ಶೇಂಗಾ ಹೋಳಿಗೆ
ಹೂರಣದ ಸಾಮಗ್ರಿ : 1 ದೊಡ್ಡ ತೆಂಗಿನಕಾಯಿ, 1 ದೊಡ್ಡ ಮುದ್ದೆ ಬೆಲ್ಲ, 2 ಚಮಚ ಗಸಗಸೆ, 1 ಬಟ್ಟಲು ಹುರಿದ ಶೇಂಗಾ ಬೀಜ, 2-2 ಚಿಟಕಿ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು.
ಕಣಕಕ್ಕೆ ಸಾಮಗ್ರಿ : ಅರ್ಧರ್ಧ ಬಟ್ಟಲು ಮೈದಾ-ಚಿರೋಟಿ ರವೆ, ಅಗತ್ಯವಿದ್ದಷ್ಟು ರೀಫೈಂಡ್ ಎಣ್ಣೆ, ತುಪ್ಪ, 2 ಚಿಟಕಿ ಅರಿಶಿನ ಉಪ್ಪು.
ವಿಧಾನ : ಮೊದಲು ಕಡಲೆಬೀಜವನ್ನು ಹುರಿದು, ಆರಿದ ನಂತರ, ಸಿಪ್ಪೆ ಬೇರ್ಪಡಿಸಿ, ಇದನ್ನು ತರತರಿಯಾಗಿ ಪುಡಿ ಮಾಡಿ. ಹಾಗೆಯೇ ಗೋಡಂಬಿಯನ್ನೂ ತುಪ್ಪದಲ್ಲಿ ಹುರಿದಿಡಿ. ಒರಳು ಅಥವಾ ಮಿಕ್ಸಿಯಲ್ಲಿ ತೆಂಗಿನ ತುರಿ, ಪುಡಿ ಮಾಡಿದ ಬೆಲ್ಲ, ಅಗತ್ಯವಿದ್ದಷ್ಟು ಹಾಲು, ಗಸಗಸೆ, ಏಲಕ್ಕಿಪುಡಿ ಬೆರೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕಡಲೆಬೀಜ, ಗೋಡಂಬಿ ಸೇರಿಸಿ ಕಲಸಿದರೆ ಹೂರಣ ರೆಡಿ.
ಮೊದಲು ತಯಾರಾದ ಕಣಕದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ, ಖರ್ಜೂರದ ಹೋಳಿಗೆಗೆ ಮಾಡಿದಂತೆ ಅದೇ ಕ್ರಮದಲ್ಲಿ ಇಲ್ಲೂ ಹೂರಣವಿರಿಸಿ ಒಂದೊಂದಾಗಿ ಹೋಳಿಗೆ ಲಟ್ಟಿಸಿ ಸಿದ್ಧಪಡಿಸಿ, ಆಮೇಲೆ ಕಾದ ಹೆಂಚಿನ ಮೇಲೆ ಹಾಕಿ ಬೇಯಿಸಿ. ಬಿಸಿ ಬಿಸಿಯಾಗಿ ತುಪ್ಪ ಅಥವಾ ಹಾಲಿನ ಜೊತೆ ಸವಿಯಲು ಕೊಡಿ.
ಖರ್ಜೂರದ ಹೋಳಿಗೆ
ಹೂರಣದ ಸಾಮಗ್ರಿ : ಕಡಲೆಬೇಳೆ, ತೊಗರಿಬೇಳೆ (ಒಟ್ಟಾಗಿ ಅರ್ಧ ಬಟ್ಟಲು), 1 ದೊಡ್ಡ ಬಟ್ಟಲು ಪುಡಿ ಮಾಡಿದ ಮುದ್ದೆ ಬೆಲ್ಲ, ಅರ್ಧ ಬಟ್ಟಲು ಹಸಿ ಖರ್ಜೂರ (ಬೀಜ ಬೇರ್ಪಡಿಸಿದ್ದು), 2 ಚಮಚ ಗಸಗಸೆ, 1 ದೊಡ್ಡ ತೆಂಗಿನಕಾಯಿ, 2-2 ಚಿಟಕಿ ಏಲಕ್ಕಿ ಪುಡಿ, ಪಚ್ಚ ಕರ್ಪೂರ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ ಚೂರು, ಖರ್ಜೂರ ನೆನೆಯಲು ಹಾಲು.
ಕಣಕಕ್ಕೆ ಸಾಮಗ್ರಿ : ಅರ್ಧರ್ಧ ಬಟ್ಟಲು ಮೈದಾ-ಚಿರೋಟಿ ರವೆ, ಅಗತ್ಯವಿದ್ದಷ್ಟು ರೀಫೈಂಡ್‌ಎಣ್ಣೆ, ತುಪ್ಪ, 2 ಚಿಟಕಿ ಅರಿಶಿನ, ಉಪ್ಪು.
