ಬೆಳಗ್ಗೆ ಸೈಯದ್‌ ಹಫೀಜ್‌ ಗಾರ್ಡನ್‌ನಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದರು. ಮಲ್ಲಿಗೆ, ಸಂಪಿಗೆ, ಚೆಂಡುಹೂಗಳು, ಬೋಗನ್‌ ವಿಲಾ, ಗುಲ್‌ಮೊಹರ್‌ ಹಾಗೂ ಗುಲಾಬಿಯ ತಾಜಾ ಹೂಗಳ ಸೌಂದರ್ಯ ಅನುಪಮವಾಗಿತ್ತು. ಗುಲಾಬಿ ಹೂಗಳ ಮೇಲೆ ಬಿದ್ದ ಮಂಜಿನ ಹನಿಗಳು ವಜ್ರದ ಕಣಗಳಂತೆ ಹೊಳೆಯುತ್ತಿದ್ದವು.

ಹಫೀಜ್‌ ನೀರು ಹಾಕುತ್ತಿದ್ದಾಗ ಒಳಗಿನ ಕೋಣೆಯಲ್ಲಿ ಫೋನ್‌ ರಿಂಗ್‌ ಆಯ್ತು. ಅವರು ಒಳಗೆ ಹೋದಾಗ ವಹೀದಾ ರಿಸೀವರ್ ಎತ್ತಿದ್ದರು. ಅವರು ಬಂದುದನ್ನು ಕಂಡು ರಿಸೀವರ್‌ ಅವರ ಕೈಗೆ ಕೊಟ್ಟು ನಗುತ್ತಾ, “ನೂರುನ್ನೀಸಾ ಮಾಡಿರೋದು. ವೆಡಿಂಗ್ ಆ್ಯನಿವರ್ಸರಿಗೆ ವಿಶ್‌ ಮಾಡ್ತಿದ್ದಾಳೆ. ತಗೊಳ್ಳಿ, ಮಾತಾಡಿ,” ಎಂದರು.

ಆ ಹೆಸರು ಕೇಳಿದ ಕೂಡಲೇ ಹಫೀಜ್‌ರ ಮುಖ ಅರಳಿತು. ಅವರು ಕೊಂಚ ಸಂಕೋಚದಿಂದ ರಿಸೀವರ್‌ ತೆಗೆದುಕೊಂಡರು. ನೂರುನ್ನೀಸಾ ನಂತರ ಅವಳ ಗಂಡ ಬಷೀರ್‌ ಕೂಡ ತಂದೆಗೆ ವಿಶ್‌ ಮಾಡಿ ಆರೋಗ್ಯ ವಿಚಾರಿಸಿದ. ಮಾತುಕಥೆ ಬೇಗ ಮುಗಿಯಿತು. ಆದರೆ ಗಾಳಿಯ ಹೊಯ್ದಾಟದಂತೆ ಕಳೆದುಹೋದ ದಿನಗಳ ಪುಟಗಳು ತೆರೆದುಕೊಂಡವು.

ಸೈಯದ್‌ ಹಫೀಜ್‌ರಿಗೆ ನೂರುನ್ನೀಸಾ ಬರೀ ಸೊಸೆಯಲ್ಲ. ಪ್ರಕೃತಿ  ತನಗಿತ್ತ ವರ ಎಂದು ಸಂಪೂರ್ಣ ವಿಶ್ವಾಸವಿತ್ತು. ಸಮಾಜದ ಪ್ರಚಲಿತ ಪದ್ಧತಿಯಂತೆ ನಡೆಯುವ ಬದಲು ಅವಳು ತನ್ನದೇ ಆದ ದಾರಿ ಕಂಡುಕೊಂಡಿದ್ದಳು. ದೊಡ್ಡವರು, ಚಿಕ್ಕವರು ಎನ್ನದೇ ಅವಳು ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತಿದ್ದಳು. ಧಾವಂತದ ಈ ಹೈಟೆಕ್‌ ಯುಗದಲ್ಲಿ  ದೊಡ್ಡವರನ್ನು ಯಾರು ಗೌರವಿಸುತ್ತಾರೆ? ತಂದೆತಾಯಿ ಬಹಳ ಪರಿಶ್ರಮದಿಂದ ತಮ್ಮ ಮಕ್ಕಳ ಉಚ್ಚ ಶಿಕ್ಷಣ, ಭವ್ಯ ಭವಿಷ್ಯ ಹಾಗೂ ಸಂತಸಕರ ಜೀವನಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿಬಿಡುತ್ತಾರೆ. ಆದರೆ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಅವರಿಗೆ ಉದಾಸತನ, ಅಸಹಾಯಕತೆ, ಏಕಾಂತ ಬಿಟ್ಟು ಬೇರೇನೂ ಸಿಗುವುದಿಲ್ಲ.

ಸೈಯದ್‌ ಹಫೀಜ್‌ರ ನೆರೆಹೊರೆಯಲ್ಲಿ ಇಂತಹ ಎಷ್ಟೊಂದು ದುಃಖಕರ ಉದಾಹರಣೆಗಳಿದ್ದವು. ವೆಂಕಟೇಶ್‌ರವರ ಇಬ್ಬರು ಮಕ್ಕಳು ಅಮೆರಿಕಾದಲ್ಲಿ ನೆಲೆಸಿದ್ದರು. ಅವರಿಗೆ ಸ್ವದೇಶಕ್ಕೆ ಮರಳಲು ಸಮಯವೇ ಸಿಗಲಿಲ್ಲ. ಅವರ ಹೆಂಡತಿಯಂತೂ ಮಗ ಸೊಸೆಯ ದಾರಿ ನಿರೀಕ್ಷಿಸುತ್ತಲೇ ಹೋಗೇಬಿಟ್ಟರು. ಈಗ ವೆಂಕಟೇಶ್‌ ತಮ್ಮ ಕೊನೆಯ ದಿನಗಳನ್ನು ನೌಕರನ ಆಸರೆಯಿಂದ ಕಳೆಯುತ್ತಿದ್ದಾರೆ. ಮಮ್ತಾಜ್‌ ಬೇಗಂ ತನ್ನ ಮಗಳು ಅಳಿಯನ ಜೊತೆ ಸಿಂಗಪುರ್‌ನಲ್ಲಿ ಇರಲು ಒಪ್ಪದಿದ್ದಾಗ ಮಗಳು ಅಳಿಯ ಅವರಿಗೆ ತಮ್ಮ ಫ್ಲ್ಯಾಟ್‌ ಮಾರುವಂತೆ ಪೀಡಿಸಿ ಎಲ್ಲ ಹಣ ತೆಗೆದುಕೊಂಡು ಹೊರಟುಹೋದರು. ಇಂದು ಮಮ್ತಾಜ್‌ ಬೇಗಂ ವೃದ್ಧಾಶ್ರಮದಲ್ಲಿ ತನ್ನ ಉಳಿದ ಆಯುಷ್ಯ ಕಳೆಯುತ್ತಿದ್ದಾರೆ. ಅವರ ಎದುರು ಮನೆಯಲ್ಲಿದ್ದ ರಾಜನ್‌ ತಮ್ಮ ಮಗ ಸೊಸೆಯ ದುರ್ವರ್ತನೆಯಿಂದ ಎಷ್ಟು ನೊಂದರೆಂದರೆ ತಮ್ಮ ದುಃಖವನ್ನು ಮನದಲ್ಲಿ ಅಡಗಿಸಿಕೊಂಡು ಒಂದು ದಿನ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೊರಟರು ಮತ್ತೆಂದೂ ವಾಪಸ್‌ ಬರಲಿಲ್ಲ.

ಸಂಬಂಧಗಳ ಈ ಬದಲಾದ ಪರಿಭಾಷೆಯಲ್ಲಿ ಸಿಲುಕಿ ಕೊನೆಯುಸಿರು ಬಿಡುತ್ತಿರುವ ಮಾನವೀಯ ಮೌಲ್ಯಗಳನ್ನು ಕಂಡು ಸೈಯದ್‌ ಹಫೀಜ್‌ ತಮಗೂ ಇಂಥದೇ ಗತಿಯಾಗಬಹುದೆಂದು ಮನದಲ್ಲೇ ನಡುಗುತ್ತಿದ್ದರು. ಆದರೆ ಅವರ ಜೀವನದ ಅಂತಿಮ ಅಧ್ಯಾಯ ಅಷ್ಟೊಂದು ಸುಖಕರವಾಗಿ, ಸುಂದರವಾಗಿ ಆಗುವುದೆಂದು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಹಫೀಜ್‌ರ ಮಕ್ಕಳಿನ್ನೂ ಚಿಕ್ಕವರಾಗಿದ್ದಾಗಲೇ ಒಂದು ದುರ್ಘಟನೆಯಲ್ಲಿ ಹೆಂಡತಿ ಯಾಸ್ಮಿನ್‌ ಅವರನ್ನು ಒಂಟಿಯಾಗಿ ಬಿಟ್ಟು ಹೊರಟುಬಿಟ್ಟರು. ಆಗ ಹಫೀಜ್‌ ತಮ್ಮ ದುಃಖ ಮರೆತು ಮಕ್ಕಳ ಲಾಲನೆ ಪಾಲನೆಗಳಲ್ಲಿಯೇ ಸಂಪೂರ್ಣ ಸಮಯ ಕಳೆಯತೊಡಗಿದರು. ಮನೆಯವರು ಇನ್ನೊಂದು ಮದುವೆಯಾಗಲು ಬಹಳ ಒತ್ತಡ ಹೇರಿದರು.

