ನಾನು ಕೃಷಿ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ನಾನೊಬ್ಬ ಸತ್ಯಾನಿಷ್ಠ ಬ್ರಹ್ಮಚಾರಿ. ನನ್ನ ತಂದೆ ತಾಯಿ ನನ್ನ ಮದುವೆ ವಿಚಾರವನ್ನು ಎತ್ತಿದಾಗೆಲೆಲ್ಲಾ ಏನೇನೋ ಸಬೂಬು ಹೇಳಿ ಮುಂದೆ ಹಾಕುತ್ತಿದ್ದೆ. ನನಗೆ ಮೊದಲಿನಿಂದಲೂ ಇಂತಹುವುದರಲ್ಲಿ ಆಸಕ್ತಿ ಇರಲಿಲ್ಲ.

ಆಫೀಸಿನಲ್ಲಿ ನನಗೆ ಓಡಾಡಲು ಜೀಪ್‌ ನೀಡಿದ್ದರೂ ಕೆಲಸದ ವಿಚಾರವಾಗಿ ಹೊರ ಹೋಗಬೇಕಾದಾಗ ಮಾತ್ರವೇ ನಾನು ಅದನ್ನು ಬಳಸುತ್ತಿದೆ. ಉಳಿದ ದಿನಗಳಲ್ಲಿ ನನ್ನ ಯಮಾಹಾವನ್ನೇ ನನ್ನ ಕಛೇರಿಗೆ ಒಯ್ಯುತ್ತಿದ್ದೆ.

ಇಂದು ಕಛೇರಿಯಲ್ಲಿ ಮುಖ್ಯವಾದ ಕೆಲಸವಿದ್ದ ಕಾರಣ ಎಂದಿಗಿಂತ ತುಸು ಬೇಗನೇ ಹೊರಟಿದ್ದೆ. ಮಾರ್ಗ ಮಧ್ಯೆ ನನಗೆ ಚಪ್ಪಾಳೆಯ ದನಿ ಕೇಳಿಸಿತು. ಬೈಕ್‌ನ ಕನ್ನಡಿ ಮೂಲಕ ನೋಡಿದಾಗ ಒಬ್ಬ ಯುವತಿ ನನ್ನನ್ನೇ ಕರೆಯುತ್ತಿರುವುದು ಕಂಡಿತು. ನಾನು ನಿಧಾನವಾಗಿ ಬೈಕ್‌ ನಿಲ್ಲಿಸಿ, “ಹೇಳಿ,” ಎಂದೆ.

“ಇಂದು ನನ್ನ ಫೈನಲ್ ಎಗ್ಸಾಮ್. ಆದರೆ ಇಂದು ಬಸ್‌ಗಳಿಲ್ಲ, ಆಟೋ ಸಹ ಬರುತ್ತಿಲ್ಲ. ನನ್ನನ್ನು ಕಾಲೇಜಿನ ಬಳಿ ಬಿಡುತ್ತೀರಾ?”

ಕ್ರೀಮ್ ಕಲರ್‌ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿದ್ದ ಯುವತಿ ಕುತ್ತಿಗೆಯಲ್ಲಿ ಬಿಳಿಯ ಮುತ್ತಿನ ನೆಕ್‌ಲೇಸ್‌, ಕೈಯಲ್ಲಿ ಕೆಂಪು ಗಾಜಿನ ಬಳೆಗಳು, ಹಣೆಯಲ್ಲಿ ಬಿಂದಿ ಇದ್ದವು. ಅವಳು ಕೂದಲನ್ನು ತುರುಬು ಕಟ್ಟಿ, ಹಳದಿ ಬಣ್ಣದ ಗುಲಾಬಿ ಮುಡಿದಿದ್ದಳು. ಹಳದಿ ಬಣ್ಣದ ವ್ಯಾನಿಟಿ ಬ್ಯಾಗ್‌ ಹಿಡಿದಿದ್ದ ಅವಳು ನೋಡಲು ಮಧ್ಯಮ ವರ್ಗದ ಕುಟುಂಬದಿಂದ ಬಂದವಳೆನ್ನುವಂತೆ ಕಾಣುತ್ತಿತ್ತು. ಅವಳು ನನ್ನ ಉತ್ತರಕ್ಕಾಗಿ ಕಾಯುತ್ತಿದ್ದಳು. ನಾನು ಅವಳ ಕೋರಿಕೆಗೆ ಒಪ್ಪಿ, “ಸರಿ ಕುಳಿತುಕೊಳ್ಳಿ,” ಎಂದೆ. ಅವಳು ಕುಳಿತುಕೊಳ್ಳುತ್ತಿದ್ದಂತೆ ನಾನು ನಿಧಾನವಾಗಿ ಬೈಕ್‌ ಚಲಾಯಿಸಿದೆ.  ಸುಮಾರು 10 ನಿಮಿಷಗಳ ದೂರ ಕ್ರಮಿಸುತ್ತಿದ್ದಂತೆ, ಅವಳ ಕಾಲೇಜು ಸಿಕ್ಕಿತು.

