ರಾಜೀವನಿಗೆ ಕ್ಯಾನ್ಸರ್ ಇದೆ ಎಂದು ಪತ್ತೆಯಾಯಿತು. 8 ತಿಂಗಳಲ್ಲೇ ಯಮರಾಜ ಕದ ತಟ್ಟಿದನು. ಇದ್ದಕ್ಕಿದ್ದಂತೆ ಬಂದೆರಗಿದ ಆಘಾತದಿಂದ ಶಾಲಿನಿ ಕಂಗಾಲಾದಳು. ನನ್ನ ಮಗುವಿನ ಗತಿಯೇನು ಎಂದು ಗೋಳಾಡಿದಳು. ಅವಳು ಹೀಗೆ ಮತಿಗೆಟ್ಟು ಕುಸಿದು ಕುಳಿತ ಸಮಯದಲ್ಲಿ ಅವಳ ಅಣ್ಣಂದಿರು ಅವಳಿಗೆ ಆಸರೆಯಾಗಿ ನಿಂತರು. ರಾಜೀವನ ಆಫೀಸಿನ ಕಡೆಯಿಂದ ಬರಬೇಕಾದ ಹಣಕ್ಕೆ ವ್ಯವಸ್ಥೆ ಮಾಡಿದರು. ಶ್ರಮಪಟ್ಟು ತಂಗಿಗೊಂದು ಕೆಲಸವನ್ನು ದೊರಕಿಸಿಕೊಟ್ಟು ಅವಳ ಮತ್ತು ಮಗುವಿನ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟರು. ಶಾಲಿನಿಯ ತಾಯಿ, ಮುಳುಗಿ ಹೋಗುತ್ತಿದ್ದ ಮಗಳ ಜೀವನ ನೌಕೆ ದಡ ಸೇರಲು ಕಾರಣರಾದ ತಮ್ಮ ಗಂಡು ಮಕ್ಕಳನ್ನು ಇಂದೂ ಹಾಡಿ ಹೊಗಳುತ್ತಾರೆ, ``ಇವರಿಬ್ಬರೂ ಸೇರಿ ತಂಗಿಯ ಜೀವನಕ್ಕೊಂದು ನೆಲೆ ಮಾಡಿಕೊಟ್ಟರು. ಇವರಿಲ್ಲದಿದ್ದರೆ ನಾನೊಬ್ಬಳೇ ಏನು ತಾನೇ ಮಾಡಲು ಸಾಧ್ಯವಿತ್ತು?''
ಅಣ್ಣಂದಿರ ಪ್ರೀತಿಯನ್ನು ನೆನೆದು ಶಾಲಿನಿ ಭಾವುಕಳಾಗುತ್ತಾಳೆ. ಸುಖ ಸೌಲಭ್ಯಗಳಿಗಿಂತ ಸಂಬಂಧ ಎಷ್ಟು ಮಹತ್ತರವಾದುದೆಂದು ಅವಳು ಅರ್ಥ ಮಾಡಿಕೊಂಡಿದ್ದಾಳೆ.
ಬರಿದಾದ ತವರು : ಎಂದಿನಂತೆ ಪಾರ್ಕ್ ನಲ್ಲಿ ಸಾಯಂಕಾಲದ ವಾಕಿಂಗ್ ಮುಗಿಸಿ ಗೆಳತಿಯರೆಲ್ಲರೂ ಒಂದೆಡೆ ಕುಳಿತರು. ಬೇಸಿಗೆ ರಜೆಯ ವಿಷಯ ಮಾತನಾಡುವಾಗ ರಮಾ ಕೇಳಿದಳು, ``ಹಾಗಾದರೆ ನೀವೆಲ್ಲ ನಿಮ್ಮ ತವರುಮನೆಗೆ ಯಾವಾಗ ಹೋಗಬೇಕೆಂದಿದ್ದೀರಿ?'' ಎಲ್ಲರೂ ಖುಷಿಯಿಂದ ತಾವು ಹೊರಡಲಿರುವ ದಿನವನ್ನು ಲೆಕ್ಕ ಹಾಕತೊಡಗಿದರು. ಸಾವಿತ್ರಿ ಮಾತ್ರ ಸಪ್ಪನೆಯ ಧ್ವನಿಯಲ್ಲಿ ಹೇಳಿದಳು.
``ಎಲ್ಲಿಯ ತವರು? ಅಪ್ಪ ಅಮ್ಮ ಇರೋವರೆಗೆ ತವರು ಮನೆ ಇತ್ತು. ಅಣ್ಣ ಅತ್ತಿಗೆ ಅಂತ ಇದ್ದಿದ್ದರೆ ಹೋಗುವುದಕ್ಕೆ ತವರಿನದು ಅಂತ ಒಂದು ಮನೆ ಇರುತ್ತಿತ್ತು.''
