ಕಂಗನಾಳ ಕರಾಮತ್ತು
2006ರಲ್ಲಿ ಬಿಡುಗಡೆಯಾದ `ಗ್ಯಾಂಗ್‌ಸ್ಟರ್’ ಚಿತ್ರದಲ್ಲಿನ ಈ ಗ್ಲಾಮರಸ್ ನಟಿಯ ಗೆಟಪ್, ಮುಂದೆ ಘಟಾನಾಘಟಿಗಳನ್ನೂ ಸೋಲಿಸಿಬಿಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಗ್ಲಾಮರಸ್ ಕ್ವೀನ್ ಎಂದೇ ಗುರುತಿಸಲ್ಪಟ್ಟ ಕಂಗನಾ ರಾಣಾವತ್, ಮುಂದೆ ಬಾಲಿವುಡ್‌ನಲ್ಲಿ ಗೆಲ್ಲುವ ಕುದುರೆ ಎಂದೇ ಖ್ಯಾತಳಾದಳು. ಕೇವಲ ಸೆಕ್ಸ್ ಸಿಂಬಲ್ ಆಗದೆ, ತನ್ನ ಅದ್ಭುತ ನಟನೆಯಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದಳು.
ತನ್ನ 9 ವರ್ಷಗಳ ಕೆರಿಯರ್‌ನಲ್ಲಿ ಕಂಗನಾಳ ಹೆಸರು ಹಲವು ನಟರೊಂದಿಗೆ ಥಳುಕು ಹಾಕಿಕೊಂಡಿತ್ತು. `ಕೃಷ್’ ಚಿತ್ರದ ನಂತರ ಆಕೆ ಹೆಸರು ಹೃತಿಕ್ ಜೊತೆ ಹೆಚ್ಚಾಗಿ ಕೇಳಿಬಂತು. ತನ್ನ ಜೀವನದಲ್ಲಿ ಯಾರೋ ಸ್ಪೆಷಲ್ ಇದ್ದಾರೆ ಎಂದು ಆಕೆ ಹೇಳಿದ್ದೂ ಉಂಟು! ಒಂದು ಆಂಗ್ಲ ವೆಬ್‌ಸೈಟ್ ಪ್ರಕಾರ ಆ ಸ್ಪೆಷಲ್ ಹೃತಿಕ್ ಎಂಬುದು ಕನ್‌ಫರ್ಮ್ ಆಯ್ತು. ಅದಾದ ಮುಂದಿನ 2-3 ತಿಂಗಳಲ್ಲಿ ಹೃತಿಕ್ ಸುಸೇನ್‌ರ ವಿವಾಹ ರದ್ದಾಗುವ ಹಂತ ತಲುಪಿದಾಗ ಕಂಗನಾ ಕಣ್ಕಣ್ಣು ಬಿಟ್ಟಳು.
ಮುಂದೂ ಇವರಿಬ್ಬರೂ ತಮ್ಮ ರಿಲೇಷನ್ ಶಿಪ್ ಕುರಿತಾಗಿ ಏನೂ ಬಾಯಿಬಿಡಲಿಲ್ಲ, ಆದರೆ ಬಲ್ಲ ಮೂಲಗಳ ಪ್ರಕಾರ ಇಬ್ಬರೂ ತಮ್ಮ ಸಂಬಂಧದ ಕುರಿತು ಬಹಳ ಸೀರಿಯಸ್ ಆಗಿದ್ದಾರಂತೆ. ಹಲವು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್ ಎನಿಸಿರುವ ಇವರು `ಕೃಷ್, ಕೈಟ್ಸ್’ ಚಿತ್ರಗಳಿಂದ ಹೆಚ್ಚು ನಿಕಟರಾದರು. ಗಮ್ಮತ್ತು ಎಂದರೆ, ಇದನ್ನು ಖಂಡಿಸದ ಹೃತಿಕ್ ಶಾಂತವಾಗಿಯೇ ಕೇಳಿದವರಿಗೆ ಉತ್ತರಿಸುತ್ತಿದ್ದ. ಒಂಟಿಯಾಗಿ ತಾನು ಪಡುತ್ತಿರುವ ಕಷ್ಟ ತನಗೊಬ್ಬನಿಗೇ ಗೊತ್ತು ಎಂದು ಹೇಳಿಕೊಂಡ.
ನಿರ್ದೇಶಕ ಹಸ್ ಮೆಹ್ತಾ ಬಚೇಂದ್ರಿ ಪಾಲ್‌ರ ಕುರಿತು ಚಿತ್ರ ಮಾಡಲು ಈಕೆಯನ್ನು ನಾಯಕಿಯಾಗಿ ಆರಿಸಿದ್ದಾರೆ. ಜೊತೆಗೆ `ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರಗಳಲ್ಲೂ ಬಿಝಿಯಾಗಿದ್ದಾಳೆ. ಒಟ್ಟಾರೆ 2015 ಕಂಗನಾಳ ಪಾಲಿಗೆ ಹೆಚ್ಚು ಶೈನ್ ಆಗಲಿದೆ.
ಅಮಿತ್ ಜಿ ಈಸ್ ಆಲ್ವೇಸ್ ಹಾಟ್!
