ಮುಂಜಾನೆ 8 ಗಂಟೆಯ ಸಮಯ. ಅರ್ಚನಾ ಅಡುಗೆಮನೆಯಲ್ಲಿ ತಿಂಡಿ ಸಿದ್ಧಪಡಿಸುವಲ್ಲಿ ಮಗ್ನಳಾಗಿದ್ದಳು. ಆಕೆಯ ಪತಿ ಮನೋಜ್ ಹಾಗೂ ಮಕ್ಕಳಾದ ಸುರೇಶ್ ಸಹನಾ ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದರು. ಅತ್ತೆಮಾವಂದಿರಾದ ರಾಧಿಕಾ ಮತ್ತು ನರೇಂದ್ರ ಕೂಡ ಅಲ್ಲಿಯೇ ಕುಳಿತಿದ್ದರು.
ರಾಧಿಕಾ, “ಮಾನಸಾ ಇಂದು ಆಫೀಸಿಗೆ ಹೋಗುತ್ತಾಳೆ…. ಇನ್ನಷ್ಟು ದಿನ ಆಕೆ ರಜೆ ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು,” ಎಂದರು.
“ಅವಳು ರಜೆ ಪಡೆದು 1 ತಿಂಗಳಾಯ್ತು. ಇನ್ನೆಷ್ಟು ದಿನ ರಜೆ ಪಡೆಯಲು ಆಗುತ್ತೆ. ಈಗ ಅವಳು ಆಫೀಸಿಗೆ ಹೋಗಲೇಬೇಕು,” ನರೇಂದ್ರ ಹೇಳಿದರು.
“ಹೌದು, ನೀವು ಹೇಳೋದು ಸರಿ. ಮದುವೆಯಾಗಿ 1 ತಿಂಗಳಾಯ್ತು. ಈಗಂತೂ ಅವಳು ಹೋಗಲೇಬೇಕು,” ಎಂದರು ರಾಧಿಕಾ. ಅರ್ಚನಾ ಅಡುಗೆಮನೆಯಿಂದಲೇ ಡೈನಿಂಗ್ ಹಾಲ್ ಕಡೆ ಗಮನಹರಿಸಿದಳು. ಅವಳ ನವಿವಾಹಿತ ಓರಗಿತ್ತಿ ಮಾನಸಾ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಆಫೀಸ್‌ಗೆ ಹೋಗಲು ಸಿದ್ಧಳಾಗಿ ನಿಂತಿದ್ಧಳು. ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ ಮಾನಸಾ ಬಹಳ ಅಂದವಾಗಿ ಕಾಣುತ್ತಿದ್ದಳು.
ಮಾನಸಾ ಅಲ್ಲಿಂದಲೇ “ಅಕ್ಕಾ, ನಾನು ಜೂಸ್ ಮಾತ್ರ ಕುಡಿದು ಹೋಗುತ್ತೇನೆ,” ಎಂದು ಹೇಳಿದಳು.
“ಎಲ್ಲರ ಜೊತೆ ಕುಳಿತು ತಿಂಡಿ ತಿಂದ್ಕೊಂಡು ಹೋಗು. ನಾನು ನಿನಗೆ ಮಧ್ಯಾಹ್ನಕ್ಕೂ ಡಬ್ಬಿ ಕೊಡ್ತೀನಿ,” ಎಂದಳು ಅರ್ಚನಾ.
“ವಾಹ್!” ಎನ್ನುತ್ತಾ ಮಾನಸಾ ಅಡುಗೆಮನೆಗೆ ಬಂದು ಅರ್ಚನಾಳನ್ನು ತಬ್ಬಿಕೊಂಡು, “ಅಕ್ಕಾ, ನೀವು ನಿಜಕ್ಕೂ ಗ್ರೇಟ್!” ಎಂದಳು.
ಅರ್ಚನಾ ಮುಗುಳ್ನಗುತ್ತಾ ಅಡಿಯಿಂದ ಮುಡಿಯವರೆಗೂ ನೋಡುತ್ತಾ, “ನೀನು ಬಹಳ ಚೆನ್ನಾಗಿ ಕಾಣ್ತೀದಿಯಾ,” ಎಂದಳು.
“ಮದುವೆಯ ಬಳಿಕ ಇದೇ ಮೊದಲ ಸಲ ಆಫೀಸಿಗೆ ಹೋಗುತ್ತಿರುವೆ. ಬಹಳ ವಿಚಿತ್ರ ಅನಿಸ್ತಿದೆ,” ಎಂದಳು ಮಾನಸಾ.
“ಸರಿ, ಈಗ ನೀನು ಎಲ್ಲರ ಜೊತೆ ಕುಳಿತು ತಿಂಡಿ ತಿನ್ನು,” ಅರ್ಚನಾ ಹೇಳಿದಳು.
“ಅತ್ತಿಗೆ, ನನಗೂ ತಿಂಡಿ ಕೊಡಿ,” ಎನ್ನುತ್ತಾ ಮೈದುನ ಕಪಿಲ್ ಕೂಡ ಅಲ್ಲಿಗೆ ಬಂದ. ಅರ್ಚನಾ ಇಡ್ಲಿ, ಸಾಂಬಾರ್, ಚಟ್ನಿ ಮಾಡಿದ್ದಳು.
“ಅಕ್ಕಾ, ನೀವೂ ಬನ್ನಿ,” ಎಂದು ಮಾನಸಾ ಕರೆದಳು.
“ನಾನು ಆಮೇಲೆ ತಿಂತೀನಿ, ನೀವೆಲ್ಲ ತಿನ್ನಿ,” ಅರ್ಚನಾ ಅಡುಗೆಮನೆಯಿಂದಲೇ ಹೇಳಿದಳು.
“ಇಲ್ಲ ಅಕ್ಕಾ, ಅದೆಲ್ಲ ನಡೆಯಲ್ಲ, ನಾಳೆಯಿಂದ ನೀವು ನಮ್ಮ ಜೊತೆಗೇ ಕುಳಿತು ತಿಂಡಿ, ಊಟ ಮಾಡಬೇಕು,” ಎಂದಳು ಮಾನಸಾ.
ಅರ್ಚನಾಳ ಬಾಯಿಂದ ಯಾವುದೇ ಮಾತುಗಳು ಹೊರಬರಲಿಲ್ಲ. ಅವಳ ಕಣ್ಣುಗಳು ತೇವಗೊಂಡವು. ನಮ್ಮ ಜೊತೆಗೇ ಕುಳಿತು ತಿಂಡಿ ತಿನ್ನು ಎಂದು ಈವರೆಗೂ ಯಾರೊಬ್ಬರೂ ಅವಳಿಗೆ ಹೇಳಿರಲಿಲ್ಲ. ಅರ್ಚನಾಳಿಗೆ ಆಶ್ಚರ್ಯವಾಗಿತ್ತು. ಅವಳ ಕೈಗಳು ಕೆಲಸದಲ್ಲಿ ಬಹುವೇಗವಾಗಿ ಚಲಿಸುತ್ತಿದ್ದವು. ಮನಸ್ಸು ಅದಕ್ಕೂ ಹೆಚ್ಚಿನ ವೇಗ ಪಡೆದುಕೊಂಡಿತ್ತು.
