ಎಂದಿನಂತೆ ಇಂದೂ 5 ಗಂಟೆಗೆ ಅಲಾರಂ ಹೊಡೆದು ಸುನಂದಾಳನ್ನು ಎಚ್ಚರಿಸಿತು. 6 ಗಂಟೆಗೆ ಕರೆಂಟ್ ಹೋಗುತ್ತದೆ. ಆದ್ದರಿಂದ ಅವಳು 1 ಗಂಟೆ ಮುಂಚೆ ಎದ್ದು ಮಕ್ಕಳಿಗೆ ಟಿಫಿನ್ ಮಾಡಬೇಕು, ಗೀಸರ್ ಹಾಕಿ ತಾನು ಸ್ನಾನ ಮಾಡಿ ಮಕ್ಕಳಿಗೆ ಬಿಸಿ ನೀರು ತೋಡಿಡಬೇಕು. ಕಸದ ಡಬ್ಬಿ ಆಚೆ ಇಟ್ಟು ಮುಂದಿನ ಬಾಗಿಲಿನ ಬೀಗ ತೆರೆಯುವುದು ಮತ್ತೆ ಮಲಗುವ ಮೊದಲು ಬಾಗಿಲಿಗೆ ಬೀಗ ಹಾಕುವುದು ಇತ್ಯಾದಿ ಬಹಳಷ್ಟು ಕೆಲಸಗಳಿರುತ್ತವೆ. ಅವಳಲ್ಲಿ ವಿಚಿತ್ರ ಸಿಡಿಮಿಡಿ ಸ್ವಭಾವ ಮನೆ ಮಾಡಿತ್ತು. `ತಾನು ಮನೆಯಲ್ಲಿ ಕೆಲಸದವಳಾಗಿಬಿಟ್ಟಿದ್ದೇನೆ,’ ಎಂಬ ಗಾಢ ಆಲೋಚನೆ ಅವಳ ಮನದಲ್ಲಿ ಮನೆ ಮಾಡಿತ್ತು.
ಗೀಸರ್ ಚಾಲೂ ಮಾಡಿ ಅವಳು ಬ್ರಶ್ ಮಾಡಿದಳು. ನಂತರ ಕಾಫಿ ಮಾಡಿಕೊಂಡು ಕುಡಿದಳು. ಕಸದ ಬಕೆಟ್ ಹೊರಗಿಟ್ಟಳು. ನಂತರ ಮಕ್ಕಳು ರವಿ ಹಾಗೂ ಶೃತಿಯನ್ನು ಎಬ್ಬಿಸಲು ಹೋದಳು. ಅವರ ರೂಮಿನ ಬಳಿ ಹೋಗುತ್ತಲೇ ಬಡಬಡಿಸತೊಡಗಿದಳು,
“ಇವರನ್ನು ಎಬ್ಬಿಸೋಕೆ ನನಗೆ 15-20 ನಿಮಿಷಗಳು ಬೇಕು. ಇವರು ಬಹಳ ಸೋಂಬೇರಿಗಳು. ದಿನ ಇವರ ಬಳಿ ಹೆಣಗೋದೇ ಆಯ್ತು ನನಗೆ.”
ಹೀಗೆ ದಿನ ಅವಳ ಬಡಬಡಿಕೆ ನಡೆದೇ ಇರುತ್ತಿತ್ತು. ಒಮ್ಮೊಮ್ಮೆ ಅವರನ್ನು ಹೊಡೆಯುವವರೆಗೂ ಮುಂದುವರಿಯುತ್ತಿತ್ತು. ಅವರು ಅಳುವ ಸದ್ದು ಕೇಳಿ ಗಂಡ ಸುಮಂತ್ ಎದ್ದು ಬಂದು, “ಯಾಕೆ ಬೆಳಗ್ಗೇನೇ ಹೀಗ್ಮಾಡ್ತೀ? ಮನೇನ ತಲೆ ಮೇಲಿಟ್ಕೊಂಡಿರೋ ಹಾಗೆ ಆಡ್ತಿದ್ದೀಯ. ಕೂಗಾಡದೇ ಕೆಲಸ ಮಾಡೋಕೆ ಆಗೋದೇ ಇಲ್ವಾ ನಿನಗೆ?” ಎಂದು ರೇಗಾಡುತ್ತಿದ್ದ.
ಅದನ್ನು ನೆನೆಸಿಕೊಂಡು ಸುನಂದಾಳ ಕಣ್ಣುಗಳಲ್ಲಿ ನೀರು ತುಂಬಿತು. `ಎಲ್ಲಾ ನನ್ನದೇ ತಪ್ಪು ಅಂತಾರಲ್ಲ. ಎಂಥ ಗಂಡ ಸಿಕ್ಕಿದ್ದಾರೆ ನನಗೆ,’ ಎಂದುಕೊಂಡಳು.
ಶಾಲೆಗೆ ಹೋಗಲು ಶೃತಿ ಕೊಂಚ ಬೇಗ ರೆಡಿಯಾಗುತ್ತಿದ್ದಳು. ಆದರೆ ರವಿ ಬಹಳ ತೊಂದರೆ ಕೊಡುತ್ತಿದ್ದ. ಅವರನ್ನು ರೆಡಿ ಮಾಡಿದ ನಂತರ ಅವರ ಊಟ ಪ್ಯಾಕ್ ಮಾಡುವಾಗ, ಇಬ್ಬರನ್ನೂ ಹಿಡಿದು ಹೊರಗಿರುವ ಆಟೋದಲ್ಲಿ ತಳ್ಳಿದರೆ 6 ಗಂಟೆಗಳವರೆಗೆ ಇವರ ಕಾಟ ಇರದು ಎಂದುಕೊಂಡಳು. ಆದರೆ ಹಾಗಾಗುತ್ತದೆಯೇ?
