ಒಂದು ಸಮೀಕ್ಷೆಯ ಪ್ರಕಾರ, ಭಾರತೀಯ ಮಹಿಳೆಯರು ತಮ್ಮ ಆರೋಗ್ಯದ ಕುರಿತಂತೆ ಹೆಚ್ಚು ಖುಷಿಯಿಂದ ಇರುತ್ತಾರೆ. ಹಾಲಿಡೇ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಅವರು ಈ ಕುರಿತಂತೆ ಹೆಚ್ಚಿನ ಗಮನಕೊಡುತ್ತಾರೆ.

ಪುರುಷರು ಟೂರ್‌ ಪ್ಯಾಕೇಜ್‌ ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲಿ ಡಿಸ್‌ಕೌಂಟ್‌ ಮುಂತಾದವುಗಳ ಬಗ್ಗೆ ಹೆಚ್ಚಿಗೆ ಗಮನಹರಿಸುತ್ತಾರೆ. ಅವರು ಪ್ರವಾಸದ ಖರ್ಚನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಾರೆ. ಇದರಿಂದ ಸ್ಪಷ್ಟವಾಗುವ ವಿಷಯವೆಂದರೆ, ಮಹಿಳೆಯರು ಸುತ್ತಾಡುವ ಬಾಬತ್ತಿನಲ್ಲಿ ಹಾಗೂ ಆರೋಗ್ಯದ ಕುರಿತಂತೆ ಯಾವುದೇ ಖರ್ಚಿನ ಚಿಂತೆ ಮಾಡುವುದಿಲ್ಲ. ಅವರು ಒತ್ತಡಮುಕ್ತರಾಗಿ ಪ್ರವಾಸದ ಆನಂದ ಪಡೆಯುತ್ತಾರೆ.

ಇಂದಿನ ಪ್ರೊಫೆಷನಲ್ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದರ ಹೊರತಾಗಿಯೂ ಏಕಾಂಗಿಯಾಗಿರುವ ಕಾರಣದಿಂದ ದೇಶದಲ್ಲಿ ಅಥವಾ ದೇಶದ ಹೊರಗಡೆ ಹೋಗಲು ಹಿಂದೇಟು ಹಾಕುತ್ತಾರೆ. ವಿವಾಹಿತ ಮಹಿಳೆಯರು ರಜೆ ದಿನಗಳಲ್ಲಿ ಸುತ್ತಾಡಲು ತನ್ನ ಪತಿ ಅಥವಾ ಕುಟುಂಬದ ಇತರೆ ಸದಸ್ಯರ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಅದ್ಭುತ ಮತ್ತು ಸುರಕ್ಷಿತ ಉಪಾಯ

ತಾವೇ ಸ್ವತಃ ಸುತ್ತಾಡಲು ಹೋಗಬೇಕೆನ್ನುವ ಅವಿವಾಹಿತರಿಗೆ, ವಿವಾಹಿತರಿಗೆ, ನಿವೃತ್ತ ಮಹಿಳೆಯರಿಗೆ ವುಮನ್‌ ಟೂರ್‌ ಪ್ಯಾಕೇಜ್‌ಗಳು ತುಂಬಾ ಉಪಯುಕ್ತವಾಗಿವೆ. ಅವು ಮಹಿಳೆಯರನ್ನು ಗುಂಪು ಗುಂಪಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತವೆ. ಈ ರೀತಿ ಮಹಿಳೆಯರು ಭಯಮುಕ್ತರಾಗಿ ಸುತ್ತಾಡುವ ಆನಂದವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ನೀವು ಏಕಾಂಗಿಯಾಗಿ ಪ್ರವಾಸ ಮಾಡಲೇನೋ ಇಚ್ಛಿಸುತ್ತೀರಿ, ಆದರೆ ಪ್ರವಾಸದ ಸಂದರ್ಭದಲ್ಲಿ ಏಕಾಂಗಿತನದಿಂದ ಭಯಪಡುತ್ತಿದ್ದಲ್ಲಿ ವುಮನ್‌ ಟೂರ್‌ ಪ್ಯಾಕೇಜ್‌ನ ಸದಸ್ಯರಾಗಿ. ಒಂದು ಖಾಸಗಿ ಸಂಸ್ಥೆಯಲ್ಲಿ ಎಚ್‌.ಆರ್‌. ಹುದ್ದೆಯಲ್ಲಿರುವ ಅನುಪ್ರಿಯಾ, ವುಮನ್‌ ಟೂರ್‌ ಪ್ಯಾಕೇಜ್‌ಗಳ ಮೂಲಕ ದೇಶ ವಿದೇಶಗಳ ಅನೇಕ ಸ್ಥಳಗಳನ್ನು ಸುರಕ್ಷಿತವಾಗಿ ಸುತ್ತಿದ್ದಾರೆ.

ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ನಾನು ಪ್ರತಿವರ್ಷ ದೇಶದಲ್ಲಿ ಅಥವಾ ದೇಶದ ಹೊರಗಡೆ ಸುತ್ತಾಡಲು ಹೋಗುತ್ತೇನೆ. ಇದರಿಂದ ನನಗೆ ಸ್ವತಂತ್ರವಾಗಿ ಸುತ್ತಾಡುವ ಅವಕಾಶ ದೊರಕುತ್ತದೆ. ಅಷ್ಟೇ ಅಲ್ಲ, ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಬೇರೆ ಮಹಿಳೆಯರನ್ನು ಅರಿಯಲು, ನನ್ನ ಗುಣಸ್ವಭಾವ ಬದಲಿಸಿಕೊಳ್ಳಲು ಅವಕಾಶ ದೊರೆಯುತ್ತದೆ.”

ಅನುಪ್ರಿಯಾ ಇದನ್ನು ಒಂದು ಸುರಕ್ಷಿತ ಹಾಗೂ ಉಪಯುಕ್ತ ಉಪಾಯ. ನಾನು ನನ್ನ ಕುಟುಂಬದರ ಅನುಪಸ್ಥಿತಿಯ ಮಧ್ಯೆಯೂ ಸುರಕ್ಷಿತ ಮತ್ತು ನಿಶ್ಚಿಂತ ಪ್ರವಾಸ ಕೈಗೊಳ್ಳುತ್ತೇನೆ, ಎನ್ನುತ್ತಾರೆ.

ವುಮನ್ಟೂರ್ಆಪರೇಟರ್ಗಳು

ಅನೇಕ ಬಗೆಯ ಪ್ಯಾಕೇಜ್‌ ಆಫರ್‌ಗಳನ್ನು ಕೊಡುತ್ತಾರೆ. ಪ್ಯಾಕೇಜ್‌ ಖರ್ಚು ಸುತ್ತಾಡುವ ಸ್ಥಳಗಳ ಆಯ್ಕೆ ಮಾಡುವುದನ್ನು ಅವಲಂಬಿಸಿರುತ್ತದೆ. ಬೇಸಿಗೆ ದಿನಗಳಲ್ಲಿ ಕಾಶ್ಮೀರ ಹಾಗೂ ಇತರೆ ಪರ್ವತ ಪ್ರದೇಶಗಳಿಗೆ ಹೋಗಲು ಸ್ವಲ್ಪ ಹೆಚ್ಚಿನ ದರ ತೆರಬೇಕಾಗಿ ಬರಬಹುದು. ಅದೇ ರೀತಿ ಚಳಿಗಾಲದಲ್ಲಿ ಕೇರಳ ಮತ್ತು ಗೋವಾದಲ್ಲಿ ಪ್ರವಾಸ ಹೋಗಲು ನೀವು ತುಸು ಹೆಚ್ಚು ಮೊತ್ತ ಕೊಡಬೇಕಾಗಿ ಬರುತ್ತದೆ.