ಮೈದುನ ಕಪಿಲ್, ಗಂಡ ಮನೋಜ್‌ಗಿಂತ 7 ವರ್ಷ ಚಿಕ್ಕವನು. ಮಾವ ನರೇಂದ್ರ ಕೂಡ ಆಫೀಸ್‌ಗೆ ಹೋಗುತ್ತಿದ್ದರು. ಕಪಿಲ್‌ಗಾಗಿ ಮಾನಸಾಳನ್ನು ಆಯ್ಕೆ ಮಾಡಿದ್ದು ಅತ್ತೆ ರಾಧಿಕಾ. ಆಧುನಿಕ ಸ್ಮಾರ್ಟ್ ಹುಡುಗಿಯಾಗಿದ್ದ ಮಾನಸಾ ಅರ್ಚನಾಳಿಗೆ ಮೊದಲ ದಿನದಿಂದಲೇ ಬಹಳ ಇಷ್ಟವಾಗಿಬಿಟ್ಟಿದ್ದಳು. ಇತ್ತೀಚೆಗೆ ಅತ್ತೆಯ ಬದಲಾದ ವರ್ತನೆಯ ಬಗ್ಗೆ ಅರ್ಚನಾಳಿಗೆ ಬಹಳ ಆಶ್ಚರ್ಯವಾಗಿತ್ತು. ಆಧುನಿಕ ನಡೆನುಡಿಯ ಮಾನಸಾಳ ವರ್ತನೆ ಅತ್ತೆಮಾಂದಿರಿಗೆ ಇಷ್ಟವಾಗುವುದಿಲ್ಲ ಎಂದೇ ಅವಳು ಯೋಚಿಸಿದ್ದಳು. ಆದರೆ ಮನೆಯಲ್ಲಿನ ಬದಲಾದ ವಾತಾವರಣ ಆಕೆಯಲ್ಲಿ ಅಚ್ಚರಿ ಮೂಡಿಸಿತ್ತು. ಅತ್ತೆಮಾವನವರ ದೃಷ್ಟಿಯಲ್ಲಿ ಮಾನಸಾಳ ಬಗ್ಗೆ ಸ್ನೇಹ ಹಾಗೂ ಗೌರವ ಎದ್ದು ಕಾಣುತ್ತಿತ್ತು.
ಮಾನಸಾ ಔಷಧಿ ಕಂಪನಿಯೊಂದರಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಮನೆಯ ಹಿರಿಯ ಸೊಸೆ ಎಂಬ ದೃಷ್ಟಿಕೋನದಿಂದ ಅರ್ಚನಾ ಅತ್ತೆ ಮಾವ, ಗಂಡ ಹಾಗೂ ಕುಟುಂಬದವರು ಹೇಳಿದ್ದನ್ನೆಲ್ಲ ಕಣ್ಮುಚ್ಚಿಕೊಂಡು ಪಾಲಿಸುತ್ತಿದ್ದಳು.
ಅಡುಗೆ ಕೆಲಸ ಮುಗಿಸಿದ ಅರ್ಚನಾ ಹೊರಗೆ ಬಂದವಳೇ ಒಮ್ಮೆ ಮಾನಸಾಳತ್ತ ದೃಷ್ಟಿಹರಿಸಿ, ಬಳಿಕ ಅತ್ತೆಯ ಕಡೆ ನೋಡಿದಳು. ಅತ್ತೆ ಕಿರಿಯ ಸೊಸೆಗೆ,“ಮಾನಸಾ, ನೀನು ಹಣೆಬೊಟ್ಟು, ಮಂಗಳಸೂತ್ರ, ಬಳೆ ಏನನ್ನೂ ಧರಿಸಿಲ್ಲವಲ್ಲ ಏಕೆ?” ಎಂದರು.
ಮಾನಸಾ ಮುಗುಳ್ನಗುತ್ತ ಹೇಳಿದ ಉತ್ತರ ಕೇಳಿ ಎಲ್ಲರಿಗೂ ಒಂದು ರೀತಿಯ ಆಶ್ಚರ್ಯವಾಯಿತು, “ಅತ್ತೆ, ಇದೆಲ್ಲದರ ಅವಶ್ಯಕತೆ ಇದೆಯೇನು? ಗಂಡ ಹೆಂಡತಿಯ ನಡುವೆ ಪ್ರೀತಿವಿಶ್ವಾಸ ಇರಬೇಕು. ಅದು ನಮ್ಮಿಬ್ಬರ ನಡುವೆ ಇದೆ. ಉಳಿದೆಲ್ಲ ಇದ್ದೇ ಇರಬೇಕು ಎಂದು ನನಗೆ ಅನಿಸುವುದಿಲ್ಲ. ಅತ್ತೆ, ಹಬ್ಬಗಳು ಮತ್ತು ಸಮಾರಂಭ ಇದ್ದಾಗ ನಾನು ಖಂಡಿತ ಅವೆಲ್ಲವನ್ನೂ ಧರಿಸ್ತೀನಿ. ಆದರೆ ಆಫೀಸ್‌ಗೆ ಈ ಡ್ರೆಸ್ ಮೇಲೆ ಅವೆಲ್ಲವನ್ನೂ ಧರಿಸಿಕೊಂಡು ಹೋಗುವುದು ಅಷ್ಟೊಂದು ಸರಿ ಎನಿಸುವುದಿಲ್ಲ,” ಎಂದವಳೇ ಅವರ ಉತ್ತರಕ್ಕೂ ಕಾಯದೇ, “ಸರಿ ಅತ್ತೆ ನಾನಿನ್ನು ಬರ್ತೀನಿ,” ಎಂದು ಕಾರಿನ ಬೀಗದ ಕೈ ಎತ್ತಿಕೊಂಡು ಹೊರಟೇಬಿಟ್ಟಳು. ಅತ್ತೆ ಮುಗುಳ್ನಕ್ಕು ಸುಮ್ಮನಾಗಿಬಿಟ್ಟರು. ಅವರ ಬಾಯಿಂದ ಹೊರಬಂದದ್ದು ಇಷ್ಟೇ, “ನಿನಗೆ ಹೇಗೆ ತಿಳಿಯುತ್ತೋ ಹಾಗೆ ಮಾಡು.” ಮಾನಸಾಳ ಅಚ್ಚರಿ ಹುಟ್ಟಿಸುವಂಥ ಸ್ಪಷ್ಟ ನುಡಿಗಳು, ಆತ್ಮವಿಶ್ವಾಸದಿಂದ ಮಾತನಾಡುವ ಧೈರ್ಯ ಎಲ್ಲವನ್ನೂ ನೋಡಿದ ಅರ್ಚನಾಳಿಗೆ ಅವಳಲ್ಲೇನೋ ವಿಶೇಷತೆ ಇದೆ ಎಂದು ಅನಿಸಿತು. ಆದರೆ ಅತ್ತೆಯ ಬದಲಾದ ವರ್ತನೆ ಮಾತ್ರ ಅವಳ ಮನಸ್ಸಿಗೆ ಚುಚ್ಚಿದಂತಿತ್ತು. ಅವಳಿಗೆ ತಿಂಡಿ ತಿನ್ನಲು ಆಗಲಿಲ್ಲ. ಏನೋ ತಿನ್ನುವ ಶಾಸ್ತ್ರ ಮುಗಿಸಿ ತನ್ನ ರೂಮಿಗೆ ಹೋದಳು. ಕನ್ನಡಿಯಲ್ಲಿ ತನ್ನನ್ನೊಮ್ಮೆ ನೋಡಿಕೊಂಡಳು. ಡಜನ್‌ನಷ್ಟು ಬಣ್ಣ ಕಳೆದುಕೊಂಡ ಬಳೆಗಳು, ಜುಮುಕಿಗಳು, ಮಂಗಳಸೂತ್ರ, ಹಣೆಬೊಟ್ಟು, ಹೊಳಪಿಲ್ಲದ ಮುಖ. ಆದರೆ ಇಂದು ಅಕಸ್ಮಿಕವಾಗಿ ಅಳಿಗೆ ಅದೇ ಬಳೆಗಳು, ಬಟ್ಟೆಗಳು ಚುಚ್ಚಿದಂತಾಯಿತು. ಅವಳು ಬಳೆ ಹಾಗೂ ಆಭರಣಗಳನ್ನು ಕಳಿಚಿಟ್ಟಳು. ಬಹಳ ನಿರಾಳವೆನಿಸಿತು. ಹಾಗೆಯೇ ಮಲಗಿಬಿಟ್ಟಳು. ಆಧುನಿಕವಾಗಿ ತನಗೆ ತಕ್ಕಂತೆ ತಾನಿರುವುದರಲ್ಲಿ ಯಾವುದೇ ತಪ್ಪಿಲ್ಲ ಎನಿಸತೊಡಗಿತು. ಇಂದು ಅವಳಿಗೆ ತನ್ನ ಮೇಲೆಯೇ ಕೋಪ ಬರುತ್ತಿದೆ ಎಂದು ಅವಳಿಗೆ ಗೊತ್ತಾಗಲೇ ಇಲ್ಲ. ಅವಳೇ ತಾನೆ ಈವರೆಗೂ ಸಂಸ್ಕಾರಂತ, ದೊಡ್ಡವರನ್ನು ಗೌರವಿಸಬೇಕೆಂಬ ಗುಣಗಳನ್ನು ಅಳವಡಿಸಿಕೊಂಡು ಆದರ್ಶ ಸೊಸೆಯಾಗಲು ಹೊರಟಿದ್ದು. ಹಿರಿಯರು ಅಧಿಕಾರ ಎಂಬ ಹೆಸರಿನಲ್ಲಿ ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಪುರುಷರು ವಿವಾಹಿತರಾದರೂ ಸ್ವತಂತ್ರರಾಗಿರುತ್ತಾರೆ ಹೀಗೆ….. ಏನೇನೋ ವಿಚಾರದಲ್ಲಿ ಮುಳುಗಿಹೋದಳು.
“ಅಕ್ಕಾ, ಅಡುಗೆಮನೆ ಸ್ವಚ್ಛಗೊಳಿಸಿದ್ದಾಯಿತು. ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸಲಾ?” ಎಂದು ಮನೆಗೆಲಸದ ಕಮಲಾಬಾಯಿ ಕರೆದಾಗ ಅವಳ ವಿಚಾರ ಸರಣಿ ತುಂಡಾಯಿತು.
ಅರ್ಚನಾ ಧಡಕ್ಕನೆದ್ದು ಕೈಗೆ 2 ಬಳೆ ಹಾಕಿಕೊಂಡು, ಕೊರಳಿಗೆ ತೆಳ್ಳನೆಯ ಚೈನು, ಕಿವಿಗೆ ಹಗುರವಾದ ಟಾಪ್ಸ್ ಧರಿಸಿ ಉಳಿದೆಲ್ಲವನ್ನೂ ಎತ್ತಿಟ್ಟು ಹೊರಗೆ ಬಂದಳು. ಅತ್ತೆ ರಾಧಿಕಾ ಅವಳನ್ನು ಅಡಿಯಿಂದ ಮುಡಿಯವರೆಗೂ ನೋಡಿದರೂ ಅವರು ಯಾವೊಂದು ಮಾತು ಆಡಲಿಲ್ಲ. ತಾನು ಮಾನಸಾಳನ್ನು ನಕಲು ಮಾಡುತ್ತಿದ್ದೇನೆ ಎಂದು ಎಲ್ಲರೂ ಯೋಚಿಸಬಹುದೆಂದು ಅವಳಿಗೆ ಸಂಕೋಚವಾಯಿತು. ಆದರೂ ತಾನೇನು ಮಾಡಲು ಸಾಧ್ಯ? ಮಾನಸಾಳ ಮಾತು, ನಡೆ ನುಡಿ ಎಲ್ಲವೂ ಅವಳಿಗೆ ಇಷ್ಟವಾಗಿತ್ತು. ತಾನು ಮಾತ್ರ ಇದುವರೆಗೂ ಒಂದೇ ಒಂದು ದಿನ ತನ್ನ ಮನಸ್ಸಿನ ಮಾತನ್ನು ಯಾರೊಬ್ಬರ ಮುಂದೆಯೂ ಹೇಳಿಕೊಂಡಿಲ್ಲ ಎಂದುಕೊಂಡಳು.
ಮಕ್ಕಳು ಶಾಲೆಯಿಂದ ಮನೆಗೆ ಬಂದರು. ಅಮ್ಮನನ್ನು ನೋಡಿದ ಸುರೇಶ್, “ಅಮ್ಮಾ, ನೀನು ಇತ್ತು ಸ್ವಲ್ಪ ಡಿಫರೆಂಟಾಗಿ ಕಾಣಿಸ್ತಿದೀಯಾ!” ಎಂದ ಅಚ್ಚರಿಯಿಂದ.