ಆದರೆ ಹಫೀಜ್‌ಗೆ ಅದರ ಪರಿಣಾಮ ಚೆನ್ನಾಗಿ ಗೊತ್ತಿತ್ತು. ಮಲತಾಯಿಯಾದವಳು ಮಲಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಅಪರೂಪ. ಆದರೆ ಒಂಟಿ ಜೀವನ ನಡೆಸುವುದು ಕಠಿಣ ಸಮಸ್ಯೆಯಾಗಿತ್ತು. ಬೆಳಗಿನಿಂದ ಸಂಜೆಯವರೆಗೆ ಆಫೀಸ್‌, ನಂತರ ಮನೆಯ ಜವಾಬ್ದಾರಿ ನಿರ್ವಹಣೆ. ಆದರೆ ಮನೆಯಲ್ಲಿ ಸುಖ ಶಾಂತಿಯ ನೆರಳೂ ಇರಲಿಲ್ಲ. ಹಫೀಜ್‌ರ ಮನಸ್ಸಿನ ಎಲ್ಲ ಉತ್ಸಾಹಗಳೂ ಕೊನೆಯುಸಿರುಬಿಟ್ಟಿದ್ದವು. ಮಕ್ಕಳ ಮುದ್ದು ಮಾತುಗಳಲ್ಲಿ ಅವರು ತಮ್ಮ ಏಕಾಂತದ ನೋವನ್ನು ಮರೆತಿದ್ದರು. ಮನುಷ್ಯನ ಜೀವನ ಸೇವಾ ಮನೋಭಾವದಿಂದ ಧನ್ಯತೆ ಅನುಭವಿಸುತ್ತದೆ ಎಂದು ಅವರಿಗೆ ತಿಳಿದಿತ್ತು.

ಇಬ್ಬರೂ ಮಕ್ಕಳು ಬುದ್ಧಿವಂತರು ಹಾಗೂ ತಿಳಿವಳಿಕೆಯುಳ್ಳವರಾಗಿದ್ದರು. ತಂದೆಯ ದುಃಖವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಇಬ್ಬರೂ ಕಷ್ಟಪಟ್ಟು ಓದುತ್ತಿದ್ದರು. ಬಷೀರ್‌ ಐಐಟಿ ಕಾನ್ಪುರ್‌ನಿಂದ ಎಲೆಕ್ಟ್ರಾನಿಕ್ಸ್ ನಲ್ಲಿ ಬಿ.ಟೆಕ್‌ ಮಾಡಿದ. ರುಕ್ಸಾನಾ ಡೆಲ್ಲಿ ಸ್ಕೂಲ್ ಆಫ್‌ ಎಕನಾಮಿಕ್ಸ್ ನಲ್ಲಿ ಡಿಗ್ರಿ ಪಡೆದು ಅಮೆರಿಕಾದಲ್ಲಿ ಎಂಎಸ್‌ ಮಾಡಿದಳು. ಹಫೀಜ್‌ರಿಗೆ ಇಬ್ಬರೂ ಮಕ್ಕಳ ಮದುವೆ ಬಗ್ಗೆ ಯೋಚನೆಯಾಗಿತ್ತು. ರುಕ್ಸಾನಾ ತಂದೆ ನೋಡಿದ ಸಂಬಂಧವನ್ನೇ ಒಪ್ಪಿಕೊಂಡಳು. ಹುಡುಗ ಜಾವೇದ್ ಡಾಕ್ಟರ್‌ ಆಗಿದ್ದು ಕೆನಡಾದಲ್ಲಿ ಸೆಟಲ್ ಆಗಿದ್ದ. ಅವರ ಮನೆಯವರೆಲ್ಲಾ ಸುಶಿಕ್ಷಿತರಾಗಿದ್ದರು. ಕೆಲವೇ ದಿನಗಳಲ್ಲಿ ರುಕ್ಸಾನಾಳ ಮದುವೆಯಾಗಿ ಮಗಳು ಅಳಿಯ ಇಬ್ಬರೂ ವಿದೇಶಕ್ಕೆ ಹೊರಟುಹೋದರು. ಇನ್ನು ಮಗ ಬಷೀರ್‌ನ ಸರದಿ. ಅವನು ಸ್ವತಃ ಒಬ್ಬ ಸುಂದರ ಹುಡುಗಿಯನ್ನು ಆರಿಸಿಕೊಂಡಿದ್ದ. ಅದರಿಂದ ಹಫೀಜ್‌ರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಸೊಸೆಯಾಗುವ ಹುಡುಗಿ ನೂರುನ್ನೀಸಾ ಕೊಂಚ ಹೆಚ್ಚೇ ಮಾಡರ್ನ್‌ ಆಗಿದ್ದಳು. ಅವಳು ಫ್ಯಾಷನ್‌ ಟೆಕ್ನಾಲಜಿಯಲ್ಲಿ ಡಿಗ್ರಿ ಪಡೆದಿದ್ದು, ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮನೆಯವರು ಸಭ್ಯರು ಹಾಗೂ ಸ್ವತಂತ್ರ ವಿಚಾರವುಳ್ಳವರಾಗಿದ್ದರು. ನಿಶ್ಚಿತಾರ್ಥಾದ ಸ್ವಲ್ಪ ಸಮಯದಲ್ಲೇ ಮದುವೆಯೂ ಆಗಿಹೋಯಿತು.

ನೂರುನ್ನೀಸಾ ಬಹಳ ದಿಟ್ಟ ಹುಡುಗಿಯಾಗಿದ್ದಳು. ಮಾತುಮಾತಿಗೆ ಹಾಸ್ಯ ಮಾಡುವುದು ಅವಳ ಸ್ವಭಾವವಾಗಿತ್ತು. ಬಹಳ ವರ್ಷದಿಂದ ಮೌನ ಹಾಗೂ ಗಾಂಭೀರ್ಯದಿಂದಿದ್ದ ಹಫೀಜ್‌ಗೆ ಅವಳ ಸ್ವಭಾವ ವಿಚಿತ್ರವಾಗಿತ್ತು. ಯಾವಾಗಲೂ ಮಾತು ಹಾಗೂ ಹಾಡು ಗುನುಗುಟ್ಟುತ್ತಿರುತ್ತಾಳೆ. ಅವಳು ಸೀರೆಯಿಂದ ಹಿಡಿದು ಜೀನ್ಸ್ ವರೆಗೆ ಧರಿಸುತ್ತಿದ್ದಳು. ಈ ಹುಡುಗಿಗೆ ಅಷ್ಟು ಮೆಚ್ಯೂರಿಟಿ ಇಲ್ಲ, ನಮ್ಮ ಸಂಸ್ಕೃತಿಯ ಬಗ್ಗೆ ಸಂವೇದನಾಶೀಲತೆಯೂ ಬಹಳ ಕಡಿಮೆ ಎಂದುಕೊಂಡಿದ್ದರು. ಆದರೆ ಈ ವಿಷಯಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಸೊಸೆ ಅವರ ಊಟ, ತಿಂಡಿ ಹಾಗೂ ಇತರ ಅಗತ್ಯಗಳ ಬಗ್ಗೆ ಚೆನ್ನಾಗಿ ಗಮನಿಸಿಕೊಳ್ಳುತ್ತಿದ್ದಳು. ಅವರಿಗೆ ಅಷ್ಟು ಸಾಕಾಗಿತ್ತು. ಬಷೀರ್‌ನ ಜನ್ಮದಿನಕ್ಕೆ ನೂರುನ್ನೀಸಾ ಒಂದು ಗೆಟ್‌ ಟು ಗೆದರ್‌ ಪಾರ್ಟಿ ಇಟ್ಟುಕೊಂಡಿದ್ದಳು. ತನಗೆ ಸಹಾಯಕ್ಕೆಂದು ದೂರದ ಸಂಬಂಧಿ ವಹೀದಾ ಎಂಬಾಕೆಯನ್ನು ಕರೆಸಿದ್ದಳು. ನೂರುನ್ನೀಸಾ ಮದುವೆಗೆ ವಹೀದಾ ಬಂದಿದ್ದು ಹಫೀಜ್‌ರನ್ನು ಭೇಟಿಯಾಗಿದ್ದರು. ಅವರಿಗೆ ಸುಮಾರು 50 ವರ್ಷವಾಗಿತ್ತು. ಆದರೆ ಯಾರಿಗೂ ಅವರ ನೆನಪಿರಲಿಲ್ಲ.

