ನಾವು ನಾಲ್ವರು ಅಣ್ಣ ತಂಗಿಯರು. ನಮ್ಮ ದೊಡ್ಡಕ್ಕನ ಮದುವೆಯಲ್ಲಿ ನಡೆದ ಘಟನೆ. ಅವಳ ಮದುವೆ ಮೈಸೂರಿನಲ್ಲಿ ಆಯಿತು. ಅಲ್ಲೇ ನಮ್ಮ ಸ್ವಂತ ಮನೆ ಇದೆ. ಆದರೆ ಅಪ್ಪ ಆಗ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವೆಲ್ಲಾ ಮುಂಬೈನಲ್ಲೇ ಇದ್ದೆ. ಮದುವೆಯ ನಂತರ ನಾವು ಮುಂಬೈಗೆ ಹಿಂತಿರುಗಿದಾಗ ಅಕ್ಕ ಪಕ್ಕದ ಮನೆಯವರು ನಮ್ಮನ್ನು ಅಭಿನಂದಿಸಲು ಬಂದರು.
ಅವರಲ್ಲಿ ಒಬ್ಬರು ಅಪ್ಪನಿಗೆ, ``ಅಂತೂ ನಿಮ್ಮ ತಲೆಯಿಂದ ಒಂದು ಹೊರೆ ಇಳಿಸಿದಂತಾಯಿತು...'' ಎಂದರು.
ಅಷ್ಟರಲ್ಲಿ ನಮ್ಮ ಅಮ್ಮ, ``ಹಾಗೇಕೆ ಹೇಳ್ತೀರಿ? ನಾವು ನಮ್ಮ ಕರ್ತವ್ಯ ಮಾಡಿದೆ ಅಷ್ಟೇ,'' ಎಂದರು. ಅವರ ಮಾತು ಅಲ್ಲಿದ್ದವರೆಲ್ಲರ ಹೃದಯ ತಟ್ಟಿತು.
- ಕಾವ್ಯಾ, ಮೈಸೂರು.
ಆಗ ನನ್ನ ಮಗನಿಗಿನ್ನೂ 10 ವರ್ಷ. ಮನೆಗೆ ಬರುವ ನೆಂಟರು ಅವನಿಗೆ ಏನಾದರೂ ಉಡುಗೊರೆ ಕೊಟ್ಟು ಅದರೊಂದಿಗೆ ಹಣವನ್ನೂ ಕೊಡುತ್ತಿದ್ದರು. ಅವರು ಹೊರಟ. ನಂತರ ನಾನು ಹಣ ಕೇಳಿದರೆ ಅವನು ಕೊಡುತ್ತಿರಲಿಲ್ಲ. ಅವರು ಈ ಹಣವನ್ನು ನನಗೆ ಕೊಟ್ಟಿದ್ದಾರೆ. ನಾನು ಕೊಡೋದಿಲ್ಲ ಎನ್ನುತ್ತಿದ್ದ. ದಬಾಯಿಸಿ ಕೇಳಿದರೆ ಅಳುತ್ತಿದ್ದ. ಆದರೆ ಹಣ ಕೊಡುತ್ತಿರಲಿಲ್ಲ. ನಾನೇ ಸೋತು, ಅವನ ಬಳಿ ಹಣ ಕೇಳುವುದನ್ನು ಬಿಟ್ಟೆ. ಅವನಿಗೆ ಸಮಾಧಾನವಾಗಿ ಆಟದ ಸಾಮಾನು ಕೊಳ್ಳಬೇಕೆಂದರೆ ಈ ಹಣದಲ್ಲೇ ಕೊಂಡುಕೋ ಎಂದೆ. 2 ವರ್ಷಗಳ ನಂತರ ನನಗೆ ಇದ್ದಕ್ಕಿದ್ದಂತೆ ಕಾಯಿಲೆ ಬಂತು. ಡಾಕ್ಟರ್ ಕೂಡಲೇ ಆಪರೇಷನ್ ಮಾಡಬೇಕು ಎಂದರು. ಇದ್ದಕ್ಕಿದ್ದಂತೆ ಬಂದ ಕಷ್ಟದಿಂದ ನಮಗೆ ಚಿಂತೆಯಾಯಿತು. ಹಣ ಹೇಗೆ ಹೊಂದಿಸಬೇಕು ಎಂದು ತಿಳಿಯಲಿಲ್ಲ.
