“ಹಾಯ್‌ ಶೀಲಾ, ನನ್ನ ಜ್ಞಾಪಕ ಇದೆಯಾ?” ಶೀಲಾಳನ್ನು ದೂರದಿಂದ ನೋಡಿದ ಶಶಾಂಕ್‌ ಹತ್ತಿರ ಬಂದು ಕೇಳಿದ.

“ಶಶಾಂಕ್‌, ನಿನ್ನ ಜ್ಞಾಪಕ ಇಲ್ಲಾಂದ್ರೆ ಇನ್ಯಾರು ಜ್ಞಾಪಕ ಇರ್ತಾರೆ?”

ಶೀಲಾಳ ಸ್ವರದಲ್ಲಿನ ವ್ಯಂಗ್ಯ ಶಶಾಂಕ್‌ಗೆ ತಿಳಿಯಿತು. ಆದರೂ ಹೇಳಿದ, “ಇಷ್ಟು ವರ್ಷಗಳ ಬಳಿಕ ನಿನ್ನನ್ನು ಭೇಟಿಯಾಗಿದ್ದು ಖುಷಿಯಾಯಿತು. ಹೇಗಿದೆ ಲೈಫ್? ನೀನಂತೂ ಎಂದೂ ನಿನ್ನ ಬಗ್ಗೆ ಹೇಳಿಕೊಂಡಿಲ್ಲ. ಇಷ್ಟು ದಿನ ಎಲ್ಲಿದ್ದೆ?”

“ಹೇಳಿಕೊಳ್ಳೋಕೇ ಏನೂ ಇರಲಿಲ್ಲ. 7-8 ವರ್ಷ ಆಸ್ಟ್ರೇಲಿಯಾದಲ್ಲಿ ಇದ್ದು ಕಳೆದ ವರ್ಷ ಇಲ್ಲಿಗೆ ಬಂದ್ವಿ.”

“ನಿನ್ನ ಬಗ್ಗೆ ನಿನ್ನ ಮನೆಯವರ ಬಗ್ಗೆ ಹೇಳು. ನಮ್ಮ ಬ್ಯಾಂಕ್‌ನ ಎಲ್ಲಾ ಫ್ರೆಂಡ್ಸ್ ನೆಟ್‌ನಲ್ಲಿ ತಮ್ಮ ಬಗ್ಗೆ ಹಂಚಿಕೊಳ್ತಾರೆ. ನೀನು ಎಲ್ಲೋ ಕಳೆದುಹೋಗಿದ್ದೆ. ನಮ್ಮ ನೆನಪೂ ಬರಲಿಲ್ಲ,” ಶಶಾಂಕ್‌ ನಗುತ್ತಾ ಹೇಳಿದ.

“ಶಶಾಂಕ್‌, ಕಾಲೇಜ್‌ ಲೈಫ್‌ನ ಮರೆಯೋಕಾಗುತ್ತಾ? ಅದು ಎಲ್ಲರ ಜೀವನದಲ್ಲಿ ಅತ್ಯಂತ ಸುಂದರ ಅನುಭವ ತರುತ್ತೆ. ನೀನು ಹೇಗಿದ್ದೀಯಾ ಹೇಳು. ಇಷ್ಟು ದಿನ ಏನು ಸಾಧಿಸಿದೆ? ಏನನ್ನು ಕಳೆದುಕೊಂಡೆ?”

“ಹ್ಞೂಂ…. 2 ಮದುವೆ, 1 ವಿಚ್ಛೇದನ. ಒಳ್ಳೆಯ ನೌಕರಿ ಇದೆ. ಇದಕ್ಕಿಂತ ಹೆಚ್ಚು ಹೇಳೋಕೆ ಏನೂ ಇಲ್ಲ,” ಶಶಾಂಕ್‌ಉದಾಸನಾಗಿ ಹೇಳಿದ.

“ಬದುಕು ನಿನ್ನ ಜೊತೆ ಸರಿಯಾಗಿ ವರ್ತಿಸಲಿಲ್ಲ ಅನ್ನಿಸುತ್ತೆ. ಅಪೇಕ್ಷೆಗಳು ಪೂರೈಸಲಿಲ್ಲ ಅಂದ್ರೆ ಇಂಥ ನಿರಾಶೆಯ ಮಾತುಗಳೇ ಬರುತ್ತವೆ.”

“ಹೌದು ಮತ್ತು ಇಲ್ಲ. ನನ್ನ ಜೀವನದಲ್ಲಿ ನಡೆದಿರೋ ಘಟನೆಗೆ ಎಲ್ಲೋ ಒಂದು ಕಡೆ ನಾನೂ ದೋಷಿ. ಹೌದೋ ಅಲ್ವೋ?” ಶಶಾಂಕ್‌ ಶೀಲಾಳಿಂದ ತನ್ನ ಪ್ರಶ್ನೆಗೆ ಉತ್ತರ ಬಯಸಿದ್ದ. ಆದರೆ ಶೀಲಾ ಉತ್ತರಿಸುವ ಮೂಡ್‌ನಲ್ಲಿರಲಿಲ್ಲ. ಹೀಗಾಗಿ ಅವಳು ಬೇರೆ  ಮಿತ್ರರ ಬಳಿ ಸಾಗಿದಳು.

ಹಳೆಯ ವಿದ್ಯಾರ್ಥಿಗಳು 10 ವರ್ಷಗಳ ನಂತರ ಮತ್ತೆ ಭೇಟಿಯಾಗುತ್ತಿದ್ದರು. ಶೀಲಾಗೆ ಅನೇಕ ಪರಿಚಿತ ಮುಖಗಳು ಕಣ್ಣಿಗೆ ಬೀಳುತ್ತಿದ್ದವು. ಆಯೋಜಕರು ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಂತರ ಡಿನ್ನರ್‌ ಏರ್ಪಡಿಸಿದ್ದರು.