ಮಕ್ಕಳು ಸ್ಕೂಲಿಗೆ ಹೊರಟ ನಂತರ ಅವಳು ಮನೆಯೊಳಗೆ ಬಂದಳು. ಅತ್ತೆಯ ನರಳಿಕೆ ಕೇಳಿಬರುತ್ತಿತ್ತು. “ಹ್ಞೂಂ, ಮಕ್ಕಳು ಹೋದರು. ಆದರೆ ಮಕ್ಕಳ ತಂದೆ ಹಾಗೂ ತಂದೆಯ ತಾಯಿ ಇಲ್ಲೇ ಇದ್ದಾರೆ. ಅತ್ತೆಯಂತೂ ನನ್ನ ಜೀವ ತೊಗೊಳ್ಳೋಕೇ ಇಲ್ಲಿದ್ದಾರೆ ಅನಿಸುತ್ತೆ. ನನ್ನ ಗಂಡನಂತೂ ಆಜ್ಞಾಪಾಲಕ ಶ್ರವಣ ಕುಮಾರನಂತಿದ್ದಾರೆ. ಎಲ್ಲಾ ತೋರಿಕೆ ತಾನೇ ಸೇವೆ ಮಾಡಲಿ, ನನ್ನ ಕಷ್ಟ ಅರ್ಥವಾಗುತ್ತೆ. ತನ್ನ ತಾಯಿಗೆ ಇದುವರೆಗೂ 1 ಕಪ್ ಕಾಫಿ ಮಾಡಿಕೊಟ್ಟಿಲ್ಲ. ಬರೀ ಆರ್ಡರ್ ಮಾಡ್ತಾರೆ. `ನೋಡು ಸುನಂದಾ, ಅಮ್ಮನಿಗೇನು ಬೇಕೋ ತಂದು ಕೊಡು ಅಂತಾರೆ, ‘ಹ್ಞೂಂ.’ ‘ಅತ್ತೆಗೆ ಕಾಯಿಲೆಗಳೊಂದಿಗೇ ಸ್ನೇಹ. ಒಮ್ಮೆ ಜ್ವರ ಬಂದರೆ, ಇನ್ನೊಮ್ಮೆ ಕೆಮ್ಮು ನೆಗಡಿ. ಮತ್ತೊಮ್ಮೆ ಶುಗರ್ ಹೆಚ್ಚಾದರೆ, ಕೆಲವು ಸಲ ಕಾಲು ನೋವು ಹೆಚ್ಚಾಗುತ್ತದೆ. ಆದರೂ ತಮ್ಮ ಮಗನಿಗೆ ತೋರಿಸಿಕೊಳ್ಳಲು ತರಕಾರಿ ಕೊಡು, ಕುಳಿತಲ್ಲೇ ಹೆಚ್ಚಿ ಕೊಡ್ತೀನಿ ಎನ್ನುತ್ತಾರೆ. ಆದರೆ ಎಷ್ಟು ಹೊತ್ತು ಕೂತಿರ್ತಾರೆ? ಸ್ವಲ್ಪ ಹೊತ್ತಿಗೇ ಗೋಡೆಗೆ ಒರಗಿಕೊಂಡು ಹೇಗೆ ಕೂರುತ್ತಾರೆಂದರೆ ಈಗಲೇ ಸತ್ತೇಹೋಗುತ್ತಾರೇನೋ ಎಂಬಂತೆ.
ಸುಮಂತ್ ಕೂಡಾ ಸಿದ್ಧರಾಗುತ್ತಾ ಹೇಳುತ್ತಾರೆ, “ಅಮ್ಮನನ್ನು ಕಂಡರೆ ನಿನಗೆ ಮೊದಲಿನಿಂದಲೂ ಆಗುವುದಿಲ್ಲ. ಅವರಿಗೆ ಕೆಲಸ ಯಾಕೆ ಹೇಳ್ತೀಯಾ?”
ಆಗ ಅವಳ ಬಡಬಡಿಕೆ ನಿಂತು ಕಿರುಚುವುದು ಶುರುವಾಗುತ್ತೆ, “ನಾನು ಹೇಳಿದ್ನಾ ಅವರಿಗೆ ಕೆಲಸ ಮಾಡೂಂತ? 4 ಬೆಂಡೆಕಾಯಿ ಕತ್ತರಿಸಲಿಲ್ಲ ನಿಮಗೆ ಅಯ್ಯೋ ಅನಿಸಿಬಿಡ್ತು. ನನಗೆ ದಿನ ಬೆಳಗಿನ ಜಾವದಿಂದಲೇ ಕೆಲಸ ಶುರುವಾಗುತ್ತೆ. ಮಧ್ಯಾಹ್ನ ಆಗುವಷ್ಟರಲ್ಲಿ ಬಿದ್ದು ಹೋಗುವಂತಾಗುತ್ತೆ. ಅದು ನಿಮಗೆ ಕಾಣಿಸೋದಿಲ್ವಾ? ನನ್ನನ್ನು ಮನೆ ಕೆಲಸದವಳನ್ನಾಗಿ ಮಾಡಿಬಿಟ್ಟಿದ್ದೀರಿ. ಒಂದಿನ ನಾನು ಸತ್ತೋದ್ರೆ ಆಗ ಗೊತ್ತಾಗುತ್ತೆ ನಿಮಗೆಲ್ಲಾ.”
