ದೀಪಾವಳಿಯಲ್ಲಿ ನಾವು ಪ್ರತಿವರ್ಷ ನಮ್ಮವರೊಂದಿಗೆ ಸೇರಿ ಮೋಜು ಮಾಡುತ್ತೇವೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು, ಉಡುಗೊರೆಗಳು ಮತ್ತು ಪಟಾಕಿಗಳ ರಾಶಿ ಇರುತ್ತವೆ. ಬಣ್ಣ ಬಣ್ಣದ ಬಲ್ಬ್ ಗಳಿಂದ ಮನೆಯನ್ನು ಅಲಂಕರಿಸುತ್ತೇವೆ, ಪಾರ್ಟಿ ಮಾಡುತ್ತೇವೆ, ಪೂಜೆ ಮಾಡುತ್ತೇವೆ. ಆದರೆ ಹಬ್ಬದ ಅರ್ಥ ಇಷ್ಟೇ ಅಲ್ಲ, ಮನಸ್ಸಿಗೆ ನಿಜವಾದ ಸಂತೋಷ ತರುವಂತಾಗಬೇಕು. ದೀಪಾವಳಿ ಆಚರಿಸುವ ಕೆಲವು ಸುಂದರ ವಿಧಾನಗಳು ಹೀಗಿವೆ :
ಲೋಕಲ್ ಪೇರೆಂಟ್ಸ್ ನ್ನು ಅಡಾಪ್ಟ್ ಮಾಡಿಕೊಳ್ಳಿ
ಕೇಳಲು ಕೊಂಚ ವಿಚಿತ್ರ ಅನ್ನಿಸುತ್ತಿದೆಯಲ್ಲವೇ? ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನ 60 ವರ್ಷಕ್ಕೂ ಅಧಿಕ ವಯಸ್ಸಿನವರು. 2025ರ ವೇಳೆಗೆ ಇನ್ನೂ 8 ಕೋಟಿ ಹೆಚ್ಚಳವಾಗುವ ಸಂಭವವಿದೆ. ಅದರಲ್ಲಿ ಬಹಳಷ್ಟು ವೃದ್ಧರು ಏಕಾಂಗಿಯಾಗಿದ್ದಾರೆ. ಇನ್ನೂ ಬಹಳಷ್ಟು ವೃದ್ಧರು ತಮ್ಮ ಮಕ್ಕಳಿಂದ ಹಿಂಸೆಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಹೆಲ್ತ್ ಏಜ್ ಇಂಡಿಯಾ ಮೂಲಕ ಮಾಡಿದ ಸಮೀಕ್ಷೆಯ ಪ್ರಕಾರ, ಶೇ.30ಕ್ಕೂ ಹೆಚ್ಚು ವೃದ್ಧರು ದೇಶದ ರಾಜಧಾನಿಗಳಲ್ಲಿ ದೂಷಣೆಗೆ ಗುರಿಯಾಗುತ್ತಿದ್ದಾರೆ. ಅದರಲ್ಲಿ ಶೇ.60 ಕೇಸುಗಳಲ್ಲಿ ವೃದ್ಧರು ತಮ್ಮ ಗಂಡು ಮಕ್ಕಳಿಂದ ಮತ್ತು ಶೇ.24 ಕೇಸುಗಳಲ್ಲಿ ಸೊಸೆಯರಿಂದ ದೂಷಣೆಗೆ ಗುರಿಯಾಗುತ್ತಿದ್ದಾರೆ. ಶೇ.76ರಷ್ಟು ವೃದ್ಧರು ತಮ್ಮ ಕುಟುಂಬದ ಮರ್ಯಾದೆ ಮತ್ತು ಮಕ್ಕಳ ಮೇಲಿನ ಪ್ರೀತಿಯಿಂದ ದೂರು ನೀಡುವುದಿಲ್ಲ. ಹೀಗಾಗಿ ಅವರು ಮನೆಯವರೊಂದಿಗಿದ್ದೂ ಏಕಾಂಗಿಗಳು, ಹೆಚ್ಚಿನವರ ಮಕ್ಕಳು ನೌಕರಿಗಾಗಿ ದೂರದ ನಗರಗಳಿಗೆ, ವಿದೇಶಗಳಿಗೆ ಹೋಗಿದ್ದಾರೆ. ಅವರ ಸಂಗಾತಿಗಳೂ ಒಂಟಿಯಾಗಿರುತ್ತಾರೆ. ಮಕ್ಕಳಿಗಾಗಿ ಕಾಯುತ್ತಿರುವ ವೃದ್ಧರ ಉದಾಸ ಕಣ್ಣುಗಳಲ್ಲಿ ನಿಮ್ಮ ಪ್ರೀತಿ ಮತ್ತು ಜೊತೆ ಕೊಟ್ಟು ಸಂತಸದ ದೀಪ ಹಚ್ಚುವಂತಹ ಸಂದರ್ಭ ಈ ದೀಪಾವಳಿಯಂದು ಬಂದಿದೆ. ಏಕಾಂತ, ಉಪೇಕ್ಷೆ, ಕಾಯಿಲೆ ಇತ್ಯಾದಿಗಳಿಂದ ಬಳಲುತ್ತಿರುವ ವೃದ್ಧರ ಬದುಕಿನ ಕತ್ತಲೆಯ ಕ್ಷಣಗಳನ್ನು ಬೆಳಗಿಸಬಹುದು. ಅದಕ್ಕಾಗಿ ನೀವು ಹೆಚ್ಚೇನೂ ಮಾಡಬೇಕಾಗಿಲ್ಲ. ಕೊಂಚ ಸಮಯ ಹಣ, ಸಹಕಾರ ನೀಡಬೇಕು. ಒಂಟಿಯಾಗಿ ಇರುವ ಅಥವಾ ಓಲ್ಡ್ ಏಜ್ ಹೋಮ್ ನಲ್ಲಿ ಬದುಕಿನ ಸಂಜೆಯನ್ನು ಕಳೆಯುತ್ತಿರುವ ವೃದ್ಧರನ್ನು ನಿಮ್ಮ ಬದುಕಿನ ಭಾಗವಾಗಿ ಮಾಡಿಕೊಂಡು ಅವರ ಬದುಕಿನಲ್ಲಿ ದೀಪಾವಳಿಯ ಕಾಂತಿಯನ್ನು ತುಂಬಿಸಿ.