ಎಲ್ಲರೂ ತನ್ನ ತಮ್ಮ ಜಾಗಗಳಲ್ಲಿ ಕೂರಬೇಕೆಂದು ಆಯೋಜಕರು ಹೇಳಿದಾಗ ಶೀಲಾ ತನ್ನ ಗೆಳತಿಯರೊಂದಿಗೆ ತನಗೆ ಮೀಸಲಾಗಿದ್ದ ಜಾಗದಲ್ಲಿ ಕುಳಿತುಕೊಂಡಳು. ಆಗಲೇ ಆ ದೊಡ್ಡ ಹಾಲ್‌ನ ಮುಖ್ಯದ್ವಾರದಿಂದ ನಳಿನಿಯ ಪ್ರವೇಶವಾಯಿತು. ಸುಮಾರು 10 ವರ್ಷಗಳ ನಂತರ ನಳಿನಿಯನ್ನು ಕಂಡು ನಿನ್ನೆ ತಾನೇ ಮಾತಾಡಿದಂತೆ ಶೀಲಾಗೆ ಅನ್ನಿಸಿತು. ವಯಸ್ಸಿನೊಂದಿಗೆ ಮುಖ ಕೊಂಚ ಊದಿಕೊಂಡಿದ್ದು ಬಿಟ್ಟರೆ ನಳಿನಿ ಇನ್ನೇನೂ ಬದಲಾಗಿರಲಿಲ್ಲ.

ಸೀಕ್ವೆನ್ಸ್ ಗಳೊಂದಿಗೆ ಜರಿ ವರ್ಕ್‌ ಮಾಡಿದ್ದ ಗೋಲ್ಡನ್‌ ಕಲರ್‌ ಸೀರೆಯನ್ನು ಹೊಕ್ಕುಳ ಕೆಳಗೆ ಉಟ್ಟು, ಚೆನ್ನಾಗಿ ಅಲಂಕರಿಸಿಕೊಂಡಿದ್ದ ನಳಿನಿ ಫಿಲ್ಮ್ ಸ್ಟಾರ್‌ನಂತೆ ಕಂಗೊಳಿಸುತ್ತಿದ್ದಳು. ಶೀಲಾ ಇಷ್ಟಪಟ್ಟರೂ ಕುರ್ಚಿಯಿಂದ ಏಳಲಿಲ್ಲ. ಹಿಂದೆ ನಳಿನಿಯೊಂದಿಗೆ ಶೀಲಾಳ ಒಡನಾಟ ಹೇಗಿತ್ತೆಂದರೆ ಅವರಿಬ್ಬರನ್ನೂ ಗೆಳತಿಯರು ದೇಹವೆರಡು ಪ್ರಾಣ ಒಂದು ಎನ್ನುತ್ತಿದ್ದರು. ಈಗ 10 ವರ್ಷದ ಗ್ಯಾಪ್‌ ಜೊತೆಗೆ ಮಾನಸಿಕ ದೂರ ಸೇರಿ ಶೀಲಾ ಏಳದೆ ಕುಳಿತಿದ್ದಳು.

ನಳಿನಿ ತನ್ನ ಇತರ ಮಿತ್ರರೊಂದಿಗೆ ಮಾತನಾಡುತ್ತಾ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಳ್ಳುತ್ತಾ ಒಬ್ಬರ ಕೈ ಕುಲುಕುತ್ತಿದ್ದಳು, ಇನ್ನೊಬ್ಬರನ್ನು ಆಲಂಗಿಸುತ್ತಿದ್ದಳು, ಯಾರಿಗಾದರೂ ಮುತ್ತಿಕ್ಕಿ ಕೃತಾರ್ಥರನ್ನಾಗಿಸುತ್ತಿದ್ದಳು. ಶೀಲಾಳ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ನಳಿನಿಯ ಸ್ಲೀವ್ ಲೆ‌ಸ್‌, ಬ್ಯಾಕ್‌ಲೆಸ್‌ ಬ್ಲೌಸ್‌ ಮತ್ತು ಹೊಳೆಯುವ ಶೃಂಗಾರವನ್ನು ಗಮನವಿಟ್ಟು ನೋಡಿ ಗಾಢ ಆಲೋಚನೆಯಲ್ಲಿ ಮುಳುಗಿದಳು. ಶೀಲಾ ಶೂನ್ಯದಲ್ಲಿ ದೃಷ್ಟಿಯಿಟ್ಟು 12 ವರ್ಷಗಳ ಹಿಂದಿನ ಕಾಲೇಜು ಜೀವನದ ದಿನಗಳಲ್ಲಿ ಮುಳುಗಿಹೋದಳು.

ಶೀಲಾ, ನಳಿನಿ ಮತ್ತು ಶಶಾಂಕ್‌ ಫಿಸಿಕ್ಸ್ನಲ್ಲಿ ಎಂಎಸ್ಸಿ ಮಾಡುತ್ತಿದ್ದರು. ಶೀಲಾ ಮತ್ತು ನಳಿನಿ ಒಟ್ಟಿಗೇ ಬಿ.ಎಸ್ಸಿಗೆ ಸೇರಿದರು. ಇಬ್ಬರೂ ಬೇಗನೆ ಆತ್ಮೀಯರಾದರು. ಶಶಾಂಕ್‌ನನ್ನು ಅವಳು ತನ್ನ ಸ್ಕೂಲ್ ‌ದಿನಗಳಿಂದ ತಿಳಿದವಳಾಗಿದ್ದಳು. ಇಬ್ಬರ ಅಪ್ಪಂದಿರು ಒಂದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಎರಡೂ ಕುಟುಂಬದರಲ್ಲಿ ಆತ್ಮಿಯತೆ ಇತ್ತು. ಆ ಗೆಳೆತನ ಪ್ರೀತಿಯಲ್ಲಿ ಹೇಗೆ ಬದಲಾಯಿತೋ ಶೀಲಾಗೆ ತಿಳಿಯಲೇ ಇಲ್ಲ.

