ಸಂಗೀತಾಳ ಮಗಳು ಶ್ವೇತಾ ತನ್ನ ಗೆಳತಿ ಕಾವ್ಯಾಳನ್ನು ಭೇಟಿಯಾಗಿ ಮಾತುಕಥೆ ಮುಗಿಸಿ ಬೇಗ ಬೇಗ ಮನೆಯ ದಾರಿ ಹಿಡಿದಳು, ಮನೆಯೊಳಗೆ ಬಂದ ತಕ್ಷಣ ಯಾಕಾದರೂ ಅಷ್ಟು ಬೇಗ ಮನೆಗೆ ಬಂದೆನೋ ಎಂದು ಪೇಚಾಡಿಕೊಂಡಳು. ಕಾರಣವಿಷ್ಟೆ, ಅವಳ ತಾಯಿ ಸಂಗೀತಾ ಮತ್ತು ರಾಜೇಶ್ ಜೊತೆಯಾಗಿ ಕುಳಿತು ಸಂಜೆಯ ಕಾಫಿ ಹೀರುತ್ತಿದ್ದರು.
ಶ್ವೇತಾ ರಾಜೇಶ್ ಕಡೆ ತಿರುಗಿ ಪರಿಚಯದ ಮುಗುಳ್ನಗು ಬೀರುವುದಿರಲಿ, ನಮಸ್ತೆ ಸಹ ಹೇಳಲಿಲ್ಲ. ದುರ್ದಾನ ಪಡೆದವಳಂತೆ ಮುಖ ಗಂಟಿಕ್ಕಿಕೊಂಡು ಸರಸರ ತನ್ನ ಕೋಣೆಗೆ ಹೊರಟುಹೋದಳು. ಅವಳ ಅಂಥ ವರ್ತನೆಯಿಂದ ತಾಯಿ ಸಂಗೀತಾ ಸಂಕೋಚಪಟ್ಟುಕೊಳ್ಳುತ್ತಾ, ಮನದಲ್ಲೇ ಮಗಳ ಮೇಲೆ ಕೆಂಡ ಕಾರಿದಳು.
“ನಾನು ಹೊರಟ ನಂತರ ಶ್ವೇತಾ ನಿನ್ನೊಂದಿಗೆ ಜಗಳ ಆಡುವುದಿಲ್ಲ ತಾನೇ…..?” ರಾಜೇಶ್ ಕೇಳಿದರು.
“ಅವಳ ಕೋಪ ಬೇಗ ಕರಗುವುದಿಲ್ಲ ಬಿಡಿ. ಇವತ್ತು ರಾತ್ರಿ ದೊಡ್ಡ ಗಲಾಟೆ ಮಾಡದೆ ಊಟ ಮಾಡುವವಳಲ್ಲ,” ಸಂಗೀತಾ ದುಗುಡದಿಂದ ಹೇಳಿದಳು.
“ನಾನು ನಿನ್ನನ್ನು ಭೇಟಿಯಾಗಲು ಇಲ್ಲಿಗೆ ಬರುವುದನ್ನು ಆದಷ್ಟೂ ನಿಲ್ಲಿಸುವುದೇ ಒಳ್ಳೆಯದು.”
“ನಾನು ನೆಮ್ಮದಿಯಾಗಿರಲು ನಿಮ್ಮ ಸ್ನೇಹದ ಆಸರೆ ನನಗೆ ಬೇಕೇಬೇಕು ಎಂದು ಈ ಹುಡುಗಿಗೆ ಹೇಗೆ ಬಿಡಿಸಿ ಹೇಳಲಿ….?”
“ನೀನು ಅವಳನ್ನೇನೂ ಬೈದು, ಗದರಿ ಮಾಡಲು ಹೋಗಬೇಡ. ಕೆಲಸ ಇನ್ನಷ್ಟು ಕೆಡುತ್ತದೆ.”
“ರಾಜೇಶ್, ಅವಳೆಂದೂ ನಿಮ್ಮನ್ನು ತನ್ನ ತಂದೆಯ ಸ್ಥಾನದಲ್ಲಿರಿಸಿ ನೋಡಲಾರಳೇನೋ ಅನ್ಸುತ್ತೆ.”
“ಅವಳು ದೊಡ್ಡವಳಾಗ್ತಿದ್ದಾಳೆ. ಒಂದಲ್ಲ ಒಂದು ದಿನ ಅವಳು ನಿನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು, ತನ್ನ ಮನಸ್ಸು ಬದಲಾಯಿಸಿಕೊಳ್ಳಬಹುದು.”
“ಅಯ್ಯೋ…. ಬಿಡಿ…. ನಾನು ಇಡೀ ಜನ್ಮ ಹೀಗೇ ಒಂಟಿಯಾಗಿ ಕೊರಗುತ್ತಿದ್ದರೂ ಅವಳಿಗೇನೂ ಅನ್ನಿಸದು. ಆದರೆ ನಿಮ್ಮೊಂದಿಗೆ ಸಂಸಾರ ಹೂಡುತ್ತೇನೆ ಅಂದಾಕ್ಷಣ ಅವಳಿಗೆ ತನ್ನ ತಂದೆಯ ನೆನಪಾಗಿಬಿಡುತ್ತದೆ. ನನ್ನ ಮನಸ್ಸಿಗೂ ತುಸು ನೆಮ್ಮದಿ ಬೇಕು ಎಂಬುದರ ಕಡೆ ಒಂದಿಷ್ಟೂ ವಿಚಾರ ಮಾಡದೆ, ಅವಳು ತನ್ನ ಸ್ವಾರ್ಥದ ಬಗ್ಗೆ ಮಾತ್ರ ಚಿಂತಿಸುತ್ತಾಳೆ…… ಅವಳೇಕೆ ಹೀಗೆ ಸ್ವಾರ್ಥಿಯಾದಳೋ?” ಸಂಗೀತಾ ತುಸು ಕೋಪದಲ್ಲೇ ಗುಡುಗಿದಳು.
“ನೀನು ಅನಗತ್ಯವಾಗಿ ಟೆನ್ಶನ್ ತೆಗೆದುಕೊಳ್ಳುತ್ತಿರುವೆ. ಮುಂದೆ ಒಂದು ದಿನ ಎಲ್ಲ ಸರಿಯಾಗುತ್ತದೆ ಬಿಡು,” ಎಂದು ಸಂಗೀತಾಳಿಗೆ ಸಾಂತ್ವನ ಹೇಳಿ ಅವರು ಹೊರಟು ನಿಂತರು.
ಅಂದು ರಾತ್ರಿ ಸಂಗೀತಾ ನೆನೆಸಿದಂತೆಯೇ ಶ್ವೇತಾ ರಂಪ ರಾದ್ಧಾಂತಕ್ಕಿಳಿದಳು. ಅವಳು ಊಟ ಮಾಡದೇ ಸಂಪು ಹೂಡಿದಳು. ಸಂಗೀತಾ ಅವಳನ್ನು ಸಮಾಧಾನಪಡಿಸಿದಷ್ಟೂ ಶ್ವೇತಾಳ ಕೋಪ ಕಣ್ಣೀರಾಗಿ ಹರಿಯಿತು, “ಇಡೀ ಸಮಾಜದ ಮುಂದೆ ನನಗೆ ಅವಮಾನ ಆಗಬಾರದು ಎಂದು ನಿನಗೆ ಅನಿಸಿದರೆ ಮೊದಲು ಆ ರಾಜೇಶ್ ಅಂಕಲ್ ಇಲ್ಲಿಗೆ ಬರುವುದನ್ನು ನಿಲ್ಲಿಸು,” ಎಂದು ಅದೇ ರಾಗ ಹಾಡತೊಡಗಿದಳು.
