ಪೋರ್ಟ್‌ನ ಹೊರಗಿನ ರಸ್ತೆಯನ್ನು ನೋಡುತ್ತಾ ಕುಳಿತಿರಲು ಬೇಸರವಾಗಿ ಬ್ಯಾಗ್‌ನಲ್ಲಿದ್ದ ಪ್ಯಾಡ್‌ ಹಾಗೂ ಪೆನ್‌ ತೆಗೆದು ಏನನ್ನೋ ಬರೆಯತೊಡಗಿದಳು.

ಕೆಲವು ಸಮಯದ ನಂತರ ಹಿಂದಿನಿಂದ ಬಂದ ದನಿಯಿಂದ ಹಿಂದೆ ತಿರುಗಿ ನೋಡಿದಳು. ಹಿಂದೆ ದೇವರಾಜ್‌ ನಿಂತಿದ್ದ.

“ಓಹ್‌! ದೇವ್… ನೀನು ಇಲ್ಲಿ?”

“ರೇಖಾ….?!”

“ಹಾಂ…. ರೇಖಾನೇ…… ನೀನೆಲ್ಲಿದ್ದೀಯಾ?”

“ನಾನು ಇಲ್ಲಿಯೇ ಟೆಕ್‌ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೇನೆ.”

“ಐಸಿ! ನಾನು ಸಹ ಇಲ್ಲೇ ಕೆಲಸದಲ್ಲಿದ್ದೇನೆ. ನಮ್ಮ ಸಹಪಾಠಿ ಶ್ವೇತಾಳ ಮದುವೆಗಾಗಿ ಊರಿಗೆ ಹೋಗುತ್ತಿದ್ದೇನೆ.”

“ಶ್ವೇತಾ! ಅವಳು ಹೇಗಿದ್ದಾಳೆ?”

“ ಅವಳು ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದಾಳೆ. ಅವಳ ಪೋಷಕರು ಅವಳೇ ಆಯ್ದುಕೊಂಡ ಬ್ರಿಟಿಷ್‌ ಅಧಿಕಾರಿಯೊಂದಿಗೆ ಅವಳ ಮದುವೆಗೆ ಒಪ್ಪಿಕೊಂಡಿದ್ದಾರೆ.”

“ಹೌದಾ! ಇದೊಂದು ಒಳ್ಳೆಯ ಸುದ್ದಿ.”

“ಹೌದು.”

“ಮತ್ತೆ ನೀನು ಎಂತಹವಳನ್ನು ಮದುವೆಯಾಗಬೇಕೆಂದಿದ್ದೀ?”

“ನಾನು? ನಾನಿನ್ನು ನಿರ್ಧರಿಸಿಲ್ಲ. ನನ್ನ ತಾಯಿ ಯಾರನ್ನು ಹೇಳುವರೋ ಅವಳನ್ನು ಮದುವೆಯಾಗುತ್ತೇನೆ.”

ಕ್ಷಣ ಕಾಲ ಅವನ ಮುಖವನ್ನೇ ನೋಡುತ್ತಿದ್ದ ರೇಖಾಗೆ, `ಶ್ವೇತಾ, ತಾನೊಬ್ಬ ಹೆಣ್ಣಾಗಿಯೂ ಬ್ರಿಟಿಷ್‌ರನನ್ನು ಮದುವೆಯಾಗುತ್ತಿದ್ದಾಳೆ. ಆದರೆ ದೇವ್ ‌ಮಾತ್ರ ತನ್ನ ತಾಯಿಯ ನಿರ್ಧಾರದಂತೆ ಮದುವೆಯಾಗುತ್ತಾನಂತೆ……’ ವಿಚಿತ್ರವೆನಿಸಿತು.

ಆ ಮಾತನ್ನು ಆಡಿ ಮುಗಿಸಿದ ರೇಖಾ ಮಾತು ಬದಲಿಸುತ್ತಾ, “ನಿನ್ನ ಅಂಕಲ್ ಹೇಗಿದ್ದಾರೆ?” ಎಂದು ಕೇಳಿದಳು.