ಕಾಲೇಜಿನಲ್ಲಿ ಶಶಾಂಕ್‌ ಆಗಾಗ್ಗೆ ಶೀಲಾಳನ್ನು ಭೇಟಿಯಾಗಲು ಬರುತ್ತಿದ್ದ. ಆದರೆ ಮಹಿಳಾ ಕಾಲೇಜ್‌ ಆಗಿದ್ದರಿಂದ ಶಶಾಂಕ್‌ಗೆ ಕಾಲೇಜಿನ ಅಂಗಳದೊಳಗೆ ಹೋಗಲು ಅನುಮತಿ ಸಿಕ್ಕಿರಲಿಲ್ಲ. ಆದ್ದರಿಂದ ಅವನು ಕಾಲೇಜಿನ ಗೇಟ್‌ ಬಳಿ ನಿಂತು ಶೀಲಾಳನ್ನು ಕಾಯುತ್ತಿದ್ದ. ಶೀಲಾ ಮತ್ತು ನಳಿನಿ ಒಟ್ಟಿಗೆ ಕಾಲೇಜಿನಿಂದ ಹೊರಬರುತ್ತಿದ್ದರು. ಔಪಚಾರಿಕತೆಗಾಗಿ ಎಂದಾದರೂ ಶಶಾಂಕ್ ನಳಿನಿಯೊಂದಿಗೆ ನಗುತ್ತಾ ಮಾತಾಡಿದರೆ ಶೀಲಾ ಸಿಟ್ಟಿಗೇಳುತ್ತಿದ್ದಳು.

“ನಳಿನಿ ಜೊತೆ ಬಹಳ ನಕ್ಕೊಂಡು ಮಾತಾಡ್ತಿದ್ದೆ,” ನಳಿನಿ ಹೊರಟ ಕೂಡಲೇ ಶಶಾಂಕ್‌ಗೆ ಶೀಲಾ ಕೇಳುತ್ತಿದ್ದಳು.

“ಎಲ್ಲೋ ಒಂದು ಕಡೆ ಹೊಟ್ಟೆ ಉರಿಯೋ ವಾಸನೆ ಬರ್ತಿದೆ. ಹೀಗಾಕೆ ಮಾತಾಡ್ತೀಯಾ ಶೀಲಾ? ನಿನ್ನ ಶಶಾಂಕ್‌ ಮೇಲೆ ನಂಬಿಕೆ ಇಲ್ವಾ?” ಶಶಾಂಕ್‌ ಕೇಳುತ್ತಿದ್ದ.

ಕಾಲ ವೇಗವಾಗಿ ಉರುಳುತ್ತಿತ್ತು. ಶೀಲಾ ಮತ್ತು ನಳಿನಿ ಡಿಗ್ರಿ ಮುಗಿಸಿ ಮಾಸ್ಟರ್ಸ್‌ ಪದವಿಗೆ ಏರಿದ್ದರು. ಶಶಾಂಕ್‌ ಸಹ ತಮ್ಮ ಜೊತೆಗೆ ಎಂ.ಎಸ್ಸಿ ಓದುವನೆಂದು ತಿಳಿದು ಶೀಲಾಗೆ  ಬಹಳ ಖುಷಿಯಾಗಿತ್ತು.

ಆದರೆ ಸಂತೋಷ ಹೆಚ್ಚು ಕಾಲ ಇರಲಿಲ್ಲ. ಭೇಟಿಯಾಗುವ ಚಿಕ್ಕ ಅವಕಾಶ ಸಿಕ್ಕರೆ ಸಾಕು ಶಶಾಂಕ್‌ ಹಾಗೂ ನಳಿನಿ ಹತ್ತಿರವಾಗುತ್ತಿದ್ದರು. ಶೀಲಾಗೆ ಎಲ್ಲಾ ಗೊತ್ತಿದ್ದರೂ ಸುಮ್ಮನಿರುತ್ತಿದ್ದಳು. ಪ್ರಾರಂಭದಲ್ಲಿ ಅವಳು ಶಶಾಂಕ್‌ನನ್ನು ತಡೆಯಲು ಪ್ರಯತ್ನಿಸಿದಳು. ಅತ್ತಳು, ಜಗಳವಾಡಿದಳು. ಶಶಾಂಕನೂ ಏನೋ ಹೇಳಿ ಅವಳಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ. ಆದರೆ ಶೀಲಾ ಶೀಘ್ರದಲ್ಲೇ ಬದುಕಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಳು.

ನಳಿನಿ ಹಾಗೂ ಶಶಾಂಕ್‌ರ ಬಗ್ಗೆ ಎಲ್ಲ ವಿಭಾಗಗಳಲ್ಲೂ ಚರ್ಚೆ ಹರಡತೊಡಗಿತು. ಆದರೆ ಶೀಲಾ ಎಲ್ಲರಿಂದ ದೂರಾಗಿ ಓದಿನ ಬಗ್ಗೆ ಗಮನಹರಿಸಿದಳು. ಅದರಿಂದಾಗಿ ಅವಳು ತನ್ನ ತರಗತಿಯಲ್ಲಿ ಎಲ್ಲರಿಗಿಂತ ಮುಂದಿದ್ದಳು.

ನಳಿನಿ ಶೀಲಾಳ ಆತ್ಮೀಯ ಗೆಳತಿಯಾಗಿದ್ದಳು. ಅವಳು ನಂಬಿಕೆದ್ರೋಹ ಮಾಡಿದ್ದು ಶೀಲಾಳಿಗೆ ಹಿಂಸೆಯಾಗಿತ್ತು. ತನ್ನ ಸರ್ವಸ್ವವೆಂದು ತಿಳಿದಿದ್ದ ಶಶಾಂಕ್‌ ತನ್ನ ಸ್ನೇಹಿತೆಯನ್ನು ಪ್ರೀತಿಸಿದ್ದು ಅವಳಿಗೆ ಅರಗಿಸಿಕೊಳ್ಳಲಾಗಲಿಲ್ಲ.