ಕ್ರಿಮಿನಲ್ ಸೈಕಾಲಜಿಸ್ಟ್ ಮತ್ತು ಸಮಾಜ ಸೇವಕಿ ತನುಜಾ ಹೀಗೆ ಹೇಳುತ್ತಾರೆ, “ಫ್ಯಾಮಿಲಿ ಮೌಲ್ಯಗಳಲ್ಲಿ ಬದಲಾವಣೆಯಿಂದ ವೃದ್ಧರ ಪರಿಸ್ಥಿತಿ ನಿಕೃಷ್ಟವಾಗಿದೆ. ತಮ್ಮ ಕೈಯಾರೆ ಮಕ್ಕಳಿಗೆ ಊಟ ಮಾಡಿಸಿದ್ದ ಮಕ್ಕಳ ಬೆರಳು ಹಿಡಿದು ನಡೆಯಲು ಕಲಿಸಿದ ವೃದ್ಧರು ಮಕ್ಕಳು ಯುವಕರಾದ ನಂತರ ಅವರಿಗೆ ಸಮಸ್ಯೆಯಂತಾಗಿಬಿಡುತ್ತಾರೆ. “ರಾತ್ರಿ ಕ್ಲಬ್‌ಗಳಲ್ಲಿ ಪಾರ್ಟಿ ಎಂಜಾಯ್‌ಮಾಡಲು, ನಶೆಯಲ್ಲಿ ಮುಳುಗಲು ಮತ್ತು ಸ್ವಚಂದವಾಗಿ ಬದುಕಲು ಮತ್ತು ಅರೆಬರೆ ಉಡುಪು ತೊಡಲಿಚ್ಛಿಸುವ ಯುವಜನತೆ ತಮ್ಮ ಅಪ್ಪ ಅಮ್ಮನ ಜೊತೆ ಇರಲು ಇಚ್ಛಿಸುವುದಿಲ್ಲ. ಅವರು ಯಾವುದಾದರೊಂದು ನೆಪ ಹೇಳಿ ಅವರಿಂದ ದೂರ ಹೋಗುತ್ತಾರೆ.” ಹೀಗಿರುವಾಗ ಈ ವೃದ್ಧರ ನಿರೀಕ್ಷೆಗಳಲ್ಲಿ ಅಸಹಾಯಕತೆ, ಏಕಾಂಗಿತನ, ಕಾಯುವಿಕೆ ಮತ್ತು ಶೋಕವಲ್ಲದೆ ಬೇರೇನೂ ಇರುವುದಿಲ್ಲ. ನಾವು ಇವರ ಬದುಕನ್ನು ಬದಲಿಸಲು ಆಗುವುದಿಲ್ಲ. ಆದರೆ ಈ ಮನಸ್ಥಿತಿಯಿಂದ ಅವರನ್ನು ಹೊರಕ್ಕೆ ತರಲು ಸಹಾಯ ಮಾಡಬಹುದು. ಅವರೊಂದಿಗೆ ಸ್ವಲ್ಪ ಹೊತ್ತು ಕಳೆದು ಅವರ ಮನದಲ್ಲಿ ಸುರಕ್ಷತೆ ಹಾಗೂ ಆತ್ಮೀಯತೆಯ ಅನುಭವ ಉಂಟು ಮಾಡಬಹುದು.ಇದಕ್ಕಾಗಿ ನೀವೇನೂ ಹೆಚ್ಚಿಗೆ ಮಾಡಬೇಕಿಲ್ಲ. ಅವರಿಗೆ ಮನೆಯಲ್ಲಿ ತಯಾರಿಸಿದ ಸ್ವೀಟ್ಸ್ ಹಾಗೂ ಗಿಫ್ಟ್ ತೆಗೆದುಕೊಂಡು ಹೋಗಿ. ಅವರೊಂದಿಗೆ ಕುಳಿತು ಅವರ ಕಷ್ಟ ಸುಖ ಹಂಚಿಕೊಳ್ಳಿ. ಅವರ ಜೀವನದ ಅನುಭವಗಳನ್ನು ಕೇಳಿ. ನಿಮ್ಮ ಜೀವನಾನುಭವಗಳನ್ನು ಹೇಳಿ. ನಿಮಗೂ ಹೃದಯ ಹಗುರವಾಗುತ್ತದೆ.
