ಕುಕಿಂಗ್‌ ರಿಯಾಲಿಟಿ ಶೋನ `ಮಾಸ್ಟರ್‌ ಶೆಫ್‌ ಇಂಡಿಯಾ’ ಸೀಸನ್‌ ಇದರ ವಿಜೇತೆ ಎನಿಸಿದ ಶಿಪ್ರಾ ಖನ್ನ, ಪ್ರಖ್ಯಾತ ಶೆಫ್ ಎನಿಸಿದ್ದಾರೆ. ಮಾಸ್ಟರ್‌ ಶೆಫ್‌ನ ಬಿರುದು ಗಳಿಸಿದ ಬಳಿಕ ಆಕೆ ತಮ್ಮ ಕುಕಿಂಗ್‌ ಶೋ `ಕಿಚನ್‌ ಸ್ಟಾರ್‌ ಕಾ ಸಫರ್‌’ ಶುರು ಮಾಡಿದರು. ಆಕೆ ಕೇವಲ ಶೆಫ್‌ ಮಾತ್ರವಲ್ಲದೆ ಕನ್ಸಲ್ಟೆಂಟ್‌, ಲೇಖಕಿ, ಟಿ.ವಿ.ಶೋ ಆ್ಯಂಕರ್‌ ಕೂಡ. ಆಕೆ ಎಲ್ಲರಿಗಿಂತ ಯಂಗೆಸ್ಟ್, ಎಲ್ಲರಿಗಿಂತ ಗ್ಲಾಮರಸ್‌ ಶೆಫ್‌ ಎನಿಸುತ್ತಾರೆ. ಈಕೆಯ `ಶಿಪ್ರಾಸ್‌ ಕಿಚನ್‌’ ಯೂಟ್ಯೂಬ್‌ನಲ್ಲಿ ಬಲು ಜನಪ್ರಿಯ ಎನಿಸಿದೆ.

ಪಾಕಕಲೆಯ ಪಯಣ

ಈ ಫೀಲ್ಡ್ ನಲ್ಲಿ ಇವರ ಪಯಣ ಆರಂಭಗೊಂಡಿದ್ದೇ ಅಮ್ಮನ ಪ್ರೋತ್ಸಾಹದಿಂದ. “ನಾನು 9 ವರ್ಷದವಳಾಗಿದ್ದಾಗ, ಅಡುಗೆಮನೆಗೆ ಹೋಗಿ ತಿಂಡಿ ತಯಾರಿಸಲು ಆರಂಭಿಸಿದೆ. ಅಲ್ಲಿದ್ದ ತರಕಾರಿ, ಈರುಳ್ಳಿ, ಟೊಮೇಟೊ ಇತ್ಯಾದಿ ಸೇರಿಸಿ ಅತಿ ಸುಲಭದ ತಿಂಡಿ ಉಪ್ಪಿಟ್ಟು ತಯಾರಿಸಿದೆ. ಆದರೆ ಖಂಡಿತಾ ಅದು ಸರಿಯಾಗಿ ಬರಲಿಲ್ಲ, ಎಲ್ಲಾ ಮುದ್ದೆ ಮುದ್ದೆ ಆಯ್ತು! ಅಂದಿನಿಂದ ಅಮ್ಮ, ಅಜ್ಜಿ ಬಳಿ ಅಡುಗೆ ಕಲೆಯಲ್ಲಿ ತರಬೇತಿ ಪಡೆಯತೊಡಗಿದೆ.

“ಮುಂದೆ ಮದುವೆ ಆದಾಗ ಪತಿ ಬಯಸಿದ ತಿನಿಸನ್ನು ಕ್ಷಣ ಮಾತ್ರದಲ್ಲಿ ತಯಾರಿಸುತ್ತಿದ್ದೆ. ಮಗಳು ಹುಟ್ಟಿದ ಮೇಲೆ ಅವಳು ಬಯಸಿದ ಬಗೆಬಗೆಯ ಡಿಶೆಸ್‌ ತಯಾರಿಸತೊಡಗಿದೆ. ಇದಾದ ಮೇಲೆ ನನ್ನ ಜೀವನದಲ್ಲಿ ಹಲವಾರು ಏರುಪೇರುಗಳಾದವು.