“ಹೌದು ಮಮ್ಮಿ, ಸಿಂಪಲ್ ಬ್ಯೂಟಿಫುಲ್,” ಎಂದಳು ಸಹನಾ.
ಅವರ ಮಾತುಗಳನ್ನು ಕೇಳಿ ನಕ್ಕ ಅರ್ಚನಾ ಇಬ್ಬರನ್ನೂ ತಬ್ಬಿಕೊಂಡಳು.
ಸಂಜೆ ಎಲ್ಲರೂ ಮನೆಗೆ ವಾಪಸ್ಸಾದ ನಂತರ ಅರ್ಚನಾ ಪುನಃ ರಾತ್ರಿ ಅಡುಗೆ ಕೆಲಸದಲ್ಲಿ ನಿರತಳಾದಳು. ಮಾನಸಾ ಆಕೆಗೆ ಸಹಾಯ ಮಾಡುತ್ತಿದ್ದಳು. `’ಮಾನಸಾ, ನಿನಗೆ ದಣಿವಾಗಿರಬಹುದು. ಎಲ್ಲರ ಜೊತೆ ಕೂತು ಊಟ ಮಾಡಿ, ಮಲಗಿಕೋ. ನಾನು ಉಳಿದೆಲ್ಲ ಕೆಲಸ ಮುಗಿಸ್ತೀನಿ,” ಎಂದಳು ಅರ್ಚನಾ.
“ಸಾಧ್ಯವೇ ಇಲ್ಲ ಅಕ್ಕಾ. ಅಡುಗೆಯನ್ನೆಲ್ಲಾ ಡೈನಿಂಗ್ ಟೇಬಲ್ ಮೇಲಿಟ್ಟು ಎಲ್ಲರೂ ಜೊತೆ ಜೊತೆಗೆ ಊಟ ಮಾಡೋಣ,” ಎಂದು ಹೇಳಿ ಎಲ್ಲರಿಗೂ ತಟ್ಟೆ ಸಿದ್ಧತೆ ಮಾಡಿದಳು ಮಾನಸಾ.
ಅರ್ಚನಾ ಕೂಡಾ ಎಲ್ಲರ ಜೊತೆಗೆ ಊಟಕ್ಕೆ ಕುಳಿತಳು. ಆಗ ಕಪಿಲ್, “ಅತ್ತಿಗೆ, ನೀವೂ ಕೂಡ ನಮ್ಮ ಜೊತೆಗೆ ಊಟ ಮಾಡ್ತಿರೋದು ನಿಜಕ್ಕೂ ಖುಷಿಯ ವಿಚಾರ,” ಎಂದ.
“ಹೌದು, ಎಲ್ಲರೂ ಜೊತೆಗೇ ಊಟ ಮಾಡೋದು ಬಹಳ ಹಿತವೆನಿಸುತ್ತದೆ,” ಎಂದರು ಮಾವ ನರೇಂದ್ರ.
ಮಾನಸಾ ಅರ್ಚನಾಳ ಕೊರಳನ್ನು ಬಳಸಿ, “ಈವರೆಗೆ ಅಕ್ಕ ಒಬ್ಬರೇ ಏಕೆ ಊಟ ಮಾಡುತ್ತಿದ್ದರೆಂದು ನನಗೆ ಅರ್ಥವೇ ಆಗಿಲ್ಲ…..” ಎಂದಳು.
ಅರ್ಚನಾಳ ಮನಸ್ಸು ತುಂಬಿ ಬಂತು. ಅವಳನ್ನು ಈವರೆಗೂ ಯಾರೊಬ್ಬರೂ ಇಷ್ಟು ಪ್ರೀತಿಯಿಂದ ಮಾತನಾಡಿಸಿರಲಿಲ್ಲ.
ಮರುದಿನ ಮಾನಸಾಳ ಬರ್ಥ್‌ಡೇ ಇತ್ತು. ಅರ್ಚನಾ ಬೇಗನೆ ಎದ್ದು ಮಾನಸಾಳಿಗಾಗಿ ಕೇಕ್ ತಯಾರಿಸಿದಳು. ಅವಳಿಗೆ ಆರಂಭದಿಂದಲೇ ಕೇಕ್ ತಯಾರಿಸುವ ಅಭ್ಯಾಸವಿತ್ತು. ಹೀಗಾಗಿ ಅವಳು ಕೇಕ್ ಮಾಡುವುದರಲ್ಲಿ ಪ್ರವೀಣೆಯಾಗಿದ್ದಳು. ಎಲ್ಲರೂ ಮಾನಸಾಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಮದುವೆಯ ನಂತರ ಇದು ಆ ಮನೆಯಲ್ಲಿ ಅವಳ ಮೊದಲ ಬರ್ಥ್‌ಡೇ. ಎಲ್ಲರೂ ಅವಳಿಗೆ ಏನಾದರೊಂದು ಉಡುಗೊರೆ ಕೊಟ್ಟು ಶುಭಾಶಯ ಕೋರುವವರೇ.ಅರ್ಚನಾ ಅವಳಿಗೆ ಶುಭಾಶಯ ಕೋರುತ್ತಾ, ತಾನು ಮಾಡಿದ್ದ ಕೇಕ್ ಕೊಟ್ಟಳು. ಅದನ್ನು ನೋಡಿ ಮಾನಸಾ ಚಕಿತಳಾದಳು, “ಅಕ್ಕಾ, ನೀವೇ ಇದನ್ನು ತಯಾರಿಸಿದ್ದೀರಾ? ಇದನ್ನು ನೀವು ಮನೆಯಲ್ಲಿಯೇ ತಯಾರಿಸಿದ್ದೀರಿ ಎಂದರೆ ನನಗೆ ನಂಬೋಕೇ ಆಗ್ತಿಲ್ಲ,” ಎನ್ನುತ್ತಾ ಅರ್ಚನಾಳನ್ನು ಬಾಚಿ ತಬ್ಬಿಕೊಂಡಳು.
ಅರ್ಚನಾಳಿಗೆ ಬಹಳ ಖುಷಿಯಾಯಿತು. ಅವಳು ಪ್ಯಾಕ್ ಮಾಡಿದ್ದ ಮತ್ತೊಂದು ಕೇಕ್‌ನ್ನು ಮಾನಸಾಳಿಗೆ ಕೊಡುತ್ತಾ, “ಇದನ್ನು ನಿಮ್ಮ ಆಫೀಸಿನವರಿಗೆಂದು ತಯಾರಿಸಿದ್ದೀನಿ. ಇಂದು ಈ ಮನೆಯಲ್ಲಿ ನಿನ್ನ ಮೊದಲ ಬರ್ಥ್‌ಡೇ. ಹೀಗಾಗಿ ಇದನ್ನು ನಿಮ್ಮ ಆಫೀಸಿನವರಿಗೆ ಹಂಚು,” ಎಂದಳು.
