ಮಳೆ ಸುರಿದು ನಿಂತಿತ್ತು, 3 ದಿನಗಳ ನಂತರ ಇಂದು ಆಕಾಶ ಸ್ವಚ್ಛವಾಗಿ ಕಾಣುತ್ತಿತ್ತು. ಕಿಟಕಿಯಿಂದ ಹೊರಗೆ ಇಣುಕುತ್ತಿದ್ದ ಕವಿತಾಳ ದೃಷ್ಟಿ ಇಂದು ಪುಸ್ತಕದ ಮೇಲಿರಲಿಲ್ಲ. ಈಗ ಆಕಾಶದಲ್ಲಿ ಕಪ್ಪು ಮೋಡಗಳು ಕಾಣುತ್ತಿರಲಿಲ್ಲ. ಆದರೆ ಕವಿತಾಳ ಮನದಲ್ಲಿ ವಿಚಾರಗಳ ದಟ್ಟ ಮೋಡಗಳು ಸುತ್ತುತ್ತಿದ್ದವು. ಇಂದು ಅವಳಿಗೆ ಓದಲು ಮನಸ್ಸಿರಲಿಲ್ಲ. ಅವಳು ಎಂ.ಬಿ.ಬಿ.ಎಸ್‌.ನ ಕೊನೆಯ ವರ್ಷದಲ್ಲಿದ್ದಳು.

ಅವಳು ಮೊದಲಿನಿಂದಲೂ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಅವಳಿಗೆ ಪರೀಕ್ಷೆಯ ಬಗ್ಗೆ ಯಾವುದೇ ಆತಂಕ ಅಥವಾ ಒತ್ತಡ ಇರಲಿಲ್ಲ. ಆದರೂ ಅವಳ ಮನಸ್ಸು ಒತ್ತಡದಿಂದ ತುಂಬಿತ್ತು. ಅದಕ್ಕೆ ಬಲವಾದ ಕಾರಣಗಳಿದ್ದವು.

ಇದ್ದಕ್ಕಿದ್ದಂತೆ ಕವಿತಾಳ ಗಮನ ಅಡುಗೆಮನೆಯತ್ತ ಹೋಯಿತು. ಅಮ್ಮ ಅಪ್ಪನ ಫೇವರಿಟ್‌ ಪೂರಿ ಸಾಗು ಮಾಡುತ್ತಿದ್ದರು. ಕವಿತಾಗೆ ಕೋಪ ಬಂತು. ಅಮ್ಮ ಇನ್ನೂ ಅಪ್ಪನ ಇಷ್ಟಾನಿಷ್ಟಗಳನ್ನು ಗಮನಿಸುವುದೇಕೆ? ಅದರ ಅಗತ್ಯವೇನು? ಆದರೆ ಅಮ್ಮ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದಿಲ್ಲ.

ಶತಮಾನಗಳಿಂದ ಮಹಿಳೆಯ ಮನದಲ್ಲಿ ಬಿತ್ತಿದ ಬೀಜ ಅಷ್ಟು ಬೇಗ ಹಾಳಾಗುವುದಿಲ್ಲ. ಸೇವಾನಿರತೆ, ಸಹನಶೀಲೆ, ತ್ಯಾಗಶೀಲೆ, ಸ್ನೇಹಶೀಲೆ ಇವೆಲ್ಲ ಗುಣವಿಶೇಷಣಗಳನ್ನು ಶತಮಾನಗಳಿಂದ ತಲೆಗೆ ತುಂಬಿಕೊಂಡಿರುವ ಮಹಿಳೆಯರು ಮೌನವಾಗಿ ಸಾಗುತ್ತಿರುತ್ತಾರೆ. ಇವೇ ವಿಶೇಷಣಗಳ ಮೂಲಕ ಪುರುಷ ಅವರನ್ನು ಎಷ್ಟು ಶೋಷಿಸುತ್ತಿದ್ದಾನೆಂದು ಬಡಪಾಯಿ ಮಹಿಳೆಯರಿಗೇನು ಗೊತ್ತು?

ಕವಿತಾಳ ಮನದಲ್ಲಿ ಅಮ್ಮನಿಗಾಗಿ ಕರುಣೆ ಉಕ್ಕಿ ಬರುತ್ತಿತ್ತು. ಇಲ್ಲ, ಅಮ್ಮನ ಶೋಷಣೆಯಾಗಲು ಬಿಡುವುದಿಲ್ಲ. ಸರಳತೆಯ  ಮೂರ್ತಿಯಾದ ಅವಳ ತಾಯಿ ಜೀವನದಲ್ಲಿ ಒಮ್ಮೆ ಮಾತ್ರ ಬಂಡಾಯವೆದ್ದಿದ್ದರು. ಆ ಬಂಡಾಯದಿಂದಲೇ ತಾನು ಈ ಜಗತ್ತಿಗೆ ಬಂದಿದ್ದು. ಆತ್ತೆ ಹಾಗೂ ಗಂಡನ ಎದುರಿಗೆ ಒಮ್ಮೆ ಮಾತ್ರ ಬಾಯಿ ತೆರೆದಿದ್ದರು. ಆ ಸಮಯದಲ್ಲಿ ಆಕೆಗೆ ಅಷ್ಟು ಧೈರ್ಯ ಹೇಗೆ ಬಂದಿರಬಹುದು? ಇದುವರೆಗೆ ಕವಿತಾಗೆ ಅರ್ಥವಾಗಿರಲಿಲ್ಲ. ಮಾತೃತ್ವದ ತಾಕತ್ತೇ ಅದು. ಮಗಳು ಹುಟ್ಟಿದ ನಂತರ ಅಪ್ಪನಿಗೆ ಹೆಚ್ಚಿನ ಆರ್ಥಿಕ ಲಾಭ ಉಂಟಾಗಿತ್ತು. ಬಹುಶಃ ಈ ಕಾರಣದಿಂದಲೇ ಅಪ್ಪ ಮಗಳನ್ನು ಲಕ್ಷ್ಮೀ ಎಂದು ಭಾವಿಸುತ್ತಿದ್ದರು.

ಹಾಗೆ ನೋಡಿದರೆ ಅವರಿಗೆ ಮಗ ಬೇಕಾಗಿತ್ತು. ಮಗಳು ಹುಟ್ಟಿದ ನಂತರ ಅಪ್ಪನಿಗೆ ವೃತ್ತಿಯಲ್ಲಿ ಉನ್ನತಿಯಾಗುತ್ತಾ ಹೋಯಿತು. ಹೀಗಾಗಿ ಕವಿತಾ ಅಪ್ಪನ ಮುದ್ದಿನ ಮಗಳಾದಳು. ಮೆಡಿಕಲ್ ಕಾಲೇಜ್‌ ಸೇರಿದ ಮೇಲಂತೂ ಅಪ್ಪ ಸ್ವರ್ಗವೇ ಧರೆಗಿಳಿದಂತೆ ಕುಣಿದಿದ್ದರು. ಅವರು ಒಂದು ದೊಡ್ಡ ಪಾರ್ಟಿ ಇಟ್ಟುಕೊಂಡಿದ್ದು ಎಲ್ಲರೊಂದಿಗೆ, “ನನಗಂತೂ ಮೊದಲಿನಿಂದಲೂ ಮಗಳೇ ಬೇಕೆನಿಸಿತ್ತು. ಹೆಣ್ಣು ಮಕ್ಕಳು ಮನೆಯಲ್ಲಿ ಬೆಳದಿಂಗಳಂತೆ ಇರುತ್ತಾರೆ. ಕವಿತಾ ನಮ್ಮ ಮನೆಯ ನಂದಾದೀಪ,” ಎನ್ನುತ್ತಿದ್ದರು.