ಮಕ್ಕಳೊಂದಿಗೆ ಸಮಯ ಕಳೆಯಿರಿ
ಅನೇಕ ಮಕ್ಕಳ ಬದುಕಿನಲ್ಲಿ ದೀಪಾವಳಿ ಬೆಳಕು ಹಾಗೂ ಉತ್ಸಾಹ ತರುವುದಿಲ್ಲ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಶೇ.67ಕ್ಕಿಂತ ಹಿಚ್ಚು ಬಾಲಾಪರಾಧಿಗಳು 16 ರಿಂದ 18 ವರ್ಷಗಳ ನಡುವಿನವರು ಸುಮಾರು 10 ಲಕ್ಷಕ್ಕಿಂತ ಹೆಚ್ಚು ಬೀದಿ ಮಕ್ಕಳಿದ್ದು, ಅವರಿಗೆ ಮನೆಮಠಗಳಿಲ್ಲ. ಅವರು ಭಿಕ್ಷೆ ಬೇಡಿ ಅಥವಾ ಚಿಂದಿ ಆಯ್ದು ಜೀವಿಸುತ್ತಿದ್ದಾರೆ. ಎನ್‌ಜಿಓದವರು ವರ್ಷಕ್ಕೊಮ್ಮೆ ಕೆಲವು ಪುಸ್ತಕಗಳು ಅಥವಾ ಹಣ ಕೊಟ್ಟು ತಮ್ಮ ಕರ್ತವ್ಯ ಮುಗಿಯಿತು ಎಂದುಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರಿಗೇನಾದರೂ ಸಹಾಯ ಮಾಡಬೇಕೆಂದು ಆಲೋಚಿಸುವುದು ನಮ್ಮ ಕರ್ತವ್ಯವಲ್ಲವೇ?
ಅವರ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿರುತ್ತದೆ. ಅವರಿಗೆ ಅಪ್ಪ ಅಮ್ಮ ಇರುವುದಿಲ್ಲ. ಅಂತಹುದರಲ್ಲಿ ಅವರು ಪಟಾಕಿ, ದೀಪ ಅಥವಾ ಸ್ವೀಟ್ಸ್ ಬಗ್ಗೆ ಯೋಚಿಸಲೂ ಆಗುವುದಿಲ್ಲ.
ನೀವು ಬಯಸಿದರೆ ನಿಮ್ಮ ಕೊಂಚ ಸಮಯ ಕೊಟ್ಟು ಹಣ ಖರ್ಚು ಮಾಡಿ ಹಬ್ಬದ ದಿನ ಅವರುಗಳ ಬದುಕಿನಲ್ಲಿ ಕಾಂತಿ ತರಬಹುದು.
ಗಂಟೆಗಟ್ಟಲೆ ಪಟಾಕಿ ಹೊಡೆಯುವುದು, ಡ್ರಿಂಕ್ಸ್ ಮಾಡುವುದು, ಪಾರ್ಟಿ ಮಾಡಿ ಸಮಯ ಹಾಳು ಮಾಡುವ ಬದಲು ನಿಮ್ಮ ಕೊಂಚ ಸಮಯವನ್ನು ಅಂಡರ್ ಪ್ರಿವಿಲೇಜ್ಡ್ ಅಥವಾ ಸ್ಪೆಷಲ್ ಮಕ್ಕಳೊಂದಿಗೆ ಕಳೆಯಿರಿ. ಅವರು ಇತರರೊಂದಿಗೆ ಹೆಜ್ಜೆ ಹಾಕಿ ನಡೆಯಲಾಗುವುದಿಲ್ಲ. ನಿಮ್ಮ ಹಳೆಯ ಉಡುಪುಗಳು, ಸ್ಟೇಷನರಿ ಇತ್ಯಾದಿಗಳನ್ನು ಅನಾಥಾಶ್ರಮಗಳಿಗೆ ದಾನ ಕೊಟ್ಟು. ಅವರೊಂದಿಗೆ ದೀಪಾವಳಿ ಆಚರಿಸಬಹುದು ಅಥವಾ ಅವರಿಗೆ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿ ತಿನ್ನಿಸಿ ಅವರ ಮುಖದಲ್ಲಿ ಮುಗುಳ್ನಗೆ ತರಬಹುದು. ಬಹಳಷ್ಟು ಬಡ ಹಾಗೂ ಅಂಗವಿಕಲ ಮಕ್ಕಳು ಬಹಳಷ್ಟು ಪರಿಶ್ರಮದಿಂದ ದೀಪಾವಳಿಯ ಸಂದರ್ಭದಲ್ಲಿ ಹಸ್ತಕೌಶಲ್ಯದ ವಸ್ತುಗಳನ್ನು ತಯಾರಿಸುತ್ತಾರೆ. ನೀವು ಆ ವಸ್ತುಗಳನ್ನು ಖರೀದಿಸಿ ಅವರ ಬದುಕಿನಲ್ಲಿ ಬೆಳಕು ತರಿಸಬಹುದು.
