ಮಾಧುರಿ ಹೀಲ್ಸ್ ಧರಿಸಿ ಸ್ಟೈಲಾಗಿ ಸಾಕಷ್ಟು ಸಲ ನಡೆದಿದ್ದಾಳೆ, ಓಡಿದ್ದಾಳೆ, ಕುಣಿದಿದ್ದಾಳೆ. ಆದರೆ ಅಂದು ಬ್ಯಾಡ್ ಲಕ್. ಹೀಲ್ಸ್ ಹಾಕಿದ್ದರಿಂದ ಸ್ಲಿಪ್ ಆಯ್ತು. ಬರೀ ಉಳುಕಬೇಕಿದ್ದ ಕಾಲಿಗೆ ಮೂರು ಫ್ರಾಕ್ಚರ್ ಆಗಿಬಿಡ್ತು. ಐದು ತಿಂಗಳು ಬೆಡ್ ರೆಸ್ಟ್. ಎಷ್ಟೋ ಅವಕಾಶಗಳು ಮಿಸ್ಸಾಗಿ ಹೋಯಿತು. ಇದ್ಯಾವುದಕ್ಕೂ ಚಿಂತಿಸದ ಮಾಧುರಿ ತನಗೆ ದೊರಕಿದ ಐದು ತಿಂಗಳನ್ನೂ ಸದುಪಯೋಗಪಡಿಸಿಕೊಂಡಳು. ಹೊಸ ಬದುಕಿನತ್ತ ಹೆಜ್ಜೆ ಹಾಕುವ ಕನಸು ಕಂಡಳು. ತಾನೊಬ್ಬ ಹೊಸ ಮನುಷ್ಯಳಾಗಬೇಕೆಂದು ಅವಿಷ್ಕಾರ ನಡೆಸಿದಳು. ಪುಸ್ತಕಗಳು ಆಕೆಗೆ ನೆರವಾದವು. ಬಿಡುವಿಲ್ಲದೆ ಪುಸ್ತಕಗಳನ್ನು ಓದಲು ಶುರು ಮಾಡಿದಳು. ಪ್ರಪಂಚದಲ್ಲಿರುವ ಎಲ್ಲ ಅಮೋಘ ವಿಷಯಗಳನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿದಳು.
ಒಮ್ಮೆ ಎದ್ದು ಓಡಾಡುವಂತಾದ ಕೂಡಲೇ ಮೊದಲು ಮಾಡಿದ ಕೆಲಸ ವಿದೇಶ ಪ್ರವಾಸ. ಭಾರತಕ್ಕೆ ಹಿಂತಿರುಗಿ ಬಂದಿರುವ ಮಾಧುರಿ ಮಾತಿಗೆ ಸಿಕ್ಕಿದಾಗ ತನ್ನಲ್ಲಾದ ಹೊಸ ಬದಲಾವಣೆಗಳ ಬಗ್ಗೆ ಹೇಳಿಕೊಂಡಳು. ಸಿನಿಮಾ ವೃತ್ತಿಯನ್ನು ಹೇಗೆ ಭಿನ್ನವಾಗಿ ನಿರೂಪಿಸಿಕೊಳ್ಳುವುದರ ಬಗ್ಗೆಯೂ ಹಂಚಿಕೊಂಡಳು.
ಹುಬ್ಬಳ್ಳಿಯ ಈ ಹುಡುಗಿ ಮಾಧುರಿ ಈಗ ಮಾಧುರಿ ಇಟಗಿಯಾಗಿದ್ದಾಳೆ.
ಹೇಗಿದೆ ಸಿನಿಮಾ ಜರ್ನಿ….?
`ತೆನಾಲಿರಾಮ’ ಚಿತ್ರದಿಂದ ಶುರುವಾದ ಜರ್ನಿ ಏಳೆಂಟು ಚಿತ್ರಗಳವರೆಗೂ ಕರೆದುಕೊಂಡು ಹೋಯ್ತು. ನಾನು ಯಾವತ್ತೂ ಅವಕಾಶ ಕೇಳಿಕೊಂಡು ಹೋದವಳಲ್ಲ. ತಮಿಳಿನಲ್ಲಿ ಎರಡು, ತೆಲುಗಿನಲ್ಲಿ ಒಂದು ಚಿತ್ರ ಮಾಡಿದೆ. ಈಗ `ಊಜಾ’ ಚಿತ್ರ ಐವತ್ತು ದಿನ ಆಚರಿಸಿದೆ. `4′ ಚಿತ್ರ ಬಿಡುಗಡೆಗೆ ರೆಡಿ ಇದೆ. ಇನ್ಮುಂದೆ ನೋಡ್ಬೇಕು….. ಈಗಷ್ಟೇ ಚೇತರಿಸಿಕೊಂಡು ಬಂದಿದ್ದೀನಿ.
