ಭಾನುವಾರ ಮಧ್ಯಾಹ್ನದ ಊಟ ಮುಗಿಸಿ ಡಾ. ಮೋಹನ್‌ ಆರಾಮಾಗಿ ಸೋಫಾ ಮೇಲೆ ಒರಗಿದ್ದ. ಅಷ್ಟರಲ್ಲಿ ರಾಜೇಶನ ಫೋನ್‌ಬಂದಿತು.

“ಸಂಗೀತಾ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಾನೀಗ ಅವಳನ್ನು ನರ್ಸಿಂಗ್‌ ಹೋಮಿಗೆ ಕರೆದುಕೊಂಡು ಬಂದಿದ್ದೀನಿ. ನೀನು ಬೇಗ ವಿಜಯ ನರ್ಸಿಂಗ್‌ ಹೋಂಗೆ ಹೊರಟು ಬಾ…” ಎಂದು ಆತಂಕದಿಂದ ಬಡಬಡಿಸಿದ್ದ. ಅವನ ದನಿಯಲ್ಲಿದ್ದ ಟೆನ್ಶನ್‌ ಮೋಹನನ ನಿದ್ದೆಯನ್ನು ಪೂರ್ತಿ ಓಡಿಸಿತು.

ತನ್ನ ಬಾಲ್ಯ ಸ್ನೇಹಿತ ರಾಜೇಶನಿಗಾಗಿ ಮೋಹನ್‌ ತಕ್ಷಣ ಅಲ್ಲಿಗೆ ಧಾವಿಸಿ ಬಂದ. ಡಾಕ್ಟರ್‌ ಗೌತಮ್ ಇವರಿಬ್ಬರಿಗೂ ಅನ್ವಯಿಸಿ ಹೇಳಿದರು, “ನೋಡಿ, ಪೇಶೆಂಟ್‌ಗೆ ವಾಂತಿ ಮಾಡಿಸಿದ್ದೇವೆ. ಆಕೆ ಸಾಕಷ್ಟು ಮಾತ್ರೆಗಳನ್ನು ಸೇವಿಸಿಬಿಟ್ಟಿದ್ದರು. ಸಮಯಕ್ಕೆ ಸರಿಯಾಗಿ ನೀವು ಆಕೆಯನ್ನು ಇಲ್ಲಿಗೆ ಕರೆದುಕೊಂಡು ಬಂದು ಅಡ್ಮಿಟ್‌ ಮಾಡಿದ್ದು ಒಳ್ಳೆಯದಾಯ್ತು. ಇಲ್ಲದಿದ್ದರೆ ಅವರ ಜೀವ ಉಳಿಯುತ್ತಿರಲಿಲ್ಲ….”

ಡಾ. ಮೋಹನ್‌ ಸ್ವತಃ ತಾನೇ ಗೆಳೆಯನ ಹೆಂಡತಿ ಸಂಗೀತಾಳ ಚೆಕಪ್‌ ಮಾಡಿ, ಆಕೆ ಅಪಾಯದ ಗಡಿ ದಾಟಿದ್ದಾಳಷ್ಟೆ ಎಂದು ಖಾತ್ರಿಪಡಿಸಿಕೊಂಡ. ಸಂಗೀತಾಳಿಗೆ ಇನ್ನೂ ಜ್ಞಾನ ಬಂದಿರಲಿಲ್ಲ. ಆಕೆ ಆಳವಾದ ನಿದ್ದೆಗೆ ಜಾರಿಹೋಗಿದ್ದಳು. ಮೋಹನ್‌ ಬಂದು ರಾಜೇಶ್‌ಗೆ ವಿಷಯ ತಿಳಿಸಿ, ಏನೂ ಆತಂಕ ಪಡಬೇಡ ಎಂದು ಧೈರ್ಯ ತುಂಬಿಸಿದ. ರಾಜೇಶ್‌ ಕಣ್ಣಲ್ಲಿ ನೀರೂರಿತ್ತು.

ಡಾ. ಮೋಹನ್‌ ಅವನನ್ನು ಸಮಾಧಾನಪಡಿಸುತ್ತಾ, “ಅತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದು ಇದು 3ನೇ ಸಲ ರಾಜು…. ಈ ಸಲವಂತೂ ಸಾಯಲೇಬೇಕು ಅಂತ ಹಠತೊಟ್ಟಂತೆ ಜಾಸ್ತಿ ಮಾತ್ರೆ ನುಂಗಿದ್ದಾರೆ. ನಿನಗೆ ಆಕೆಯ ಕೋಪಿಷ್ಟ ಸ್ವಭಾವದ ಬಗ್ಗೆ ಗೊತ್ತಿರುವಾಗ ಯಾಕೆ ಮತ್ತೆ ಮತ್ತೆ ಅವರ ತಂಟೆಗೆ ಹೋಗ್ತೀಯಾ? ನೀನೇ ಅನುಸರಿಸಿಕೊಂಡು ಹೋಗಬೇಕಷ್ಟೆ…. ಅದು ಸರಿ, ನಿನ್ನೆ ಮೊನ್ನೆ ಯಾವ ವಿಷಯಕ್ಕಾಗಿ ನಿಮ್ಮಿಬ್ಬರಲ್ಲಿ ಅಷ್ಟು ದೊಡ್ಡ ಜಗಳವಾಯ್ತು? ಅವರು ಇಂಥ ಕಠಿಣ ನಿರ್ಧಾರ ಕೈಗೊಳ್ಳುವಂಥ ಅನಿವಾರ್ಯತೆ ಏಕೆ ಬಂತು?”

“ಇಲ್ವೋ ಮೋನಿ…… ಈ ಸಲ ನಮ್ಮ ಮಧ್ಯೆ ಅಂಥ ಯಾವ ದೊಡ್ಡ ಜಗಳ ನಡೆಯಲಿಲ್ಲ. ಈ ಸಂಗಿ ಹೀಗ್ಯಾಕೆ ಮಾಡಿದಳು ಅಂತ ನನಗೆ ನಿಜವಾಗ್ಲೂ ಅರ್ಥ ಆಗ್ತಾ ಇಲ್ಲ. ಅದರಲ್ಲೂ ತನ್ನ ಪ್ರಾಣವನ್ನೇ ಬಲಿಕೊಡುವಂಥ ಕೆಟ್ಟ ಕರ್ಮ ಅವಳಿಗೇನಿತ್ತೊ……”

“ರಾಜು…. ನೀನು ನನಗೂ ಸುಳ್ಳು ಹೇಳಬೇಕೇ?” ಮೋಹನ್‌ ಅವನನ್ನು ಗದರಿಕೊಂಡ.

“ದಯವಿಟ್ಟು ನನ್ನನ್ನು ನಂಬು ಮೋನಿ. ನಮ್ಮಿಬ್ಬರಿಗೂ 3 ದಿನಗಳ ಹಿಂದ ಸಣ್ಣ ಜಗಳ ನಡೆದಿದ್ದು ನಿಜ….. ಅದೇನೂ ದೊಡ್ಡ ವಿಷಯ ಆಗಿರಲಿಲ್ಲ. ನಿನ್ನೆ ರಾತ್ರಿ ಅಥವಾ ಇವತ್ತು ಏನೂ ಮಾತುಕಥೆ ಆಗಿರಲಿಲ್ಲ,” ರಾಜೇಶ್‌ ಆವೇಶದಲ್ಲಿ ಉತ್ತರಿಸಿದ. ಅವನ ಮಾತುಗಳಿಂದ ರಾಜೇಶ್‌ ಸತ್ಯ ಹೇಳುತ್ತಿದ್ದಾನೆ ಎಂದು ಮೋಹನ್‌ಗೆ ಅನಿಸಿತು. ಮತ್ತೆ ಏನನ್ನೋ ನೆನಪಿಸಿ ಕೊಂಡವನಂತೆ ಡಾ. ಮೋಹನ್‌ ಪ್ರಶ್ನಿಸಿದ, “3 ದಿನಗಳ ಹಿಂದೆ ಜಗಳ ಆಯ್ತು ಅಂದ್ಯಲ್ಲ….. ಅದು ಯಾವ ವಿಷಯಕ್ಕೆ?”