“ಮುಂದೆ ನಾನು ವಿಚ್ಛೇದನ ಪಡೆದುಕೊಂಡೆ ಹಾಗೂ ಅಮ್ಮನ ಬಳಿಯೇ ಇರತೊಡಗಿದೆ. ಹೊಸ ವ್ಯಂಜನಗಳನ್ನು ತಯಾರಿಸುವ ನನ್ನ ಹವ್ಯಾಸ ಮುಂದುವರಿಯಿತು. ಫುಡ್‌ ತಯಾರಿಸುವಾಗ ಏನಾದರೂ ಕ್ರಿಯೇಟಿವ್ ‌ಮಾಡಬೇಕೆಂಬುದು ನನ್ನ ವಿಶ್ವಾಸ. ಆಗ ಮಾಸ್ಟರ್‌ ಶೆಫ್‌ನ ಆಡಿಶನ್‌ ಆರಂಭವಾಯ್ತು. ನಾನು ಅದರಲ್ಲಿ ಭಾಗಹಿಸಲೇಬೇಕು ಎಂದು ಅಮ್ಮ ಹಠ ಹಿಡಿದರು. ಅಂತೂ ಅಮ್ಮನ ಹಾರೈಕೆಯಂತೆ ಅದರಲ್ಲಿ ಭಾಗವಹಿಸಿ ವಿಜೇತಳಾದೆ.”

ಮಾಸ್ಟರ್‌ಶೆಫ್‌ನ ಕಾರಣ ನನಗೊಂದು ಫ್ಲಾಟ್‌ ಫಾರ್ಮ್ ಸಿಕ್ಕಿತು. ಅಲ್ಲಿಂದ ನಾನು ರಮ್ಯ ಕನಸು ಕಾಣತೊಡಗಿದೆ. ಹೀಗೆ ಪಾಕಕಲೆಯ ಅದ್ಭುತ ಪಯಣ ಆರಂಭಗೊಂಡಿತು, ಎನ್ನುತ್ತಾರೆ ಶಿಪ್ರಾ.

ಶಿಪ್ರಾರನ್ನು ಗ್ಲಾಮರಸ್‌ ಶೆಫ್‌ ಎಂದೇ ಬಿಂಬಿಸಲಾಗಿದೆ. “ಸಾಮಾನ್ಯವಾಗಿ ಅಡುಗೆ ಮುಗಿಸಿದ ಮೇಲೆ ಎಲ್ಲರೂ ವ್ಯಂಜನವನ್ನು ತಟ್ಟೆಗೆ ಹಾಕಿ ಕೊಡುತ್ತಾರೆ. ಆದರೆ ನನ್ನ ಅಭಿಪ್ರಾಯದಲ್ಲಿ, ಬಡಿಸುವ ಪ್ರಕ್ರಿಯೆ ಬಹಳು ನಾಜೂಕಾಗಿರಬೇಕು. ವ್ಯಂಜನವನ್ನು ನೀಟಾಗಿ ಅಲಂಕರಿಸಬೇಕು. ಅದನ್ನು ಪ್ರೆಸೆಂಟೆಬಲ್ ಆಗಿ ನೀಡಿದರೆ, ಸವಿಯುವವರ ಹಸಿ ಹೆಚ್ಚುವುದಲ್ಲದೆ, ಅದು ಪರ್ಫೆಕ್ಟ್ ಡಿಶ್ ಎಂದೆನಿಸುತ್ತದೆ.