ಇನ್ನೂ ಏನೇನೋ ಹೇಳುತ್ತಿದ್ದರು. ಹತ್ತಿರದಲ್ಲಿ ಇದ್ದ ಅವರ ಹೆಂಡತಿ ಮಾತಾಡದೇ ಕೇಳುತ್ತಿದ್ದರು ಹಾಗೂ ಮನದಲ್ಲೇ ಮುಗುಳ್ನಗುತ್ತಿದ್ದರು. ಯಾರಾದರೂ ಅರ್ಥ ಮಾಡಿಕೊಳ್ಳಲಿ ಬಿಡಲಿ, ಆ ಮುಗುಳ್ನಗೆಯನ್ನು ಕವಿತಾ ಅರ್ಥ ಮಾಡಿಕೊಂಡಿದ್ದಳು. ಒಂದುವೇಳೆ ಕವಿತಾ ಹುಟ್ಟಿದ ನಂತರ ಏನಾದರೂ ನಷ್ಟವಾಗಿದ್ದರೆ ಅವಳನ್ನೇ ಗುರಿಯಾಗಿಸುತ್ತಿದ್ದರು.

ಆದರೆ ಈ ಮಾತುಗಳಲ್ಲದೆ ಅವಳಪ್ಪ ಇನ್ನೊಂದು ಆಟ ಆಡುತ್ತಿದ್ದರು. ಆದರ ನೇರ ಪ್ರಭಾವ ಅವಳ ತಾಯಿಯ ಜೀವನದ ಮೇಲೆ ಆಗುತ್ತಿತ್ತು. ಕವಿತಾ ಬಹಳ ಹೊತ್ತು ತನ್ನ ಆಲೋಚನೆಗಳಲ್ಲೇ ಮುಳುಗಿದ್ದಳು. ಅವಳು ಪದೇ ಪದೇ ಅಮ್ಮನನ್ನು ನೋಡುತ್ತಿದ್ದಳು ಹಾಗೂ ಈ ರೀತಿ ಯೋಚಿಸುತ್ತಿದ್ದಳು, `ಅಮ್ಮನ ಮನಸ್ಸಿನಲ್ಲಿ ಲಕ್ಷಾಂತರ ಗೊಂದಲಗಳಿವೆ. ಆದರೂ ಅವರೆಂದೂ ಬಾಯಿ ಬಿಡುವುದಿಲ್ಲ. ಅಮ್ಮನ ಬಗ್ಗೆ ನನಗೆ ಚೆನ್ನಾಗಿ ಗೊತ್ತು.’

ಒಂದು ದಿನ ಕವಿತಾ ಕೋಪಗೊಂಡು ಅಮ್ಮನನ್ನು ಕೇಳಿದಳು, “ ಅಮ್ಮಾ ನೀನು ಇವೆಲ್ಲವನ್ನೂ ಏಕೆ ಹಾಗೂ ಹೇಗೆ ತಡೆದುಕೊಳ್ತೀಯ? ಅಪ್ಪನಿಗೇಕೆ ಏನು ಹೇಳಲ್ಲ? ಇಷ್ಟು ವರ್ಷಗಳ ನಂತರ ಅಪ್ಪ ನಿನ್ನನ್ನು ಬಿಟ್ಟು ಇನ್ಯಾರ ಜೊತೆಗೋ….” ಅವಳಿಗೆ ವಾಕ್ಯವನ್ನು ಪೂರ್ತಿ ಮಾಡಲಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮತ್ತೆ ಹೇಳಿದಳು, “ ಅಮ್ಮಾ, ನೀನು ಅಪ್ಪನಿಂದ ಉತ್ತರ ಕೇಳಬೇಕು. ಅನ್ಯಾಯ ಮಾಡೋದಷ್ಟೇ ಅಲ್ಲ, ಅನ್ಯಾಯಾನ ಸಹಿಸೋದೂ ಅಪರಾಧ. ನಿನ್ನ ಅಧಿಕಾರಕ್ಕಾಗಿ ನೀನು ಹೋರಾಡಬೇಕು.”

“ನಾನೇನು ಉತ್ತರ ಕೇಳಲಿ ಕವಿತಾ? ಪ್ರತಿ ಗಂಡಸಿನ ಬಳಿ ಒಂದೇ ಉತ್ತರ ಇರುತ್ತದೆ `ನನ್ನ ಮನೇಲಿ ನೀನು ಇರಬೇಕೂಂತಿದ್ದರೆ……., ಕವಿತಾ, ಯಾವ ಮನೆಗಾಗಿ ಮಹಿಳೆ ಜೀವ ತೇಯುತ್ತಾಳೋ ಆ ಮನೆ ಯಾವತ್ತೂ ಅವಳದಾಗಿರಲಿಲ್ಲ ಎಂಬ ವಿಷಯ ಒಂದು ದಿನ ಇದ್ದಕ್ಕಿದ್ದಂತೆ ಅನಾಯಾಸವಾಗಿ ತಿಳಿಯುತ್ತದೆ. ಚಿಕ್ಕಂದಿನಲ್ಲಿ ಅವಳಮ್ಮ ಹೇಳಿರ್ತಾಳೆ, ಅತ್ತೆಮನೆಗೆ ಹೋಗಿ ನಿನ್ನ ಮನೇಲಿ ಏನು ಮಾಡಬೇಕೂಂತಿದ್ದೀಯೋ ಅದನ್ನು ಮಾಡು ಎಂದು. ಅವಳು ತನ್ನ ಮನೆ ಎಂದುಕೊಂಡು ಮದುವೆಯ ನಂತರ ಅತ್ತೆ ಮನೆಗೆ ಬರುತ್ತಾಳೆ. ಅದನ್ನು ತನ್ನ ಮನೆ ಎಂದು ತಿಳಿದು ಅಲಂಕರಿಸುತ್ತಾಳೆ. ಆದರೆ ಇದ್ದಕ್ಕಿಂತೆ `ಒಂದು ವೇಳೆ ನನ್ನ ಮನೇಲಿ ಇರಬೇಕೂಂತಿದ್ದರೆ….’ ಎಂಬ ಮಾತು ಕೇಳಬೇಕಾಗುತ್ತದೆ. ಆ ಹೆಣ್ಣು ಏನು ಮಾಡಬೇಕು? ತವರು ಮನೆಯಂತೂ ಮೊದಲೇ ದೂರವಾಗಿರುತ್ತದೆ. ಅತ್ತೆ ಮನೆ ಗಂಡನದಾಗಿರುತ್ತದೆ. ಮಹಿಳೆಗೆ ತನ್ನದೇ ಆದ ಮನೆ ಇದೆಯೋ ಇಲ್ಲವೋ? ಇದ್ದರೆ ಅದು ಎಲ್ಲಿದೆ? ಯಾರ ಬಳಿಯಾದರೂ ಈ ಪ್ರಶ್ನೆಗಳಿಗೆಲ್ಲಾ ಉತ್ತರವಿದೆಯೇ?”

