ಬಾಲಿವುಡ್‌ನ ಕೆಲವೇ ಬೆರಳೆಣಿಕೆಯ ಪ್ರತಿಭಾವಂತ ನಟಿಯರಲ್ಲಿ ಒಬ್ಬರೆನಿಸಿರುವ ವಿದ್ಯಾಬಾಲನ್, ತಮ್ಮ ನಟನೆಯ ಪ್ರತಿಭೆಯಿಂದ ಫಿಲ್ಮ ಹಿಟ್ ಆಗಲು ಹೀರೋ ವರ್ಚಸ್ಸು ಮುಖ್ಯವಲ್ಲ, ಉತ್ತಮ ಕಥೆಯೇ ಮೂಲಾಧಾರ ಎಂದು ನಿರೂಪಿಸಿದ್ದಾರೆ. ಕಿರುತೆರೆಯ `ಹಮ್ ಪಾಂಚ್’ ಸೀರಿಯಲ್‌ನಿಂದ ತಮ್ಮ ಕೆರಿಯರ್ ಆರಂಭಿಸಿದ ವಿದ್ಯಾ, `ಪರಿಣಿತಾ’ ಚಿತ್ರಕ್ಕಾಗಿ 40 ಸಲ ಸ್ಕ್ರೀನ್‌ಟೆಸ್ಟ್ ಹಾಗೂ 17 ಸಲ ಮೇಕಪ್ ಶೂಟ್ ಎದುರಿಸಿದರಂತೆ! ಆದರೆ ಪರಿಣಾಮ ನೋಡಿ, ಈ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಅರಸಿ ಬಂದವು. ಇದಾದ ನಂತರ ಆಕೆ `ಲಗೇ ರಹೋ ಮುನ್ನಾಭಾಯಿ,’ `ಪಾ’ ಚಿತ್ರಗಳಲ್ಲಿ ಮಿಂಚಿದ್ದಲ್ಲದೆ,
`ದಿ ಡರ್ಟಿ ಪಿಕ್ಚರ್’ನಂಥ ಬ್ಲಾಕ್ ಬಸ್ಟರ್ ಸಕ್ಸಸ್ ನೀಡಿ ಸ್ಟಾರ್ ಎನಿಸಿದರು. `ಕಹಾನಿ’ ಆಕೆ ಅಪ್ಪಟ ಕಲಾವಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ. ಇಂಥ ವಿಭಿನ್ನ ಪಾತ್ರಗಳಲ್ಲಿ ಅಚ್ಚಳಿಯದ ಅಭಿನಯ ನೀಡಿ, ವೈವಿಧ್ಯಮಯ ಪಾತ್ರಗಳಿಂದ ಮಿಂಚಿದ ನಟಿ, ಮಲೆಯಾಳಂ ಚಿತ್ರಗಳಲ್ಲಿ ಅವಕಾಶ ನಿರಾಕರಿಸಲ್ಪಟ್ಟವರಂತೆ! ಎಂಥ ವಿಪರ್ಯಾಸ, ಆ ಕ್ರೆಡಿಟ್ ಪೂರ್ತಿ ಮಾಲಿವುಡ್‌ಗೆ ಬದಲಾಗಿ ಬಾಲಿವುಡ್‌ಬಾಚಿಕೊಂಡಿತು. ತಮ್ಮ ಉತ್ಕೃಷ್ಟ ಪಾತ್ರ ಪೋಷಣೆಗಾಗಿ ವಿದ್ಯಾ ಪದ್ಮಶ್ರೀ ಪುರಸ್ಕಾರ ಸಹ ಪಡೆದರು.
ವಿದ್ಯಾರ ತಂದೆಗೆ ಆಕೆ ನಟಿ ಆಗಿ ಚಿತ್ರೋದ್ಯಮಕ್ಕೆ ಕಾಲಿಡುವುದು ಬೇಕಿರಲಿಲ್ಲ. ಆದರೆ ವಿದ್ಯಾ ಸಾಕಷ್ಟು ಅವರ ಮನ ಒಲಿಸಿದ್ದರಿಂದ ಕೊನೆಗೆ ಅನುಮತಿ ಕೊಟ್ಟರಂತೆ.