“ಅಂದ್ರೇನಮ್ಮ ನೀನು ಹೇಳುವುದು…. ಇಷ್ಟು ವರ್ಷಗಳ ಕೊರಗಿನ ನಂತರವಾದರೂ ನಾನೊಂದಿಷ್ಟು ನೆಮ್ಮದಿ ಕಾಣುವುದು ಬೇಡ ಅಂತೀಯಾ?” ಅಷ್ಟು ಕೇಳುವಷ್ಟರಲ್ಲಿ ಸಂಗೀತಾಳ ಕಂಠ ತುಂಬಿಬಂದಿತ್ತು.
“ಅದೆಲ್ಲ ನನಗೆ ಗೊತ್ತಿಲ್ಲ… ನೀನು ನನ್ನ ಅಮ್ಮ, ನಾನು ನಿನ್ನ ಮಗಳು…. ನೀನು ನನಗೆ ಮಾತ್ರ ಸೇರಿದಳು! ವಯಸ್ಸಿಗೆ ಬಂದ ಮಗಳ ಬಗ್ಗೆ ನಿನಗೆ ಹೆಚ್ಚು ಕಾಳಜಿ ಇರಬೇಕೇ ಅಥವಾ ಈ ವಯಸ್ಸಿನಲ್ಲಿ ಯಾರೋ ಒಬ್ಬ ಫ್ರೆಂಡ್ ಸಿಕ್ಕಿದನೆಂದು ನೀನು ಪ್ರಾಪ್ತ ವಯಸ್ಕ ಮಗಳನ್ನು ಧಿಕ್ಕರಿಸಿ ಆತನೊಂದಿಗೆ ಹೀಗೆ ವ್ಯವಹರಿಸುವುದು ಸರಿಯೇ?”
“ರಾಜೇಶ್ ಯಾರೋ ಅರಿಯದ ಅಪರಿಚಿತ ವ್ಯಕ್ತಿ ಅಲ್ಲ ಶ್ವೇತಾ…. ಅವರು ಈ ಕುಟುಂಬದ ಹಿತೈಷಿ!”
“ಹಿತೈಷಿ…. ಮೈ ಫುಟ್! ಹಾಗಿದ್ದರೆ ಅವರ ಜೊತೆಯೇ ನೀನೂ ಹೊರಟುಹೋಗಬೇಕಿತ್ತು…. ನಾನು ಅನಾಥೆ ತರಹ ಯಾವುದಾದರೂ ಹಾಸ್ಟೆಲ್ ಸೇರಿಕೊಳ್ತೀನಿ, ಒಂದು ಮಾತಂತೂ ನಿಜ ಕಣಮ್ಮ…. ಒಮ್ಮೆ ನಾನು ಹಾಸ್ಟೆಲ್ ಸೇರಿದ ಮೇಲೆ ಎಂದೆಂದೂ ನಿನ್ನ ಪ್ರೈವೆಸಿ ಮಧ್ಯೆ ಬಂದು ನನ್ನ ಈ ಮುಖ ಖಂಡಿತಾ ತೋರಿಸುವುದಿಲ್ಲ…. ನೀನೂ ಅಷ್ಟೇ ಕಣಮ್ಮ, ನಾನು ಸತ್ತೆ ಅಂತೇನಾದರೂ ಗೊತ್ತಾದರೆ ಹಾಸ್ಟೆಲ್‌ಗೆ ಬಂದು ನನ್ನನ್ನು ನೋಡುವುದೂ ಬೇಡ!” ಎಂದು ಮುಖಕ್ಕೆ ಹೊಡೆದಂತೆ ಹೇಳಿದಳೇ ಶ್ವೇತಾ ಡೈನಿಂಗ್ ಹಾಲ್‌ನಿಂದ ತನ್ನ ಕೋಣೆಗೆ ಹೊರಟುಹೋದಳು.
ಆ ರಾತ್ರಿ ಸಂಗೀತಾಳಿಗೆ ಒಂದಿಷ್ಟೂ ನಿದ್ದೆ ಬರಲಿಲ್ಲ. ಮಾಡಿಟ್ಟ ಬಿಸಿ ಅಡುಗೆ ಆರಿ ಅಕ್ಷತೆಯಾಗಿತ್ತು. ತಾಯಿ ಮಗಳಿಬ್ಬರೂ ತಂತಮ್ಮ ದುಃಖದಲ್ಲಿ ಮುಳುಗಿ ಹಾಗೇ ಉಪವಾಸ ಮಲಗಿದರು. ಸಂಗೀತಾಳಿಗೆ ಪುಸ್ತಕದ ಪುಟಗಳನ್ನು ಹಿಂದೆ ಸರಿಸಿದಂತೆ ಗತಕಾಲದ ದಿನಗಳು ನೆನಪಿಗೆ ಬರತೊಡಗಿದವು…….ಸಂಗೀತಾಳ ಇಷ್ಟಕ್ಕೆ ವಿರುದ್ಧವಾಗಿ ಆಸ್ತಿವಂತ ಅಳಿಯ ಮನೋಜ್ ಸಿಕ್ಕಿದನೆಂದು ಅವಳ ತಂದೆ ಮದುವೆ ಮಾಡಿ ಮುಗಿಸಿ ಕೈ ತೊಳೆದುಕೊಂಡಿದ್ದರು. ಆದರೆ ಸಂಗೀತಾ ಮನೋಜ್‌ರ ದಾಂಪತ್ಯದಲ್ಲಿ ಅವರ ಮನಗಳು ಎಂದೂ ಬೆರೆಯಲೇ ಇಲ್ಲ. ಸ್ನಾತಕೋತ್ತರ ಪದವೀಧರೆಯಾದ ಸಂಗೀತಾ, ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಒಳ್ಳೆಯ ಸಂಬಳ ಗಳಿಸುತ್ತಿದ್ದಳು. ಆದರೆ ಮನೋಜ್ ಪಾಲಿಗೆ ಅವಳು ಕೇವಲ ಮನೆಯ ಪರಿಚಾರಿಕೆ ಮಾತ್ರ.
ಗಳಿಸುವ ಸೊಸೆ ಮೇಲೆ ಮೊದಲಿನಿಂದ ವಾತ್ಸಲ್ಯವಿಲ್ಲದ ಅತ್ತೆಮನೆಯವರು ಸದಾ ಒಂದಿಲ್ಲೊಂದು ಲೋಪದೋಷ ಹುಡುಕಿ ಅವಳ ಬಾಳು ನರಕ ಮಾಡಿಟ್ಟಿದ್ದರು. ದೊಡ್ಡ ಬಿಸ್‌ನೆಸ್ ಮ್ಯಾಗ್ನೆಟ್ ಎನಿಸಿದ್ದ ಮನೋಜ್ ಮದಿರೆಯ ದಾಸನಾದ್ದರಿಂದ ಹೆಂಡತಿಯನ್ನು ಗೌರವಿಸಬೇಕೆಂಬ ಅಭಿಪ್ರಾಯ ಮೊದಲಿನಿಂದಲೂ ಇರಲಿಲ್ಲ. ದೈಹಿಕ ಬಯಕೆ ಪೂರೈಸಲು, ಬೇಕಾದ್ದನ್ನು ಮಾಡಿ ಹಾಕಲು ಮಾತ್ರವೇ ಹೆಂಡತಿ ಎಂಬ ಪ್ರಾಣಿಯ ಅಗತ್ಯವಿದೆ ಎಂದು ಭಾವಿಸುವ ಪೈಶಾಚಿಕ ವರ್ತನೆ ಆತನದಾಗಿತ್ತು. ಕುಡಿದು ಬಂದಾಗ ಕೋಪದಲ್ಲಿ ಎಲ್ಲರ ಮುಂದೆ ಆಕೆಯ ಮೇಲೆ ಕೈ ಮಾಡಿದ್ದೂ ಉಂಟು. ಇದೆಲ್ಲದರಿಂದ ರೋಸಿ ಹೋಗಿ ಮದುವೆಯಾದ ವರ್ಷದಲ್ಲೇ ತವರಿಗೆ ಬಂದು ತಾನಿನ್ನು ಗಂಡನ ಮನೆಗೆ ಹೋಗುವುದಿಲ್ಲ ಎಂದು ಸಂಗೀತಾ ತಾಯಿ ತಂದೆ ಎದುರು ಗೋಳಾಡಿದಳು.