ಅಮ್ಮ ಮೊದಲ ಬಾರಿ ಇಷ್ಟೆಲ್ಲಾ ಮಾತಾಡಿದ್ದರು, ಬಹುಶಃ ಅನೇಕ ವರ್ಷಗಳಿಂದ ಅದುಮಿಟ್ಟ ನೋವು ಇಂದು ಹೊರಗೆ ಬಂದಿತ್ತು.  ಅಮ್ಮನ ಮಾತು ಕೇಳಿ ಕವಿತಾ ಸ್ತಬ್ಧಳಾಗಿದ್ದಳು. ಮಾತಾಡಲು ಆಗುತ್ತಿರಲಿಲ್ಲ.

“ಕೇಳು ಕವಿತಾ, ಒಂದು ದಿನ ನಿಮ್ಮಪ್ಪ ಇದನ್ನೂ ಹೇಳಿದ್ದರು. ರೂಪಾ, ನಾನು ನಿನಗೆ ಯಾವುದೇ ತೊಂದರೆ ಕೊಡುವುದಿಲ್ಲ. ನೀನು ಈಗ ಇರೋ ಹಾಗೆಯೇ ಮುಂದೆಯೂ ಈ ಮನೇಲಿ ಇರಬಹುದು. ನಾನು ಪ್ರಿಯಾಳನ್ನು ಪ್ರೀತಿಸ್ತಿದ್ದೀನಿ. ಅವಳು ಇಷ್ಟಪಟ್ಟಾಗ ಈ ಮನೆಗೆ ಬಂದು ಇಲ್ಲಿಯೇ ಇರಬಹುದು. ನಮ್ಮಿಬ್ಬರ ಮಧ್ಯೆ ಬರೋಕೆ ಯಾವತ್ತೂ ಪ್ರಯತ್ನಿಸಬೇಡ. ನಮ್ಮ ಸಂಬಂಧವನ್ನು ಮುರಿಯೋಕೆ ಎಂದೂ ಯೋಚಿಸಬೇಡ. ಹೀಗೆ ಎಚ್ಚರಿಕೆ ಕೊಟ್ಟು ನನ್ನ ಉತ್ತರವನ್ನೂ ಕೇಳದೆ ನಿಮ್ಮಪ್ಪ ಹೊರಟುಬಿಟ್ರು.

“ನಿಮ್ಮ ಅಪ್ಪನ ಜೊತೆ ಹೊಂದಾಣಿಕೆ ಮಾಡಿಕೊಂಡು ಇರೋದು ಬಿಟ್ಟು ಬೇರೇನು ಉಳಿದಿತ್ತು ಕವಿತಾ? ತವರುಮನೆಯಲ್ಲಂತೂ ಅಪ್ಪ ಅಮ್ಮ ಇಬ್ರೂ ಇಲ್ಲ. ಅಣ್ಣ ಅತ್ತಿಗೆ ಹೇಗಿದ್ದಾರೇಂತ ನಿನಗೆ ಚೆನ್ನಾಗಿ ಗೊತ್ತು. ಒಂದು ವೇಳೆ ಅವರು ಒಳ್ಳೆಯವರಾಗಿದ್ರೂ  ಇಷ್ಟು ವರ್ಷಗಳ ನಂತರ ಅವರ ಮನೆಗೆ ಹೋಗಿ ಪರಾಧೀನಳಾಗಿ ಬದುಕೋದು ಇಷ್ಟವಾಗುತ್ತಾ? ಅದಕ್ಕಿಂತಾ ಈ ಮನೆಯಲ್ಲಿ ಕನಿಷ್ಠ ಒಂದು ಭ್ರಮೆಯಲ್ಲಿ ಬದುಕೋದು ಒಳ್ಳೇದು.

“ಕವಿತಾ, ನನ್ನಂತಹ ಲೆಕ್ಕವಿಲ್ಲದಷ್ಟು ಮಹಿಳೆಯರು ತಮ್ಮ ದುಃಖಾನ, ತಮ್ಮ ಕಣ್ಣೀರನ್ನ ಒಳಗೊಳಗೇ ಕುಡಿಯುತ್ತಾ ಉಳಿದುಬಿಡುತ್ತಾರೆ.  ನನ್ನ ಬಳಿಯಲ್ಲಿ ನೀನಂತೂ ಇದ್ದೀಯ, ನಿನ್ನ ಜೊತೆ ನನ್ನ ಕಷ್ಟ, ಸುಖ, ನನ್ನ ಮನದಾಳದ ಮಾತುಗಳನ್ನು ಶೇರ್‌ ಮಾಡಿಕೊಳ್ಳಬಹುದು. ನಿನ್ನಂತಹ ಮಗಳು ಎಲ್ಲರಿಗೂ ಎಲ್ಲಿ ಸಿಗ್ತಾಳೆ? ಜೊತೆಗೆ ನಿನ್ನ ಭವಿಷ್ಯದ ಬಗ್ಗೆಯೂ ನಾನು ಯೋಚಿಸಬೇಕ್ವಾ? ಇದನ್ನೆಲ್ಲಾ ಯೋಚಿಸಿ ನಾನು ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಂಡು ಮೌನವಾಗಿದ್ದುಬಿಟ್ಟಿದ್ದೀನಿ.”

