ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿರುವ ಕಿತ್ತೂರಿನಲ್ಲಿ ನಾನು ಹುಟ್ಟಿದ್ದು, ಆದರೆ ನಾನು ನನ್ನ ಬಾಲ್ಯ ಜೀವನವನ್ನು ಹೆಚ್ಚಾಗಿ ಕಳೆದದ್ದು ಕೂರ್ಗ್‌ನಲ್ಲಿದ್ದ ನನ್ನ ಸೋದರತ್ತೆ ಮನೆಯಲ್ಲಿ. ನನ್ನ ತಂದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಪ್ರಕೃತಿಯ ಮಡಿಲಲ್ಲಿ

ಆದರೆ ಕಲಾವಿದರಿಗೆ ತುಂಬಾ ಪ್ರೋತ್ಸಾಹ ಕೊಡೋರು. ನಾನಾಗ ತುಂಬಾನೆ ಚಿಕ್ಕವಳು. ತಂದೆ ಕಂಡರೆ ಅಪಾರ ಪ್ರೀತಿ. ಹಾಗಾಗಿ ಅವರ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಸ್ಕೂಲು ಬಿಟ್ಟರೆ ಅಪ್ಪ ಅಷ್ಟೇ ನನ್ನ ಲೋಕವಾಗಿತ್ತು. ಕೂರ್ಗ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಅವರ ಮನೆ ಆ ಪರಿಸರ, ಎಲ್ಲದಕ್ಕಿಂತ ಹೆಚ್ಚಾಗಿ ತುಂಬಾ ಓದುತ್ತಿದ್ದರು. ಎಲ್ಲ ದಿನಪತ್ರಿಕೆಗಳನ್ನು ತರಿಸುತ್ತಿದ್ದರು. ಇದೇ ಕಾರಣಕ್ಕೆ ನಾನು ಆ ವಾತಾವರಣವನ್ನು ತುಂಬಾ ಇಷ್ಟಪಡುತ್ತಿದ್ದೆ.

ನಾನು ಕನಸು ಕಂಡವಳೇ ಅಲ್ಲ….

ನಾನ್ಯಾತ್ತೂ ಕನಸು ಕಂಡವಳಲ್ಲ. ಓದಬೇಕೆನ್ನುವ ಆಸೆ. ಆದರೆ ಏನು ಓದಬೇಕೆಂಬುದು ಗೊತ್ತಿರಲಿಲ್ಲ. ಹೆಚ್ಚು ಓದಿದರೆ ಜ್ಞಾನ ಹೆಚ್ಚುತ್ತೆ ಎಂದಷ್ಟೇ ಗೊತ್ತಿತ್ತು. ಹೆಚ್ಚು ಓದಿದರೆ ಹೆಣ್ಣುಮಕ್ಕಳ ಸ್ಥಿತಿಗತಿ ಬದಲಾಗುತ್ತೆ ಎಂಬುದನ್ನು ವಿದ್ಯಾವಂತ ಮಹಿಳೆಯರನ್ನು ಕಂಡು ಅರಿತುಕೊಂಡಿದ್ದೆ. ಹಾಗಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದಿರಲಿ, ಅದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ. ನಾನು ನನ್ನ ಬದುಕಿನಲ್ಲಿ ಕಂಡಂಥ ತಿರುವು ಬೆಂಗಳೂರಿಗೆ ಬಂದ ನಂತರ. ಇವಳಲ್ಲಿ ಇಂಥದ್ದೊಂದು ಪ್ರತಿಭೆ ಇದೆ ಅಂತ ಗುರುತಿಸಿದ್ದು ಶ್ರೀಧರ್‌ ಸರ್‌. ಗುರುತಿಸುವುದೂ ಕೂಡಾ ಒಂದು ಕಲೆ. ಆಗಲೇ ಪ್ರೋತ್ಸಾಹ ಕೊಡಲಿಕ್ಕೆ ಸಾಧ್ಯ.