“ಅದೇ ಹಾಳು ಹಳೇ ವಿಷಯ…. ಕಳೆದ 20 ವರ್ಷಗಳಿಂದ ನನ್ನ ಜೀವನದ ಸುಖಶಾಂತಿಗಳೆಲ್ಲ ಅದರಿಂದ ಮಾಯವಾಗಿದೆ.”

“ನಿಮ್ಮ ತಂದೆ ಕಡೆಯಿಂದ ನೀನು ಮನೆ ಮತ್ತು ಅಂಗಡಿಗಳನ್ನು ನಿನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು. ಅದೇ ಕಾರಣಕ್ಕೆ ತಾನೇ ಅತ್ತಿಗೆ ನಿನ್ನೊಂದಿಗೆ ಜಗಳವಾಡಿದ್ದು?”

“ಹ್ಞೂಂ. ನಾವಿಬ್ಬರೂ ಮೊನ್ನೆ ಅಮ್ಮ ಅಪ್ಪನ್ನ ನೋಡಿಕೊಂಡು ಬರೋಕ್ಕೆ ಹೋಗಿದ್ದೆವು. ಅಲ್ಲಿಗೆ ಹೋದ ಮೇಲೆ ಇವಳು ಮತ್ತೆ ಅದೇ ಹಳೇ ರಾಗ ಹಾಡಲು ಶುರು ಮಾಡಿದಳು. ನಾವು ಅವಳ ಮಾತಿಗೆ ಅಷ್ಟೇನೂ ಮಹತ್ವ ಕೊಡಲಿಲ್ಲ. ಆಗೇನೋ ಅವಳು ಸುಮ್ಮನಾದಳು, ಆದರೆ ನಾವು ಮನೆಗೆ ಬಂದ ಮೇಲೆ ಮತ್ತೆ ಅದೇ ವಿಷಯಕ್ಕೆ ಜಗಳ ಶುರು ಮಾಡಿದಳು. ಆದರೆ ಅದೇನೂ ದೊಡ್ಡ ವಿಷಯವಾಗಿ ಬೆಳೆಯದೆ ಅತ್ತು ರಾತ್ರಿಯೇ ಮುಗಿದುಹೋಗಿತ್ತು. ಮಾರನೇ ಬೆಳಗ್ಗೆ ಮಾಮೂಲಾಗಿಯೇ ಇದ್ದಳು.”

“ನೀನು ಆಕೆ ಮೇಲೆ ಕೈ ಮಾಡಲಿಲ್ಲ ತಾನೇ?”

“ನಾನು ಅಂಥ ಮೂರ್ಖ ತಪ್ಪನ್ನು ಹಿಂದೆ ಮಾಡಿದ್ದೆ ನಿಜ, ಆದರೆ ಅದನ್ನೆಲ್ಲ ಬಿಟ್ಟು 2 ವರ್ಷಗಳೇ ಆಯ್ತು. ಈಗೇನಾದರೂ ಜಗಳ ಆದ್ರೆ ನಾನೇ ಸುಮ್ಮನಾಗಿ ಆ ಕೋಣೆ ಬಿಟ್ಟು ಬೇರೆ ಕಡೆ ಹೋಗಿಬಿಡ್ತೀನಿ. ಜಗಳ ಆದಾಗ ಮೌನವಾಗಿ ಇದ್ದುಬಿಡು ಅಂತ ನೀನು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆ. ಮೊನ್ನೆ ಜಗಳ ಆದಾಗಲೂ ನಾನು ಅದನ್ನೇ ಮಾಡಿದ್ದು.”

“ಹಿಂದೆ 2 ಸಲ ಆಕೆ ನಿನ್ನನ್ನು ಬೆದರಿಸಲೆಂದೇ ಕೇವಲ 4-5 ಮಾತ್ರೆ ತೆಗೆದುಕೊಂಡಿದ್ದು ಅನ್ಸುತ್ತೆ. ಆದರೆ ಈ ಬಾರಿ ಸಾಯಲೇಬೇಕು ಅಂತ ನಿರ್ಧರಿಸಿ ಧಾರಾಳವಾಗಿ ಮಾತ್ರೆ ನುಂಗಿಬಿಟ್ಟಿದ್ದಾರೆ. ಈ ಬಗ್ಗೆ ನಿಧಾನವಾಗಿ, ಆಳವಾಗಿ ಯೋಚಿಸಿ ಹೇಳು, ಯಾವ ಕಾರಣದಿಂದ ಆಕೆ ಇಂಥ ಕ್ರಮ ಕೈಗೊಂಡಿರಬಹುದು?” ಮೋಹನ್‌ ಮತ್ತೆ ಮತ್ತೆ ಪ್ರಶ್ನಿಸಿದ.

“ನನಗೆ ಏನೂ ಹೊಳೆಯುತ್ತಿಲ್ಲ…. ಬಿಡೋ….” ರಾಜೇಶ್‌ ಚಿಂತಿತನಾಗಿ ಹೇಳಿದ.

“ಸತೀಶ್‌, ಶೀಲಾ ಎಲ್ಲಿ ಹೋದ್ರು?” ಮೋಹನ್‌ ರಾಜೇಶನ ವಯಸ್ಕ ಮಕ್ಕಳ ಕುರಿತು ಕೇಳಿದ.

“ನಾನು ನಿನ್ನೆ ಆಫೀಸ್‌ಗೆ ಹೊರಡುತ್ತಿದ್ದಾಗ ಅವರಿಬ್ಬರೂ ಎಲ್ಲೋ ಹೊರಗೆ ಹೊರಡುವ ತಯಾರಿಯಲ್ಲಿದ್ದರು. ಆದರೆ ಅವರಂತೂ….”

“ಏನದು?”

“ಇಬ್ಬರೂ ಎಂದಿಗಿಂತ ಬಹಳ ಸೀರಿಯಸ್‌ ಆಗಿದ್ದರು…. ಬಹಳ ಸೈಲೆಂಟ್‌ ಆಗಿದ್ದರು. ನಾನು ಅವರನ್ನು ಅದರ ಬಗ್ಗೆ ವಿಚಾರಿಸಿದೆ, ಆದರೆ ಅವರು ಅದಕ್ಕೆ ಏನೂ ಹೇಳಲಿಲ್ಲ. ಆದರೆ ನಾನು ಅಲ್ಲಿಂದ ಹೊರಟ ಮೇಲೆ ಇವರು ಅಮ್ಮನ ಜೊತೆ ಏನೋ ಗಹನವಾದ ವಿಚಾರ ಚರ್ಚಿಸಲಿದ್ದಾರೆ ಅನ್ನಿಸಿತು.”

“ಆ ಗಹನ ವಿಚಾರ ಏನಿರಬಹುದು ರಾಜು?”

“ನನಗಂತೂ ಏನೂ ಗೊತ್ತಾಗುತ್ತಿಲ್ಲ. ಇತ್ತೀಚೆಗಂತೂ ಅವರಿಬ್ಬರೂ ತಮಗೆ ಸಂಬಂಧಿಸಿದ ಯಾವುದೇ ವಿಚಾರವನ್ನೂ ನನಗೆ ಹೇಳುವುದೇ ಇಲ್ಲ….. ಅವರು ನನ್ನಿಂದ ದೂರ ಸರಿಯುತ್ತಿದ್ದಾರೇನೋ ಅನ್ಸುತ್ತೆ….” ಎಂದು ಹೇಳುವಷ್ಟರಲ್ಲಿ ರಾಜೇಶನ ಕಂಠ ತುಂಬಿ ಬಂದಿತ್ತು.