ಅಮ್ಮ ಮಗಳ ಜೊತೆ ಈ ಮಾತುಕಥೆ ನಡೆದು ಒಂದು ತಿಂಗಳಾಯಿತು. ಈ 1 ತಿಂಗಳಲ್ಲಿ ಬಹಳಷ್ಟು ಬದಲಾಗಿತ್ತು. ಎಲ್ಲಿಯವರೆಗೆಂದರೆ ಕವಿತಾ ಕೂಡ ಬದಲಾಗಿದ್ದಳು. ಮಗಳ ಬದಲಾದ ರೂಪವನ್ನು ಕಂಡು ಅಮ್ಮನಿಗೆ ಬಹಳ ಆಘಾತವಾಗಿತ್ತು. ಒಂದು ವೇಳೆ ಕವಿತಾ ಪ್ರಿಯಾಳನ್ನು ಮನಸಾರೆ ಸ್ವೀಕರಿಸಿ ಅವಳೊಂದಿಗೆ ಸ್ನೇಹದಿಂದ ವರ್ತಿಸಿದರೆ ಅವಳ ಮುಂದಿನ ಶಿಕ್ಷಣಕ್ಕೆ ವಿದೇಶಕ್ಕೆ ಹೋಗಲು ಸುಲಭವಾಗುತ್ತದೆ. ಬಹುಶಃ ಅಪ್ಪನಿಂದ ಈ ಭರವಸೆ ಕೇಳಿ ಕವಿತಾ ಬದಲಾಗಿರಬಹುದು. ಅವಳಿಗೆ ತನ್ನ ಭವಿಷ್ಯದ ಚಿಂತೆ. ತನ್ನ ಜೀವನವಂತೂ ಕಳೆದು ಹೋಯಿತು. ಮಗಳದು ಈಗಿನ್ನೂ ಶುರುವಾಗಿದೆ. ಅವಳಿಗೆ ತನ್ನ ಭವಿಷ್ಯದ ಬಗ್ಗೆ ಯೋಚಿಸು ಹಕ್ಕಂತೂ ಇರಲೇಬೇಕಲ್ಲವೇ?

ರೂಪಾ ಹೀಗೆ ಕೊಂಚ ಹೊತ್ತು ಯೋಚಿಸಿ ತಮ್ಮ ಮನಸ್ಸನ್ನು ಹಗುರ ಮಾಡಿಕೊಂಡರು.

ದಿನನಿತ್ಯದಂತೆ ಅಂದೂ ಸಹ ಪ್ರಿಯಾ ಮತ್ತು ಕವಿತಾ ಒಟ್ಟಿಗೆ ಕುಳಿತಿದ್ದರು.“ಅಂಟಿ, ಇತ್ತು ನೀವು ಬಹಳ ಸುಂದರವಾಗಿ ಕಾಣ್ತಿದೀರಿ. ಈ ನೀಲಿ ಸೀರೆ ಅಪ್ಪನಿಗೂ ಫೇವರಿಟ್‌. ಅಂದಹಾಗೆ ಆಂಟಿ…. ಸಾರಿ ನಾನು ಇದುವರೆಗೆ ನಿಮ್ಮ ಹಾಗೂ ಅಪ್ಪನ ರಿಲೇಶನ್‌ಶಿಪ್‌ ಅರ್ಥ ಮಾಡಿಕೊಂಡಿರಲಿಲ್ಲ. ಅದಕ್ಕೆ ಅದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಹೃದಯದ ಸಂಬಂಧ ಅತ್ಯಂತ ದೊಡ್ಡದು, ಅತ್ಯಂತ ಸುಂದರವಾದದ್ದೂಂತ ನನಗೀಗ ಅರ್ಥವಾಗಿದೆ.” ಕವಿತಾ ಹೇಳಿದಳು.

ಕವಿತಾಳ ಮಾತು ಕೇಳಿ ಪ್ರಿಯಾಗೆ ಖುಶಿಯಾಯಿತು. ಅವಳು ಅಪ್ಪನ ಜೊತೆಗೆ ಮಗಳನ್ನೂ ಬುಟ್ಟಿಗೆ ಹಾಕಿಕೊಂಡಿದ್ದಳು. ಈಗ ಈ ಮನೆಯಲ್ಲಿ ಅವಳ ಸ್ಥಾನ ಸುರಕ್ಷಿತವಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಅವಳು ಶಾಶ್ವತವಾಗಿ ಈ ಮನೆಗೆ ಬಂದು ನೆಲೆಸಬಹುದು. ಈ ಕಲ್ಪನೆಯಿಂದಲೇ ಪ್ರಿಯಾ ಗೆಲುವಾದಳು.

ಸ್ವಲ್ಪ ಹೊತ್ತು ಹೀಗೆ ಕಳೆಯಿತು. ಅಷ್ಟರಲ್ಲಿ ಕವಿತಾ ಸಂಪೂರ್ಣವಾಗಿ ಪ್ರಿಯಾಳಲ್ಲಿ ನಂಬಿಕೆ ಮೂಡಿಸಿದ್ದಳು. ಅಂದು ಪ್ರಿಯಾ ಬಂದಾಗ ಮನೆಯಲ್ಲಿ ಕವಿತಾ ಒಬ್ಬಳೇ ಇದ್ದಳು. ಅವಳ ಅಪ್ಪ ಗಿರೀಶ್‌ 2 ದಿನಗಳಿಗಾಗಿ ಬೇರೆ ಊರಿಗೆ ಹೋಗಿದ್ದರು. ಸ್ವಲ್ಪ ಹೊತ್ತು ಅದು ಇದೂ ಮಾತನಾಡಿದ ನಂತರ ಕವಿತಾ ಪ್ರಿಯಾಗೆ ಹೇಳಿದಳು, “ ಆಂಟಿ, ನಿಮ್ಮನ್ನು ಏನೋ ಕೇಳಬೇಕು.”

“ಕೇಳು ಕವಿತಾ, ಈಗ ನಾನು ನಿನ್ನ ತಾಯಿ ಸಮಾನ, ಏನು ಬೇಕಾದರೂ ಕೇಳು.”

“ಆಂಟಿ, ನಿಮಗೆ ನಮ್ಮಪ್ಪನ ಮೇಲೆ ಪೂರ್ತಿ ನಂಬಿಕೆ ಇದೆ ಅಲ್ವಾ?”

“ ಹೌದು ಕವಿತಾ, ಯಾಕೆ ಹೀಗೆ ಕೇಳ್ತೀಯಾ?”

“ಏನಿಲ್ಲಾ ಬಿಡಿ. ಅಂಥದ್ದೇನಿಲ್ಲ, ನನ್ನದೇ ತಪ್ಪಿರಬಹುದು.”

“ಏನು ವಿಷಯ ಕವಿತಾ?” ಪ್ರಿಯಾ ಮತ್ತೆ ಕೇಳಿದಳು.

“ಏನಿಲ್ಲಾ ಆಂಟಿ, ನಂದೇ ಮಿಸ್‌ ಅಂಡರ್‌ ಸ್ಟಾಂಡಿಂಗ್‌ ಇರಬೇಕು.”

“ಪ್ಲೀಸ್‌ ಕವಿತಾ. ನನಗೆ ಹೇಳಲ್ವಾ? ನಾನೇನು ಬೇರೆಯವಳಾ?”

“ಹೇಗೆ ಹೇಳ್ಲಿ ಆಂಟಿ? ನಾನು ಇಂಥಾ ವಿಷಯಗಳನ್ನು ನಂಬಲ್ಲ, ಆದರೂ….”

“ಏನು ಆದರೂ..?” ಪ್ರಿಯಾ ಕೇಳಿದಳು.