ವಿಧಾನ : ಮೊದಲು ಹಸಿ ಖರ್ಜೂರವನ್ನು ಹಾಲಿನಲ್ಲಿ ನೆನೆಹಾಕಿ, 1-2 ತಾಸು ಹಾಗೆ ಬಿಡಿ. ಒಂದು ಬೇಸನ್ನಿಗೆ ಜರಡಿಯಾಡಿದ ರವೆ, ಮೈದಾ, ಚಿಟಕಿ ಉಪ್ಪು ಅರಿಶಿನ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ರೀಫೈಂಡ್‌ಎಣ್ಣೆ ಬೆರೆಸುತ್ತಾ ಚೆನ್ನಾಗಿ ನಾದಬೇಕು. ಅವಕಾಶವಿದ್ದರೆ ಒರಳಿನಲ್ಲಿ ಹಾರೆಯಿಂದ ಚೆನ್ನಾಗಿ ಕುಟ್ಟಿ ಹದಗೊಳಿಸಬಹುದು. ಅಥವಾ ಕಿಚನ್ ಸ್ಲ್ಯಾಬ್ ಮೇಲೆ ತುಪ್ಪದೊಂದಿಗೆ ನಾದಿಕೊಳ್ಳಬೇಕು. ಇದನ್ನು 1-2 ತಾಸು ನೆನೆಯಲು ಬಿಡಿ.
ಕುಕ್ಕರ್‌ನಲ್ಲಿ ಎರಡೂ ಬೇಳೆಗಳನ್ನು ಒಟ್ಟಾಗಿ ಬೇಯಿಸಿ. ಇದಕ್ಕೆ ಅರಿಶಿನ, 1 ಚಮಚ ರೀಫೈಂಡ್ ಎಣ್ಣೆ ಬೆರೆಸಿರಬೇಕು. ಬೇಳೆ ಬೆಂದ ನಂತರ ಕೆಳಗಿಳಿಸಿ ಆರಿದ ಮೇಲೆ, ಅದರ ನೀರು ಬಸಿದು, ಒಬ್ಬಟ್ಟಿನ ತಿಳಿಸಾರು ಮಾಡಲು ಬಳಸಿಕೊಳ್ಳಿ. ಅದೇ ಹೊತ್ತಿಗೆ ನೆನೆದ ಖರ್ಜೂರವನ್ನು ಹಾಲಿನ ಸಮೇತ ಮಿಕ್ಸಿಯಲ್ಲಿ ಲಘುವಾಗಿ ತಿರುವಿಕೊಳ್ಳಿ. ಆಮೇಲೆ ಒರಳು ಅಥವಾ ಮಿಕ್ಸಿಯಲ್ಲಿ ಇದರ ಜೊತೆ ಬೇಳೆ, ಬೆಲ್ಲ, ತೆಂಗಿನ ತುರಿ, ಏಲಕ್ಕಿ, ಪಚ್ಚ ಕರ್ಪೂರ ಸೇರಿಸಿ (ಕನಿಷ್ಠ ನೀರಿನೊಂದಿಗೆ) ಗಟ್ಟಿಯಾಗಿ ರುಬ್ಬಿಕೊಳ್ಳುವುದು. ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರು ಬೆರೆಸಿದರೆ ಹೂರಣ ರೆಡಿ.
ಇನ್ನಷ್ಟು ತುಪ್ಪ ಸವರಿ ಚೆನ್ನಾಗಿ ನೆನೆದ ಕಣಕವನ್ನು ನಾದಿಕೊಂಡು, ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ, ಒಂದೊಂದಾಗಿ ಲಟ್ಟಿಸಿ. ಇದರ ಮಧ್ಯೆ 1-1 ನಿಂಬೆ ಗಾತ್ರದ ಹೂರಣವಿರಿಸಿ, ಅದನ್ನು ಕಣಕದಿಂದ ಕವರ್ ಮಾಡಿ, ಬೆರಳಿನಿಂದ ತಟ್ಟಿ ಅಥವಾ ಮತ್ತೆ ಲಟ್ಟಿಸಿ. ಕಾದ ಹೆಂಚಿನ ಮೇಲೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ.
ಹೀಗೆ ಬಿಸಿ ಬಿಸಿಯಾಗಿ ತಯಾರಾದ ಖರ್ಜೂರದ ಹೋಳಿಗೆಗಳನ್ನು ತುಪ್ಪ ಅಥವಾ ಹಾಲಿನ ಜೊತೆ ಸವಿಯಲು ಕೊಡಿ.