“ಧನ್ಯವಾದಗಳು. ನಿಮ್ಮ ಈ ಸಹಾಯವನ್ನು ನಾನೆಂದಿಗೂ ಮರೆಯಲಾರೆ,” ಎಂದಳು.

“ಇರಲಿ ಬಿಡಿ. ಈ ಪಾರ್ಕರ್‌ ಪೆನ್‌ ತೆಗೆದುಕೊಳ್ಳಿ. ನಿಮಗೆ ಶುಭವಾಗಲಿ,” ನನ್ನ ಬಳಿಯಿದ್ದ ಪೆನ್ನನ್ನು ಅವಳಿಗೆ ನೀಡಿದೆ. ಅದನ್ನು ತೆಗೆದುಕೊಂಡ ಆಕೆ ಮತ್ತೊಮ್ಮೆ ಧನ್ಯವಾದ ಹೇಳುತ್ತಾ ಕಾಲೇಜಿನತ್ತ ಹೆಜ್ಜೆ ಹಾಕಿದಳು. ನಾನೂ ಕಛೇರಿಯತ್ತ ತೆರಳಿದೆ. ಅಂದು ಸಂಜೆ ಮನೆಗೆ ಬಂದ ನಂತರ ತಾಯಿ ತಂದಿತ್ತ ಕಾಫಿ ಹೀರುತ್ತಾ ಕುಳಿತಿದ್ದಾಗ ಪುನಃ ಆ ಚೆಲುವೆಯ ಮುಖ ಕಣ್ಮುಂದೆ ಬಂದಿತು. `ಛೇ! ನಾನೆಂತಹ ಕೆಲಸ ಮಾಡಿದೆ. ಅವಳ ಹೆಸರು, ಊರು ಏನನ್ನೂ ಕೇಳಲಿಲ್ಲವಲ್ಲ,’ ಎಂದುಕೊಂಡೆ. ಆದರೆ ಏನೂ ಮಾಡುವಂತಿರಲಿಲ್ಲ. ಆಗಲೇ ಕಾಲ ಮಿಂಚಿತ್ತು. ಒಂದು ವರ್ಷ ಕಳೆಯಿತು. ಆದರೆ ಮತ್ತೆಂದೂ ಅವಳ ಭೇಟಿ ಆಗಲಿಲ್ಲ. ಆದರೆ ಆ ಚೆಲುವಾದ ಮುಖ ಆಗಾಗ ನನ್ನ ಕನಸಿನಲ್ಲಿ ಬರುತ್ತಿತ್ತು. ಆಕೆಯ ಹೆಸರು, ಪರಿಚಯ ಇರದ ಕಾರಣ ಅವಳನ್ನು ಪತ್ತೆ ಮಾಡಲು ಆಗಲಿಲ್ಲ.