ಬಿಪಾಶಾಳ ಇತ್ತೀಚಿನ `ಅಲೋನ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದೆ ಅಲೋನ್ ಆಗಿಯೇ ಉಳಿಯಿತು. ಚಿತ್ರ ತೋಪಾದರೂ ಈ ಮೇಡಂ ತನ್ನ ಗತ್ತು ಬಿಟ್ಟಿಲ್ಲ. ಆಕೆ ಸಲ್ಮಾನ್‌ಗೆ ಮದುವೆ ಆಗದೆ ಇರೋದೇ ಒಳ್ಳೆಯದು ಎಂದು ಸಲಹೆ ನೀಡಿದ್ದು, ಮೀಡಿಯಾದಲ್ಲಿ ದೊಡ್ಡ ಸುದ್ದಿ ಆಯ್ತು. ಅದಾದ ತಕ್ಷಣ ಅಮಿತಾಭ್ ಟೂ ಹಾಟ್ ಎಂದದ್ದು ಮತ್ತೊಂದು ಸುದ್ದಿಯಾಗಿದೆ. ಅವರ ಆಕರ್ಷಕ ವ್ಯಕ್ತಿತ್ವದ ಕುರಿತು ಹೊಗಳುತ್ತಾ ಬಿಪಾಶಾ, “72ರ ಹರೆಯದಲ್ಲೂ ಅಮಿತ್‌ಜಿ ಸಖತ್ ಹಾಟ್ ಎನಿಸುತ್ತಾರೆ. ಈ ಪ್ರಾಯದಲ್ಲೇ ಹೀಗಿರುವವರು ಇನ್ನು ಆ ತುಂಬು ಹರೆಯದಲ್ಲಿ ಇನ್ನೆಷ್ಟು ಸೆಕ್ಸಿ ಇದ್ದಿರಬಹುದು? ನಮ್ಮಂಥ ಯುವ ಪೀಳಿಗೆ ಇವರ ವ್ಯಕ್ತಿತ್ವದಲ್ಲಿನ ಶೇ.10ರಷ್ಟು ಚಾರ್ಮ್ ಉಳಿಸಿಕೊಂಡರೂ ಎಷ್ಟೋ ಆಯ್ತು.” ಮುಂದೆ ಆ್ಯಕ್ಷನ್ ಚಿತ್ರಗಳ ಕಡೆ ಹೆಚ್ಚು ಗಮನಹರಿಸುವುದಾಗಿ ಹೇಳಿರುವ ಬಿಪ್ಸ್, ಆ್ಯಕ್ಷನ್ ಚಿತ್ರಗಳಲ್ಲಿ ನಾಯಕಿಯರಿಗೂ ಸಮಾನ ಪ್ರಾಶಸ್ತ್ಯ ಕೊಡಬೇಕು ಎಂದು ಒತ್ತಾಯಿಸುತ್ತಾಳೆ.
ಟಿಕೆಟ್ ಟು ಹಾಲಿವುಡ್
ಓಂಪುರಿ, ಅಮರೀಶ್‌ಪುರಿ, ನಸೀರುದ್ದೀನ್ ಶಾ, ಅನಿಲ್ ಕಪೂರ್, ಇರ್ಫಾನ್ ಖಾನ್, ಅನುಪಮ್ ಖೇರ್, ಅಮಿತಾಭ್‌ರ ನಂತರ ಇದೀಗ ಹಾಲಿವುಡ್‌ಗೆ ಎಂಟ್ರಿ ಹೊಡೆಯುವ ಅವಕಾಶ ನಾಜಿರುದ್ದೀನ್ ಸಿದ್ದಿಕಿಗೆ ದೊರಕಿದೆ. ಹಾಲಿವುಡ್‌ನ ಈ ಚಿತ್ರದಲ್ಲಿ ನಾಜ್, ನಿಕೋಲ್ ಕಿಡ್ ಮ್ಯಾನ್‌ರಂಥ ಘಟಾನುಘಟಿ ಎದುರು ನಟಿಸಲಿದ್ದಾರೆ. ಈ ಚಿತ್ರದ ನಿರ್ದೇಶಕ ಗಾರ್ಥ್ ಡೇವಿಸ್. ಇದಕ್ಕೆ ಮುಂಚೆ ಡೇವಿಸ್ `ಟಾಪ್ ಆಫ್ ದಿ ಲೇಕ್’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಗಮ್ಮತ್ತು ಎಂದರೆ, ನಾಜ್ ಸಲ್ಮಾನ್ ಜೊತೆ `ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ಬಿಝಿ. ಹೀಗಾಗಿ ಇನ್ನೂ ಹಾಲಿವುಡ್‌ಗೆ ಓ.ಕೆ. ಹೇಳಿಲ್ಲವಂತೆ! ಮಜಾ ಎಂದರೆ ಈ ಹಾಲಿವುಡ್ ಚಿತ್ರದಲ್ಲಿ ನಾಜ್‌ಗೆ ನಿಕೋಲ್ಸ್ ನಾಯಕಿ ಆಗುತ್ತಾಳೆ. ಇವರಿಬ್ಬರ ಕೆಮಿಸ್ಟ್ರಿಯನ್ನು ಭವಿಷ್ಯವೇ ನಿರ್ಧರಿಸಬೇಕಷ್ಟೆ. ಡೇವಿಸ್‌ರ ಈ ಚಿತ್ರ ಬ್ರಿಯೆಿನ್‌ರ `ಎ ಲಾಂಗ್ ವೇ ಟು ಹೋಂ’ ಕಾಂದಬರಿ ಆಧಾರಿತ. ಮತ್ತೊಂದು ಸ್ವಾರಸ್ಯವೆಂದರೆ ಹಿಂದಿ ಸ್ಟಾರ್‌ಗಳಾದ ದೇವ್ ಪಟೇಲ್, ತನಿಷ್ಕಾ ಚಟರ್ಜಿ, ದೀಪ್ತಿ ಸಹ ಈ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ.
ಸ್ವಪ್ರತಿಭೆಯಿಂದ ಮುಂದೆ ಬರ್ತೀನಿ!