ಅದಾದ ಮೇಲೆ ಡಾ. ಮೋಹನ್‌ ಏನನ್ನೂ ಕೇಳಲು ಹೋಗಲಿಲ್ಲ. ಸ್ವಲ್ಪ ಹೊತ್ತು ರಾಜೇಶನನ್ನು ಮೌನವಾಗಿರಲು ಬಿಡುವುದೇ ಸೂಕ್ತವೆನಿಸಿತು. ಅವನ 25 ವರ್ಷಗಳ ಸಾಂಸಾರಿಕ ಜೀವನ ಒಂದೊಂದಾಗಿ ಸುರುಳಿ ಬಿಚ್ಚತೊಡಗಿತು. ರಾಜೇಶನಿಗೆ ಸುಂದರಿಯಾದ ಹೆಂಡತಿ ಸಿಕ್ಕಿದ್ದೇನೋ ನಿಜ. ಆದರೆ ಅವನ ಜೀವನದಲ್ಲಿ ನೆಮ್ಮದಿ ಮನಶ್ಶಾಂತಿಗಳು ಮರೀಚಿಕೆಯಾದವು. ಸಂಗೀತಾ ಮಹಾ ಹಠಮಾರಿ ಸ್ವಭಾವದ ಹೆಣ್ಣು. ದೊಡ್ಡ ಮೊತ್ತದ ವರದಕ್ಷಿಣೆ ತಂದಿದ್ದರಿಂದ ಅವಳ ದುರಹಂಕಾರಿ ಗುಣ ಇನ್ನಷ್ಟು ಹೆಚ್ಚಿತ್ತು. ಅವಳು ಮೊದಲಿನಿಂದನೂ ತನ್ನ ಗಂಡ, ಅತ್ತೆ ಮಾವಂದಿರನ್ನು ಎಂದೂ ಆದರದಿಂದ ಕಂಡವಳಲ್ಲ. ಅವಳ ಕಾರಣ ಮನೆಯಲ್ಲಿ ಸದಾ ಒಂಲ್ಲೊಂದು ಜಗಳ ನಡೆಯುತ್ತಿತ್ತು. ಮದುವೆಯಾಗಿ ವರ್ಷ ತುಂಬುವ ಮೊದಲೇ ಗಂಡನನ್ನು ಹೊರಡಿಸಿ ಬೇರೆ ಸಂಸಾರ ಹೂಡಿದಳು. ರಾಜೇಶನಿಗೆ ಈ ರೀತಿ ಬೇರೆ ಬರುವುದು ಖಂಡಿತಾ ಬೇಕಿರಲಿಲ್ಲ. ಆದರೆ ಬೇರೆ ದಾರಿ ಇಲ್ಲದೆ ಒಪ್ಪಿದ್ದ. ಆ ಕಾರಣ ಅವರಿಬ್ಬರಲ್ಲಿ ಜಗಳ ಆಗುತ್ತಲೇ ಇತ್ತು.

ರಾಜೇಶನಿಗಿದ್ದ ಮಿತ ಆದಾಯದಲ್ಲಿ ಸಂಗೀತಾ ಬಯಸಿದಂತೆ ಐಷಾರಾಮಿ ಜೀವನ ನಡೆಸಲು ಆಗುತ್ತಿರಲಿಲ್ಲ. ಹೀಗಾಗಿ ಅವಳು ಕೇಳಿದ್ದನ್ನೆಲ್ಲ ತಂದುಕೊಡಲಾಗದೆ ಅವನು ಅಡಕತ್ತರಿ ಮಧ್ಯೆ ಸಿಲುಕಿಕೊಂಡು ವಿಲಿವಿಲಿ ಒದ್ದಾಡುತ್ತಿದ್ದ. ಹೀಗಾಗಿ ಅವಳ ತಂದೆ ಅಳಿಯನನ್ನು ಒಪ್ಪಿಸಿ ಪಾರ್ಟ್‌ಟೈಂ ಬಿಸ್‌ನೆಸ್‌ ನಡೆಸುವಂತೆ ಮಾಡಿದರು. ಒಬ್ಬ ಚತುರ ಬಿಸ್‌ನೆಸ್‌ ಮ್ಯಾನ್‌ಗೆ ಇರಬೇಕಾದ ಚುರುಕು ಬುದ್ಧಿವಂತಿಕೆ, ತಂತ್ರಗಾರಿಕೆ, ಕಿಲಾಡಿತನ ಏನೂ ಇಲ್ಲದ ರಾಜೇಶ್‌ ಸಾಧಾರಣ ಮಟ್ಟದಲ್ಲಿ ವ್ಯಾಪಾರ ನಡೆಸುತ್ತಿದ್ದ. ಅವನ ಬಿಸ್‌ನೆಸ್‌ ಪಾರ್ಟ್‌ನರ್‌ನ ಅಪ್ರಾಮಾಣಿಕತೆಯಿಂದಾಗಿ ಮಾವ ತೊಡಗಿಸಿಕೊಟ್ಟಿದ್ದ 45 ಲಕ್ಷ ರೂ. ಬಿಸ್‌ನೆಸ್‌ದಿವಾಳಿಯಾಯ್ತು.

ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡ ಸಂಗೀತಾ, ಎದ್ದರೆ ಕೂತರೆ ಗಂಡನನ್ನು ಹೀಯಾಳಿಸುತ್ತಾ ಅವನ ಬದುಕನ್ನು ದುಸ್ತರ ಮಾಡಿಬಿಟ್ಟಳು. ರಾಜೇಶ್‌ ಅಸಹಾಯಕನಾಗಿ ಮನೆಬಿಟ್ಟು ಹೋಗದ್ದೇ ಹೆಚ್ಚು. ರಾಜೇಶ್‌ ಸದಾ ಮೌನವಾಗಿರುತ್ತಿದ್ದ. ಆದರೆ ಸಂಗೀತಾಳ ಕಡಿವಾಣವಿಲ್ಲದ ವರ್ತನೆಗಳಿಂದ ಇವನು ಹುಚ್ಚು ಕೆರಳಿದಂತೆ ಅವಳನ್ನು ಹೊಡೆದುಬಿಡುತ್ತಿದ್ದ. ಭೂಮಿ ಆಕಾಶ ಒಂದು ಮಾಡುವವಳಂತೆ ಅವಳು ಗಲಾಟೆ ಎಬ್ಬಿಸಿ, ಆ ಇಡೀ ಬೀದಿಯ ಜನ ಮನೆ ಮುಂದೆ ಜಮಾಯಿಸುವಂತೆ ಮಾಡುತ್ತಿದ್ದಳು. ಇವರ ಮನೆಯ ಗಲಾಟೆ ಎಲ್ಲರಿಗೂ ಚಿರಪರಿಚಿತವಾಗಿತ್ತು.

ಮದುವೆಯಾಗಿ 5 ವರ್ಷ ಕಳೆಯುಷ್ಟರಲ್ಲಿ ಸತೀಶ್‌, ಶೀಲಾ ಹುಟ್ಟಿದ್ದರು. ಇಬ್ಬರು ಮಕ್ಕಳಾದ ಮೇಲೆ ಸಂಗೀತಾಳಿಗೆ ತನ್ನ ಯೌವನ ಮುಂಚಿನಂತೆ ಉಳಿದಿಲ್ಲ, ತನ್ನ ಫಿಗರ್‌ ಕೆಟ್ಟಿತೆಂದು ಇನ್ನಷ್ಟು ಹೆಚ್ಚು ಸಿಡುಕುತ್ತಿದ್ದಳು. ಅವಳ ನಾದಿನಿಯರಿಬ್ಬರಿಗೂ ಒಳ್ಳೆ ಅನುಕೂಲಸ್ಥರ ಮನೆಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಬ್ಬರೂ ತಮಗಿಂತಲೂ ಹೆಚ್ಚು ಶ್ರೀಮಂತರಾಗಿರುವುದನ್ನು ಕಂಡು ಸಂಗೀತಾಳಿಗೆ ಸಹಿಸದಾಯಿತು. ಹೀಗಾಗಿ ಎಲ್ಲಾ ಸಿಟ್ಟನ್ನೂ ಗಂಡನ ಮೇಲೆ ಕಾರುತ್ತಾ ಮನೆಯನ್ನು ನಿತ್ಯ ನರಕವಾಗಿಸಿಬಿಟ್ಟಳು. ರಾಜೇಶನಿಗೆ ಹಾಸಿಗೆ ಇದ್ದಷ್ಟು ಕಾಲು ಚಾಚುವ ಸ್ವಭಾವ. ಆದರೆ ಸಂಗೀತಾಳಿಗೆ ಎಲ್ಲವೂ ಬಲು ಫ್ಟಸ್ಟ್ ಕ್ಲಾಸ್‌ ಆಗಿ ದುಬಾರಿ ಆಗಿರಬೇಕಿತ್ತು. ಅವಳು ತನ್ನ ಇಬ್ಬರು ಮಕ್ಕಳಿಗೂ ಮುಂದೆ ಆರ್ಥಿಕ ಸುಭದ್ರತೆ ಇರಬೇಕೆಂದು, ಅದಕ್ಕಾಗಿ ಈಗ ಯಾವ ಕ್ರಮ ಕೈಗೊಳ್ಳಲಿಕ್ಕೂ ಹಿಂಜರಿಯದೆ ಚೀಟಿ, ಶೇರ್‌, ಸ್ಟಾಕ್‌ ಮಾರ್ಕೆಟ್‌ಗಳಲ್ಲೂ ಹಣ ತೊಡಗಿಸಿದಳು.