ಮನೆಯವರೆಲ್ಲರಿಗೂ ಅವಳ ಹಾಗೂ ಶಶಾಂಕನ ಆತ್ಮೀಯತೆಯ ಬಗ್ಗೆ ತಿಳಿದಿತ್ತು. ಶಶಾಂಕ್‌ ಒಳ್ಳೆ ಸುಸಂಸ್ಕೃತ ಕುಟುಂಬದ ಏಕಮಾತ್ರ ಮಗನಾಗಿದ್ದ. ಅವನು ಶೀಲಾಳನ್ನು ಭೇಟಿ ಮಾಡಲು, ಸುತ್ತಾಡಲು ಯಾರೂ ಅಡ್ಡಿ ಮಾಡಿರಲಿಲ್ಲ. ಇತ್ತೀಚೆಗೆ ಅವರಿಬ್ಬರ ನಡುವಿನ ಅಂತರ ತಿಳಿದಿತ್ತು. ಶೀಲಾ ತಾಯಿ ಛಾಯಮ್ಮನವರಿಗೂ ಎಲ್ಲ ಅರ್ಥವಾಗಿತ್ತು. ಶಶಾಂಕನ ಸ್ವಚ್ಛಂದ ವರ್ತನೆ ಅವರಿಗೆ ಬೇಸರ ತರಿಸಿತ್ತು. ಅವರು ಶೀಲಾಗೆ ಆಸರೆ ನೀಡಲು ಸದೃಢವಾದ ಬಂಡೆಯಂತಿದ್ದರು.

“ಯೋಚಿಸ್ಬೇಡ ಶೀಲಾ, ಸಧ್ಯ ಶಶಾಂಕನ ಅಸಲಿ ಬಣ್ಣ ಮೊದಲೇ ಗೊತ್ತಾಯ್ತಲ್ಲ. ಅಂತಹ ವಿಲಾಸಿ ನಿನಗೆ ಯೋಗ್ಯನಾಗಿರಲಿಲ್ಲ. ಅವನಿಗೆ ಪವಿತ್ರ ಸಂಬಂಧಗಳ ಬಗ್ಗೆ ಏನು ಗೊತ್ತು?” ಎಂದರು.

ಅದುವರೆಗೆ ಶೀಲಾ ಬಹಳ ಸಂಯಮದಿಂದಿದ್ದಳು. ಅಮ್ಮನ ಮಾತು ಕೇಳಿ ಜೋರಾಗಿ ಅಳತೊಡಗಿದಳು. ಅವಳು ಅತ್ತು ಮನಸ್ಸು ಹಗುರ ಮಾಡಿಕೊಳ್ಳಲೆಂದು ತಾಯಿ ಸುಮ್ಮನಿದ್ದರು.

“ಅಮ್ಮಾ…. ನನಗೊಂದು ಮಾತು ಕೊಡಿ,” ತನ್ನನ್ನು ಸಂಭಾಳಿಸಿಕೊಂಡ ಶೀಲಾ ಕೇಳಿದಳು.

“ಹೇಳು ಶೀಲಾ.”

“ಇವತ್ತಿನಿಂದ ಈ ಮನೇಲಿ ಯಾರೂ ಶಶಾಂಕನ ಹೆಸರು ಎತ್ತಬಾರದು. ನನ್ನ ಜೀವನದಿಂದ ಅವನನ್ನು ಸಂಪೂರ್ಣವಾಗಿ  ಹೊರಹಾಕಿದ್ದೀನಿ. ಯಾವುದೋ ಕೊಳೆತು ಹೋಗಿರೋ ಅಂಗ ಕತ್ತರಿಸಿ ಎಸೆದಂತೆ.”

ಅಮ್ಮ ಅದಕ್ಕೆ ಉತ್ತರವೆಂಬಂತೆ ಶೀಲಾಳ ಕೈಯನ್ನು ಒತ್ತಿ ಆಶ್ವಾಸನೆ ನೀಡಿದರು.

ಒಮ್ಮೆ ಶೀಲಾ ಲೈಬ್ರೆರಿಯಲ್ಲಿ ಕೂತು ಏನೋ ಓದುತ್ತಿದ್ದಾಗ ಅಲ್ಲಿಗೆ ನಳಿನಿ ಬಂದಳು. ಶೀಲಾಳನ್ನು ಕಂಡು, “ಹಾಯ್‌ ಶೀಲಾ, ಇಲ್ಲಿದ್ದೀಯಾ? ನಾನು ಫಿಸಿಕ್ಸ್ ಡಿಪಾರ್ಟ್‌ಮೆಂಟ್‌ನ್ನೆಲ್ಲಾ ಹುಡುಕಿದೆ,” ಎಂದಳು.

“ಹೌದಾ? ಯಾಕೆ?”

“ನಾನು ನಿನಗೊಂದು ಸಿಹಿ ಸುದ್ದಿ ತಂದಿದ್ದೀನಿ,” ಎಂದು ನಳಿನಿ ಗಟ್ಟಿಯಾಗಿ ಹೇಳಿದಾಗ ಅಲ್ಲಿದ್ದ ವಿದ್ಯಾರ್ಥಿಗಳು, “ಉಶ್‌” ಎಂದು ಸುಮ್ಮನಿರಲು ಹೇಳಿದರು.

“ನಡಿ. ಹೊರಗೆ ಹೋಗೋಣ. ಅಲ್ಲೇ ನಿನ್ನ ಸಿಹಿ ಸುದ್ದಿನೂ ಕೇಳೋಣ,” ಶೀಲಾ ನಳಿನಿಯ ಕೈ ಹಿಡಿದು ಹೊರಗೆ ಬಂದಳು. ನಳಿನಿಯ ಧ್ವನಿ ಜೋರೆಂದು ಅವಳಿಗೆ ತಿಳಿದಿತ್ತು.

“ಅವರು ತಮ್ಮನ್ನು ಏನೂಂತ ತಿಳ್ಕೊಂಡಿದ್ದಾರೆ? ಲೈಬ್ರೆರೀಲಿ ಏನು ಕರ್ಫ್ಯೂ ಹಾಕಿದ್ದಾರಾ? ನಾವೇನೋ ಮುಖ್ಯವಾದ ವಿಷಯ ಮಾತಾಡ್ಕೋಬಾರ್ದಾ?” ನಳಿನಿ ಕೋಪದಿಂದ ಹೇಳಿದಳು.

“ಎಲ್ಲಾ ಲೈಬ್ರೆರಿಗಳಲ್ಲೂ ಈ ತರಹ ನಿರ್ಬಂಧಗಳು ಇರುತ್ತವೆ. ಅದು ಬಿಡು, ಸಿಹಿ ಸುದ್ದಿ ಏನೂಂತ ಹೇಳು.”