ಹೀಗಿರಲು ಅದೊಂದು ಭಾನುವಾರ ನನ್ನ ಕೆಲಸದ ಮೇಲೆ ಸೆಂಟ್ರಲ್ ಲೈಬ್ರರಿಗೆ ಹೋಗಿದ್ದೆ. ಅಲ್ಲಿ ಕುಳಿತು ಪುಸ್ತಕ ಓದುತ್ತಿರುವಾಗ, “ಎಕ್ಸ್ ಕ್ಯೂಸ್‌ ಮಿ ಸರ್‌,” ಎನ್ನುವ ಸುಮಧುರ ಕಂಠವೊಂದು ಕೇಳಿಸಿತು. ನಾನು ಧ್ವನಿ ಬಂದತ್ತ ತಿರುಗಿ ನೋಡಿದೆ, ಅದೇ ಯುವತಿ! ನನ್ನತ್ತಲೇ ನೋಡುತ್ತಾ, “ಹೋ… ಹೇಗಿದ್ದೀರಿ?” ಎಂದಳು.

“ಚೆನ್ನಾಗಿದ್ದೇನೆ,” ಎಂದೆ.

“ನನ್ನ ಹೆಸರು ಸಂಯುಕ್ತಾ,” ಎಂದು ತನ್ನನ್ನು ಪರಿಚಯಿಸಿಕೊಂಡಳು.

ನಾನು, “ಜಯರಾಮ್,” ಎಂದೆ.

ತನ್ನ ಕೈಯಲ್ಲಿ ನಾಲ್ಕು ಪುಸ್ತಕಗಳನ್ನು ಹಿಡಿದಿದ್ದ ಅವಳು, “ಅಂದು ನೀವು ನನ್ನನ್ನು ಕಾಲೇಜ್‌ವರೆಗೂ ಬಿಡದೆಹೋಗಿದ್ದರೆ, ನಾನು ಅಂದಿನ ಎಗ್ಸಾಂ ಬರೆಯಲು ಆಗುತ್ತಿರಲಿಲ್ಲ. ನಾನು ಡಿಸ್ಟಿಂಕ್ಷನ್‌ನಲ್ಲಿ ಪಾಸಾದೆ. ಈಗ ನಾನು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಳಾಗಿ ಕೆಲಸ ಮಾಡುತ್ತಿದ್ದೇನೆ.  ನಿಮಗೆ ಹೃತ್ಪೂರ್ವಕ ಧನ್ಯವಾದಗಳು.”

“ಹೌದಾ! ಬಹಳ ಸಂತೋಷ,” ಎಂದೆ.

“ನೀವು ಬಿಡುವಾಗಿದ್ದರೆ ಕಾಫಿಗೆ  ಹೋಗೋಣವೇ?” ಎಂದಳು.

ಅವಳೇ ಆಹ್ವಾನಿಸಿದಾಗ ಇಲ್ಲವೆನ್ನಲಾಗಲಿಲ್ಲ. ಹತ್ತಿರದ ಹೋಟೆಲ್‌ಗೆ ಹೋದೆವು.  ಅಲ್ಲಿ ಕಾಫಿ ಕುಡಿಯುತ್ತಿದ್ದಾಗ, “ನಿಮ್ಮ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?” ಎಂದು ಅವಳು ಕೇಳಿದಳು.

“ಚೆನ್ನಾಗಿದ್ದಾರೆ.”

“ನೀವು ಮನೆಯಲ್ಲಿ ಎಷ್ಟು ಜನರಿದ್ದೀರಿ? ಮೂವರೇ?”

“ಹೌದು. ನಾನು ಮತ್ತು ನನ್ನ ತಂದೆತಾಯಿ.”

“ನೀವೇನು ಮಾಡಿಕೊಂಡಿದ್ದೀರಿ?”

“ಕೃಷಿ ಇಲಾಖೆಯಲ್ಲಿದ್ದೇನೆ”

“ನಾನು ನನ್ನ ಅಣ್ಣನ ಮನೆಯಲ್ಲಿದ್ದೇನೆ. ನನ್ನ ತಂದೆ ತಾಯಿ ತೀರಿಕೊಂಡು ಬಹಳ ದಿನಗಳಾದವು. ನನ್ನ ಅತ್ತಿಗೆಯೇ ನನಗೆ ತಾಯಿಯಂತಿದ್ದಾರೆ.”