ಕಿರುಚುತ್ತಾ ಕಿರುಚುತ್ತಾ ಅಳು ಶುರು. ಸುಮಂತ್‌ಗೂ ಇದು ಅಭ್ಯಾಸವಾಗಿದೆ. ಅವರು ತೆಪ್ಪಗೆ ಟಿಫಿನ್ ತಿಂದು ಹೊರಡುತ್ತಾರೆ. ಏಕೆಂದರೆ ಅವಳಿಗೇನಾದರೂ ಉತ್ತರ ಕೊಡೋಕೆ ಹೋದರೆ ಆಫೀಸಿಗೆ ಸಮಯಕ್ಕೆ ಸರಿಯಾಗಿ ಹೋಗಲಾಗುವುದಿಲ್ಲ.
ಸುನಂದಾಗೆ ಯೋಚಿಸಲು ಟೈಂ ಎಲ್ಲಿತ್ತು? ಸುಮಂತ್ ಉತ್ತರ ಕೊಡದೇ ಹೊರಟುಬಿಟ್ಟರೆ ಎಲ್ಲ ಕೋಪವನ್ನೂ ಅತ್ತೆಯ ಮೇಲೆ ತೋರಿಸುತ್ತಿದ್ದಳು. ಪಾಪ ಅವರ ಅತ್ತೆಯಾಗಿದ್ದರೂ ಏನೂ ಜವಾಬು ಕೊಡುತ್ತಿರಲಿಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದರು. ಅವರು ಮಾತಾಡದಿದ್ದರೂ ಸುನಂದಾಳ ಕೋಪ ಆರುತ್ತಿರಲಿಲ್ಲ.
`ಎಲ್ಲರೂ ನನ್ನನ್ನು ಹುಚ್ಚಿ ಎಂದುಕೊಳ್ಳುತ್ತಾರೆ. ಬಿಟ್ಟಿ ಕೆಲಸ ಮಾಡೋ ಆವಳು ಸಿಕ್ಕಿಬಿಟ್ಟಿದ್ದೀನಿ ಇವರುಗಳಿಗೆ. ನಾನೆಷ್ಟೇ ಕೂಗಾಡಿದರೂ ಎಲ್ಲರ ಕೆಲಸ ಮಾಡ್ತಿದ್ದೀನಿ. ಯಾವತ್ತಾದ್ರೂ ಒಂದಿನ ನಾನು ಸತ್ತೋದ್ರೆ ಇವರಿಗೆಲ್ಲಾ ನನ್ನ ಬೆಲೆ ಗೊತ್ತಾಗುತ್ತೆ.’
ಅತ್ತೆಯ ನಂತರ ಕೆಲಸದವಳ ಸರದಿ. ಅವಳ ಹೆಸರು ಸುಮಾ. 2-3 ಮನೆಗಳಲ್ಲಿ ಅವಳು ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಳು. ಆದರೆ ಅವಳ ಸ್ಟೈಲ್ ನೋಡಿ ಸುನಂದಾಗೆ ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತಿತ್ತು. ಕೂದಲನ್ನು ಚೆನ್ನಾಗಿ ಬಾಚಿಕೊಂಡು, ಹಣೆಯ ಮೇಲೆ ಗುಂಡಗಿನ ಬಿಂದಿ, ಬೈತಲೆಯ ಮೇಲೆ ಸಿಂಧೂರ, ಕೈಗಳಲ್ಲಿ ಬಳೆಗಳು, ಅಗ್ಗವಾಗಿದ್ದರೂ ಸ್ವಚ್ಛವಾಗಿ ಒಗೆದಿದ್ದ ಸೀರೆಯುಟ್ಟು, ಮ್ಯಾಚಿಂಗ್ ಬ್ಲೌಸ್ ತೊಡುತ್ತಿದ್ದಳು. ಸುನಂದಾ ಮನದಲ್ಲೇ ಕುದಿಯುತ್ತಿದ್ದಳು. ಹ್ಞೂಂ, ಇವಳ ದೌವಲತ್ತು ನೋಡು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ. ಮಹಾರಾಣಿ ಅಂದ್ಕೊಂಡುಬಿಟ್ಟಿದ್ದಾಳೆ ತನ್ನನ್ನು. ಅವಳು ಬಡಬಡಿಸುತ್ತಲೇ ಕನ್ನಡಿಯ ಮುಂದೆ ನಿಂತು ತನ್ನ ಸೌಂದರ್ಯ ನೋಡಿಕೊಳ್ಳುವಾಗ ಅವಳಿಗೇ ಬೇಸರವಾಗುತ್ತಿತ್ತು. ಕೆದರಿದ ಕೂದಲು, ದಪ್ಪನೆಯ ಸೊಂಟ, ನಿಸ್ತೇಜ ಕಣ್ಣುಗಳು, ಅಸ್ತವ್ಯಸ್ತ ಸೀರೆ. ಕೆಲಸದವಳಿಗಿಂತ ಕಡೆಯಾಗಿದ್ದ ತನ್ನ ಸ್ಥಿತಿ ಕಂಡು ಅವಳ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ತನ್ನನ್ನು ಅಪ್‌ಡೇಟ್ ಮಾಡಿಕೊಳ್ಳಬೇಕೆಂದುಕೊಂಡರೂ ಹೇಗೆ ಸಾಧ್ಯ? ಎರಡು ಎರಡೂವರೆ ಗಂಟೆಯ ಹೊತ್ತಿಗೆ ಕೆಲಸ ಮುಗಿಯುತ್ತದೆ. 