ಅವರೂ ಅಸಹಾಯಕರಾಗಿದ್ದರು. ಮದುವೆಯಾಗಬೇಕಿದ್ದ ಇನ್ನೂ ಇಬ್ಬರು ಹೆಣ್ಣುಮಕ್ಕಳು, ಗಂಡುಮಕ್ಕಳ ದೊಡ್ಡ ಕುಟುಂಬವದು. ಹೇಗೋ ಮಾಡಿ ಅಳಿಯನನ್ನು ಕೂರಿಸಿಕೊಂಡು ಇಬ್ಬರಿಗೂ ರಾಜಿ ಮಾಡಿಸಿ 2 ತಿಂಗಳ ನಂತರ ಅವಳನ್ನು ಕಳುಹಿಸಿಕೊಟ್ಟರು. ಮತ್ತೆ 3 ತಿಂಗಳು ಕಳೆಯುವಷ್ಟರಲ್ಲಿ ಸ್ಥಿತಿ ಯಥಾಪ್ರಕಾರವಾಗಿತ್ತು. ಹೀಗೆ ವರ್ಷಕ್ಕೊಮ್ಮೆ ಅವಳು ತವರಿಗೆ ಬಂದು 2 ತಿಂಗಳು ಅಲ್ಲೇ ಇದ್ದು, ಮತ್ತೆ ಗಂಡನ ಮನೆಗೆ ಮರಳುವುದು ನಡೆಯುತ್ತಲೇ ಇತ್ತು. ಅಂತೂ ಮಗಳು ಶ್ವೇತಾಳಿಗೆ 9 ವರ್ಷ ತುಂಬುವಷ್ಟರಲ್ಲಿ, ಅವಳ ತಂಗಿ, ತಮ್ಮಂದಿರೆಲ್ಲ ಸೆಟಲ್ ಆಗಿದ್ದರು. ತಾನೇ ಖುದ್ದಾಗಿ ಸಹೋದ್ಯೋಗಿಗಳ ನೆರವಿನೊಂದಿಗೆ ವಕೀಲರ ಬಳಿ ಓಡಾಡಿ, ಕೋರ್ಟಿನ ಕಟಕಟೆ ಹತ್ತಿ ವಿಚ್ಛೇದನ ಪಡೆದಳು.
ಆಗಿನಿಂದ ಅವಳ ತವರಿನವರು, ತಮ್ಮಂದಿರು ಸಂಗೀತಾಳಿಗೆ ಒತ್ತಾಸೆಯಾಗಿ ನಿಂತರು. ಅವಳು ತವರಿನ ಹಂಗಿನಲ್ಲಿರುವ ಭಾವನೆ ಬರಬಾರದೆಂದು ಬೆಂಗಳೂರಿನಲ್ಲಿ ಒಂದು ಸಣ್ಣ ಫ್ಲ್ಯಾಟ್ ಕೊಡಿಸಿದರು. ಅಲ್ಲಿ ಸಂಗೀತಾ ಮಗಳೊಂದಿಗೆ ಹೊಸ ಜೀವನ ಶುರು ಮಾಡಿದಳು. ಮಗಳು ಶ್ವೇತಾಳ ಪಾಲನೆ ಪೋಷಣೆಯಲ್ಲಿ ಅಜ್ಜಿಯ ಧಾರಾಳ ನೆರವಿತ್ತು. ನಿರಾತಂಕವಾಗಿ ಮಗಳನ್ನು ತಾಯಿಯ ಬಳಿ ಒಪ್ಪಿಸಿ ಅವಳು ಕೆಲಸಕ್ಕೆ ಹೋಗುತ್ತಿದ್ದಳು. 2 ತಿಂಗಳಿಗೊಮ್ಮೆ ಪಾರ್ವತಮ್ಮ ಗಂಡ, ಮಕ್ಕಳನ್ನು ನೋಡಲು ಮೈಸೂರಿಗೆ ಹೋಗಿ 1 ತಿಂಗಳಿದ್ದು ಬರುತ್ತಿದ್ದರು. ಸಂಗೀತಾಳಿಗೆ ಒಳ್ಳೆಯ ನೌಕರಿ, ಇರಲು ಸ್ವಂತ ಫ್ಲ್ಯಾಟ್ ಇದ್ದುದರಿಂದ ಆರ್ಥಿಕವಾಗಿ ಅವಳು ಕಂಗೆಡಬೇಕಾದ ಪರಿಸ್ಥಿತಿ ಬರಲಿಲ್ಲ. ಹೀಗೆ ಜೀವನ ನಡೆಯುತ್ತಿತ್ತು.
ಕೋರ್ಟಿನ ತೀರ್ಪಿನ ಪ್ರಕಾರ, ಶ್ವೇತಾ ತಿಂಗಳಿಗೊಂದು ಸಲ ತಂದೆಯ ಬಳಿ ಹೋಗಿ 2 ದಿನ ಇದ್ದು ಬರಬಹುದಾಗಿತ್ತು. ಆ ರೀತಿ ಶ್ವೇತಾ ಅಲ್ಲಿಗೆ ಬಂದಾಗೆಲ್ಲ ಮನೋಜ್ ಮನೆಯವರು ಅವಳ ತಲೆಯಲ್ಲಿ ಸಂಗೀತಾ ವಿರುದ್ಧ ವಿಷ ತುಂಬಿಸಿ ಕಳುಹಿಸುತ್ತಿದ್ದರು. ಅವಳಿಗೆ ಬೇಕು ಬೇಡದ್ದನ್ನೆಲ್ಲ ಕೊಡಿಸಿ, ಹಸಿಮಣ್ಣಿನ ಮುದ್ದೆಯಂತಿದ್ದ ಅವಳ ಮನದಲ್ಲಿ ತಾಯಿ ವಿರುದ್ಧ ಬೇಡದ ವಿಚಾರ ತುಂಬಿಸಿದ್ದರು. ವಿಚ್ಛೇದನದ ನಂತರ ಮರುಮದುವೆ ಆಗ್ದಿದರೂ ಮತ್ತೆ ಮಕ್ಕಳಾಗದ ಕಾರಣ ಈ ಮಗಳ ಪ್ರೀತಿಯನ್ನು ಧಾರಾಳವಾಗಿ ಗೆದ್ದುಕೊಂಡು, “ನಿಮ್ಮಮ್ಮ ನನ್ನ ನಂಬಿಕೆಗೆ ದ್ರೋಹ ಬಗೆದಿದ್ದಾಳೆ. ಮದುವೆಯಾದ ಮೊದಲನೇ ದಿನದಿಂದಲೇ ಅವಳು ನನ್ನನ್ನು ಪ್ರೀತಿಸಲಿಲ್ಲ. ಅವಳಿಗೆ ನನಗಿಂತ ಹೆಚ್ಚು ಸ್ಮಾರ್ಟ್, ಯಂಗ್, ಎಜುಕೇಟೆಡ್ ಗಂಡ ಬೇಕಿದ್ದ. ತಾನು ಸಂಪಾದಿಸುತ್ತಿದ್ದೇನೆ ಎಂಬ ಗರ್ವ ಇದ್ದುದರಿಂದ ನನ್ನ ಆಸ್ತಿಗೂ ಕಡೆಕಾಸಿನ ಬೆಲೆ ಕೊಡಲಿಲ್ಲ. “ಕಾಲೇಜಿನಲ್ಲಿ ಮೊದಲೇ ಯಾರನ್ನೋ ತಗಲುಹಾಕ್ಕೊಂಡಿದ್ದಳು ಅನ್ಸುತ್ತೆ, ಅವರಪ್ಪನ ಮನೆಯವರು ಒಪ್ಪದೆ, ನನ್ನಂಥ ಬಕರಾ ತಲೆಗೆ ಕಟ್ಟಿ ಕೈ ತೊಳೆದುಕೊಂಡರು. ಆವತ್ತಿನಿಂದ ನಾನು ಕಷ್ಟಪಡ್ತಿದ್ದೀನಿ, 3-3 ದಿನಕ್ಕೂ ಜಗಳ ಆಡಿಕೊಂಡು ತವರಿಗೆ ಓಡಿಹೋಗೋಳು. ಆ ಬೇಸರ ಮರೆಯಲು ಈ ಹಾಳು ಕುಡಿತ ಕಲಿತೆ… ನಿನ್ನಂಥ ರಾಜಕುಮಾರಿಯಿಂದ ದೂರ ಇರಬೇಕಲ್ಲ ಅಂತ ನನಗೆಷ್ಟು ಸಂಕಟ ಗೊತ್ತಾ…..?” ಎಂದು ಧಾರಾಳಾಗಿ ಮಗಳ ಸಹಾನುಭೂತಿ ಗಿಟ್ಟಿಸುವಲ್ಲಿ ಆತ ಯಶಸ್ವಿಯಾದ.
