“ಏನೇ ಅಡುಗೆ ಮಾಡಿ, ಅದರಲ್ಲಿ ಸ್ವಲ್ಪ ಪ್ರೀತಿ ಬೆರೆಸಿ. ಅದನ್ನು ಅಷ್ಟೇ ಖುಷಿಯಿಂದ ನಗುನಗುತ್ತಾ ಸರ್ವ್ ಮಾಡಿ. ನಗುವಿಗೆ ಖುಷಿಗೆ ಜಿಪುಣತನ ಬೇಡ. ನೀವು ಖುಷಿಯಿಂದಿದ್ದರೆ, ಇಡೀ ಕುಟುಂಬವೇ ಖುಷಿಯಿಂದಿರುತ್ತದೆ. ನೀವು ಆರೋಗ್ಯದಿಂದಿದ್ದರೆ, ನಿಮ್ಮ ಇಡೀ ಕುಟುಂಬ ಆರೋಗ್ಯದಿಂದಿರುತ್ತದೆ.
“ಅಡುಗೆ ಎನ್ನುವುದು ಕುಟುಂಬದವರನ್ನೆಲ್ಲ ಹತ್ತಿರ ತರುತ್ತದೆ. ಅದರಲ್ಲಿ ಪ್ರೀತಿ ಮತ್ತು ನಗು ಎಂಬ ಎರಡು ಮಸಾಲೆಗಳು ಬೆರೆತರೆ ಆ ಅಡುಗೆಯ ರುಚಿ ಇನ್ನೂ ಅದ್ಭುತವಾಗಿರುತ್ತದೆ.”
ಈ ಮಾತುಗಳು ಸುಪ್ರಸಿದ್ಧ ಶೆಫ್ ಶಾಜಿಯಾ ಖಾನ್ ಅವರದ್ದು. ಯಾವುದೇ ಅಡುಗೆ ಶೋ ಇರಲಿ, ಅವರು ಕೊನೆಗೆ ಮಹಿಳೆಯರಿಗೆ ಹೇಳುವುದು ಇದೇ ಮಾತುಗಳನ್ನು.
ಶಾಜಿಯಾ ಖಾನ್ ಶೆಫ್ ಆದದ್ದು……
ಶಾಜಿಯಾ ಖಾನ್ ಮಾಸ್ಟರ್ ಶೆಫ್ ಸೀಸನ್‌ನಲ್ಲಿ ರನ್ನರ್ ಅಪ್ ಆಗಿ ಒಮ್ಮೆಲೆ ಪ್ರಸಿದ್ಧಿಗೆ ಬಂದರು. ಆದರೆ ಅದಕ್ಕೂ ಮೊದಲು ಅವರು ಯಾವುದೇ ತರಬೇತಿ ಪಡೆದುಕೊಂಡಿರಲಿಲ್ಲ ಎನ್ನುವುದು ಉಲ್ಲೇಖನೀಯ ಸಂಗತಿ.
ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿ ಅವರದು ತುಂಬು ಕುಟುಂಬ. ಅಜ್ಜಿ ತಾತ, ಚಿಕ್ಕಮ್ಮ ಚಿಕ್ಕಪ್ಪ, ಅವರ ಮಕ್ಕಳ ಒಡನಾಟ ಅವರಿಗೆ ಬಾಲ್ಯದಲ್ಲಿ ಬಹಳಷ್ಟು ವಿಷಯಗಳನ್ನು ಕಲಿಸಿತು. ದೊಡ್ಡ ಕುಟುಂಬದಲ್ಲಿ ಅತ್ತೆ, ಅಮ್ಮ (ಸಬೀಹಾ ಬೇಗಂ), ಚಿಕ್ಕಮ್ಮ ಅಡುಗೆ ಕೆಲಸವನ್ನು ಹೊರೆ ಎಂದು ಭಾವಿಸದೆ, ಪ್ರೀತಿಯ ಕೆಲಸ ಎಂದು ಭಾವಿಸಿ ಮಾಡುತ್ತಿದ್ದರು. ಅದು ಶಾಜಿಯಾ ಮೇಲೆ ಬಹಳ ಪರಿಣಾಮ ಬೀರಿತು.ಶಾಲೆಯಿಂದ ಮನೆಗೆ ಬರುತ್ತಲೇ ಅವರು ಚಿಕ್ಕಪುಟ್ಟ ವ್ಯಂಜನಗಳನ್ನು ಮಾಡಲು ಕಲಿತುಕೊಳ್ಳುತ್ತಿದ್ದರು. 9ನೇ ವಯಸ್ಸಿನಲ್ಲಿ ಅವರು ಮಾಡಿದ ವೊದಲ ರೆಸಿಪಿ `ಕಸ್ಟರ್ಡ್ ವಿಥ್ ಫ್ರೂಟ್ಸ್.’ ಬಳಿಕ ಕೇಸರಿ ಬಾಥ್, ಶ್ಯಾವಿಗೆ ಪಾಯಸ ಹೀಗೆ ಒಂದೊಂದಾಗಿ ಕಲಿಯುತ್ತಾ ಹೋದರು.