ಗುರುಗಳ ಹುಡುಕಾಟದಲ್ಲಿ

ನಾನು ವಿದ್ಯಾಭ್ಯಾಸ ಮುಗಿಸಿ ತಂದೆ ಜೊತೆ ಬೆಂಗಳೂರಿಗೆ ಬಂದಾಗ ಇದೊಂದು ದೊಡ್ಡ ಸಮುದ್ರದಂತೆ ಕಂಡಿತು. ತಂದೆಗೆ ಶ್ರೀಧರ್‌ಸರ್‌ ದೂರದ ಸಂಬಂಧಿ. ಹಾಗಾಗಿ ನಾವು ಶ್ರೀಧರ್‌ರನ್ನು ಹುಡುಕುವುದೇ ಒಂದು ಕೆಲಸವಾಗಿತ್ತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಾವು ಬೆಂಗಳೂರಿಗೆ ಬಂದಿದ್ದು. ಆದರೆ ಶ್ರೀಧರ್‌ ನಮಗೆ ಸಿಗಲಿಲ್ಲ. ಅವರೆಲ್ಲಿದ್ದಾರೆ ಎಂದೂ ನನಗೆ ಗೊತ್ತಿರಲಿಲ್ಲ. ಹೇಗಾದರೂ ಮಾಡಿ ಅವರನ್ನು ಭೇಟಿಯಾಗಲೇಬೇಕು ಎಂದು ನಾನು ಪತ್ರಕರ್ತಳಾಗಿ ಬೇರೆ ಬೇರೆ ಪತ್ರಿಕೆಗಳಿಗೆ ಬರೆಯಲು ಶುರು ಮಾಡಿದೆ. ಬರವಣಿಗೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಾಗ ಎಲ್ಲರ ಪರಿಚಯವಾಯಿತು. ಶ್ರೀಧರ್‌ ಸರ್ `ಅಗ್ನಿ’ ಎನ್ನುವ ಪತ್ರಿಕೆ ಶುರು ಮಾಡಿರುವುದು ಗೊತ್ತಾಯಿತು. ಆಗ ನಾನು ಶ್ರೀಧರ್‌ ಸರ್‌ ಅವರನ್ನು ಭೇಟಿಯಾದೆ. ಇಂಥವರ ಮಗಳೆಂದು ಗೊತ್ತಾದಾಗ ತಂದೆಯನ್ನು ಕರೆಸಿ ನನ್ನನ್ನು ಓದಿಸುವುದಾಗಿ ಹೇಳಿದರು. ನಮ್ಮ ತಂದೆ ನನ್ನನ್ನು ಬಿಟ್ಟು ಊರಿಗೆ ಹೋದ ಮರುದಿನವೇ ಹೃದಯಾಘಾತವಾಗಿ ತೀರಿಕೊಂಡರು. ಆಗ ಶ್ರೀಧರ್‌ ಮತ್ತು ಅವರ ಪತ್ನಿ ಲತಾ ನನ್ನನ್ನು ಅವರ ಮನೆಯ ಮಗಳಂತೆ ಸಾಕಿದರು.  ತಂದೆ ಸ್ಥಾನದಲ್ಲಿ ಶ್ರೀಧರ್‌ ಸರ್‌ ನಿಂತಿದ್ದರು. ಅವರನ್ನು  ಬಿಟ್ಟುಹೋಗಲು ಆಗಲಿಲ್ಲ.

“ನಾನು ಓದೋದಿಲ್ಲ ಬರೆಯುತ್ತೇನೆ,”  ಎಂದು ಹೇಳಿದೆ.

“ಮಗಳೇ ನೀನು ಯಾವ ಯೂನಿರ್ಸಿಟಿಗೂ ಹೋಗಬೇಡ,” ಎಂದರು. ಅವರೇನು ಹೇಳಿಕೊಟ್ಟರೋ ಅದನ್ನೇ ಮಾಡಿದೆ. ಅವರು ತೋರಿಸಿದ ದಾರಿಯಲ್ಲೇ ನಡೆಯುವ ಪ್ರಯತ್ನ ಮಾಡಿದೆ, `ಅಗ್ನಿ’ ಪತ್ರಿಕೆಗೆ ಬರೆಯಲು ಶುರುಮಾಡಿದೆ. ಅರಿವಿಗಾಗಿ ನಾವು ದಿನನಿತ್ಯ ಹೋರಾಟ ಮಾಡಬೇಕು ಎನ್ನುವುದನ್ನು  ಕಲಿತೆ.