“ನಿಮ್ಮ ತಂದೆಗೆ ಹೇಳಿ ಅವರ ಮನೆ ಮತ್ತು ಡಿಪಾರ್ಟ್‌ಮೆಂಟ್‌ ಸ್ಟೋರ್‌ನ್ನು ನಿನ್ನ ಹೆಸರಿಗೇ ಮಾಡಿಸಿಕೊ. ನಿನ್ನ ತಂಗಿಯರಿಬ್ಬರಿಗೂ ಅದರ ಮೇಲೆ ಯಾವ ಅಧಿಕಾರ ಅಥಲ ಹಕ್ಕೂ ಇಲ್ಲ. ಅವರುಗಳ ಮದುವೆಗೆ ನಿಮ್ಮ ತಂದೆ ನೀರಿನಂತೆ ಹಣ ಚೆಲ್ಲಿದ್ದಾರೆ. ನಿಮ್ಮಮ್ಮ ಅಂತೂ ತಮ್ಮ ಎಲ್ಲಾ ಒಡವೆಗಳನ್ನೂ ಅವರಿಗೇ ಕೊಡುತ್ತಾರೆ ಬಿಡು. ನಿನಗೆ ಈಗ ಬೇಡ ಎನಿಸಿದರೂ, ಮುಂದೆ ನಮ್ಮ ಮಕ್ಕಳ ಭವಿಷ್ಯ ನೆನೆದು ಇದನ್ನು ಮಾಡಲೇಬೇಕಿದೆ. ನಾನೇನು ತಪ್ಪು ಹೇಳುತ್ತಿಲ್ಲ ಅಲ್ಲವೇ ಡಾಕ್ಟರ್‌?” ಅವರ ಮನೆಗೆ ಅಪರೂಪಕ್ಕೆ ಬಂದಿದ್ದ ಡಾ. ಮೋಹನ್‌ ಎದುರು ಪಂಚಾಯಿತಿ ಶುರು ಹಚ್ಚಿಕೊಂಡಿದ್ದಳು.

ಮೋಹನ್‌ ಏನು ತಾನೇ ಉತ್ತರ ಕೊಡಬಲ್ಲ? ಅಷ್ಟರಲ್ಲಿ ಅವನೆದುರೇ ರಾಜೇಶ್‌ ಸಂಗೀತಾಳ ಈ ಬಯಕೆಯನ್ನು ಖಂಡಿಸುತ್ತಾ ಹೇಳಿದ, “ನನ್ನ ಮುಂದೆ ಎಂದೂ ಇಂಥ ದುಷ್ಟ ಸಲಹೆಗಳನ್ನು ನೀಡಬೇಡ. ನನ್ನ ಮದುವೆಗೂ ನಮ್ಮ ತಂದೆಯವರೇ ಧಾರಾಳ ಖರ್ಚು ಮಾಡಿದ್ದರು. ಅಮ್ಮ, ಅಪ್ಪನನ್ನು ಎಂದಾದರೂ ಗೌರವದಿಂದ ಆದರಿಸಿದ್ದೀಯಾ? ಹಾಗಿರುವಾಗ ಅವರ ಒಡವೆ ನಿನಗೆ ಎಲ್ಲಿಂದ ಸಿಗಲು ಸಾಧ್ಯ? ಯಾವುದು ಸರಿಯೋ ನಮ್ಮ ತಂದೆ ಅದನ್ನೇ ಮಾಡುತ್ತಾರೆ. ಯಾರಿಗೆ ಯಾವುದು ಸೇರಬೇಕೋ ಅದನ್ನು ಕೊಟ್ಟೇಕೊಡುತ್ತಾರೆ. ನೀನು ಮಹಾರಾಣಿ ಕೇಳಿಬಿಟ್ಟೆ ಅಂತ ಅವರೆದುರು ಈ ಮಾತನ್ನು ಆಡಿದರೆ ನನ್ನ ಮರ್ಯಾದೆ 3 ಕಾಸಿಗೆ ಹೋಗುವುದಿಲ್ಲವೇ?”

ಆದರೆ ಸಂಗೀತಾ ತನ್ನ ಈ ಹಠವನ್ನು ಎಂದೂ ಬಿಟ್ಟುಕೊಡಲಿಲ್ಲ, ರಾಜೇಶನೂ ಅವಳ ಮುಂದೆ ಸೋಲಲಿಲ್ಲ. ಇಬ್ಬರ ಮಧ್ಯೆ ಇದೇ ವಿಷಯಾಗಿ 20 ವರ್ಷಗಳಿಂದ ಸತತ ಜಗಳ ನಡೆಯುತ್ತಿತ್ತು. ಈ ವಿಷಯವಾಗಿ ಸಂಗೀತಾ ಹುಚ್ಚು ಹಿಡಿದವಳಂತೆ ಆಡುತ್ತಿದ್ದಳು. ಮಾವನ ಸಕಲ ಆಸ್ತಿಯೂ ಗಂಡನ ಹೆಸರಿಗಾಗಬೇಕು ಎಂಬುದೊಂದನ್ನು ಬಿಟ್ಟರೆ ಅವಳಿಗೆ ಬೇರೇನೂ ಹೊಳೆಯುತ್ತಿರಲಿಲ್ಲ. ಎಷ್ಟು ಬೇಡವೆಂದುಕೊಂಡರೂ ಇದೇ ವಿಷಯವಾಗಿ ಮತ್ತೆ ಮತ್ತೆ ವಾದ ವಿವಾದ, ಜಗಳಗಳು ತಾರಕಕ್ಕೇರುತ್ತಿದ್ದವು. ಇದನ್ನು ನೋಡಿ ನೋಡಿ ಮಕ್ಕಳು ಮಂಕಾಗಿ ಮೂಲೆ ಸೇರಿಬಿಡುತ್ತಿದ್ದರು. ರಾಜೇಶನನ್ನು ಹೆದರಿಸಲು ಸಂಗೀತಾ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿ, ಪೊಲೀಸ್‌ ಮನೆಗೆ ಬಂದು ವಿಚಾರಣೆ ಮಾಡುವಂಥ ಸ್ಥಿತಿಯನ್ನೂ ತಂದಿಟ್ಟಳು. ಇದನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡು ಸಂಗೀತಾ ಇದಕ್ಕೆ ಮೊದಲೂ 3 ಸಲ ನಿದ್ದೆ ಮಾತ್ರೆ ನುಂಗಿದ್ದಳು. ಏನೇ ಆದರೂ ರಾಜೇಶ್‌ ಅವಳ ಒತ್ತಡಕ್ಕೆ ಮಣಿಯಲಿಲ್ಲ. ಡಾ. ಮೋಹನ್ ಮತ್ತು ರಾಜೇಶರ ಮತ್ತೊಬ್ಬ ಸಹಪಾಠಿ ಗೆಳೆಯ ವಿವೇಕ್‌, ಉಚ್ಚ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲನಾಗಿದ್ದ. ಅವನಿಗೂ ರಾಜೇಶನ ಕಷ್ಟಗಳೆಲ್ಲ ಗೊತ್ತಿತ್ತು.

ಇವನಿಗೆ ಸಲಹೆ ನೀಡಲೆಂದೇ ವಿವೇಕ್‌ ಒಮ್ಮೆ, “ರಾಜು, ಇಂಥ ಕೆಟ್ಟ ಹೆಂಗಸಿನ ಸಹವಾಸ ಸಾಕಾಗಿದೆ ಎನಿಸಿದ್ದರೆ ನನಗೆ ಹೇಳು, ಈಕೆಗೆ ವಿಚ್ಛೇದನ ಕೊಟ್ಟು ಕಳುಹಿಸಿ ಮುಂದಿನ ಜೀವನವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡಿಕೊಳ್ಳಬಹುದು. ಕ್ರೂರತೆ, ಅಮಾನವೀಯ ಘಟನೆಗಳಿಂದ ನಿನ್ನ ಜೀವನವನ್ನು ಆಕೆ ನಾಶ ಮಾಡಿದ್ದಾಳೆ. ಅಂಥ 10-12 ಪ್ರಸಂಗಗಳನ್ನು ಒಟ್ಟಾಗಿ ಫೈಲ್ ‌ಮಾಡಿ ವಿಚ್ಛೇದನಕ್ಕೆ ಯತ್ನಿಸಬಹುದು,” ಎಂದು 10 ವರ್ಷಗಳ ಹಿಂದೆಯೇ ಧೈರ್ಯ ತುಂಬಿದ್ದ.