ಕಮಲ್ ಹಾಸನ್‌ರ ಕಿರಿ ಮಗಳು ಅಕ್ಷರಾ ಹಾಸನ್`ಶಮಿತಾ್’ ಚಿತ್ರದಲ್ಲಿ ಮಿಂಚಿದ್ದು ಈಗ ಎಲ್ಲರೂ ಅವಳ ಕಡೆ ಗಮನಹರಿಸುವಂತಾಗಿದೆ. ಈಕೆ ಜೊತೆ ಕೊಲೆ ವೆರಿಯ ಧನುಷ್ ಹಾಗೂ ಬಿಗ್‌ಬಿ ಅಮಿತಾಭ್ ಇದ್ದದ್ದು ಇವಳಿಗೆ ಕ್ಯಾಮೆರಾ ಮುಂದೆ ಆಗಾಗ ಬೆಚ್ಚಿ ಬೀಳುವಂತೆ ಆಗುತ್ತಿತ್ತು. ಅಕ್ಕಾ, ತಂದೆಯವರ ಹೆಸರನ್ನು ಎಲ್ಲೂ ಶಿಫಾರಸ್ಸಿಗೆ ಬಳಸದ ಅಕ್ಷರಾ, ತನ್ನ ಸ್ವಂತ ಪ್ರತಿಭೆಯಿಂದ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಪಡೆದಿದ್ದಾಳೆ.
ಈ ಕುರಿತಾಗಿ ಅಕ್ಷರಾ ಹೇಳುತ್ತಾಳೆ, “ಈ ಸಿನಿಮಾರಂಗಕ್ಕೆ ಬರಲೆಂದೇ ನಾನು 1 ವರ್ಷದಿಂದ ತಯಾರಿ ನಡೆಸಿದ್ದೇನೆ. ಭಾಲ್ಕಿ ಸರ್ ಜೊತೆ ಕೆಲಸ ಮಾಡುವ ಅವಕಾಶ ನನಗೆ ಮೊದಲ ಚಿತ್ರದಲ್ಲೇ ಸಿಕ್ಕಿದ್ದು ನನ್ನ ಸೌಭಾಗ್ಯ. ಅಮಿತ್‌ಜಿ, ಧನುಷ್‌ರಂಥ ಡ್ಯಾಶಿಂಗ್ ಹೀರೋ ಜೊತೆ ಕೋಸ್ಟಾರ್ ಆಗಿರುವುದು ನಿಜಕ್ಕೂ ವಂಡರ್ ಫುಲ್! ನನ್ನ ಈ ಎಲ್ಲಾ ಕೆಲಸಗಳಿಗೂ ನಮ್ಮ ಡ್ಯಾಡಿ ಸಪೋರ್ಟ್, ಮಾರ್ಗದರ್ಶನ ಇದ್ದೇ ಇದೆ. ಹಾಗೇಂತ ಅವರ ಹೆಸರು ಹೇಳಿಕೊಂಡು, ಅಥವಾ ಅಕ್ಕಾ ಶೃತಿಯ ಹೆಸರಿನಲ್ಲಿ ಕೆಲಸ ಕೇಳಲು ನನಗೆ ಇಷ್ಟವಿಲ್ಲ.”
ಆಲಿಯಾ
ಮಹೇಂದ್ರ ಸಿಂಗ್ ಧೋನಿಯ ಜೀವನಾಧಾರಿತ ಬಯೋಪಿಕ್ `ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ಆಲಿಯಾ ಭಟ್‌ಳಿಗೆ ಧೋನಿಯ ಪತ್ನಿ ಸಾಕ್ಷಿಯ ಪಾತ್ರ ಸಿಗಲಿದೆ. ಧೋನಿ ಪಾತ್ರವನ್ನು ಸುಶಾಂತ್ ಸಿಂಗ್ ರಾಜಪೂತ್ ವಹಿಸುತ್ತಿದ್ದಾನೆ. ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ, ಧೋನಿಯ ಖಾಸಗಿ ಬದುಕಿನ ಕೆಲವು ಸಂಗತಿಗಳು ಅನಾವರಣಗೊಳ್ಳಲಿವೆ. ಇದು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲಿದೆ. ಇದರಲ್ಲಿ ಧೋನಿ ಕುರಿತಾದ ಸಕ್ಸಸ್, ಫ್ಲಾಪ್, ರೊಮ್ಯಾನ್ಸ್, ಗ್ಲೋಬಲ್ ಬ್ರ್ಯಾಂಡಿಂಗ್…. ಇತ್ಯಾದಿ ಎಲ್ಲ ಇರುತ್ತವೆ.
ಸ್ಲಿಮ್ ಟ್ರಿಮ್ ಫಿಗರ್ ಸಾಕಾಯ್ತು
ಎಲ್ಲರೂ ಸಿನಿಮಾ ನಟಿಯರಂತೆ ಸ್ಲಿಮ್ ಟ್ರಿಮ್ ಆಗಿರಬೇಕೆಂದು ಪಡಬಾರದ ಕಷ್ಟಪಡುತ್ತಿದ್ದರೆ, ಈಕೆ ಈ ಸ್ಲಿಮ್ ಟ್ರಿಮ್ ಅವತಾರ ಸಾಕು, ಇನ್ನಾದರೂ ಮೈಕೈ ತುಂಬಿಕೊಳ್ಳೋಣವೆಂದು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾಳಂತೆ. ಈ ಚಾಳಿ ಶ್ರದ್ಧಾ ಕಪೂರ್‌ಗೆ ಇತ್ತೀಚೆಗೆ ಅಂಟಿಕೊಂಡದ್ದು. ಏಕೆಂದರೆ ರೆಮೋ ಡಿಸೋಜಾ ನಿರ್ದೇಶನದ `ಹ್‌್ಯಳಿ-2′ ಚಿತ್ರಕ್ಕಾಗಿ ಆಕೆಯನ್ನು ತುಸು ಮೈ ತುಂಬಿಸಿಕೊಳ್ಳುವಂತೆ ಹೇಳಲಾಗಿತ್ತು. ಶ್ರದ್ಧಾ ಹೇಳುತ್ತಾಳೆ, ಈ ಚಿತ್ರಕ್ಕಾಗಿ ಬಹಳ ಕಷ್ಟಪಡುತ್ತಿದ್ದೇನೆ. ಏಕೆಂದರೆ ಈ ಚಿತ್ರಕ್ಕಾಗಿ ನಾನು ಸ್ವಲ್ಪ ಟುನ್ ಟುನ್ ತರಹ ಕಾಣಿಸಬೇಕಿದೆ. ಚಿತ್ರದ ಕಥೆಯೇ ಹಾಗಿರುವುದರಿಂದ ಈಗ ನಾನು ಧಾರಾಳವಾಗಿ ಊಟ ತಿಂಡಿ ಮಾಡುತ್ತಾ ಮಜವಾಗಿ ಕಾಲ ಕಳೆಯುತ್ತಿದ್ದೇನೆ. ವರುಣ್ ಜೊತೆ ಮೊದಲ ಸಲ ನಟಿಸುತ್ತಿರುವುದರಿಂದ, ಟೆನ್ಶನ್ ತುಸು ಹೆಚ್ಚಾಗಿದೆ. ವರುಣ್‌ನಂಥ ಬೆಸ್ಟ್ ಡ್ಯಾನ್ಸರ್ ಮುಂದೆ ನಾನು ಸೈ ಎನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ನನ್ನ ಒಳ್ಳೆಯ ಫ್ರೆಂಡ್ ಆದಕಾರಣ ವರುಣ್ ಬಹಳ ಸಹಾಯ ಮಾಡುತ್ತಿದ್ದಾನೆ ಎನ್ನುತ್ತಾಳೆ.