ಆ ದಿನಗಳು ಲಾಂಗು ಮಚ್ಚು, ಹೊಡಿ ಬಡಿ ಚಿತ್ರಗಳನ್ನು ನೋಡುವಾಗ, ಬೇರೆ ಭಾಷೆಯ ಚಿತ್ರಗಳು ಬೇರೆ ಬೇರೆ ರೀತಿಯಲ್ಲಿ ಸಿನಿಮಾಗಳನ್ನು ಗುರುತಿಸಿಕೊಳ್ಳುತ್ತಿರುವ ಸಮಯದಲ್ಲಿ `ಆ ದಿನಗಳು’ ಚಿತ್ರವನ್ನು ಸರ್‌ ಕೈಗೆತ್ತಿಕೊಂಡರು. ನೀನೇ ಎಲ್ಲವನ್ನೂ ನೋಡಿಕೊಳ್ಳಬೇಕು ಎಂದು ಧೈರ್ಯ ತುಂಬಿ ಪ್ರೋತ್ಸಾಹಿಸಿದರು. ಆಗ ನಾನು `ಆ ದಿನಗಳು’ ಚಿತ್ರದ ಕಂಪ್ಲೀಟ್‌ ಡಿಸೈನ್‌ ಮಾಡುವ ಜವಾಬ್ದಾರಿ ಹೊತ್ತುಕೊಂಡೆ.

ಅಂಡರ್‌ ವರ್ಲ್ಡ್ ಬಗ್ಗೆ ಒಂದು ಗಂಭೀರವಾದ ಚಿತ್ರವನ್ನು ನೀವು ಮಾಡಬೇಕು ಎಂದು ನಾವೆಲ್ಲರೂ ಅಂದರೆ ಬಚ್ಚನ್‌ ಮಾಮ, ರವೀಂದ್ರ, ಶ್ರೀಧರ್‌ ಸರ್‌ ಅವರಲ್ಲಿ ಕೇಳಿಕೊಂಡಿದ್ದೆ, ಒತ್ತಾಯ ಮಾಡಿದ್ದೆ. ಅವರು ಬರೆದಿದ್ದ `ದಾದಾಗಿರಿಯ ದಿನಗಳು’ ಪುಸ್ತಕದಲ್ಲಿನ ಇಪ್ಪತ್ತು ಪುಟಗಳನ್ನು ಆರಿಸಿಕೊಂಡು ಒಂದೊಳ್ಳೆ ಚಿತ್ರ ಮಾಡಬಹುದೆಂದು ನಾನು ಹೇಳಿದೆ.

ಉಳಿದಂತೆ ಟೆಕ್ನೀಶಿಯನ್ಸ್ ಆಯ್ಕೆ, ಲೊಕೇಶನ್‌, ಪಾತ್ರ ವರ್ಗ, ನಿರ್ದೇಶಕರು, ಸಂಗೀತ ನಿರ್ದೇಶಕರು ಎಲ್ಲವನ್ನೂ ನಾನು ಮುಂದೆ ನಿಂತು ಮಾಡಿದಂಥ ಕೆಲಸ. ನಾನೇಕೆ ನಿರ್ದೇಶನದ ಜವಾಬ್ದಾರಿ ಹೊತ್ತುಕೊಳ್ಳಲಿಲ್ಲ ಎನ್ನುವುದಕ್ಕೆ ಎರಡು ಕಾರಣಗಳಿದ್ದವು. ಒಂದು, ಶ್ರೀಧರ್‌ ಅವರ ಬ್ಯಾನರ್‌ನ ಮೊದಲ ಚಿತ್ರ ಅದಾಗಿತ್ತು. ಎರಡನೆಯದಾಗಿ ಅಂದು ಒಬ್ಬ ಹೆಣ್ಣುಮಗಳು ಇಂಥ ಚಿತ್ರವನ್ನು ಮಾಡಲು ಸಾಧ್ಯವೇ? ಜನ ಒಪ್ಪಿಕೊಳ್ಳುತ್ತಾರಾ? ಎನ್ನುವ ಸಾಧ್ಯತೆಗಳು ಕಡಿಮೆ ಇತ್ತು. ಹಾಗಾಗಿ ಚೈತನ್ಯ ಅವರನ್ನು ನಾನೇ ಆಯ್ಕೆ ಮಾಡಿದೆ.

`ಆ ದಿನಗಳು’ ಚಿತ್ರ ಸಿನಿಮಾ ಇತಿಹಾಸದಲ್ಲಿ ಹೊಸದೊಂದು ಆಯಾಮವನ್ನೇ ಸೃಷ್ಟಿಸಿತು.

