ಮಹಿಳೆಯರನ್ನು ಬೆಚ್ಚಿ ಬೀಳಿಸುವ ಒಂದು ಅಂಕಿಅಂಶದಂತೆ (5 ಮಹಿಳೆಯರಲ್ಲಿ ಒಬ್ಬರು) ಗರ್ಭಾಶಯ ಫೈಬ್ರಾಯಿಡ್‌ನ ಹಿಡಿತಕ್ಕೆ ಸಿಲುಕಿದ್ದಾರೆ. ಇದು ಯುವತಿಯರಿಗೆ ಚಿಂತೆಯ ವಿಷಯವಾಗಿದೆ. ಏಕೆಂದರೆ ಇದರಲ್ಲಿ ಹಿಸ್ಟರೆಕ್ಟಮಿ ಅಂದರೆ ಗರ್ಭಕೋಶವನ್ನು ತೆಗೆಯಲು ಆಪರೇಶನ್‌ ಮಾಡಲಾಗುತ್ತದೆ.

ಭಯಭೀತಗೊಳಿಸುವ ಈ ಕಾಯಿಲೆಗೆ ಕಾರಣ ಇನ್ನೂ ಗೊತ್ತಿಲ್ಲ. ಆದರೆ ಇದರ ವಿಕಾಸ ಆ್ಯಸ್ಟ್ರೋಜೆನ್‌ ಹಾರ್ಮೋನ್‌ಗೆ ಸಂಬಂಧಿಸಿದೆ. ಅದು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಋತುಸ್ರಾವ ಇರುವವರೆಗೆ ಫೈಬ್ರಾಯಿಡ್ ವಿಕಸಿತವಾಗುತ್ತಿರುತ್ತದೆ. ಈ ಹೆಚ್ಚಳ ಸಣ್ಣಸಣ್ಣ ಗಂಟುಗಳ ರೂಪದಲ್ಲಿ ದೊಡ್ಡದಾಗುತ್ತವೆ. ಕೆಲವು ಗಂಟುಗಳು ಸಂಪೂರ್ಣ ಗರ್ಭಕೋಶದ ಆಕಾರ ಪಡೆಯುತ್ತವೆ. ಇದು ಒಂದು ಅಥವಾ ಅದಕ್ಕೂ ಹೆಚ್ಚಿರಬಹುದು.

ಲಕ್ಷಣಗಳು

ನಿಮ್ಮ ಮಾಸಿಕ ಸ್ರಾವದ ಮಧ್ಯದಲ್ಲಿ ಒಂದು ವೇಳೆ ರಕ್ತ ಕಾಣಿಸಿಕೊಂಡರೆ, ಮಾಸಿಕ ಸ್ರಾವದಲ್ಲಿ ಹೆಚ್ಚು ರಕ್ತ ಬಂದರೆ, ರಕ್ತ ಗಡ್ಡೆ ಗಡ್ಡೆಯಾಗಿ ಬಂದರೆ, ಮಾಸಿಕ ಸ್ರಾವ ದೀರ್ಘಕಾಲದವರೆಗೆ ಆಗುತ್ತಿದ್ದರೆ, ಪದೇ ಪದೇ ಮೂತ್ರ ವಿಸರ್ಜಿಸುವ ಇಚ್ಛೆಯಾದರೆ, ಸೊಂಟದಲ್ಲಿ ನೋವು ಉಂಟಾದರೆ, ತೀಕ್ಷ್ಣ ನೋವಿನಿಂದ ಕೂಡಿದ ಮಾಸಿಕ ಸ್ರಾವ ಉಂಟಾದರೆ, ಕೆಳಹೊಟ್ಟೆಯಲ್ಲಿ ಭಾರವಾದಂತೆ ಅಥವಾ ಒತ್ತಿದಂತಾದರೆ ಅಥವಾ ಸಮಾಗಮ ನಡೆಸುವಾಗ ನೋವುಂಟಾದರೆ ನಿಮ್ಮ ವೈದ್ಯರ ಬಳಿ ಗರ್ಭಾಶಯದ ಫೈಬ್ರಾಯಿಡ್‌ಗೆ ಚೆಕಪ್‌ ಮಾಡಿಸಿಕೊಳ್ಳಿ.

ಗುರುತಿಸುವಿಕೆ ಹಾಗೂ ಚಿಕಿತ್ಸೆ

ಗರ್ಭಾಶಯದ ಫೈಬ್ರಾಯಿಡ್‌ನ್ನು ಗುರುತಿಸುವುದು ಕಷ್ಟ. ಏಕೆಂದರೆ ಒಮ್ಮೊಮ್ಮೆ ಫೈಬ್ರಾಯಿಡ್‌ನ ಗಾತ್ರ ಕುಗ್ಗುತ್ತದೆ. ಮುಟ್ಟು ನಿಂತ ಕೆಲವು ಮಹಿಳೆಯರಲ್ಲಿ ಈ ಲಕ್ಷಣ ಕಂಡುಬರುವುದಿಲ್ಲ. ಹೆಚ್ಚು ತೂಕವಿರುವ ಮಹಿಳೆಯರಲ್ಲಿ ಫೈಬ್ರಾಯಿಡ್‌ ಪತ್ತೆ ಮಾಡುವುದು ಇನ್ನೂ ಕಷ್ಟ. ಇಂತಹ ಸಂದರ್ಭಗಳಲ್ಲಿ ಪೆಲ್ವಿಕ್‌ ಪರೀಕ್ಷೆ ಅಥವಾ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಎಂಡೋಮೆಟ್ರಿಯಲ್ ಬಯಾಪ್ಸಿ ಅಥವಾ ಲ್ಯಾಪ್ರೋಸ್ಕೋಪಿಯಾವನ್ನು ಕ್ಯಾನ್ಸರ್‌ ಇದೆಯೋ ಇಲ್ಲವೋ ಎಂದು ತಿಳಿಯಲು ಮಾಡಲಾಗುತ್ತದೆ.