ನೂರುನ್ನೀಸಾ ಮಾವನಿಗೆ ವಹೀದಾರನ್ನು ಪರಿಚಯಿಸುತ್ತಾ ಹೇಳಿದಳು, “ವಹೀದಾ ಆಂಟಿ ನಮ್ಮ ದೂರದ ಸಂಬಂಧಿ. ಆದರೂ ನಮ್ಮನ್ನು ಕಂಡ್ರೆ ತುಂಬಾ ಪ್ರೀತಿ. ಪಾಪ ಅವರ ಮನಸ್ಸಿನಲ್ಲಿ ಎಷ್ಟು ಮಮತೆ, ಸ್ನೇಹ ತುಂಬಿದೆ.”

“ಪಾಪ ಅಂತ ಯಾಕೆ ಹೇಳ್ತೀಯಾ?” ಹಫೀಜ್‌ ಆಶ್ಚರ್ಯದಿಂದ ಕೇಳಿದರು.

“ಇನ್ನೇನು ಹೇಳ್ಲಿ. ವಹೀದಾ ಆಂಟಿಗೆ ಮಕ್ಕಳಿಲ್ಲ. ಅವರ ಗಂಡನೂ ತೀರಿಕೊಂಡು ಬಹಳ ವರ್ಷಗಳಾದವು.”

“ಉಫ್‌. ವೆರಿ ಸಾರಿ. ಆದರೆ ವಿಧಿಯಾಟದ ಮುಂದೆ ನಾವೇನು ಮಾಡೋಕಾಗುತ್ತೆ?”

“ಹೌದು. ಏನೂ ಮಾಡಕ್ಕಾಗಲ್ಲ. ಅಂದಹಾಗೆ ನೂರುನ್ನೀಸಾ ನನ್ನ ಮಗಳ ಹಾಗೆ. ಚಿಕ್ಕ ವಯಸ್ಸಿನಿಂದ ನನಗೆ ಸಲಿಗೆ ಜಾಸ್ತಿ,” ವಹೀದಾ ನಗುತ್ತಾ ಪರಿಸ್ಥಿತಿಯನ್ನು ತಿಳಿ ಮಾಡಿದರು. ಪಾರ್ಟಿಯ ಮರುದಿನ ಭಾನುವಾರವಾಗಿತ್ತು. ಎಲ್ಲರೂ ಸರಿಸ್ಕಾ ನ್ಯಾಷನಲ್ ಪಾರ್ಕ್‌ಗೆ ಹೋಗುವ ಪ್ರೋಗ್ರಾಂ ಹಾಕಿಕೊಂಡಿದ್ದರು. ಆದರೆ ಹಫೀಜ್‌ರಿಗೆ ಹೋಗುವ ಮನಸ್ಸಾಗಲಿಲ್ಲ. ವಹೀದಾರಿಗೂ ಸಹ ಯುವಜನರ ಮಧ್ಯೆ ಪಿಕ್‌ನಿಕ್‌ ಆಚರಿಸಲು ಇಷ್ಟವಾಗಲಿಲ್ಲ. ಅವರು ನೂರುನ್ನೀಸಾ ಬಳಿ ಹೋಗಿ, “ನಾನು ಮನೆಯಲ್ಲೇ ಇರ್ತೀನಿ. ನಿಮಗೆಲ್ಲಾ ಅಡುಗೆ ರೆಡಿ ಮಾಡ್ತೀನಿ,” ಎಂದರು.

ಯಾರೂ ಒತ್ತಾಯಿಸಲಿಲ್ಲ. ಬೆಳಗ್ಗೆ ಎಲ್ಲರೂ ಹೋದ ನಂತರ ಹಫೀಜ್‌ ಕಿಚನ್‌ನಲ್ಲಿ ಕಾಫಿ ಮಾಡಲು ಹೋದಾಗ ವಹೀದಾ ಎಲ್ಲವನ್ನೂ ಮಾಡಿಟ್ಟಿರುವುದನ್ನು ಕಂಡರು.

“ಅರೆ, ನೀವ್ಯಾಕೆ ಮಾಡಕ್ಕೆ ಹೋದ್ರಿ? ಇದೆಲ್ಲಾ ನಾನು ಮಾಡ್ತೀನಿ. ಏಕೆಂದರೆ ಬೆಳಗ್ಗೆ ಯಾರೂ ಬೇಗ ಏಳಲ್ಲ.”

“ಒಂದು ದಿನ ಕೊಂಚ ಬದಲಾವಣೆ ಆದರೆ ಏನು ತೊಂದರೆ?” ವಹೀದಾ ಅವರಿಗೆ ಕಾಫಿ ಕಪ್‌ ಕೊಡುತ್ತಾ ಹೇಳಿದರು.

ಗ್ರೇ ಸಿಲ್ವರ್‌ ಕಲರ್‌ನ ಸೀರೆ ಮತ್ತು ಬಿಚ್ಚಿದ ಕೂದಲಿನಲ್ಲಿ ಅವರು ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಿದ್ದರು.

`ಬಹಳ ಹೋಮ್ಲಿ ಸ್ವಭಾವ ಇವರದು,’ ಎಂದು ಹಫೀಜ್‌ ಯೋಚಿಸಿದರು.

ಇಡೀ ದಿನ ಒಬ್ಬ ಅಪರಿಚಿತ ಮಹಿಳೆಯೊಂದಿಗೆ ಕಳೆಯುವುದು ಅವರಿಗೆ ಇಷ್ಟವಾಗಿರಲಿಲ್ಲ. ಆದರೆ ಮನೆಯೊಳಗೆ ಒಬ್ಬರನ್ನೇ ಬಿಟ್ಟುಹೋಗುವುದೂ ಸರಿಯಿರಲಿಲ್ಲ. ಅವರು ವಿವಶತೆಯಿಂದ ಡ್ರಾಯಿಂಗ್‌ ರೂಮಿನಲ್ಲಿ ಪತ್ರಿಕೆ ಓದತೊಡಗಿದರು. ಸ್ವಲ್ಪ ಹೊತ್ತಿನ ನಂತರ ಮಿತ್ರರೊಬ್ಬರು ಅವರನ್ನು ನೋಡಲು ಬಂದರು. ಹಫೀಜ್‌ ಫ್ರಿಜ್‌ನಿಂದ ನೀರು ತರಲು ಒಳಹೋದರು. ಅಲ್ಲಿ ವಹೀದಾ ಮನೆಯ ಅರ್ಧಭಾಗ ಸ್ವಚ್ಛಗೊಳಿಸಿದ್ದರು. ಎಲ್ಲ ವಸ್ತುಗಳನ್ನೂ ಸ್ವಚ್ಛವಾಗಿ, ಒಪ್ಪವಾಗಿ ಜೋಡಿಸಿಡಲಾಗಿತ್ತು. ಎಲ್ಲ ವಸ್ತುಗಳೂ ತಮ್ಮ ಜಾಗದಲ್ಲಿ ಹೊಳೆಯುತ್ತಿದ್ದವು. ಜೊತೆಗೆ ಊಟದ ಸಿದ್ಧತೆಯೂ ನಡೆಯುತ್ತಿತ್ತು.

“ನೀವಂತೂ ಒಂದು ತಿಂಗಳಿಗಾಗಿ ಎಲ್ಲ ಕೆಲಸಗಳನ್ನೂ ಸುಲಭ ಮಾಡಿದ್ದೀರಿ,” ಹಫೀಜ್‌ ಹೊಗಳಿದರು.

“ಸಮಯ ಸದುಪಯೋಗಪಡಿಸಿಕೊಳ್ಳಲೇ ಬೇಕು. ನೀವು ಅವರನ್ನು ಅಟೆಂಡ್‌ ಮಾಡಿ ಬನ್ನಿ. ನಾನು ಏನಾದರೂ ತರ್ತೀನಿ,” ಎಂದರು.

ಸ್ವಲ್ಪ ಹೊತ್ತಿಗೆ ನಿಂಬೆಹಣ್ಣಿನ ಜ್ಯೂಸ್‌ ಮತ್ತು ಸ್ವಾದಿಷ್ಟ ಪಕೋಡಾಗಳನ್ನು ಪ್ಲೇಟಿನಲ್ಲಿ ತಂದರು.

ಲಂಚ್‌ ಮಾಡುವಾಗಲೂ ಅವರಿಬ್ಬರೇ ಇದ್ದರು. ಇಬ್ಬರಿಗೂ ಕೊಂಚ ಸಂಕೋಚ ಇತ್ತು. ಆದರೆ ಊಟ ಮಾಡುವಾಗ ಕಂಪನಿ ಕೊಡದಿದ್ದರೆ ಶಿಷ್ಟಾಚಾರಕ್ಕೆ ವಿರುದ್ಧವಾಗುತ್ತಿತ್ತು.

“ನೀವು ಇಷ್ಟೊಂದು ಐಟಂಗಳನ್ನು ಮಾಡಿಬಿಟ್ರಿ. ಅದೂ ಹೆಚ್ಚು ತುಪ್ಪ, ಎಣ್ಣೆ, ಮಸಾಲೆಗಳಿಲ್ಲದೆ. ಎಲ್ಲ ಬಹಳ ಸ್ವಾದಿಷ್ಟವಾಗಿವೆ. ಪ್ರತಿಯೊಂದು ಡಿಶ್‌ ಕೂಡ ಭಿನ್ನ ರುಚಿಯಿಂದ ಕೂಡಿದೆ,” ಸೈಯದ್‌ ಹಫೀಜ್‌ಗೆ ಹೊಗಳದೆ ಇರಲು ಆಗಲಿಲ್ಲ.