ಕತ್ರೀನಾಳ ಪಂಕ್ಚುಯಾಲಿಟಿ
ಹಾಗೆ ನೋಡಿದರೆ ಬಾಲಿವುಡ್ ತಾರೆಯರು ತಮ್ಮ ಲೇಟ್ ಲತೀಫ್ ಗುಣದಿಂದಾಗಿ (ಕು)ಖ್ಯಾತರೆಂದೇ ಹೇಳಬೇಕು. ಆದರೆ ಹೊಸ ಪೀಳಿಗೆಯ ಕೆಲವು ನಟವನಟಿಯರು ಹಾಗಿಲ್ಲ, ಪಂಕ್ಚುಯಾಲಿಟಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ಎಂದೂ ಶೂಟಿಂಗ್‌ಗೆ ತಡವಾಗಿ ಬರುವವರಲ್ಲ. ಕತ್ರೀನಾ ಸಹ ಅಂತಹವರಲ್ಲಿ ಒಬ್ಬಳು. ಸಮಯಕ್ಕೆ ಬೆಲೆ ತೆರದವರು ಅವಳಿಗೆ ಕೋಪ ತರಿಸುತ್ತಾರೆ. ಹೀಗಾಗಿ 11 ವರ್ಷ ತನ್ನ ಪರ್ಸನಲ್ ಮೇಕಪ್ ಮ್ಯಾನ್‌ನ ಈ ಮರ್ಜಿ ಸಹಿಸಿ ಸಾಕಾಗಿ ಅವನನ್ನು ಕೆಲಸದಿಂದ ತೆಗೆದುಹಾಕಿದಳು. ಇತ್ತೀಚಿಗೆ ಅನುರಾಗ್ ಬಸುರ ಚಿತ್ರದ ಶೂಟಿಂಗ್‌ಗೆ ಆತ ಎಷ್ಟು ಹೊತ್ತಾದರೂ ಬಂದು ತಲುಪದಿದ್ದಾಗ, ರೇಗಾಡುವ ಬದಲು ನೇರವಾಗಿ ಕೆಲಸದಿಂದಲೇ ತೆಗೆದುಹಾಕಿದಳಂತೆ. ಇದೀಗ ತನ್ನ ಬಾಯ್ ಫ್ರೆಂಡ್ ರಣಬೀರ್ ಕಪೂರ್‌ಜೊತೆ `ಜಗ್ಗ ಜಾಸೂಸ್’ ಚಿತ್ರದಲ್ಲಿ ಎಷ್ಟು ಬಿಝಿ ಎಂದರೆ, ತನ್ನ ಪಂಕ್ಚುಯಾಲಿಟಿ ಕಾರಣದಿಂದ ಎಷ್ಟೋ ಬಾರಿ ಪೇಚಿಗೆ ಸಿಲುಕುತ್ತಾಳೆ.
ಸೋಶಿಯಲ್ ಸೈಟ್ಗಳಿಂದ ಬ್ರೇಕ್
ಸೋಶಿಯಲ್ ಸೈಟ್ಸ್ ದಾಂಧಲೆ ಎಷ್ಟು ಹೆಚ್ಚಿದೆ ಎಂದರೆ ಪರಸ್ಪರರನ್ನು ಅರಿಯಲು ಜನ ಇದಕ್ಕೇ ಮೊರೆಹೋಗುವಂತಾಗಿದೆ. ಮುಖ್ಯವಾಗಿ ಸೆಲೆಬ್ರಿಟೀಸ್‌ಗಳ ಅಪ್ ಡೇಟ್ ನ್ಯೂಸ್ ಮತ್ತು ಗಾಸಿಪ್ಸ್ ಸಹ ಇಲ್ಲಿಂದಲೇ ದೊರಕಬೇಕಿದೆ. ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ಟ್ವಿಟರ್ ಕುರಿತು ಬಾಲಿವುಡ್ ಸ್ಟಾರ್‌ಗಳಿಗೆ ಇನ್ನಿಲ್ಲದ ಆಸಕ್ತಿ, ಕ್ರೇಜ್. ಇದು ಉದಯೋನ್ಮುಖ ಕಲಾವಿದರಿಗೆ ತಮ್ಮ ಮೈಕ್ರೋ ಬ್ಲಾಗಿಂಗ್ ಮೂಲಕ ಬಾಲಿವುಡ್ ದಾರಿಯನ್ನು ಸುಗಮಗೊಳಿಸಿದೆ. ಇದಕ್ಕೆ ತಾಜಾ ಉದಾ, ಬಾಲಿವುಡ್‌ಗೆ ಇದೀಗ ಎಂಟ್ರಿ ಪಡೆದ ಪ್ರಿಯಾ ಬ್ಯಾನರ್ಜಿ. ತಮಿಳು, ತೆಲುಗು ಚಿತ್ರಗಳಲ್ಲಿ ಮಿಂಚಿದ ಪ್ರಿಯಾ, ಹಿಂದಿಯ ಸಂಜಯ್ ಗುಪ್ತಾರ `ಜಜ್ಬಾ’ ಚಿತ್ರದಲ್ಲಿ ಎಂಟ್ರಿ ಪಡೆದಳು. ಇದು ಇವಳಿಗೆ ಟ್ವಿಟರ್ ಮೂಲಕ ಸಿಕ್ಕಿದ್ದಂತೆ. ಯಾರೋ ಸಂಜಯ್ ಟ್ಟಿಟರ್‌ಗೆ ಪ್ರಿಯಾಳ ವಿಡಿಯೋ ಟ್ಯಾಗ್ ಮಾಡಿದ್ದರಿಂದ, ಪ್ರಿಯಾಳಿಗೆ ಅದೃಷ್ಟ ಖುಲಾಯಿಸಿತು.