3 ಗಂಟೆಗೆ ತುಂಟ ಮಕ್ಕಳು ಬಂದುಬಿಡುತ್ತಾರೆ. ಅವರ ಕೈಕಾಲು ತೊಳೆದು ಊಟ ತಿನ್ನಿಸಬೇಕು. ಏಕೆಂದರೆ 4 ಗಂಟೆಗೆ ಅವರ ಟ್ಯೂಷನ್ ಟೀಚರ್ ಬಂದುಬಿಡುತ್ತಾರೆ. ಮತ್ತೆ ಸಂಜೆಯ ಕಾಫಿ, ರಾತ್ರಿಯ ಊಟ ಮತ್ತು ಮರುದಿನಕ್ಕೆ ಮಕ್ಕಳ ಯೂನಿಫಾರಂ ಇಸ್ತ್ರಿ ಮಾಡುವುದು, ಬ್ಯಾಗ್, ಸಾಕ್ಸ್, ಶೂಗಳನ್ನು ಸಿದ್ಧಪಡಿಸುವುದು. ಇದರ ಜೊತೆಗೆ ಮನೆಯ ಇತರ ಬಟ್ಟೆಗಳನ್ನು ಧೋಬಿಗೆ ಕೊಡುವುದು, ತರುವುದು, ಹಾಲು ತರುವುದು, ಅತ್ತೆಗೆ ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ಕೊಡುವುದು, ಕರೆಂಟ್ ಬಿಲ್, ಫೋನ್ ಬಿಲ್, ಅಂಗಡಿಯಿಂದ ಸಾಮಾನುಗಳನ್ನು ತರುವುದು, ಅತಿಥಿಗಳ ಉಪಚಾರ…. ಉಫ್ ಇದೂ ಒಂದು ಬದುಕಾ? ಹೀಗೆ ಯೋಚಿಸುತ್ತಿರುವಾಗಲೇ ಗಾಯಕ್ಕೆ ಉಪ್ಪು ಸವರಿದಂತೆ ಅಂದು ಕೆಲಸದವಳು ಸುನಂದಾಗೆ, “ಅಮ್ಮಾವ್ರೆ ಇನ್ನೂ ಸ್ನಾನ ಮಾಡಿಲ್ವಾ? ನಡೀರಿ ಮೊದಲು ಸ್ನಾನ ಮಾಡಿ. ನಾನು ಕೆಲಸ ನೋಡ್ಕೋತೀನಿ,” ಎಂದಳು. ಸುನಂದಾಗೆ ಬಹಳ ಮುಜುಗರವಾಯಿತು.
ದಿನವಿಡೀ ಬಡಬಡಿಸುವ ಸುನಂದಾಳ ಕಂಠ ತುಂಬಿ ಬಂದಿತು. ದಿನ ಬೆಳಗ್ಗೆ ಐದೂವರೆಗೆ ಸ್ನಾನ ಮಾಡುವ ನಾನು ಇವಳಿಗೆ ಸ್ನಾನ ಮಾಡದವಳಂತೆ ಕಾಣಿಸಿದ್ದೀನಿ. ನನ್ನ ಪರಿಸ್ಥಿತಿ ಹೇಗಾಯ್ತು ನೋಡಿ. ಸುಮಾಗೆ 2 ಬಿಗಿಯುಷ್ಟು ಕೋಪ ಬಂತು
ಅವಳಿಗೆ. ಅವಳ ಮುಖ ಪರಚಿ ಚೆನ್ನಾಗಿ ಬೈಯೋಣವೆಂದುಕೊಂಡಳು. ಆದರೆ ಅವಳ ಬಾಯಿಂದ ಸ್ವರವೇ ಹೊರಡಲಿಲ್ಲ. ಅಸಹಾಯಕತೆಯಿಂದ ಸುಮಾಳತ್ತ ನೋಡಿ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿ ಜೋರಾಗಿ ಅತ್ತಳು. ಅಳುತ್ತಲೇ ತನ್ನ ಗೆಳತಿಗೆ ಫೋನ್ ಮಾಡಿದಳು. ಆದರೆ ಏನೂ ಹೇಳಲಿಲ್ಲ.
ಮಾಲಿನಿ ಫೋನ್‌ನಲ್ಲಿ ಅವಳ ಅಳು ಕೇಳಿ ಗಾಬರಿಯಾದಳು, “ಏನಾಯ್ತೆ? ಏನೂ ಮಾತಾಡ್ತಾ ಇಲ್ಲ.”
ಏನೂ ಉತ್ತರ ಸಿಗದಿದ್ದಾಗ, “ಆಯ್ತು, ನಾನು ಬರ್ತೀನಿ. ನೀನು ಅಳಬೇಡ,” ಎಂದು ಮಾಲಿನಿ ಫೋನ್ ಇಟ್ಟಳು.