ಕ್ಯಾಪ್ಸಿಕಂ ನಿಂಬೆಹುಳಿ ಚಿತ್ರಾನ್ನ
ಸಾಮಗ್ರಿ : 2 ತಾಜಾ ಕ್ಯಾಪ್ಸಿಕಂ, 8-10 ಹಸಿ ಮೆಣಸಿನಕಾಯಿ, 1 ಗಿಟುಕು ತೆಂಗಿನ ತುರಿ, 2 ನಿಂಬೆಹಣ್ಣು, 2 ಚಿಟಕಿ ಅರಿಶಿನ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕ/ಉ ಬೇಳೆ, ಕಡಲೆಬೀಜ, ಕರಿಬೇವು ಒಂದಿಷ್ಟು ಹೆಚ್ಚಿದ ಶುಂಠಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಇಂಗು ಉದುರುದುರಾದ ಬಿಸಿ ಅನ್ನ.
ವಿಧಾನ : ಮೊದಲು ಕ್ಯಾಪ್ಸಿಕಂ, ಹಸಿಮೆಣಸು, ಶುಂಠಿ, ಕೊ.ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿಡಿ. ತೆಂಗಿನಕಾಯಿ ತುರಿದಿಡಿ. ಉದುರುದುರಾದ ಬಿಸಿ ಅನ್ನವನ್ನು ಒಂದು ಅಗಲ ತಟ್ಟೆಯಲ್ಲಿ ಆರಲು ಬಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿಕೊಂಡು ಸಾಸುವೆ, ಜೀರಿಗೆಯ ಒಗ್ಗರಣೆ ಕೊಡಿ. ನಂತರ ಕಡಲೆಬೀಜ, ಕ/ಉ ಬೇಳೆ ಹಾಕಿ ಚಟಪಟಾಯಿಸಿ. ಆಮೇಲೆ ಇದಕ್ಕೆ ಇಂಗು, ಹಸಿಮೆಣಸು, ಶುಂಠಿ, ಕರಿಬೇವು ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ ಹಾಕಿ ಹದನಾಗಿ ಬಾಡಿಸಿ. ಆಮೇಲೆ ಇದಕ್ಕೆ ತೆಂಗಿನತುರಿ, ಉಪ್ಪು, ಅರಿಶಿನ ಹಾಕಿ ಕೈಯಾಡಿಸಿ. ಇದನ್ನು ಕೆಳಗಿಳಿಸಿದ ಮೇಲೆ ನಿಂಬೆಹಣ್ಣು ಹಿಂಡಿಕೊಳ್ಳಿ, ಕೊ.ಸೊಪ್ಪು ಸೇರಿಸಿ. ಇದನ್ನು ಆರಿದ ಅನ್ನದ ಮೇಲೆ ಹರಡಿ, ಚೆನ್ನಾಗಿ ಕಲಸಿಕೊಳ್ಳಿ. ಕ್ಯಾಪ್ಸಿಕಂ ನಿಂಬೆಹುಳ್ಳಿ ಚಿತ್ರಾನ್ನದ ಜೊತೆ ಬೊಂಬಾಯಿ ಬೋಂಡ ಸೊಗಸಾಗಿ ಹೊಂದುತ್ತದೆ.
ಗಮನಿಸಿ : ರುಚಿಯ ವೈವಿಧ್ಯತೆಗಾಗಿ ಕ್ಯಾಪ್ಸಿಕಂ ಬಾಡಿಸಿದ ನಂತರ, ಇದಕ್ಕೆ ಬೆಂದ ಹಸಿ ಬಟಾಣಿ ಕಾಳು ಬೆರೆಸಿದರೆ ಬಹಳ ಚೆನ್ನಾಗಿರುತ್ತದೆ.
ಸಿಹಿ ಸಿಹಿ ಸಜ್ಜಪ್ಪ
ಸಾಮಗ್ರಿ : 1 ಬಟ್ಟಲು ಸಣ್ಣ ರವೆ, 2 ಬಟ್ಟಲು ಪುಡಿ ಮಾಡಿದ ಮುದ್ದೆ ಬೆಲ್ಲ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ತುಂಡುಗಳು, 1 ದೊಡ್ಡ ಬಟ್ಟಲು ಮೈದಾ, ಅಗತ್ಯವಿದ್ದಷ್ಟು ತುಪ್ಪ, ರೀಫೈಂಡ್ ಎಣ್ಣೆ, ತುಸು ಏಲಕ್ಕಿಪುಡಿ, ಪಚ್ಚಕರ್ಪೂರ, ಗಸಗಸೆ, 2 ಗಿಟಕು ಕೊಬ್ಬರಿ ತುರಿ.