ಮದುವೆ ಬಳಿಕ ಶಾಜಿಯಾ ಅವರ ಮದುವೆ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಪುತ್ರ ಮಕ್ಸೂದ್ ಅಲಿ ಖಾನ್‌ಅವರ ಜೊತೆ ಆಯಿತು. ಅಲ್ಲೂ ಕೂಡ ಅವರಿಗೆ ತವರುಮನೆಯ ವಾತಾವರಣವೇ ದೊರಕಿತು. ಹಿರಿಯ ರಾಜಕಾರಣಿಯ ಮನೆಯಾಗಿದ್ದರಿಂದ ಅಲ್ಲಿ ಸಂಬಂಧಿಕರು, ಪರಿಚಿತರು ಹೀಗೆ ಬರುವಹೋಗುವವರ ಸಂಖ್ಯೆ ಹೇರಳವಾಗಿತ್ತು. ಬಂದವರಿಗೆಲ್ಲ ಅತ್ತೆ ಆಯೇಶಾ ರೆಹಮಾನ್ ಜೊತೆ ರುಚಿರುಚಿಯಾದ ಅಡುಗೆಗಳನ್ನು ಮಾಡಿ ಬಡಿಸುವುದು ಅವರಿಂದ ಪ್ರಶಂಸೆಯ ಮಾತುಗಳನ್ನು ಕೇಳುವುದು ಶಾಜಿಯಾ ಅವರಿಗೆ ಖುಷಿ ಕೊಡುತ್ತಿತ್ತು. ಮನೆ, ಮಕ್ಕಳು, ಅಡುಗೆ…. ಹೀಗೆ ಅವರ ಸಂಸಾರ ಖುಷಿಯಲ್ಲಿ ತೇಲುತ್ತಿರುವಾಗ `ಸ್ಟಾರ್ ಪ್ಲಸ್’ನಲ್ಲಿ `ಮಾಸ್ಟರ್ ಶೆಫ್’ ಸುಪ್ರಸಿದ್ಧ ಶೋ ಪ್ರಸಾರವಾಗುತ್ತಿತ್ತು. ಅದನ್ನು ನೋಡಿ ಸಂಬಂಧಿಕರು, ಪರಿಚಿತರು `ನೀನೂ ಅದರಲ್ಲಿ ಭಾಗವಹಿಸು,’ ಎಂದು ಒತ್ತಾಯಿಸತೊಡಗಿದರು. ಅದು ಅಖಿಲ ಭಾರತ ಮಟ್ಟದ ಸ್ಪರ್ಧೆ. ತಾನು ಆಡಿಶನ್‌ಗೆ ಆಯ್ಕೆ ಆಗುತ್ತೇನೊ, ಇಲ್ಲವೋ ಎಂಬ ಆತಂಕ ಇದ್ದೇ ಇತ್ತು. ಮೊದಲ ಹಂತದಲ್ಲಿ 1000 ಜನರಲ್ಲಿ ಒಬ್ಬರಾಗಿ ಆಯ್ಕೆಯಾದದ್ದು ಅವರಿಗೆ ಬಹಳ ಖುಷಿ ನೀಡಿತು. 100ರಲ್ಲಿ, ನಂತರ ಟಾಪ್ 50ರಲ್ಲಿ ಆಯ್ಕೆಯಾಗಿ ತಮ್ಮ ಗೆಲುವಿನ ದಾಖಲೆ ಬರೆಯುತ್ತ ಹೋಗಿ ಕೊನೆಗೆ ಫೈನಲ್‌ನಲ್ಲಿ ರನ್ನರ್ ಅಪ್ ಆಗಿ ಆಯ್ಕೆಯಾದರು.
ಬಹಳಷ್ಟು ಕಲಿತೆ
`ಮಾಸ್ಟರ್ ಶೆಫ್ ಸೀಸನ್’ ನಿಂದ ನಾನು ಬಹಳಷ್ಟು ಸಂಗತಿಗಳನ್ನು ಕಲಿತುಕೊಂಡೆ. ರೆಸಿಪಿಗಾಗಿ ಆಯ್ಕೆ ಮಾಡುವ ಪದಾರ್ಥಗಳು, ಅವುಗಳಲ್ಲಿರುವ ಪೌಷ್ಟಿಕಾಂಶಗಳು ಹಾಗೂ ತಯಾರಿಸುವ ವೈಜ್ಞಾನಿಕ ವಿಧಾನವನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಶಾಜಿಯಾ ಖಾನ್ ಹೇಳುತ್ತಾರೆ.