ಮಾಲಿನಿ ಸುನಂದಾಳ ಸ್ನೇಹಿತೆಯಾಗಿದ್ದರೂ ಅವಳ ಸ್ವಭಾವ ಸುನಂದಾಗೆ ವಿರುದ್ಧವಾಗಿತ್ತು. ಯಾವಾಗಲೂ ನಗುನಗುತ್ತಿರುವುದು ಅವಳ ಸ್ವಭಾವವಾಗಿತ್ತು. ತೆಳ್ಳಗೆ ಬಳುಕುವ ಶರೀರದ ಮಾಲಿನಿಯ ಕುಟುಂಬ ಸುನಂದಳಂತೆಯೇ ಇತ್ತು. ಗಂಡ, 2 ಮಕ್ಕಳು, ಅತ್ತೆ, ಮಾವ ಒಬ್ಬ ಭಾವ ಮೈದ. ಮಧ್ಯಮ ವರ್ಗದ ಕುಟುಂಬ. ದಿನವಿಡೀ ತಮ್ಮ ಕುಟುಂಬದ ಯೋಗಕ್ಷೇಮ ಮತ್ತು ಮನೆಯ ಕೆಲಸಗಳೆಲ್ಲ ಮುಗಿಸಿದ ನಂತರ ಅವಳು ಪೇಂಟಿಂಗ್ ಮಾಡುತ್ತಾ ತನ್ನ ಹವ್ಯಾಸ ಮುಂದುವರೆಸಿದ್ದಳು. ಬದುಕು ಸಂತಸದಿಂದ ಕಳೆಯುತ್ತಿತ್ತು.
ಸುನಂದಾಳ ಅಳು ಕೇಳಿ ಗಾಬರಿಕೊಂಡ ಮಾಲಿನಿ ತನ್ನೆಲ್ಲೇ ಕೆಲಸಗಳನ್ನು ಬಿಟ್ಟು ಅವಳನ್ನು ಕಾಣಲು ಓಡಿಬಂದಳು. ಬಂದು ಅವಳ ಕಣ್ಣೊರೆಸಿ ನೀರು ಕುಡಿಸಿದಳು. ನಂತರ, “ಏನಾಯ್ತು ಹೇಳೇ?” ಎಂದು ಕೇಳಿದಳು.
ಸುನಂದಾ ಮತ್ತೆ ಅಳತೊಡಗಿದಳು. ಅಳುತ್ತಲೇ, “ಏನು ಹೇಳ್ಲಿ ಮಾಲಿನಿ. ಇವತ್ತಂತೂ ಮಿತಿ ಮೀರಿತು. ನಮ್ಮನೆ ಕೆಲಸದವಳೂ ಆಡಿಕೊಳ್ಳೋ ಹಾಗಾಯ್ತು. ಇಡೀ ದಿನ ಕೆಲಸದವಳ ಹಾಗೆ ಕೆಲಸ ಮಾಡ್ತಿರ್ತೀನಿ. ಅದಕ್ಕೆ ಹಾಗೆ ಕಾಣ್ತೀನಿ. ಇವರನ್ನು ಕಟ್ಕೊಂಡು ಈ ಮನೆಗೆ ಬಂದಮೇಲೆ ನನ್ನ ಜೀವನ ಹಾಳಾಯ್ತು. ಸುಮಂತ್ ನನ್ನನ್ನು ಕೆಲಸದವಳನ್ನಾಗಿ ಮಾಡಿಬಿಟ್ರು. ನನಗೇನು ಬೇಕು ಅಂತ ಕೇಳೋರು ಯಾರೂ ಇಲ್ಲ. ನನ್ನ ಬಗ್ಗೆ ಚಿಂತೆ ಮಾಡೋರೂ ಯಾರೂ ಇಲ್ಲ. ನಾನು ಸತ್ಮೇಲೇ ಇವರಿಗೆಲ್ಲಾ ಬುದ್ಧಿ ಬರೋದು,” ಎಂದಳು.
ಮಾಲಿನಿಗೆ ಅವಳ ಬಾಲಿಶ ಮಾತುಗಳನ್ನು ಕೇಳಿ ಕೋಪ ಬಂತು. ನಗು ಬಂತು. ಅವಳು ನಗು ತಡೆದುಕೊಂಡು, “ಆಯ್ತು, ಒಂದುವೇಳೆ ಸುಮಂತ್ ಇಡೀ ದಿನ ನೀನು ಏನೂ ಮಾಡ್ಬೇಡ. ನಿನಗಿಷ್ಟವಾದ ಕೆಲಸ ಮಾಡೂಂದ್ರೆ ಏನು ಮಾಡ್ತೀಯಾ?” ಎಂದು ಕೇಳಿದಳು.
“ಯಾಕೆ ನೀನೂ ತಮಾಷೆ ಮಾಡ್ತಿದ್ದೀಯ ಮಾಲಿನಿ?” ಸುನಂದಾ ಅಳುವ ಧ್ವನಿಯಲ್ಲಿ ಕೇಳಿದಳು.
“ನಾನು ಕೇಳಿದ್ದಕ್ಕೆ ಉತ್ತರ ಕೊಡು. ನಿನ್ನ ಮನಸ್ಸು ಸಂತೋಷವಾಗಿದ್ದು ನೆಮ್ಮದಿ ಹಾಗೂ ಶಾಂತಿ ಸಿಗಬೇಕಾದರೆ ನೀನು ಏನು ಮಾಡ್ತೀಯಾ?”
“ನೆಮ್ಮದಿ, ಶಾಂತಿ ನನ್ನೊಂದಿಗೆ ಇರಬೇಕಿದ್ರೆ ದಿನವಿಡೀ ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಪಿ.ಬಿ. ಶ್ರೀನಿವಾಸ್, ಸಿ. ಅಶ್ವಥ್ ಮುಂತಾದವರ ಹಾಡುಗಳನ್ನು ಕೇಳ್ತಾ ಇರ್ತೀನಿ. ಸಂಗೀತ ಅಂದ್ರೆ ನನಗೆ ಬಹಳಾ ಇಷ್ಟ.”