ತಾಯಿ ತಂದೆಯರ ಸಲಹೆಯಂತೆ, ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಲೇ ವಿದ್ಯಾ ತಮ್ಮ ವಿದ್ಯಾಭ್ಯಾಸ ಪೂರೈಸಿಕೊಂಡರು. ಈ ಚಿತ್ರರಂಗಕ್ಕೆ ಬರುವ ಮುನ್ನ ಆಕೆ ಜಾಹೀರಾತು ಹಾಗೂ ಮ್ಯೂಸಿಕ್ ವಿಡಿಯೋಗಳಿಗೂ ಸಾಕಷ್ಟು ಕೆಲಸ ಮಾಡಿದ್ದರು.
ಸಿನಿಮಾಗೆ ಮಾತ್ರ ಸೀಮಿತಲ್ಲ
ವಿದ್ಯಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಲೇ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ. “ನನ್ನ ಬಳಿ ಸಮಯವಿದ್ದಾಗ, ಏನಾದರೂ ಸಮಾಜ ಸೇವೆ ಮಾಡಬಯಸುತ್ತೇನೆ. ನನ್ನ ಸಲಹೆಯಿಂದ ಯಾರಿಗಾದರೂ ಲಾಭ ಆಗುವುದಾದರೆ, ಸಮಾಜದಲ್ಲಿ ಅಥವಾ ಕುಟುಂಬಗಳಲ್ಲಿ ಪರಿವರ್ತನೆ ಕಾಣಿಸಿದರೆ, ಅಂಥ ಶ್ರಮದಾಯಕ ಕೆಲಸವನ್ನು ನಾನು ಮತ್ತೆ ಮತ್ತೆ ಮಾಡಬಯಸುತ್ತೇನೆ. ಜನ ಸಹನೆಯಿಂದ ನನ್ನ ಮಾತು ಕೇಳಿ, ನನ್ನೊಂದಿಗೆ ಸಹಕರಿಸಿದರೆ ಬೇಕಾದಷ್ಟಾಯಿತು,” ಎನ್ನುತ್ತಾರೆ ವಿದ್ಯಾ.
ಸಾಮಾಜಿಕ ಬದಲಾವಣೆಗಳ ಕುರಿತಾಗಿ ವಿದ್ಯಾರ ಅಭಿಪ್ರಾಯವೆಂದರೆ, ಕೇವಲ ಪರಿವರ್ತನೆ ಆಗಬೇಕು ಎಂದು ಘೋಷಣೆ ಕೂಗಿದರೆ ಏನೂ ಲಾಭವಿಲ್ಲ. ಅದಕ್ಕಾಗಿ ಕೆಲಸ ಮಾಡಬೇಕಾಗುತ್ತದೆ, ಇದಕ್ಕಾಗಿ ಶಿಕ್ಷಣ ಅತ್ಯಗತ್ಯ. ಪ್ರತಿಯೊಬ್ಬ ನಾಗರಿಕರೂ ಈ ನಿಟ್ಟಿನಲ್ಲಿ ಮುಂದುವರಿದಾಗ ಮಾತ್ರ ಇದು ಸಾಧ್ಯವಾಗುತ್ತದೆ.
ಸ್ವಚ್ಛ ಭಾರತ ಅಭಿಯಾನದಲ್ಲಿ ಶಾಮೀಲಾಗುವುದರ ಕುರಿತು ವಿದ್ಯಾ ಒಂದು ರೋಚಕ ಮಾತು ಹೇಳುತ್ತಾರೆ, “ಉ.ಪ್ರ.ದ ಒಂದು ಸಣ್ಣ ಹಳ್ಳಿ ಮೂಲಕ ಹಾದು ನಾನು ಶೂಟಿಂಗ್‌ಗೆ ಹೊರಟಿದ್ದೆ. ಆಗ ನನಗೆ ಪ್ರಯಾಣದ ಮಧ್ಯೆ ಮೂತ್ರ ವಿಸರ್ಜನೆಗೆ ಹೋಗಬೇಕಿತ್ತು. ಆದರೆ ದಾರಿ ಮಧ್ಯೆ ಎಲ್ಲೂ ಟಾಯ್ಲೆಟ್ ಸಿಗಲಿಲ್ಲ. ಅಲ್ಲಿದ್ದ ಜನ ಹೀಗೆ ಸುಮಾರು 2 ಗಂಟೆ ಕಾಲ ಮುಂದುವರಿದರೆ ಮಾತ್ರ ಟಾಯ್ಲೆಟ್ ಸಿಗುತ್ತದೆ ಎಂದರು.