ಒಂದು ಸಂಸ್ಥೆಯ ಪ್ರೋಗ್ರಾಮ್ ಆಫೀಸರ್, ಋತು ಹೀಗೆ ಹೇಳುತ್ತಾರೆ, “ನಮ್ಮಲ್ಲಿ ಸುಮಾರು 150 ಮಕ್ಕಳಿದ್ದಾರೆ. ಅವರು ಬಡ ಕುಟುಂಬದವರು ಅಥವಾ ಸ್ಪೆಷಲ್ ಚಿಲ್ಡ್ರನ್ ಆಗಿರುತ್ತಾರೆ. ನಮ್ಮ ಉದ್ದೇಶ ಅವರು ಸಮಾಜದಲ್ಲಿ ಹಕ್ಕು ಸಹಿತ ಬದುಕಲು ಕಲಿಸುವುದು ಹಾಗೂ ಸ್ವಾವಲಂಬನೆಯತ್ತ ಮುನ್ನಡೆಸುವುದು. ಆ ಮಕ್ಕಳು ಮೇಣದ ಬತ್ತಿಗಳು, ರಂಗೋಲಿಗಳು, ಜ್ಯೂಟ್ ಬ್ಯಾಗ್ ಮಾಡುವುದರಿಂದ ಹಿಡಿದು ವೇಸ್ಟ್ ಕಾಗದಗಳಿಂದ ಬೊಂಬೆಗಳು ಮತ್ತು ಕ್ರಾಫ್ಟ್ ವರೆಗೆ ತಯಾರಿಕೆಯಲ್ಲಿ ತೊಡಗಿದ್ದಾರೆ.
“ಸಮಾಜದ ಅಂದರೆ ನಮ್ಮ ಕರ್ತವ್ಯವೇನೆಂದರೆ ಹಬ್ಬದ ಸಂದರ್ಭದಲ್ಲಿ ಅವರು ತಯಾರಿಸಿದ ಮೇಣದ ಬತ್ತಿಗಳು, ಕಾರ್ಡ್ಸ್ ಇತ್ಯಾದಿ ಖರೀದಿಸಿ ಅವರ ಮುಖದಲ್ಲಿ ಸಂತಸ ತರುವುದು. ಅವರು ತಯಾರಿಸಿದ ವಸ್ತುಗಳನ್ನು ಇಂದು ದೊಡ್ಡ ದೊಡ್ಡ ಕಾರ್ಪೋರೇಟ್ ಹೌಸ್‌ಗಳು ಖರೀದಿಸುತ್ತಿವೆ.
“ದೊಡ್ಡ ದೊಡ್ಡ ಮಾಲ್ ಗಳಲ್ಲಿ ಅವರ ಉತ್ಪಾದನೆಗಳು ಮಾರಾಟವಾಗುತ್ತಿವೆ. ಇಡೀ ವರ್ಷ ಅವರು ಏನಾದರೂ ತಯಾರಿಸಿ ಮಾರುತ್ತಿರುತ್ತಾರೆ. ದೀಪಾವಳಿಯಲ್ಲಿ ವಿಶೇಷವಾಗಿ 10-12 ಸಾವಿರ ರೂ.ಗಳ ವಸ್ತು ಮಾರಾಟವಾಗುತ್ತಿವೆ.”
ಒಂದು ಸಂಸ್ಥೆಯ ವಿಷುಯಲ್ ಆರ್ಟಿಸ್ಟ್ ಅಂಡ್ ಎಜುಕೇಶನಿಸ್ಟ್ ಉಷಾ ಹೀಗೆ ಹೇಳುತ್ತಾರೆ, “ನಮ್ಮ ಬ್ಲೈಂಡ್ ಸಂಸ್ಥೆಯಲ್ಲಿ 70-80 ಮಕ್ಕಳಿದ್ದಾರೆ. ಅವರು ಜನ್ಮದಿಂದಲ್ಲ, ಕಾಯಿಲೆಯಿಂದಾಗಿ ಕುರುಡರಾಗಿದ್ದಾರೆ. ಕೆಲವರು ಜಾಬ್ ಮಾಡುತ್ತಿದ್ದರೆ, ಕೆಲವರು ಇನ್ನೂ ಓದುತ್ತಿದ್ದಾರೆ. ಓದು ಮುಗಿಸಿ ಕೆಲಸ ಸಿಗದಿರುವವರು ಹ್ಯಾಂಡಿಕ್ರಾಫ್ಟ್ ನ ಕೆಲಸ ಮಾಡುತ್ತಿದ್ದಾರೆ. ಅವರು ಜ್ಯೂಟ್ ಬ್ಯಾಗ್, ಮೊಬೈಲ್ ಪರ್ಸ್, ಮ್ಯಾಟ್, ಉಯ್ಯಾಲೆ ಇತ್ಯಾದಿ ತಯಾರಿಸುತ್ತಾರೆ.
“ದೀಪಾವಳಿಯಂದು ಅವರು ಪ್ಲೇಟಿಂಗ್ ಅಥವಾ ಜೆಲ್ ಕ್ಯಾಂಡಲ್ಸ್, ಅಗರಬತ್ತಿಗಳು, ಚಾಕಲೇಟ್, ಗೋಲ್ಡನ್ ಟ್ರೀ (ಡೆಕೋರೇಟಿವ್ ಪೀಸಸ್) ಇತ್ಯಾದಿ ತಯಾರಿಸುತ್ತಾರೆ ಮತ್ತು ವಿಶೇಷವಾಗಿ ಕೆಲವೊಂದು ನಿರ್ದಿಷ್ಟ ಸ್ಥಳದಲ್ಲಿ ತಮ್ಮ ವಸ್ತುಗಳನ್ನು ಮಾರುತ್ತಾರೆ. ಆ ವಸ್ತುಗಳನ್ನು ಖರೀದಿಸಿ ನೀವು ಅವರ ಬದುಕಿನಲ್ಲಿ ಸಂತಸ ಮತ್ತು ಉತ್ಸಾಹ ತರಬಹುದು ಮತ್ತು ಅವರನ್ನು ಪ್ರೋತ್ಸಾಹಿಸಬಹುದು.”