ವಿಧಾನ : ಮೊದಲು ಬಾಣಲೆಯಲ್ಲಿ ಅರ್ಧ ಸೌಟು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ಬೇರೆಯಾಗಿಡಿ. ಇದರಲ್ಲಿ ರವೆಯನ್ನೂ ಹುರಿದು ಬೇರೆಯಾಗಿಡಿ. ಪಕ್ಕದ ಒಲೆಯಲ್ಲಿ ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಬೆಲ್ಲ ಬಿಸಿ ಮಾಡಿ ಕರಗಿಸಿ. ಇದನ್ನು ಸೋಸಿಕೊಂಡು ಅದೇ ಬಾಣಲೆಗೆ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಆಮೇಲೆ ಇದಕ್ಕೆ ರವೆ, ಕೊಬ್ಬರಿ ತುರಿ ಬೆರೆಸಿ ಬೇಗ ಬೇಗ ಕೈಯಾಡಿಸಿ ಹೂರಣ ಸಾಕಷ್ಟು ಗಟ್ಟಿಯಾಯಿತು ಎನಿಸಿದಾಗ, ಅದಕ್ಕೆ ಗಸಗಸೆ, ಗೋಡಂಬಿ, ದ್ರಾಕ್ಷಿ ಇತ್ಯಾದಿಗಳನ್ನು ಬೆರೆಸಿ, ಕೆದಕಿ ಕೆಳಗಿಳಿಸಿ. ಇದು ಸಹಜವಾಗಿ ಆರಬೇಕು.
ಈ ಮಧ್ಯೆ ಜರಡಿಯಾಡಿದ ಮೈದಾಗೆ ಚಿಟಕಿ ಉಪ್ಪು, ನೀರು ಬೆರೆಸಿ ಪೂರಿ ಹಿಟ್ಟಿನಂತೆ ಮೃದುವಾಗಿ ಕಲಸಿಡಿ. ಆಮೇಲೆ ಇದಕ್ಕೆ ತುಸು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು, 1-2 ತಾಸು ನೆನೆಯಲು ಬಿಡಿ. ಅಷ್ಟು ಹೊತ್ತಿಗೆ ಹೂರಣ ಆರಿ ಬಳಸಲು ಯೋಗ್ಯವಾಗಿರುತ್ತದೆ.
ಒಲೆಯ ಮೇಲೆ ಬಾಣಲೆಯಲ್ಲಿ ರೀಫೈಂಡ್ ಎಣ್ಣೆ ಕಾಯಲು ಇಡಿ. ನೆನೆದ ಮೈದಾಗೆ ಮತ್ತೆ ತುಪ್ಪ ಹಾಕಿ ನಾದಿಕೊಂಡು, ಸಣ್ಣ ಉಂಡೆ ಮಾಡಿ ದಪ್ಪ ಪೂರಿಗಳಾಗಿ ಲಟ್ಟಿಸಿ. ಇದರ ಮಧ್ಯೆ 2-3 ಚಮಚ ಹೂರಣ ತುಂಬಿಸಿ, ನೀಟಾಗಿ ಮಡಿಚಿ, ಒಬ್ಬಟ್ಟಿನ ತರಹ ಮಾಡಿ. ಹೀಗೆ ಒಂದಾಂದಾಗಿ ಸಜ್ಜಪ್ಪಗಳನ್ನು ಎಣ್ಣೆಯಲ್ಲಿ ಕರಿದು, (ಮಂದ ಉರಿ ಇರಲಿ) ಹೊಂಬಣ್ಣ ಬಂದಾಗ ತೆಗೆಯಿರಿ. ಇವನ್ನು ಕಾಗದದ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟರೆ, 15-20 ದಿನಗಳಾದರೂ ಕೆಡುವುದಿಲ್ಲ.
ಸ್ಪೆಷಲ್ ವಾಂಗಿಭಾತ್
ಮೂಲ ಸಾಮಗ್ರಿ : 300 ಗ್ರಾಂ ಬಿಳಿ ಬದನೇಕಾಯಿ, 200 ಗ್ರಾಂ ಆಲೂಗಡ್ಡೆ, 1 ದೊಡ್ಡ ನಿಂಬೆ ಗಾತ್ರದ ಹುಣಿಸೇಹಣ್ಣು, 1 ಗಿಟುಕು ಕೊಬ್ಬರಿ ತುರಿ, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕ/ಉ ಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪುಇಂಗು ವಾಂಗಿಭಾತ್ ಪುಡಿ, 2-3 ಬಟ್ಟಲು ಉದುರುದುರಾದ ಬಿಸಿ ಅನ್ನ.