“ಅದೇ ತರಹ ನಮ್ಮನ್ನು ನಾವು ಸದಾ ಪ್ರೆಸೆಂಟೆಬಲ್ ಆಗಿ ಇರಿಸಿಕೊಳ್ಳಬೇಕು. ಇದರಿಂದ ನಿಮ್ಮ ಚಾಯ್ಸ್  ಟೇಸ್ಟ್ ಎಂಥದೆಂಬುದು ಗೊತ್ತಾಗುತ್ತದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಕೆಲಸಕ್ಕೆ ಹೊಸ ಗುರಿ ಸಿಗುತ್ತದೆ. ನಾನು ಎಲ್ಲಾ ಗೃಹಿಣಿಯರಿಗೂ ಹೇಳುವುದು ಒಂದೇ ಮಾತು. ಅವರು ತಮ್ಮ ಕುಟುಂಬದ ಕಡೆ ಮಾತ್ರವಲ್ಲ, ವೈಯಕ್ತಿಕವಾಗಿ ತಮ್ಮ ಕಡೆಗೂ ಅಷ್ಟೇ ಗಮನಕೊಡಬೇಕು. ತಮಗಾಗಿ ಕಿಂಚಿತ್ತೂ ಸಮಯ ಸಿಗುವುದೇ ಇಲ್ಲ ಎಂಬುದು ಎಲ್ಲರ ಅಂಬೋಣ.

“ಇದು ಸರಿಯಲ್ಲವೆಂದು ನನ್ನ ಭಾವನೆ. ನೀವು ಕುಟುಂಬಕ್ಕಾಗಿ ಇಡೀ ದಿನ ಜೀವ ತೇಯುತ್ತೀರಿ, ಕುಟುಂಬಕ್ಕಾಗಿ ನಿಮ್ಮನ್ನೇ ಅರ್ಪಿಸಿಕೊಳ್ಳುತ್ತೀರಿ. ಆದರೆ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ, ನಿಮ್ಮನ್ನೇ ನೀವು ಮರೆತುಬಿಡಬೇಡಿ. ಮುಖ್ಯವಾಗಿ ಈ ಸಮಸ್ಯೆ ಸಾಂಪ್ರದಾಯಿಕ ಸೊಸೆಯರಲ್ಲಿ ಹೆಚ್ಚು. ಮಹಿಳೆಯರು ಸದಾ ಖುಷಿಯಾಗಿರಬೇಕು, ಆಗ ಮಾತ್ರ ಅವರು ತಯಾರಿಸಿದ ಅಡುಗೆ ರಸಗವಳ ಆಗಬಲ್ಲದು.”

ತಮ್ಮ ಸೌಂದರ್ಯದ ಕುರಿತಾಗಿ ಶಿಪ್ರಾ ಹೇಳುತ್ತಾರೆ, “ನನ್ನ ಸೌಂದರ್ಯದ ರಹಸ್ಯ ಎಂದರೆ ಎಲ್ಲ ನ್ಯಾಚುರಲ್ ಆಗಿರಬೇಕೆಂಬುದು. ನಾನು ಮೂಲತಃ ಹಿ.ಪ್ರ.ದವಳು, ಆದರೀಗ ಮುಂಬೈ ನಿವಾಸಿ. ನನಗೆ ನೈಸರ್ಗಿಕ ವಸ್ತುಗಳೇ ಸದಾ ಇಷ್ಟ. ಫೇಸ್‌ಬಾಡಿಗೆ ಹೆಚ್ಚಿಗೇನೂ ಮಾಡಿಕೊಳ್ಳುವುದಿಲ್ಲ.

“ಸದಾ ಖುಷಿ ಖುಷಿಯಾಗಿರಲು ಪ್ರಯತ್ನಿಸುತ್ತೇನೆ. ಆಗ ಮಾತ್ರ ಅದರ ಪ್ರಭಾವ ಮುಖದ ಮೇಲೆ ಆಗುತ್ತದೆ. ಸ್ವಲ್ಪ ವ್ಯಾಯಾಮ ಸಹ ಮಾಡ್ತೀನಿ. ವೈದ್ಯರ ಸಲಹೆ ಪಾಲಿಸುತ್ತೇನೆ. ನಮ್ಮ ಊಟದಲ್ಲಿ ಪ್ರೋಟೀನ್‌, ವಿಟಮಿನ್ಸ್ ಸರಿಯಾದ ಪ್ರಮಾಣದಲ್ಲಿರಬೇಕಾದುದು ಮುಖ್ಯ. ಅದರ ಕಡೆ ನಿಗಾ ವಹಿಸುತ್ತೇನೆ.”