ಸಂಗೀತಾ ತನ್ನ ಜೀವನವನ್ನು ಎಷ್ಟೇ ನರಕಮಯಗೊಳಿಸಿದ್ದರೂ, ಮಕ್ಕಳ ಭವಿಷ್ಯ ನೆನೆದು ರಾಜೇಶ್‌ ಎಂದೂ ವಿಚ್ಛೇದನಕ್ಕೆ ಮನಸ್ಸು ಮಾಡಲಿಲ್ಲ.`ಏನೇ ಆಗಲಿ, ನನ್ನ ಮಕ್ಕಳ ಭವಿಷ್ಯ ನನಗೆ ಮುಖ್ಯ. ಅವರ ಸುರಕ್ಷತೆಗಾಗಿ ನಾನು ಎಂಥ ಕಷ್ಟವನ್ನಾದರೂ ಸಹಿಸಿಕೊಳ್ಳುವೆ. ತಾಯಿತಂದೆಯರ ವಿಚ್ಛೇದನದ ಕರಿನೆರಳು ಮಕ್ಕಳ ಇಡೀ ಭವಿಷ್ಯವನ್ನು ಬಾಧಿಸುತ್ತದೆ. ಸಂಗೀತಾಳಿಗಂತೂ ಅವರನ್ನು ನೆಟ್ಟಗೆ ಸಾಕಿ ಬೆಳೆಸುವ ಯೋಗ್ಯತೆಯೂ ಇಲ್ಲ, ಜವಾಬ್ದಾರಿಯೂ ಇಲ್ಲ. ಮಕ್ಕಳ ರಕ್ಷಣೆಯ ಮಹತ್ವಪೂರ್ಣ ಜವಾಬ್ದಾರಿ ನನ್ನದೇ ಆಗಿದೆ. ನಾನು ಅವರಿಂದ ದೂರವಾದರೆ ಅವರ ವ್ಯಕ್ತಿತ್ವದಲ್ಲಿ ದೊಡ್ಡ ಕುಂದು ಮೂಡುತ್ತದೆ. ಆದ್ದರಿಂದ ವಿಚ್ಛೇದನದ ಗೊಡವೆಯೇ ಬೇಡ,’ ಎಂದು ರಾಜೇಶ್‌ ದೃಢವಾಗಿ ನಿರ್ಧರಿಸಿದ್ದ.

ಎಷ್ಟೇ ಯಮಯಾತನೆ, ಕಷ್ಟಕೋಟಲೆಗಳು ಎದುರಾದರೂ ರಾಜೇಶ್‌ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ.

ಈ ಎಲ್ಲಾ ಘಟನೆಗಳನ್ನು ಮೆಲುಕುಹಾಕುತ್ತಿದ್ದ ಡಾ. ಮೋಹನ್‌, ರಾಜೇಶನ ಅತ್ತೆ ಮಾವ ಅಲ್ಲಿಗೆ ಬಂದ ಸದ್ದಿನಿಂದ ವಾಸ್ತವಕ್ಕೆ ಮರಳಿದ. ಅವರಿಬ್ಬರೂ ಕೋಪದಿಂದ ಕುದಿಯುತ್ತಿದ್ದರು.

“ಸಂಗೀತಾ ಅಪಾಯದಿಂದ ಪಾರಾಗಿದ್ದಾಳೆ,” ಎಂದು ಮೋಹನ್‌ ಅವರಿಗೆ ಮನವರಿಕೆ ಮಾಡಿಕೊಟ್ಟ ನಂತರ ತುಸು ಸಮಾಧಾನಗೊಂಡ ಅವರು, ಈಗ ರಾಜೇಶನನ್ನು ತರಾಟೆಗೆ ತೆಗೆದುಕೊಂಡು ನಿಂದಿಸತೊಡಗಿದರು.

“ಈ ಕೆಟ್ಟ ಮನುಷ್ಯ ನಮ್ಮ ಮಗಳಿಗೆ ಒಂದು ದಿನ ಸುಖ, ನೆಮ್ಮದಿ ಕೊಡಲಿಲ್ಲ. ಹೂವಿನಂತೆ ರಾಜಕುಮಾರಿಯಂತಿದ್ದ ನಮ್ಮ ಮಗಳ ಜೀವನ ಹಾಳಾಗಿಹೋಯಿತು…. ಏನಾದ್ರೂ ತುಸು ಹೆಚ್ಚುಕಡಿಮೆ ಆಗಿ ನಮ್ಮ ಮಗಳಿಗೆ ಕೊನೆಗಾಲ ಬಂತೋ, ಈ ಮನುಷ್ಯನಿಗೆ ಕಂಬಿ ಎಣಿಸುವಂತೆ ಮಾಡಿ ದೊಡ್ಡ ಪಾಠ ಕಲಿಸುತ್ತೇವೆ!” ಎಂದೆಲ್ಲ ಬಾಯಿಗೆ ಬಂದಂತೆ ದಬಾಯಿಸುತ್ತಾ ಅವರು ರಾಜೇಶನನ್ನು ಅಪಮಾನಿಸಿದರು.

ರಾಜೇಶ್‌ ಬಾಯಿ ತೆರೆದು ಅವರಿಗೆ ಎದುರಾಗಿ ಒಂದು ಮಾತನ್ನೂ ಆಡಲಿಲ್ಲ. ತಲೆಯ ಮೇಲೆ ಎರಡೂ ಕೈ ಹೊತ್ತು ಅವನು ದೂರದ ಗೋಡೆ ದಿಟ್ಟಿಸುತ್ತಾ ಮೌನವಾಗಿ ಇದ್ದುಬಿಟ್ಟಿದ್ದ. “ಸಾರ್‌, ದಯವಿಟ್ಟು ಸುಮ್ಮನಿರಿ.  ವಿಷಯ ಸರಿಯಾಗಿ ತಿಳಿದುಕೊಳ್ಳದೆ ನೀವಿಬ್ಬರೂ ಯಾವುದೇ ತೀರ್ಮಾನಕ್ಕೆ ಬರಬೇಡಿ. ಇತ್ತೀಚೆಗೆ ರಾಜು ಸಂಗೀತಾ ಮಧ್ಯೆ ಯಾವುದೇ ವಿಷಯವಾಗಿ ವಾದ ಜಗಳ ನಡೆದಿಲ್ಲ. ಈಕೆ ಈ ತರಹ ಕಠಿಣ ನಿರ್ಧಾರ ಕೈಗೊಂಡು ಯಾಕೆ ಹೀಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅಂತ ಇಲ್ಲಿ ಯಾರಿಗೂ ಗೊತ್ತಿಲ್ಲ. ಇನ್ನೇನು 1 ತಾಸಿನಲ್ಲಿ ಆಕೆಗೆ ಪ್ರಜ್ಞೆ ಬರಬಹುದು, ಆಗ ಎಲ್ಲಾ ವಿಷಯ ಗೊತ್ತಾಗುತ್ತೆ….” ಡಾ. ಮೋಹನ್‌ ಅನರಿಬ್ಬರಿಗೂ ಮತ್ತೆ ಮತ್ತೆ ಮನವರಿಕೆ ಮಾಡಿಕೊಟ್ಟ ನಂತರ ಅವರಿಗೆ ತುಸು ಸಮಾಧಾನವಾಯಿತು. ಮತ್ತೆ ಮಗಳನ್ನು ನೋಡಲು ಒಳಗೆ ಹೋದರು.

ಅದಾಗಿ ಸುಮಾರು 2 ತಾಸಿನ ನಂತರ ಸಂಗೀತಾಳಿಗೆ ಪ್ರಜ್ಞೆ ಮರಳಿತು. ಅವಳಿಗೆ ಗ್ಲೂಕೋಸ್‌ ಡ್ರಿಪ್ಸ್ ಕೊಡಲಾಯಿತು. ಅದಾದ ಅರ್ಧ ಗಂಟೆ ನಂತರ ತುಸು ಎಳನೀರು, ಹಣ್ಣಿನ ರಸ ಸೇವಿಸಿದಾಗ ಅವಳು ಮಾತನಾಡಲು ತುಸು ಶಕ್ತಿ ಪಡೆದಳು. ಎಲ್ಲರೂ ಅವಳ ಮಂಚದ ಸುತ್ತ ನೆರೆದಿದ್ದರು.