“ಥ್ಯಾಂಕ್ಸ್. ನನಗೆ ಚಿಕ್ಕಂದಿನಿಂದಲೂ ಅಡುಗೆ ಮಾಡೋದಂದ್ರೆ ಬಹಳ ಇಷ್ಟ. ಆದರೆ ಈಗ ಮನೇಲಿ ನಾನು ಮಾಡಿದ್ದನ್ನು ನಾನೇ ತಿನ್ನಬೇಕಾಗಿದೆ. ಈ ವಯಸ್ಸಿನಲ್ಲಿ ಹೆಚ್ಚು ತಿನ್ನೋಕೂ ಆಗಲ್ಲ,” ವಹೀದಾ ನಗುತ್ತಾ ಸೋರೆಕಾಯಿ ಮತ್ತು ಪನೀರ್‌ಕೋಫ್ತಾಗಳನ್ನು ಅವರಿಗೆ ಕೊಟ್ಟರು. ವಹೀದಾರ ಮಾತುಗಳು ಗಾಂಭೀರ್ಯದಿಂದ ಕೂಡಿರುತ್ತವೆ ಎಂದು ಹಫೀಜ್‌ಗೆ ಅನ್ನಿಸುತ್ತಿತ್ತು.

ಅವರು ವಹೀದಾರ ಅತೀತದ ಬಗ್ಗೆ ಯಾವುದೇ ಪ್ರಶ್ನೆ ಕೇಳಲಿಲ್ಲ. ಜೊತೆಗೆ ತಮ್ಮ ಜೀವನದ ಶೂನ್ಯತೆಯ ಬಗ್ಗೆಯೂ ಏನೂ ಹೇಳಿಕೊಳ್ಳಲಿಲ್ಲ. ಇತರ ವಿಷಯಗಳ ಬಗ್ಗೆ ಬಹಳ ಹೊತ್ತಿನವರೆಗೂ ಹರಟುತ್ತಿದ್ದರು.

ಬಹಳ ವರ್ಷಗಳ ಬಳಿಕ ಸೈಯದ್‌ ಹಫೀಜ್‌ಗೆ ತಮ್ಮ ಮನಸ್ಸು ಹಗುರವಾದಂತೆ ಅನ್ನಿಸುತ್ತಿತ್ತು. ಚಿಂತೆ ಹಾಗೂ ದುಃಖದ ಗೆರೆಯೂ ಅಲ್ಲಿರಲಿಲ್ಲ. ಅವರ ಮನಸ್ಸು ಉಲ್ಲಾಸ ಹಾಗೂ ಉತ್ಸಾಹದಿಂದ ಕೂಡಿತ್ತು. ಆದರೆ ಅವೆಲ್ಲಾ ಕ್ಷಣಭಂಗುರವಾಗಿತ್ತು. ಮರುದಿನವೇ ವಹೀದಾ ಮಧ್ಯಾಹ್ನದ ಟ್ರೇನ್‌ಗೆ ತಮ್ಮ ಊರಿಗೆ ಹೊರಟುಬಿಟ್ಟರು. ಕೆಲವು ತಿಂಗಳ ನಂತರ ಬಷೀರ್‌ಗೆ ಪ್ರಮೋಶನ್‌ ಸಿಕ್ಕಿತು. ಕಂಪನಿಯವರು ಬಷೀರ್‌ನನ್ನು ಜರ್ಮನಿಗೆ ಟ್ರ್ಯಾನ್ಸ್ ಫರ್‌ ಮಾಡಿದರು. 1 ವಾರದಲ್ಲಿ ನೂರುನ್ನೀಸಾ ಮತ್ತು ಬಷೀರ್‌ ವಿದೇಶಕ್ಕೆ ಹೊರಟುಹೋದರು.

ಖಾಲಿ ಮನೆಯಲ್ಲಿ ಹಫೀಜ್‌ ಒಬ್ಬರೇ ಉಳಿದರು. ನಾಲ್ಕೂ ಕಡೆ ಮೌನ ಹಾಗೂ ಉದಾಸತನ ಮುತ್ತಿಗೆ ಹಾಕಿತ್ತು. ನಿಶ್ಶಬ್ದ ಹಾಗೂ ಒಂಟಿತನ ಅವರನ್ನು ಕಾಡತೊಡಗಿತ್ತು. ಒಂದೂವರೆ ವರ್ಷ ಮಕ್ಕಳೊಂದಿಗೆ ಬರೀ ಫೋನ್‌ ಹಾಗೂ ನೆಟ್‌ ಮೂಲಕ ಮಾತುಕಥೆ ನಡೆಯುತ್ತಿತ್ತು. ಅವರು ಬಷೀರ್‌ ಹಾಗೂ ರುಕ್ಸಾನಾರಿಗೆ ಪದೇ ಪದೇ ಆಗ್ರಹಿಸುತ್ತಾ ಭಾರತಕ್ಕೆ ಬಂದು ಒಟ್ಟಿಗೇ ಈದ್‌ ಆಚರಿಸುವಂತೆ ಒಪ್ಪಿಸಿದರು.

1 ವಾರದ ಅಂತರದಲ್ಲಿ ಮಗಳು ಅಳಿಯ ತಮ್ಮ ಮಕ್ಕಳೊಡನೆ ಬಂದರು. ನಂತರ ಮಗ ಸೊಸೆಯೂ ಬಂದರು. ಅಷ್ಟು ದಿನ ಏಕಾಂಗಿಯಾಗಿದ್ದ ಹಫೀಜ್‌ರಿಗೆ ಮಕ್ಕಳು ಮೊಮ್ಮಕ್ಕಳ ಆಗಮನದ ಸಡಗರ, ಸಂಭ್ರಮ ಉಲ್ಲಾಸದಾಯಕವಾಗಿತ್ತು. ಅವರ ಮನಸ್ಸಿಗೆ ಶಾಂತಿ ಸಿಕ್ಕಿತ್ತು. ಒಂದು ದಿನ ಹೀಗೇ ಮಾತಾಡುತ್ತಿದ್ದಾಗ ಹಫೀಜ್‌ ನೂರುನ್ನೀಸಾಳನ್ನು ಕೇಳಿದರು, “ನಿಮ್ಮ ವಹೀದಾ ಆಂಟಿ ಚೆನ್ನಾಗಿದಾರಾ?”

“ಚೆನ್ನಾಗಿದ್ದಾರೆ ಮಾವ. ಯಾವಾಗ್ಲಾದ್ರೂ ಫೋನ್‌ ಮಾಡಿದ್ರಾ?”

“ಇಲ್ಲ. ಅವರು ಫೋನೇ ಮಾಡ್ಲಿಲ್ಲ.”

“ನೀವೇ ಮಾಡಬಹುದಿತ್ತು,” ನೂರುನ್ನೀಸಾ ಕೇಳಿದಳು.

“ಅದೂ ನಿಜ. ನೀನು ಅವರನ್ನೂ ಇಲ್ಲಿಗೆ ಕರಿದಿದ್ರೆ ಚೆನ್ನಾಗಿರೋದು,” ಹಫೀಜ್‌ ಏನೂ ಯೋಚಿಸದೆ ಹೇಳಿಬಿಟ್ಟರು.

“ಇನ್ನು 2-3 ವಾರಗಳಲ್ಲಿ ನಾವೆಲ್ಲಾ ಹೋಗ್ತೀವಲ್ಲಾ ಮಾವ.”

ಸೈಯದ್‌ ಹಫೀಜ್‌ ಬೆಚ್ಚಿದರು. ಅವರಿಗೆ ಅದು ಜ್ಞಾಪಕವೇ ಇರಲಿಲ್ಲ. ಸಮಯ ಎಷ್ಟು ವೇಗವಾಗಿ ಓಡುತ್ತಿದೆ. ಎಲ್ಲರಿಗೂ ವಿದಾಯ ಹೇಳುವ ಕಠಿಣ ಪರಿಸ್ಥಿತಿ ಹತ್ತಿರ ಬಂತು.ರಾತ್ರಿ 9 ಗಂಟೆಗೆ ಊಟದ ನಂತರ ಹಫೀಜ್‌ ಹೊರಗೆ ಪಾರ್ಕ್‌ನಲ್ಲಿ ತಿರುಗಾಡಿ ಮನೆಗೆ ಬಂದಾಗ ರೂಮಿನೊಳಗೆ ಏನೋ ಮಾತುಕತೆ ನಡೆಯುತ್ತಿರುವುದು ಕೇಳಿಬಂದಿತು. ಮಧ್ಯೆ ಮದ್ಯೆ `ಪಾಪಾ… ಮಾವ’ ಶಬ್ದಗಳು ಕೇಳಿಬಂದಾಗ ಅವರು ಅಲ್ಲಿಯೇ ನಿಂತರು.