ಆಯ್ಕೆ ಪ್ರಕಾರ ಅಡುಗೆ

ಶಿಪ್ರಾ ಹೇಳುತ್ತಾರೆ, “ಇತ್ತೀಚೆಗೆ ಜನ ಎಲ್ಲಾ ಬಗೆಯ ತಿಂಡಿ ತಿನಿಸುಗಳನ್ನೂ ಸವಿಯಲು ಬಯಸುತ್ತಾರೆ. ಅದೇ ಅನ್ನ ಸಾರು, ಪಲ್ಯಗಳಿಗೆ ಬದಲಾಗಿ `ಫ್ಯೂಷನ್‌ ಫುಡ್‌’ ಬಹಳ ಜನಪ್ರಿಯ. ಇದರಲ್ಲಿ ಹಲವು ಬಗೆಯ ರೆಸಿಪಿ ಬೆರೆಸಿ ಹೊಸ ಡಿಶ್‌ತಯಾರಿಸಬಹುದು. ಇದರಲ್ಲಿ ಬಣ್ಣ, ರುಚಿ ಎರಡೂ ಚೆನ್ನಾಗಿರುತ್ತವೆ. ಮಕ್ಕಳು ಹೆಚ್ಚಾಗಿ ವೆಸ್ಟರ್ನ್‌ ಫುಡ್‌ ಬಯಸುತ್ತಾರೆ. ಪಿಜ್ಜಾ, ಬರ್ಗರ್‌ ಹೆಚ್ಚು ಇಷ್ಟಪಡುತ್ತಾರೆ. ಇಂಥವನ್ನು ಹೆಲ್ದಿ ಆಗಿಸಲು ನಾನು ಬಹಳ ಪ್ರಯತ್ನಿಸುತ್ತೇನೆ.

“ಅಂದರೆ ಓಟ್ಸ್, ಸಲಾಡ್‌, ಬ್ರೌನ್‌ ಬ್ರೆಡ್‌, ಮಲ್ಟಿಗ್ರೇನ್‌ ಆಟಾ ಇತ್ಯಾದಿ ಬಳಸಿ ಹೊಸ ಹೊಸ ರೆಸಿಪಿ ತಯಾರಿಸುತ್ತೇನೆ. ಇಂದಿನ ಮಹಿಳೆ ಆರೋಗ್ಯದ ಕುರಿತಾಗಿ ಜಾಗರೂಕಳಾಗಿದ್ದಾಳೆ. ಗ್ಲೋಬಲ್ ವೆಲ್‌ನೆಸ್‌ನ ರಿಸರ್ಚ್‌ನಲ್ಲೂ ಭಾರತದಲ್ಲಿ ಸ್ಥೂಲಕಾಯದ ಸಮಸ್ಯೆ ಬಹಳ ಹೆಚ್ಚುತ್ತಿರುವುದು ಗಮನಿಸತಕ್ಕ ಅಂಶವಾಗಿದೆ. ಹೀಗಿರುವಾಗ ಬ್ಯಾಲೆನ್ಸ್ಡ್ ಫುಡ್‌ ಸೇವಿಸುವುದರ ಜೊತೆಗೆ, ಪ್ರತಿನಿತ್ಯ ವ್ಯಾಯಾಮ ಮಾಡುವುದು ಸಹ ಅತ್ಯಗತ್ಯ.

