ಒಡೆದ ತುಟಿಗಳು ತೊಂದರೆ ಕೊಡುವುದಲ್ಲದೆ, ಸೌಂದರ್ಯಕ್ಕೂ ಬಾಧಕವಾಗಿರುತ್ತದೆ. ಅಸಲಿಗೆ ತುಟಿಗಳ ತ್ವಚೆ ಬಹಳ ನಾಜೂಕಾಗಿದ್ದು ತೆಳ್ಳಗೆ ಇರುತ್ತದೆ. ಚಳಿಗಾಲದಲ್ಲಿ ಅವುಗಳ ಮೇಲೆ ಶುಷ್ಕ ಚಳಿಗಾಳಿಯ ಪ್ರಭಾವ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಹವಾಮಾನದಲ್ಲಿ ತುಟಿಗಳನ್ನು ವಿಶೇಷವಾಗಿ ನೋಡಿಕೊಳ್ಳಬೇಕು.
ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಿಕ್ ಸರ್ಜನ್ ಡಾ. ಮಾಧುರಿ ಹೀಗೆ ಹೇಳುತ್ತಾರೆ, ಚಳಿಗಾಲದಲ್ಲಿ ಶುಷ್ಕತೆ ಹೆಚ್ಚಾಗಿರುತ್ತದೆ. ಆದರೂ ಮಹಿಳೆಯರು ಕಡಿಮೆ ನೀರು ಕುಡಿಯುತ್ತಾರೆ. ರೂಮ್ ಹೀಟರ್ ಹೆಚ್ಚು ಉಪಯೋಗಿಸುತ್ತಾರೆ. ಅದರಿಂದಲೂ ತ್ವಚೆ ಶುಷ್ಕವಾಗುತ್ತದೆ. ಅದರ ಪ್ರಭಾವ ತುಟಿಗಳ ಮೇಲೆ ಹೆಚ್ಚಾಗಿ ಆಗುತ್ತದೆ. ಜೊತೆಗೆ ಹೆಚ್ಚು ಮೆಂಥಾಲ್ ಇರುವ ಟೂಥ್ ಪೇಸ್ಟ್ ಕೂಡ ತುಟಿಗಳಿಗೆ ಹಾನಿಯುಂಟು ಮಾಡುತ್ತದೆ. ಸ್ಪೈಸಿ ಫುಡ್ ತಿನ್ನಲು ಬಯಸುವವರ ತುಟಿಗಳು ಹೆಚ್ಚು ಒಡೆಯುತ್ತವೆ.
ಲಿಪ್ ಕೇರ್‌ಗೆ ಸಂಬಂಧಿಸಿದಂತೆ ಕೆಲವು ಸೂಚನೆಗಳು ಹೀಗಿವೆ :
ಹೆಚ್ಚು ಸ್ಪೈಸಿ ಫುಡ್ ತಿನ್ನಬೇಡಿ. ಅದು ತುಟಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಆಹಾರದಲ್ಲಿ ಝಿಂಕ್, ಮೆಗ್ನೀಶಿಯಂ, ಐರನ್, ಕ್ಯಾಲ್ಶಿಯಂ, ವಿಟಮಿನ್ ಬಿ-12 ಇರುವುದು ಅಗತ್ಯ. ಇವೆಲ್ಲ ಹಸಿರು ತರಕಾರಿಗಳು, ಋತುವಿಗೆ ತಕ್ಕಂಥ ಹಣ್ಣುಗಳಲ್ಲಿ ಹೆಚ್ಚಾಗಿರುತ್ತದೆ. ಸೇಬು, ಕಿತ್ತಳೆ, ಕಲ್ಲಂಗಡಿ ಇತ್ಯಾದಿ ಅಗತ್ಯವಾಗಿ ಸೇವಿಸಿ.