ಸೂಪರ್ ಹಿಟ್ ಆದಂಥ `ರಾಂಬೊ‘ ಚಿತ್ರದ ನಂತರ ಸಾಕಷ್ಟು ಚಿತ್ರಗಳು ಸಿಗಬಹುದು ಅಂತ ನಿರೀಕ್ಷೆ ಇತ್ತೇ?
ನಿಜ ಹೇಳಬೇಕೆಂದರೆ, ನಾನು ಮೊದಲಿನಿಂದಲೂ ಯಾವುದರ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡವಳಲ್ಲ. ಸಿನಿಮಾ ಹಿಟ್ ಆಯ್ತು. ಖುಷಿಪಟ್ಟೆ. ನನ್ನ ಪಾಲಿಗೆ ಬಂದ ಅವಕಾಶಗಳನ್ನು ಒಪ್ಪಿಕೊಂಡೆನೇ ಹೊರತು ನಾನಾಗಿ ಯಾವುದರ ಹಿಂದೇನೂ ಓಡಿಹೋಗಲಿಲ್ಲ. ಸ್ವಲ್ಪ ದಿನಗಳು ಮುಂಬೈನಲ್ಲಿ ಕಳೆದೆ. ಏಕೆ?
ಮುಂಬೈ ನನಗಿಷ್ಟ. ಅಲ್ಲಿ ನನಗೆ ಸ್ನೇಹಿತರಿದ್ದಾರೆ. ಅಲ್ಲಿಯ ಲೈಫ್ ತುಂಬಾ ಇಷ್ಟ.
ಹಿಂದಿ ಸಿನಿಮಾದಲ್ಲಿ ನಟಿಸುವ ಆಸೆ ಇತ್ತಾ?
ಅದರ ಸಲುವಾಗಿ ಹೋಗಲಿಲ್ಲ. ಒಂದು ವೇಳೆ ಅಂಥ ಅವಕಾಶ ಸಿಕ್ಕಿದರೂ ಖುಷಿಯಿಂದ ಒಪ್ಪಿಕೊಳ್ತಿದ್ದೆ. ನನಗೆ ಒಂದೇ ಕಡೆ ಇರುವುದಕ್ಕೆ ಬರುವುದಿಲ್ಲ. ಇಡೀ ಪ್ರಪಂಚ ಸುತ್ತುವಾಸೆ. ಬದುಕಿನಿಂದ ರಜೆ ತೆಗೆದುಕೊಳ್ಳಬಾರದು. ರಜೆಯನ್ನೇ ಬದುಕನ್ನಾಗಿಸಿಕೊಳ್ಳಬೇಕೆಂಬುದೇ ನನ್ನ ಧ್ಯೇಯ.
ವಿದೇಶ ಪ್ರವಾಸದ ಬಗ್ಗೆ ಹೇಳು?