“ಅಂದ್ರೆ ಸುಮಂತ್ ನಿನಗೆ ಒಂದು ಮ್ಯೂಸಿಕ್ ಸಿಸ್ಟಂ ಕೂಡ ತಂದುಕೊಡೋದಿಲ್ವಾ?” ಮಾಲಿನಿ ಹುಸಿಗೋಪದಿಂದ ಕೇಳಿದಳು.
“ಇಲ್ಲ ಇಲ್ಲ. ಮನೆಯಲ್ಲಿ ಒಳ್ಳೆಯ ಆಡಿಯೋ ಸಿಸ್ಟಂ ಇದೆ,” ಸುನಂದಾ ಹೇಳಿದಳು.
“ಅದನ್ನೆಲ್ಲ ಅಟ್ಟದ ಮೇಲಿಟ್ಟಿದ್ದೀಯಾ? ನಾನಂತೂ ಒಂದು ದಿನ ನೋಡಲಿಲ್ಲ.”
“ಕೇಳೋಕೆ ಟೈಮೆಲ್ಲಿದೆ? ಅದಕ್ಕೇ ಅಟ್ಟದ ಮೇಲಿಟ್ಟಿದ್ದೀನಿ.”
“ಎಲ್ಲಿದೆ ಹೇಳು. ತೆಕ್ಕೊಡ್ತೀನಿ,” ಮಾಲಿನಿ ಎದ್ದು ನಿಂತಳು.
“ಯಾಕೆ ಸುಮ್ನೆ ನನ್ನ ಕೆಲಸ ಹೆಚ್ಚಿಸ್ತೀಯಾ? ಅದರ ಮೇಲೆ ಎಷ್ಟು ಧೂಳು ಕೂತಿದ್ಯೋ?” ಸುನಂದಾ ಹೇಳಿದಳು.
“ಸರಿ ಹಾಗಿದ್ರೆ. ನೀನು ಕೂತ್ಕೊಂಡು ಅಳು. ನಾನು ಮನೆಗೆ ಹೋಗ್ತೀನಿ,” ಮಾಲಿನಿ ಹೊರಡಲು ಎದ್ದಳು.
“ಸರಿ. ನಡಿ ತೆಗೋಣ,” ಸುನಂದಾ ಅವಳನ್ನು ತಡೆಯುತ್ತಾ ಹೇಳಿದಳು.
ಇಬ್ಬರೂ ಸೇರಿ ಅಟ್ಟದ ಮೇಲಿಂದ ಆಡಿಯೋ ಸಿಸ್ಟಂ ಇಳಿಸಿದರು. ಧೂಳು ತುಂಬಿದ ಒಂದು ಬಾಕ್ಸ್ ನಿಂದ ಸಿ.ಡಿ. ಮತ್ತು ಕ್ಯಾಸೆಟ್‌ಗಳನ್ನು ತೆಗೆದರು. ಅದನ್ನು ಸ್ವಚ್ಛಗೊಳಿಸಿದ ನಂತರ ಮಾಲಿನಿ ಡೈನಿಂಗ್ ರೂಮ್ ನಲ್ಲಿ ಫ್ರಿಜ್ ಮೇಲಿಟ್ಟು ಅದರಲ್ಲಿ ಸಿ. ಅಶ್ವಥ್‌ರ ಕ್ಯಾಸೆಟ್ ಹಾಕುತ್ತಾ ಸುನಂದಾಗೆ ಹೇಳಿದಳು.
”ನೀನು ಹಾಡು ಕೇಳಿಕೊಂಡು ಕೂತ್ಕೋ. ನಾನು ಕಾಫಿ ತರ್ತೀನಿ.” ಮಾಲಿನಿ ಕಾಫಿ ಮಾಡಿ ಬಿಸ್ಕೆಟ್ ಜೊತೆ ತಂದು ಸುನಂದಾಗೆ 1 ಕಪ್ ಕೊಟ್ಟು ತಾನೂ 1 ಕಪ್ ತೆಗೆದುಕೊಂಡಳು.
“ಸುನಂದಾ, ನಾನು ಕೆಲವು ಪ್ರಶ್ನೆಗಳನ್ನು ಕೇಳ್ತೀನಿ. ಉತ್ತರ ಕೊಡ್ತೀಯಾ?”
“ಕೇಳು. ನಿನ್ನ ಹತ್ತಿರ ಮುಚ್ಚುಮರೆ ಏನು?”
“ನಿನಗಿಷ್ಟವಾದ ಹಾಡುಗಳನ್ನು ಕೇಳೋಕೆ ಸುಮಂತ್ ಅಡ್ಡಿಪಡಿಸ್ತಾರಾ?”
“ಛೇ, ಅವರೇ ಈ ಆಡಿಯೋ ಸಿಸ್ಟಂನ ಮದ್ವೆ ಆದಮೇಲೆ ನನ್ನ ಮೊದಲ ಬರ್ಥ್‌ಡೇಗೆ ಗಿಫ್ಟ್ ಮಾಡಿದ್ದು.”
“ಸುಮಂತ್ ಯಾವತ್ತಾದ್ರೂ ಒಳ್ಳೆ ಸೀರೆ ಅಥವಾ ಇಷ್ಟವಾದ ಡ್ರೆಸ್ ತಗೊಳ್ಳೋಕೆ ಅಡ್ಡಿ ಪಡಿಸ್ತಾರಾ?”