“ಅದನ್ನು ಕೇಳಿ ನಾನು ದಂಗಾದೆ. ನಮ್ಮ ದೇಶ ಪ್ರಗತಿಪಥದಲ್ಲಿದೆ ಎಂದೇನೋ ಹೇಳುತ್ತಾರೆ, ಆದರೆ ಶೌಚಾಲಯಕ್ಕಾಗಿ ಹೊಲದ ಮಧ್ಯೆ ದಾರಿ ಹುಡುಕಬೇಕು ಎನ್ನುವುದು ಎಷ್ಟು ಸರಿ? ಇದೆಂಥ ಪ್ರಗತಿ? ಆಗ ನಾನು ಈ ನಿಟ್ಟಿನಲ್ಲಿ ಏನಾದರೂ ಕೆಲಸ ಮಾಡಲೇಬೇಕು ಅಂದುಕೊಂಡೆ, ನಂತರ ನನಗೆ ಅಕಾಶ ಸಿಕ್ಕಿದಾಗ ನಾನು ಅದನ್ನು ಮಾಡಿ ತೋರಿಸಿದೆ.”
ಕೆಲಸದ ವಿಭಿನ್ನ ವೈಖರಿ ಮಹಿಳಾಪ್ರಧಾನ ಚಿತ್ರಗಳು ಬೆಳ್ಳಿತೆರೆಯಲ್ಲಿ ಮತ್ತೆ ವಿಜೃಂಭಿಸುವಂತೆ ಮಾಡುವಲ್ಲಿ ವಿದ್ಯಾರ ಸಾಹಸ ದೊಡ್ಡದು. ಅದರ ಕುರಿತಾಗಿ ಆಕೆ, “ಸಿನಿಮಾ ಎಂದರೆ ನಿಜಕ್ಕೂ ನಮ್ಮ ಸಮಾಜದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ. ಇದನ್ನು ಕೇವಲ ಮಾತುಗಳಲ್ಲಿ ಹೇಳಿದರೆ ಸಾಲದು, ಬದಲಿಗೆ ಪ್ರಾಯೋಗಿಕವಾಗಿ ನಡೆಸಿಕೊಡುವುದು ಅಷ್ಟೇ ಮುಖ್ಯ. ಸಿನಿಮಾದಿಂದ ಸಮಾಜದಲ್ಲಿ ಪರಿವರ್ತನೆ ಮೂಡುತ್ತದೆ ಎಂಬುದು ಖಂಡಿತಾ ನಿಜ. ಇದನ್ನು ಆರಂಭಿಸಿದವಳು ನಾನಲ್ಲ.
“ಈ ಹಿಂದೆ ಕೂಡ ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿದ್ದವು. ನನಗೆ `ಕಹಾನಿ’ ಚಿತ್ರದ ಕಥೆ ಬಗ್ಗೆ ಹೇಳಿದಾಗ, ಅದರ ಸಬ್ಜೆಕ್ಟ್ ಬಹಳ ಸ್ಟ್ರಾಂಗ್ ಎನಿಸಿತು. ಹೀಗಾಗಿ ನಾನು ಈ ಚಿತ್ರ ಒಪ್ಪಿಕೊಂಡೆ. ಸಮಾಜದಲ್ಲಿ ಮಹಿಳೆಯರ ಶೋಷಣೆ ಕಡಿಮೆ ಆಗಲು, ಸಿನಿಮಾಗಳಲ್ಲಿ ಹೆಣ್ಣನ್ನು ಸಶಕ್ತಳನ್ನಾಗಿ ತೋರಿಸಲೇಬೇಕು! ನಾನು ಸದಾ ಮನರಂಜನೆಗೆ ಆದ್ಯತೆ ನೀಡುವ, ವಾಸ್ತವ ಜೀವನಕ್ಕೆ ಹತ್ತಿರವಾದ ಚಿತ್ರಗಳಲ್ಲಿ ಕೆಲಸ ಮಾಡಬಯಸುತ್ತೇನೆ.