ಆದರೆ ಆತನಿಗೆ ಮಗಳು ಎಂದರೆ ಅಷ್ಟೇ ಪಂಚಪ್ರಾಣ. ಅವಳು ಬಯಸಿದ್ದನ್ನು ಕ್ಷಣಮಾತ್ರದಲ್ಲಿ ತರಿಸಿ ಅವಳ ಕಾಲ ಬಳಿ ಹಾಕಿರುತ್ತಿದ್ದ. ಶಿಸ್ತು, ಸಂಯಮದ ಹೆಸರಿನಲ್ಲಿ ಅಮ್ಮನ ಸೀರಿಯಸ್ ಮುಖ ಕಂಡು ಸಿಡುಕುತ್ತಿದ್ದ ಶ್ವೇತಾಳಿಗೆ ತಂದೆ ದೇವದೂತನಂತೆ ಕಂಡುಬಂದರೆ ಆಶ್ಚರ್ಯವೇನು? ಹೀಗೆ ಅವಳ ಬಾಲ್ಯ ತಾಯಿತಂದೆಯರ ಮನೆಗಳ ಮಧ್ಯೆ ಹೊಯ್ದಾಟದಲ್ಲೇ ಕಳೆಯಿತು.
ತಾನೆಂದೂ ತಾಯಿಯನ್ನು ಬಿಟ್ಟು ತಂದೆ ಬಳಿಗೆ ಶಾಶ್ವತವಾಗಿ ಹಿಂದಿರುಗಲಾರೆ ಎಂಬ ಕಹಿಸತ್ಯ ಶ್ವೇತಾಳಿಗೆ ಹೈಸ್ಕೂಲ್‌ಗೆ ಬರುವ ಹೊತ್ತಿಗೆ ಚೆನ್ನಾಗಿ ಅರಿವಾಯಿತು. ಯಾವಾಗ ರಜೆಯ ದಿನಗಳು ಬರುತ್ತವೋ, ಯಾವಾಗ ಶಾಲೆಯ ಪುಸ್ತಕಗಳನ್ನು ಬಿಸಾಡಿ ಹಾಯಾಗಿ ತಂದೆಯೊಂದಿಗೆ ಕಾರಿನಲ್ಲಿ ಸುತ್ತುವೆನೋ ಎಂಬ ತವಕದಲ್ಲೇ ಅವಳು ಪಿ.ಯು.ಸಿ ಸೇರಿದಳು. ಆದರೆ ತಾನು ಜಾಲಿಯಾಗಿ ಹೆಚ್ಚು ದಿನ ತಂದೆ ಬಳಿ ಉಳಿಯದೆ ಇರಲು ತಾಯಿಯೇ ಮೂಲಕಾರಣ ಎಂದು ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಳು. ತನಗೆ ತಂದೆ ಪ್ರೀತಿ ನಿರಂತರವಾಗಿ ದಕ್ಕದಂತೆ ಮಾಡಿದ ಹಿತಶತ್ರು ಎಂದು ತಾಯಿಯನ್ನು ವಿನಾಕಾರಣ ಸಿಡುಕುತ್ತಿದ್ದಳು. ಈ ಮಧ್ಯೆ ಸಂಗೀತಾ ರಾಜೇಶ್ ಸ್ನೇಹ ಮಾಡತೊಡಗಿದಂತೆ ಅವಳ ದ್ವೇಷ ಭುಗಿಲೆದ್ದಿತು.ರಾಜೇಶ್ ಇವಳ ಸಹೋದ್ಯೋಗಿ ನಿಶಾಳ ಭಾವ ಆಗಿದ್ದರು. ನಿಶಾಳ ಅಕ್ಕಾ ಉಷಾ ಬ್ಲಡ್ ಕ್ಯಾನ್ಸರ್ ರೋಗಿ. 40 ವರ್ಷದಲ್ಲೇ ಆಕೆ ತೀರಿಕೊಂಡಳು. ಈತ ಪತ್ನಿಯ ಸೇವೆ ಮಾಡುವುದನ್ನು ಕಣ್ಣಾರೆ ಕಂಡಿದ್ದ ಸಂಗೀತಾ, ಸಹಜವಾಗಿ ಅವರತ್ತ ಆರಾಧನಾಭಾವ ಬೆಳೆಸಿಕೊಂಡಿದ್ದಳು. ನಿಶಾಳಿಂದ ಆದ ಪರಿಚಯ, ಸ್ನೇಹ, ಪ್ರೇಮವಾಗಲು ಹೆಚ್ಚು ದಿನ ಹಿಡಿಯಲಿಲ್ಲ.
ಉಷಾ ತೀರಿಕೊಂಡ 2 ವರ್ಷಗಳ ಬಳಿಕ ರಾಜೇಶ್ ಮೊದಲ ಬಾರಿ ಸಂಗೀತಾ ಬಳಿ ಮದುವೆಯ ಮಾತನಾಡಿದ್ದರು. ಇಬ್ಬರಿಗೂ ಅದರಲ್ಲಿ ಸಮಾನ ಅಭಿರುಚಿ ಇತ್ತು. ಆದರೆ ಶ್ವೇತಾ….? ಅವಳದೇ ದೊಡ್ಡ ಸಮಸ್ಯೆ ಆಗಿತ್ತು. ಅವಳನ್ನು ಹೇಗಾದರೂ ಒಪ್ಪಿಸೋಣ ಎಂದು ಸಂಗೀತಾ ಮಾಡಿದ ಪ್ರಯತ್ನವೆಲ್ಲ ವ್ಯರ್ಥ ಆಗಿತ್ತು. ರಾಜೇಶ್ ನೆರಳು ಕಂಡರೂ ಶ್ವೇತಾ ಸಹಿಸದಾದಳು.