“ಅವರು ಬೆಂಗಳೂರಿಲ್ಲೇ ಇದ್ದಾರೆ.”

“ಮತ್ತೆ ನಮ್ಮ ಕಾಲೋನಿ ಹೇಗಿದೆ?”

“ಅದು ಏನೇನೂ ಬದಲಾಗಿಲ್ಲ. ಜನರೆಲ್ಲರೂ ಹಾಗೆಯೇ ಇದ್ದಾರೆ. ಭೀಮಪ್ಪನೇ ವಾಚ್‌ಮನ್‌ ಆಗಿ ಮುಂದುವರಿದಿದ್ದಾನೆ. ಒಟ್ಟಾರೆ ಎಲ್ಲಾ ಮನೆ ಪರಿಸರ ಹಾಗೆಯೇ ಇದೆ.”

ರೇಖಾ ಸ್ವಲ್ಪ ಹೊತ್ತು ಮೌನವಾದಳು. ಅವಳಿಗೆ ತಾನು ಬಾಲ್ಯದಲ್ಲಿ ಕಳೆದ ದಿನಗಳು ನೆನಪಾದವು. ತನ್ನ ತಂದೆ ತಾಯಿಯರೊಂದಿಗಿದ್ದ ಬೀದಿ, ಅಲ್ಲಿದ್ದ ಪುಟ್ಟ ಮಕ್ಕಳ ಜೊತೆಗಿನ ಆಟಪಾಠಗಳು ನೆನಪಾದವು.

ಕೆಲವು ಹೊತ್ತಿನ ನಂತರ ದೇವರಾಜ್‌, “ನಿನ್ನ ತಾಯಿ ತಂದೆ ಹೇಗಿದ್ದಾರೆ? ನಾನು ಅವರನ್ನು ನೋಡಿ ಎಷ್ಟೋ ವರ್ಷಗಳಾದವು. ಅವರು ನಿವೃತ್ತರಾಗಿ ಮೈಸೂರಿಗೆ ಹೋದ ನಂತರ ನವನಗರ ಭೇಟಿ ಆಗಲೇ ಇಲ್ಲ,” ಎಂದ.

“ನನ್ನ ತಂದೆ ತೀರಿಹೋಗಿ ಎರಡು ವರ್ಷಗಳಾದವು. ತಾಯಿ ಮೈಸೂರಿನಲ್ಲಿಯೇ ಇದ್ದಾರೆ. ಅಲ್ಲಿ ನಮ್ಮ ಸ್ನೇಹಿತರು, ಬಂಧುಗಳು ಇರುವುದರಿಂದ ಅವರಿಗೆ ನನ್ನೊಂದಿಗೆ ಬರಲು ಇಷ್ಟವಿಲ್ಲ.”

“ಹೌದಾ! ನನ್ನನ್ನು ಕ್ಷಮಿಸು. ನಿನ್ನ ತಂದೆ ತೀರಿಹೋದ ವಿಚಾರ ನನಗೆ ತಿಳಿದಿರಲಿಲ್ಲ. ನಾನು ಸಾಕಷ್ಟು ಬಾರಿ ಅವರೊಂದಿಗೆ ಮಾತನಾಡಿದ್ದೆ. ನಾವಿಬ್ಬರೂ ಕೂಡಿ ನಿನ್ನ ಭವಿಷ್ಯದ ವಿಚಾರ ಚರ್ಚಿಸಿದ್ದೆವು.”

“ಹೌದು ನೀನು ಆಗಾಗ ನನ್ನ ಮನೆಗೆ ಬರುತ್ತಿದ್ದೆ.”

“ಆಗೆಲ್ಲ ನಾನು ನೀನು ಸಹ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆ.”

“ನಾನು ಜರ್ನಲಿಸಂ ಓದುತ್ತಿದ್ದರೆ, ನೀನು ಎಂಜಿನಿಯರಿಂಗ್‌.”