ರೋಗ ಲಕ್ಷಣಗಳ ಆಧಾರದ ಮೇಲೆ ರೋಗಿಯ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಫೈಬ್ರಾಯಿಡ್‌ನ ಆಕಾರ, ಅದರ ಸ್ಥಾನ, ರೋಗಿಯ ವಯಸ್ಸು, ಅವಳು ಗರ್ಭಧಾರಣೆ ಮಾಡಿಕೊಳ್ಳಲು ಇಚ್ಛಿಸುತ್ತಾಳೆಯೇ, ಅವಳ ದೈನಂದಿನ ಆರೋಗ್ಯ ಇತ್ಯಾದಿ ಲಕ್ಷಣಗಳನ್ನು ತಿಳಿಯಬೇಕು.

ಕೆಲವು ದಿನಗಳ ಹಿಂದಿನವರೆಗೆ ಫೈಬ್ರಾಯಿಡ್‌ ಚಿಕಿತ್ಸೆಯ ಹಿಸ್ಟರೆಕ್ಟಮಿ ಅಂದರೆ ಗರ್ಭಕೋಶ ತೆಗೆದುಹಾಕುವುದು ಮತ್ತು ಲೋಮೆಕ್ಟಮಿ ಅಂದರೆ ಗರ್ಭಕೋಶ ಉಳಿಸಿಕೊಂಡು ಫೈಬ್ರಾಯಿಡ್‌ ತೆಗೆದುಹಾಕುವುದು ಈ ಎರಡೇ ವಿಧಾನಗಳಿದ್ದವು. ಈಗ ವಿಭಿನ್ನವಾದ ಸರ್ಜಿಕ್‌ ವಿಧಾನ ಅಲ್ಟ್ರಾಸೌಂಡ್‌ ಸರ್ಜರಿ ಇದೆ. ಈ ವಿಧಾನದಲ್ಲಿ ಸೈಡ್‌ ಎಫೆಕ್ಟ್ ಕಡಿಮೆ. ಹೀಗಾಗಿ ರೋಗಿಗೆ ಬೇಗ ಗುಣವಾಗುತ್ತದೆ.

ಮರುದಿನದಿಂದೀ ಸಾಮಾನ್ಯ ದಿನಚರಿಗೆ ಮರಳಬಹುದು. ಈ ಚಿಕಿತ್ಸೆ ದುಬಾರಿಯೂ ಅಲ್ಲ. ಈ ಟೆಕ್ನಿಕ್‌ನ ಇತರ ಲಾಭಗಳೆಂದರೆ ಗರ್ಭಕೋಶದ ಸುತ್ತಮುತ್ತಲ ಕೋಶಗಳ ಮೇಲೆ ಪರಿಣಾಮ ಬೀರದೆ ಗರ್ಭಕೋಶದ ಫೈಬ್ರಾಯಿಡ್‌ನ್ನು ದೂರ ಮಾಡಬಹುದು.  ಈ ಟೆಕ್ನಿಕ್‌ ಮಹಿಳೆಯ ಸಂತಾನೋತ್ಪತ್ತಿ ಸಾಮರ್ಥ್ಯವನ್ನೂ ಪ್ರಭಾವಿತಗೊಳಿಸುವುದಿಲ್ಲ.ಈ ಪ್ರಕ್ರಿಯೆಯಲ್ಲಿ ರೋಗಿ ಎಂಆರ್‌ಐ ಸ್ಕ್ಯಾನರ್‌ನ ಒಳಗಿದ್ದಾಗ ಫೈಬ್ರಾಯಿಡ್‌ ಮತ್ತು ಸುತ್ತಮುತ್ತಲ ಕೋಶಗಳನ್ನು 3 ಡೈಮೆನ್ಶನ್‌ ಇಮೇಜ್‌ನಲ್ಲಿ ನೋಡಬಹುದು. ಅದರಿಂದ ಅಲ್ಟ್ರಾಸೌಂಡ್‌ ತರಂಗಗಳನ್ನು ಫೈಬ್ರಾಯಿಡ್‌ ಮೇಲೆ ಕೇಂದ್ರೀಕರಿಸಲಾಗುತ್ತದೆ ಮತ್ತು ಕೇಂದ್ರಬಿಂದುವನ್ನು ಗಮನದಲ್ಲಿಟ್ಟುಕೊಂಡು, ತಾಪಮಾನವನ್ನು ವೃದ್ಧಿಸಿ ಆ ಫೈಬ್ರಾಯಿಡ್‌ನ್ನು ನಾಶಗೊಳಿಸಲಾಗುತ್ತದೆ. ಸಂಪೂರ್ಣ ಪ್ರಕ್ರಿಯೆಗೆ 2 ಗಂಟೆ ಬೇಕಾಗುತ್ತದೆ ಹಾಗೂ ಅದರಲ್ಲಿ ಕತ್ತರಿಸಿದ ಗಾಯಗಳು ಅಥವಾ ಯಾವುದೇ ಗುರುತುಗಳು ಉಳಿಯುವುದಿಲ್ಲ.

–  ಡಾ. ಶ್ರೀನಿವಾಸ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