ಪುಡಾರಿ ಪತ್ನಿ : ರೀ, ಇವತ್ತಿನ ಸುದ್ದಿ ಗಮನಿಸಿದ್ರಾ?

ಪುಡಾರಿ : ಬೇಕಾದಷ್ಟಿವೆ, ಯಾವುದು ಹೇಳ್ತಿದ್ದೀ?

ಪತ್ನಿ : ಯುವರಾಜನ ವರ್ಚಸ್ಸು ಹೆಚ್ಚಿಸಲು ಪಕ್ಷದ ವತಿಯಿಂದ ಬಹಳಷ್ಟು ಖರ್ಚಾಗುತ್ತಿದೆ ಅಂತ…

ಪತಿ : ಸರಿ, ಅದಕ್ಕೇನೀಗ?

ಪತ್ನಿ : ನಿಮ್ಮ ಮುಖಂಡರ ವರ್ಚಸ್ಸು ಹೆಚ್ಚಿಸಲು ಕೋಟ್ಯಂತರ ಖರ್ಚು ಮಾಡ್ತೀರಂತೆ, ಹೆಂಡತಿಯ ವರ್ಚಸ್ಸು ಹೆಚ್ಚಿಸಲು ಅವಳ ಮೇಕಪ್‌ಗಾಗಿ ಒಂದಿಷ್ಟು ಸಾವಿರ ಖರ್ಚು ಮಾಡಲು ಆಗದೆ….?

 

ಮದುವೆಯಾದ 5 ವರ್ಷಗಳ ನಂತರ ವ್ಯಾಲೆಂಟೈನ್‌ ಡೇ ಬಂದಾಗ ಮೋಹನ್‌ ತನ್ನ ಹೆಂಡತಿ ರಾಧಾಳಿಗೆ ಒಂದು ದೊಡ್ಡ ಬಿಳಿಯ ಗುಲಾಬಿ ತಂದುಕೊಟ್ಟ.

ರಾಧಾ : ಇದೇನ್ರಿ ಬಿಳಿ ಗುಲಾಬಿ ತಂದಿದ್ದೀರಿ? ವ್ಯಾಲೆಂಟೈನ್‌ ಡೇ ಅಂದ್ರೆ ಕೆಂಪು ಗುಲಾಬಿ ಕೊಡ್ತಾರಲ್ವಾ?

ಮೋಹನ್‌ : ಅದಕ್ಕೆ ಕಾರಣ ಇದೆ. ಈಗ ನಮಗೆ ಪ್ರೇಮಕ್ಕಿಂತಲೂ ಶಾಂತಿ ಸೌಹಾರ್ದತೆಯ ಅಗತ್ಯ ಜಾಸ್ತಿ ಇದೆ.

 

ಅಫಿಶಿಯಲ್ ಟೂರ್‌ ಎಂದು ಗುಂಡ 15 ದಿನಗಳ ನಂತರ ದೆಹಲಿಯಿಂದ ಮನೆಗೆ ಮರಳಿದ್ದ.

ಗುಂಡ : ನೀನು ಏನೇ ಹೇಳು, ದೆಹಲಿಯಲ್ಲಿ ವಿಪರೀತ ಚಳಿ. ನಮ್ಮ ಬೆಂಗಳೂರು ಹಾಗಲ್ಲ ಬಿಡು.

ರತ್ನಿ : ಅದಿರಲಿ, ನೀವು ಅಲ್ಲಿ ನೆಟ್ಟಗಿದ್ದಿರೋ, ಊರು ಸುತ್ತಲು ಹೋಗಿದ್ದಿರೋ?

ಗುಂಡ : ಏನೇ ಹಾಗಂದ್ರೆ…. ನಾನೆಂಥ ಒಳ್ಳೆ ಗಂಡ ಅಂತ ನಿನಗೆ ಗೊತ್ತಿಲ್ವೆ? ನಾನು ಹೇಳಿದ್ದು ಏನಾದರೂ ಸುಳ್ಳಾಗಿದ್ದರೆ ಈಗಲೇ ನನ್ನ ಪ್ರಾಣ ಹೋಗಲಿ! ಅದಿರಲಿ, ನಾನಿಲ್ಲದಾಗ ನೀನು ನಿನ್ನ ಕಸಿನ್‌ ಪರಮೇಶಿ ಮನೆಗೆ ಹೋಗಿಲ್ಲ ತಾನೇ?