“ಹಾಗೆಂದ ಮೇಲೆ ನಾನು ನಿನ್ನ ಬಗ್ಗೆ ಆಸಕ್ತಿ ತಳೆದಿದ್ದೆ ಎನ್ನುವುದು ನಿನಗೂ ತಿಳಿದಿತ್ತು.?”

“ನನಗೇನು… ಇಡೀ ಬೀದಿಗೆ ತಿಳಿದಿತ್ತು….!”

“ಹೌದು ನಿನ್ನ ತಾಯಿ ನನ್ನತ್ತ  ನೋಡುತ್ತಿದ್ದ ರೀತಿಗೆ ನನಗೆ ಒಳಗಿಂದ ಒಳಗೇ ಭಯವಿತ್ತು.”

“ಹೌದು. ಆಗೆಲ್ಲ ನನ್ನತ್ತ ಯಾರಾದರೂ ಹುಡುಗರು ನೋಡುತ್ತಾರೆಂದರೇ ಅಮ್ಮನಿಗೆ ಆತಂಕವಿರುತ್ತಿತ್ತು. ಅದರ ಹಿಂದಿದ್ದದ್ದು ನನ್ನ ಬಗೆಗಿನ ಕಾಳಜಿ. ಆದರೆ ಈಗ ಅದು ಬದಲಾಗಿದೆ. ನಾನು ಯಾರೇ ಪುರುಷ ಸಹೋದ್ಯೋಗಿಗಳ ಬಗ್ಗೆ ಮಾತಾಡಿದರೆ ಕಣ್ಣರಳಿಸಿ ಕೇಳುತ್ತಾರೆ. ನಾನೇನಾದರೂ ಯಾರನ್ನಾದರೂ ಇಷ್ಟಪಡುತ್ತಿದ್ದೇನೆಯೇ? ನನಾಗ್ಯಾರಾದರೂ ಒಬ್ಬ ಸಂಗಾತಿ ಸಿಗುತ್ತಾರೇನೋ ಎಂಬ ನಿರೀಕ್ಷೆ ಅವರದು.”

“ನೀನಿನ್ನೂ ಒಂಟಿಯಾಗಿದ್ದೀಯೇನು? ಮದುವೆಯಾಗಿಲ್ವಾ?” ಕೇಳಿದ ದೇವರಾಜ್‌.

“ವಿಚ್ಛೇದನವಾಗಿದೆ.”

“ಓಹೋ! ಅರೇಂಜ್‌ ಮ್ಯಾರೇಜ್‌…… ವರದಕ್ಷಿಣೆ ಸಮಸ್ಯೆ?”

“ಪ್ರೇಮ ವಿವಾಹ,” ರೇಖಾ ತಲೆ ಎತ್ತದೆ ಉತ್ತರಿಸಿದಳು.

ಕೆಲವು ಕ್ಷಣಗಳ ಮೌನದ ನಂತರ ರೇಖಾಳೇ ಮುಂದುವರಿದು, “ಪ್ರಾರಂಭದಲ್ಲಿ ನಾನು ಪ್ರೀತಿಯ ಸೆಳೆತಕ್ಕೊಳಗಾಗಿ ನನ್ನ ಮನೆ, ತಂದೆತಾಯಿಯರನ್ನು ದೂರ ಮಾಡಿಕೊಂಡು ಉತ್ತರ ಭಾರತದವನೊಡನೆ ಮದುವೆಯಾದೆ. ಹಾಗೇ ಸ್ವಲ್ಪ ಸಮಯ ಚೆನ್ನಾಗಿಯೇ ಇತ್ತು. ಆದರೆ ಸಮಯ ಸರಿದಂತೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯದಿಂದ ಮನಸ್ತಾಪಗಳು ಪ್ರಾರಂಭವಾದವು.”

“ಕಡೆಗದು ವಿಚ್ಛೇದನದವರೆಗೂ ಕರೆದೊಯ್ಯಿತೇನು?”

“ಹೌದು.”