ಒಳಗೆ ಕೋಣೆಯಲ್ಲಿ ಮಗ ಸೊಸೆ, ಮಗಳು ಅಳಿಯ ಯಾವುದೋ ವಿಷಯವಾಗಿ ಗಂಭೀರವಾಗಿ ಚರ್ಚೆ ಮಾಡುತ್ತಿದ್ದರು. ಹಫೀಜ್‌ರ ಮನದಲ್ಲಿ ಭಯ ಶುರುವಾಯಿತು. ಈಗಿನ ಕಾಲದ ಮಕ್ಕಳಲ್ಲಿ ಯಾವ ರೀತಿಯ ಆಶಾಭಾವನೆ ಇಟ್ಟುಕೊಳ್ಳಬಹುದು? ಇವರೆಲ್ಲಾ ಖಂಡಿತಾ ಮನೆ, ಬ್ಯಾಂಕ್‌ ಬ್ಯಾಲೆನ್ಸ್ ಮತ್ತು ಇತರ ಆಸ್ತಿಯ ಹಂಚಿಕೆಯ ಬಗ್ಗೆಯೇ ಮಾತಾಡುತ್ತಿರಬಹುದು. ಅಂತೂ ಇದೇ ಆಗಬೇಕಿತ್ತು, ಎಂದೆಲ್ಲಾ ಅವರು ಭಾರವಾದ ಹೃದಯದಿಂದ ಯೋಚಿಸಿದರು. ಅವರು ಈ ವಿಷಯದಲ್ಲಿ ಬಹಳ ಹಿಂದೆಯೇ ಯೋಚಿಸಿದ್ದರು. ಮಗ ಹಾಗೂ ಮಗಳ ಹೆಸರಿನಲ್ಲಿ ವಿಲ್ ‌ಮಾಡಿ ಎಲ್ಲ ಪತ್ರಗಳನ್ನೂ ತಮ್ಮ ವಿಶ್ವಾಸಪಾತ್ರ ವಕೀಲರಾದ ಸಿದ್ಧಾರ್ಥ್‌ರ ಬಳಿ ಕೊಟ್ಟಿದ್ದರು. ವಿಲ್ ‌ಪ್ರಕಾರ ಅವರ ಮೃತ್ಯುವಿನ ನಂತರವೇ ಅವರ ಆಸ್ತಿ ಮಕ್ಕಳಿಗೆ ಸಿಗುತ್ತಿತ್ತು. ಬದಲಾದ ಕಾಲಕ್ಕೆ ತಕ್ಕಂತೆ ಇಷ್ಟು ಎಚ್ಚರಿಕೆ ವಹಿಸುದು ಅಗತ್ಯವಾಗಿತ್ತು.

ಆಗಲೇ ರೂಮಿನಿಂದ ನೂರುನ್ನೀಸಾ ಧ್ವನಿ ಕೇಳಿ ಬಂತು, “ಅದರ ಬಗ್ಗೆ ಏನಾದರೂ ಯೋಚಿಸಿದ್ದೀರಾ? ನಾವೆಲ್ಲಾ ವಾಪಸ್‌ ಹೋದ ಮೇಲೆ ಪಾಪ ಮಾವನವರ ಪರಿಸ್ಥಿತಿ ಏನು?”

ಬಷೀರ್‌ಹೇಳಿದ, “ನಾವು ಏನು ಮಾಡೋಕಾಗುತ್ತೆ? ಅಪ್ಪನಿಗೆ ಇಲ್ಲಿ ಕೆಲಸ ಇರೋ ಹಾಗೇ ನಮಗೆಲ್ಲರಿಗೂ ನಮ್ಮದೇ ಆದ ಜವಾಬ್ದಾರಿಗಳಿವೆ. ಇಲ್ಲಿ ಎಷ್ಟು ದಿನಾಂತ ಇರೋಕಾಗುತ್ತೆ?”

ಅಳಿಯ ಜಾವೇದ್‌ ಒಂದು ಪರಿಹಾರ ಸೂಚಿಸಿದ, “ಮಾವನವರು ಆಫೀಸಿಗೆ ರಜೆ ಹಾಕಿ ಕೆಲವು ದಿನ ನಮ್ಮೊಂದಿಗೆ ಕಳೆಯಬಹುದು. ಅದೇ ಒಳ್ಳೆಯ ಐಡಿಯ.”

ರುಕ್ಸಾನಾ ಕೂಡ ಗಂಡನ ಸಲಹೆಗೆ ಸಹಮತಿ ಸೂಚಿಸಿದಳು.

ಆಗ ನೂರುನ್ನೀಸಾ ಆಶ್ಚರ್ಯದಿಂದ ಕೇಳಿದಳು, “ಅಂದ್ರೆ ಅಕ್ಕ ಭಾವ ಹೇಳೋದು ಮಾವ ದಿಕ್ಕಿಲ್ಲದವರಂತೆ ಜೀವನ ಕಳೀಲಿ ಅಂತಾನಾ? ಸ್ವಲ್ಪ ದಿನ ಇಲ್ಲಿ, ಸ್ವಲ್ಪ ದಿನ ಅಲ್ಲಿ….”

“ಹಾಗಾದ್ರೆ ಈ ಸಮಸ್ಯೆಗೆ ಪರಿಹಾರ ಏನೂಂತೀಯಾ?” ಬಷೀರ್‌ ಬೇಸರದಿಂದ ಕೇಳಿದ.

“ಈ ಸಮಸ್ಯೆಗೆ ಪರಿಹಾರ ಅಂದ್ರೆ ಮದುವೆ,” ನೂರುನ್ನೀಸಾ ನಗುತ್ತಾ ಹೇಳಿದಳು.

“ಯಾರ ಮದುವೆ?” ರುಕ್ಸಾನಾ ಆಶ್ಚರ್ಯದಿಂದ ಕೇಳಿದಳು.

“ಮಾವಂದು ಇನ್ಯಾರ್ದು?” ನೂರುನ್ನೀಸಾ ಸ್ಪಷ್ಟವಾಗಿ ಹೇಳಿದಳು.

“ಯಾಕೆ ಹುಚ್ಚುಚ್ಚಾಗಿ ಮಾತಾಡ್ತಿದ್ದೀಯಾ?” ಮೂವರೂ ಒಟ್ಟಿಗೇ ಕೇಳಿದರು.

“ಅದರಲ್ಲಿ ತೊಂದರೆ ಏನು? ನಾನು ಇದರ ಬಗ್ಗೆ ಬಹಳ ದಿನಗಳಿಂದ ಯೋಚಿಸ್ತಿದ್ದೀನಿ. ಮಾವ ಎಷ್ಟು ಚಿಕ್ಕ ವಯಸ್ಸಿನಲ್ಲಿ ವಿಧುರರಾದ್ರೂಂತ ನೀವ್ಯಾರೂ ಯೋಚಿಸಲೇ ಇಲ್ಲ. ಅವರ ಜೀವನ ಎಷ್ಟು ಕಠಿಣವಾಗಿದೇಂತ ನಿಮಗೆ ಅನ್ನಿಸಲೇ ಇಲ್ಲ. ಈಗಲೂ ಅವರ ವಯಸ್ಸೆಷ್ಟು? ಬರೀ 52 ವರ್ಷ ಅಷ್ಟೇ,” ನೂರುನ್ನೀಸಾ ಗಂಭೀರವಾಗಿ ಹೇಳಿದಳು.

“ಅದರೆ ಅವರನ್ನು ಯಾರು ಮದುವೆ ಆಗ್ತಾರೆ?” ಜಾವೇದ್‌ ಕೇಳಿದ.

“ಅದೆಲ್ಲಾ ನನಗೆ ಬಿಟ್ಬಿಡಿ. ನಿಮ್ಮ ಮೂವರಿಗೂ ಏನೂ ಆಕ್ಷೇಪಣೆ ಇಲ್ವಾಂತ ನಾನು ತಿಳ್ಕೋಬೇಕಿತ್ತು,” ನೂರುನ್ನೀಸಾ ಹೇಳಿದಳು.

ಸೈಯದ್‌ ಹಫೀಜ್‌ರ ಕಾಲುಗಳು ಕಂಪಿಸತೊಡಗಿದವು. ಸಂಕೋಚದ ಮುದ್ದೆಯಾಗಿ ಅವರು ಒಳಗೊಳಗೇ ಮುಳುಗುತ್ತಾ ಹೋಗುತ್ತಿದ್ದರು.