ರತ್ನಿ : ಅಯ್ಯೋ ನಿಮ್ಮ! ನಾನೆಂಥ ಒಳ್ಳೆಯಳು ನಿಮಗೆ ಗೊತ್ತಿಲ್ವಾ? ನಾನು ಸುಳ್ಳಾಡಿದ್ದಿರೆ ಈಗಲೇ ನನಗೆ ವೈಧವ್ಯ ಪ್ರಾಪ್ತವಾಗಲಿ!

 

ರಮಾ ತನ್ನ ಕಸಿನ್‌ ಮದುವೆಗೆಂದು ಬಂದಿದ್ದಳು. ಅವಳ ಗಂಡ ರಮಣ ಸ್ವಲ್ಪ ಹೊತ್ತಾದ ಮೇಲೆ ಅಲ್ಲಿಗೆ ಬಂದ. ಮದುವೆಯ ಕಾರ್ಯಕಲಾಪಗಳು ಭರದಿಂದ ನಡೆಯುತ್ತಿದ್ದವು.

10 ನಿಮಿಷ ಬಿಟ್ಟು ರಮಾ ನೋಡುತ್ತಾಳೆ, ರಮಣ ಯಾರೋ ಹೆಂಗಸಿನೊಂದಿಗೆ ನಸುನಗುತ್ತಾ ಮಾತನಾಡುತ್ತಿದ್ದ. ಆಗ ಅವಳು ಗಂಡನ ಬಳಿ ಬಂದು, ವ್ಯಾನಿಟಿ ಬ್ಯಾಗ್‌ನಿಂದ ಒಂದು ಅಮೃತಾಂಜನದ ಬಾಟಲ್ ತೆಗೆದು ತೋರಿಸುತ್ತಾ, “ಮನೆಗೆ ಹೋದ ತಕ್ಷಣ ನಾನು ಇದನ್ನು ನಿಮ್ಮ ತಲೆಗೆ ತಿಕ್ಕುತ್ತೇನೆ,” ಎಂದಳು.

ರಮಣ : ಆದರೆ…. ನನಗೆ ತಲೆನೋವೆಂದು ನಾನು ನಿನಗೆ ಯಾವಾಗ ಹೇಳಿದೆ?

ರಮಾ : ನಾವಿನ್ನೂ ಮನೆಗೆ ಹೋಗಿಲ್ಲವಲ್ಲ… ಅಲ್ಲಿಗೆ ಹೋದ ಮೇಲೆ ತಾನೇ ನೀವು ಯಾವಳ ಜೊತೆ ಏನೇನು ಹರಟುತ್ತಿದ್ರಿ ಅಂತ ನಾನು ವಿಚಾರಿಸೋದು?

 

ಭಿಕಾರಿ : ನೋಡಿ ತಾಯಿ, ನಿಮ್ಮ ಅಕ್ಕಪಕ್ಕದ ಮನೆಯವರು ಏನೇನೋ ತಿಂಡಿತಿನಿಸು ಕೊಟ್ಟಿದ್ದಾರೆ. ನೀವೇನು ಕೊಡ್ತೀರೋ ನೋಡಿ…..

ಗೃಹಿಣಿ : ಇರಲಿ, ಈ ಹಾಜ್ಮೋಲಾ ಮಾತ್ರೆ ತಗೋ,  ಅವರು ಕೊಟ್ಟಿದ್ದು ಜೀರ್ಣವಾಗಲು ಇದು ಸಹಾಯ ಮಾಡುತ್ತೆ.

 

ಗುಂಡ : ಹಲೋ ಪಮ್ಮಿ ಡಿಯರ್‌… ಹೇಗಿದ್ದಿ?

ಹುಡುಗಿ : ಹೂ ಆರ್‌ ಯೂ ಐ ಸೇ….

ಗುಂಡ : ನಾನು ನಿನ್ನ ಪ್ರಿಯತಮ ಡಿಯರ್‌.

ಹುಡುಗಿ : ನೀನು ಪರಮೇಶಿ ತಾನೇ?

ಗುಂಡ : ಎಸ್‌, ಆದರೆ ನಿನಗೆ ಹೇಗೆ ಗೊತ್ತಾಯ್ತ ಡಿಯರ್‌?

ಹುಡುಗಿ :  ನೀನು ಶಂಕರಪ್ಪನವರ ಮಗ ಪರಮೇಶಿ ತಾನೇ?