“ಆತ್ಮಹತ್ಯೆ ಮಾಡಿಕೊಳ್ಳುವಂಥ ಕಠಿಣ ಪ್ರಸಂಗ ಏಕೆ ಎದುರಾಯಿತು?” ಅಲ್ಲಿದ್ದವರೆಲ್ಲರೂ ಪ್ರತ್ಯೇಕವಾಗಿ ಸಂಗೀತಾಳನ್ನು ಬಿಡಿಸಿ ಬಿಡಿಸಿ ಕೇಳಿದರೂ ಅವಳು ಯಾರಿಗೂ ಉತ್ತರ ನೀಡಲಿಲ್ಲ. ಯಾರಿಗೂ ಉತ್ತರಿಸದೆ ಮುಖ ಇನ್ನೊಂದು ಬದಿಗೆ ತಿರುಗಿಸಿ ಮಲಗಿಬಿಟ್ಟಳು. ಅವಳ ಕಣ್ಣಿಂದ ಧಾರೆ ಧಾರೆಯಾಗಿ ಹರಿಯುತ್ತಿದ್ದ ನೀರು ಅವಳೆಷ್ಟು ವೇದನೆ ಪಡುತ್ತಿದ್ದಾಳೆ ಎಂದು ಸ್ಪಷ್ಟವಾಗಿ ಸೂಚಿಸುತ್ತಿತ್ತು. ಅವಳ ಕೈಹಿಡಿದುಕೊಂಡು ಇನ್ನೆಂದೂ ಅಂಥ ಪ್ರಯತ್ನಕ್ಕೆ ಕೈಹಾಕಬಾರದೆಂದು ರಾಜೇಶ್‌ ಪರಿಪರಿಯಾಗಿ ತಿಳಿಹೇಳಿದ.

ಅವನ ಕೈಗಳನ್ನು ತನ್ನ ಮುಖಕ್ಕೆ ಒತ್ತಿಕೊಂಡ ಸಂಗೀತಾ, ತನ್ನದು ತಪ್ಪಾಯಿತು ಕ್ಷಮಿಸಿ ಎಂಬಂತೆ ಮತ್ತೆ ಮತ್ತೆ ಬಿಕ್ಕಳಿಸಿದಳು. ಆಗ ಅಲ್ಲಿದ್ದ ಎಲ್ಲರಿಗೂ ಅವರಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಸ್ಪಷ್ಟವಾಗಿ ಅರ್ಥವಾಯಿತು. ಏಕಾಂತದಲ್ಲಿ ಅವರಿಬ್ಬರೂ ಮಾತನಾಡಿಕೊಳ್ಳಲಿ ಎಂದು ಡಾ. ಮೋಹನ್‌ ಎಲ್ಲರನ್ನೂ ಎಬ್ಬಿಸಿ ಹೊರಗೆ ಕರೆದುಕೊಂಡು ಹೊರಟ.

“ನನ್ನನ್ನು ಕ್ಷಮಿಸಿಬಿಡು….. ಮೊದಲಿನಿಂದಲೂ ನಾನು ನಿನಗೆ ನೆಮ್ಮದಿ ಕೊಡಲಿಲ್ಲ. ಈ ಹಾಳು ಜೀವ ಹೀಗೆ ಹೋಗಿಬಿಡಲಿ ಎಂದೇ ನಾನು ಈ ರೀತಿ ಮಾಡಿದೆ,” ರಾಜೇಶನ ಕೈ ಬಿಡಲಾರದೆ ಸಂಗೀತಾ ಬಿಕ್ಕಳಿಸಿದಳು. ಮೊದಲ ಬಾರಿಗೆ ಹೆಂಡತಿಯ ಸಾನ್ನಿಧ್ಯ ರಾಜೇಶನಿಗೆ ಸಹನೀಯವೆನಿಸಿತು. ಪಶ್ಚಾತ್ತಾಪದ ಪ್ರವಾಹದಲ್ಲಿ ಅವಳು ಕೊಚ್ಚಿಹೋಗಿದ್ದಳು.

“ನೀನೀಗ ಅದನ್ನೆಲ್ಲ ಮರೆತುಬಿಡು ಸಂಗೀ…. ನೀನು ಹುಷಾರಾಗಿ ಮೊದಲಿನಂತಾದರೆ ಅಷ್ಟೇ ಸಾಕು.”

ಗಂಡನ ಪ್ರಾಮಾಣಿಕ ನುಡಿಗಳು ಸಂಗೀತಾಳ ಮನಮುಟ್ಟಿತು. ಅವಳು ಗಂಡನ ಕೈಗಳನ್ನು ಮನಸಾರೆ ಕಣ್ಣಿಗೊತ್ತಿಕೊಂಡು ಬಿಕ್ಕಳಿಸಿದಳು.

ಅದಾದ ಸ್ವಲ್ಪ ಹೊತ್ತಿಗೆ ಸತೀಶ್‌ ಮತ್ತು ಶೀಲಾ ಗಾಬರಿಯಿಂದ ತಾಯಿಯನ್ನು ಹುಡುಕಿಕೊಂಡು ಬಂದರು. ಅವರಿಗೆ ಯಾರಿಂದಲೋ ವಿಷಯ ಗೊತ್ತಾಗಿ ನೇರವಾಗಿ ಆಸ್ಪತ್ರೆಗೆ ಧಾವಿಸಿದ್ದರು.

“ಅಮ್ಮ…. ಈಗ ಹೇಗಿದ್ದೀಯಾ?” ಓಡಿ ಬಂದ ಶೀಲಾ ತಾಯಿಯ ಕೈಗಳನ್ನು ಹಿಡಿದುಕೊಳ್ಳುತ್ತಾ ಕೇಳಿದಳು. ಅದಕ್ಕೆ ಸಂಗೀತಾ ತೋರಿದ ಪ್ರತಿಕ್ರಿಯೆ ಎಲ್ಲರಿಗೂ ಆಶ್ಚರ್ಯ ತರಿಸಿತು.

ಸಂಗೀತಾ ಮಗಳ ಕೈಗಳನ್ನು ಒದರಿ, ಕೋಪದಿಂದ ಗೋಡೆಯ ಕಡೆ ಮುಖ ತಿರುಗಿಸಿಕೊಂಡು ಮಲಗಿದಳು.

“ಸತೀಶ್‌…. ಶೀಲಾ…. ನೀವಿಬ್ಬರೂ ಅಮ್ಮನ ಜೊತೆ ಅವರಿಗೆ ಕೋಪ ಬರುವಂತೆ ಏನಾದರೂ ಮಾತನಾಡಿದಿರಾ? ಇವರೇಕೆ ನಿದ್ದೆ ಮಾತ್ರೆ ನುಂಗಿದರು ಎಂಬುದು ಎಲ್ಲರಿಗಿಂತ ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲ…..?” ಮೋಹನ್‌ ನೇರವಾಗಿ ಅವರನ್ನು ಪ್ರಶ್ನಿಸಿದ.

ಆಗ ಅಣ್ಣತಂಗಿ ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಆಗ ಶೀಲಾಳ ಕಣ್ಣೀರು ಥಟ್ಟನೆ ಚಿಮ್ಮಿ ತಾಯಿಯ ಕೈಗಳ ಮೇಲೆ ಬಿತ್ತು.

ಅಷ್ಟರಲ್ಲಿ ಸತೀಶನ ಮುಖದಲ್ಲಿ ಕೋಪ ಉಕ್ಕಿ ಬಂದಿತು. ಅವನು ತಂದೆಯತ್ತ ತಿರುಗಿ ಸಿಡುಕುವವನಂತೆ ಹೇಳಿದ, “ಅಪ್ಪ… ನಾವು ಅಮ್ಮನ ಜೊತೆ ಡಿಸ್ಕಸ್‌ ಮಾಡಿದ್ದೇನೋ ನಿಜ, ಆದರೆ ಅದಕ್ಕಾಗಿ ಅಮ್ಮ ಇಂಥ ಹುಚ್ಚಾಟಕ್ಕೆ ಕೈಹಾಕುವ ಅಗತ್ಯವೇನೂ ಇರಲಿಲ್ಲ ಬಿಡಿ….”