“ಸಂಗೀತಾ, ಪ್ರೇಮ ನಿವೇದಿಸಿಕೊಳ್ಳಲು ಹಾಗೂ ಅದನ್ನು ಪಡೆಯಲು ಮನುಷ್ಯ ಸದಾ ಯತ್ನಿಸುತ್ತಿರುತ್ತಾನೆ, ಇದಕ್ಕೆ ವಯಸ್ಸಿನ ಅಡ್ಡಿ ಎಂಬುದಿಲ್ಲ. ನನ್ನ ಮಗ ಎಂ.ಬಿ.ಎ. ಮುಗಿಸಲು ಅಮೆರಿಕಾಗೆ ಹೋದವನು, ಅಲ್ಲೇ ಕೆಲಸ ಹುಡುಕಿಕೊಂಡು ಸೆಟಲ್ ಆಗಿದ್ದಾನೆ. ತಮ್ಮ ತಂಗಿಯರೆಲ್ಲ ಅವರವರ ಸಂಸಾರದಲ್ಲಿ ಬಿಝಿ. ಹೀಗಾಗಿ ನನ್ನ ಏಕಾಂಗಿತನ ನನ್ನನ್ನು ಬಹಳ ಕಾಡುತ್ತಿತ್ತು.
“ನಿನ್ನ ಸ್ನೇಹವಾದ ಮೇಲೆ ನನಗೆ ಜೀವನದಲ್ಲಿ ಬದುಕುವ ಆಸೆ ಚಿಗುರಿದೆ. ನನ್ನ ಉಳಿದ ಜೀವನವನ್ನು ನಿನ್ನೊಂದಿಗೆ ಸಂತೋಷವಾಗಿ ಕಳೆಯಬಹುದೆಂಬ ನಂಬಿಕೆ ಇದೆ. ಸ್ವಂತ ಬಿಸ್‌ನೆಸ್ ಇರುವುದರಿಂದ ಯಾವುದಕ್ಕೂ ಚಿಂತೆ ಇಲ್ಲ. ನಿನ್ನ ಮಗಳು ನಮ್ಮ ಮಗಳಾಗಿ ಬೆಳೆಯುತ್ತಾಳೆ. ಆದಷ್ಟು ಬೇಗ ಮಗಳನ್ನು ಒಪ್ಪಿಸಿ ನಾವೆಲ್ಲ ಒಂದಾಗಿ ವಾಸವಾಗಿರೋಣ,” ಎಂದು ರಾಜೇಶ್‌ದೃಢವಾಗಿ ತಮ್ಮ ನಿರ್ಧಾರ ತಿಳಿಸಿದಾಗ 40ರ ಹರೆಯದ ಸಂಗೀತಾಳ ಹೃದಯ ತುಂಬಿಬಂದಿತ್ತು. ಹೇಗಾದರೂ ಮಗಳನ್ನು ಒಪ್ಪಿಸುತ್ತೀನಿ ಎಂದು ಆತ್ಮವಿಶ್ವಾಸದಿಂದ ರಾಜೇಶ್‌ಗೆ ಹೇಳಿದಳಾದರೂ ಅದು ಖಂಡಿತಾ ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
“ನನ್ನ ಮಗಳದು ಮಹಾ ಹಠಮಾರಿ ಸ್ವಭಾವ. ಅವಳು ನಿಮಗೆ ತಂದೆ ಸ್ಥಾನ ನೀಡುವಳು ಅಂತೀರಾ?” ತನ್ನ ಮನದಲ್ಲಿನ ಸಂದೇಹವನ್ನು ವ್ಯಕ್ತಪಡಿಸಿದಳು ಸಂಗೀತಾ.
“ನಾನು ನಿಮ್ಮ ಮನೆಗೆ ಬಂದಾಗೆಲ್ಲ ಅವಳು ನನ್ನೊಂದಿಗೆ ಹಾರ್ದಿಕವಾಗಿಯೇ ವರ್ತಿಸಿದ್ದಾಳೆ. ಈ ವಿಷಯವನ್ನು ನಿಧಾನವಾಗಿ ಅವಳ ಬಳಿ ಚರ್ಚಿಸಿ, ಅವಳ ಅನುಮತಿಗೆ ನಾವೆಷ್ಟು ಮಹತ್ವ ನೀಡುತ್ತೇವೆ ಎಂದು ಅವಳಿಗೆ ಮನವರಿಕೆ ಮಾಡಿಕೊಡಬೇಕು. ಆಗ ಅವಳು ಒಪ್ಪಬಹುದು,” ರಾಜೇಶ್ ಈ ಮಾತು ಹೇಳಿದಾಗ ಸಂಗೀತಾಳಿಗೂ ಭರವಸೆ ಮೂಡಿತು. ತಾವು ಅಂದಂತೆಯೇ ರಾಜೇಶ್‌ಮನಃಪೂರ್ವಕವಾಗಿ ಶ್ವೇತಾಳ ಮನ ಗೆಲ್ಲಲು, ಆಗಾಗ ಇವರ ಮನೆಗೆ ಬಂದು ಸಹಜವಾಗಿ ಬೆರೆಯುತ್ತಿದ್ದರು ಜೊತೆಗೆ ಮೂವರೂ ಆಗಾಗ ಹೊರಗಿನ ಸಣ್ಣಪುಟ್ಟ ಪಿಕ್‌ನಿಕ್, ಔಟಿಂಗ್, ಶಾಪಿಂಗ್, ಸಿನಿಮಾ ಎಂದು ಹೊರಡುತ್ತಿದ್ದರು.
ಈ ವಿಷಯ ಮನೋಜನಿಗೆ ಮುಟ್ಟಿದ ತಕ್ಷಣ ಆತ ಮಗಳ ಮನಸ್ಸನ್ನು ತನಗೆ ಬೇಕಾದಂತೆ ಸುಲಭವಾಗಿ ತಿರುಗಿಸಿಬಿಟ್ಟ. ತಂದೆಯಿಂದ ಬೇಕಾದ್ದನ್ನು ಪಡೆದುಕೊಂಡ ಶ್ವೇತಾ, ತಾಯಿ ಮಹಾ ಅಪರಾಧ ಮಾಡುತ್ತಿದ್ದಾಳೆ ಎಂಬ ಅಭಿಪ್ರಾಯಕ್ಕೆ ಬರಲು ತಡವಾಗಲಿಲ್ಲ.
ಆ ಮನೆಯಿಂದ ಬಂದವಳೇ ಶ್ವೇತಾ ಒಮ್ಮೆಲೇ ಅಮ್ಮನ ಮೇಲೆ ಸಿಡುಕಿದಳು, “ಅಮ್ಮಾ, ನೀನು ಆ ರಾಜೇಶ್ ಅಂಕಲ್‌ನ ಮೀಟ್ ಮಾಡುವುದನ್ನು ಕಡಿಮೆ ಮಾಡು. ಆತ ನಿನ್ನನ್ನು ಒಳ್ಳೆ ದೃಷ್ಟಿಯಿಂದ ನೋಡುತ್ತಿಲ್ಲ ಅನ್ಸುತ್ತೆ….”
ಸಂಗೀತಾ ಅವಳಿಗೆ ತಿಳಿಹೇಳಲು ಯತ್ನಿಸುತ್ತಾ, “ರಾಜೇಶ್ ಬಹಳ ಒಳ್ಳೆ ವ್ಯಕ್ತಿ ಕಣಮ್ಮ. ನೀನು ನಿಮ್ಮಪ್ಪನ ಮಾತು ಕೇಳಿಕೊಂಡು ಅವರ ಬಗ್ಗೆ ಹಾಗೆಲ್ಲ ಕಟುವಾಗಿ ಮಾತನಾಡಬಾರದು,” ಎಂದಳು.