“ಕ್ಷಮಿಸಿ, ನಿಮಗೇನಾದರೂ ಸಹಾಯ ಬೇಕಾದಲ್ಲಿ ನನಗೆ ಕರೆ ಮಾಡಿ. ಇದು ನನ್ನ ನಂಬರ್‌,” ಎನ್ನುತ್ತಾ ನನ್ನ ನಂಬರ್‌ನ್ನು ಅವಳ ಕೈಗೆ ನೀಡಿದೆ.

“ಧನ್ಯವಾದಗಳು. ನನ್ನ  ಅಣ್ಣ ಯುನೈಟೆಡ್‌ ಬ್ಯಾಂಕ್‌ನಲ್ಲಿ ಕೆಲಸದಲ್ಲಿದ್ದಾನೆ. ಅವನೇ ನನಗೆ ನನ್ನ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಿದನು.” ಎಂದಳು.

“ಹೌದಾ…! ಸರಿ.”

ಕೆಲವು ಕ್ಷಣಗಳ ನಂತರ, “ಸರಿ, ನಾನಿನ್ನೂ ಹೊರಡುತ್ತೇನೆ,” ಎನ್ನುತ್ತಾ ಸಂಯುಕ್ತಾ ಹೊರಡಲನುವಾದಳು.

`ನಾನು ಬಿಡುತ್ತೇನೆ,’ ಎಂದು ಹೇಳವ ಅವಕಾಶಕ್ಕೂ ಮುನ್ನವೇ ಆಟೋರಿಕ್ಷಾ ಒಂದರಲ್ಲಿ ಹೊರಟೇಹೋದಳು. ಮತ್ತಾರು ತಿಂಗಳು ಉರುಳಿದವು. ಪುನಃ ಸಂಯುಕ್ತಾ ನನಗೆ ಸಿಗಲಿಲ್ಲ. ನಾನು ಅವಳ ನಂಬರ್‌ ತೆಗೆದುಕೊಂಡಿರಲೂ ಇಲ್ಲ. ಅವಳು ನನ್ನ ನಂಬರ್‌ಗೆ  ಕರೆ ಮಾಡಲೂ ಇಲ್ಲ. ಒಮ್ಮೆ ನಾನು ಶಾಪಿಂಗ್‌ ಮಾಲ್‌ನಲ್ಲೊಮ್ಮೆ ಶಾಪಿಂಗ್‌ ಮುಗಿಸಿ ಹೊರಬರುತ್ತಿದ್ದಾಗ ಹಿಂದಿನಿಂದ ನನ್ನ ಭುಜವನ್ನು ಯಾರೋ ತಟ್ಟಿದಂತಾಯಿತು. ತಿರುಗಿ ನೋಡಿದರೆ ಅಲ್ಲಿ ಸಂಯುಕ್ತಾ ನಿಂತಿದ್ದಳು.

“ನಮಸ್ತೆ.”

ನಾನೂ ಪ್ರತಿಯಾಗಿ, “ನಮಸ್ತೆ,” ಹೇಳಿದೆ.

“ಬನ್ನಿ ಕಾಫಿ ಕುಡಿಯುತ್ತಾ ಮಾತನಾಡೋಣ,” ಎಂದಳು. ಇಬ್ಬರೂ ಹತ್ತಿರದ ಹೋಟೆಲ್‌ಗೆ ಹೋದೆವು.

“ನಾನೀಗ ಉತ್ತಮ ಉಪನ್ಯಾಸಕಿ ಆಗಿದ್ದೇನೆ. ಪ್ರಾರಂಭದ ಮೂರು ತಿಂಗಳು ಸ್ವಲ್ಪ ಕಷ್ಟಕರ ಎನಿಸಿತ್ತು. ಈಗ ಸುಧಾರಿಸಿದೆ. ಮುಂದೆ ಎಂ.ಫಿಲ್ ‌ಮಾಡಬೇಕೆಂದಿರುವೆ,” ಎಂದಳು.