ಅವರು ಮೌನವಾಗಿ ತಮ್ಮ ರೂಮಿಗೆ ಹೋಗಿ ಲೈಟ್‌ ಆರಿಸಿ ಮಲಗಿಕೊಂಡರು. ಆದರೆ ನಿದ್ದೆ ಬರಲಿಲ್ಲ. ತಮ್ಮ ಯಾವ ವರ್ತನೆಯಿಂದ ಸೊಸೆ ಆ ರೀತಿ ಯೋಚಿಸುವಂತಾಯಿತು? ತಮ್ಮ ನಡವಳಿಕೆಯಲ್ಲಿ ಡಿಗ್ನಿಟಿ ಇಲ್ಲವೇ? ಎಷ್ಟೇ ಯೋಚಿಸಿದರೂ ತಮ್ಮ ತಪ್ಪೇನೂ ಕಂಡುಬರಲಿಲ್ಲ. ಇದೇ ಗೊಂದಲದಲ್ಲಿ ಬೆಳಗಾಯಿತು. ಬೆಳಗ್ಗೆ ಬೇಗನೇ ಆಫೀಸಿಗೆ ಹೊರಟುಬಿಡಬೇಕು. ಯಾರ ಜೊತೆಗೂ ಮಾತಾಡೋಲ್ಲ ಎಂದುಕೊಂಡರು. ಆದರೆ ಹಾಗಾಗಲಿಲ್ಲ. ತಿಂಡಿ ತಿನ್ನುವಾಗ ಡೈನಿಂಗ್‌ ಟೇಬಲ್ ನಲ್ಲಿ ಎಲ್ಲರೊಂದಿಗೂ ಕೂರಬೇಕಾಯಿತು. ಅವರು ತಮ್ಮನ್ನು ಬಹಳ ನಿಯಂತ್ರಿಸಿಕೊಂಡು ರಾತ್ರಿಯ ಯೋಜನೆ ಬಗ್ಗೆ ತಮಗೇನೂ ತಿಳಿದಿಲ್ಲ ಎನ್ನುವಂತೆ ವರ್ತಿಸಿದರು.

ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಒತ್ತಡದ ವಾತಾವರಣವಿತ್ತು. ಎಲ್ಲರೂ ಚಿಂತಿತರಾಗಿದ್ದರು. ಆದರೆ ಅವರು ಯಾರನ್ನೂ ಯಾಕೆಂದು ವಿಚಾರಿಸಲಿಲ್ಲ.

ಆದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳದಿರಲು ಆಗಲಿಲ್ಲ. 52ರ ವಯಸ್ಸಿನಲ್ಲಿ ಮರುಮದುವೆಯಾಗುವುದು ಉಚಿತವೇ ಎಂಬುದರ ಬಗ್ಗೆಯೇ ಚರ್ಚೆಯಾಗುತ್ತಿತ್ತು. ವಿಶೇಷವಾಗಿ ಅವರ ಮಗಳು ರುಕ್ಸಾನಾಳೇ ಹೆಚ್ಚು ವಿರೋಧಿಸುತ್ತಿದ್ದಳು.

“ನೂರುನ್ನೀಸಾ, ನೀನು ಹೀಗೆ ಮಾತಾಡ್ತೀಯಾಂತ ನಾನು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ,” ರುಕ್ಸಾನಾ ರೋಷದಿಂದ ಹೇಳಿದಳು.

“ಕಲ್ಪನೆಯ ಅಭಾವವೇ ನಮಗೆ ಹೊಸ ಆಲೋಚನೆಗಳಿಗೆ ಅವಕಾಶ ಕೊಡಲ್ಲ. ನಾವು ಕೊಂಚ ವಿಭಿನ್ನವಾಗಿ ಆಲೋಚಿಸಬೇಕು.”

“ಆದರೆ ಈಗ ಅವರಿಗೆ ಮರುಮದುವೆಯ ಅಗತ್ಯವಾದರೂ ಏನಿದೆ? ಸಾವಿರಾರು ಜನ ಒಂಟಿಯಾಗಿಯೇ ಜೀವಸ್ತಿಲ್ವಾ?” ಬಷೀರ್‌ತಂಗಿಯ ಪಕ್ಷ ಹಿಡಿದು ಹೇಳಿದ.

“ಇನ್ನೂ ಸಾವಿರಾರು ಮಂದಿ ತಮ್ಮ ಸಂಸಾರ ಹಾಗೂ ಮಕ್ಕಳ ಬಗ್ಗೆ ಏನೂ ಚಿಂತಿಸದೆ ತಮ್ಮದೇ ವೈಭೋಗದಲ್ಲಿ ಮುಳುಗಿರ್ತಾರೆ.”

ಆಧುನಿಕ ವಿಚಾರಗಳುಳ್ಳ ಬಷೀರ್‌ ಹಾಗೂ ರುಕ್ಸಾನಾ ಈ ವಿಷಯದಲ್ಲಿ ಯಾಕಿಷ್ಟು ಹಟ ಮಾಡುತ್ತಿದ್ದಾರೆ ಎಂದು ನೂರುನ್ನೀಸಾಗೆ ತಿಳಿಯಲಿಲ್ಲ.

“ಇದರಿಂದ ಎಷ್ಟೊಂದು ಕಾನೂನು ತೊಡಕುಗಳು ಉಂಟಾಗುತ್ತೆ. ನೀನು ಅದರ ಬಗ್ಗೆ ಯೋಚಿಸಿದ್ದೀಯಾ?” ರುಕ್ಸಾನಾ ಆಸ್ತಿಯ ಬಗ್ಗೆ ಸ್ಪಷ್ಟವಾಗಿ ಸೂಚಿಸಿದಳು.

“ಅದರ ಬಗ್ಗೆ ನೀವು ಹೆದರುವ ಅಗತ್ಯವಿಲ್ಲ. ವಹೀದಾ ಆಂಟಿಯ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಅವರಿಗೆ ಬೇಕಾದಷ್ಟು ಆಸ್ತಿ ಇದೆ. ಹಣದ ಕೊರತೆ ಇಲ್ಲ. ಅವರಿಗೆ ಮಕ್ಕಳಾಗೋದಿಲ್ಲ ಅನ್ನೋ ಕಹಿ ಸತ್ಯ ಮದುವೆಯಾದ 1 ವರ್ಷದಲ್ಲೇ ತಿಳಿಯಿತು. ಅವರಿಗೆ ಒಂದು ಮಗುವಾದರೂ ಇದ್ದಿದ್ರೆ ನಾನು ಅವರ ಹೆಸರನ್ನು ಸೂಚಿಸ್ತಾ ಇರಲಿಲ್ಲ. ಅವರೂ ಇದಕ್ಕೆ ಒಪ್ಪೋದಿಲ್ಲ.”

“ಆದರೂ ಸಮಾಜ ವಿರೋದಿಸೋ ಭಯವಂತೂ ಇದೆ,” ಬಷೀರ್‌ಗೆ ಇದು ಸರಿಹೊಂದುತ್ತಿರಲಿಲ್ಲ. ಗಂಡನ ಮಾತು ಕೇಳಿ ನೂರುನ್ನೀಸಾಳಿಗೆ ಇದ್ದಕ್ಕಿದ್ದಂತೆ ಕೋಪ ಬಂತು.

“ಹೆಚ್ಚಿನ ಶಿಕ್ಷಣ ಪಡೆದು, ಆಧುನಿಕ ಸೊಸೈಟಿಯಲ್ಲಿ ಇದ್ದರೂ ನಿಮ್ಮ ಆಲೋಚನೆ ಶಿಲಾಯುಗದ್ದೇ ಆಗಿದೆ. ಸಮಾಜ ಯಾವಾಗಲೂ ಟೀಕೆ ಮಾಡುತ್ತೆ. ಒಬ್ಬರ ಕಷ್ಟಕ್ಕೆ ಎಂದಿಗೂ ಸಪೋರ್ಟ್‌ ಮಾಡಲ್ಲ. ಸಮಾಜ ಏನು ನಮ್ಮವರೇ ಸಪೋರ್ಟ್‌ಮಾಡಲ್ಲ. ನೀವು ಜರ್ಮನಿಯ ಕೆಲಸ ಬಿಟ್ಟು ಇಲ್ಲೇ ಮಾವನವರ ಜೊತೆ ಇರ್ತೀರಾ?”

ಬಷೀರ್‌ ಉತ್ತರ ಕೊಡಲಿಲ್ಲ. ಸ್ವಲ್ಪ ಹೊತ್ತು ಅಲ್ಲಿ ಮೌನ ನೆಲೆಸಿತ್ತು. ನಂತರ ರುಕ್ಸಾನಾ ಇನ್ನೊಂದು ಆಕ್ಷೇಪಣೆ ತೆಗೆದಳು, “ಯಾರ ಬಳಿಯಾದರೂ ಅಪ್ಪನ ಮದುವೆ ಬಗ್ಗೆ ಹೇಳ್ಕೋಳೋಕೆ ನನಗೆ ನಾಚಿಕೆ ಆಗುತ್ತೆ.”

“ಅದಕ್ಕೆ ಕಾರಣ ಏನು ಗೊತ್ತಾ? ಒಬ್ಬ ವ್ಯಕ್ತಿಯ ತ್ಯಾಗವನ್ನು ಹೊಗಳಿ ಆತನನ್ನು ಪೂಜ್ಯನೆಂದು ಪರಿಗಣಿಸೋದು. ಅದರ ಬದಲು  ವ್ಯಕ್ತಿಯನ್ನು ಮೂಳೆ ಮಾಂಸಗಳುಳ್ಳ ಮನುಷ್ಯನ ರೂಪದಲ್ಲಿ ನೋಡಿದ್ರೆ ನಮಗೆ ನಾಚಿಕೆ ಆಗಲ್ಲ,” ತಾನೊಬ್ಬಳೇ ಎಲ್ಲರಿಗೂ ಅರ್ಥ ಮಾಡಿಸುವುದು ನೂರುನ್ನೀಸಾಳಿಗೂ ಕಷ್ಟವಾಗಿತ್ತು. ಆದರೆ ಅವಳದು ದೃಢ ಸಂಕಲ್ಪವಾಗಿತ್ತು. ಆದ್ದರಿಂದ ಬಹಳ ಸಂಯಮ ಹಾಗೂ ಧೈರ್ಯದಿಂದ, ತರ್ಕದ ಮೇಲೆ ತರ್ಕ ಪೋಣಿಸಿ ಆ ಪ್ರಸ್ತಾಪ ಅನುಚಿತಲ್ಲ ಎಂದು ಮೂವರನ್ನೂ ಒಪ್ಪಿಸುವುದರಲ್ಲಿ ಯಶಸ್ವಿಯಾದಳು.