ದೀಪಾವಳಿಯಂದು ಇಕೋ ಫ್ರೆಂಡ್ಲಿ ಆಗಿರಿ
ದೀಪಾವಳಿಯಂದು ಬಹಳಷ್ಟು ಪಟಾಕಿ ಹೊಡೆದು ನೀವು ಮಾಲಿನ್ಯ ಹರಡುತ್ತೀರಿ. ಪಟಾಕಿಗಳಲ್ಲಿರುವ ಲೋಹಗಳು ಅಂದರೆ ಲೆಡ್, ಕ್ಯಾಡ್ಮಿಯಂ ಇತ್ಯಾದಿ ಉಸಿರಾಟಕ್ಕೆ ತೊಂದರೆ ಮಾಡುತ್ತವೆ. ಅವನ್ನು ಉರಿಸುವುದರಿಂದ ಹೊರಬರುವ ನೈಟ್ರೋಜನ್ ಡೈ ಆಕ್ಸೈಡ್, ಸಲ್ಛರ್ ಡೈ ಆಕ್ಸೆಡ್‌ನಂತಹ ಹಾನಿಕಾರಕ ಅನಿಲಗಳ ಮಾಲಿನ್ಯದಿಂದ ಆಸ್ತಮಾ, ಬ್ರಾಂಕೈಟಿಸ್. ಗೂರಲು ಮತ್ತು ಉಸಿರಾಟದ ತೊಂದರೆಗಳನ್ನು ಹೆಚ್ಚಿಸುತ್ತವೆ. ಪಟಾಕಿಗಳ ದುಷ್ಪ್ರಭಾವದಿಂದ ರಕ್ತದೊತ್ತಡ, ಹೃದಯದ ತೊಂದರೆ, ನ್ಯೂಮೋನಿಯಾದಂತಹ ಕಾಯಿಲೆಗಳು ಹೆಚ್ಚುತ್ತವೆ.
ಒಂದು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನ ವೈದ್ಯರ ಪ್ರಕಾರ, “ದೀಪಾವಳಿಯಲ್ಲಿ ಶಬ್ದದ ಸ್ತರದಲ್ಲಿ ಅತ್ಯಧಿಕ ಹೆಚ್ಚಳವಾಗುತ್ತದೆ. ಅದು 50-60 ಡೆಸಿಬಲ್ ನಿಂದ 90-100 ಡೆಸಿಬಲ್ ವರೆಗೆ ಹೋಗುತ್ತದೆ. ಪಟಾಕಿಗಳು ಇದನ್ನು 115-120 ಡೆಸಿಬಲ್ ವರೆಗೆ ತಲುಪಿಸುತ್ತವೆ. 80 ಡೆಸಿಬಲ್ ಗಿಂತ ಅಧಿಕ ಶಬ್ದ ಕಿವಿಗಳಿಗೆ ಹಾನಿಯುಂಟು ಮಾಡುತ್ತದೆ. ದೀಪಾವಳಿ ಸಮಯದಲ್ಲಿ ಹವಾಮಾನದಲ್ಲಿ ಸಲ್ಛರ್ ಡಯಾಕ್ಸೈಡ್ ಶೇ.10ರಷ್ಟು ಮತ್ತು ಒಟ್ಟು ವಿಷಯುಕ್ತ ಅಂಶಗಳ ಪ್ರಮಾಣ 2-3 ಪಟ್ಟು ಹೆಚ್ಚುತ್ತದೆ. ಮಾಲಿನ್ಯ ಶೇ.200 ರಷ್ಟು ಹೆಚ್ಚಾಗುತ್ತಿದೆ. ಆಸ್ತಮಾ ಪೀಡಿತರಿಗೆ ಈ ಸಮಯ ಬಹಳ ಕಠಿಣವಾಗಿರುತ್ತದೆ. ದೀಪಾವಳಿಯ ನಂತರ ಶ್ವಾಸ ಸಂಬಂಧಿತ ರೋಗಿಗಳ ಸಂಖ್ಯೆ ಶೇ.30ರಷ್ಟು ಹೆಚ್ಚಾಗುತ್ತದೆ.”
ಪಟಾಕಿಗಳಲ್ಲಿರುವ ಸ್ಛೋಟಕಗಳಿಂದ ಸುಮಾರು 5 ಸಾವಿರ ಜನ ಪ್ರತಿವರ್ಷ ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಶೇ.80 ರಷ್ಟು ಪುರುಷರು. ನಾವು ಬಯಸಿದರೆ ಇಕೋ ಫ್ರೆಂಡ್ಲಿ ದೀಪಾವಳಿ ಆಚರಿಸಿ ಸ್ವಾಸ್ಥ್ಯ ಸಂಬಂಧಿತ ಎಲ್ಲ ತೊಂದರೆಗಳಿಂದ ನಮ್ಮನ್ನು ಹಾಗೂ ಸಮಾಜವನ್ನು ರಕ್ಷಿಸಿಕೊಳ್ಳಬಹುದು. ನಾವು ಪಟಾಕಿಗಳ ಬದಲು ಪ್ರಾಕೃತಿಕ ವಿಧಾನಗಳಿಂದಲೂ ಹಬ್ಬವನ್ನು ಎಂಜಾಯ್ ಮಾಡಬಹುದು.