ಪ್ಯಾಕೇಜ್‌ ಆಧಾರದಲ್ಲಿ ಒಂದು ಗ್ರೂಪ್‌ನಲ್ಲಿ 4-5 ಅಥವಾ 10 ರಿಂದ 20 ಮಹಿಳೆಯರು ಕೂಡ ಇರಬಹುದು. ಕೆಲವು ಟೂರ್‌ ಪ್ಯಾಕೇಜ್‌ಗಳು ವಿಶೇಷವಾಗಿ ತಾಯಿ ಮಗ ಅಥವಾ ತಾಯಿಮಗಳಿಗಾಗಿಯೇ ರೂಪಿಸಲ್ಪಟ್ಟಿರುತ್ತವೆ. ಫ್ಯಾಮಿಲಿ ಪ್ಯಾಕೇಜ್‌ಗಳಲ್ಲಿ ಹಲವು ಕುಟುಂಬಗಳನ್ನು ಒಗ್ಗೂಡಿಸಿ 80-100 ಜನರ ಒಂದು ಗ್ರೂಪ್‌ ಮಾಡಲಾಗುತ್ತದೆ. ಅದರಲ್ಲಿ ಅವರು ಹಲವು ಅಪರಿಚಿತ ಮಹಿಳೆಯರನ್ನು ಭೇಟಿಯಾಗುತ್ತಾರೆ ಮತ್ತು ಜಗತ್ತಿನ ಬಗ್ಗೆ ಸಾಕಷ್ಟು ತಿಳಿದುಕೊಳ್ಳುತ್ತಾರೆ.

ವುಮನ್ಟ್ರಾವೆಲಿಂಗ್ ಅವಶ್ಯಕತೆ

ಇಂದಿನ ದಿನಗಳಲ್ಲಿ ಮಹಿಳೆಯರು ಮಲ್ಟಿ ಟಾಸ್ಕಿಂಗ್‌ ಆಗಿದ್ದಾರೆ. ಮನೆ ಮತ್ತು ಆಫೀಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗಾಗಿ ಕಡಿಮೆ ಸಮಯ ಲಭಿಸುತ್ತಿದೆ. ಇದು ಜೀವನದ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಧಾವಂತದ ಜೀವನಶೈಲಿಯಿಂದ ಅವರಿಗೆ ಆರೋಗ್ಯದ ಬಗೆಗೂ ಹೆಚ್ಚಿಗೆ ಗಮನ ಕೊಡಲು ಆಗುತ್ತಿಲ್ಲ. ಆಕೆಯ ಹೊರತಾಗಿ ಕುಟುಂಬದ ಉಳಿದೆಲ್ಲ ಸದಸ್ಯರು ಸಾಕಷ್ಟು ಎಂಜಾಯ್‌ ಮಾಡುತ್ತಾರೆ. ಆಕೆಗೆ ತನ್ನದೇ ಆದ ಖುಷಿ ಹೊಂದುವ ಅವಕಾಶ ಇಲ್ಲಿ? ತನ್ನ ರಜೆ ದಿನಗಳನ್ನು ಏಕಾಂಗಿಯಾಗಿ ಅನುಭವಿಸಲು ಸಾಧ್ಯವಿಲ್ಲಿ? ಖಂಡಿತಾ ಅನುಭವಿಸಲು ಸಾಧ್ಯವಿದೆ. ವುಮನ್‌ ಟ್ರ್ಯಾವಂಲಿಂಗ್‌ ಇಂಥದೇ ಮಹಿಳೆಯರಿಗಾಗಿ ರೂಪಿಸಿದ ಒಂದು ಉತ್ತಮ ಪರ್ಯಾಯವಾಗಿದೆ.