“ಆ ಮನುಷ್ಯ ಅದು ಹೇಗೆ ಒಳ್ಳೆಯವನಾಗಲು ಸಾಧ್ಯಾನಮ್ಮ? ನನ್ನನ್ನು ನನ್ನ ಅಮ್ಮನಿಂದ ಬೇರೆ ಮಾಡಿ ತನ್ನ ಹೆಂಡತಿ ಮಾಡಿಕೊಳ್ಳಬೇಕೆಂದಿರುವ ವ್ಯಕ್ತಿ ಒಳ್ಳೆಯವನಾಗಲು ಹೇಗೆ ಸಾಧ್ಯ? ನಿನಗೆ ಮಗಳ ಮಾನ ಅಪಮಾನ, ಪ್ರೆಸ್ಟೀಜ್, ಅವಳ ಭವಿಷ್ಯ ಮುಖ್ಯ ಅನಿಸಿದರೆ ಆ ಮನುಷ್ಯನನ್ನು ಈ ಮನೆಗೆ ಸೇರಿಸಲೇಬೇಡ. ನಮ್ಮಿಬ್ಬರಲ್ಲಿ ಯಾರನ್ನಾದರೂ ಒಬ್ಬರನ್ನು ಆರಿಸಿಕೋ…. ಅಷ್ಟೇ!”
ಆ ಸಂಜೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶ್ವೇತಾ ಒಂದೇ ಸಮ ಹಠದಿಂದ ಅಳತೊಡಗಿದಳು. ಸಂಗೀತಾಳಿಗೂ ಮಗಳ ಮೇಲೆ ಅಸಾಧ್ಯ ಸಿಟ್ಟು ಬಂದು, ಇಬ್ಬರೂ ಊಟ ಮಾಡದೆ, ಇಡೀ ರಾತ್ರಿ ಹಾಸಿಗೆಯಲ್ಲಿ ಹೊರಳುತ್ತಾ ಜಾಗರಣೆ ಮಾಡಿದರು.
ಹೀಗೆ ತಾಯಿ ಮಗಳ ನಡುವೆ ದಿನೇದಿನೇ ಉದ್ವಿಗ್ನತೆ, ಅಂತರ ಹೆಚ್ಚತೊಡಗಿತು. ಅವಳು ಮನೆಯಲ್ಲಿದ್ದಾಗ ರಾಜೇಶ್ ಸಂಗೀತಾಳನ್ನು ಭೇಟಿಯಾಗಲು ಬರುವುದನ್ನೇ ಬಿಟ್ಟರು. ಆ ದಿನ ಶ್ವೇತಾ ತನ್ನ ಗೆಳತಿ ಕಾವ್ಯಾಳ ಮನೆಗೆ ಹೊರಟಿದ್ದಳು. ಅವಳು ಸಹಜವಾಗಿಯೇ ತಡವಾಗಿ ಬರುತ್ತಾಳೆಂದು ಸಂಗೀತಾ ರಾಜೇಶ್‌ರನ್ನು ಕಾಫಿಗಾಗಿ ಮನೆಗೆ ಕರೆದಳು. ನಡುವೆಯೇ ಶ್ವೇತಾ ಮನೆಗೆ ಬಂದಿದ್ದರಿಂದ ಇಷ್ಟೆಲ್ಲ ರಾದ್ಧಾಂತ ನಡೆದುಹೋಯಿತು.
ಅದಾದ 2 ವಾರಗಳ ಬಳಿಕ ದ. ಕನ್ನಡ ಜಿಲ್ಲೆಯ ಪ್ರವಾಸ ಹೊರಡುವುದೆಂದು ನಿಶ್ಚಯವಾಯಿತು. ಬಹಳ ದಿನಗಳಿಂದ ಹೊರನಾಡು, ಶೃಂಗೇರಿ, ಉಡುಪಿ, ಕಟೀಲು ಮುಂತಾದೆಡೆ ಹೋಗಿಬರಬೇಕೆಂದು ಅಂದುಕೊಳ್ಳುತ್ತಿದ್ದ ಸಂಗೀತಾಳಿಗೆ, ಲೇಡೀಸ್‌ಕ್ಲಬ್ಬಿನಿಂದ 1 ವಾರದ ಮಟ್ಟಿಗೆ ಅಲ್ಲಿಗೆ ಹೋಗಿಬರುವ ಅವಕಾಶ ಸಿಕ್ಕಿತು. ಶ್ವೇತಾ ಸಹ ಮಂಗಳೂರು, ಮಲ್ಪೆ, ಕಾರವಾರ ಇತ್ಯಾದಿ ಎಲ್ಲಾ ಸುತ್ತಿ ಬರೋಣವೆಂದು ಉತ್ಸಾಹದಿಂದ ತಾಯಿಯ ಜೊತೆ ಹೊರಟಳು. ಹೀಗಾದರೂ ತಮ್ಮಿಬ್ಬರ ಮುರಿದ ಮನಸ್ಸುಗಳು ಒಂದಾಗಲಿ ಎಂದು ಸಂಗೀತಾ ಬಯಸಿದಳು.
ಪ್ರವಾಸವೇನೋ ಚೆನ್ನಾಗಿತ್ತು. ಕೊನೆಯ ದಿನ ಅಲ್ಲಿಂದ ಹೊರಡುವಾಗ ಮಂಗಳೂರಿನಲ್ಲಿ ಬಸ್ಸು ಅಪಘಾತಕ್ಕೆ ಈಡಾಯಿತು. ಇತರ ಯಾತ್ರಿಕರ ಜೊತೆ ಸಂಗೀತಾಳಿಗೆ ಕಾಲಿಗೆ ಫ್ರಾಕ್ಚರ್ ಆಗಿ, ತಲೆಗೂ ಸರಿಯಾಗಿ ಏಟು ಬಿದ್ದಿತ್ತು. ಪುಣ್ಯವಶಾತ್ ಯಾರಿಗೂ ಪ್ರಾಣಾಪಾಯ ಆಗಲಿಲ್ಲ. ಶ್ವೇತಾಳಿಗೆ ಸಣ್ಣಪುಟ್ಟ ತರಚು ಗಾಯಗಳಾಗಿವದ್ದಷ್ಟೆ. ಕೊನೆಗೆ ಸಂಗೀತಾ ಮತ್ತಿತರರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಸಂಗೀತಾಳನ್ನು ಕೂಲಂಕಷವಾಗಿ ಪರಿಶೀಲಿಸಿದ ವೈದ್ಯರು, “ಇವರಿಗೆ ತಲೆ ಸುತ್ತು ಬರುತ್ತಿದೆ, ವಾಂತಿ ಆಯ್ತು ಅನ್ಸುತ್ತೆ. ಇದು ಹೆಡ್ ಇಂಜುರಿಯ ಪ್ರಾರಂಭಿಕ ಲಕ್ಷಣ. ನಾವು ನಿಮ್ಮ ತಾಯಿಯವರನ್ನು ಕನಿಷ್ಠ 24 ಗಂಟೆ ಅಬ್ಸರ್ ವೇಷನ್‌ನಲ್ಲಿ ಇಡಬೇಕಾಗುತ್ತೆ. ಈಗಲೇ ಇವರು ಬೆಂಗಳೂರಿಗೆ ಪ್ರಯಾಣ ಹೊರಡುವುದು ಖಂಡಿತಾ ಅಪಾಯಕಾರಿ,” ಎಂದು ಶ್ವೇತಾಳಿಗೆ ಹೇಳಿದಾಗ ಅವಳು ಬಹಳ ಹೆದರಿಬಿಟ್ಟಳು.
ಕೊನೆಗೆ ಶ್ವೇತಾಳ ಆತಂಕ ಕಂಡು ಸಂಗೀತಾ ತಾನೇ ಅವಳಿಗೆ ಧೈರ್ಯ ತುಂಬಿದಳು. ಡಾಕ್ಟರ್ ನೀಡಿದ ಇಂಜೆಕ್ಷನ್ ಪ್ರಭಾವದಿಂದ ಸಂಗೀತಾ ನಿಧಾನವಾಗಿ ನಿದ್ದೆಗೆ ಜಾರಿದಳು. ಎಷ್ಟೋ ಹೊತ್ತಿನ ನಂತರ ಆಕೆ ಕಣ್ಣುಬಿಟ್ಟಾಗ ಶ್ವೇತಾ ತುಸು ಧೈರ್ಯವಾಗಿ, ಆತ್ಮವಿಶ್ವಾಸದಿಂದ ಓಡಾಡುತ್ತಿರುವುದನ್ನು ಕಂಡಳು. ಸಂಗೀತಾಳಿಗೂ ಮೊದಲಿಗಿಂತ ಎಷ್ಟೋ ವಾಸಿ ಅನಿಸಿತ್ತು.