ಈ ಜಾಸೂಸ್ ಭೀ ಡಿಫರೆಂಟ್ ಬಾಲಿವುಡ್‌ನಲ್ಲಿ ಈ ವರ್ಷ ಇಬ್ಬರು ಪತ್ತೇದಾರರು ಡಿಚ್ಚಿ ಹೊಡೆಯಲಿದ್ದಾರೆ. ಒಬ್ಬ ದಿಬಾಕರ್‌ಬ್ಯಾನರ್ಜಿ ನೇತೃತ್ವದ ಸುಶಾಂತ್ ಸಿಂಗ್ ಆದರೆ, ಮತ್ತೊಬ್ಬ ಅನುರಾಗ್ ಬಾಸು ನಿರ್ದೇಶನದ `ಜಗ್ಗ ಜಾಸೂಸ್’ ಚಿತ್ರದಲ್ಲಿ ರಣಬೀರ್ ಕಪೂರ್. ಮುಂದಿನ ಆಗಸ್ಟ್ ನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ, ಈ ಜಾಸೂಸ್‌ನ 1940ರವರೆಗಿನ ರೋಚಕ ಜೀವನಶೈಲಿ ಕಾಣಬಹುದು. ಈತ ಕಾಣೆಯಾದ ತನ್ನ ದಯೆಯನ್ನು ಹುಡುಕುತ್ತಿರುತ್ತಾನೆ. ಇಲ್ಲಿ ತಂದೆ ಪಾತ್ರ ಗೋವಿಂದರದು. ಅವನ ಅಸಲಿ ಗರ್ಲ್ ಫ್ರೆಂಡ್ ಕತ್ರೀನಾ ಇಲ್ಲಿ ನೆಚ್ಚಿನ ಸಹಾಯಕಿ. ನಿಜ ಜೀವನದ ಈ ಪ್ರಣಯಿಗಳ ಜೋಡಿ ಸುಮಾರು 6 ವರ್ಷಗಳ ಅಫೇರ್ ನಂತರ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಈ ಇಬ್ಬರು ಜಾಸೂಸ್‌ಗಳಲ್ಲಿ ಯಾರು ಪ್ರೇಕ್ಷಕರನ್ನು ಚೇರ್ ತುದಿಗ ಕುಳಿತು ವೀಕ್ಷಿಸುವಂತೆ ಕಟ್ಟಿಹಾಕುತ್ತಾರೋ, ಕಾಲವೇ ನಿರ್ಧರಿಸಬೇಕು.
ಮಲ್ಲಿಕಾಳ ಘಾಘ್ರಾ ಮಹಿಮೆ
ಬಾಲಿವುಡ್‌ನ ಸಿನಿಮಾಗಳಲ್ಲಿ ಘಾಘ್ರಾ ಬಲು ಹಾಟ್ ಎನಿಸಿದೆ. ಅದು ಮಾಧುರಿಯ `ಏ ಜಾನಿ ಹೈ ದೀವಾನಿ’ ಚಿತ್ರದ `ಬಾಗ್ದಾದ್‌ಸೇ ಲೇಕರ್ ದಿಲ್ಲಿ….’ ಐಟಂ ಆಗಿರಬಹುದು ಅಥವಾ ಬರಲಿರುವ ಕೆ.ಸಿ. ಬೋಕಾಡಿಯಾರ `ಡರ್ಟಿ ಪಾಲಿಟಿಕ್ಸ್’ ಚಿತ್ರದ ಮಲ್ಲಿಕಾ ಶೆರಾವತ್‌ಳ ಐಟಂ ಆಗಿರಬಹುದು. ಈ ಚಿತ್ರದಲ್ಲಿ ಮಲ್ಲಿಕಾಳ ಜೊತೆ ಓಂಪುರಿ, ಆಶುತೋಷ್ ರಾಣಾ, ಜಾಕಿಶ್ರಾಫ್, ಅನುಪಮ್ ಖೇರ್, ಅತುಲ್ ಕುಲಕರ್ಣಿ, ಸುಶಾಂತ್ ಸಿಂಗ್, ರಾಜ್ ಪಾಲ್ ಯಾದವ್, ನಾಸಿರುದ್ದೀನ್ ಶಾರಂಥ ಘಟಾನುಘಟಿಗಳ ದಂಡೇ ಇದೆ.