“ಅವನು ಏನೊಂದೂ ಹೇಳದೆ ವಿಚ್ಛೇದನಕ್ಕೆ ಒಪ್ಪಿಕೊಂಡನೆ?”

“ಇಲ್ಲ. ವಿಚ್ಛೇದನಕ್ಕೆ ಮುನ್ನ ಅವನು ನನ್ನನ್ನು ಸಾಕಷ್ಟು ಬಾರಿ ಮನನೋಯುವಂತೆ ಮಾತನಾಡಿದ್ದ. ಅಂತಿಮವಾಗಿ ವಿಚ್ಛೇದನದ ಹಿಂದಿನ ದಿನ ನನ್ನನ್ನು ನಿಂದಿಸಿದ್ದ.”

ಮತ್ತೆ ಕೆಲವು ನಿಮಿಷಗಳ ಕಾಲ ಮೌನ ಆವರಿಸಿತು.

“ಕ್ಷಮಿಸು. ನಾನು ನಿನಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಿ ನೋವುಂಟು ಮಾಡಿದೆ,” ಎಂದ.

ಅವಳು ಮೌನವಾಗಿದ್ದಳು ಮತ್ತೆ ನಿಮಿಷದ ಬಳಿಕ, “ಇದೆಲ್ಲಕ್ಕೂ ನಾನೇ ಕಾರಣ. ನಾನೇ ಮಾಡಿಕೊಂಡ ತಪ್ಪಿಗೆ ಈಗ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ಇಷ್ಟಕ್ಕೂ ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ರೀತಿ ತಪ್ಪು ಮಾಡುತ್ತಾರೆ. ನಿಜವಲ್ಲವೇ?”

“ಹೌದು. ಸತ್ಯವಾಗಿಯೂ.”

“ಬಹುಶಃ ಅವನಿಗೆ ನನಗಿಂತಲೂ ಒಳ್ಳೆಯ ಹುಡುಗಿ ದೊರಕಿರಬಹುದು. ಹಾಗಾಗಿ ನನ್ನ ಕುರಿತು ಅವನಿಗೆ ಬೇಸರ ಮೂಡಿದೆ.”

“ಇಲ್ಲ! ಹಾಗಾಗಲು ಸಾಧ್ಯವಿಲ್ಲ,” ದೇವರಾಜ್‌ ಒಮ್ಮೆಲೇ ಆವೇಶದಿಂದ ಹೇಳಿದ. ಆ ಒಂದು  ಕ್ಷಣದಲ್ಲಿ ಇದುವರೆಗೆ ಕಾಣದ ಬೆಳಕೊಂದು ಅವನ ಕಣ್ಣುಗಳಲ್ಲಿ ಮಿಂಚಿ ಮರೆಯಾದದ್ದನ್ನು ರೇಖಾ ಗಮನಿಸಿದಳು.

“ನಾನು ಮಾಡಿದ ತಪ್ಪೇ ನನ್ನ ಈ ಪರಿಸ್ಥಿತಿಗೆ ಕಾರಣ.”

“ಇಲ್ಲ. ನಿನ್ನನ್ನು ನೀನು ಹಳಿದುಕೊಳ್ಳಬೇಡ. ನಿನ್ನಷ್ಟು ಉತ್ತಮರು ಬೇರಾರೂ ಇರಲಾರರು,” ಎನ್ನುತ್ತಾ ದೇವರಾಜ್‌ ತನ್ನ ಕೈಗಳನ್ನು ಚಾಚಿ ರೇಖಾಳ ಭುಜವನ್ನು ಹಿಡಿದು ಅವಳ ಮುಖದ ಬಳಿ ತನ್ನ ಮುಖನ್ನು ತಂದ.

ಮೊದಲ ಬಾರಿಗೆ ದೇವರಾಜ್‌ನನ್ನು ಅಷ್ಟು ಸನಿಹದಿಂದ ಕಂಡ ರೇಖಾಳ ಕೆನ್ನೆಗಳು ರಂಗೇರಿದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