ಮಾನಸಾ ಅರ್ಚನಾಳ ಕೆನ್ನೆಗೆ ಮುತ್ತಿಟ್ಟು, “ಅಕ್ಕಾ, ನೀವು ರಿಯಲಿ ಗ್ರೇಟ್. ಮೆನಿ ಮೋರ್ ಥ್ಯಾಂಕ್ಸ್,” ಎಂದಳು.
ಎಲ್ಲರೂ ಕೇಕ್ ತಿಂದರು. ಮತ್ತೊಂದು ಕೇಕನ್ನು ಮಾನಸಾ ಖುಷಿಯಿಂದ ಆಫೀಸಿಗೆ ತೆಗೆದುಕೊಂಡು ಹೋದಳು. ಸಂಜೆ ಆಫೀಸಿನಿಂದ ಬಂದವಳೇ ಖುಷಿಯಿಂದ ಅರ್ಚನಾಳ ಕೈ ಹಿಡಿದು ಒಂದು ಸುತ್ತು ಗರಗರ ಅಂತ ಸುತ್ತಿಸಿಬಿಟ್ಟಳು, “ಅಕ್ಕಾ, ಕೇಕ್‌ನ್ನು ಆಫೀಸಿನಲ್ಲಿ ಎಲ್ಲರೂ ಹೊಗಳಿದ್ದೇ ಹೊಗಳಿದ್ದು! ಯಾವ ಬೇಕರಿಯಿಂದ ತಂದೆ ಎಂದು ಕೇಳಿದರು. ನಾನು ಅವರಿಗೆಲ್ಲ ನಮ್ಮ ಅಕ್ಕ ಮಾಡಿದ್ದೆಂದು ಹೆಮ್ಮೆಯಿಂದ ಹೇಳಿದೆ. ನಾಡಿದ್ದು ನನ್ನ ಗೆಳತಿ ಅಮೃತಾಳ ಹುಟ್ಟುಹಬ್ಬ. ಅವಳಿಗೂ ಇದೇ ರೀತಿ ಕೇಕ್ ಮಾಡಿಸಿಕೊಡು ಎಂದು ಕೇಳಿದ್ದಾಳೆ,” ಎಂದಳು.
ಅರ್ಚನಾ ಮುಗುಳ್ನಗುತ್ತಾ, “ಆಯ್ತು ಮಾನಸಾ, ಮಾಡಿಕೊಡ್ತೀನಿ,” ಎಂದಳು.
ಮಾನಸಾ ಅಂದು ಮನೆಯವರನ್ನೆಲ್ಲಾ ಡಿನ್ನರ್‌ಗೆಂದು ಹೊರಗೆ ಕರೆದುಕೊಂಡು ಹೋದಳು. ಅರ್ಚನಾಳಿಗೆ ತನ್ನ ಬರ್ಥ್‌ಡೇ ದಿನ ನೆನಪಿಗೆ ಬಂತು. ಅವಳು ಮುಂಜಾನೆ ಎದ್ದ ತಕ್ಷಣ ತನ್ನ ಅತ್ತೆಮಾವಂದಿರ ಕಾಲು ಮುಟ್ಟಿ ನಮಸ್ಕರಿಸುತ್ತಾಳೆ. ಅವರು ಅವಳಿಗೊಂದು ಕವರ್ ಕೊಡುತ್ತಾರೆ. ಮನೋಜ್ ಮತ್ತು ಮಕ್ಕಳು ವಿಶ್ ಮಾಡುತ್ತಾರೆ. ಮನೋಜ್ ಅವಳಿಗೊಂದು ಸೀರೆ ಕೊಡಿಸುತ್ತಾನೆ. ಬಳಿಕ ಆಕೆ ಎಲ್ಲರಿಗೂ ಇಷ್ಟವಾಗುವ ಅಡುಗೆ ಮಾಡಿ, ಬಡಿಸುತ್ತಿದ್ದಳು. ಈ ರೀತಿ ಅವಳ ಬರ್ಥ್‌ಡೇ ಮುಗಿದುಹೋಗುತ್ತಿತ್ತು.
ಆದರೆ ಇಂದು ಮಾನಸಾ ಎಲ್ಲರಿಗೂ ಡಿನ್ನರ್ ವ್ಯವಸ್ಥೆ ಮಾಡಿದ್ದಳು. ಬಿಲ್ ಪಾವತಿ ಮಾಡುವಾಗ ಅವಳ ಮನಸ್ಸಿನ ಖುಷಿಯನ್ನು ಅರ್ಚನಾ ಅಳೆಯುತ್ತ ಅವಳಲ್ಲೇನೋ ವಿಶೇಷತೆ ಇದೆ ಎಂದು ಯೋಚಿಸುತ್ತಿದ್ದಳು.
ಮರುದಿನ ಆಕೆ ಅಮೃತಾಳ ಹುಟ್ಟುಹಬ್ಬಕ್ಕೆಂದು ಕೇಕ್ ತಯಾರಿಸಿ ಅದನ್ನು ಅಂದವಾಗಿ ಪ್ಯಾಕ್ ಮಾಡಿ ಮಾನಸಾಳಿಗೆ ಕೊಟ್ಟಳು.
ಆಫೀಸಿನಿಂದ ಮನೆಗೆ ಬರುತ್ತಿದ್ದಂತೆ ಮಾನಸಾ ಅರ್ಚನಾಳನ್ನುದ್ದೇಶಿಸಿ, “ಅಕ್ಕಾ, ನಾನು ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕು,” ಎಂದಳು.
“ಅದೇನು ಹೇಳು.”
“ಹಾಂ, ಅಡುಗೆಮನೆಯಲ್ಲಿ ಬೇಡ. ನನ್ನ ರೂಮಿಗೆ ಬನ್ನಿ.”
“ಬಾ ಹೋಗೋಣ.”
“ಅಕ್ಕಾ, ನಿಜ ಹೇಳಿ. ನಿಮಗೆ ಏನನ್ನಾದರೂ ಮಾಡುವ ಆಸಕ್ತಿ ಇದೆಯಾ?”
“ಹೌದು ಮಾನಸಾ, ನಾನು ಈತನಕ ಬೇರೆಯವರಿಗಾಗಿಯೇ ಜೀವಿಸಿದೆ. ಇನ್ನು ಮುಂದಾದರೂ ನನಗಾಗಿ ಜೀವಿಸಬೇಕು ಅನ್ನಿಸ್ತಿದೆ. ಈ ಕುಟುಂಬದಲ್ಲಿ ನನ್ನದೂ ಒಂದು ಅಸ್ತಿತ್ವ ಇದೆ ಎಂದು ತೋರಿಸಿಕೊಡಲು ಇಷ್ಟವಾಗುತ್ತದೆ. ನಾನು ಭಾರಿ ಒತ್ತಡದಲ್ಲೇ ಕಳೆದುಹೋದೆ ಎನಿಸುತ್ತಿದೆ. ನನ್ನ ಜೀವನ ನಾಲ್ಕು ಗೋಡೆಗಳ ಮಧ್ಯಕ್ಕಷ್ಟೇ ಸೀಮಿತವಾಗಿದೆ.” ಎಂದಳು ಅರ್ಚನಾ.