ವುಮನ್‌ ಟ್ರ್ಯಾವೆಲರ್ಸ್ ಮುಖಾಂತರ ಸುರಕ್ಷತೆ ಮತ್ತು ವಿಶ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ಚಿಕ್ಕಪುಟ್ಟ ಗುಂಪುಗಳಲ್ಲಿ ಅಡ್ವೆಂಚರ್‌ ಟೂರ್‌, ಲಗ್ಜುರಿ ಸಮುದ್ರಯಾನ, ಶಾಪಿಂಗ್‌ ಫೆಸ್ಟಿವಲ್ ‌ಮುಂತಾದ ಅನೇಕ ಬಗೆಯ ಪ್ಯಾಕೇಜ್‌ ಆಫರ್ ಮಾಡಲಾಗುತ್ತದೆ. ಟೂರ್‌ ಆಪರೇಟರ್ಸ್ ಮಹಿಳೆಯರಿಗಾಗಿ ಸ್ಪೆಷಲೈಸ್ಡ್ ಗ್ರೂಪ್ಸ್ ಮಾಡುತ್ತಾರೆ. ಯಾವುದೇ ವಯಸ್ಸಿನ ಮಹಿಳೆಯರು ತಮ್ಮ ಹಾಗೆಯೇ ಸುತ್ತಾಡುವವರ ಜೊತೆ ಬಯಸುತ್ತಾರೆ. ಸಮಾನ ಅಭಿರುಚಿ ಇರುವವರು ಇದರಲ್ಲಿ ಸೇರುತ್ತಾರೆ.

ಇದರಿಂದ ಪ್ರವಾಸಕ್ಕೆ ಮತ್ತಷ್ಟು ಮಜ ಸಿಗುತ್ತದೆ ಮತ್ತು ಪ್ರವಾಸ ಒತ್ತಡ ರಹಿತವಾಗಿರುತ್ತದೆ.

ಪರಸ್ಪರರನ್ನು ಅರಿಯುವ ಅವಕಾಶ

ಬೇರೆ ಬೇರೆ ವಯೋಮಾನದ, ಬೇರೆ ಸಂಸ್ಕೃತಿಯ ಜನರೊಂದಿಗೆ ಸೇರಿ ಪ್ರವಾಸ ಮಾಡುವುದರಿಂದ ಕೇವಲ ಮಾನವ ಸಂಬಂಧಗಳಿಗಷ್ಟೇ ಮಹತ್ವ ಬರುವುದಿಲ್ಲ. ಪರಸ್ಪರರ ನಾಗರಿಕತೆ, ಸಂಸ್ಕೃತಿ, ಆಹಾರ, ರೀತಿ ನೀತಿ ಮುಂತಾದವುಗಳ ಬಗ್ಗೆಯೂ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಇದು ಬೇರೆಯವರೊಂದಿಗೆ ನಮ್ಮನ್ನು ಜೋಡಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ. ನಮ್ಮನ್ನು ನಾವು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದು ಒಂದು ಆರೋಗ್ಯಕರ ಜೀವನಶೈಲಿಯನ್ನು ವೃದ್ಧಿಸುತ್ತದೆ. ಸಮೂಹದಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮನೋಭಾವ ಬರುತ್ತದೆ. ಮದ್ಯ, ಸಿಗರೇಟು ಮುಂತಾದವುಗಳ ಚಟ ಇರುವವರು ಅದರಿಂದ ದೂರವಿರಲು ಪ್ರಯತ್ನಿಸುತ್ತಾರೆ.