“ಇಲ್ಲ ಆಂಟಿ, ಒಮ್ಮೊಮ್ಮೆ ಕಣ್ಣಾರೆ ನೋಡಿದ್ದು ಸುಳ್ಳಾಗುತ್ತದೆ. ನಾನು ಅಪ್ಪನನ್ನು ಇನ್ನೊಬ್ಬ ಹೆಂಗಸಿನ ಜೊತೆ ನೋಡಿದೆ. ಅವಳ ಜೊತೆ ಅವರ ಸಂಬಂಧ ಹೇಗಿದೆಯೋ ಗೊತ್ತಿಲ್ಲ. ಬಿಡಿ. ಈಗ್ಯಾಕೆ ಆ ವಿಷಯ?”

ಪ್ರಿಯಾಳ ಎದೆಬಡಿತ ಹೆಚ್ಚಾಯಿತು. ಅವಳ ಮನಸ್ಸಿನಲ್ಲಿ ಅಸುರಕ್ಷತೆಯ ಭಾವನೆ ಮೂಡಿತು.

“ಕವಿತಾ, ನೀನು ಅಪ್ಪನನ್ನು ಯಾವಾಗ ಯಾರೊಂದಿಗೆ ನೋಡ್ದೆ?” ಪ್ರಿಯಾ ಕೇಳಿದಳು.

“ಬಿಡಿ ಆಂಟಿ, ಯಾರೋ ಗುರುತಿನವರು ಇರಬಹುದು. ನಾನು ಅಮ್ಮನಿಗೆ ಇದರ ಬಗ್ಗೆ ಹೇಳಿದಾಗ ಅವರು ನಗತೊಡಗಿದರು. ಅವರು ಏನು ಹೇಳಿದರೂ ಅಂದ್ರೆ…”

“ಏನು ಹೇಳಿದ್ಲು ರೂಪಾ?”

“ಅಮ್ಮನಿಗೆ ಈ ವಿಷಯ ಏನೂ ಪರಿಣಾಮ ಬೀರಲಿಲ್ಲ. ಅದರಲ್ಲಿ ಹೊಸ ವಿಷಯ ಏನಿದೆ ಅಂದ್ರು ಅವರು. ನಿಮ್ಮಪ್ಪ ಎಂದಾದರೂ ಒಬ್ಬಳ ಪ್ರಿಯಕರ ಆಗಿದ್ರಾ? ಅವರ ಜೀವನದಲ್ಲಿ ಪ್ರಿಯಾನೇ ಕಡೆಯ ಮಹಿಳೇನಾ? ಅವರ ಬದುಕಿನಲ್ಲಿ ಎಷ್ಟೊಂದು ಹೆಣ್ಣುಗಳು ಬಂದರು… ಹೋದರು. ನಾನು ಎಷ್ಟೋ ವರ್ಷಗಳಿಂದ ನೋಡಿಕೊಂಡು ಬಂದಿದ್ದೀನಿ. ಹೀಗಾಗಿ ಪ್ರಿಯಾಗೂ ಒಂದು ದಿನ ಕೆಟ್ಟದಾಗಿ ಮಾತಾಡಿಲ್ಲ, ಬಹಳ ಬೇಗ ಪ್ರಿಯಾ ಬಗ್ಗೇನೂ ಅವರಿಗೆ ಬೇಸರವಾಗುತ್ತೆ. ಆಗ ಇನ್ಯಾರೋ ಬರ್ತಾಳೆ… ತನ್ನ ಪತ್ನಿಗೇ ಒಳ್ಳೆಯ ಗಂಡನಾಗದೇ ಇರೋನು ಎಂದಾದರೂ ಬೇರೆ ಹೆಣ್ಣಿಗೆ ಉತ್ತಮ ಸಂಗಾತಿ ಆಗ್ತಾನಾ?”

ಕವಿತಾ ಮುಂದುವರಿಸಿದಳು, “ ಬಿಡಿ ಆಂಟಿ, ಇವತ್ತು ಓದಿ ಓದಿ ಸುಸ್ತಾಗಿದೆ. ಬನ್ನಿ, ಯಾವುದಾದರೂ ಸಿನೆಮಾಗೆ ಹೋಗೋಣ. ಅಪ್ಪನೂ 2 ದಿನ ಊರಲ್ಲಿ ಇರಲ್ಲ.”

“ಕವಿತಾ, ಪ್ಲೀಸ್‌ ನನಗೆ ಪೂರ್ತಿ ವಿಷಯ ಹೇಳು. ನಿಮ್ಮಪ್ಪನ್ನ ಯಾರ ಜೊತೆ ನೋಡಿದೇಂತ ಹೇಳಲೇ ಇಲ್ಲ.”

“ಅವರು ಯಾರೂಂತ ನನಗೆ ಗೊತ್ತಿಲ್ಲ ಆಂಟಿ.”

“ಕವಿತಾ, ಆ ಹೆಂಗಸು ನಿಮ್ಮಪ್ಪನ ಜೊತೆ ಇರೋದನ್ನ ನನಗೆ ತೋರಿಸ್ತೀಯಾ?”

“ಟ್ರೈ ಮಾಡ್ತೀನಿ ಆಂಟಿ. ಇಬ್ಬರೂ ಒಟ್ಟಿಗೆ ಕಂಡರೆ ನಿಮಗೆ ಫೋನ್‌ ಮಾಡ್ತೀನಿ. ನೀವು ಬೇಗ ಬಂದ್ಬಿಡಿ. ಆದರೆ ಆಂಟಿ, ನನಗೆ ನೀವು ಪ್ರಾಮಿಸ್‌ ಮಾಡಿ. ಅಪ್ಪನನ್ನು ಏನೂ ಕೇಳಲ್ಲಾಂತ. ಜನರ ಮುಂದೆ ಅಪ್ಪನ ಮುಂದೆ ಎಲ್ಲವನ್ನೂ ನಿಮಗೆ ಹೇಳಿದೆ. ನಮ್ಮ ಅಮ್ಮನಿಗೆ ಈ ಮನೆ ಇದೆ. ಇಲ್ಲಿಂದ ಅವರನ್ನು ಯಾರೂ ಓಡಿಸೋಕೆ ಆಗಲ್ಲ. ಆದರೆ ಆಂಟಿ, ನಿಮ್ಮ ಭವಿಷ್ಯದ ಗತಿ ಏನು? ನನಗೆ ನಿಮ್ಮದೇ ಚಿಂತೆಯಾಗಿದೆ. ಆದ್ದರಿಂದ…….” ಕವಿತಾ ಪ್ರಿಯಾಳ ಕೈ ಒತ್ತುತ್ತಾ ಹೇಳಿದಳು. ಪ್ರಿಯಾ ಯಾವುದೋ ಯೋಚನೆಯಲ್ಲಿ ಮುಳುಗಿಹೋಗಿದ್ದಳು.