“ಅಕ್ಕಾ, ನಿಮ್ಮ ಈ ಸ್ಥಿತಿಗೆ ಬಹುಶಃ ನೀವೇ ಕಾರಣರು ಅನಿಸುತ್ತೆ. ನಿಮ್ಮಲ್ಲಿ ಅನೇಕ ಅರ್ಹತೆಗಳಿವೆ. ಮೊದಲು ಅವನ್ನು ಗುರುತಿಸಿ ನೀವು ಸಿದ್ಧರಾಗಿ. ನಿಮಗೊಂದು ಒಳ್ಳೆಯ ಅವಕಾಶ ಕಾಯುತ್ತಿದೆ,” ಎಂದಳು ಮಾನಸಾ.
“ಆದರೆ ಮಾನಸಾ, ನಾನೀಗ ಯಾವ ನೌಕರಿ ಮಾಡಲು ಸಾಧ್ಯ?”
“ಅಕ್ಕಾ, ನೀವೀಗ ಯಾವ ನೌಕರಿ ಮಾಡುವ ಅವಶ್ಯಕತೆಯೂ ಇಲ್ಲ. ನಿಮ್ಮ ಕೈಯಲ್ಲಿರುವ ವಿಶೇಷತೆಯನ್ನು ನೀವು ಗುರುತಿಸಿ. ನನ್ನ ಗೆಳತಿ ಅಮೃತಾಳ ತಾಯಿಯ ಬರ್ಥ್‌ಡೇ ಇದೆ. ಅದಕ್ಕಾಗಿ ನೀವು ಬಹು ದೊಡ್ಡ ಕೇಕ್‌ತಯಾರಿಸಿ ಕೊಡಬೇಕು. ಇದು ನಿಮ್ಮ ಮೊದಲ ಆರ್ಡರ್. ನಿಮ್ಮ ಈ ವಿಶೇಷತೆಗೆ ಬಹುಮಾನ ಪಡೆಯಲು ಸಿದ್ಧರಾಗಿ. ನಾನು ನಿಮಗೆ ಸಾಧ್ಯವಾದಷ್ಟು ನೆರವು ನೀಡ್ತೀನಿ. ಅತ್ತೆ ದಿನವಿಡೀ ಮನೆಯಲ್ಲಿಯೇ ಇರುತ್ತಾರೆ. ನಿಮಗೆ ಅವರಿಂದಲೂ ಸಹಾಯ ಸಿಗುತ್ತದೆ,” ಎಂದಳು.
ಅರ್ಚನಾ ಭಾವುಕಳಾದಳು. ಆಕೆ ತನ್ನ ಕಣ್ಣೀರನ್ನು ಒಳಗೊಳಗೆ ಬಚ್ಚಿಟ್ಟುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದಳಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.
“ಅಕ್ಕಾ, ನಾನು ನಿಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ಈಗಲೇ ಅಮೃತಾಳಿಗೆ ಕನ್‌ಫರ್ಮ್ ಮಾಡಿಬಿಡ್ತೀನಿ.” ಎಂದಳು.
ಅರ್ಚನಾ ತಯಾರಿಸಿದ ಕೇಕ್ ಬಗ್ಗೆ ಪಾರ್ಟಿಯಲ್ಲಿ ಎಲ್ಲರಿಂದಲೂ ಪ್ರಶಂಸೆಯ ಮಾತುಗಳು ಕೇಳಿಬಂದವು. ಆ ದಿನದ ಬಳಿಕ ಅವಳಿಗೆ ಒಂದಾದ ಮೇಲೊಂದರಂತೆ ಆರ್ಡರ್ ಬರಲಾರಂಭಿಸಿದವು. ಒಂದಕ್ಕಿಂತ ಒಂದು ರುಚಿಕಟ್ಟಾದ ಕೇಕ್‌ಗಳನ್ನು ಅರ್ಚನಾ ತಯಾರಿಸತೊಡಗಿದಳು.
ಅದೊಂದು ದಿನ ಅಚ್ಚರಿಯೇ ನಡೆದುಹೋಯಿತು. ಮಾನಸಾ ಕಪಿಲ್ ಜೊತೆ ಚರ್ಚಿಸಿ ತಮ್ಮ ಕಾಲೋನಿಯಲ್ಲಿ ಹಂಚಲ್ಪಡುತ್ತಿದ್ದ ವರ್ತಮಾನ ಪತ್ರಿಕೆಗಳ ಜೊತೆ ಕೇಕ್ ಕ್ಲಾಸ್ ಹಾಗೂ ಕೇಕ್ ಆರ್ಡರ್‌ಕುರಿತಂತೆ ಕರಪತ್ರಗಳನ್ನು ವಿತರಿಸಿದಳು.
ಅದು ಏಪ್ರಿಲ್ ತಿಂಗಳ ಮೊದಲ ವಾರ. ಶಾಲೆಗಳಿಗೆ ಆಗತಾನೇ ರಜೆ ಘೋಷಣೆ ಆಗಿತ್ತು. ಗೃಹಿಣಿಯರಿಗೆ ಹೆಚ್ಚು ಕಡಿಮೆ ವಿಶೇಷ ಕೆಲಸಗಳಿಲ್ಲವಾದ್ದರಿಂದ ಅವರಿಗೆ ಇದೊಂದು ಸದವಕಾಶವಾಯಿತು.
ಅರ್ಚನಾಳ ಉತ್ಸಾಹ ಮೇರೆ ಮೀರಿತ್ತು. ಅವಳ ಬಳಿ ಕೇಕ್ ತಯಾರಿಸುವುದನ್ನು ಕಲಿಯಲು ಅನೇಕರು ಬರತೊಡಗಿದರು. ಮನೆಯವರೆಲ್ಲರೂ ಆ ದೃಶ್ಯವನ್ನು ಅಚ್ಚರಿಯಿಂದ ನೋಡುತ್ತಿದ್ದರು. ಗಂಡ ಮನೋಜ್ ಅವಳ ಹೆಗಲು ತಟ್ಟಿ, “ನಿನಗೆ ಯಾವುದರಲ್ಲಿ ಖುಷಿ ದೊರೆಯುತ್ತದೋ ಅದನ್ನು ಸಂತೋಷದಿಂದ ಮಾಡು. ನೀನು ಏನೇ ನಿರ್ಧಾರ ಕೈಗೊಂಡರೂ ನಾನು ನಿನ್ನ ಜೊತೆಗಿರ್ತೀನಿ,” ಎಂದು ಹೇಳಿದ. ಇದು ಅವಳಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿತು.