“ನಾನು ಗ್ಲೋಬಲ್ ಕ್ಯೂಸೈನ್ಸ್ ತಯಾರಿಸುತ್ತಿರುತ್ತೇನೆ. ಇದರಲ್ಲಿ ಎಲ್ಲಾ ಬಗೆಯ ವ್ಯಂಜನಗಳೂ ಬರುತ್ತವೆ. ಇತ್ತೀಚೆಗೆ `ಟೂರಿಸಮ್ ಆಸ್ಟ್ರೇಲಿಯಾ’ ಜೊತೆ ಕೆಲಸ ಮಾಡುತ್ತಿದ್ದೇನೆ. ಇಡೀ ಆಸ್ಟ್ರೇಲಿಯಾ ಸುತ್ತಿ ಬಂದು ಹೊಸ ಹೊಸ ರೆಸಿಪಿ ತಯಾರಿಸುತ್ತೇನೆ. ಫುಡ್‌ ಫುಡ್‌ಚ್ಯಾನೆಲ್‌ನಲ್ಲಿ `ಪ್ಯೂರ್‌ ಸಿನ್‌ ಶೋ, ಟಾಟಾ ಸ್ಕೈಗಾಗಿ `ಮಾಸ್ಟರ್‌ ಕ್ಲಾಸ್‌ ವಿತ್‌ ಶಿಪ್ರಾ ಖನ್ನ’ ಶೋ ನಡೆಸುತ್ತೇನೆ. ಇದರಲ್ಲಿ ಈಗಾಗಲೇ 500 ರೆಸಿಪಿಗಳ ವಿಡಿಯೋ ತೋರಿಸಲಾಗಿದೆ. ಇದರಲ್ಲಿ ಶುಗರ್‌ ಕ್ರಾಫ್ಟಿಂಗ್‌, ಚಾಕಲೇಟ್‌ ಮೇಕಿಂಗ್‌, ಸಿಕ್ಸ್‌ ವಿತ್‌ ನೈಫ್‌ಪ್ಯಾನ್ಸ್, ಫುಡ್‌ಕುಕರಿ ಟೆಕ್ನಿಕ್ಸ್, ಟೇಬಲ್ ಮ್ಯಾನರ್ಸ್‌ ಇತ್ಯಾದಿ ಎಲ್ಲಾ ಸೇರಿರುತ್ತವೆ.”

ಶಿಪ್ರಾ ಮುಂದುವರಿಸುತ್ತಾರೆ. “ಅಡುಗೆ ಮಾಡುವುದು ಎಂದರೆ ನಿಜಕ್ಕೂ ಒಂದು ಸೃಜನಾತ್ಮಕ ಕಲೆಯೇ ಸರಿ! ಇದು ನಿಮ್ಮ ಸ್ಟ್ರೆಸ್‌ ಸಹ ಕಡಿಮೆ ಆಗಲು ಸಹಕಾರಿ. ಪ್ರತಿಯೊಂದು ಡಿಶ್‌ ತಯಾರಿಸಲಿಕ್ಕೂ ಶ್ರಮ ಪಡಲೇಬೇಕು. ನಾನು ಪ್ರತಿಯೊಬ್ಬ ಶೆಫ್‌ರಿಂದಲೂ ಪ್ರಭಾವಿತಳಾಗಿದ್ದೇನೆ. ಪ್ರತಿ ಡಿಶ್‌ ತಯಾರಿಸಲಿಕ್ಕೂ ಸಹನೆ ಅತ್ಯಗತ್ಯ. ಹೀಗಾಗಿ ಯಾರೋ ಒಬ್ಬ ಶೆಫ್‌ ನನಗೆ ಸ್ಛೂರ್ತಿದಾಯಕ ಎಂದು ಹೇಳ್ತಾರೆ. ನನ್ನ ತಾಯಿಯೇ ನನ್ನ ಆದರ್ಶ!”

ಮಹಿಳೆಯರಿಗೆ ಸಂದೇಶ ನೀಡುತ್ತಾ ಶಿಪ್ರಾ ಹೇಳುತ್ತಾರೆ, “ನಿಮ್ಮ ಪ್ರತಿಭೆಯನ್ನು ಎಂದೂ ಕಡೆಗಣಿಸಬೇಡಿ. ನಿಮ್ಮ ಐಡೆಂಟಿಟಿ ಎಂದೂ ಮೂಲೆಗುಂಪಾಗಬಾರದು. ನಿಮ್ಮನ್ನು ನೀವು ಗ್ರೂಮ್ ಮಾಡಿಕೊಳ್ಳಿ, ಉಜ್ವಲವಾಗಿ ಪ್ರಕಾಶಿಸಿ. ನೀವು ಯಾರಿಗೂ ಏನೂ ಕಡಿಮೆ ಅಲ್ಲ ಎಂಬುದನ್ನು ನೆನಪಿಡಿ!”

ಜಿ. ಸುಮಾ      

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