ಕನ್ನಡ ಸಿನಿಮಾರಂಗದಲ್ಲಿ ಆಮದು ತಾರೆಯರು ಜನಪ್ರಿಯರಾಗಲು ಕಾರಣ ಬಹಳ ಸಿಂಪಲ್. ಅವರುಗಳು ಪ್ರಚಾರದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅದರಲ್ಲೂ ಮುಂಬೈಯಿಂದ ಬರುವ ಬೆಡಗಿಯರು ಎಲ್ಲರೊಳಗೊಂದಾಗು ಎನ್ನುವಂತೆ ಬಹಳ ಬೇಗ ಸ್ನೇಹಮಯವಾಗಿ ವರ್ತಿಸಿಬಿಡುತ್ತಾರೆ. ಎಲ್ಲರೊಂದಿಗೆ ಆತ್ಮೀಯವಾಗಿ ಹರಟುತ್ತಾರೆ. ಎಲ್ಲರೂ ಇವರನ್ನು ಇಷ್ಟಪಡುವಂತೆ ನಡೆದುಕೊಳ್ಳುತ್ತಾರೆ. ನೋಡ್ರಪ್ಪ ಈ ಹುಡುಗಿಗೆ ಒಂದಿಷ್ಟೂ ಕೊಬ್ಬಿಲ್ಲ.... ಅಂತ ಹೆಸರು ಪಡೆಯುತ್ತಾರೆ. ಇದೇ ಇವರ ಯಶಸ್ಸಿನ ಗುಟ್ಟು ಅಂತಾನೇ ಹೇಳಬಹುದು. ದೊಡ್ಡ ದೊಡ್ಡ ಹೀರೋಗಳ ಜೊತೆ ನಟಿಸಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಾರೆ.
ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಪಾರೂಲ್ ಯಾದವ್ ಇವೆಲ್ಲ ಗುಣಗಳನ್ನು ಹೊಂದಿರುವಂಥ ತಾರೆ. `ಭಾಗ್ಯವಿಧಾತ' ಧಾರಾವಾಹಿಯಿಂದ ಕೆರಿಯರ್ ಆರಂಭಿಸಿ, ಕೋಮಲ್ ಜೊತೆ `ಗೋವಿಂದಾಯನಮಃ' ಚಿತ್ರದ ಮೂಲಕ ಎಂಟ್ರಿ ಕೊಟ್ಟ ಪಾರೂಲ್ ಪ್ಯಾರ್ಗೆ ಹುಡುಗಿಯಾಗಿ ಜನಮನ ಗೆದ್ದಳು. ಅಭಿನಯದ ಗಂಧ ಗೊತ್ತಿದ್ದರಿಂದ ತೆರೆ ಮೇಲೆ ಮಿಂಚುವುದು ಕಷ್ಟವಾಗಲಿಲ್ಲ. `ನಂದೀಶ' ಚಿತ್ರದ ನಂತರ ಪಾರೂಲ್ ಒಂದಾದ ಮೇಲೊಂದರಂತೆ ಚಿತ್ರಗಳಲ್ಲಿ ನಟಿಸುತ್ತಾ ಹೋದಳು. ವಿಜಯ್ ಜೊತೆ `ಶಿವಾಜಿನಗರ,' ಸುದೀಪ್ ಜೋಡಿಯಾಗಿ `ಬಚ್ಚನ್' ಚಿತ್ರ, `ವಾಸ್ತು ಪ್ರಕಾರ' ಚಿತ್ರದಲ್ಲಿ ವಿಭಿನ್ನವಾದ ಪಾತ್ರ ವಹಿಸಿ ಜಗ್ಗೇಶ್‌ಗೆ ಜೋಡಿಯಾಗಿ ಮಿಂಚಿದ್ದಳು.