ಅರ್ಚನಾ ಕೇಕ್ ಕ್ಲಾಸ್ ಶುರು ಮಾಡಿದಳು. ಅದರ ಜೊತೆಗೆ ಕೇಕ್‌ಗೆ ಆರ್ಡರ್‌ಗಳು ದೊರೆತಾಗ ಅವಳು ಅಷ್ಟೇ ಉತ್ಸಾಹದಿಂದ ಅದನ್ನು ತಯಾರಿಸಿಕೊಡುತ್ತಿದ್ದಳು. ಅವಳು ತಯಾರಿಸಿದ ಕೇಕ್‌ನ ಗುಣಮಟ್ಟ, ರುಚಿ ಹಾಗೂ ಪ್ರಸಿದ್ಧಿಯ ಆಧಾರದ ಮೇಲೆ ಆಕೆಗೆ ಅನೇಕ ಆರ್ಡರ್‌ಗಳು ಬರತೊಡಗಿದವು. ತನ್ನ ಜೀವನದಲ್ಲಿ ಬಂದ ಈ ಬದಲಾವಣೆಯ ಕುರಿತಂತೆ ಅವಳು ಬಹಳಷ್ಟು ಖುಷಿಯಿಂದಿದ್ದಳು.
ಅತ್ತೆ ರಾಧಿಕಾ ಕೂಡ ಮನೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಕಾರ್ಯಗಳನ್ನು ಮಾಡಲಾರಂಭಿಸಿದ್ದರು. ಮಕ್ಕಳು ಕೂಡ ತಮ್ಮ ಕೆಲಸಗಳನ್ನು ತಾವೇ ಮಾಡಲಾರಂಭಿಸಿದ್ದರು. ಎಲ್ಲರ ದೃಷ್ಟಿಯಲ್ಲೂ ಈಗ ಅವಳ ಬಗ್ಗೆ ಪ್ರೀತಿವಿಶ್ವಾಸ ಎದ್ದು ಕಾಣುತ್ತಿತ್ತು. ಅವಳು ದಿನವಿಡೀ 6-7 ಹುಡುಗಿಯರ 4-5 ಗ್ರೂಪ್ ಮಾಡಿಕೊಂಡು ಅವರಿಗೆ ತರಬೇತಿ ನೀಡುತ್ತಿದ್ದಳು. ಎಲ್ಲರ ಜೊತೆಗೂ ಅವಳದು ಸ್ನೇಹಪರ ವರ್ತನೆ.
ಈಗ ಅವಳು ಹೊಸ ಅರ್ಚನಾ ಆಗಿದ್ದಳು. ಅವಳಿಗೆ ಕುಟುಂಬದ ಜೊತೆ ಜೊತೆಗೆ, ತನ್ನ ವ್ಯಕ್ತಿತ್ವಕ್ಕೆ ಹೊಸದೊಂದು ಅಸ್ತಿತ್ವ ಕೊಡಬೇಕಿತ್ತು. ಅವಳಿಗೆ ಎಷ್ಟೊಂದು ಕೆಲಸಗಳು ಇದ್ದವೆಂದರೆ ಸರಿಯಾಗಿ ಉಸಿರಾಡಲಿಕ್ಕೂ ಸಮಯವಿರುತ್ತಿರಲಿಲ್ಲ.
ಈಗ ಮನೆಯಲ್ಲಿನ ಯಾರಾದರೊಬ್ಬರು ದಿನಕ್ಕೊಮ್ಮೆಯಾದರೂ, “ನಿನಗೆ ಸಮಯ ಸಿಕ್ಕಾಗ ಮನೆಯವರಿಗೂ ಒಂದು ಕೇಕ್‌ಮಾಡಿಕೊಡು,” ಎಂದು ಹೇಳುತ್ತಿದ್ದರು.
“ಇಷ್ಟು ದಿನ ನಾನು ಮನೆಯವರಿಗೆ ತಾನೆ ಮಾಡ್ತಿದ್ದದ್ದು? ಈಗ ಹೊರಗಿನವರಿಗೆ ಅದರ ಸವಿ ಅನುಭವಿಸಲು ಬಿಡಿ,” ಎಂದು ಅರ್ಚನಾ ನಗುತ್ತಲೇ ಹೇಳುತ್ತಿದ್ದಳು. ಆದಾಗ್ಯೂ ಅರ್ಚನಾ ಆಗಾಗ ಅಷ್ಟಿಷ್ಟು ಟೈಮ್ ಮಾಡಿಕೊಂಡು ಮನೆಯವರಿಗೂ ಕೇಕ್ ತಯಾರಿಸಿಕೊಡುತ್ತಿದ್ದಳು.
ಶಾಲಾ ಕಾಲೇಜುಗಳ ರಜೆಗಳು ಮುಗಿದುಹೋಗಿದ್ದವು. ಈಗ ಕ್ಲಾಸಿಗೆ ಬರುವವರು ಕೇವಲ ಗೃಹಿಣಿಯರು ಮಾತ್ರ ಉಳಿದಿದ್ದರು. ಅರ್ಚನಾ ಅದೇ ಲೆಕ್ಕಾಚಾರದ ಪ್ರಕಾರ ಕ್ಲಾಸುಗಳ ಸಮಯ ಹೊಂದಿಸುತ್ತಿದ್ದಳು. ಕೇಕ್‌ಗಾಗಿ ಆರ್ಡರ್ ಬಹಳ ದೂರ ದೂರದ ಪ್ರದೇಶದಿಂದ ದೊರೆಯಲು ಆರಂಭವಾಗಿದ್ದವು. ಮನೋಜ್, ಕಪಿಲ್ ಹಾಗೂ ನರೇಂದ್ರ ಅವರ ಆಫೀಸಗಳಿಂದಲೂ ಆಗಾಗ ಆರ್ಡರ್ ಸಿಗುತ್ತಿದ್ದವು.
ಬೆಂಗಳೂರಿನ ಜೆ.ಪಿ.ನಗರದ ಒಂದು ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮನೆ. ಅಲ್ಲಿದ್ದವರಿಗೆಲ್ಲ ಅರ್ಚನಾ ಈಗ ಚಿರಪರಿಚಿತಳಾಗಿಬಿಟ್ಟಿದ್ದಳು. ಕ್ರಿಸ್‌ಮಸ್ ಸಮಯದಲ್ಲಂತೂ ಆಕೆಗೆ ಎಷ್ಟೊಂದು ಆರ್ಡರ್‌ಗಳು ಸಿಗುತ್ತಿದ್ದವೆಂದರೆ, ಆಕೆ ಒಂದು ದೊಡ್ಡ ಪ್ರೊಫೆಶನಲ್ ಮೈಕ್ರೊವೇವ್ ಖರೀದಿಸಬೇಕಾಯಿತು.