ಈ ದುರಂತ ಬೆಳಗ್ಗೆ 10 ಗಂಟೆಗೆ ಹೊತ್ತಿಗೆ ನಡೆದಿತ್ತು. ಸಂಜೆ ಹೊತ್ತಿಗೆ ಸಂಗೀತಾಳಿಗೆ ತಲೆ ಸುತ್ತು, ವಾಂತಿ ಎಷ್ಟೋ ಕಡಿಮೆ ಆಗಿದ್ದರೂ ಅವಳಿನ್ನೂ ಅಪಾಯದಿಂದ ಪೂರ್ಣ ಮುಕ್ತಳಲ್ಲ ಎಂದೇ ವೈದ್ಯರು ಹೇಳಿದರು. ಸಂಗೀತಾ ಗಮನಿಸುತ್ತಿದ್ದಂತೆ ಶ್ವೇತಾ ಪಾದರಸದಂತೆ ಔಷಧಿ, ಹಾಲು, ಹಣ್ಣು ತರಲು ಓಡಾಡುತ್ತಿದ್ದಳು. ಅಮ್ಮನ ಬಳಿ ಕುಳಿತು ಪ್ರೀತಿಯಿಂದ ಅವಳ ಕೈಗಳನ್ನು ಹಿಡಿದುಕೊಂಡು ಇದ್ದುಬಿಡುತ್ತಿದ್ದಳು. ಸಂಗೀತಾ ನಿಧಾನವಾಗಿ ಕಣ್ತೆರೆಯುವ ಹೊತ್ತಿಗೆ, ಬಾಗಿ ಭಾವುಕಳಾಗಿ ಅವಳ ಹಣೆಗೆ ಮುದ್ದಿಟ್ಟು `ಐ ಲ್‌ಯೂ…. ಅಮ್ಮ!’ ಎಂದಳು.
ರಾತ್ರಿ 10 ಗಂಟೆ ಹೊತ್ತಿಗೆ ದಿಢೀರ್ ಎಂದು ತಮ್ಮ ಮುಂದೆ ಪ್ರತ್ಯಕ್ಷರಾದ ರಾಜೇಶ್‌ರನ್ನು ಕಂಡು ಸಂಗೀತಾ ಅವಾಕ್ಕಾದಳು!
“ಶ್ವೇತಾ ನನಗೆ ಫೋನ್ ಮಾಡಿ ಅಪಘಾತದ ಬಗ್ಗೆ ಹೇಳಿದಳು. ಈಗ ನೀನು ಹೇಗಿರುವೆ?” ಎಂದು ಸಂಗೀತಾಳನ್ನು ಪ್ರೀತಿಯಿಂದ ವಿಚಾರಿಸಿಕೊಂಡರು. ಅವರ ಕಂಗಳಲ್ಲಿ ಅಡಗಿದ್ದ ಕಾಳಜಿ ಸುಲಭವಾಗಿ ಗಮನಿಸಬಹುದಿತ್ತು.
“ಬೆಳಗ್ಗೆಗಿಂತ ಈಗ ಎಷ್ಟೋ ಸುಧಾರಿಸಿದ್ದೀನಿ. ನೀವು ಅನಗತ್ಯವಾಗಿ ಇಷ್ಟು ದೂರ ಬರುವ ತೊಂದರೆ ತೆಗೆದುಕೊಂಡಿರಿ…”
“ಹಾಗೆ ಹೇಳಬೇಡ ಗೀತಾ…. ನಿನ್ನ, ಶ್ವೇತಾಳನ್ನು ಈ ಕಾಣದ ಊರಲ್ಲಿ ಒಂಟಿಯಾಗಿ ಬಿಟ್ಟು ನಾನು ಅಲ್ಲಿ ನೆಮ್ಮದಿಯಾಗಿರಲು ಸಾಧ್ಯವೇ? ಈಗಲೇ ನಾನು ವೈದ್ಯರನ್ನು ಕಂಡುಬರ್ತೀನಿ,” ಎಂದು ಡ್ಯೂಟಿ ಡಾಕ್ಟರ್‌ನ್ನು ಹುಡುಕುತ್ತಾ ಹೊರಟರು. ಶ್ವೇತಾಳ ತಲೆ ಸವರಿ ಅವಳಿಗೆ ಧೈರ್ಯ ತುಂಬಿದ ರಾಜೇಶ್‌ರನ್ನು ಕಂಡು ಸಂಗೀತಾಳಿಗೆ ಮನಸ್ಸು ತುಂಬಿ ಬಂತು.
ಅವರತ್ತ ಹೊರಟ ಮೇಲೆ ಶ್ವೇತಾಳತ್ತ ತಿರುಗಿದ ಸಂಗೀತಾ ಪ್ರಶ್ನಾರ್ಥಕವಾಗಿ ಆಶ್ಚರ್ಯದಿಂದ ಅಳತ್ತಲೇ ನೋಡಿದಳು.
ಅವಳು ನಸುನಗುತ್ತಾ ತಾಯಿಯ ಕೈ ಹಿಡಿದುಕೊಂಡು ಮೃದುವಾಗಿ ಹೇಳಿದಳು, “ಅಮ್ಮ, ನಿನ್ನ ತಲೆಗೆ ಬಿದ್ದ ಏಟು ಅಪಾಯಕಾರಿ ಆಗಬಹುದು ಎಂದು ಡಾಕ್ಟರ್ ಹೇಳಿದಾಗ ನನಗೆಷ್ಟು ಭಯವಾಯ್ತು ಗೊತ್ತಾ? ಇಂಥ ಸಂದರ್ಭ ಎದುರಿಸಲು ಯಾರಾದರೂ ನಮ್ಮವರು ಜೊತೆಗಿದ್ದರೆ ಒಳ್ಳೆಯದು ಎಂದೆನಿಸಿತು….”
“ಆದರೆ ರಾಜೇಶ್ ನಿನಗೆ ಹಿಡಿಸೋಲ್ವಲ್ಲ…..?”
“ಅದು ಆ ಸಂದರ್ಭ, ಈಗ ಹಾಗಿಲ್ಲ. ಏಕೆಂದರೆ ಅವರು ನಿನಗೆ ಮಾತ್ರವಲ್ಲದೆ ನನಗೂ ಹಿತೈಷಿ ಎಂಬುದು ನನಗೀಗ ಚೆನ್ನಾಗಿ ಮನವರಿಕೆ ಆಗಿದೆ. ನಿನ್ನನ್ನು ಮನಸಾರೆ ಇಷ್ಟಪಡುವ ಅವರನ್ನು ನಾನೇಕೆ ದೂರ ಇರಿಸಲಿ?”
ಮಗಳು ಹೇಳುತ್ತಿದ್ದ ಮಾತುಗಳು ತಾಯಿಯ ಹೃದಯಕ್ಕೆ ಹಾಲೆರೆದಂತಾಯಿತು. ಅವಳೇ ಮಾತು ಮುಂದುರಿಸಲಿ ಎಂದು ಕಾದಳು.
ಇದ್ದಕ್ಕಿದ್ದಂತೆ ಶ್ವೇತಾಳ ಕಂಗಳಿಂದ ಕಣ್ಣೀರು ತೊಟ್ಟಿಕ್ಕಲು ತಾಯಿಯ ಕೈಗಳನ್ನು ಹಿಡಿದುಕೊಂಡು ಮತ್ತೆ ಮತ್ತೆ ಮುದ್ದಿಸಿದಳು.