ಹೆಲ್ತ್ ಅಂಡ್ವೆಲ್ನೆಸ್ಟ್ರಿಪ್ಸ್

ಈಗಂತೂ ಮಹಿಳೆಯರು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಜಾಗರೂಕರಾಗಿದ್ದಾರೆ. ತಮಗಾಗಿ ಸಮಯ ತೆಗೆದು, ತಮಗೆ ಮನಶ್ಶಾಂತಿ ದೊರೆಯುವಂತಹ ಸ್ಥಳಗಳಲ್ಲಿ ಸುತ್ತಾಡಲು ಇಷ್ಟಪಡುತ್ತಾರೆ. ಹೆಲ್ತ್ ಮತ್ತು ವೆಲ್‌ನೆಸ್‌ ಟೂರಿಸಂ ಪ್ರವಾಸಿಗರ ಆರೋಗ್ಯ ಹಾಗೂ ಮನಸ್ಸನ್ನು ಆನಂದದಿಂದಿಡುವ ಉದ್ದೇಶದಿಂದ ಪ್ರವಾಸವನ್ನು ಆಯೋಜಿಸುತ್ತಾರೆ. ಇದರಲ್ಲಿ ಫಿಸಿಕಲ್ ಫಿಟ್‌ನೆಸ್‌ ಪ್ರೋಗ್ರಾಮ್, ಸ್ಪಾ, ಮೆಡಿಕಲ್ ಟ್ರೀಟ್‌ಮೆಂಟ್‌ ಮತ್ತು ಬೇರೆ ತೆರನಾದ ಥೆರಪಿಗಳನ್ನು ನೀಡುವ ವ್ಯವಸ್ಥೆ ಮಾಡುತ್ತದೆ. ಇದರಲ್ಲಿ ನೈಸರ್ಗಿಕ ಆಹಾರ, ವ್ಯಾಯಾಮ, ನ್ಯಾಚುರಲ್ ಥೆರಪಿ ಹಾಗೂ ಸುತ್ತಾಡುವುದರ ಬಗ್ಗೆ ಗಮನ ಕೇಂದ್ರೀಕರಿಸಲಾಗುತ್ತದೆ. ಇಂತಹ ವೆಲ್‌ನೆಸ್‌ ಟ್ರಿಪ್‌ಗಳನ್ನು ಸಾಮಾನ್ಯವಾಗಿ ನೈಸರ್ಗಿಕ ಸ್ಥಳಗಳಿಗೆ ಏರ್ಪಡಿಸಲಾಗುತ್ತದೆ.

ಇದರಲ್ಲಿ ದೇಹಕ್ಕೆ ವಿಶ್ರಾಂತಿ ನೀಡುವ ಅನೇಕ ನ್ಯಾಚುರಲ್ ಮತ್ತು ತ್ವಚೆಗೆ ಪ್ಯಾಕ್ಸ್ ನೀಡಲಾಗುತ್ತದೆ.

ಡೂಕ್‌ ಟೂರ್‌ ಆಪರೇಟರ್ಸ್ ಶಿಲ್ಪಾ ಹೇಳುವುದೇನೆಂದರೆ, ಈ ಹೆಲ್ತ್ ಮತ್ತು ವೆಲ್‌ನೆಸ್‌ ಟ್ರಿಪ್ಸ್ ನ ಸಂದರ್ಭದಲ್ಲಿ ವಯಸ್ಸಾದ ಮಹಿಳೆಯರು ಹೆಚ್ಚು ವಿಶ್ರಾಂತಿ ಮಾಡಲು ಬಯಸುತ್ತಾರಾದರೆ, ಯುವ ಮಹಿಳೆಯರು ಹೊರಗೆ ಸುತ್ತಾಡಲು ಇಚ್ಛಿಸುತ್ತಾರೆ. ಯಾರಿಗಾದರೂ ಆರೋಗ್ಯದ ಸಮಸ್ಯೆ ಇದ್ದರೆ, ಅವರ ಚಿಕಿತ್ಸೆಯ ಬಗೆಗೂ ಹೆಚ್ಚಿನ ಗಮನ ಕೊಡಲಾಗುತ್ತದೆ. ಪ್ರತಿ ವಯಸ್ಸಿನ ಮಹಿಳೆಯರ ಅವಶ್ಯಕತೆಗಳು ಬೇರೆಬೇರೆಯಾಗಿರುತ್ತವೆ. ಹೀಗಾಗಿ ಎಲ್ಲರ ಬಗ್ಗೆ ವಿಶೇಷ ಗಮನ ಕೊಡಲಾಗುತ್ತದೆ. ಪ್ರವಾಸದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಒಳ್ಳೆಯ ಟೂರ್‌ ಆಪರೇಟರ್‌ಗಳು ಟೂರ್‌ ಪ್ಯಾಕೇಜ್‌ನಲ್ಲಿ ಎಷ್ಟು ನಿರಾಳವಾಗಿ ನೋಡಲು ಸಾಧ್ಯವೋ, ಅಷ್ಟೇ ಸ್ಥಳಗಳನ್ನು ಮಾತ್ರ ನೋಡುವ ವ್ಯವಸ್ಥೆ ಮಾಡುತ್ತಾರೆ. ಅಂದರೆ ಆ ಸ್ಥಳಗಳು ಅವರಿಗೆ ಖಾಯಂ ಆಗಿ ನೆನಪಿನಲ್ಲುಳಿಯುತ್ತವೆ.