“ನಾವು ಒಪ್ಪಿದ್ರೆ ಏನಾಯ್ತು? ಮಾವನವರನ್ನು ಒಪ್ಪಿಸೋಕೆ ನಿನಗೆ ಆಗಲ್ಲ,” ಹಫೀಜ್‌ ಎಂದಿಗೂ ಒಪ್ಪುದಿಲ್ಲವೆಂದು ಜಾವೇದ್‌ಗೆ ನಂಬಿಕೆ ಇತ್ತು.

“ಆಯ್ತು ಭಾವ. ಚಾಲೆಂಜ್‌. ಆದರೂ ನೀವೆಲ್ಲಾ ಇದರ ಬಗ್ಗೆ .ಓಚಿಸಿ ಒಂದು ತೀರ್ಮಾನಕ್ಕೆ ಬನ್ನಿ.”

ಮರುದಿನ ಬೆಳಗ್ಗೆ ಎಲ್ಲರೂ ಟಿಫಿನ್‌ ತಿಂದು ಬೇಗ ಎದ್ದರು. ನೂರುನ್ನೀಸಾ ಬೇಕೆಂತಲೇ ತಡ ಮಾಡಿದಳು. ಮಾವನ ಕಪ್‌ನಲ್ಲಿ ಇನ್ನಷ್ಟು ಕಾಫಿ ಹಾಕಿ ಬಹಳ ಪ್ರೀತಿಯಿಂದ ಕೇಳಿದಳು, “ಮಾವ, ನಾನೊಂದು ಮಾತು ಹೇಳ್ತೀನಿ ಕೇಳ್ತೀರಾ?”

ಸೈಯದ್‌ ಹಫೀಜ್‌ಗೆ ಬೆವರಿಳಿಯಿತು. ಆದರೂ, “ಕೇಳ್ತೀನಿ, ಹೇಳಮ್ಮಾ,” ಎಂದರು.

“ನಾವೆಲ್ಲಾ ಹೊರಟುಹೋದ ಮೇಲೆ ನೀವು ಒಂಟಿಯಾಗಿ ಇರಬಾರದು ಅನ್ನೋದು ನಮ್ಮ ಆಸೆ.”

“ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾಗುತ್ತೆ,” ಅವರು ಶಾಂತವಾಗಿ ಹೇಳಿದರು.

“ಕಟುವಾಸ್ತವವನ್ನು ಸಿಹಿಯಾಗಿಯೂ ಬದಲಿಸಬಹುದು.”

“ನೂರ್‌, ನನಗೆ ಆಫೀಸಿಗೆ ಲೇಟಾಗ್ತಿದೆ,” ಅವರು ಏಳುತ್ತಾ ಹೇಳಿದರು.

“ಇವತ್ತು ಸ್ವಲ್ಪ ಲೇಟಾದರೂ ಪರವಾಗಿಲ್ಲ. ಕೆಲವು ಕ್ಷಣಗಳಿಗಾಗಿ ನನ್ನನ್ನು ನಿಮ್ಮ ಸ್ನೇಹಿತೆ ಅಂದ್ಕೋತೀರಾ?”

“ನಾನಂತೂ ಮಕ್ಕಳನ್ನು ನನ್ನ ಸ್ನೇಹಿತರೆಂದೇ ತಿಳಿದಿದ್ದೀನಿ.”

“ಹಾಗಾದ್ರೆ ಆ ಸ್ನೇಹಿತೆಯನ್ನು ನಂಬಿ ಅವಳು ಹೇಳುವ ಸಂಬಂಧ ಒಪ್ಪಿಕೊಳ್ಳಿ,” ನೂರುನ್ನೀಸಾ ನಿಸ್ಸಂಕೋಚವಾಗಿ ಹೇಳಿದಳು.

“ಅಂದ್ರೆ?” ಅವರು ತಬ್ಬಿಬ್ಬಾಗಿದ್ದರು.

“ಮಾವ….. ನಾನೊಬ್ಬಳೇ ಅಲ್ಲ, ಎಲ್ಲರೂ ಹೇಳೋದೇನೆಂದ್ರೆ ನೀವು ಇನ್ನೊಂದು ಮದುವೆ ಆಗಿ ನಿಮ್ಮ ಏಕಾಂಗಿತನಕ್ಕೆ ಮಂಗಳ ಹಾಡಬೇಕೂಂತ.”

“ಅಂಥ ವಿಚಾರ ಹಿಂದೆಂದೂ ನನ್ನ ಮನಸ್ಸಿಗೆ ಬರಲಿಲ್ಲ. ಈಗ ಈ ವಯಸ್ಸಿನಲ್ಲಿ ಹೇಗೆ ಬರುತ್ತೆ? ನನ್ನ ತಮಾಷೆ ಯಾಕಮ್ಮ ಮಾಡ್ತೀಯಾ?” ಹಫೀಜ್‌ಗೆ ಸಿಟ್ಟು ಬಂದಿತ್ತು.

“ಮಾವ, ನಾನು ತಮಾಷೆ ಮಾಡ್ತಿಲ್ಲ. ನೀವು ಈ ಮನೆ ಹಿರಿಯರಾಗಿ ನಿಮ್ಮ ಕರ್ತವ್ಯ ಪೂರೈಸಿದ್ದೀರಿ. ಎಲ್ಲ ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ್ದೀರಿ. ಈಗ ನಿಮ್ಮ ಅಸ್ತಿತ್ವವನ್ನು ಹಂತ ಹಂತವಾಗಿ ನಾಶ ಮಾಡಿಕೊಳ್ತಿದ್ದೀರಿ. ಹೀಗೆ ನಿಮ್ಮನ್ನು ನೀವು ಶಿಕ್ಷಿಸಿಕೊಳ್ಳೋದು ಯಾವ ನ್ಯಾಯ ಮಾವಾ?” ನೂರುನ್ನೀಸಾ ಸ್ಪಷ್ಟವಾಗಿ ಹೇಳಿದಳು.

`ಬದುಕಿನ ದುರ್ಗಮ ದಾರಿಯಲ್ಲಿ ಕಷ್ಟಗಳನ್ನು ಸಹಿಸುತ್ತಾ ಇಷ್ಟು ವರ್ಷಗಳನ್ನು ಕಳೆದಿದ್ದೇನೆ. ಇನ್ನೂ ಕೆಲವು ವರ್ಷ ಕಷ್ಟಗಳನ್ನು ಅನುಭವಿಸಿದ್ರೆ ಏನಂಥ ವ್ಯತ್ಯಾಸವಾಗುತ್ತೆ,’ ಎಂದು ಹೇಳಿ ಈ ವಿಷಯಕ್ಕೆ ಮುಕ್ತಾಯ ಹಾಡಬೇಕೆಂದು ಹಫೀಜ್‌ ಅಂದುಕೊಂಡರು.

ಆದರೆ ನೂರುನ್ನೀಸಾ ಅವರ ಉತ್ತರ ನಿರೀಕ್ಷಿಸದೆ ಹೇಳಿದಳು, “ನೀವಂತೂ ವಹೀದಾ ಆಂಟೀನ ನೋಡಿದ್ದೀರಿ. ಅವರಿಗೆ ಯಾವುದೇ ಆರ್ಥಿಕ ಸಹಾಯದ ಅಗತ್ಯ ಇಲ್ಲ. ಆದರೆ ಎಮೋಶನಲ್ ಸಪೋರ್ಟ್‌ನ ಕೊರತೆ ಇದೆ. ಒಂದು ರೀತಿಯಲ್ಲಿ ಅವರದು ಅರ್ಥಹೀನ ಜೀವನ. ಸ್ನೇಹಿತರಾಗಲೀ, ನೆಂಟರಾಗಲೀ ಜೀವನಪರ್ಯಂತ ಜೊತೆಗೆ ಇರೋಕಾಗಲ್ಲ. ಅವರು ಕೆಲಸದಲ್ಲಿ ಇದ್ದಿದ್ದರೆ ಈ ಸಮಸ್ಯೆ ಇಷ್ಟು ಗಂಭೀರವಾಗಿ ಇರುತ್ತಿರಲಿಲ್ಲ. ಆದ್ದರಿಂದ ಈ ಇಬ್ಬರು ಏಕಾಂಗಿಗಳು ಒಟ್ಟಿಗೆ ಸೇರಿ ಒಂದು ಸುಂದರ ಬೆಸುಗೆಯಲ್ಲಿ ಬದಲಾದರೆ ಎಷ್ಟು ಚೆನ್ನಾಗಿರುತ್ತದೆ.”