“ಅದೇನೂಂದ್ರೆ ನಾನು ನಿನ್ನ ಶಶಾಂಕ್‌ನ ಬಿಟ್ಟುಬಿಟ್ಟಿದ್ದೀನಿ. ಅದೂ ನಿನಗಾಗಿ.”

“ಏನಂದೆ? ನನ್ನ ಶಶಾಂಕ್‌? ಶಶಾಂಕ್‌ ಯಾವತ್ತು ನನ್ನವನಾಗಿದ್ದ?” ಶೀಲಾ ನಗುತ್ತಾ ಹೇಳಿದಳು.

“ಓಹೋ  ನಿನಗೆ ಅದನ್ನು ಜ್ಞಾಪಿಸಬೇಕಾ? ನೀನೂ ಮತ್ತು ಶಶಾಂಕ್‌ ಹಿಂದೆ ಕ್ಲೋಸ್‌ ಫ್ರೆಂಡ್ಸ್ ಆಗಿದ್ರಿ.”

“ಅದನ್ನೆಲ್ಲಾ ನನಗೆ ಜ್ಞಾಪಿಸೋ ಅಗತ್ಯ ಇಲ್ಲ. ನೀನು ಶಶಾಂಕ್‌ ಜೊತೆ ಗೆಳೆತನ ಮಾಡುವ ಅಥವಾ ದ್ವೇಷಿಸುವ. ಅದನ್ನು  ಕಟ್ಕೊಂಡು ನನಗೇನು?”

ಶೀಲಾಳ ಮಾತು ಕೇಳಿ ನಳಿನಿ ಒಂದು ಕ್ಷಣ ಬೆಚ್ಚಿದಳು. ನಂತರ ಹೇಳಿದಳು, “ನಾನು ನಿನ್ನ ಆತ್ಮೀಯ ಗೆಳತಿ. ನಿನ್ನ ಬಗ್ಗೆ ನಾನು ಯೋಚಿಸದಿದ್ದರೆ ಇನ್ಯಾರು ಯೋಚಿಸ್ತಾರೆ? ನಾನೀಗ ಮದುವೆ ಆಗ್ತಿದ್ದೀನಿ. ಶಶಾಂಕ್‌ನ  ನಿನಗೆ ಬಿಡ್ತಿದ್ದೀನಿ.”

“ನೀನು ಮದುವೆ ಆಗ್ತಿದ್ದೀಯಾ ಅಂದರೆ ಹೋಗಿ ಶಶಾಂಕ್‌ಗೆ ಹೇಳು. ನನಗ್ಯಾಕೆ ಹೇಳ್ತಿದ್ದೀಯಾ?”

“ಅವನಿಗೆ ಹೇಳಿದೆ. ಆದರೆ ಅವನು ಮಕ್ಕಳಂತೆ ಅಳೋಕೆ ಶುರು ಮಾಡ್ದ. ನನ್ನನ್ನು ಬಿಟ್ಟು ಬದುಕೋಕೆ ಆಗಲ್ಲ ಅಂತಿದ್ದಾನೆ. ನಾನು ಅವನನ್ನು ಮದುವೆ ಆಗ್ತೀನಿ ಅಂತ ಆ ಮುಠ್ಠಾಳ ಯೋಚಿಸ್ತಿದ್ದ. ನಿನಗ್ಗೊತ್ತಾ, ನಾನು ಯಾರನ್ನು ಮದುವೆ ಆಗ್ತಿದ್ದೀನಿ ಅಂತ?”

“ನೀನು ಹೇಳದಿದ್ರೆ ನನಗೆ ಹೇಗೆ ಗೊತ್ತಾಗುತ್ತೆ?”

“ಬಹಳ ದೊಡ್ಡ ಕೋಟ್ಯಧಿಪತಿ ಬಿಸ್‌ನೆಸ್‌ ಮನ್‌ ಮಾಧವ್ ಅಂತ. ನನ್ನ ಮೇಲೆ ನಿನಗೆ ಹೊಟ್ಟೆಕಿಚ್ಚು ಬರ್ತಿಲ್ವಾ?” ನಳಿನಿ ಕೇಳಿದಳು.

ಈ ಬಾಲಿಶ ಪ್ರಶ್ನೆ ಕೇಳಿ ಶೀಲಾಗೆ ಜೋರಾಗಿ ನಗಬೇಕೆನ್ನಿಸಿತು. ನಳಿನಿಯ ಗಂಭೀರ ಮುಖ ನೋಡಿ ಸುಮ್ಮನಿದ್ದಳು.

“ನನ್ನ ಮಾತು ಕೇಳು ಶೀಲಾ, ಶಶಾಂಕ್‌ನನ್ನು ಕಳೆದುಕೊಳ್ಳಬೇಡ. ಪಾಪ ಅವನ ಹೃದಯ ಒಡೆದುಹೋಗಿದೆ. ನೀನು ಅವನಿಗೆ ಪ್ರೀತಿಯ ಮುಲಾಮು ಹಚ್ಚಿದ್ರೆ ಬೇಗ ಚೇತರಿಸಿಕೊಳ್ಳುತ್ತಾನೆ.”

“ನನ್ನ ಬಗ್ಗೆ ನಿನಗೆ ತುಂಬಾ ಕಾಳಜಿ ಇದೆ ನಳಿನಿ. ಆದರೆ ನನ್ನನ್ನು ಕ್ಷಮಿಸು. ನನಗೆ ಈ ಸ್ನೇಹ, ಪ್ರೀತಿ ಅನ್ನೋ ಶಬ್ದಗಳಲ್ಲಿ ನಂಬಿಕೆಯೇ ಹೊರಟುಹೋಗಿದೆ. ಅಪ್ಪ ಅಮ್ಮ ನನ್ನ ಮದುವೆ ನಿಶ್ಚಯ ಮಾಡಿದ್ದಾರೆ. ಫೈನಲ್ ಪರೀಕ್ಷೆ ಮುಗಿದ ಕೂಡಲೇ ನನ್ನ ಮದುವೆ.”