ಆಗ ನನ್ನ ಮಗ, ``ಅಮ್ಮಾ, ನಾನು ಕೂಡಿ ಹಾಕಿರೋ ದುಡ್ಡೆಲ್ಲ ತಗೊಳ್ಳಿ. ನೀವು ಬೇಗ ವಾಸಿ ಮಾಡ್ಕೊಳ್ಳಿ,'' ಎಂದು ಹೇಳಿ ಐದು ಸಾವಿರ ರೂ. ಕೊಟ್ಟ. ಅವನ ಮಾತು ನನ್ನ ಹೃದಯ ತಟ್ಟಿತು.
- ಶಾಂತಾ, ಹುಬ್ಬಳ್ಳಿ.
ನಾನು ಗರ್ಭಿಣಿಯಾಗಿದ್ದಾಗ ನಡೆದ ಘಟನೆ. ಪ್ರಸವದ ಸಮಯ ಹತ್ತಿರ ಬಂದಿತ್ತು. ಮಗು ಹುಟ್ಟು ಉತ್ಸುಕತೆಗಿಂತ ಹೆಚ್ಚಾಗಿ ಪ್ರಸವ ವೇದನೆಯ ಬಗ್ಗೆ ಭಯಪಟ್ಟಿದ್ದೆ.
ಒಂದು ರಾತ್ರಿ ನನಗೆ ನೋವು ಶುರುವಾದಾಗ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಡಾಕ್ಟರ್ ನನ್ನನ್ನು ಅಡ್ಮಿಟ್ ಮಾಡಿಕೊಂಡರು. ನಂತರ ನನಗೆ ನೋವು ಹೆಚ್ಚಾಗಲಿಲ್ಲ. ಕೊನೆಗೆ ಡಾಕ್ಟರ್ ಕೃತಕವಾಗಿ ನೋವು ತರಿಸುವ ಇಂಜೆಕ್ಷನ್ ಕೊಟ್ಟಾಗ ನಾನು ಅಳತೊಡಗಿದೆ.
ಆಗ ತಾನೂ ಒಬ್ಬ ಡಾಕ್ಟರ್ ಆಗಿದ್ದ ನನ್ನ ತಂಗಿ ನನ್ನ ಭಯವನ್ನು ಕಂಡು, ``ಅಕ್ಕಾ, ನಾವು ನೋವಂತ ಹೇಳ್ತೀವಲ್ಲಾ, ಅದು ವಾಸ್ತವದಲ್ಲಿ ಮಗುವನ್ನು ಹೊರತರಲು ಮಾಡುವ ಸಹಾಯ. ಗರ್ಭಾಶಯದಲ್ಲಿ ಉಂಟಾಗುವ ಸಂಕುಚನದಿಂದಾಗಿ ಮಗು ಹೊರಬರುವ ದಾರಿ ತೆರೆಯುತ್ತದೆ. ನೀನು ಕಳೆದ 9 ತಿಂಗಳಿಂದ ಕಾಯುತ್ತಿರುವ ಮಗುವಿಗೆ ಹೊರಬರಲು ಸಹಾಯ ಮಾಡೋದಿಲ್ಲವೆ?'' ಎಂದಳು. ತಂಗಿಯ ಈ ತಿಳಿವಳಿಕೆಯ ಮಾತನ್ನು ಕೇಳಿ ನನ್ನ ಹೃದಯ ಉಬ್ಬಿತು.
- ಮಾಲತಿ, ತುಮಕೂರು