ನಿರ್ದೇಶಕಿಯಾಗಿ ನಾನು`ಸ್ಲಂ ಬಾಲ’ ಚಿತ್ರ ನಾನು ನಿರ್ದೇಶಿಸಿದ ಮೊದಲ ಚಿತ್ರ. ವಿನಾಯಕ ಬಾಲ ಎನ್ನುವ ಸ್ಲಂ ಹುಡುಗನ ಸತ್ಯಕಥೆ. ಸರ್‌ ಅವರೇ ಬರೆದಿದ್ದು. ಈ ಸಬ್ಜೆಕ್ಟ ನ್ನು ತಗೊಂಡು ಸಿನಿಮಾ ಮಾಡಿ. ನಾನು ಸರ್‌ಗೆ ಹೇಳಿ ಕೊಡಿಸುತ್ತೇನೆ ಅಂತ ದುನಿಯಾ ವಿಜಯ್‌ಗೆ ಹೇಳಿದಾಗ, ಅವರು ಈ ಸಿನಿಮಾವನ್ನು ನೀವು ನಿರ್ದೇಶನ ಮಾಡುವುದಾದರೆ ಮಾತ್ರ ನಾನು ಮಾಡುತ್ತೇನೆ ಅಂದರು. ಮೇಘಾ ಮೂವೀಸ್‌ನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಯಿತು. ರಾಜಕೀಯ ವಿಡಂಬನೆ ಕುರಿತಾದ ಚಿತ್ರ `ಕಳ್ಳರ ಸಂತೆ.’

ಹೆಣ್ಣುಮಕ್ಕಳು ಕೂಡಾ ಇಂಥ ಚಿತ್ರಗಳನ್ನು ಮಾಡಬಲ್ಲರು ಎಂಬುದನ್ನು ನಾನು ತೋರಿಸಿಕೊಡಬೇಕು ಎನ್ನುವ ಹಟ ನನಗೇನೂ ಇರಲಿಲ್ಲ. ಆದರೆ ಏಕೆ ಮಾಡಬಾರದು? ಏಕೆ ಮಾಡೋಕ್ಕಾಗೋಲ್ಲ? ಅವರಿಗೇನೂ ಅರ್ಥವಾಗೋಲ್ಲ ಎನ್ನುವ ಪ್ರಶ್ನೆಗಳಿಗೆ ನಾನು ಉತ್ತರ ಕೊಡಬೇಕಿತ್ತು. ಹಾಗಾಗಿ ನಾನು ಈ ಚಿತ್ರಗಳನ್ನು ಮಾಡಿ ತೋರಿಸಿದೆ.

`ಎದೆಗಾರಿಕೆ’ ನನ್ನ ಮೂರನೇ ಚಿತ್ರ. ಪ್ರಶಂಸೆಗಳು, ಪ್ರಶಸ್ತಿಗಳು ಪಡೆದಂಥ ಚಿತ್ರ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವ‌ರ್ಮ ಅವರು ಇಷ್ಟಪಟ್ಟು ಪ್ರಶಂಸಿಸಿದಂಥ ಚಿತ್ರ.

ಇಂದು ನಾವೇನು ಕಾಡಲ್ಲಿ ಕುಳಿತಿಲ್ಲ. ಟೆಕ್ನಾಲಜಿ ಬೆಳೆದಿದೆ. ಕೈಯಲ್ಲಿ ಮೊಬೈಲ್ ‌ಇದ್ದರೆ ಸಾಕು ಪ್ರಪಂಚವನ್ನೇ ಕಾಣಬಲ್ಲೆ. ಪ್ರಪಂಚದ ಅತ್ಯುತ್ತಮ ಚಿತ್ರಗಳನ್ನು ನೋಡುತ್ತೇವೆ. ಅಧ್ಯಯನ ಮಾಡಬಹುದು, ಚಾಲೆಂಜ್‌ ಎನ್ನುವುದು ದೊಡ್ಡ ಪದ. ಬದಲಾವಣೆ ತರುವುದರಲ್ಲಿ ಹೆಚ್ಚು ನಂಬಿಕೆ ಇತ್ತು. ಇದೆಲ್ಲದಕ್ಕೂ ಬೆನ್ನು ತಟ್ಟಿ ಪ್ರೋತ್ಸಾಹಿಸುವವರೂ ಇರಬೇಕು. `ಎದೆಗಾರಿಕೆ’ ನಾನು ತುಂಬಾನೆ ಮೆಚ್ಚಿಕೊಂಡಂಥ ಕೃತಿ. ದೊಡ್ಡ ದೊಡ್ಡ ನಿರ್ದೇಶಕರು ಸಿನಿಮಾ ಮಾಡಬೇಕೆಂದು ಪ್ರಯತ್ನಿಸಿ ಕೈ ಚೆಲ್ಲಿದ್ದರು. ಅಗ್ನಿ ಶ್ರೀಧರ್‌ ಅವರ ಬಳಿ ಹೋಗಿ ನಾನು ಚರ್ಚೆ ಮಾಡಿದಾಗ, ನೀನು ಮಾಡಬಹುದು ಮಾಡು ಎಂದು ಹುರಿದುಂಬಿಸಿದರು. ಪುರುಷರೇ ತುಂಬಿರುವ ಇಂಥ ಜಗತ್ತಿನಲ್ಲಿ ಒಬ್ಬ ಮಹಿಳೆ ಕುರ್ಚಿಯ ತುದಿವರೆಗೂ ಬಂದು ನೋಡುವಂತೆ ಮಾಡುವುದಿದೆಯಲ್ಲ ಅದು ತುಂಬಾ ದೊಡ್ಡ ತಾಕತ್ತು ಎಂದು ನನ್ನ  ಬಗ್ಗೆ ದೊಡ್ಡ  ಮಾತುಗಳನ್ನು ಹೇಳಿದ್ದಾರೆ. ಕಿರಗೂರಿನ ಗಯ್ಯಾಳಿಗಳ ಜೊತೆಯಲ್ಲಿ ನನಗೂ ಬದಲಾವಣೆ ಬೇಕಿತ್ತು. ಏಕೆಂದರೆ ಸುಮನಾ ಬರೀ ಅಂಡರ್‌ ವರ್ಲ್ಡ್ ಸಬ್ಜೆಕ್ಟನ್ನೇ ಮಾಡ್ತಾರೆ. ಬೇರೆ ತರಹದ ಸಬ್ಜೆಕ್ಟ್ ಮಾಡಬಲ್ಲರೇ ಎನ್ನುವ ಸವಾಲ್ ನನ್ನ ಮುಂದಿತ್ತು.