4 ದಿನಗಳ ನಂತರ ಇದ್ದಕ್ಕಿದ್ದಂತೆ ಅವಳಿಗೆ ಕವಿತಾಳಿಂದ ಫೋನ್‌ ಬಂತು “ಆಂಟಿ, ನಾನು ಒಂದು ಜಾಗದ ಅಡ್ರೆಸ್‌ ಹೇಳ್ತೀನಿ. ಈಗಲೇ ಬಂದು ಬಿಡಿ. ಪ್ಲೀಸ್‌ ಏನೂ ಗಲಾಟೆ ಮಾಡಬಾರದು. ನಂಗೆ ಪ್ರಾಮಿಸ್‌ ಮಾಡಿದ್ದೀರಿ. ದೂರದಿಂದ ನೋಡಿ ಹೋಗಿ. ಆಮೇಲೆ ನಿಮ್ಮಿಷ್ಟದಂತೆ ಮಾಡಬಹುದು.”

ಕವಿತಾ ಹೇಳಿದ ಅಡ್ರೆಸ್‌ ಬಳಿ ಪ್ರಿಯಾ ಹೋದಾಗ ಗಿರೀಶ್‌ ಯಾರೋ ಅಪರಿಚಿತ ಮಹಿಳೆಗೆ ಅಂಟಿಕೊಂಡು ಕೂತಿರುವುದು ಕಂಡು ಬಂತು. ಅವನ ಬಳಿ ಧಾವಿಸಿ ಕೆನ್ನೆಗೆ ಎರಡೇಟು ಬಿಗಿಯಬೇಕೆಂದು ಪ್ರಿಯಾಗೆ ಮನಸ್ಸಾಯಿತು. ಆದರೆ ಕವಿತಾಗೆ ಪ್ರಾಮಿಸ್‌ಮಾಡಿದ್ದರಿಂದ ಸುಮ್ಮನಿದ್ದಳು. ಸ್ವಲ್ಪ ಹೊತ್ತಿಗೆ ಅವಳು ಅಲ್ಲಿಂದ ಹೊರಟಳು. ಅವಳ ಮನಸ್ಸಿನಲ್ಲಿ ಕವಿತಾಳ ಮಾತುಗಳು ಗುಂಯ್‌ಗುಡುತ್ತಿದ್ದವು, “ತನ್ನ ಪತ್ನಿಗೆ ಒಳ್ಳೆಯ ಗಂಡನಾಗದೇ ಇರೋನು ಎಂದಾದರೂ ಬೇರೆ ಹೆಂಗಸಿಗೆ ಉತ್ತಮ ಸಂಗಾತಿ ಆಗ್ತಾನಾ?’ ಮನೆಗೆ ಹೋದ ಮೇಲೆ ಅವಳಿಗೆ ಇಡೀ ರಾತ್ರಿ ಕಣ್ಣಿಗೆ ನಿದ್ದೆ ಹತ್ತಲಿಲ್ಲ.

ಮರುದಿನ ಕವಿತಾ ಅವಳ ಮನೆಗೆ ಬಂದು ಹೇಳಿದಳು, “ ಆಂಟಿ….” ಅವಳು ಮುಂದೆ ಮಾತಾಡುವಷ್ಟರಲ್ಲಿ ಪ್ರಿಯಾ ಹೇಳಿದಳು, “ಕವಿತಾ, ನಿಮ್ಮ ಅಪ್ಪನನ್ನು ಇದರ ಬಗ್ಗೆ ಕೇಳೋಣ ಅನ್ನಿಸ್ತು. ಆದರೆ ರಾತ್ರಿಯೆಲ್ಲಾ ಯೋಚಿಸಿದ ನಂತರ ಅನ್ನಿಸಿತು, ಅವರು ಅದಕ್ಕೂ ಏನಾದರೊಂದು ಸಬೂಬು ಹೇಳಿಬಿಡ್ತಾರೆ. ನನಗೆ ನಿಜ ಹೇಳೋದಿಲ್ಲ ಅಂತ. ನಂತರ ನನಗೆ ನನ್ನ ತಪ್ಪು ಗೊತ್ತಾಯ್ತು. ನಾನೂ ನಿನ್ನ ಅಮ್ಮನ ಅಧಿಕಾರ ಕಿತ್ಕೊಂಡಿದ್ದೆ ಅಲ್ವಾ?”

“ ಇಲ್ಲ ಆಂಟಿ, ಅದರಲ್ಲಿ ನಿಮ್ಮ ತಪ್ಪೇನು ಇಲ್ಲ. ನೀವು ಬಹುಶಃ ಅಪ್ಪನನ್ನು ಒಳ್ಳೆಯ ಮನಸ್ಸಿನಿಂದ ಇಷ್ಟಪಟ್ಟಿದ್ರಿ. ಆದರೆ ಅಮ್ಮ ಹೇಳ್ತಾರೆ ಅಪ್ಪನಿಗೆ ಎಲ್ಲಾ ಹೆಣ್ಣುಗಳೂ ಒಂದು ಗೊಂಬೆಯ ಸಮಾನ ಅಂತ. ಅಮ್ಮ ಅನೇಕ ವರ್ಷಗಳಿಂದ ಇವೆಲ್ಲವನ್ನು ಸಹಿಸಿಕೊಂಡು ಅಪ್ಪನ ಜೊತೆ ಸಂಸಾರ ಮಾಡ್ತಿದ್ದಾರೆ. ಅವರಿಗಾದರೂ ಅಪ್ಪನ ಜೊತೆ ಮದುವೆಯಾಗಿದೆ. ಆದರೆ ಇವೆಲ್ಲವನ್ನೂ ನೀವೇಕೆ ಸಹಿಸಿಕೊಳ್ಳಬೇಕು? ನಿಮಗೆ ಅಪ್ಪನ ಜೊತೆ ಮದುವೆ ಆಗಿಲ್ಲ. ನೀವಂತೂ ಈಗ ಸ್ವತಂತ್ರರಾಗಿದ್ದೀರಿ. ಏನು ಬೇಕಾದರೂ ಮಾಡಬಹುದು.”

“ಕವಿತಾ, ನಾನೆಲ್ಲಿ ಹೋಗ್ಲಿ, ಏನು ಮಾಡಲಿ? ನನಗೇನೂ ಅರ್ಥ ಆಗ್ತಿಲ್ಲ.”

“ಆಂಟಿ, ನೀವು ಇಷ್ಟಪಟ್ಟರೆ ನಿಮಗೊಂದು ನೌಕರಿ ಕೊಡಿಸ್ತೀನಿ, ಆದರೆ ಬೇರೆ ಊರಿಗೆ ಹೋಗಬೇಕಾಗುತ್ತೆ.”

“ನನಗೆ ಕೆಲಸ ಬೇಕು. ಈಗ ಈ ಊರೇ ನನಗೆ ಬೇಸರವಾಗಿಬಿಟ್ಟಿದೆ. ನಾನಿಲ್ಲಿ ಮೋಸ ಹೋಗಿದ್ದನ್ನು ಎಂದೂ ಮರೆಯೋಕಾಗಲ್ಲ.”