“ಓಹೋ, ನಿಮ್ಮ ಯೋಜನೆಗಳು ಬಹಳ ಚೆನ್ನಾಗಿವೆ. ನಿಮಗೆ ಶುಭವಾಗಲಿ,” ಎಂದೆ.

ಇಷ್ಟರಲ್ಲಿಯೇ ನನ್ನ ಮನೆಗೆ ಅತಿಥಿಗಳು ಬಂದಿದ್ದಾರೆಂದು ನನ್ನ ತಾಯಿಯಿಂದ ಕರೆ ಬಂದಿತು. ನಾನು ಸಂಯುಕ್ತಾಳ ಅನುಮತಿ ಪಡೆದು ಅವಳಿಂದ ಬೀಳ್ಕೊಂಡೆ.

ಪುನಃ ಆರು ತಿಂಗಳು ನನಗೆ ಅವಳ ಭೇಟಿ ಆಗಲಿಲ್ಲ. ಅವಳ ನನ್ನ ಸ್ನೇಹ ಕಾಫಿಗಷ್ಟೇ ಸೀಮಿತ ಎಂದು ಸುಮ್ಮನಾದೆ. ಕೆಲಸದ ಒತ್ತಡ, ಪರ ಊರುಗಳ ಪ್ರಯಾಣದಲ್ಲಿ ನನಗೆ ಬಹುತೇಕ ಅವಳ ನೆನಪು ಮಾಸತೊಡಗಿತ್ತು.

ಹೀಗಿರಲು ಒಂದು ದಿನ ನಾನು ಉಪಾಹಾರ ಮುಗಿಸಿ ಕುಳಿತಿದ್ದೆ. ನನ್ನ ತಾಯಿ ನನ್ನ ಬಳಿ ಬಂದು, “ನಾವು ಇಂದು ನಿನಗಾಗಿ ಒಂದು ಹುಡುಗಿಯನ್ನು ನೋಡಲು ಹೊರಟಿದ್ದೇವೆ. ನಿನ್ನ ಸೋದರ ಮಾವ ಹುಡುಗಿಯ  ಜಾತಕ ಪರೀಕ್ಷಿಸಿದ್ದಾರೆ. ಬಹಳ ಚೆನ್ನಾಗಿ ಹೊಂದುತ್ತದೆಯಂತೆ,” ಎಂದರು.

“ಹುಡುಗಿಯ ಫೋಟೋ ಇದೆಯಾ?” ಎಂದೆ. ಇಲ್ಲ ಎಂದರು. ನನಗಾಗ ತಕ್ಷಣಕ್ಕೆ ಸಂಯುಕ್ತಾ ನೆನಪಿಗೆ ಬಂದಳು. ನಾನು, “ಯಾರು, ಏನು ತಿಳಿಯದೆ, ಹುಡುಗಿಯ ಫೋಟೋ ನೋಡದೆ ಕೇವಲ ಜಾತಕ ಹೊಂದಾಣಿಕೆಯಾಗಿದೆ ಎಂದು ಹುಡುಗಿ ನೋಡಲು ಹೋಗಬೇಕೇ?” ಕೇಳಿದೆ.

“ಇಲ್ಲ, ನಿಮ್ಮ ಸೋದರಮಾವ ಹೇಳಿದ್ದಾರೆ `ಹೋಗಿಯೇ ನೋಡೋಣ,’ ಎಂದು. ಅವರ ಒತ್ತಾಯಕ್ಕೆ ನಾನು ಮಣಿಯಲೇಬೇಕಾಯಿತು,” ಎಂದರು.