“ಅಮ್ಮ…… ಮಧ್ಯಾಹ್ನ ನೀನು ಮಲಗಿದ್ದಾಗ ಇಲ್ಲಿನ ಪರಿಸ್ಥಿತಿ ಕುರಿತು ತಿಳಿಸಲು ಮೊದಲು ಅಪ್ಪನಿಗೆ ಫೋನ್ ಮಾಡಿದೆ. `ನೀನು ಹುಷಾರಾಗಿದ್ದೀಯಾ ತಾನೇ?’ ಎಂದು ನನ್ನನ್ನು ವಿಚಾರಿಸಿದರೇ ಹೊಕತು ನೀನು ಬದುಕಿರುವೆಯಾ ಸತ್ತೆಯಾ ಎಂದೂ ಕೇಳಲಿಲ್ಲ. ತಾವೊಂದು ಮುಖ್ಯ ಬಿಸ್‌ನೆಸ್ ಮೀಟಿಂಗ್‌ಗಾಗಿ ಬಾಂಬೆಗೆ ಹೋಗಿರುವುದರಿಂದ ಮಂಗಳೂರಿಗೆ ಬರಲಾಗದು ಎಂದು ಫೋನ್ ಕಟ್ ಮಾಡಿಬಿಟ್ಟರು.
“ನಂತರ ನಾನು ರಾಜೇಶ್ ಅಂಕಲ್‌ಗೆ ಫೋನ್ ಮಾಡಿದೆ. ನನ್ನ ಮಾತು ಕೇಳಿದ ತಕ್ಷಣ ನಮ್ಮಿಬ್ಬರ ಯೋಗಕ್ಷೇಮದ ಬಗ್ಗೆ ಮತ್ತೆ ಮತ್ತೆ ವಿಚಾರಿಸಿದರು. ತಾವು ಕೂಡಲೇ ಹೊರಟು ಬರುವುದಾಗಿ ತಕ್ಷಣ ಹೇಳಿದರು. `ನೀನೇನೂ ಹೆದರಬೇಡಮ್ಮ ಪುಟ್ಟಿ…. ನಾನು ಅಲ್ಲಿಗೆ ಬಂದ ತಕ್ಷಣ ಎಲ್ಲಾ ನೋಡಿಕೊಳ್ತೀನಿ, ಆದಷ್ಟು ಬೇಗ ಫ್ಲೈಟ್ ಹಿಡಿದು ಅಲ್ಲಿಗೆ ಬಂದುಬಿಡ್ತೀನಿ, ಸದ್ಯಕ್ಕೆ ಡಾಕ್ಟರ್‌ಹೇಳಿದ ಔಷಧಿ ಕೊಡಿಸುತ್ತಿರು,’ ಎಂದು ನನಗೆ ಸಮಾಧಾನ ಹೇಳಿದರು. ಹೇಳಿದಂತೆಯೇ ತಮಗೆ ಸಿಕ್ಕಿದ ಫ್ಲೈಟ್ ಹಿಡಿದು ಬಂದೇಬಿಟ್ಟರು. ಇವರಿಬ್ಬರ ವರ್ತನೆ ಹೋಲಿಸಿ ನೋಡಿದೆ…. ಖಂಡಿತಾ ಇವರು ಅಪ್ಪನಿಗಿಂತ ಎಲ್ಲಾ ವಿಧದಲ್ಲೂ ಉನ್ನತ ಮಟ್ಟದಲ್ಲಿ ನಿಂತಿದ್ದರು…. ಆಗಲೇ ನಾನು ಒಂದು ದೃಢ ನಿರ್ಧಾರಕ್ಕೆ ಬಂದುಬಿಟ್ಟೆ….”
ಸಂಗೀತಾ ಮಗಳ ಮಾತುಗಳನ್ನು ಬಹಳ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದಳು. ರಾಜೇಶ್ ತೋರಿದ ಹೃದಯ ಶ್ರೀಮಂತಿಕೆ ಅವಳ ದೃಷ್ಟಿಯಲ್ಲಿ ತಂದೆಯ ಹಣದ ಶ್ರೀಮಂತಿಕೆಗಿಂತ ಹೆಚ್ಚಿನದಾಗಿದೆ ಎಂಬುದನ್ನು ಗುರುತಿಸಿದ್ದಾಳೆ ಎಂದು ಸಂಗೀತಾ ಅರ್ಥ ಮಾಡಿಕೊಂಡಳು.
ಅವಳು ತಾಯಿಯ ಮನದ ಮಾತುಗಳನ್ನು ಓದಿಕೊಂಡವಳಂತೆ ಮುಗುಳ್ನಗು ಬೀರುತ್ತಾ ಹೇಳಿದಳು, “ಪ್ರತಿಯೊಬ್ಬರ ಜೀವನದಲ್ಲೂ ಕನಿಷ್ಠ ಒಬ್ಬರಾದರೂ ಹೃದಯಾಂತರಾಳದಿಂದ ಪ್ರೇಮಿಸುವವರು ಇರಲೇಬೇಕೆಂದು ನನಗೆ ಸ್ಪಷ್ಟವಾಗಿ ಅರ್ಥವಾಗಿದೆ. ಹೀಗಾಗಿ ರಾಜೇಶ್ ಅಂಕಲ್‌ರ ನಿಷ್ಕಲ್ಮಶ ಪ್ರೇಮದ ಕುರಿತು ನನಗಿನ್ನು ಯಾವ ಸಂದೇಹವೂ ಇಲ್ಲ. ಹೀಗಾಗಿ ನಾನು ಅವರಿಗೆ ಮನಸಾರೆ ನನ್ನ ತಂದೆಯ ಸ್ಥಾನ ಕೊಡುತ್ತಿದ್ದೇನೆ…. ಇನ್ನು ಮುಂದೆ ಅವರು ಅಂಕಲ್ ಅಲ್ಲ…. ನನಗೆ ಅಪ್ಪಾಜಿ! ನಿನ್ನ ಸಂತೋಷವೇ ನನ್ನ ಸಂತೋಷ ಅಮ್ಮ, ನನ್ನ ಕಟು ಮಾತುಗಳಿಂದ ನಿನಗೆ ಸಾಕಷ್ಟು ನೋವು ನೀಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು,” ಎಂದು ತಾಯಿಯ ಎದೆಗೆ ತೆಕ್ಕೆಬಿದ್ದು ಅವಳು ಬಿಕ್ಕಿಬಿಕ್ಕಿ ಅತ್ತುಬಿಟ್ಟಳು.
ಸಂಗೀತಾ ಮಗಳನ್ನು ಎದೆಗಪ್ಪಿಕೊಂಡು, ಅವಳ ಬೆನ್ನು ಸವರುತ್ತಾ ಸಮಾಧಾನಪಡಿಸಿದಳು. ನಿಜ ಅರ್ಥದಲ್ಲಿ ಈಗವಳು ತಾಯಿಗೆ ತಕ್ಕ ಮಗಳಾಗಿ ನಡೆದುಕೊಂಡಿದ್ದಳು. ಮಗಳ ಸಾಂತ್ವನದ ನುಡಿಗಳು ತಾಯಿಯ ಎಲ್ಲಾ ನೋವು, ಬಾಧೆಗಳನ್ನೂ ನಿವಾರಿಸಿತು. ವೈದ್ಯರ ಅನುಮತಿಯ ಮೇರೆಗೆ 2 ದಿನ ಕಳೆದ ನಂತರ, ಒಟ್ಟಿಗೆ ಅವರು ಬೆಂಗಳೂರಿಗೆ ಹಾರಿದಾಗ, ಅವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿತ್ತು .