ಈಗ ಮಹಿಳೆಯರು ವಿಧವಿಧವಾದ ಲಿಪ್‌ಸ್ಟಿಕ್ ಹಚ್ಚುತ್ತಾರೆ. ಹಿಂದೆ ಮಹಿಳೆಯರು ಲಿಪ್‌ಸ್ಟಿಕ್ ಕಡಿಮೆ ಹಚ್ಚುತ್ತಿದ್ದರು. ಅವರ ತುಟಿಗಳು ಕಡಿಮೆ ಒಡೆಯುತ್ತಿದ್ದವು. ಆದರೆ ಈಗ ಫ್ಯಾಷನ್‌ನ ಕಾಲ. ಲಿಪ್‌ಸ್ಟಿಕ್ ಇಲ್ಲದೆ ಓಡಾಡುವುದು ಅಸಾಧ್ಯ. ಸೋಶಿಯಲ್ ಲೈಫ್ ಇಂದು ಬದಲಾಗಿದೆ. ಆದ್ದರಿಂದ ಯಾವಾಗಲೂ ಒಳ್ಳೆಯ ಬ್ರ್ಯಾಂಡ್‌ನ ಲಿಪ್‌ಸ್ಟಿಕ್‌ನ್ನೇ ಹಚ್ಚಿ. ಮ್ಯಾಟ್ ಲಿಪ್‌ಸ್ಟಿಕ್ ಕಡಿಮೆ ಹಚ್ಚಿ. ಒಂದುವೇಳೆ ಮ್ಯಾಟ್ ಫಿನಿಶ್‌ಗಾಗಿ ಅಂತಹ ಲಿಪ್‌ಸ್ಟಿಕ್ ಹಚ್ಚಿದರೆ, ತುಟಿಗಳನ್ನು ಮೊದಲು ಮಾಯಿಶ್ಚರೈಸ್ ಮಾಡಲು ಮರೆಯದಿರಿ.
ಲಿಪ್‌ಸ್ಟಿಕ್‌ನ ತಪ್ಪು ಆಯ್ಕೆಯಿಂದ ತುಟಿ ಒಡೆಯುವುದಲ್ಲದೆ, ಡಾರ್ಕ್ ಆಗುತ್ತದೆ.
ಒಂದು ವೇಳೆ ತುಟಿ ಒಡೆದರೆ ಬೀಜದ ವ್ಯಾಕ್ಸ್, ಹನಿ ವ್ಯಾಕ್ಸ್ ಇರುವ ಒಳ್ಳೆಯ ಲಿಪ್ ಬಾಮ್ ಹಚ್ಚಿ. ಲಿಕ್ವಿಡ್ ಪ್ಯಾರಾಫಿನ್ ಆಯಿಲ್, ಆಲಿವ್ ಆಯಿವ್, ಕೋಕೋನಟ್ ಆಯಿಲ್ ಇತ್ಯಾದಿಗಳನ್ನು ತುಟಿಗಳಿಗೆ ಹಚ್ಚಬಹುದು.
ರಾತ್ರಿ ಯಾವಾಗಲೂ ಲಿಪ್‌ಸ್ಟಿಕ್ ತೆಗೆದು ಮಲಗಿಕೊಳ್ಳಿ. ಲಿಪ್ ರಿಮೂವರ್ ಅಲ್ಲದೆ, ಕೋಕೋನಟ್ ಆಯಿಲ್ ಅಥವಾ ಆಲಿವ್ ಆಯಿಲ್‌ನ್ನು ತುಟಿಗಳಿಗೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ಒದ್ದೆ ಕಾಟನ್‌ನಿಂದ ಒರೆಸಿ ಮಾಯಿಶ್ಚರೈಸರ್ ಹಚ್ಚಿ.
ಚಳಿಗಾಲದಲ್ಲಿ ತುಟಿಗಳ ಮೇಲೆ ಡೆಡ್ ಸ್ಕಿನ್ ಜಮೆಯಾಗುತ್ತದೆ. ಹೀಗಾದಾಗ ಕೋಕೋನಟ್ ಅಥವಾ ಆಲಿವ್ ಆಯಿಲ್‌ನ್ನು ತುಟಿಗಳಿಗೆ ಹಚ್ಚಿ ಮಕ್ಕಳ ಸಾಫ್ಟ್ ಟೂಥ್ ಬ್ರಶ್‌ನ್ನು ಒದ್ದೆ ಮಾಡಿ ಕೈಯಿಂದ ಹಗುರವಾಗಿ ತುಟಿಗಳ ಮೇಲೆ ಸವರಿ. ಅದರಿಂದ ಡೆಡ್‌ಸ್ಕಿನ್ ಹೋಗುತ್ತದೆ.