“ಸರಿ ಅಂಟಿ, ನನ್ನ ಫ್ರೆಂಡ್‌ದು ಒಂದು ಬೊಟಿಕ್‌ ಇದೆ. ಅಲ್ಲಿ ನಿಮಗೆ ಕೆಲಸ ಕೊಡಿಸ್ತೀನಿ. ಇದು ನೋಡಿ ಅದರ ಅಡ್ರೆಸ್‌. ನೀವು ಇತ್ತೇ ಅಲ್ಲಿಗೆ ಹೊರಡಿ.”

ಪ್ರಿಯಾ ಕವಿತಾಗೆ ಕೃತಜ್ಞತೆ ಅರ್ಪಿಸಿದಳು. ಅವಳು ಅಂದೇ ಸಂಜೆ ಹೊರಟುಬಿಟ್ಟಳು. ಕವಿತಾ ಅವಳನ್ನು ರೈಲ್ವೆ ಸ್ಟೇಷನ್‌ವರೆಗೆ ಬಿಟ್ಟು ಬಂದಳು.

ಗಿರೀಶ್‌ ಊರಿನಿಂದ ಬಂದು 2 ದಿನಗಳವರೆಗೆ ಪ್ರಿಯಾಳನ್ನು ಕಾಯುತ್ತಿದ್ದರು. ಪ್ರಿಯಾ ಬರಲೇ ಇಲ್ಲ. ಅವಳು ಎಲ್ಲಿಗೆ ಹೋದಳು ಎಂದು ಅವರಿಗೆ ಆಶ್ಚರ್ಯವಾಗಿತ್ತು. ಕವಿತಾಳನ್ನು ಕೇಳಿದಾಗ ಅವಳು “ಅಪ್ಪಾ, ಪ್ರಿಯಾ ಆಂಟಿ ನಿಮಗೂ ಹೇಳದೆ ಹೇಗೆ ಹೋಗ್ತಾರೆ? ನನಗಂತೂ ಅವರು ಬಹಳ ಕ್ಲೋಸ್‌ ಆಗಿದ್ದರು. ಅವರಿಗೆ ಒಳ್ಳೆಯ ಕೆಲಸ ಸಿಕ್ಕಿದೆ. ಅದಕ್ಕೆ ಹೊರಟುಬಿಟ್ರು. ಅವರು ಹೋಗುವಾಗ ನನಗೆ ಏನು ಹೇಳಿದ್ರು ಗೊತ್ತಾ?”

“ಏನು ಹೇಳಿದ್ಲು?”

“ಅವರು ನಿಮ್ಮ ಬಗ್ಗೆ ನನಗೆ ಬಹಳಷ್ಟು ವಿಷಯಗಳನ್ನು ಹೇಳಿದರು. ತನ್ನ ಪತ್ನಿಗೆ ಒಳ್ಳೆಯ ಗಂಡನಾಗದೇ ಇರೋನು ನನಗೆ ಒಳ್ಳೆಯ ಸಂಗಾತಿಯಾಗ್ತಾನಾ? ಅವರ ಸ್ನೇಹ ಮಾಡಿದ್ದು ನನ್ನ ತಪ್ಪು. ಈಗ ನನಗೆ ನಿನ್ನ ಅಪ್ಪನಿಗಿಂತಲೂ ಒಳ್ಳೆಯ ಸಂಗಾತಿ ಸಿಕ್ಕಿದ್ದಾರೆ ಅಂತೆಲ್ಲಾ ಹೇಳಿದರು….”

“ಹೌದಾ? ಪ್ರಿಯಾ ಹೀಗೆಲ್ಲಾ ಹೇಳಿದ್ಲಾ?”

“ಹೌದಪ್ಪ, ಅವರು ನನಗೆಷ್ಟು ಕ್ಲೋಸ್‌ ಆಗಿದ್ರು. ಆದರೆ ಕೊನೆಗೆ ಬಹಳ ಸ್ವಾರ್ಥಿ ಆಗಿಬಿಟ್ರು. ನಿಮ್ಮನ್ನು ಚೆನ್ನಾಗಿ ಯೂಸ್ ಮಾಡ್ಕೊಂಡು ಈಗ ಬಿಟ್ಟು ಹೋದ್ರು, ಈಗೇನು ಮಾಡೋದಪ್ಪ?”

“ ಏನು ಮಾಡೋದು? ಅವಳಿಲ್ಲದೆ ನನಗೆ ಇರೋಕಾಗಲ್ವ? ಅವಳಿಗೆ ದರದು ಇತ್ತು, ನನಗಿರಲಿಲ್ಲ. ನನಗೆ ಮನೆ, ಹೆಂಡತಿ, ಮಗಳು, ಎಲ್ಲರೂ ಇದ್ದಾರೆ!” ಪುರುಷನ ಅಹಂ ಮಾತಾಡಿತು.

ಕವಿತಾ ಅಂದು ರಾತ್ರಿ ಎಲ್ಲ ವಿಷಯವನ್ನೂ ಅಮ್ಮನಿಗೆ ಹೇಳಿ ನಗುತ್ತಿದ್ದಳು“ವಾಹ್! ಕವಿತಾ, ನೀನಂತೂ ಚಮತ್ಕಾರವನ್ನೇ ಮಾಡಿಬಿಟ್ಟೆ. ನನಗೆ ಏನೂ ಹೇಳಲಿಲ್ಲ. ನಾನಂತೂ ನಿನ್ನ ಮೇಲೆ ಏನೇನೋ ಯೋಚಿಸುತ್ತಿದ್ದೆ,” ಎಂದರು.

“ಮಗಳ ಮೇಲೇ ಅಪನಂಬಿಕೆನಾ? ಮಗಳಿಗೆ ಜನ್ಮ ಕೊಡೋಕೆ ಅತ್ತೆ, ಗಂಡನೊಂದಿಗೆ ತಾಯಿ ಹೋರಾಟ ಮಾಡ್ತಾಳೆ. ಆ ಮಗಳು ತನ್ನ ತಾಯಿಗೆ ಇಷ್ಟು ಮಾಡೋಕಾಗಲ್ವ?”

“ಆದರೆ ಕವಿತಾ, ಇಷ್ಟೆಲ್ಲಾ ನೀನು ಹೇಗೆ ಮಾಡಿದೆ? ನೀನು ಪ್ರಿಯಾಗೆ ತೋರಿಸಿದೆಯಲ್ಲಾ ಅವಳು ಯಾರು?”

“ಅಮ್ಮಾ, ನನ್ನ ಫ್ರೆಂಡ್‌ ಒಬ್ಬಳ ಸೋದರತ್ತೆ ಸ್ಟೇಜ್‌ ಆರ್ಟಿಸ್ಟ್. ಅವರ ಸಹಾಯದಿಂದ ಇದೆಲ್ಲಾ ಮಾಡೋಕಾಯ್ತು,” ಎಂದು ಕವಿತಾ ಅಮ್ಮನಿಗೆ ವಿಷಯಗಳನ್ನು ವಿಸ್ತಾರವಾಗಿ ತಿಳಿಸಿದಳು.