“ಹೌದಾ? ನೀನೂ ಮದುವೆ ಆಗ್ತಿದ್ದೀಯಾ? ಅದೂ ನಿನ್ನ ಅಪ್ಪ ಅಮ್ಮ ಆರಿಸಿದ್ದು. ರೊಮ್ಯಾನ್ಸ್ ಮಾಡದೆ ಮದುವೆ ಆದರೆ ಏನು ಚೆನ್ನಾಗಿರುತ್ತೆ? ಶಶಾಂಕ್‌ ಈಗಲೂ ನಿನ್ನನ್ನು ಇಷ್ಟಪಡ್ತಾನೆ.”

ಶೀಲಾ ಏನೂ ಮಾತಾಡದೆ ಎದ್ದು ಹೊರಟುಹೋದಳು.

ಮರುದಿನ ಲ್ಯಾಬ್‌ನಲ್ಲಿ ಮತ್ತೆ ನಳಿನಿ ಶೀಲಾಳ ಬಳಿ ಬಂದು, “ಬಾ ಕ್ಯಾಂಟೀನ್‌ಗೆ ಹೋಗೋಣ,” ಎಂದಳು.

“ನಾನು ಸ್ವಲ್ಪ ಅರ್ಜೆಂಟ್‌ನಲ್ಲಿದ್ದೀನಿ ನಳಿನಿ. ಮನೆಯಲ್ಲಿ ಬಹಳ ಕೆಲಸ ಇದೆ.”

“ನಿನ್ನ ಗೆಳತಿ ಜೊತೆ ಸ್ವಲ್ಪ ಹೊತ್ತು ಮಾತಾಡೋಕೂ ಸಮಯ ಇಲ್ವಾ ನಿನಗೆ. ಅಂಥ ಕೆಲಸ ಏನಿದೆ?” ನಳಿನಿ ಮೆಲ್ಲಗೆ ಹೇಳಿದಾಗ ಶೀಲಾ ಅಲ್ಲೇ ನಿಂತಳು.

“ನೀನು ಯಾರನ್ನು ಮದುವೆ ಆಗ್ತಿದ್ದೀಯಾ?” ಟೀ ಸವೋಸಾಗೆ ಆರ್ಡರ್‌ ಕೊಟ್ಟು ನಳಿನಿ ಕೇಳಿದಳು.

“ಅವರೇನೂ ಕೋಟ್ಯಧಿಪತಿ ಅಲ್ಲ. ನಮ್ಮ ತರಹಾನೇ ಮಿಡ್ಲ್ ಕ್ಲಾಸ್‌ ಫ್ಯಾಮಿಲಿ. ಒಳ್ಳೆಯ ಕೆಲಸ ಇದೆ. ಅಪ್ಪ ಅಮ್ಮನ ನಿರ್ಧಾರ ಒಪ್ಪಿಕೊಳ್ಳೋದೇ ಒಳ್ಳೆಯದು ಅನಿಸಿತು. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅಂತ ಅರ್ಥವೇ ಆಗ್ತಿಲ್ಲ. ಪ್ರೀತಿಯ ಹೆಸರಲ್ಲಿ ಮುಗ್ಧ ಹುಡುಗಿಯರಿಗೆ ಎಂತೆಂತಹ ಮೋಸ ಮಾಡ್ತಾರೆ,” ಶೀಲಾ ಗಂಭೀರ ಸ್ವರದಲ್ಲಿ ಹೇಳಿದಳು.

“ಅಪ್ಪ ಅಮ್ಮನ ಮೂಲಕ ನಿಶ್ಚಯವಾಗಿರೋ ಮದುವೆಯಲ್ಲೂ ಮೋಸಗಳಾಗುತ್ತೆ… ಲವ್ ಮ್ಯಾರೇಜ್‌ನಲ್ಲಿ ಕನಿಷ್ಠ ನಮ್ಮ ತಪ್ಪಿಗೆ ಶಿಕ್ಷೆ ಅನುಭವಿಸ್ತಿದ್ದೀವಿ ಅಂತ ಸಮಾಧಾನ ಇರುತ್ತೆ.”

“ಹಾಗೆ ನೋಡಿದರೆ ಮದುವೆಯಲ್ಲಿ ಯಶಸ್ವಿಯಾಗೋ ಗ್ಯಾರಂಟಿ ಯಾರೂ ಕೊಡೋಕಾಗಲ್ಲ,” ಶೀಲಾ ಮಾತು ಮುಗಿಸುವ ಉದ್ದೇಶದಿಂದ ಹೇಳಿದಳು. ಅಷ್ಟರಲ್ಲಿ ಸಮೋಸ ಹಾಗೂ ಟೀ ಬಂದಿತ್ತು. ಇಬ್ಬರೂ ಅದರತ್ತ ಗಮನಹರಿಸಿದರು.

ಪರೀಕ್ಷೆ, ಲ್ಯಾಬ್‌, ಮದುವೆಯ ಸಿದ್ಧತೆಗಳ ನಡುವೆ ಸಮಯ ಹೇಗೆ ಕಳೆಯುತ್ತಿತ್ತೋ ತಿಳಿಯಲೇ ಇಲ್ಲ. ಇದರ ಮಧ್ಯೆ ಶಶಾಂಕ್‌ 1-2 ಬಾರಿ ಎದುರಿಗೆ ಸಿಕ್ಕಿದ. ಕಣ್ಣುಗಳು ಪರಸ್ಪರ ನೋಡಿದ. ಆದರೆ ಈಗ ಇಬ್ಬರ ನಡುವೆ ಔಪಚಾರಿಕತೆ ಬಿಟ್ಟು ಬೇರೇನೂ ಇರಲಿಲ್ಲ.

ಶೀಲಾಳ ಮದುವೆಗೆ ಶಶಾಂಕ್‌ ಮನೆಯವರೊಂದಿಗೆ ಬಂದಿದ್ದ. ಆದರೆ ಅಭಿನಂದನೆ ಸಲ್ಲಿಸಿ ಬೇಗ ಹೊರಟುಬಿಟ್ಟ. ಅತ್ತ ನಳಿನಿಯ ಕೋಟ್ಯಧಿಪತಿಯ ಕುಟುಂಬದಲ್ಲಿ ಮದುವೆಯ ವಿಷಯದ ಬಗ್ಗೆ ಆಗಾಗ್ಗೆ ಕೇಳಿಬರುತ್ತಿತ್ತು.