ಒಬ್ಬಳೇ ಮಗಳಾಗಿ ಹುಟ್ಟಿದರೆ, ತಂದೆ ತಾಯಿ ಬದುಕಿರುವವರೆಗೆ ತವರು ಮನೆ ಇರುತ್ತದೆ. ಆ ನಂತರ ತವರಿನ ಹೆಸರು ಹೇಳಲು ಮನೆಯೇ ಉಳಿದಿರುವುದಿಲ್ಲ.
ಅಣ್ಣ ಅತ್ತಿಗೆಯೊಂದಿಗೆ ಜಗಳ : ಶೀಲಾ ಹೇಳಿದಳು, ``ಸಾವಿತ್ರಿ, ಅಣ್ಣ ಅತ್ತಿಗೆ ಇಲ್ಲವಲ್ಲ ಅಂತ ನೀವು ಬೇಸರ ಮಾಡಿಕೊಳ್ಳುತ್ತೀರಿ. ಆದರೆ ನನ್ನನ್ನು ನೋಡಿ. ಯಾವುದೋ ವಿಷಯಕ್ಕೆ ಅಣ್ಣ ಅತ್ತಿಗೆ ಜೊತೆ ಜಗಳ ಆಗಿಬಿಟ್ಟಿದೆ. ತವರು ಮನೆ ಇದ್ದೂ ಕೂಡ ನನಗೆ ಆ ಮನೆಯ ಬಾಗಿಲು ಮುಚ್ಚಿಬಿಟ್ಟಿದೆ.''
ಹೌದು, ಜಗಳದಿಂದ ಸಂಬಂಧ ಕೆಡುತ್ತದೆ. ಅದರಲ್ಲಿನ ಮಾಧುರ್ಯ ಕೊನೆಯಾಗುತ್ತದೆ. ಬಂಧುಗಳೊಡನೆ ವ್ಯವಹರಿಸುವಾಗ ಮಾತು ಹೆಚ್ಚು ಕಡಿಮೆ ಆಗಬಹುದು. ಆದರೆ ಅದರ ಪ್ರಭಾವ ಸಂಬಂಧದ ಮೇಲೆ ಆಗದಿರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
ಅಣ್ಣ ತಂಗಿಯರ ಬಾಂಧವ್ಯ : ಅಣ್ಣ ತಂಗಿಯರ ಸಂಬಂಧ ಅಮೂಲ್ಯವಾದದ್ದು. ಅವರಿಬ್ಬರಲ್ಲಿ ಭಾವನಾತ್ಮಾಕ ಬೆಸುಗೆ ಇರುತ್ತದೆ. ಮನೆಯಲ್ಲಿ ಪರಸ್ಪರ ರೇಗಿಸಿ ಜಗಳವಾಡಿದರೂ ಹೊರಗೆ ಜೊತೆ ಜೊತೆಯಾಗಿರುತ್ತಾರೆ. ಅವರದು ಪ್ರೀತಿಯ ಜಗಳ, ಒಬ್ಬರು ಇನ್ನೊಬ್ಬರನ್ನು ಎಂದೂ ನಡುನೀರಿನಲ್ಲಿ ಕೈಬಿಟ್ಟು ಹೋಗುವವರಲ್ಲ. ಅಣ್ಣ ತಂಗಿಯರು ಇವರು ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ.
ತಾಯಿಯ ನಂತರ ಅತ್ತಿಗೆ : ಮದುವೆಯಾದ 25 ವರ್ಷಗಳ ನಂತರ ಮಂಜುಳಾ ತವರಿನಿಂದ ಹಿಂದಿರುಗಿದಾಗ ಉತ್ಸಾಹದಿಂದ ಇರುತ್ತಾಳೆ, ``ನನ್ನ ಅಣ್ಣ ಅತ್ತಿಗೆ ನನ್ನನ್ನು ಬಹು ಪ್ರೀತಿಯಿಂದ ಕಾಣುತ್ತಾರೆ. ಆ ವಾತ್ಸಲ್ಯ ಸುಖವನ್ನು ಅನುಭವಿಸಿರುವ ನಾನು ನನ್ನ ಮಗನಿಗೆ ತನ್ನ ತಂಗಿಯನ್ನು ಅದೇ ರೀತಿ ನೋಡಿಕೊಳ್ಳುವಂತೆ ಹೇಳಿಕೊಟ್ಟಿದ್ದೇನೆ. ತಾಯಿ ಕಾಲವಾದ ಮೇಲೆ ಹೆಣ್ಣುಮಕ್ಕಳು ಅಣ್ಣ ಅತ್ತಿಗೆಯಿಂದ ಆ ಪ್ರೀತಿಯನ್ನು ಪಡೆಯಲು ಆಶಿಸುತ್ತಾರೆ. ಯಾವುದೇ ಉಡುಗೊರೆ ಬಯಸಿ ಹೋಗುವುದಿಲ್ಲ. ಪ್ರತಿಯೊಬ್ಬರೂ ಪ್ರೀತಿಯನ್ನೇ ಬಯಸುತ್ತಾರೆ,'' ಎಂದು ಮಂಜುಳಾ ಹೇಳುತ್ತಾಳೆ.