ತಮ್ಮ ಕಳ್ಳತನ ಬದಲಾಯಿತೇನೋ ಎಂಬಂತೆ ಹಫೀಜ್‌ ಬೆಚ್ಚಿದರು. ನಂತರ ಅವರು ಹೇಳಿದರು, “ಆದರೂ ಏಕಾಂತ ಮನುಷ್ಯನಿಗೆ ಸ್ವಾತಂತ್ರ್ಯ ಕೊಡುತ್ತಲ್ವಾ?”

“ಬಹುಶಃ ನೀವು ಸಮಾಜಕ್ಕೆ ಹೆದರ್ತಿದ್ದೀರಿ. ಅದು ತ್ಯಾಗ, ಅರ್ಪಣೆಗಳ ಪವಿತ್ರ ಭಾವನೆಯನ್ನು ತಪ್ಪಾಗಿ ಅರ್ಥೈಸಿದೆ. ಮನುಷ್ಯ ತನ್ನನ್ನು ನಾಶ ಮಾಡಿಕೊಳ್ಳುವುದೇ ತ್ಯಾಗದ ಅರ್ಥವಲ್ಲ,” ನೂರುನ್ನೀಸಾ ಹಫೀಜ್‌ರ ಮನಸ್ಸನ್ನು ವಿಶ್ಲೇಷಿಸುತ್ತಿದ್ದಳು.

ಹಫೀಜ್‌ ಮಾತಾಡದೆ ಎದ್ದು ಆಫೀಸಿಗೆ ಹೊರಟರು. ಮುಂದೆ ಕೆಲವು ದಿನಗಳವರೆಗೆ ಇದೇ ವಾದವಿವಾದ ನಡೆಯುತ್ತಿತ್ತು. ಸೈಯದ್‌ ಹಫೀಜ್‌ ಸ್ಪಷ್ಟವಾಗಿ ನಿರಾಕರಿಸಿದ ನಂತರ ನೂರುನ್ನೀಸಾ ಸೋಲೊಪ್ಪಿಕೊಳ್ಳಲಿಲ್ಲ. ಕೊನೆಗೂ ಅವಳು ಜಯ ಗಳಿಸಿದಳು.

ಕೆಲವೇ ದಿನಗಳಲ್ಲಿ ಬಹಳ ಸರಳವಾಗಿ ವಹೀದಾ ಮತ್ತು ಸೈಯದ್‌ ಹಫೀಜ್‌ ಪತಿ-ಪತ್ನಿಯರಾದರು. ಜೀವನದಲ್ಲಿ ಇದ್ದಕ್ಕಿದ್ದಂತೆ ಬರುವ ಈ ಹೊಸ ತಿರುವು ಹಫೀಜ್‌ಗೆ ವಿಚಿತ್ರವಾಗಿ ಕಾಣುತ್ತಿತ್ತು. ಮನಸ್ಸಿನಲ್ಲಿ ಒಂದು ರೀತಿಯ ಸಿಕ್ಕೂ ಇತ್ತು. ಬಹುಶಃ ಕನಸಿನಲ್ಲಿಯೂ ಮದುವೆಯಾಗುವುದಿಲ್ಲ ಎಂದು ಹೇಳುತ್ತಿದ್ದುದು ತಪ್ಪಾಗಿತ್ತು. ಮನಸ್ಸಿನಲ್ಲಿ ತಾನು ದೊಡ್ಡ ದೋಷಿಯೆಂದು ಒಂದು ರೀತಿಯ ಅಪರಾಧ ಪ್ರಜ್ಞೆ ಕಾಡುತ್ತಿತ್ತು.

ಆದರೂ ಎಲ್ಲರ ಮಾಮೂಲಿ ವರ್ತನೆಗಳು ಹಾಗೂ ವಹೀದಾರ ಅನೌಪಚಾರಿಕ ಆಧುನಿಕ ವಿಚಾರಧಾರೆಗಳು ಅವರು ಸಂಕೋಚ ಪಟ್ಟುಕೊಳ್ಳದಂತೆ ಕಾಪಾಡಿದವು. ಗೆಳೆಯರು ಹಾಗೂ ಸಂಬಂಧಿಕರಲ್ಲಿ ಕೆಲವರು ಈ ಕಾರ್ಯವನ್ನು ಪ್ರಶಂಸಿಸಿದರು. ಇನ್ನೂ ಕೆಲವರು ಹಿಂದಿನಿಂದ ಆಡಿಕೊಂಡರು. ಆದರೂ ಕೆಲವೇ ದಿನಗಳಲ್ಲಿ ಎಲ್ಲ ನಾರ್ಮಲ್ ಆಯಿತು. ನೂರುನ್ನೀಸಾ, ಬಷೀರ್‌, ರುಕ್ಸಾನಾ ಮತ್ತು ಜಾವೇದ್‌ ಎಲ್ಲರೂ ವಿದೇಶಕ್ಕೆ ಹಿಂತಿರುಗಿದ್ದರು.

1 ವರ್ಷ ಕಳೆಯಿತು. ನೂರುನ್ನೀಸಾಳ ಆಧುನಿಕ ಚಿಂತನೆಗಳು ಎಷ್ಟು ಉನ್ನತವಾಗಿದ್ದವು ಎಂದು ಹಫೀಜ್‌ ಒಮ್ಮೊಮ್ಮೆ ಯೋಚಿಸುತ್ತಿದ್ದರು. ಮನೆ ಹಿಂದಿನಂತೆ ಶೂನ್ಯವೆನಿಸುತ್ತಿರಲಿಲ್ಲ. ಏಕಾಂತದ ಭಯದಿಂದ ಮಧ್ಯರಾತ್ರಿಯವರೆಗೂ ರಸ್ತೆಯನ್ನೇ ನೋಡುತ್ತಿರಬೇಕಿರಲಿಲ್ಲ. ಯಾರಾದರೂ ಗೆಳೆಯರು ನನ್ನನ್ನು ಭೇಟಿ ಆಗೋಕೆ ಬರಲಿ, ಯಾರಾದರೂ ನೆಂಟರು ಫೋನ್‌ ಮಾಡಿ ವಿಚಾರಿಸಲಿ ಎಂದು ಹಂಬಲಿಸಬೇಕಾಗಿರಲಿಲ್ಲ. ಸಂತಸ, ದುಃಖಗಳನ್ನು ಹಂಚಿಕೊಳ್ಳಲು ಒಬ್ಬ ಗೆಳತಿ ಸಿಕ್ಕಿದ್ದರು.

ವಹೀದಾರ ಸ್ವಭಾವ ಎಷ್ಟು ನಿರ್ಮಲ ಹಾಗೂ ಮೃದುವಾಗಿತ್ತೆಂದರೆ ಅವರು ಹೊಸಬರು ಎನ್ನಿಸುತ್ತಿರಲಿಲ್ಲ. ಅವರು ಸಹಜವಾಗಿ ಹಫೀಜ್‌ರೊಂದಿಗೆ ಬೆರೆಯುತ್ತಿದ್ದರು. ವಹೀದಾ ತಮ್ಮ ಬರಡಾದ ಜೀವನದಲ್ಲಿ ಮತ್ತೆ ವಸಂತವನ್ನು ತಂದ ಶ್ರೇಯಸ್ಸನ್ನು ನೂರುನ್ನೀಸಾಗೆ ಕೊಟ್ಟಿದ್ದರು.

“ಆ ಹುಡುಗಿ ಇಷ್ಟು ಸಂವೇದನಾಶೀಲಳೆಂದು ತಿಳಿದಿರಲಿಲ್ಲ. ಒಬ್ಬರ ದುಃಖವನ್ನು ಇಷ್ಟು ಗಾಢವಾಗಿ ಅರ್ಥ ಮಾಡಿಕೊಳ್ಳುವುದು, ಅದಕ್ಕೆ ಸೂಕ್ತ ಪರಿಹಾರ ಹುಡುಕುವುದು, ಅದೂ ಇಷ್ಟೆಲ್ಲಾ ವಿರೋಧಗಳನ್ನು ಮನೆಯವರಿಂದಲೇ ಎದುರಿಸಿ,”  ವಹೀದಾ ವಾಸ್‌ನಲ್ಲಿ ತಾಜಾ ಹೂಗಳನ್ನು ಇಟ್ಟು ಅಲಂಕರಿಸುತ್ತಾ ಹೇಳಿದರು.

ಹಫೀಜ್‌ರಿಗೆ ತಮ್ಮ ಭಾವನೆಗಳನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಬಹಳ ಕಷ್ಟವಾಗಿತ್ತು. ಅವರು ಇಷ್ಟು ಮಾತ್ರ ಹೇಳಿದರು, “ನೀರಸವಾಗಿದ್ದ ನಮ್ಮ ಬದುಕು ಈಗ ರಸಮಯವಾಗಿದೆ.”

ನಿಧಾನವಾಗಿ ಸಂಜೆಯಾಗುತ್ತಿತ್ತು. `ಈ ಸಂಜೆಯೂ ಎಷ್ಟು ಸುಂದರವಾಗಿದೆ,’ ಇಬ್ಬರೂ ಒಟ್ಟಿಗೇ ಯೋಚಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