ಶೀಲಾಳ ಗಂಡ ಕುಮಾರ್‌ನ ಕಂಪನಿ ಅವರನ್ನು ಆಸ್ಟ್ರೇಲಿಯಾಗೆ ಕಳಿಸಿದಾಗ ಎಲ್ಲರ ಜೊತೆಗೆ ಸಂಪರ್ಕ ಕಡಿದುಹೋಯಿತು. ಮನೆ, ಮಕ್ಕಳು, ನೌಕರಿಯ ಜಂಜಾಟದಲ್ಲಿ 8 ವರ್ಷಗಳು ಹೇಗೆ ಕಳೆದವೆಂದು ತಿಳಿಯಲೇ ಇಲ್ಲ.

ಇಷ್ಟು ವರ್ಷಗಳ ನಂತರ ತಿರುಗಿ ತಮ್ಮ ದೇಶಕ್ಕೆ ಮರಳಿದಾಗ ಶೀಲಾಗೆ ಮತ್ತೆ ಅಮ್ಮನ ಮಡಿಲಿಗೆ ಬಂದಂತಾಯಿತು. ತಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನಕ್ಕೆ ಆಮಂತ್ರಣ ಬಂದಾಗ ಶೀಲಾಗೆ ಬಹಳ ಆಶ್ಚರ್ಯವಾಗಿತ್ತು. ಇಷ್ಟು ವರ್ಷಗಳ ನಂತರ ಯಾರು ಅವಳ ಅಡ್ರೆಸ್‌ ಹುಡುಕಿ ತೆಗೆದರೆಂದು ತಿಳಿಯಲಿಲ್ಲ. ಅಂದು ಆ ಸಮ್ಮೇಳನದಲ್ಲಿ ಅನೇಕ ಪರಿಚಿತರೊಂದಿಗೆ ಭೇಟಿಯಾಯಿತು. ಆದರೆ ಶೀಲಾಗೆ ಶಶಾಂಕ್‌ ಮತ್ತು ನಳಿನಿಯರ ಭೇಟಿಯಾಗುವುದೆಂದು ತಿಳಿದಿರಲಿಲ್ಲ.

ಎದುರಿಗೆ ಗ್ಲಾಮರಸ್‌ ನಳಿನಿ, ಮಿತ್ರರು ಹಾಗೂ ಪರಿಚಿತರನ್ನು ಭೇಟಿಯಾಗುವುದನ್ನು ಕಂಡೂ ಸಹ ಶೀಲಾ ತನ್ನ ಜಾಗದಲ್ಲೇ ಕುಳಿತಿದ್ದಳು.

ಆಗಲೇ ನಳಿನಿಯ ದೃಷ್ಟಿ ಶೀಲಾಳ ಮೇಲೆ ಬಿತ್ತು. “ಹಾಯ್‌ ಶೀಲಾ, ನೀನು ಇಲ್ಲಿ? ನೀನು ಇಲ್ಲಿಗೆ ಬರ್ತೀಯಾಂತ ನಾನು ಅಂದುಕೊಂಡೇ ಇರಲಿಲ್ಲ. ಇಲ್ಲಿ ಕೂತು ಏನು ಮಾಡ್ತಿದ್ದೀ? ಬಾ ನಿನ್ನ ಜೊತೆ ತುಂಬಾ ಮಾತಾಡೋದು ಇದೆ,” ಎನ್ನುತ್ತಾ ನಳಿನಿ ಶೀಲಾಳನ್ನು ಎಳೆದುಕೊಂಡು ಹೋದಳು.

“ಈಗ ಬೇಡ. ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಗುತ್ತೆ,” ಶೀಲಾ ನಳಿನಿಗೆ ಹೇಳಿದಳು.

“ಆಯ್ತು. ಅದನ್ನೂ ನೋಡೋಣ….? ಮೊದಲು ಸ್ವಲ್ಪ ಮಾತಾಡಬೇಕು. ನಿನಗೆ ಹೇಳಬೇಕಾದ ವಿಷಯಗಳು ಸಾಕಷ್ಟಿವೆ.”

“ಸರಿ ನಡಿ,” ಶೀಲಾ ಹೇಳಿದಳು.

ಕ್ಯಾಂಟೀನ್‌ನಲ್ಲಿ ನಳಿನಿ ಟೀ ಮತ್ತು ಸ್ಯಾಂಡ್‌ವಿಚ್‌ ತರಿಸಿದಳು. ಇಬ್ಬರೂ ಅದನ್ನು ಸೇವಿಸಿದ ನಂತರ ನಳಿನಿ ಶೀಲಾಳ ಕೈ ಹಿಡಿದು ಬಿಕ್ಕತೊಡಗಿದಳು.

“ಏನಾಯ್ತು ನಳಿನಿ?” ಶೀಲಾಗೆ ಗಾಬರಿಯಾಯಿತು.

“ಶೀಲಾ, ನನ್ನನ್ನು ಕ್ಷಮಿಸಿದ್ದೀಯಾಂತ ಹೇಳು. ನಾನು ಎಂದೂ ಬೇಕೂಂತ ನಿನಗೆ ತೊಂದರೆ ಕೊಟ್ಟಿಲ್ಲ. ನಿಜ ಹೇಳ್ತಿದ್ದೀನಿ, ಎಲ್ಲ ತಿಳೀದೇ ನಡೆದುಹೋಯಿತು.”

“ಏನು ಹೇಳ್ತಿದ್ದೀಯಾ ನಳಿನಿ? ನನಗೆ ಏನೂ ಅರ್ಥ ಆಗ್ತಿಲ್ಲ.”

“ನೀನು ನನ್ನನ್ನು ಹಾಗೂ ಶಶಾಂಕ್‌ನನ್ನು ಕ್ಷಮಿಸದೇ ಇದ್ದರೆ ನಾವು ನೆಮ್ಮದಿಯಾಗಿರೋಕೆ ಆಗಲ್ಲ,” ನಳಿನಿ ಇನ್ನೂ ಬಿಕ್ಕುತ್ತಿದ್ದಳು.