ವಾಂಗಿಭಾತ್ ಪುಡಿ : 15-20 ಕೆಂಪು ಒಣ ಮೆಣಸಿನಕಾಯಿ, 7-8 ಬ್ಯಾಡಗಿ ಮೆಣಸಿನಕಾಯಿ, ಅರ್ಧ ಕಪ್ ಧನಿಯಾ, 2-2 ಚಮಚ ಕ/ಉ ಬೇಳೆ, ಒಂದಿಷ್ಟು ಚಕ್ಕೆ, ಲವಂಗ, ಮೊಗ್ಗು, ಮೆಣಸು, ಜೀರಿಗೆ, ಸಾಸುವೆ, ತುಸು ಕೊಬ್ಬರಿ ತುರಿ.
ವಿಧಾನ : ಮೊದಲು ಮಸಾಲೆ ಪುಡಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನೂ ಡ್ರೈ ಆಗಿ ಹುರಿದುಕೊಂಡು, ಆರಿದ ನಂತರ ಡ್ರೈ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಎಳೆ ಬದನೆಯನ್ನು 1-1 ಅಂಗುಲ ಉದ್ದ ಬರುವಂತೆ ಹೆಚ್ಚಿ ನೀರಿನ ಪಾತ್ರೆಗೆ ಹಾಕಿಡಿ. ಅದೇ ತರಹ ಆಲೂ ಸಹ ತೆಳ್ಳಗೆ, ಉದ್ದಕ್ಕೆ ಹೆಚ್ಚಬೇಕು. ಹುಣಿಸೇಹಣ್ಣನ್ನು ಬಿಸಿ ನೀರಲ್ಲಿ ನೆನೆಹಾಕಿ ಕಿವುಚಿ, ರಸ ಬೇರ್ಪಡಿಸಿ. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿಕೊಂಡು ಇಂಗಿನ ಜೊತೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಇದಕ್ಕೆ ಕರಿಬೇವು ಹಾಕಿದ ಮೇಲೆ, ಬದನೆಹೋಳು, ನಂತರ ಆಲೂ ಹಾಕಿ ಬಾಡಿಸಿ. ಸ್ವಲ್ಪ ನೀರು ಚಿಮುಕಿಸಿ, ನಡುನಡುವೆ ಕೈಯಾಡಿಸುತ್ತಾ ಮುಚ್ಚಳ ಮುಚ್ಚಿರಿಸಿ ಬೇಯಿಸಿ. ನಂತರ ಕೊಬ್ಬರಿ ತುರಿ ಹಾಕಿ ಬಾಡಿಸಬೇಕು. ಆಮೇಲೆ ಹುಣಿಸೇರಸ, ಉಪ್ಪು, ಅರಿಶಿನ ಬೆರೆಸಿ ಮತ್ತೆ ಕೆದಕಬೇಕು. ಕೊನೆಯಲ್ಲಿ ವಾಂಗಿಭಾತ್ ಪುಡಿ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ, 3-4 ನಿಮಿಷದ ನಂತರ ಕೆಳಗಿಳಿಸಿ. ಉದುರುದುರಾದ ಅನ್ನವನ್ನು ಅಗಲವಾದ ತಟ್ಟೆಯಲ್ಲಿ ಹರಡಿ, ಅದರ ಮೇಲೆ ಈ ಪಲ್ಯ ಹರಡಿ ನೀಟಾಗಿ ಬೆರೆಸಿಕೊಳ್ಳಿ. ಬಡಿಸುವ ಮುನ್ನ ಇದನ್ನು ಹೀಗೆ ಸಿದ್ಧಪಡಿಸಿ, ಗರಿಗರಿ ಉಪ್ಪೇರಿ, ಅರಳು ಸಂಡಿಗೆ ಜೊತೆ ಸವಿಯಲು ಕೊಡಿ. ಗಸಗಸೆ ಹಾಲು ಖೀರು ವಾಂಗಿಭಾತ್‌ನ ಕಾಂಬಿನೇಷನ್ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ.
ಗಮನಿಸಿ : ಬದನೆಕಾಯಿ ಬದಲಿಗೆ ಹಸಿಬಟಾಣಿ, ಕ್ಯಾಪ್ಸಿಕಂ, ಹುರುಳಿಕಾಯಿ, ಗೋರಿಕಾಯಿ, ಎಲೆಕೋಸು, ಹೂಕೋಸು, ಮೆಂತ್ಯೆಸೊಪ್ಪು ಇತ್ಯಾದಿ ಬಳಸುವುದರಿಂದ ರುಚಿಯಲ್ಲಿ ವೈವಿಧ್ಯತೆ ಇರುತ್ತದೆ. ವಿಭಿನ್ನ ರುಚಿಗಾಗಿ ಬದನೆಗೆ ಮುನ್ನ ಈರುಳ್ಳಿ ಬೆಳ್ಳುಳ್ಳಿ ಸಹ ಹಾಕಿ ಬಾಡಿಸಬಹುದು.