ಪುಸ್ತಕ ಪ್ರಿಯೆ
ದೇಶ ವಿದೇಶ ಎಲ್ಲಿಯೇ ಸುತ್ತಾಡಲು ಹೋದರೂ ಪುಸ್ತಕ ಕೊಂಡುಕೊಳ್ಳುವುದು ಅವರ ಪ್ರಮುಖ ಹವ್ಯಾಸ. ಅದರಲ್ಲಿ ಅಡುಗೆ ಪುಸ್ತಕಗಳು ಹೆಚ್ಚಿಗೆ ಇರುತ್ತವೆ. “ಭಾರತೀಯ ಅಡುಗೆಗಳನ್ನು ಸ್ವಲ್ಪ ಟ್ವಿಸ್ಟ್ ಮಾಡಿ ತಯಾರಿಸುವುದೆಂದರೆ ನನಗೆ ಬಹಳ ಇಷ್ಟ,” ಎಂದು ಹೇಳುವ ಶಾಜಿಯಾಗೆ, ಮಕ್ಕಳಿಗೆ ಇಷ್ಟವಾಗುವಂತಹ ಅಡುಗೆ ತಯಾರಿಸುವುದು ಬಹಳ ಖುಷಿ ಕೊಡುತ್ತದೆ.
ಕೆ ಫಾರ್ ಕಿಡ್ಸ್
ಮಕ್ಕಳಿಗಾಗಿಯೇ ಪ್ರಸ್ತುತಪಡಿಸಿದ ಅಡುಗೆ ಶೋ `ಕೆ ಫಾರ್ ಕಿಡ್ಸ್’ ಫುಡ್ ಫುಡ್ ಚಾನೆಲ್‌ನಲ್ಲಿ ಬಹಳ ಪ್ರಸಿದ್ಧವಾಗಿದೆ. ಇದರ ಹೊರತಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ಪ್ರಸಾರವಾದ `ಗುಡ್ ಫುಡ್ ಗೈಡ್’ ಕೂಡ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತಲ್ಲದೆ, ಅನೇಕ ಅಭಿಮಾನಿಗಳನ್ನು ಹುಟ್ಟುಹಾಕಿತು.
ನನಸಾದ ಕನಸು
“ರೆಸಿಪಿ ಬಗ್ಗೆ ಕೇವಲ ಓದಿದರಷ್ಟೇ ಮಜ ಸಿಗುವುದಿಲ್ಲ, ಅದರ ಜೊತೆಗೆ ಕಣ್ಣಿಗೆ ಕಟ್ಟುವಂತಹ ಸುಂದರ ಚಿತ್ರಗಳು ಇದ್ದರೆ, ಅದನ್ನು ಈಗಲೇ ಮಾಡಬೇಕು, ತಿನ್ನಬೇಕು ಎಂಬ ಆಸೆ ಪ್ರಬಲವಾಗುತ್ತದೆ,” ಎನ್ನುವುದು ಶಾಜಿಯಾ ಮನದಾಳದ ಮಾತು. ಅವರು ತಮ್ಮ ಮೊದಲ ಪುಸ್ತಕ `ವಾಸ್ ಆನ್ ದಿ ಮೆನು’ ಪುಸ್ತಕದ ಮೂಲಕ ತಾವು ಅಂದುಕೊಂಡಂತೆ ಮಾಡಿ ತೋರಿಸಿದ್ದಾರೆ.
ಆ ಪುಸ್ತಕದ ಸಿದ್ಧತೆಗಾಗಿ ಅವರು ಆರು ತಿಂಗಳು ಬೆವರು ಸುರಿಸಿದ್ದಾರೆ. ಪ್ರತಿಯೊಂದು ರೆಸಿಪಿ ಜೊತೆಗೆ ಚಿತ್ರ ಕೊಟ್ಟಿದ್ದಾರೆ. ತಾವೇ ಸ್ವತಃ ಅಡುಗೆಗಳನ್ನು ಹೊಸತಾಗಿ ತಯಾರಿಸಿ, ವಿಶೇಷ ಕ್ಯಾಮೆರಾದಲ್ಲಿ ಫೋಟೋ ತೆಗೆಸಿ ಪುಸ್ತಕಕ್ಕೆ ಮತ್ತಷ್ಟು ಮೆರುಗು ಬರುವಂತೆ ಮಾಡಿದ್ದಾರೆ.