ನಾನು ನನ್ನ ಕೋಣೆಗೆ ಹೋದಾಗ ನನ್ನ ಹೆಸರು ಬರೆದಿದ್ದ ಒಂದು ಕೆಂಪು ಕವರ್‌ ಟೇಬಲ್ ಮೇಲಿರುವುದು ಕಂಡಿತು. ಕುತೂಹಲದಿಂದ ಅದನ್ನು ಬಿಡಿಸಿ ಓದಲಾರಂಭಿಸಿದೆ, `ನೀವು ಇಂದು ನೋಡಲು ಹೋಗುತ್ತಿರುವ ಹುಡುಗಿ ಒಳ್ಳೆಯ ಲಕ್ಷಣದವಳಲ್ಲ, ಅವಳು ಬೇರೊಬ್ಬರೊಡನೆ ನಗರದ ರೆಸ್ಟೋರೆಂಟ್‌ ಅಲ್ಲದೆ ಬೇರೆ ಕಡೆಗಳಲ್ಲಿಯೂ ಇರುವುದನ್ನು ನಾನು ನೋಡಿದ್ದೇನೆ. ದಯವಿಟ್ಟು ಈ ಸಂಬಂಧ ಮುಂದುವರಿಸಬೇಡಿ.’  ನಿಮ್ಮ ಹಿತೈಷಿ.

ಪತ್ರವನ್ನು ಓದಿ ಅದನ್ನು ನನ್ನ ತಾಯಿಯ ಕೈಗೆ ನೀಡಿದೆ. ಆದರೆ ಅವರು, “ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ. ಹೊರಡೋಣ,” ಎಂದುಬಿಟ್ಟರು. ನಾನು ಆ ಹುಡುಗಿಯ ಮನೆಗೆ ಹೋದಾಗ ಹುಡುಗಿಯ ಅಣ್ಣ ನಮಗಾಗಿ ಕಾಯುತ್ತಿದ್ದರು. ಉಭಯ ಕುಶೋಪರಿಯಾದ ಬಳಿಕ ಕಾಫಿ ತಿಂಡಿ ನೀಡಿದರು. ಇಷ್ಟೆಲ್ಲಾ  ನಡೆದರೂ ಇನ್ನೂ ಹುಡುಗಿ ನಮ್ಮೆದುರಿಗೆ ಬರಲಿಲ್ಲ. ನಮ್ಮ ತಾಯಿ ಕೂಡ ಹುಡುಗಿಯ ಹೆಸರನ್ನು ನನಗೆ ಹೇಳಿರಲಿಲ್ಲ. ಕೆಲವು ನಿಮಿಷದ ನಂತರ ಹುಡುಗಿ ಬಂದು ತನ್ನ ಅಣ್ಣನ ಪಕ್ಕದಲ್ಲಿ ಕುಳಿತಳು. ನಾನು ಕತ್ತೆತ್ತಿ ಹುಡುಗಿಯತ್ತ ನೋಡಿದೆ. ಅಚ್ಚರಿಯಾಗಿತ್ತು! ಎದುರಿಗೆ ಸಂಯುಕ್ತಾ ಕುಳಿತಿದ್ದಳು!

“ನೀನೇನು ಕೆಲಸಕ್ಕೆ ಹೋಗುತ್ತಿರುವೆಯಾ?” ನನ್ನ ತಾಯಿ ಅವಳನ್ನು ಕೇಳಿದರು.

“ಹೌದು. ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದೇನೆ,” ಸಂಯುಕ್ತಾ ಉತ್ತರಿಸಿದಳು.

ಕೆಲವು ಕ್ಷಣಗಳ ಮೌನದ ನಂತರ ನನ್ನ ತಾಯಿ ನನ್ನತ್ತ ತಿರುಗಿ, “ನಿನಗೇನಾದರೂ ಕೇಳಬೇಕೆಂದಿದ್ದರೆ ಕೇಳು,” ಎಂದರು. ಒಮ್ಮೆಲೇ ನನಗಾದ ಸಂತೋಷ, ಉತ್ಸಾಹದಿಂದ, “ನಾವು ಯಾವಾಗ ಮದುವೆಯಾಗೋಣ? ಮೇ ಅಥವಾ ಡಿಸೆಂಬರ್‌?” ಎಂದು ಕೇಳಿದೆ.