ಆದರೆ ಒಬ್ಬ ಮೇಕರ್‌ಗೆ ಏನೇ ಕೊಟ್ಟರೂ ಮಾಡ್ತಾರೆ. ಯಾವುದೂ ಗೊತ್ತಿಲ್ಲ ಎನ್ನುವುದಿಲ್ಲ. ನಾನು ಮಾಡಿದ ಎಲ್ಲ ಚಿತ್ರಗಳೂ ಅಂಡರ್‌ ವರ್ಲ್ ಕುರಿತಾಗಿರಲಿಲ್ಲ, ಆದರೂ ಅಂಥ ಅಪವಾದ ಅಲ್ಲಲ್ಲಿ ಕೇಳಿಬಂದಿತ್ತು.

ಆಗ ನನ್ನ ಮುಂದಿದ್ದ ಬಿಗ್ಗೆಸ್ಟ್ ಟಾಲೆಂಜ್‌ ಅಂದರೆ ಹೆಣ್ಣುಮಕ್ಕಳಿಗೆ ಏನೇ ಕೊಟ್ಟರೂ ಮಾಡ್ತೀವಿ ಅನ್ನೋದು. ನಾನು ನನ್ನತನ ತೋರಿಸಬೇಕಿತ್ತು. ಆಗ ನಾನು ಬೇರಿಗೇ ಕೈ ಹಾಕಿದೆ. ಅಂದರೆ ಹಳ್ಳಿಯ ಆ ಸೊಗಡು ಕಿರಗೂರು. ನಾನು ಮಾಡಿದ ಆಯ್ಕೆ ಸರಿಯಾಗಿದೆ ಅನಿಸಿತು. ಇಂದು ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಳ್ಳಿ ಸೊಗಡಿರುವ ಗಯ್ಯಾಳಿಗಳನ್ನು ಬಾಚಿಕೊಂಡಿದ್ದಾರೆ. `ಕಿರಗೂರಿನ ಗಯ್ಯಾಳಿಗಳು’ ಕೃತಿಗೆ ಮತ್ತು ತೇಜಸ್ವಿಯವರಿಗೆ ನಾನು ಎಲ್ಲ ವಿಧದಲ್ಲೂ ನ್ಯಾಯ ಸಲ್ಲಿಸಿದ್ದೇನೆ ಎನ್ನುವ ಹೆಮ್ಮೆಯಿದೆ. ಇದೆಲ್ಲದರ ಜೊತೆಗೆ ಏನೇ ಅನ್ಯಾಯ ನಡೆದರೂ ಹೆಣ್ಣುಮಕ್ಕಳು ದನಿ ಎತ್ತಬೇಕು, ನಾವು ಸಹಿಸಿಕೊಳ್ಳದೇ ಇರುವಂಥ, ಜೀರ್ಣಿಸಿಕೊಳ್ಳದೆ ಇರುವಂಥ ಸಣ್ಣ ಸಣ್ಣ ವಿಷಯಗಳ ವಿರುದ್ಧ ಪ್ರತಿಭಟಿಸಬೇಕು!

ಸರಸ್ವತಿ ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