“ಇಲ್ಲ.”
“ಡ್ರಾಯಿಂಗ್ ರೂಮ್ ನಲ್ಲಿ ಹಾಕಿರೋ ಪರದೆಗಳು ಖಂಡಿತ ಸುಮಂತ್ ಸೆಲೆಕ್ಷನ್ ಅಲ್ವಾ?”
“ಇಲ್ಲ. ಸುಮಂತ್‌ಗೆ ಅದಕ್ಕೆಲ್ಲಾ ಪುರಸೊತ್ತೇ ಇಲ್ಲ. ಬಿಲ್‌ಗೆ ಹಣ ಕೊಡೋದಷ್ಟೇ ಅವರ ಕೆಲಸ. ಬೆಡ್‌ಶೀಟ್, ದಿಂಬಿನ ಕವರ್, ಪರದೆಗಳು, ಗೋಡೆಗಳ ಬಣ್ಣ ಎಲ್ಲವೂ ನನ್ನ ಸೆಲೆಕ್ಷನ್ನೇ.”
“ನಿಮ್ಮತ್ತೆ ಎಂದಾದರೂ ಸಪ್ಪಗೆ ಅಡುಗೆ ಮಾಡು, ಉಪ್ಪು, ಖಾರ ಕಡಿಮೆ ಹಾಕು. ನನಗೆ ಈ ತರಕಾರಿ ಆಗಲ್ಲ. ಆ ಸೊಪ್ಪು ಬೇಡ ಅಂತೆಲ್ಲಾ ಹೇಳ್ತಾರಾ?”
“ಎಂದೂ ಇಲ್ಲ. ನಾನು ಯಾವುದೇ ಅಡುಗೆ ಮಾಡ್ಲಿ, ಏನೂ ಹೇಳದೆ ಊಟ ಮಾಡ್ತಾರೆ.”
“ನೀನು ಖರ್ಚು ಮಾಡಿದ್ದು ಸುಮಂತ್ ಲೆಕ್ಕ ಕೇಳ್ತಾರಾ?”
“ಯಾವತ್ತೂ ಕೇಳಲ್ಲ.”
“ನೀನೆಂದಾದರೂ ಹೊರಗೆ ಹೋಗೋದನ್ನು ತಡೆದಿರಬಹುದು.”
“ಯಾವತ್ತೂ ಇಲ್ಲ.”
“ಅಕ್ಕಪಕ್ಕದೋರ ಬಳಿ ನಿನ್ನ ಮೇಲೆ ಚಾಡಿ ಹೇಳಬಹುದು.”
“ಛೇ ಇಲ್ಲ. ಅವರು ಎಲ್ಲೂ ಹೋಗಲ್ಲ.”
“ಹಾಗಾದರೆ ನಿನ್ನ ಮಕ್ಕಳು ಪ್ರತಿ ಟೆಸ್ಟ್ ನಲ್ಲೂ ಫೇಲ್ ಆಗ್ತಿರಬಹುದು.”
“ಇಲ್ಲಪ್ಪ. ರವಿ ಕೊಂಚ ಚೇಷ್ಟೆ. ಹೀಗಾಗಿ ಓದಿನಲ್ಲಿ ಅಷ್ಟು ಆಸಕ್ತಿ ಇಲ್ಲ. ಆದ್ರೂ ಒಂದು ಸಾರೀನೂ ಫೇಲ್ ಆಗಿಲ್ಲ. ಇನ್ನು ಶೃತಿಯ ಬಗ್ಗೆ ಹೇಳಬೇಕೆಂದರೆ ಅವರ ಟೀಚರ್‌ಗಳಿಗೆಲ್ಲಾ ಹೆಮ್ಮೆ ಇದೆ.”
“ನೋಡು ಸುನಂದಾ, ನಿನ್ನ ಸಮಸ್ಯೆಗಳಿಗೆಲ್ಲಾ ನೀನೇ ಕಾರಣ. ಯಾವ ಮನೆಯಲ್ಲಿ ನಿನ್ನದೇ ಆಡಳಿತ ಇದೆಯೋ, ಯಾವ ಮನೆಯಲ್ಲಿರೋ ವಸ್ತುಗಳೆಲ್ಲಾ ನಿನ್ನದೇ ಆಯ್ಕೆಯೋ, ಆ ಮನೇನ ನೀನು ನಿನ್ನದಲ್ಲ, ಸುಮಂತ್‌ನದು ಎಂದು ತಿಳ್ಕೊಂಡಿದ್ದೀಯ. ನಿಮ್ಮ ಮನೆ ಕೆಲಸದವಳು 4-5 ಮನೆಗಳಲ್ಲಿ ಕಸಗುಡಿಸಿ, ಪಾತ್ರೆ ತೊಳೆದರೂ ಸಂತೋಷದಿಂದ ಕೆಲಸ ಮಾಡ್ತಾಳೆ. ಅದಕ್ಕೇ ನಿನಗಿಂತ ಅಪ್‌ಟು ಡೇಟ್ ಆಗಿದ್ದಾಳೆ. ನೀನಂತೂ ಎಲ್ಲ ಕೆಲಸಗಳನ್ನೂ ಬೈದುಕೊಂಡೇ ಮಾಡ್ತೀಯ. ಗಂಡ, ಮಕ್ಕಳು, ಅತ್ತೆ ಇವರೆಲ್ಲಾ ಸೇರಿ ನಿನ್ನ ಪ್ರಪಂಚ, ನಿನ್ನ ಪರಿವಾರ, ನಿನ್ನ ಪರಿವಾರಾನ ಗಮನಿಸೋ ಜವಾಬ್ದಾರಿ ನಿನ್ನದೇ. ಅದರ ಬಗ್ಗೆ ಯಾರ ಬಳಿಯಾದರೂ ದೂರೋಕಾದರೂ ಏನಿದೆ? ನೀನಿಷ್ಟು ಸಿಡುಕಿದರೂ, ಸುಮಂತ್ ಆಗಲಿ ನಿನ್ನ ಅತ್ತೆಯಾಗಲಿ ನಿನಗೇನೂ ಹೇಳುವುದಿಲ್ಲ. ಅದೇ ಸಂತೋಷ.