ಸಂಜೀವ್ ಕಪೂರ್ ಅವರ ಪುಸ್ತಕಗಳು, ರೆಸಿಪಿ ಶೋಗಳು ಶಾಜಿಯಾಗೆ ಬಲು ಇಷ್ಟ. ಅವರ ಶೋಗಳನ್ನು ನೋಡುತ್ತ ಅವರ ಅಪ್ಪಟ ಅಭಿಮಾನಿಯೇ ಆಗಿಹೋಗಿದ್ದರು. ಅದೇ ಸಂಜೀವ್ ಕಪೂರ್ ತಾನು ಬರೆದ ಪುಸ್ತಕಕ್ಕೆ ಮುನ್ನುಡಿ ಬರೆಯಬಹುದು, ಅದರ ಉದ್ಘಾಟನೆಗೆ ಬರಬಹುದು, ಆ ಪುಸ್ತಕದ ಬಗ್ಗೆ ಮನತುಂಬಿ ಹೇಳಬಹುದು ಎಂದು ಶಾಜಿಯಾ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.
“ಜೀವನದಲ್ಲಿ ಕನಸು ಕಾಣುತ್ತಲೇ ಇರಬೇಕು. ಅದನ್ನು ಯಾವುದೇ ಹಂತದಲ್ಲಿ ಬಿಡಬಾರದು. ಒಂದು ಕನಸು ನನಸಾದರೆ ಮತ್ತೊಂದು ಹೊಸ ಕನಸು ಕಾಣಬೇಕು. ನಮ್ಮ ಯಾವ ಕನಸು ಯಾವಾಗ ನನಸಾಗುತ್ತದೊ ಹೇಳಲಾಗದು,” ಎನ್ನುವ ಶಾಜಿಯಾರ ಈ ಹೇಳಿಕೆ ತಮ್ಮ ಬಹುದೊಡ್ಡ ಕನಸು ನನಸಾದುದರ ಪ್ರತೀಕ ಎಂಬಂತಿದೆ.
ಇಷ್ಟ ಆಗುವಂತೆ ಮಾಡಿ
“ಮಕ್ಕಳಿಗೆ ಇಷ್ಚವಾಗುವ ತಿಂಡಿಗಳನ್ನು ವಾರಕ್ಕೆರಡು ಬಾರಿಯಾದರೂ ಮಾಡಿ ಕೊಡಿ. ಅವೇ ಅವೇ ಬೋರಾಗುವ ತಿಂಡಿಗಳನ್ನು ಮಾಡಿಕೊಟ್ಟು ಅವರು ಮನೆ ಅಡುಗೆಗೆ ಬೆನ್ನು ತೋರಿಸುವಂತೆ ಮಾಡಬೇಡಿ. ಕೆಲವೊಂದು ಪೌಷ್ಟಿಕಾಂಶದ ಸೊಪ್ಪು, ತರಕಾರಿಗಳನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡು ಅವರು ಇಷ್ಟಪಡುವಂತೆ ತಯಾರಿಸಿ ಕೊಡಿ,“ ಎಂದು ಗೃಹಿಣಿಯರಿಗೆ ಕಿವಿ ಮಾತು ಹೇಳುತ್ತಾರೆ.
ಸರ್ವಾಂಗೀಣ ಪ್ರಗತಿಗೆ ಒತ್ತುಕೊಡಿ
ಅವರ ಪತಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲಿನ ಫ್ರಾಂಚೈಸಿ ಹೊಂದಿದ್ದಾರೆ. ಆ ಶಾಲೆಗಳ ಆಡಳಿತ ಮಂಡಳಿ ಸದಸ್ಯೆಯಾಗಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಅಡುಗೆ ತರಬೇತಿ ಶಿಬಿರ ಕೂಡ ಏರ್ಪಡಿಸುತ್ತಾರೆ. ಕೇವಲ ಹುಡುಗಿಯರಷ್ಟೇ ಅಲ್ಲ, ಹುಡುಗರು ಕೂಡ ಅವರ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಅಡುಗೆಯಲ್ಲೂ ಭವಿಷ್ಯ ಇದೆ ಎನ್ನುವುದನ್ನು ಅವರು ವಿದ್ಯಾರ್ಥಿಗಳಿಗೆ ಈ ಶಿಬಿರದ ಮೂಲಕ ಮನದಟ್ಟು ಮಾಡಿಕೊಡುತ್ತಾರೆ.
– ಅಶೋಕ ಚಿಕ್ಕಪರಪ್ಪಾ