ಎರಡು ತಿಂಗಳು ಹಾಲಿಡೇ ಟ್ರಿಪ್ ಅಂತ ಯು.ಎಸ್.ಗೆ ಹೋಗಿದ್ದೆ. ಈಗ ಭೂತಾನ್‌ಗೆ ಹೋಗುವ ಕಾರ್ಯಕ್ರಮ ಹಾಕಿಕೊಳ್ತಿದ್ದೀನಿ. ಇದೊಂಥರ ಸರಳವಾದ ಜರ್ನಿ. ಅಂದರೆ ಲಗ್ಶುರಿಯಾಗಿ ಹೋಗೋ ಹಾಗಿಲ್ಲ. ಅಲ್ಲಿಯ ಜನರ ಜೊತೆ ನಾವು ಬೆರೆತುಕೊಂಡು ಸಾಮಾನ್ಯ ಜನರಂತೆ ಜೀವನ ನಡೆಸೋದು. ಪಂಚತಾರಾ ವಸತಿ, ಕಾರುಗಳು ಯಾವುದೂ ಇರುವುದಿಲ್ಲ. ಬಹಳ ಶ್ರಮಪಟ್ಟುಕೊಂಡು ಊರೂರು ತಿರುಗೋದು. ಶ್ರಮ ಪಡುವುದರಲ್ಲಿ ಒಂಥರ ತೃಪ್ತಿ ಸಿಗುತ್ತೆ. ಲೈಫ್ ನಲ್ಲಿ ಅಡ್ವೇಂಚರ್ಸ್ ಇರಬೇಕು. ಆಗಲೇ ಥ್ರಿಲ್ ಸಿಗೋದು. ಇತ್ತೀಚೆಗೆ ನಾನು ಆಧ್ಯಾತ್ಮದತ್ತ ಹೆಚ್ಚು ಒಲವು ತೋರುತ್ತಿದ್ದೇನೆ. ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸುತ್ತವೆ ಅಂತಾರೆ, ಅದು ನೂರಕ್ಕೆ ನೂರರಷ್ಟು ಸತ್ಯ!
ಸಿನಿಮಾ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ಯಾ?
ಖಂಡಿತಾ…. ಒಳ್ಳೆ ಚಿತ್ರ, ಒಳ್ಳೆ ಪಾತ್ರ ಮಾಡುವಾಸೆ. ಮೊದಲಿಗೆ ನಾನೊಬ್ಬ ನಟಿ ಎಂಬುದನ್ನು ನಾನ್ಯಾವತ್ತೂ ಮರೆಯೋದಿಲ್ಲ. ಕಾಲಿಗೆ ಫ್ರಾಕ್ಚರ್ ಆಗಿದ್ದರಿಂದ ನಾನು ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಾಗಲಿಲ್ಲ. ಈಗ ಬ್ಯಾಕ್ ಟು ನಾರ್ಮಲ್, ನನ್ನದೇ ಆದ ಸ್ವಂತ ಬಿಸ್‌ನೆಸ್ ಶುರು ಮಾಡುವ ಪ್ಲಾನಿದೆ. ಅದೇನು ಅಂತ ಒಂದು ತಿಂಗಳ ನಂತರ ಹೇಳ್ತೀನಿ.
ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಮಾಧುರಿ ಇಟಗಿ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಅಂದರೆ 2011ರಲ್ಲಿ `ಮಿಸ್ ಕರ್ನಾಟಕ’ ಕಿರೀಟ ಧರಿಸಿದಂಥ ಬೆಡಗಿ. ಮೊದಲ ಚಿತ್ರದ ನಂತರ ತನ್ನ ವಿದ್ಯಾಭ್ಯಾಸ ಮುಂದುವರಿಸಲು ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ಮಾಧುರಿ ಮಾಡೆಲ್ ಆಗಿಯೂ ಕಾಣಿಸಿಕೊಂಡಿದ್ದಿದೆ. ನಟ, ನಿರ್ಮಾಪಕ, ನಿರ್ದೇಶಕ ಕುಮಾರ್ ಗೋವಿಂದ್ ಅವರ ಮೂಲಕ ಸಿನಿಮಾ ರಂಗಕ್ಕೆ ಪರಿಚಿತಳಾದ ಮಾಧುರಿ ರಾಂಬೊ, ಊಜಾ, ತೆನಾಲಿರಾಮ ಹಾಗೂ ಇನ್ನಿತರ ಚಿತ್ರಗಳಲ್ಲಿ ನಟಿಸಿದಳು. ಜನಪ್ರಿಯ ಶೋ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಮಾಧುರಿ ಎಲ್ಲರಿಂದ ಹೊಗಳಿಸಿಕೊಂಡರೂ ಅಂತಿಮ ಹಂತ ತಲುಪಲಾಗಲಿಲ್ಲ.
`ಈ ಶೋ ನನ್ನಲ್ಲಿ ಹೆಚ್ಟು ಆತ್ಮವಿಶ್ವಾಸ ತುಂಬಿಸಿತು’ ಎಂದು ಹೇಳುವ ಮಾಧುರಿ, ಇದೀಗ ಮತ್ತೆ ಹೊಸತನದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸುತ್ತಾಳೆ.
– ಜಾಗೀರ್ದಾರ್.