ನಾನು ಬೋಲ್ಡ್ ನೆಸ್ ಬಿಟ್ಟುಕೊಡಲಾರೆ
`ಇಂಡಿಯನ್ ಬೆಸ್ಟ್ ಸಿನಿ ಸ್ಟಾರ್ ಕೀ ಖೋಜ್’ ರಿಯಾಲಿಟಿ ಟ್ಯಾಲೆಂಟ್ ಹಂಟ್ ಶೋದಲ್ಲಿ ವಿಜೇತಳೆನಿಸಿದ ಲಖ್ನೌ ಬೆಡಗಿ ಅದಿತಿ ಶರ್ಮ ಮುಂದೆ ತಾನು ನಟಿಯಾಗುತ್ತೇನೆ ಎಂದು ಭಾವಿಸಿರಲಿಲ್ಲವಂತೆ. ಶೋ ಗೆದ್ದ ನಂತರ ಅದಿತಿಗಿ `ಖನ್ನಾ ಅಯ್ಯರ್’ ಚಿತ್ರದಲ್ಲಿ ಮೊದಲ ಅವಕಾಶ ಸಿಕ್ಕಿತು.
ತಾಯಿ ತಂದೆಯರ ಸಪೋರ್ಟ್ ಇಲ್ಲದಿದ್ದರೆ ತಾನು ಲಖ್ನೌನಿಂದ ಮುಂಬೈಗೆ ಬರಲು ಸಾಧ್ಯ ಆಗುತ್ತಿರಲಿಲ್ಲ. ನೆಂಟರೆಲ್ಲರೂ ವಯಸ್ಸಿಗೆ ಬಂದ ಹುಡುಗಿಯನ್ನು ಅಷ್ಟು ದೂರ ಕಳಿಸುವುದೇಕೆಂದು ಮೂಗು ಮುರಿದಿದ್ದರಂತೆ. ಸಂಪೂರ್ಣ ಸ್ವಾತಂತ್ರ್ಯದ ಜೊತೆಗೆ ಉತ್ತಮ ಸಂಸ್ಕಾರದ ಕಾರಣ ನಾನು ಅವರ ಮಾರ್ಗದರ್ಶನದಂತೆ ನಡೆದಿದ್ದೇನೆ ಎನ್ನುತ್ತಾಳೆ. ಇಲ್ಲಿನ ಗ್ಲಾಮರ್ ಲೋಕದಲ್ಲಿ ಮಿನುಗಲು ಉತ್ತಮ ನಟನೆಯೂ ಬಲು ಮುಖ್ಯ. ನಾನು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮೀರಿ ನನ್ನ ಪ್ರತಿಭೆ ಪ್ರದರ್ಶಿಸಿದ್ದೇನೆ ಎನ್ನುತ್ತಾಳೆ. ಮೊದಲಿನಿಂದಲೂ ಇವಳಿಗೆ ಬಿಗ್‌ಬಿ ಜೊತೆ ನಟಿಸಬೇಕೆಂಬ ಆಸೆ ಇತ್ತಂತೆ, ಅದೀಗ ನನಸಾಯ್ತು. ಭಾರತದ ನಾನಾ ಮೂಲೆಗಳ ಸಣ್ಣಪುಟ್ಟ ಊರಿನವರೂ ಸಹ, ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವಂಥ ಚಿತ್ರಗಳಲ್ಲಿ ನಟಿಸುವಾಸೆ ಎನ್ನುವ ಅದಿತಿ, ಬೆಡ್ ರೂಂ ಸೀನ್ಸ್ ಬಂದಾಗ ಒಲ್ಲೆ ಎನ್ನದೆ ಸಹಕರಿಸಿದ್ದಾಳಂತೆ!
ಭಾಗ್ಯಶ್ರೀ ಒಲ್ಲದ ಶೋ
ಇತ್ತೀಚಿನ ಟಿ.ವಿ. ಶೋನಲ್ಲಿ ಇಡೀ 27 ವರ್ಷಗಳ ನಂತರ ಕಿರುಪರದೆಯಲ್ಲಿ ಮತ್ತೆ ಕಾಣಿಸಿಕೊಂಡ ಭಾಗ್ಯಶ್ರೀ, ಇಷ್ಟರಲ್ಲೇ ಈ ಶೋನಿಂದ ಹೊರಬೀಳಲಿದ್ದಾಳೆ. ಯಾರದೇ ಸಿನಿಮಾ ಅಥವಾ ಶೋ ಚೆನ್ನಾಗಿದ್ದರೆ, ಅವರು ಅದನ್ನು ಪ್ರಮೋಟ್ ಮಾಡಲು ಬಯಸುತ್ತಾರೆ, ಆದರೆ ಭಾಗ್ಯಶ್ರಿ ತುಸು ವಿಭಿನ್ನ ಅನ್ಸುತ್ತೆ. ತನ್ನ ಚಿತ್ರ ಅಥವಾ ಶೋ ಹೈ ಪೀಕ್‌ನಲ್ಲಿರುವಾಗಲೇ ಅದಕ್ಕೆ ಬೈಬೈ ಹೇಳುವುದು ಇವಳಿಗೆ ರೂಢಿ. ಈ ಶೋನಲ್ಲಿ ತನ್ನ ಅಮೃತಾ ಪಾತ್ರವನ್ನು ಎಲ್ಲರೂ ಮೆಚ್ಚಿದರು, ತಾನು ಅದನ್ನೇ ಮುಂದುವರಿಸಲು ಬಯಸಿದೆ. ಹಾಗೇಂತ ಈ ಶೋವನ್ನು ಡ್ರ್ಯಾಗ್ ಮಾಡಲು ಬಯಸುವುದಿಲ್ಲ. ಇದರಲ್ಲಿ ಸಂಥಿಂಗ್ ಸ್ಪೆಷಲ್ ಇಂಟರೆಸ್ಟಿಂಗ್ ಇದ್ದಿದ್ದರೆ ಅದು ಬೇರೆ ವಿಷಯ, ಆದರೆ ಕಾರಣವಿಲ್ಲದೆ ಶೋ ಎಳೆದಾಡುವುದು, ಬೇಕಿಲ್ಲ ಎನ್ನುತ್ತಾಳೆ ಭಾಗ್ಯಶ್ರೀ. `ಮೈ ನೇ ಪ್ಯಾರ್ ಕಿಯಾ’ ಚಿತ್ರ ಉತ್ತುಂಗದಲ್ಲಿದ್ದಾಗಲೇ ದಿಢೀರ್ ಎಂದು ಹಿಮಾಲಯ್‌ನನ್ನು ಮದುವೆಯಾದ ಈಕೆ, ಈ ರೀತಿ ಅವಾಂತರ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ.