ಲ್ಯಾಕ್ಮೆ ಮೇಕಪ್ ಎಕ್ಸ್ ಪರ್ಟ್ಸ್ ಹೀಗೆ ಹೇಳುತ್ತಾರೆ, “ತುಟಿ ಒಡೆದಾಗ ಮಹಿಳೆಯರು ಹೆಚ್ಚಾಗಿ ಅವುಗಳ ಮೇಲೆ ನಾಲಿಗೆಯಿಂದ ಸವರಿಕೊಳ್ಳುತ್ತಾರೆ. ಹಾಗೆ ಮಾಡುವುದರಿಂದ ಅವು ಇನ್ನೂ ಹೆಚ್ಚು ಒಡೆಯುತ್ತವೆ. ಆದ್ದರಿಂದ ನಾಜೂಕು ತುಟಿಗಳ ಮೇಲೆ ಒಳ್ಳೆಯ ಲಿಪ್ ಕೇರ್ ಪ್ರಾಡಕ್ಟ್ ನ್ನೇ ಉಪಯೋಗಿಸಿ.
“ಲಿಪ್ ಕೇರ್ ಪ್ರಾಡಕ್ಟ್ಸ್ ತುಟಿಗಳನ್ನು ಒಡೆಯುವುದರಿಂದ ಕಾಪಾಡುವುದಲ್ಲದೇ, ಅವನ್ನು ಮಾಲಿನ್ಯ ಮತ್ತು ಸೂರ್ಯನ ಅಲ್ಟ್ರಾವೈಲೆಟ್ ಕಿರಣಗಳಿಂದಲೂ ರಕ್ಷಣೆ ನೀಡತ್ತದೆ.”
ಬ್ಲಾಕ್ ನೋಸ್ ತೊಂದರೆ ಇರುವವರಿಗೆ ಚಳಿಗಾಲದಲ್ಲಿ ತುಟಿ ಹೆಚ್ಚು ಒಡೆಯುತ್ತದೆ. ಆದ್ದರಿಂದ ಮಲಗುವ ಮೊದಲು ತುಟಿಗಳನ್ನು ಚೆನ್ನಾಗಿ ಮಾಯಿಶ್ಚರೈಸ್ ಮಾಡಿ. ಹೊಟ್ಟೆ ಕೆಟ್ಟಿದ್ದರೂ ತುಟಿಗಳು ಒಡೆಯುತ್ತವೆ.
– ಪಿ. ಕುಮುದಾ
ಜೇನುತುಪ್ಪ ಮತ್ತು ಗ್ಲಿಸರಿನ್ ಸೇರಿಸಿ ಪೇಸ್ಟ್ ಮಾಡಿ. ಇದನ್ನು ದಿನದಲ್ಲಿ ಹಲವು ಬಾರಿ ತುಟಿಗಳಿಗೆ ಹಚ್ಚಿ.
ಒಂದು ವೇಳೆ ಲಿಪ್ ಬಾಮ್ ಇಲ್ಲದಿದ್ದರೆ ಚಳಿಗಾಲದಲ್ಲಿ ಆಲಿವ್ ಅಥವಾ ಕೋಕೋನಟ್ ಆಯಿಲ್ ತುಟಿಗಳಿಗೆ ಹಚ್ಚುವುದು ಒಳ್ಳೆಯದು.
ಮೊಸರು ಅಥವಾ ಕೆನೆಯಿಂದ ತಯಾರಿಸಿದ ಬೆಣ್ಣೆಯನ್ನು ತುಟಿಗಳಿಗೆ ಹಚ್ಚಬಹುದು.