ಹೆಲ್ತ್ ಮತ್ತು ವೆಲ್‌ನೆಸ್‌ ಟ್ರಿಪ್ಸ್ ನಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಈ ಪ್ಯಾಕೇಜ್‌ 20,000 ರೂ.ನಿಂದ ಶುರುವಾಗಿ 3 ಲಕ್ಷ ರೂ.ಗಳ ತನಕ ಇರಬಹುದಾಗಿದೆ. ಈ ಪ್ಯಾಕೇಜ್‌ಗಳ ಮಾಹಿತಿ ಪತ್ರಿಕೆಗಳಿಗಿಂತ ಹೆಚ್ಚಾಗಿ ಇಂಟರ್‌ನೆಟ್ ಮಾಧ್ಯಮಗಳ ಮುಖಾಂತರ ಲಭಿಸುತ್ತದೆ. ಸಾಕಷ್ಟು ಮೊದಲೇ ಈ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ರೂಮ್ ನಲ್ಲಿ ನೀವು ಗ್ರೂಪ್‌ನ ಜೊತೆ ಇರಬೇಕಾಗುತ್ತದೆ ಎಂಬುದನ್ನು ಕೂಡ ಅದರಲ್ಲಿ ತಿಳಿಸಲಾಗುತ್ತದೆ.

ಪ್ಯಾಕೇಜ್‌ನಲ್ಲಿ ನಿಮಗೆ ಯಾವ ಯಾವ ಸೌಲಭ್ಯಗಳನ್ನು ಕೊಡಲಾಗುತ್ತದೆ, ನಿಮಗೆ ಎಲ್ಲೆಲ್ಲಿ ಎಷ್ಟೆಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಕೂಡ ಮೊದಲೇ ತಿಳಿಸಲಾಗುತ್ತದೆ. ನೀವು ಯಾವುದಾದರೂ ಪ್ರವಾಸಿ ಸ್ಥಳದಲ್ಲಿ ಹಾಟ್‌ ಬೆಲೂನ್‌ ಎಂಜಾಯ್ ಮಾಡಲು ಇಚ್ಛಿಸುತ್ತಿದ್ದಲ್ಲಿ, ಪ್ಯಾಕೇಜ್‌ನಲ್ಲಿ ಅದರ ಬಗ್ಗೆ ಉಲ್ಲೇಖ ಇರದಿದ್ದಲ್ಲಿ ನೀವೇ ಅದನ್ನು ಭರಿಸಬೇಕಾಗುತ್ತದೆ. ಸಾಮಾನ್ಯವಾಗಿ ಹಾಟ್‌ ಬೆಲೂನ್‌ ಮುಂತಾದವನ್ನು ಪ್ಯಾಕೇಜ್‌ನಲ್ಲಿ ಸೇರಿಸುವುದಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಇದನ್ನು ಅನುಭವಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಇದನ್ನು ಸುರಕ್ಷಿತ ಎಂದು ಭಾವಿಸುವುದಿಲ್ಲ ಕೂಡ. ಹೀಗಾಗಿ ತಮ್ಮ ತಮ್ಮ ರಿಸ್ಕ್ ನಿಂದಲೇ ಅದನ್ನು ಮಾಡಲು ಹೇಳಲಾಗುತ್ತದೆ. ಇದರ ಹೊರತಾಗಿ ಲಾಂಡ್ರಿ ಖರ್ಚು, ವೇಟರ್‌ ಟಿಪ್ಸ್ ಮುಂತಾದವುಗಳನ್ನು ನಿಮ್ಮ ಜೇಬಿನಿಂದ ಭರಿಸಬೇಕಾಗುತ್ತದೆ. ಆದರೆ ಟೂರ್‌ ಆಪರೇಟರ್‌ಗಳು ಈ ವಿಷಯವನ್ನು ಮೊದಲೇ ಹೇಳಿಬಿಡುತ್ತಾರೆ. ಪ್ಯಾಕೇಜ್‌ನ ಪೂರ್ತಿ ಮೊತ್ತವನ್ನು ಮೊದಲೇ ತೆಗೆದುಕೊಳ್ಳಲಾಗುತ್ತದೆ.