ಬಲ್ಬ್ ಗಳ ಬದಲು ದೀಪಗಳು
ದೀಪಾವಳಿಯ ಸಂದರ್ಭದಲ್ಲಿ ನಾವು ಕಲರ್ ಫುಲ್ ಬಲ್ಬ್ ಗಳನ್ನು ಉರಿಸುತ್ತೇವೆ. ಆದರೆ ದೀಪಗಳನ್ನು ಹಚ್ಚಲು ಜಿಪುಣತನ ತೋರುತ್ತೇವೆ. ಬಲ್ಬ್ ಇತ್ಯಾದಿ ಉರಿಸಿ ವಿದ್ಯುತ್ತಿನ ಖರ್ಚನ್ನು ಹೆಚ್ಚಿಸುತ್ತೇವೆ. ಜೊತೆಗೆ ಮಿನುಗುವ ದೀಪಗಳ ಬೆಳಕು ತರುವ ಸೌಂದರ್ಯ ಈ ಆಡಂಬರದ ಬಲ್ಬ್ ಗಳಿಂದ ಸಿಗುವುದಿಲ್ಲ. ಒಂದು ವೇಳೆ ನಿಮಗೆ ಕಲರ್ ಫುಲ್ ಬೆಳಕೇ ಬೇಕೆಂದಿದ್ದರೆ ಕಲರ್‌ಮೇಣದ ಬತ್ತಿಗಳನ್ನು ಉರಿಸಬಹುದು. ಅದರ ಮಾರಾಟದಿಂದ ತಯಾರಕರಿಗೂ ಕೊಂಚ ಸಂಪಾದನೆಯಾಗುತ್ತದೆ. ಎಲ್ಇಡಿ ಲೈಟ್ಸ್ ಆಪ್ಶನ್ ಕೂಡ ಒಳ್ಳೆಯದು. ಅವು ಸುಮಾರು ಶೇ.80ರಷ್ಟು ಕಡಿಮೆ ಎನರ್ಜಿ ಉಪಯೋಗಿಸುತ್ತವೆ.
ಪಟಾಕಿಗಳ ಆಯ್ಕೆ
ಬಲೂನ್‌ಗಳಲ್ಲಿ ಗ್ಲಿಟರ್ಸ್ ಅಥವಾ ಕಲರ್ ಪೇಪರ್ ತುಂಡುಗಳನ್ನು ಹಾಕಿ ಅವನ್ನು ಒಡೆದಾಗ ಪಟಾಕಿ ಸಿಡಿಸಿದ್ದಕ್ಕಿಂತ ಹೆಚ್ಚು ಖುಷಿಯಾಗುತ್ತದೆ. ನಿಮ್ಮ ಮನೆಯ ಬಾಗಿಲುಗಳನ್ನು ಹೂಗಳಿಂದಲೂ ಅಲಂಕರಿಸಬಹುದು. ಮೆರಿಗೋಲ್ಡ್, ಜಾಸ್ಮಿನ್ ಹೂ ಮುಖ್ಯದ್ವಾರದಲ್ಲಿ ಜೊತೆಗೆ ಗುಲಾಬಿ, ಲಿಲ್ಲಿಯ ಕುಂಡಗಳು ದ್ವಾರದ ಎರಡೂ ಕಡೆ ಇದ್ದರೆ ಬಹಳ ಸುಂದರವಾಗಿ ಕಾಣುತ್ತವೆ.
ರಂಗೋಲಿ : ಹಿಂದಿನ ಕಾಲದಲ್ಲಿ ರಂಗೋಲಿಯನ್ನು ಪಕ್ಷಿಗಳಿಗೆ ತಿನ್ನಿಸಲು ಹಾಕಲಾಗುತ್ತಿತ್ತು. ಈ ದೀಪಾವಳಿಯಲ್ಲೂ ರಂಗೋಲಿಯನ್ನು ನಕಲಿ ಬಣ್ಣಗಳಿಗೆ ಬದಲಾಗಿ ಅದೇ ರೀತಿಯ ಮಸಾಲೆಗಳು ಮತ್ತು ಇತರ ಫುಡ್ ಐಟಂಗಳಿಂದ ತಯಾರಿಸಿ. ಬಿಳಿ ಬಣ್ಣಕ್ಕಾಗಿ ಅಕ್ಕಿ/ರವೆ/ಹಿಟ್ಟು, ಹಳದಿ ಬಣ್ಣಕ್ಕೆ ಅರಿಶಿನ/ಬೇಳೆಗಳು, ಕಂದು ಬಣ್ಣಕ್ಕೆ ಜೀರಿಗೆ, ಹಸಿರು ಬಣ್ಣಕ್ಕೆ ಏಲಕ್ಕಿ/ಸೋಂಪು ಮತ್ತು ಕೆಂಪು ಬಣ್ಣಕ್ಕಾಗಿ ಮೆಣಸಿನಪುಡಿ/ಕುಂಕುಮ ಉಪಯೋಗಿಸಿ. ರಂಗೋಲಿಯನ್ನು ತಾಜಾ ಹೂಗಳಿಂದಲೂ ತಯಾರಿಸಬಹುದು.
ಸಿಹಿತಿಂಡಿ : ಅಂಗಡಿಯಿಂದ ತರುವ ಬದಲು ಸಿಹಿತಿಂಡಿಗಳನ್ನು ಮನೆಯಲ್ಲೇ ತಯಾರಿಸಿ.