ಬೊಂಬಾಯಿ ಬೋಂಡ
ಸಾಮಗ್ರಿ : 500 ಗ್ರಾಂ ಆಲೂಗಡ್ಡೆ, 250 ಗ್ರಾಂ ಹಸಿ ಬಟಾಣಿ (ಒಣ ಬಟಾಣಿ ಆದರೆ ಹಿಂದಿನ ದಿನ ನೆನೆಸಿ ಮಾರನೇ ದಿನ ಬೇರೆಯಾಗಿ ಬೇಯಿಸಿ), 2-3 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 1 ತುಂಡು ಹಸಿ ಶುಂಠಿ, 7-8 ಹಸಿ ಮೆಣಸು, ಅರ್ಧ ಕಪ್ ತೆಂಗಿನ ತುರಿ, 2 ಎಸಳು ಕರಿಬೇವು, ಒಗ್ಗರಣೆ ಸಾಮಗ್ರಿ, ಹೆಚ್ಚಿದ ತುಸು ಕೊ. ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಅಚ್ಚ ಮೆಣಸಿನಪುಡಿ, ಓಮ, ನಿಂಬೆರಸ, 500 ಗ್ರಾಂ ಕಡಲೆಬೀಜ, ಅರ್ಧ ಕಪ್ ಅಕ್ಕಿಹಿಟ್ಟು, ಕರಿಯಲು ರೀಫೈಂಡ್ ಎಣ್ಣೆ.
ವಿಧಾನ : ಮೊದಲು ಹಸಿ ಬಟಾಣಿ ಜೊತೆ ಆಲೂಗಡ್ಡೆ ಬೇಯಿಸಿ, ಅದರ ಸಿಪ್ಪೆ ಸುಲಿದು, ನಂತರ ಮಸೆದಿಡಿ. ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ, ಕೊ.ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ ಒಗ್ಗರಣೆ ಕೊಡಿ. ಆಮೇಲೆ ಕ/ಉ ಬೇಳೆ ಹಾಕಿ ಚಟಪಟಾಯಿಸಿ. ನಂತರ ಹಸಿಮೆಣಸು, ಕರಿಬೇವು, ಶುಂಠಿ ಹಾಕಿ ಕೆದಕಬೇಕು. ಆಮೇಲೆ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಇದು ಹೊಂಬಣಕ್ಕೆ ತಿರುಗಿದಾಗ ತೆಂಗಿನ ತುರಿ, ಉಪ್ಪು, ಅರಿಶಿನ ಹಾಕಿ ಕೆದಕಬೇಕು. ನಂತರ ಬೆಂದ ಬಟಾಣಿ, ಮಸೆದ ಆಲೂ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ ಕೆಳಗಿಳಿಸಿ. ಆಮೇಲೆ ಇದಕ್ಕೆ ಕೊ.ಸೊಪ್ಪು, ನಿಂಬೆರಸ ಬೆರೆಸಿ ಮತ್ತೊಮ್ಮೆ ಕೆದಕಬೇಕು. ಆಮೇಲೆ ಇದನ್ನು ಚೆನ್ನಾಗಿ ಆರಲು ಬಿಡಿ. ಕಡಲೆಹಿಟ್ಟಿಗೆ ಅಕ್ಕಿಹಿಟ್ಟು, ಉಪ್ಪು, ಖಾರ, ಓಮ, ತುಸು ನೀರು ಬೆರೆಸಿ ದೋಸೆಹಿಟ್ಟಿನ ಹದಕ್ಕೆ ಕಲಸಿಡಿ. ಆಲೂಪಲ್ಯ ಚೆನ್ನಾಗಿ ಆರಿದಾಗ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಆಲೂ ಉಂಡೆಗಳನ್ನು ಕಡಲೆಹಿಟ್ಟಿನಲ್ಲಿ ಅದ್ದಿಕೊಂಡು, ಕಾದ ಎಣ್ಣೆಗೆ ಹಾಕಿ ಮಂದ ಉರಿಯಲ್ಲಿ, ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಹಬ್ಬದ ಸುಗ್ರಾಸ ಭೋಜನದ ಜೊತೆಗೆ ಇದು ಹಿತಕರ ಎನಿಸುತ್ತದೆ.
ಗಮನಿಸಿ : ಈರುಳ್ಳಿ, ಬೆಳ್ಳುಳ್ಳಿ ಬೇಡ ಎನಿಸಿದರೆ ತೆಂಗಿನ ತುರಿ ಜಾಸ್ತಿ ಹಾಕಿ. ಆಗ ಮಾತ್ರ ಇಂಗು ಬಳಸಬೇಕು.