ಈ ಪ್ರವಾಸದಲ್ಲಿ ಒಬ್ಬ ಮಹಿಳೆ ಇಡೀ ಗ್ರೂಪ್‌ ಜೊತೆ ಇರುತ್ತಾಳೆ ಹಾಗೂ ಪ್ರತಿಯೊಂದು ಸ್ಥಳದಲ್ಲಿ ಒಬ್ಬ ಲೋಕಲ್ ಗೈಡ್ ಇರುತ್ತಾನೆ.

ಟೂರ್ಆಪರೇಟರ್ಸ್ ಬಗ್ಗೆ ತಿಳಿಯಿರಿ

ಯಾವ ಮಹಿಳೆಯರು ಮೊದಲ ಬಾರಿಗೆ ಪ್ರವಾಸಕ್ಕೆ ಹೊರಡುತ್ತಿದ್ದಾರೊ, ಅವರು ಟೂರ್‌ ಆಪರೇಟರ್‌ಗಳಿಂದ ಪರಿಪೂರ್ಣ ಮಾಹಿತಿ ಪಡೆಯಬೇಕು. ಅವರ ಕಾರ್ಯವೈಖರಿ ಹೇಗಿದೆ ಎಂಬುದನ್ನು ಅವರ ಆಫೀಸಿಗೆ ಹೋಗಿಯೇ ತಿಳಿಯಬೇಕು. ಅವರು ಈ ಕ್ಷೇತ್ರದಲ್ಲಿ ಎಷ್ಟು ಹಳಬರು, ಅವರು ಈಗಾಗಲೇ ಎಷ್ಟು ಟೂರ್‌ ಆಯೋಜಿಸಿದ್ದಾರೆ ಎಂಬುದನ್ನು ಕಂಡುಕೊಳ್ಳಬೇಕು.

ಒಬ್ಬರೇ ಟೂರ್‌ ಆಪರೇಟರ್‌ನಿಂದ ಮಾಹಿತಿ ಪಡೆಯದಿರಿ. ಬೇರೆ ಬೇರೆ ಆಪರೇಟರ್‌ಗಳಿಂದ ಪ್ಯಾಕೇಜ್‌ಗಳ ಕುರಿತಂತೆ ಮಾಹಿತಿ ಪಡೆದುಕೊಂಡ ಬಳಿಕವೇ ಯಾವುದಾದರೂ ಒಂದು ಪ್ಯಾಕೇಜ್‌ ಆಯ್ದುಕೊಳ್ಳಿ.

ವನಿತಾ ವಿಶ್ವನಾಥ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