“ಯಾಕೆ ಹೀಗೆ ಮಾತಾಡ್ತಿದ್ದೀಯ? ನಾನು ಯಾವತ್ತೂ ಆ ತರಹ ಯೋಚನೇನೇ ಮಾಡಿಲ್ಲ.”

“ಆದ್ರೆ ನಿನಗೆ ಮಾಡಿದ ಮೋಸಕ್ಕೆ ತಕ್ಕ ಪ್ರತಿಫಲ ಸಿಕ್ತಿದೆ ಅಂತ ಶಶಾಂಕ್‌ ಯಾವಾಗಲೂ ಹೇಳ್ತಿರ್ತಾನೆ. ಈಗ ನನಗೂ ಹಾಗೇ ಅನಿಸ್ತಿದೆ.”

“ನಿನಗೆ ಏನಾಯ್ತು?”

“ನಾನು ಮದುವೆ ಆದ ಕೋಟ್ಯಧಿಪತಿಗೆ ಮೊದಲೇ ಮದುವೆ ಆಗಿತ್ತು. ಬಹಳ ಕಷ್ಟದಿಂದ ಅವನ ಹಿಡಿತದಿಂದ ಪಾರಾದೆ. ಅವನು ನನಗೆ ಬಹಳ ಹಿಂಸೆ ಕೊಟ್ಟ.”

“ಅಯ್ಯೋ… ಆಮೇಲೆ ಶಶಾಂಕ್‌….?”

“ಶಶಾಂಕ್‌ಗೆ ಯಾವಾಗಲೂ ತನ್ನ ಹೆಂಡತಿಯ ಮೇಲೆ ಅನುಮಾನ. ಅವಳು ಯಾರನ್ನೋ ಪ್ರೀತಿಸ್ತಿದ್ದಾಳೇಂತ. ಆದರೆ ಆ ರೀತಿ ಏನೂ ಇರಲಿಲ್ಲ. ಅವಳಿಗೆ ಬಹಳ ಬೇಸರವಾಗಿ ಶಶಾಂಕ್‌ನಿಂದ ದೂರವಾದಳು. ಈಗ ನಾನೂ ಶಶಾಂಕ್‌ ಮದುವೆಯಾಗಿದ್ದೇವೆ. ಮನೆಯಲ್ಲಿ ಎಲ್ಲ ಇದೆ. ಆದರೆ ಶಶಾಂಕ್‌ನ ವತಿಯಿಂದ ಅನುಮಾನದ ಕೀಟ ಎಂದೂ ದೂರವಾಗಲ್ಲ. ಈಗ ಅವನಿಗೆ ನನ್ನ ಮೇಲೂ ಸಂಶಯ ಶುರುವಾಗಿದೆ. ನಿನಗೆ ಮಾಡಿದ ಮೋಸದಿಂದ ಈ ರೀತಿ ಆಗ್ತಿದೇಂತ ಅವನಿಗೆ ಅನ್ನಿಸ್ತಿದೆ. ನಮ್ಮನ್ನು ಕ್ಷಮಿಸು ಶೀಲಾ,” ಎನ್ನುತ್ತಾ ನಳಿನಿ ಜೋರಾಗಿ ಅಳತೊಡಗಿದಳು. ಆಗಲೇ ಏನೋ ಶಬ್ದ ಕೇಳಿ ಶೀಲಾ ಹಿಂತಿರುಗಿ ನೋಡಿದಳು. ಹಿಂದೆ ಶಶಾಂಕ್‌ ನಿಂತಿದ್ದ.

“ಏನಾಶ್ಚರ್ಯ ಶಶಾಂಕ್‌, ನೀವಿಬ್ಬರೂ ಗಂಡ ಹೆಂಡತಿ ಅಂತ ನನಗೆ ಗೊತ್ತಿರಲಿಲ್ಲ!” ಶೀಲಾ ಆಶ್ಚರ್ಯದಿಂದ ಕೇಳಿದಳು.

“ಮಾತು ಬದಲಿಸಬೇಡ ಶೀಲಾ. ನಮ್ಮನ್ನು ಕ್ಷಮಿಸು. ನಾವಿಬ್ಬರೂ ಅಪರಾಧ ಮಾಡಿದ್ದೇವೆ. ನಾವು ಸಾಕಷ್ಟು ಶಿಕ್ಷೆ ಅನುಭವಿಸಿದ್ದೀವಿ ಅಂತ ನಿನಗೆ ಅನ್ನಿಸ್ವಾ?” ಶಶಾಂಕ್‌ ಹೇಳಿದ.

“ನೀನು ಏನು ಹೇಳ್ತಿದ್ದೀಯಾಂತ ನನಗೆ ಅರ್ಥ ಆಗ್ತಿಲ್ಲ. ನಾನು ಆ ಕೆಟ್ಟ ಕನಸನ್ನು ಎಂದೋ ಮರೆತುಬಿಟ್ಟಿದ್ದೀನಿ. ಆದರೂ ನಾನು ಕ್ಷಮಿಸೋದ್ರಿಂದ ಏನೂ ವ್ಯತ್ಯಾಸ ಆಗಲ್ಲ. ಆಯ್ತು, ನಾನು ನಿಮ್ಮನ್ನು ಕ್ಷಮಿಸಿದ್ದೀನಿ….” ಶೀಲಾ ಹೇಳಿದಳು.

ನಂತರ ಅಲ್ಲಿನ ಕಾರ್ಯಕ್ರಮಕ್ಕಾಗಲೀ, ಡಿನ್ನರ್‌ಗಾಗಲೀ ಉಳಿದುಕೊಳ್ಳಲು ಶೀಲಾಗೆ ಮನಸ್ಸಾಗಲಿಲ್ಲ. ವಾಪಸ್‌ ಹೋಗುವಾಗ  ತನ್ನ ಬದುಕಿನಲ್ಲಿ ವಿಷವುಣಿಸಿದ ಶಶಾಂಕ್‌ ಮತ್ತು ನಳಿನಿಯರದು ಅಪರಾಧ ಪ್ರಜ್ಞೆಯೋ ಅಥವಾ ಬೇರೇನಾದರೋ ಇತ್ತೋ? ಈ   ಒಂದು ವಿಷಯ ಅವಳನ್ನು ವಿಚಲಿತಗೊಳಿಸಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