“ನನ್ನ ಮಾತು ಕೇಳೋದಾದ್ರೆ ನಾಳೆಯಿಂದ ಏನೇ ಮಾಡಿದ್ರೂ ಖುಷಿಯಿಂದ ಮಾಡು. ಮನಸ್ಸಿಟ್ಟು ಮಾಡು. ಇನ್ನು ಟಿಫಿನ್‌ನ್ನು ಸಿ. ಅಶ್ವಥ್ ಹಾಡು ಕೇಳಿಕೊಂಡು ಮಾಡ್ತೀಯೋ ಅಥವಾ ಪಿ.ಬಿ.ಎಸ್. ಹಾಡು ಕೇಳಿಕೊಂಡು ಮಾಡ್ತಯೋ ನಿನಗೇ ಬಿಟ್ಟಿದ್ದು. ನಿನಗಿಷ್ಟವಾದ ಹಾಡುಗಳನ್ನು ಒಂದೊಂದಾಗಿ ಕೇಳು. ನಾನು ಬರೋ ವಾರ ಮತ್ತೆ ಬರ್ತೀನಿ. ಆಗಲೂ ನೀನು ಇದೇ ರೀತಿ ದುಃಖಿತಳಾಗಿದ್ರೆ ಬೇರೆ ದಾರಿ ಹುಡುಕೋಣ. ಆಯ್ತಾ?” ಎಂದು ಹೇಳಿ ಮಾಲಿನಿ ಹೊರಟುಬಿಟ್ಟಳು.
ಅದರ ಮುಂದಿನ ಭಾನುವಾರ ಮಾಲಿನಿ ಮತ್ತು ಅವಳ ಗಂಡನನ್ನು ಸುನಂದಾ ಊಟಕ್ಕೆ ಕರೆದಳು. ಮನೆಯ ಬಾಗಿಲು ತೆರೆದ ಕೂಡಲೇ `ಈ ಜೀವನ ಬೇವು ಬೆಲ್ಲ…. ಬಲ್ಲಾತಗೆ ನೋವೇ ಇಲ್ಲ….’ ಹಾಡಿನ ಮಧುರ ಸಾಲುಗಳು ಮಾಲಿನಿಯ ಕಿವಿಗೆ ಹಿತವಾಗಿ ಕೇಳಿಬರುತ್ತಿದ್ದವು. ಸುನಂದಾ ಬಹಳ ಖುಷಿಯಾಗಿದ್ದಳು. ಮನೆಯ ಕಾಂತಿಯೇ ಬದಲಾಗಿತ್ತು. ಮನೆಯವರೆಲ್ಲಾ ಒಟ್ಟಿಗೇ ಅತಿಥಿಗಳ ಜೊತೆ ಊಟ ಮಾಡಿದರು.
ಊಟದ ನಂತರ ಮಾಲಿನಿ ಸುಮಂತ್‌ನನ್ನು ಆಕ್ಷೇಪಿಸುವ ಧ್ವನಿಯಲ್ಲಿ ಹೇಳಿದಳು, “ಏನು ಸುಮಂತ್, ಕಳೆದ 2 ವರ್ಷಗಳಲ್ಲಿ ಒಂದೇ ಒಂದು ಹೊಸ ಸಿ.ಡಿ.ಯನ್ನು ಸುನಂದಾಗೆ ತಂದುಕೊಟ್ಟಿಲ್ಲ. ಅದು ತಪ್ಪು. ನಿಮ್ಮ ಹೆಂಡತಿಯ ಬಗ್ಗೆ ಗಮನಿಸಿಕೊಳ್ಳಲ್ಲ. ಪಾಪ ಎಷ್ಟು ಕೆಲಸ ಮಾಡ್ತಾಳೆ. ಯಾವತ್ತಾದ್ರೂ ಅವಳು ಸತ್ತೋಗ್ಬಿಟ್ರೆ ಆಗ ಗೊತ್ತಾಗುತ್ತೆ ನಿಮಗೆಲ್ರಿಗೂ….”
“ಏಯ್ ಸಾಕು ಸುಮ್ನಿರೇ, ಏನು ಹೇಳ್ತಿದ್ದೀಯಾ?” ಸುನಂದಾ ಅವಳ ಮಾತನ್ನು ಮಧ್ಯದಲ್ಲೇ ಕತ್ತರಿಸಿ ಹೇಳಿದಳು, “ನಾನ್ಯಾಕೆ ಸಾಯಲಿ? ನನ್ನ ಶತ್ರುಗಳು ಸಾಯಲಿ ಬೇಕಾದ್ರೆ. ಈ ಜೀವನ ಬೇವು ಬೆಲ್ಲ…. ಬಲ್ಲಾತಗೆ ನೋವೇ ಇಲ್ಲ…. ನಿನಗುಂಟು ಜಯ……”