ಎಲ್ಲರೊಂದಿಗೆ ಬೆರೆಯಿರಿ : ಇನ್ನೊಬ್ಬರೊಂದಿಗೆ ಸೇರಿ ದೀಪಾವಳಿ ಆಚರಿಸುವ ಖುಷಿ ಒಬ್ಬರೇ ಆಚರಿಸಿದರೆ ಸಿಗುವುದಿಲ್ಲ. ಅದಕ್ಕೆ ನೀವು ಮೊದಲಿನಿಂದಲೇ ಪ್ಲ್ಯಾನ್ ಮಾಡಬಹುದು. ನಿಮ್ಮ ಸುತ್ತಮುತ್ತಲಿನ ಮಕ್ಕಳು ಮತ್ತು ಹಿರಿಯರಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಬಹುದು.
ಉದಾಹರಣೆಗೆ : ರಂಗೋಲಿ ಕಾಂಪಿಟಿಶನ್
ಫ್ಲವರ್ ಅರೇಂಜ್‌ಮೆಂಟ್ ಕಾಂಪಿಟಿಶನ್
ಸ್ವೀಟ್ ಮೇಕಿಂಗ್ ಕಾಂಪಿಟಿಶನ್
ಪೇಪರ್ ರಾಟರ್ನ್ ಕಾಂಪಿಟಿಶನ್
ಮ್ಯೂಸಿಕಲ್ ಪ್ರೋಗ್ರಾಮ್ಸ್, ಪಪಿಟ್ ಶೋಸ್, ಟ್ಯಾಲೆಂಟ್ ಶೋಸ್ ಮತ್ತು ಇತರ ಕಲ್ಚರ್ ಈವೆಂಟ್ಸ್.
ಹೀಗೆ ಸ್ಪರ್ಧೆಗಳನ್ನು ಏರ್ಪಡಿಸಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂತಸಮಯಗೊಳಿಸುವುದರ ಜೊತೆಗೆ ನಿಮ್ಮವರೊಂದಿಗೆ ನಿಮ್ಮ ಸಂಬಂಧವನ್ನು ಸದೃಢಗೊಳಿಸಬಹುದು.
ಪ್ರೇಮದ ದೀಪ ಬೆಳಗಿಸಿ : ದೀಪಾವಳಿಯಂದು ಹೃದಯದ ಸಂಬಂಧವನ್ನು ಸದೃಢಗೊಳಿಸಿ. ಪ್ರೇಮದ ದೀಪದಿಂದ ಅದನ್ನು ಬೆಳಗಿಸಿ. ಸಂಬಂಧಿಗಳೊಂದಿಗೆ ಅಥವಾ ಗೆಳೆಯರೊಂದಿಗೆ, ಪ್ರೀತಿಪಾತ್ರರೊಂದಿಗೆ ಅಥವಾ ಹಳೆಯ ಪರಿಚಿತರೊಂದಿಗಿನ ಹೃದಯದ ಸಂಬಂಧವನ್ನು ಸದೃಢಗೊಳಿಸಿ. ಈ ದೀಪಾವಳಿಯಲ್ಲಿ ನಿಮ್ಮ ಬದುಕಿನಲ್ಲಿ ಎಷ್ಟರಮಟ್ಟಿಗೆ ಮಹತ್ವದ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿ. ಮನಸ್ತಾಪಗಳನ್ನು ಪರಿಹರಿಸಿಕೊಳ್ಳಿ. ನಿಮ್ಮವರನ್ನು ಹತ್ತಿರ ಮಾಡಿಕೊಳ್ಳಿ. ಅವರಿಗೂ ಸಮಯ ಕೊಡಿ.
ದೀಪಾವಳಿಯಲ್ಲಿ ಮದ್ಯಕ್ಕೆ ಬೈ ಹೇಳಿ : ದೀಪಾವಳಿಯಲ್ಲಿ ಒಮ್ಮೊಮ್ಮೆ ಜನ ಹಳೆಯ ಆಚರಣೆಯ ಹೆಸರಿನಲ್ಲಿ ರಾತ್ರಿ ಚೆನ್ನಾಗಿ ಮದ್ಯಪಾನ ಮಾಡುತ್ತಾರೆ. ಗೆಳೆಯರೊಂದಿಗೆ ಕುಡಿಯುವುದು ಮತ್ತು ನಶೆಯಲ್ಲಿ ಮುಳುಗಿ ಹಾಡು, ಕುಣಿತ, ಮೋಜು ಮಾಡುವುದು. ಆದರೆ ಅನೇಕ ಬಾರಿ ಮದ್ಯದ ಅಮಲಿನಲ್ಲಿ ದುಷ್ಕೃತ್ಯಗಳನ್ನು ಮಾಡಿಬಿಡುತ್ತಾರೆ. ಅದರಿಂದ ದೇವಿಗೆ (ಅವಳನ್ನು ಇದುವರೆಗೆ ಯಾರೂ ನೋಡಿಲ್ಲ) ಖುಷಿಯಾಗುವುದಿಲ್ಲ. ಬದುಕಿನಲ್ಲಿ ಕಷ್ಟಗಳು ಹೆಚ್ಚಾಗುವುದು ಖಂಡಿತ. ಇದರ ಬಗ್ಗೆ ಎಷ್ಟೇ ಚರ್ಚೆಗಳಾದರೂ ಸರ್ಕಾರ ಮದ್ಯವನ್ನು ಬ್ಯಾನ್ ಮಾಡುವುದಿಲ್ಲ. ಕಸ್ಟಮ್ಸ್ ಡ್ಯೂಟಿ ಅದರ ಸಂಪಾದನೆ ಹೆಚ್ಚಿಸುತ್ತದೆ.