ಸಂಯುಕ್ತಾಗೆ ನನ್ನ ದನಿಯಲ್ಲಿದ್ದ ಸಂತೋಷ, ಕಾತುರಗಳು ಅರ್ಥವಾಗಿತ್ತು. ಅವಳು ಪ್ರತಿಕ್ರಿಯಿಸಲು ತುಸು ಹಿಂಜರಿದಂತೆ ಕಂಡಿತು. ಆದರೆ ಅವಳ ಕಣ್ಣುಗಳು ಮಾತ್ರ ನನ್ನನ್ನು ನೋಡಿ ನಕ್ಕಂತಾಯಿತು. ಅವಳು ಅವಸರ ಅವಸರವಾಗಿ ಓಡು ನಡಿಗೆಯಲ್ಲಿ ತನ್ನ ಕೋಣೆಯತ್ತ ಹೋದಳು. ಅವಳ ಅತ್ತಿಗೆ ಅವಳನ್ನು ಹಿಂಬಾಲಿಸಿದರು.

ನನ್ನ ತಾಯಿ ನನ್ನತ್ತ ಪ್ರಶ್ನಾರ್ಥಕಾಗಿ ನೋಡಿದರು. ಅಷ್ಟರಲ್ಲಿ ನನಗೂ ನನ್ನ ತಪ್ಪಿನ ಅರಿವಾಗಿತ್ತು. ನಾನು ನನ್ನ ಮಾತುಗಳಲ್ಲಿ ಎಂದೂ ಗಾಂಭೀರ್ಯತೆಯನ್ನು ಕಾಯ್ದುಕೊಳ್ಳುತ್ತಿದ್ದವನು, ಆದರೆ ಇಂದು ಮಾತ್ರ ನನ್ನೊಳಗಿನ ಸಂತೋಷವನ್ನು ತಡೆಹಿಡಿಯದೆ  ಹರಿಯಬಿಟ್ಟಿದ್ದರ ಪರಿಣಾಮ ಈ ರೀತಿಯಲ್ಲಿ ತಪ್ಪಾಗಿತ್ತು. ಅದಾಗಿ ಹತ್ತು ನಿಮಿಷದ ಬಳಿಕ ಸಂಯುಕ್ತಾ ಹೊರ ಬಂದಳು, “ನಾನು ನಿಮ್ಮನ್ನು ಮೇನಲ್ಲಿಯೇ ಮದುವೆ ಆಗುತ್ತೇನೆ,” ಎಂದು ನನ್ನತ್ತ ತಿರುಗಿ ಹೇಳಿದಳು. ತನ್ನ ಅಣ್ಣ ಅತ್ತಿಗೆಗೆ ನಮಸ್ಕರಿಸಿದ ಬಳಿಕ ನನ್ನ ತಂದೆ ತಾಯಿಗೂ ನಮಸ್ಕರಿಸಿದಳು.

“ನಿಮ್ಮನ್ನು ಮದುವೆಯಾಗುವುದು ನನ್ನ ಸೌಭಾಗ್ಯವೇ ಸರಿ,” ಎಂದಳು.

“ನನಗೂ ಸಹ, ನಿನ್ನಂತಹ ಪತ್ನಿ ದೊರಕುವುದು ನನ್ನ ಅದೃಷ್ಟ,” ಎಂದೆ.

ನನ್ನ ತಂದೆತಾಯಿಗೂ, ಅವಳ ಮನೆಯವರಿಗೂ ಸಹ ಸಂತೋಷವಾಗಿತ್ತು. ಅಲ್ಲಿಂದ ಹಿಂತಿರುಗುವ ಮಾರ್ಗದಲ್ಲಿ ನನಗೆ ಸಂಯುಕ್ತಾ ಹೇಗೆ ಪರಿಚಯವಾದಳು ಎಂಬುದನ್ನು ತಿಳಿಸಿದೆ.

ಕೊನೆಗೂ ನನ್ನ ಹಿತೈಷಿಯಿಂದ ಬಂದ ಪತ್ರ ನಮ್ಮಿಬ್ಬರ ಸಂಬಂಧಕ್ಕೆ ಯಾವ ಅಡ್ಡಿಯನ್ನೂ ಉಂಟುಮಾಡಲಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