“ಏನಾಯ್ತು? ಅದನ್ನಾದರೂ ಸ್ಪಷ್ಟವಾಗಿ ಹೇಳಿ!” ರಾಜೇಶನ ದನಿಯಲ್ಲಿ ಕೋಪ ಅಡಗಿತ್ತು.

ಸತೀಶ್‌ ತಂಗಿಯನ್ನು ಕರೆದು ತನ್ನ ಹತ್ತಿರ ನಿಲ್ಲಿಸಿಕೊಳ್ಳುತ್ತಾ ಅವಳಿಗೆ ಅಭಯ ತುಂಬುವಂತೆ, ಹೆಗಲ ಮೇಲೆ ಕೈ ಇರಿಸಿ, “ಶೀಲಾ ಇವತ್ತು ನನ್ನ ಫ್ರೆಂಡ್‌ ರವಿಯನ್ನು ರೆಜಿಸ್ಟರ್ಡ್‌ ಮದುವೆ ಆದಳು,“ ಎಂದು ತಣ್ಣಗೆ ಹೇಳಿದ.

“ಏನಂದೆ?!” ರಾಜೇಶ್‌ ಮಗನ ಮೇಲೆ ಹೊಡೆಯುವವನಂತೆ ಕೈ ಎತ್ತಿದ.

“ರವಿ ಒಬ್ಬ ಒಳ್ಳೆಯ ಹುಡುಗ ಅಪ್ಪ. ಅವನಿಗೆ ಉಜ್ವಲ ಭವಿಷ್ಯವಿದೆ. ಅವನೀಗ ತಾನೇ ಬಿ.ಟೆಕ್‌ ಮುಗಿಸಿದ್ದಾನೆ. ನಾವಿಬ್ಬರೂ ಎಂ.ಟೆಕ್‌ ಮಾಡಲು ಅಮೆರಿಕಾ ಯೂನಿವರ್ಸಿಟಿಗೆ ಸೇರಬೇಕೆಂದಿದ್ದೇವೆ. ಅದಕ್ಕಾಗಿ ಅವನು ನನಗೆ ಬಹಳ ಸಹಾಯ ಮಾಡುತ್ತಿದ್ದಾನೆ….”

“ಅಂದರೆ…. ನೀನು ಅಮೆರಿಕಾಗೆ ಹೋಗಿ ಅಲ್ಲೇ ಎಂ.ಟೆಕ್‌ ಮುಗಿಸಿ ಕೆಲಸ ನೋಡಿಕೊಳ್ಳುವುದು ಅಂತ ನಿರ್ಧರಿಸಿಬಿಟ್ಟಿದ್ದೀಯ ಅವನ್ನು…..” ರಾಜೇಶನಿಗೆ ಮಗನ ಮಾತು ಬಹಳ ಇರಿಸುಮುರಿಸು ತರಿಸಿತ್ತು.

“ಅಪ್ಪ…. ನೀವು ಶಾಂತರಾಗಿ ನನ್ನ ಮಾತು ಕೇಳಿಸಿಕೊಳ್ಳಿ. ರವಿ ಶೀಲಾಳನ್ನು ಬಹಳ ಪ್ರೀತಿಸುತ್ತಾನೆ…. ಅಮೆರಿಕಾಗೆ ಹೋಗುವುದರಿಂದಲೇ ನನ್ನ ಕೆರಿಯರ್‌ಗೆ ಉತ್ತಮ ಭವಿಷ್ಯ ಮೂಡಲು ಸಾಧ್ಯ. ಇದು ನಮ್ಮಿಬ್ಬರ ಜೀವಮಾನದ ಪ್ರಶ್ನೆ…..”

“ನಿಮ್ಮ ಜೀವನದ ಇಂಥ ಒಂದು ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ನ ನನಗೆ ಕನಿಷ್ಠ ಒಂದು ಮಾತಾದರೂ ಹೇಳಬೇಕು ಎಂದೆನಿಸಲಿಲ್ಲವೇ? ಅಲ್ಲಮ್ಮ ಶೀಲಾ, ಡಿಗ್ರಿ ಸಹ ಮುಗಿದಿಲ್ಲ, ಆಗಲೇ ಮದುವೆಗೆ ಏನು ಅಸರವಾಗಿತ್ತು…. ಅದೂ ಇಷ್ಟು ಬೇಗ! ಹೋಗಲಿ, ಆ ಹುಡುಗನನ್ನು ಕರೆಸಿ ಮಾತನಾಡುವುದು ಏನೂ ಬೇಡ ಎಂಬಂತೆ ನೇರವಾಗಿ ಹೋಗಿ ರೆಜಿಸ್ಟರ್ಡ್‌ ಮದುವೆ ಆಗಿಬಿಡುವುದೇ? ನಿನ್ನ ಪಾಲಿಗೆ ತಾಯಿ ತಂದೆ ಇಬ್ಬರೂ ಸತ್ತುಹೋಗಿದ್ದಾರೆಯೇ?” ಅವನ ಮಾತುಗಳಲ್ಲಿ ಅಸಹಾಯಕತೆ ತುಂಬಿತ್ತು.

“ಸತೀಶ್‌, ನೀನಿಲ್ಲಿ ಎಂ.ಟೆಕ್‌ ಮಾಡಲು ಸಾಧ್ಯವಿರಲಿಲ್ಲವೇ? ಇಷ್ಟೆಲ್ಲ ಆದರೂ ಏನೂ ಹೇಳದೆ ಇರುವುದಕ್ಕೆ ನನ್ನನ್ನು ನಿಮ್ಮ ಶತ್ರು ಅಂದುಕೊಂಡಿದ್ದೀರಾ……?” ರಾಜೇಶ್‌ ಸ್ಪಷ್ಟವಾಗಿ ಅಳದೇ ಇದ್ದಿದ್ದೇ ಹೆಚ್ಚು.

“ಅದೆಲ್ಲ ಇರಲಿ, ನೀವಿಬ್ಬರೂ ಎಂದಾದರೂ ನಮ್ಮ ಆಸೆಗಳೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಾ?” ಸತೀಶ್‌ ಥಟ್ಟನೆ ಸಿಡುಕಿದ, “ಅಮ್ಮ ಅಂತೂ ಯಾವಾಗಲೂ ತನ್ನ ಮಾತೇ ನಡೆಯಬೇಕು ಎಂಬಂತೆ ಹಠ ಹಿಡಿಯುತ್ತಾರೆ. ಬೆಳಗ್ಗೆ ತಾನೇ ನಾವು ರಿಜಿಸ್ಟರ್ಡ್‌ ಮದುವೆ ವಿಷಯ ಹೇಳಿದೆವು. ಅದಕ್ಕೆ ನಾವು ಹೋದ ತಕ್ಷಣ ಆತ್ಮಹತ್ಯೆಯಂಥ ಘೋರ ಯತ್ನಕ್ಕೆ ಕೈಹಾಕುವುದೇ? ನಿಮಗೇನಾದರೂ ಹೇಳೋಣವೆಂದರೆ ನೀವು ನಿಮ್ಮ ಗೋಳನ್ನೇ ದೊಡ್ಡದು ಮಾಡಿಕೊಳ್ತೀರಿ. ನಮಗಾಗಿ ಏನೇನು ತ್ಯಾಗ ಮಾಡಿದ್ದೀರಿ ಎಂದೆಲ್ಲ ಹೇಳುತ್ತಾ ನಿಮ್ಮ ಗೋಳು ತೋಡಿಕೊಳ್ಳುವುದರಲ್ಲೇ ಆಗ್ಹೋಯ್ತು!”