ಅಮ್ಮ ಕೇಳಿಸಿಕೊಳ್ಳುತ್ತಿದ್ದರು.“ಅಮ್ಮಾ, ನಿಜ ಹೇಳು, ನೀನು ಅಪ್ಪನನ್ನು ಮನಸಾರೆ ಕ್ಷಮಿಸ್ತಿಯಾ? ಮತ್ತೆ ಪ್ರೀತಿಯಿಂದ ಅವರನ್ನು ಸ್ವೀಕರಿಸ್ತೀಯಾ? ಒಂದು ವೇಳೆ ನೀನೇ ಇಂಥ ತಪ್ಪು ಮಾಡಿದ್ರೆ ಅಪ್ಪ ನಿನ್ನನ್ನೆಂದೂ ಕ್ಷಮಿಸುತ್ತಿರಲಿಲ್ಲ.”

“ಕವಿತಾ, ಅವರು ಗಂಡಸರು. ಅವರನ್ನು, ಕ್ಷಮಿಸೋದು ಬಿಟ್ಟು ನನ್ನ ಬಳಿ ಬೇರೆ ಯಾವ ದಾರಿ ಇದೆ? ಒಂದು ಸಾರಿ ತಪ್ಪು ಮಾಡಿದರು ತಿದ್ದುಕೊಂಡರೆ ಅವರಿಗೆ ಇನ್ನೊಂದು ಅವಕಾಶ ಕೊಡಬೇಕು.”

“ಅಮ್ಮಾ , ಅದೆಲ್ಲಾ ಹಳೆಯ ವಿಷಯ. ತಪ್ಪುಗಳನ್ನು ಮಾಡುತ್ತಲೇ ಇದ್ರೆ ಎಷ್ಟೂಂತ ಅವಕಾಶ ಕೊಡೋದು? ಪ್ರಿಯಾಳ ಜಾಗದಲ್ಲಿ ನಾಳೆ ಇನ್ನೊಬ್ಬ ಮಹಿಳೆ ಮತ್ತೆ ಅಪ್ಪನ ಬದುಕಿನಲ್ಲಿ ಬಂದರೆ ಆಗ ಏನು ಮಾಡೋದು? ಹೀಗೇ ಗುಟುಕು ಗುಟುಕಾಗಿ ಈ ಉಸಿರು ಕಟ್ಟುವ ವಾತಾವರಣದಲ್ಲಿ ಬದುಕ್ತೀಯಾ? ಎಲ್ಲಿಯವರೆಗೆ? ಎಲ್ಲಿಯವರೆಗೆ ಹೇಳಮ್ಮಾ?

“ಅಮ್ಮಾ, ನನಗೂ ಅಪ್ಪನ ಬಗ್ಗೆ ಫೀಲಿಂಗ್ಸ್ ಇವೆ. ಅದರೆ ನಾನು ನ್ಯಾಯದ ಪರ. ಪುರುಷರಿಗೂ ಅವರ ತಪ್ಪಿಗೆ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ಇದು ಹೀಗೇ ಮುಂದುವರೀತಾ ಇರುತ್ತೆ.”

“ಕವಿತಾ, ಈ ವಯಸ್ಸಿನಲ್ಲಿ ನಾನು ಎಲ್ಲಿಗೆ ಹೋಗಲಿ? ಏನೂ ಮಾಡಲಿ?”

“ಅಮ್ಮಾ, ಆ ಚಿಂತೆ ಎಲ್ಲಾ ನನಗೆ ಬಿಡು. ಆಗ ನನ್ನ ಜವಾಬ್ದಾರಿ ನಿನ್ನದಾಗಿತ್ತು. ಈಗ ನಾನು ನಿನ್ನ ಜವಾಬ್ದಾರಿ ತಗೋಳ್ಳೋಕೆ ಆಗಲ್ವಾ? ಮಗಳಾಗಿದ್ರೆ ಏನಾಯ್ತು? ಒಂದು ಬಾಗಿಲು ಮುಚ್ಚಿದ್ರೆ ಇನ್ನೊಂದು ಬಾಗಿಲು ಎಲ್ಲಾದ್ರೂ ತೆರೆದುಕೊಳ್ಳುತ್ತೆ. ನಾವು ಅದನ್ನು ಹುಡುಕಿಕೊಳ್ಳಬೇಕು ಮತ್ತು ಉಪಯೋಗಿಸಿಕೊಳ್ಳಬೇಕು. ನೀನು ಹೊಸ ದಾರಿ ಹುಡುಕಿಕೊಳ್ಳೋಕೆ ಸಿದ್ಧವಾಗಿದ್ದೀಯಾ ಹೇಳು.

“ಅದು ಈ ಮನೇಲಿ ಇದ್ದುಕೊಂಡೂ ಆಗಬಹುದು ಅಥವಾ ಹೊರಗೆ ಹೋಗಿಯೂ ಆಗಬಹುದು. ಎಲ್ಲಿ ಇಚ್ಛೆ ಇದೆಯೋ ಅಲ್ಲಿ ದಾರಿ ಅಗತ್ಯವಾಗಿ ಇದೆ. ಧೈರ್ಯ ಒಂದು ಬೇಕಷ್ಟೆ. ಏನು ಮಾಡಬೇಕೂಂತಿದ್ದೀಯಾ? ಈ ನಿನ್ನ ಮಗಳು ಯಾವಾಗಲೂ ನಿನ್ನ ಜೊತೆಗಿರುತ್ತಾಳೆ. ಆದರೆ ನಿನ್ನ ಇಚ್ಛೆಗೆ ವಿರುದ್ಧವಾಗಿ ನಾನೇನೂ ಮಾಡಲ್ಲ.”

ರೂಪಾ ಸ್ವಲ್ಪ ಹೊತ್ತು ಮಗಳ ಉಜ್ವಲವಾದ ಮುಖವನ್ನೇ ನೋಡುತ್ತಿದ್ದರು. ಮಗಳ ಮಾತುಗಳು ಎಲ್ಲಿಯವರೆಗೆ? ಎಲ್ಲಿಯವರೆಗೆ? ಎಂಬುದು ಅವಳ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದ್ದ. ಸಾಕು, ಇನ್ನು ಸಹಿಸೋದು ಬೇಡ. ಅವರು ನಿಧಾನವಾಗಿ ತಮ್ಮ ಕೈಗಳನ್ನು ಮಗಳತ್ತ ಚಾಚಿದರು. ಇನ್ನೊಂದು ಕಡೆ ಎಲ್ಲೋ ದೂರದಲ್ಲಿ ಸೂರ್ಯನ ಹೊಸ ಕಿರಣಗಳು ಭೂಮಿಯನ್ನು ಚುಂಬಿಸಲು ಬರುತ್ತಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