ಆದ್ದರಿಂದ ದೀಪಾವಳಿಯಲ್ಲಿ ಬರೀ ಸುಖ, ಸಮೃದ್ಧಿ ಮತ್ತು ಶಾಂತಿಯನ್ನು ಬಯಸಿದರೆ ಸಾಕಾಗುವುದಿಲ್ಲ. ಅವನ್ನು ಸರಿಯಾದ ಅರ್ಥದಲ್ಲಿ ಪ್ರಸ್ತುತಪಡಿಸಲು ತಮ್ಮ ಮೇಲೆ ಅಂಕುಶ ಹಾಕಿಕೊಳ್ಳುವುದು ಅಗತ್ಯ.
– ಗಿರಿಜಾ ಶಂಕರ್
ಹಬ್ಬ ಅಂದರೆ ಮೋಜು ಡ್ಯಾನ್ಸ್
ನನಗೆ ಹಬ್ಬದ ಅರ್ಥವೇ ಬೇರೆ. ನಾನು ಮೊದಲಿನಿಂದಲೂ ಶೂಟಿಂಗ್ ಮಧ್ಯೆ ಬಿಡುವಾದಾಗ ಡ್ಯಾನ್ಸ್ ಪೆಂಡಾಲ್ ಗಳಿಗೆ ಅಗತ್ಯವಾಗಿ ಹೋಗುತ್ತೇನೆ. ಹಬ್ಬದ ದಿನದಂದು ಚೆನ್ನಾಗಿ ಮೋಜು ಮಾಡುತ್ತೇನೆ. ಏಕೆಂದರೆ ಆಗಲೇ ನಮಗೆ ನಮ್ಮ ಕುಟುಂಬದವರು ಮತ್ತು ಚಿಕ್ಕಂದಿನ ಗೆಳೆಯರೊಂದಿಗೆ ಇರುವ ಅವಕಾಶ ಸಿಗುತ್ತದೆ.
– ಗುರ್ ಮಿತ್ ಚೌಧರಿ ಟಿ.ವಿ. ಕಲಾವಿದ.
ಶಿಕ್ಷಣಕ್ಕಾಗಿ ಹಣ ದಾನ ಮಾಡುತ್ತೇನೆ
ಪ್ರತಿ ವರ್ಷದಂತೆ ಈ ಬಾರಿಯೂ ನಾನು ಮುಂಬೈನ ಒಂದು ಅನಾಥಾಶ್ರಮಕ್ಕೆ ಹೋಗುತ್ತೇನೆ ಮತ್ತು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತೇನೆ. ದೀಪಾವಳಿಯಲ್ಲಿ ಮಕ್ಕಳ ಭವಿಷ್ಯ ಬೆಳಗಿಸಲು ಸಹಾಯ ಮಾಡುವುದಕ್ಕಿಂತ ಉತ್ತಮವಾದದ್ದು ಬೇರೇನಿದ್ದೀತು?
– ಗೌರವ್ ಬಜಾಜ್ ಟಿ.ವಿ. ಕಲಾವಿದ
ದೀಪಾವಳಿಯಂದು ಅನಾಥಾಶ್ರಮಕ್ಕೆ ಹೋಗುತ್ತೇನೆ
ನಾನು ಪ್ರತಿವರ್ಷ ದೀಪಾವಳಿಯಂದು ಅನಾಥಾಶ್ರಮಕ್ಕೆ ಹೋಗಿ ಬಟ್ಟೆಗಳು, ತಿಂಡಿ ಮತ್ತು ಹ್ಯಾಂಡ್ ಲೈಟ್ಸ್ ನ್ನು ಅನಾಥ ಮಕ್ಕಳಿಗೆ ಹಂಚುತ್ತೇನೆ. ಈ ಸಲ ಅದನ್ನೇ ಮಾಡುತ್ತೇನೆ. ಹಾಗೆ ಮಾಡುವುದರಿಂದ ನನಗಾಗುವ ಸಂತೋಷವನ್ನು ಮಾತುಗಳಲ್ಲಿ ವರ್ಣಿಸಲಾಗುವುದಿಲ್ಲ.
– ಪೂಜಾ ಗೌರವ್ ಟಿ.ವಿ. ಕಲಾವಿದೆ.
ದೀಪಾವಳಿ ಹೃದಯದಿಂದ ಆಚರಿಸಿ
ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿಯನ್ನು ಅನಾಥ ಮಕ್ಕಳೊಂದಿಗೆ ಆಚರಿಸುತ್ತೇನೆ. ಮಕ್ಕಳಿಗೆ ಗೊಂಬೆಗಳು, ಚಾಕಲೇಟ್ಸ್ ಮತ್ತು ಸ್ವೀಟ್ಸ್ ಕೊಡುವುದು ನನಗೆ ಇಷ್ಟ. ಅದರಿಂದ ನನಗೆ ತುಂಬಾ ಖುಷಿಯಾಗುತ್ತದೆ.
– ಸ್ಮಿತಾ ಬನ್ಸ್ ಟಿ.ವಿ. ಕಲಾವಿದೆ.