ಮಗನ ಈ ಕಠೋರವಾದ, ನಿಷ್ಠೂರವಾದ ಮಾತುಗಳನ್ನು ಅರಗಿಸಿಕೊಳ್ಳಲಾರದೆ ರಾಜೇಶ್‌ ಕಕ್ಕಾಬಿಕ್ಕಿಯಾಗಿ ಮೋಹನ್‌ ಕಡೆ ನೋಡಿದ. ತಕ್ಷಣ ಮೋಹನ್‌ ಗೆಳೆಯನ ಹೆಗಲ ಮೇಲೆ ಸಹಾನುಭೂತಿಯಿಂದ ಕೈಯಿರಿಸಿದಾಗ ಅವನ ಸಹನೆಯ ಕಟ್ಟೆ ಸಡಿಲಗೊಂಡಿತು. ಅವನು ಮೋಹನನ ಹೆಗಲ ಮೇಲೆ ತಲೆ ಇರಿಸಿ ಬಿಕ್ಕಿಬಿಕ್ಕಿ ಅತ್ತುಬಿಟ್ಟ.

ಇದನ್ನೆಲ್ಲಾ ನೋಡಿ ಸಹಿಸದಾದ ಸಂಗೀತಾ ತಕ್ಷಣ ಮಕ್ಕಳತ್ತ ತಿರುಗಿ, “ನೀವಿಬ್ಬರೂ ಎಲ್ಲವನ್ನೂ ಮೀರಿ ನಿಂತಿದ್ದೀರಿ…. ಹೋಗಿ…. ನಿಮಗೆ ಬೇಕಾದ್ದನ್ನು ಮಾಡಿಕೊಳ್ಳಿ! ತಾಯಿ ತಂದೆ ಇಬ್ಬರೂ ನಿಮ್ಮ ಪಾಲಿಗೆ ಸತ್ತಂತೆಯೇ ಎಂದು ಸಾಧಿಸಿ ತೋರಿಸಿದ್ದೀರಿ, ಇಬ್ಬರೂ ಎಲ್ಲಾದರೂ ದೂರ ಹೊರಟುಹೋಗಿ…. ಇನ್ನೆಂದು ನಿಮ್ಮ ಮುಖ ತೋರಿಸಬೇಡಿ.

“ಛೀ…ಛೀ! ಎಂಥ ಸ್ವಾರ್ಥಿಗಳು ನೀವು…. ನಿಮ್ಮ ಭವಿಷ್ಯ ಚೆನ್ನಾಗಿರಲಿ, ಎಲ್ಲಾ ಆಸ್ತಿ ನಿಮಗೆ ಬರಲಿ ಎಂದು ಮೊದಲಿನಿಂದಲೂ ನನ್ನ ಗಂಡನೊಂದಿಗೆ ಜಗಳವಾಡುತ್ತಾ ನಾದಿನಿಯರು, ಅತ್ತೆಮಾವಂದಿರ ದೃಷ್ಟಿಯಲ್ಲೂ ಕೆಟ್ಟವಳಾದೆ. ಹೆತ್ತಾಗಿನಿಂದ ಇಲ್ಲಿಯವರೆಗೂ ನಿಮ್ಮ ಪರವಾಗಿ ಹೊಡೆದಾಡಿ, ಹೋರಾಡಿ ಸಾಕಿ ಸಲಹಿದ್ದಕ್ಕೆ ಕೊನೆಗಾಲಕ್ಕೆ ನಮಗೆ ನೀವು ಕೊಡುವ ಉಡುಗೊರೆ ಇದೇನಾ? ಇನ್ನು ಮುಂದೆ ನಿಮ್ಮಿಬ್ಬರ ಮುಖ ನೋಡಬಾರದೆಂದೇ ನಿರ್ಧರಿಸಿದ್ದೇನೆ. ನೀನು ಇವತ್ತೇ ಅಮೆರಿಕಾಗೆ ತೊಲಗಿಹೋಗು! ನೀನು ಅದ್ಯಾವನನ್ನೋ ಕಟ್ಟಿಕೊಂಡೆಯಲ್ಲ ಅವನೊಂದಿಗೆ ಹೊರಟುಹೋಗು…. ಈ ತಾಯಿ ತಂದೆ ಬದುಕಿದ್ದಾರಾ ಸತ್ತಿದ್ದಾರಾ ಅಂತ ನೋಡಲು ಬರಲೇಬೇಡಿ…. ಅಕಸ್ಮಾತ್‌ ಸತ್ತು ಹೋದರೆ ಕೊಳ್ಳಿ ಇಡಲಿಕ್ಕೆ ಖಂಡಿತಾ ಬರುವುದು ಬೇಡ!” ಅವಳು ಆವೇಶದಿಂದ ಹೇಳುತ್ತಿದ್ದಾಗ ಕೆಮ್ಮು ಒಂದೇ ಸಮನೆ ಹೆಚ್ಚಿತು.

ಮಗಳು ಶೀಲಾ ತಾಯಿಯ ಬೆನ್ನು ಸವರಲು ಬಾಗಿದಾಗ, ಸಂಗೀತಾ ಅವಳ ಕೈಯನ್ನು ದೂರ ತಳ್ಳಿದಳು. ಹತ್ತಿರ ಬಂದು ಕುಳಿತ ರಾಜೇಶ್‌ ಅವಳನ್ನು ಎದೆಗೊರಗಿಸಿಕೊಂಡು ಸಮಾಧಾನಪಡಿಸಿ, ನೀರು ಕುಡಿಸಿದ.ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ, “ಏನು ಮಾಡಲಿ…. ಇಷ್ಟು ದಿನ ನಿನ್ನನ್ನು ಸರಿಯಾಗಿ ಗಮನಿಸಿಕೊಳ್ಳದೆ ಒಂದೇ ಸಮ ಗೋಳುಹೊಯ್ದುಕೊಂಡೆ…. ಅದಕ್ಕೆ ದೇವರು ನನ್ನ ಮಕ್ಕಳನ್ನೇ ನನಗೆ ಶತ್ರುಗಳನ್ನಾಗಿಸಿದ. ದಯವಿಟ್ಟು ನನ್ನ ಕ್ಷಮಿಸಿಬಿಡು, ಅದನ್ನು ಕೇಳುವ ಯೋಗ್ಯತೆಯೂ ನನಗಿಲ್ಲ….” ಎಂದು ಅತ್ತಳು.

ರಾಜೇಶ ಅವಳನ್ನು ಸಮಾಧಾನಪಡಿಸುತ್ತಾ, “ಹಾಗೆಲ್ಲ ಹೇಳಬೇಡ ಸಂಗಿ, ನಿನ್ನ ಪಶ್ಚಾತ್ತಾಪ ನಿನ್ನೆಲ್ಲ ತಪ್ಪುಗಳನ್ನೂ ಕ್ಷಮಿಸುತ್ತದೆ. ಯಾವತ್ತಿದ್ದರೂ ನಿನಗಾಗಿ ನಾನು, ನನಗಾಗಿ ನೀನು ಎಂಬುದನ್ನು ಈಗಲಾದರೂ ಗುರುತಿಸಿದೆಯಲ್ಲ….. ಅಷ್ಟೇ ಸಾಕು, ನಮ್ಮ ಪ್ರೌಢ ಜೀವನ ನಮ್ಮಿಬ್ಬರ ಪಾಲಿಗೂ ಹೊಸ ಜೀವನ ಆಗಲಿದೆ,” ಎಂದು ಮಲಗಿಸಿದ.

ಹಿರಿಯರ ಮುಂದೆ ಇನ್ನೇನೂ ಮಾತನಾಡಲಾಗದ ಸತೀಶ್‌ ಶೀಲಾ ತಮ್ಮ ಗುರಿ ಅರಸಿ ಹೊರಟರು. ಅವರನ್ನು ಕಳುಹಿಸಿದ ಡಾ. ಮೋಹನ್‌ ಮತ್ತೊಮ್ಮೆ ಸಂಗೀತಾಳ ಆರೋಗ್ಯ ಪರೀಕ್ಷಿಸಿ, ಅವಳ ಬಿ.ಪಿ. ಮತ್ತಿತರ ಸ್ಥಿತಿಗಳು ಸರಿಯಾಗಿವೆ ಎಂದು ರಾಜೇಶನಿಗೆ ಧೈರ್ಯ ಹೇಳಿ, ಅವಳ ತಾಯಿತಂದೆಯರನ್ನು ಅಲ್ಲಿಂದ ಹೊರಡಿಸಿದ.

ರಾಜೇಶ್‌ ಡಿಸ್‌ಚಾರ್ಜ್‌ ವರದಿ ಪಡೆಯಲು, ಫೀಸ್‌ ಕಟ್ಟಲು ಆಫೀಸ್‌ ರೂಮಿನತ್ತ ನಡೆದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