ಮನರಂಜನೆಗಾಗಿ ನೋ ಚೀಪ್ ಟ್ರಿಕ್ಸ್
`ಬಿಗ್ ಬಾಸ್’ ರಿಯಾಲಿಟಿ ಶೋನ, ಗೌತಮ್ ಡ್ಯಾಂಡ್ರಾ ಲವ್ ಕೆಮಿಸ್ಟ್ರಿ, ದಿನೇ ದಿನೇ ಗಾಸಿಪ್‌ಪ್ರಿಯರಿಗೆ ರೋಚಕ ಮಜಾ ಕೊಡುತ್ತಿದೆ. ಅದರಲ್ಲೂ ಗೌತಮ್ ಈ ಶೋ ವಿಜೇತನಾಗಿ 50 ಲಕ್ಷ ಜೇಬಿಗಿಳಿಸಿದಾಗ ಕೇಳುವುದೇ ಬೇಡ! ಇದರಲ್ಲಿ ಉಪೇನ್ (`ಐ’ ಖ್ಯಾತಿಯ ವಿಲನ್) ಕರಿಶ್ಮಾಳನ್ನು ಕಿಸ್ ಮಾಡಿದ್ದು, ಎಜಾಸ್ ಅಲಿಯನ್ನು ಹೊಡೆದು ಹಾಕಿದ್ದು, ಡಿಂಪಿ ಮಾಜಿ ಗಂಡನ ಜೊತೆ ಪ್ಯಾಚ್ ಅಪ್…. ಇತ್ಯಾದಿ ಈ ಸೀರೀಸ್‌ನ್ನು ಪ್ರೇಕ್ಷಕರು ಮೆಚ್ಚುವಂತೆ ಮಾಡಿದ. ಇತ್ತೀಚೆಗಷ್ಟೆ ಮುಗಿದ ಈ ಶೋನಿಂದ ಹೊರಬಂದಿದ್ದ ಸನಾಖಾನ್, ನಾನು ಪ್ರೇಕ್ಷಕರಿಗೆ ಮನರಂಜನೆ ಒದಗಿಸಲೆಂದು ಎಜಾಸ್ ಖಾನ್ ತರಹ ವರ್ತಿಸಲು ಸಾಧ್ಯವಿಲ್ಲ. ಈ ಶೋನಲ್ಲಿ ಪ್ರತಿಯೊಬ್ಬರೂ ಪ್ರೇಕ್ಷಕರನ್ನು ಕಟ್ಟಿಹಾಕಲು ಜಗಳವಾಡುತ್ತಾ, ಬೊಬ್ಬಿಡುತ್ತಿದ್ದರು. ಹಾಗೇಂತ ಈ ತರಹದ ಉಗ್ರ ವರ್ತನೆಗಳಿಂದ ಜನರಿಗೆ ಚೀಪ್ ಮನರಂಜನೆ ನೀಡಲಾರೆ, ಎನ್ನುತ್ತಾಳೆ.
ಏಕ್ತಾಳಿಗೇಕೆ ಇಷ್ಟು ಕೋಪ?
ಎಲ್ಲಾ ಕೆಲಸಗಳಲ್ಲೂ ಪರ್ಫೆಕ್ಷನಿಸ್ಟ್ ಎನಿಸಿರುವ ಏಕ್ತಾ ಕಪೂರ್‌ಳಿಗೆ, ತನ್ನ ಧಾರಾವಾಹಿ ತಂಡದವರು ಏನಾದರೂ ಅವಾಂತರ ಮಾಡಿಕೊಂಡರೆ ಬಹಳ ಕೋಪ ಬರುತ್ತಂತೆ. ಕಲರ್ಸ್ ವಾಹಿನಿಯಲ್ಲಿ ಜನಪ್ರಿವಾಗಿರುವ `ಮೇರಿ ಆಶಿಕಿ ತುಂ ಸೇ ಹೀ’ ಧಾರಾವಾಹಿಯ ಪ್ರೊಡಕ್ಷನ್ ಟೀಂ, ಪ್ರೈಂ ಟೈಂನಲ್ಲಿ ಒಂದೇ ಎಪಿಸೋಡ್‌ನ್ನು ಸತತ 2 ದಿನ ಪ್ರದರ್ಶಿಸಿ. ದಾಂಧಲೆ ಎಬ್ಬಿಸಿತು. ಬಹುಶಃ ಯಾರೋ ಒಂದಿಬ್ಬರ ಗಡಿಬಿಡಿಯಿಂದಾಗಿ ಹೀಗಾಗಿರಬಹುದು. ಯಾರೇ ಆ ತಪ್ಪು ಮಾಡಿರಲಿ, ಅವರು ಅದನ್ನು ಒಪ್ಪಿಕೊಳ್ಳುವ ಧೈರ್ಯ ತೋರಲಿಲ್ಲ. ಅದೇ ಗಡಿಬಿಡಿಯಲ್ಲಿ ಸಮಯವಿರುವಾಗಲೇ ಅದರ ರಿಪೋರ್ಟ್ ಸಹ ಕೊಡಲಾಗಲಿಲ್ಲ. ಏಕ್ತಾಳಂಥ ಪರ್ಫೆಕ್ಷನಿಸ್ಟ್ ಇಂಥ ದೊಡ್ಡ ತಪ್ಪನ್ನು ಕ್ಷಮಿಸಿಯಾಳೇ? ಹಾಗಾಗಿ ಆ ಸಿಬ್ಬಂದಿ ಕೆಲಸ ಕಳೆದುಕೊಳ್ಳಬೇಕಾಯಿತು.
ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕಾಗುತ್ತೆ
`ತಾರೆ ಝಮೀನ್ ಪರ್’ ಚಿತ್ರದ ಖ್ಯಾತಿಯ ಟಿಸ್ಕಾ ಇದೀಗ ಬಾಲಿವುಡ್‌ನ ಕೆರಿಯರ್ ಕುರಿತಾದ `ಆ್ಯಕ್ಟಿಂಗ್ ಸ್ಮಾರ್ಟ್’ ಎಂಬ ಪುಸ್ತಕ ರಚಿಸಿ ಎಲ್ಲರ ಹುಬ್ಬೇರಿಸಿದ್ದಾಳೆ. ತನ್ನ ಈ ಪುಸ್ತಕದ ಕುರಿತಾಗಿ, ಎಸಿಜೆ ಕೋಲ್ಕತಾ ಸಾಹಿತ್ಯ ಮಹೋತ್ಸವದಲ್ಲಿ ಆಕೆ ಕಾಸ್ಟಿಂಗ್ ಕೌಚ್ ಕುರಿತಾಗಿ, “ಇದು ಬೇಡಿಕೆ ಮತ್ತು ಪೂರೈಕೆ ಕುರಿತಾದ ಪ್ರಶ್ನೆ. ಇಲ್ಲಿ ಬೇಡಿಕೆಗಿಂತ ಅತ್ಯಧಿಕ ಹೆಚ್ಚಿನ ಕಲಾವಿದರಿದ್ದಾರೆ. ಹೀಗಾಗಿ ನಿರ್ಮಾಪಕ ನಿರ್ದೇಶಕರು ಹೊಸಬರಿಗೆ ಅವಕಾಶ ಕೊಡುವಾಗ ತಮ್ಮ ಪರ್ಸನಲ್ ಡಿಮ್ಯಾಂಡ್ಸ್ ಮುಂದಿಡುತ್ತಾರೆ. ಈ ಇಂಡಸ್ಟ್ರಿಯಲ್ಲಿ ದೌರ್ಜನ್ಯದ ಕುರಿತಾಗಿ ಪ್ರಾಕ್ಟಿಕಲ್ ಆಗಿ ಯಾರೂ ಹೇಳಿಕೊಂಡಿಲ್ಲ. ಸಲಿಂಗಕಾಮಿ ನಿರ್ದೇಶಕ ನಿರ್ಮಾಪಕರ ಸಂಖ್ಯೆ ಕಡಿಮೆ ಏನಿಲ್ಲ, ಹಾಗಾಗಿ ಗಂಡಸು ಹೆಂಗಸರಿಬ್ಬರಿಗೂ ಸಮಾನ ಸಮಸ್ಯೆಗಳಿವೆ. ಹೆಂಗಸರು ಮಾತ್ರವಲ್ಲ, ಗಂಡಸರೂ ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ, ಒಪ್ಪುವುದು ಬಿಡುವುದು ಅವರವರ ಆಯ್ಕೆ,” ಎನ್ನುತ್ತಾರೆ.
ಕಿರುಪರದೆಗೆ ಮರಳಿ ಬಂದ ಶಾರೂಖ್
ಶಾರೂಖ್ ತಮ್ಮ ಆ್ಯಕ್ಟಿಂಗ್ ಕೆರಿಯರ್‌ನ್ನು ಡಿ.ಡಿ.ಯ ಸರ್ಕಸ್, ಫೌಜಿ ಧಾರಾವಾಹಿಗಳಿಂದ ಶುರು ಮಾಡಿದರು ಎಂಬುದು ಗೊತ್ತಿರುವ ಸಂಗತಿ. ಇತ್ತೀಚೆಗೆ ಮುಂಬೈನಲ್ಲಿ ಒಂದು ಹೊಸ ಚ್ಯಾನೆಲ್ ಲಾಂಚ್ ಮಾಡಿ, ಅದರಲ್ಲಿನ ತಮ್ಮ ಶೋ ಕುರಿತಾಗಿ ಮಾತನಾಡಿದ ಈತ, ಒಂದು ಹೊಸ ಗೇಮ್ ಶೋ ನಡೆಸಿಕೊಡುವುದಾಗಿ ಹೇಳಿದರು. ಪ್ರಶ್ನೋತ್ತರ ಕಾರ್ಯಕ್ರಮವಾದ ಇದು, ಗಂಭೀರ ಸ್ವರೂಪದ್ದಾಗಿರದೆ ಮನರಂಜನೆಯೇ ಮುಖ್ಯ ಉದ್ದೇಶವಾಗಿರುತ್ತದೆ ಎಂದರು. ಹಾಗಾಗಿ ಯಾರೂ ಪುಟಗಟ್ಟಲೇ ಉರುಹೊಡೆದು ಶೋಗೆ ಬರಬೇಕಿಲ್ಲವಂತೆ. ಹಿಂದೆ ಈತ `ಕೆಬಿಸಿ’ ಹೋಸ್ಟ್ ಮಾಡಿದ್ದರು, ಆದರೆ ಅದೇನೂ ಯಶಸ್ವಿ ಎನಿಸದೆ, ಮತ್ತೆ ಬಿಗ್ `ಬಿ’ ಅದಕ್ಕೆ ವಾಪಸ್ಸು ಬರಬೇಕಾಯ್ತು.