ಕ್ರಿಶ್ಚಿಯನ್ ಕುಟುಂಬವೊಂದು ಕ್ರಿಸ್‌ಮಸ್ ಸಮಯದಲ್ಲಿ ಹಂಚಲೆಂದು 50 ಕೇಕ್‌ಗಳಿಗೆ ಆರ್ಡರ್ ಕೊಟ್ಟಿತು. ಅವಳು ಇಡೀ ರಾತ್ರಿ ನಿದ್ರೆ ಮಾಡದೆಯೇ ಕೇಕ್ ತಯಾರಿಸಿದಳು. ಮುಂಜಾನೆ ಮಾನಸಾ ಅವಳಿಗಾಗಿ ಚಹಾ ಮಾಡಿಕೊಂಡು ಬಂದಳು. ತನಗೆ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂಬ ಬಯಕೆ ಈಡೇರಿದ್ದಕ್ಕೆ ಮಾನಸಾಳ ಬಗ್ಗೆ ಅರ್ಚನಾಳಿಗೆ ಕೃತಜ್ಞತೆಯ ಭಾವವಿತ್ತು.
ಅರ್ಚನಾ ಮಾನಸಾಳ ಎರಡೂ ಕೈಗಳನ್ನು ಹಿಡಿದುಕೊಳ್ಳುತ್ತ, “ಮಾನಸಾ, ಇಂದು ನಾನು ಕಣ್ರೆಪ್ಪೆ ಸಹ ಮುಚ್ಚದೆ ಕೇಕ್‌ತಯಾರಿಸಿದೆ. ಆದರೂ ನನ್ನಲ್ಲಿ ಸ್ವಲ್ಪ ದಣಿವಿಲ್ಲ. ಬದಲಾಗಿ ಖುಷಿ ಮತ್ತು ಇನ್ನೂ ಮಾಡಬೇಕೆಂಬ ಉತ್ಸಾಹ ಇದೆ. ನನ್ನ ಈ ಎಲ್ಲ ಬದಲಾವಣೆಯ ಶ್ರೇಯಸ್ಸು ನಿನಗೇ ಸಲ್ಲಬೇಕು,”ಎಂದಳು ಭಾವುಕಳಾಗಿ.
“ಇಲ್ಲ ಅಕ್ಕಾ, ಪ್ರಸಿದ್ಧಿ, ಪ್ರಚಾರ ಹಣ ಗಳಿಸುವುದನ್ನು ನೀವು ಉನ್ನತಿ ಎನ್ನಬಹುದು. ಆದರೆ ನಿಮ್ಮಲ್ಲಿದ್ದ ಶ್ರದ್ಧೆ ನನಗೆ ಬಹಳ ಇಷ್ಟವಾಯಿತು. ನೀವು ತ್ಯಾಗ ಮಾಡಿ, ಅದೆಷ್ಟೋ ಕಷ್ಟಪಟ್ಟು ಮನೆಯವರಿಗಾಗಿ ಕೆಲಸ ಮಾಡುತ್ತಾ ಬಂದಿರುವಿರಿ. ನಿಮ್ಮ ಸಮರ್ಪಣೆ, ತ್ಯಾಗ ಹಾಗೂ ಸಹನಶೀಲತೆಯಿಂದ ನಾನು ಸಾಕಷ್ಟು ಪಾಠ ಕಲಿತಿರುವೆ. ನಾವು ಪ್ರಗತಿಯ ದಾರಿಯಲ್ಲಿ ಸಾಗಬೇಕು ನಿಜ. ಆದರೆ ನಿಮ್ಮ ಕೆಲವು ಗುಣಗಳನ್ನು ಸೇರಿಸಿಕೊಂಡು ಮುಂದೆ ಸಾಗಿದರೆ ಅದಕ್ಕೆ ನಿಜಕ್ಕೂ ಅರ್ಥ ಬರುತ್ತದೆ. ಅಕ್ಕಾ, ನಿಮ್ಮಲ್ಲಿರುವ ವಿಶೇಷತೆಗಳ ಬಗ್ಗೆ ನಿಮಗೆ ಅರಿವಿಲ್ಲ. ನಿಮ್ಮನ್ನು ನೋಡ್ತಾ ಇದ್ರೆ ನಿಮ್ಮಲ್ಲೇನೊ ವಿಶೇಷತೆ ಇದೆ ಎಂದು ಅನ್ನಿಸದೇ ಇರದು,” ಎಂದಳು.
“ಏ… ಇದೇನು ಹೇಳ್ತಿದೀಯಾ? ನಿನ್ನನ್ನು ನೋಡಿದಾಗ ನನಗೂ ಹಾಗೆ ಅನಿಸುತ್ತಿತ್ತು.”
“ಹೌದಾ ಅಕ್ಕಾ, ಹಾಗಾದರೆ ನಾನು `ನಮ್ಮಲ್ಲೇನೋ ವಿಶೇಷತೆ ಇದೆ,’ ಎಂದು ಹೇಳ್ತೀನಿ,” ಎಂದು ಹೇಳಿ ಜೋರಾಗಿ ನಕ್ಕಳು.
ಅರ್ಚನಾ ಕೂಡ ಅವಳ ನಗುವಿನಲ್ಲಿ ಸೇರಿಕೊಂಡಳು. ಬಳಿಕ ಪರಸ್ಪರರನ್ನು ತಬ್ಬಿಕೊಂಡರು. ಅವರ ನಗುವಿನ ಧ್ವನಿ ಡ್ರಾಯಿಂಗ್‌ರೂಮಿನಲ್ಲಿ ಕುಳಿತಿದ್ದ ನರೇಂದ್ರ ಹಾಗೂ ರಾಧಿಕಾ ಅವರಿಗೂ ಕೇಳಿಸಿತು. ಇಬ್ಬರೂ ಅಲ್ಲಿಗೆ ಬಂದು ಅವರ ಖುಷಿಯಲ್ಲಿ ಸೇರಿಕೊಂಡರು. ಮನಸ್ಸಿನಲ್ಲಿ ಸ್ನೇಹದ ಭಾವನೆಯಿದ್ದರೆ, ಇನ್ನೊಬ್ಬರ ಹಿತಕ್ಕಾಗಿ ಚಿಂತಿಸುವ ಮನಸ್ಸಿದ್ದರೆ ಎಷ್ಟು ಖುಷಿ ಇರುತ್ತದೆ ಎಂದು ಆಗ ಅವರೆಲ್ಲರಿಗೂ ಅನಿಸಿತು.