ಗುಂಡ : ಎಸ್‌, ಅದೆ ನಿನಗೆ ಹೇಗೆ ಗೊತ್ತಾಯ್ತು ಡಿಯರ್‌?

ಹುಡುಗಿ : ನೀನು ಸೋಮಪ್ಪನರ ಮೊಮ್ಮಗ ತಾನೇ?

ಗುಂಡ : ಎಸ್‌….ಎಸ್‌…. ಇದೆಲ್ಲ ನಿನಗೆ ಹೇಗೆ ಗೊತ್ತಾಯ್ತು ಡಿಯರ್‌?

ಹೆಂಗಸು : ಲೋ ಗುಂಡ…. ನಾನು ಕಣೋ ನಿಮ್ಮಮ್ಮ… ನೀನು ಪಮ್ಮಿಗಲ್ಲ ಮಮ್ಮಿಗೆ ಫೋನ್‌ ಮಾಡಿದ್ದಿ ನೋಡೋ ಭಂಡ!

 

ಪತ್ನಿ : ಎದುರಿನ ಮರದಲ್ಲಿ ನೋಡ್ರಿ, ಎರಡು ಹಕ್ಕಿಗಳು ಎಷ್ಟು ಪ್ರೀತಿಯಿಂದ ಕುಳಿತಿವೆ, ಹಾಯಾಗಿ ಸಂತೋಷದಿಂದ ನಲಿಯುತ್ತಿವೆ. ನಾವು ಇದ್ದೀವಿ, ಎಲ್ಲದಕ್ಕೂ ಯಾವಾಗಲೂ ಕಿತ್ತಾಡುತ್ತಾ ಇರ್ತೀವಿ.

ಪತಿ : ನೀನು ಅದರಲ್ಲಿ ಒಂದು ಮುಖ್ಯ ವ್ಯತ್ಯಾಸ ಗಮನಿಸಿದೆಯಾ? ಇಲ್ಲಿರುವ ಹಕ್ಕಿಗಳಲ್ಲಿ ಗಂಡು ಮಾತ್ರ ಅದೇ ಇರುತ್ತದೆ, ಆದರೆ ಹೆಣ್ಣುಹಕ್ಕಿ ಬದಲಾಗುತ್ತಲೇ ಇರುತ್ತದೆ!

 

ಪ್ರೊಫೆಸರ್‌ : ಏನ್ರಯ್ಯ, ಸಾಕ್ರಟೀಸ್‌ ಯಾರು ಗೊತ್ತೇ?

ವಿದ್ಯಾರ್ಥಿಗಳು : ಖಂಡಿತಾ ಇಲ್ಲ ಸಾರ್‌.

ಪ್ರೊಫೆಸರ್‌ : ಕಾಲೇಜಿಗೆ ಬಂದು ಯಾವ ಕಾಲವಾಯ್ತು, ಅಷ್ಟಾದ್ರೂ ತಿಳಿದುಕೊಳ್ಳುವುದು ಬೇಡವೇ?

ವಿದ್ಯಾರ್ಥಿಗಳು : ಸಾರ್‌, ನಿಮಗೆ ರಾಜು, ರಾಹುಲ್, ಮೋಹನ್‌, ಬಂಟಿ….  ಇವರೆಲ್ಲ ಗೊತ್ತಾ?

ಪ್ರೊಫೆಸರ್‌ : ಇಲ್ಲವಲ್ಲ…. ಯಾರವರು?

ವಿದ್ಯಾರ್ಥಿಗಳು : ನಿಮ್ಮ ಮಗಳು ವಯಸ್ಸಿಗೆ ಬಂದು ಯಾವ ಕಾಲವಾಯ್ತು, ಇಷ್ಟಾದ್ರೂ ತಿಳಿಯುವುದು ಬೇಡವೇ?

 

ಪತ್ನಿ : ಮದುವೆಗೆ ಮೊದಲು ನನ್ನ ಫಿಗರ್‌ ಬಿಲ್‌ಕುಲ್ ‌ಕೋಕ್‌ನ ಬಾಟಲ್ ತರಹವೇ ಇತ್ತು.

ಪತಿ : ಅದು ಈಗಲೂ ಇದೆ. ವ್ಯತ್ಯಾಸ ಅಂದ್ರೆ ಹಿಂದೆ ಅದು 300 ಮಿ.ಲೀ. ಆಗಿತ್ತು, ಈಗ ಒಂದೂವರೆ ಲೀ.ನದಾಗಿದೆ.

 

ಬಹಳ ದಿನಗಳ ನಂತರ ಆಶಾ ತವರೂರಿಗೆ ಹೊರಟಿದ್ದಳು. ಅಲ್ಲಿ ಒಂದು ವಾರ ಕಳೆಯುವಷ್ಟರಲ್ಲಿ ಗಂಡನಿಗೆ ಸರಿಯಾಗಿ ಅಡುಗೆ ಬರೋದಿಲ್ಲ ಅಂತ ನೆನಪಾಗಿ ಒಂದು ರೊಮ್ಯಾಂಟಿಕ್‌ ಮೆಸೇಜ್‌ ಕಳುಹಿಸಿದಳು :

ನನ್ನ ಪ್ರೇಮನ್ನು ನಿನ್ನ ಎದೆಗೂಡಲ್ಲಿ ಹುಡುಕಿಕೊ,

ಚಪಾತಿಗೆ ಹಿಟ್ಟು ಕಲಸುವಾಗ ನೀರು ನೋಡಿಕೊ

ಪ್ರೇಮ ದೊರಕಿದಾಗ ಅದನ್ನು ಕಳೆಯಬೇಡ

ಈರುಳ್ಳಿ ಹೆಚ್ಚುವಾಗ ಕಣ್ಣೀರು ಹರಿಸಬೇಡ

ನನ್ನ ಮೇಲೆ ಕೋಪ ಬಂದರೆ ಅದೇನೋ ಸರಿ

ಪಲ್ಯಕ್ಕೆ ಆಲೂ ಬೆಂದಿದೆಯೇ ಸರಿಯಾಗಿ ನೋಡ್ರಿ.

ಇಬ್ಬರೂ ಬೆರೆತಾಗ ಹಂಚಿಕೊಳ್ಳೋಣ ಖುಷಿ

ಹಸಿಮೆಣಸು ಹೆಚ್ಚುವಾಗ ಕಣ್ಣಿಗೆ ತಗುಲದಿರಲಿ ಉರಿ.

ಜನ ನಮ್ಮ ಪ್ರೀತಿ ಕಂಡು ಅಸೂಯೆಪಡಲಿ

ಗಂಜಿ ಬಸಿದಾಗ ಅನ್ನದ ಹದ ಸರಿಯಿರಲಿ

ಹೇಗಿತ್ತು ನನ್ನ ಪ್ರೇಮಕವಿತೆ ಓದಿ ಹೇಳಿ

ಉಪ್ಪು ಕಡಿಮೆ ಇದ್ರೆ ಊಟದ ಜೊತೆಗೆ ಇಟ್ಕೊಳ್ಳಿ!

 

ಪತಿ : `ಸ’ಯಿಂದ ಎಷ್ಟೊಂದು ಪದಗಳು ಶುರುವಾಗುತ್ತವೆ ನೋಡು…. ಸೂರ್ಯೋದಯ, ಸಕಾಲದಲ್ಲಿ ಪರಿಣಯ, ಸಪರಿವಾರ ಇತ್ಯಾದಿ…

ಪತ್ನಿ : ಹಾಗೇ `ಸರ್ವನಾಶ’ ಅಂತಸೂ ಇದೆ, ನೋಡ್ಕೊಳ್ಳಿ!

 

ಪತ್ನಿ : ಮದುವೆ ಆದಮೇಲೂ ನನ್ನನ್ನು ಹಿಂದಿಗಿಂತ ಹೆಚ್ಚು ಪ್ರೀತಿಸುವುದಾಗಿ ನೀವು ಮಾತು ಕೊಟ್ಟಿದ್ರಿ.

ಪತಿ : ಮುಂದೆ ನಿನ್ನನ್ನೇ ನಾನು ಮದುವೆ ಆಗ್ತೀನಿ ಅಂತ ಆಗ ನನಗೇನು ಗೊತ್ತಿತ್ತು?

 

ಪ್ರೇಯಸಿ : ನೀನು ಮದುವೆ ಆಗಲೇಬೇಕೂಂದ್ರೆ ನನ್ನ ತಾಯಿಯನ್ನು ಬಂದು ನೋಡು…..

ಪ್ರೇಮಿ : ಛೇ….ಛೇ! ನೀನಲ್ಲದೆ ಬೇರೆ ಯಾರಿಗೂ ಆ ಸ್ಥಾನ ಕೊಡಲಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