ಅನಾನಸ್ ಚಟ್ನಿ
ಸಾಮಗ್ರಿ : 1 ಸಣ್ಣ ಹುಳಿಸಿಹಿ ಅನಾನಸ್, 1 ಗಿಟುಕು ತೆಂಗಿನ ತುರಿ, 8-10 ಕೆಂಪಾದ ಒಣಮೆಣಸಿನಕಾಯಿ, 1 ಕಪ್ ಹುರಿಗಡಲೆ, 1 ಸಣ್ಣ ನಿಂಬೆ ಗಾತ್ರದ ಹುಣಿಸೇಹಣ್ಣು. 1 ದೊಡ್ಡ ನಿಂಬೆ ಗಾತ್ರದ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಒಗ್ಗರಣೆಗೆ ತುಸು ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು.
ವಿಧಾನ : ಮೊದಲು ಅನಾನಸ್ ಶುಚಿಗೊಳಿಸಿ ಹೋಳು ಮಾಡಿ. ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದರಲ್ಲಿ ಇದನ್ನು ಹದನಾಗಿ ಬಿಡಿಸಿ. ಕೆಳಗಿಳಿಸಿ ಬೇರೆಯಾಗಿಡಿ. ಅದೇ ಬಾಣಲೆಯಲ್ಲಿ ಒಣ ಮೆಣಸಿನಕಾಯಿ ಹುರಿಯಿರಿ. ನಂತರ ಉಳಿದೆಲ್ಲ ಸಾಮಗ್ರಿಗಳ ಜೊತೆ ನುಣ್ಣಗೆ ರುಬ್ಬಿಕೊಳ್ಳಿ. ಆಮೇಲೆ ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಅದನ್ನು ಅನಾನಸ್ ಚಟ್ನಿಗೆ ಬೆರೆಸಿದರೆ, ಇದು ಸವಿಯಲು ಸಿದ್ಧ!
ಹೆಸರುಬೇಳೆ ಪಾಯಸ
ಸಾಮಗ್ರಿ : 1 ಬಟ್ಟಲು ಹೆಸರುಬೇಳೆ, 2 ಬಟ್ಟಲು ಪುಡಿ ಮಾಡಿದ ಮುದ್ದೆ ಬೆಲ್ಲ, ಅಗತ್ಯವಿದ್ದಷ್ಟು ತುಪ್ಪ, ಏಲಕ್ಕಿಪುಡಿ, ದ್ರಾಕ್ಷಿ, ಗೋಂಡಬಿ ಚೂರು, 1 ತೆಂಗಿನಕಾಯಿ, 2 ಬಟ್ಟಲು ಕಾದಾರಿದ ಗಟ್ಟಿ ಹಾಲು.
ವಿಧಾನ : ಮೊದಲು ಹೆಸರುಬೇಳೆಯನ್ನು ಲಘುವಾಗಿ ತುಪ್ಪದಲ್ಲಿ ಘಮ್ಮೆನ್ನುವಂತೆ ಹುರಿದಿಡಿ. ಇದರಲ್ಲಿ ತುಸು ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಹುರಿದು ಬೇರಯಾಗಿಡಿ. ಚಿಕ್ಕ ಕುಕ್ಕರ್‌ನಲ್ಲಿ ಚಿಟಕಿ ಅರಿಶಿನ, ತುಸು ರೀಫೈಂಡ್ ಎಣ್ಣೆ ಬೆರೆಸಿ ಹದನಾಗಿ ಬೇಳೆ ಬೇಯಿಸಿ. ಸ್ಟೀಲ್ ಪಾತ್ರೆಯಲ್ಲಿ ಬೆಲ್ಲಕ್ಕೆ ತುಸು ನೀರು ಬೆರೆಸಿ ಕರಗಲು ಬಿಡಿ. ನಂತರ ಕೆಳಗಿಳಿಸಿ, ಸೋಸಿಕೊಂಡು ಬೇರೆ ದಪ್ಪ ತಳದ ಸ್ಟೀಲ್ ಪಾತ್ರೆಗೆ ರವಾನಿಸಿ, ಮಂದ ಉರಿಯಲ್ಲಿ ಕುದಿಸಬೇಕು. ಆಮೇಲೆ ಇದಕ್ಕೆ ತೆಂಗಿನ ತುರಿ, ಬೆಂದ ಬೇಳೆ, ಏಲಕ್ಕಿ, ಪಚ್ಚಕರ್ಪೂರ ಬೆರೆಸಿ ಚೆನ್ನಾಗಿ ಕುದಿಯುವಂತೆ ಮಾಡಿ. ನಡುನಡುವೆ ಕಾದಾರಿದ ಹಾಲು ಬೆರೆಸುತ್ತಾ ಪಾಯಸ ತುಂಬಾ ಗಟ್ಟಿ ಅಥವಾ ತೆಳು ಆಗದಂತೆ ಎಚ್ಚರಿಕೆ ವಹಿಸಿ. ಇಳಿಸುವ ಮುನ್ನ ದ್ರಾಕ್ಷಿ, ಗೋಡಂಬಿ ಬೆರೆಸಿ, ಕೈಯಾಡಿಸಿ. ಬಡಿಸುವ ಮುನ್ನ ತುಸು ಗಟ್ಟಿ ಆಗಿದೆ ಎನಿಸಿದರೆ, ಇನ್ನಷ್ಟು ಹಾಲು ಬೆರೆಸಿ, ಕೆದಕಿ, ಬಟ್ಟಲುಗಳಿಗೆ ತುಂಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಗಮನಿಸಿ : ಇದೇ ತರಹ ಹೆಸರುಬೇಳೆಗೆ ಬದಲಾಗಿ ನುಚ್ಚಕ್ಕಿ ಕಡಲೆಬೇಳೆ ಬೆರೆಸಿ ಮಾಡಬಹುದು, ರುಚಿಯಲ್ಲಿ ವೈವಿಧ್ಯತೆ ಇರುತ್ತದೆ.
ಗಸಗಸೆ ಹಾಲುಖೀರು
ಸಾಮಗ್ರಿ : 1 ಬಟ್ಟಲು ಗಸಗಸೆ, ಹಾಲಲ್ಲಿ ನೆನೆದ ಅರ್ಧ ಕಪ್ ಅಕ್ಕಿ, 2 ಬಟ್ಟಲು ಪುಡಿ ಮಾಡಿದ ಮುದ್ದೆಬೆಲ್ಲ, 1 ದೊಡ್ಡ ಗಿಟುಕು ಕೊಬ್ಬರಿ ತುರಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಖರ್ಜೂರದ ಚೂರು, ಚಿಟಕಿ ಏಲಕ್ಕಿಪುಡಿ, ಅಗತ್ಯವಿದ್ದಷ್ಟು ಹಾಲು.
ವಿಧಾನ : ಮಿಕ್ಸಿ ಬಳಸುವುದಾದರೆ ಮೊದಲು ಗಸಗಸೆಯನ್ನು ಡ್ರೈ ಜಾರ್‌ನಲ್ಲಿ ತಿರುವಿಕೊಳ್ಳಿ. ನಂತರ ವೆಟ್ ಜಾರ್‌ನಲ್ಲಿ ಗಸಗಸೆ, ತುರಿದ ಕೊಬ್ಬರಿ, ಹಾಲಲ್ಲಿ ನೆನೆದ ಅಕ್ಕಿ, ಏಲಕ್ಕಿ ಪುಡಿ ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ನೀರಿನ ಬದಲು ಜೊತೆಗೆ ಕಾದಾರಿದ ಹಾಲು ಬೆರೆಸಬೇಕು. ದಪ್ಪ ತಳದ ಸ್ಟೀಲ್ ಪಾತ್ರೆಯಲ್ಲಿ ಮೊದಲು ಪುಡಿ ಮಾಡಿದ ಬೆಲ್ಲ, ತುಸು ನೀರು ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಆಮೇಲೆ ಇದನ್ನು ಸೋಸಿಕೊಂಡು ತಳದಲ್ಲಿನ ಕಲ್ಮಶ ಬೇರ್ಪಡಿಸಿ. ಆಮೇಲೆ ಇನ್ನೊಂದು ಪಾತ್ರೆಗೆ ಬಗ್ಗಿಸಿಕೊಂಡು, ಮತ್ತೆ ಕಾಯಿಸಿ. ಜೊತೆಗೆ ರುಬ್ಬಿದ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ನಡುನಡುವೆ ಕಾದಾರಿದ ಹಾಲು ಬೆರೆಸುತ್ತಾ, ತೆಳ್ಳಗಿನ ಹದ ಇರುವಂತೆ ನೋಡಿಕೊಳ್ಳಿ. ಇಳಿಸುವ ಮುನ್ನ ಗೋಡಂಬಿ, ದ್ರಾಕ್ಷಿಗಳನ್ನು ಸೇರಿಸಿ. ಬಟ್ಟಲಿಗೆ ಹಾಕಿಕೊಡು ಮುನ್ನ, ಅಗತ್ಯವೆನಿಸಿದರೆ, ಮತ್ತಷ್ಟು ಬಿಸಿ ಹಾಲು ಬೆರೆಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.