ಶಿವರಾಜ್ ಕುಮಾರ್ ಜೊತೆಯಲ್ಲಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರ, ರಾಮ್ ಗೋಪಾಲ್ ವರ್ಮ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಪಾರೂಲ್ ಸಹಜ ಅಭಿನಯ ನೀಡಿ ಗೆದ್ದಳು. ಸೋಷಿಯಲ್ ಮೀಡಿಯಾದಲ್ಲಿ ಪಾರೂಲ್ ಎಲ್ಲರೊಂದಿಗೆ ಸ್ಪಂದಿಸುವ ಅಭ್ಯಾಸವಿಟ್ಟುಕೊಂಡಿದ್ದಾಳೆ. ತಾನು ಯಾವುದೇ ಹೊಸ ಚಿತ್ರಕ್ಕೆ ಸಹಿ ಹಾಕಿದಾಗಲೂ ಅದನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾಳೆ. ಫೇಸ್‌ಬುಕ್, ಟ್ವಿಟರ್‌ನಲ್ಲಿ ಪಾರೂಲ್ ಅಭಿಮಾನಿಗಳು ಸಿಕ್ಕಾಪಟ್ಟೆ! ತನಗೆ ಬರುವ ಹರುಕುಮುರುಕು ಕನ್ನಡ ಭಾಷೆಯಲ್ಲೇ ಎಲ್ಲರೊಂದಿಗೆ ಮಾತನಾಡುವ ಪಾರೂಲ್, `ನಾನು ಕನ್ನಡದ ಹುಡುಗಿ' ಎಂದೇ ಹೇಳಿಕೊಳ್ಳುತ್ತಾಳೆ.
ಮುಂಬೈನಲ್ಲಿ ಟಿ.ವಿ. ಧಾರಾವಾಹಿಯಲ್ಲಿ ನಟಿಸುತ್ತಾ, ಕಾಮಿಡಿ ಶೋನಲ್ಲೂ ಕಾಣಿಸಿಕೊಂಡಿದ್ದ ಪಾರೂಲ್ ಮಾಡೆಲ್ ದುನಿಯಾದಲ್ಲಿ ಹೆಸರು ಮಾಡಿದ್ದಂಥ ಬೆಡಗಿ. ತಾನು ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡುತ್ತೇನೆಂದು ಬಹುಶಃ ಅವಳಿಗೆ ಗೊತ್ತಿರಲಿಲ್ಲವೇನೋ. ಅದೃಷ್ಟದ ಜೊತೆಗೆ ಶ್ರಮವಹಿಸಿ ಕೆಲಸ ಮಾಡುವ ಪಾರೂಲ್ ನಟಿಸಿರುವ `ಜೆಸ್ಸಿ' ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡಿತು.
`ಜೆಸ್ಸಿ' ಚಿತ್ರಕ್ಕಾಗಿ ಸಾಕಷ್ಟು ತೆಳ್ಳಗಾಗಿದ್ದ ಪಾರೂಲ್ ಸೆಟ್‌ನಲ್ಲಿ ತಲೆ ತಿರುಗಿ ಬೀಳುತ್ತಿದ್ದಳಂತೆ. ಕೆಲವೊಂದು ಸಲ ಟೇಕ್ ಓ.ಕೆ.ಯಾದರೂ ಸಹ 100% ತೃಪ್ತಿಯಾಗಬೇಕು, ಇನ್ನೊಂದು ಟೇಕ್ ಪ್ಲೀಸ್ ಅಂತ ಕೇಳಿಕೊಳ್ಳುತ್ತಿದ್ದಳಂತೆ.
ಈ ಚಿತ್ರದಲ್ಲಿ ಡಾ. ನಂದಿನಿಯಾಗಿ ಕಾಣಿಸಿಕೊಂಡಿದ್ದ ಪಾರೂಲ್‌ಗೆ ಇಂಟರ್‌ವೆಲ್‌ನಂತರ ಬರುವ ಪಾತ್ರ ನಿಭಾಯಿಸುವುದು ಛಾಲೆಂಜಾಗಿತ್ತು. ಹಾರರ್ ಎಫೆಕ್ಟ್ ಇದ್ದಂಥ ಪಾತ್ರ. ಪಾರೂಲ್ ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಗೆದ್ದಿದ್ದಳು.
`ಜೆಸ್ಸಿ' ಚಿತ್ರದ ನಿರ್ದೇಶಕ ಪವನ್ ವಡೆಯಾರ್ ಈ ಚಿತ್ರದ ಕಥೆ ಬಗ್ಗೆ ಚಿತ್ರ ಬಿಡುಗಡೆಯಾಗುವವರೆಗೂ ಗುಟ್ಟಾಗಿಟ್ಟಿದ್ದರು. ಪಾರೂಲ್ ಕೂಡ ನಿರ್ವಹಿಸಿದ್ದ ಪಾತ್ರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕನ್ನಡ ಸಿನಿಮಾರಂಗಕ್ಕೆ ಪಾರೂಲ್‌ಳನ್ನು ಕರೆತಂದದ್ದೇ ಪವನ್. `ಗೋವಿಂದಾಯನಮಃ' ಇವರಿಬ್ಬರ ಮೊದಲ ಚಿತ್ರವಾಗಿತ್ತು.