“ಹೀಗಾಗಿ ಈಗ ನಾನು ಕೋಲ್ಕತಾದ ಸುಜಾಯ್ ಘೋಷ್‌ರ `ತೀನ್’ ಚಿತ್ರದ ಶೂಟಿಂಗ್‌ನಲ್ಲಿ ಬಿಝಿ. ನನ್ನ ಜೊತೆ ಘಟಾನುಘಟಿಗಳಾದ ಅಮಿತಾಬ್, ನಾಜುವುದ್ದೀನ್ ಸಿದ್ದಿಕಿ ಮುಂತಾದವರಿದ್ದಾರೆ. ಜೊತೆ ಜೊತೆಗೆ ಮರಾಠಿಯ `ಇಕ್ ಅ್ಬೀಾ’ ಚಿತ್ರದಲ್ಲೂ ಸಕ್ರಿಯಳಾಗಿದ್ದೇನೆ,” ಎನ್ನುತ್ತಾರೆ.
`ಪರಿಣಿತಾ’ ಚಿತ್ರಕ್ಕೆ ಪ್ರಶಸ್ತಿ ಬಂದದ್ದು ತನ್ನ ಬದುಕಿನ ಮರೆಯಲಾಗದ ಘಳಿಗೆ ಎನ್ನುತ್ತಾರೆ ವಿದ್ಯಾ. “ನನಗೆ ಈ ಚಿತ್ರಕ್ಕಾಗಿ ಡಿಡ್ದಿ ಪ್ರಶಸ್ತಿ ದೊರಕಿದಾಗ, ಆ ಕ್ಷಣಗಳನ್ನು ನಾನು ಮಾತಿನಲ್ಲಿ ಹೇಳಲಾರೆ! ಎಷ್ಟೋ ವರ್ಷಗಳ ನನ್ನ ಕಲೆಯ ಪರಿಶ್ರಮದ ಸಾಧನೆ ಯಶಸ್ವಿಯಾಯಿತು ಎಂದು ಸಂತಸದಿಂದ ಕುಣಿದಾಡುವಂತಾಯಿತು.”
– ಜಿ. ಸುಮಾ
ವಿದ್ಯಾರ ಬ್ಯೂಟಿಫುಲ್ ಹೇರ್‌ನ ರಹಸ್ಯ
ತಮ್ಮ ನೀಳ, ದಟ್ಟ, ಮೃದುವಾದ ಕೂದಲಿನ ಬಗ್ಗೆ ರಹಸ್ಯ ಬಿಟ್ಟುಕೊಡುತ್ತಾ ವಿದ್ಯಾ ಹೇಳುತ್ತಾರೆ, “ಬಾಲ್ಯದಿಂದಲೂ ನಮ್ಮಮ್ಮ ನನಗೆ ಮನೆಯಲ್ಲೇ ಗಿಡಮೂಲಿಕೆಗಳು ಮಿಶ್ರ ಮಾಡಿದ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಿದ್ದರು. ಅದರ ಸುಗಂಧವಂತೂ ಈಗಲೂ ನೆನಪಿದೆ…. ವಾರಕ್ಕೆ 2-3 ಸಲ ಅಗತ್ಯ ಅದನ್ನು ಹಚ್ಚಿಕೊಳ್ಳುತ್ತಿದ್ದೆ. ಹೀಗೆ ನನ್ನ ಕೂದಲು ದಟ್ಟವಾಗಿ ಬೆಳೆಯಿತು. ನಾನು ಆ್ಯಕ್ಟಿಂಗ್ ಫೀಲ್ಡ್ ಗೆ ಬಂದ ಮೇಲೆ, ಕೂದಲಿನ ರಕ್ಷಣೆ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕಾಯಿತು. ವಿಭಿನ್ನ ಹೇರ್ ಸ್ಟೈಲ್, ಸ್ಟ್ರೇಟ್‌ನಿಂಗ್ ಇತ್ಯಾದಿ ಕೂದಲಿನ ಅಂದ ಕೆಡಿಸುತ್ತದೆ. ಹೀಗಿರುವಾಗ ವಾರಕ್ಕೆ 1-2 ಸಲ ಆಯ್ಲಿಂಗ್ ಮಾಡುವುದೇ ಒಳ್ಳೆಯದು.”